ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂತನ ದೋಶೆಟ್ಟಿ ಹೊಸ ಕವಿತೆ- ಸಾವು ಸದರ

ನೂತನ ದೋಶೆಟ್ಟಿ

ಬೀದಿಗಳಲ್ಲೀಗ ಭಯದ ನಿರ್ಭಿಡೆಯ ಓಡಾಟ
ಖಾಲಿ ಖಾಲಿ ರಸ್ತೆಗಳ ಮೇಲೆ
ಅದರದ್ದೇ ಕಾರುಬಾರು

ಬದುಕಿಗೋ ಹಗಲು ರಾತ್ರಿಗಳ ಪರಿವೆಯೇ ಇಲ್ಲ
ಮೋಟು ಬೀಡಿಯಾಗಿರುವ ಹಗಲು
ಉರಿದು ಉಳಿಸಿದ ಬೂದಿಯಲ್ಲಿ
ಹುಟ್ಟುತ್ತಿದೆ ನಿರ್ಜೀವ ಮಧ್ಯಾಹ್ನ

ಮುಚ್ಚಿದ ಅಂಗಡಿಗಳು ಬೇಯಿಸುತ್ತಿವೆ
ಹಸಿವಿನಿಂದ ಕಂಗೆಟ್ಟ ಕಣ್ಣೀರ ಕಥೆಗಳ
ತಣಿಸಲು ಹೊಟ್ಟೆಬಾಕ ಭಯದ ಹಸಿವ

ಇದು ಸಾವು ಸರಕಾದ ಕಾಲ!

ಬಿಕರಿಗಿಟ್ಟ ಉಸಿರುಗಳು ಎಣಿಸುತ್ತಿವೆ
ಹಸಿ ಹಸಿಯ ಕಾಂಚಾಣ
ಸಾಲು ಸಾಲು ಶವಗಳು ಬರೆಯುತ್ತಿವೆ
ಎದೆ ಬಡಿತದ ರಸೀದಿ

ಇದು ಉಸಿರ ಮಾರಾಟದ ಕಾಲ !

ಬೆಡ್ಡಿಗಾಗಿ ಬಡಿವಾರ, ಬಡಿದಾಟ
ಎದೆಯೊಡೆದರೂ ನಿಲ್ಲದ ನರಳಾಟ
ಸಪ್ಪಗೆ ಉರಿವ ಅನಾಥ ಚಿತೆಯ
ಕೊಳ್ಳಿ ಹಿರಿವ ಕಟುಕರಿವರು
ಭಯವ ಪೊರೆಯುವವರು

ಇದು ಮೌಲ್ಯಗಳ ಮೆದ್ದ ಕಾಲ !

ತೊಡೆ ತಟ್ಟುವ ಭಯದ ತಕಧಿಮಿಗೆ
ಕೆಲವರು ಪೈಪು ಜೋಡಿಸುತ್ತಾರೆ
ಕೆಲವರು ಉಸಿರ ತಡೆಯುತ್ತಾರೆ
ಕೆಲವರು ಮೈಕು ಹಿಡಿದರೆ
ಕೆಲವರು ಗಾಳಿಯೂದುತ್ತಾರೆ

ಇದು ಗತಿಗೆಟ್ಟ ಮತಿಗೆಡಿಸಿದ ಕಾಲ !

ಬದುಕ ಥೈಲಿಯ ತುಂಬ
ನೋವ ಸಂತೆಯ ಸರಕು
ಕಳೆದು ಅಳುವವರಿಗೂ
ಕೂಡಿ ಆಳುವವರಿಗೂ

ಇಲ್ಲಿ ಜೀವ ದುರ್ಭರ , ಸಾವು ಸದರ

ಹೆಣವು ಕಕ್ಕುವ ಹಣಕೆ
ಜೋತಾಡುವ ಜೋಳಿಗೆಗಳಲಿ
ಸುಡುಸುಡು ನಾಲಿಗೆಗಳು
ಸೃವಿಸುತ್ತಿವೆ ಅಮಾನವೀಯತೆಯ

ಇದು ನತದೃಷ್ಟ ಕಾಲ.

‍ಲೇಖಕರು Avadhi

10 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading