ಶಾನ್ ಭಾಗ್ ಇನ್ನಿಲ್ಲ…

ಈ ಬರಹ ಫೇಸ್ ಬುಕ್ ನಲ್ಲಿ ಈ ಮೊದಲು ಪ್ರಕಟವಾಗಿತ್ತು

ಹರೀಶ್ ಎಂ ಜಿ

ನನಗೆ ಅದ್ಭುತ ಪುಸ್ತಕಗಳ ಬಗ್ಗೆ ಪ್ರೊ. ರಾಮದಾಸ್ ರಾವ್ ಹಾಗೂ ಪ್ರೊ. ಜಯದೇವ್ ಎಂ.ಎ ತರಗತಿಗಳಲ್ಲಿ ಹೇಳುತ್ತಿದ್ದರು. ವಾರ ಪೂರ್ತಿ ಅವನ್ನ ಒಂದು ಹಾಳೆಯಲ್ಲಿ ಬರೆದುಕೊಂಡು ಬೀದಿ ಬೀದಿಗಳಲ್ಲಿ ಹುಡುಕುವುದೇ ನಮ್ಮ ವೀಕೆಂಡ್ ಕಾಯಕವಾಗುತ್ತಿತ್ತು. ಸಾಹಿತ್ಯ ಪುಸ್ತಕಗಳು ಅವೆನ್ಯೂ ರಸ್ತೆಯಲ್ಲಿ ದೊರೆಯಲ್ಲ ಅಂತ ಬಹುಬೇಗ ಗೊತ್ತಾಯ್ತು. ಇನ್ನೆಲ್ಲಿ ಹುಡುಕೋದು ಬೆಂಗಳೂರು ಬೇರೆ ಹೊಸದು. ಯಾರ್ ಯಾರೋ ಅಲ್ಲಿ ಇಲ್ಲಿ ಹೋಗಿ ಅಂತ ಹೇಳಿದ್ರೆ ಯಾವ್ ಬಸ್ ಹತ್ತಬೇಕು ಎಲ್ಲಿ ಇಳಿಬೇಕು ಗೊತ್ತಾಗ್ತಾಯಿರಲಿಲ್ಲ. ಹೇಗೋ ಮಾಡಿ ಅಪ್ಪನ ಸಹಾಯ ಪಡೆದು ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿದ್ದ ಬ್ರಿಟಿಷ್ ಲೈಬ್ರೆರಿ membership ಪಡೆದೆ.

ಆದರೆ ಅಲ್ಲಿ ದೊರೆಯುತ್ತಿದ್ದ ಪುಸ್ತಕಗಳು ತುಂಬಾ ಕ್ಲಿಷ್ಟಕರ ಅನ್ನಿಸುತ್ತಿದ್ದವು. ಬರಿ ಬ್ರಿಟಿಷರು ಬರೆದ ಪುಸ್ತಕಗಳು ಅರಗಿಸಿಕೊಳ್ಳಲು ಕಷ್ಟವಾಗುತ್ತಿತ್ತು. Membership ಒಮ್ಮೆಲೇ 500 ರಿಂದ 800 ಏರಿಸಿದ್ದಕ್ಕೆ memebership ನವೀಕರಿಸಲಾಗದೆ ಬೇಸರಗೊಂಡು ಒಂದು ದಿನ ಬ್ರಿಟಿಷ್ ಲೈಬ್ರೆರಿ ಮಹಡಿಯಿಂದ ಕೆಳಗಿಳಿದು ಹಾಗೆ ಚರ್ಚ್ ರಸ್ತೆಯತ್ತ ನೆಡೆದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ಈ ಪ್ರೇಮಿಯರ್ ಬುಕ್ ಶಾಪ್.

ನನಗೆ ಮರಿಯೋ ಪುಝೋ, ಗಾರ್ಸಿಯ ಮಾರ್ಕೇ, ಕಾಫ್ಕ, ಕಮೂ, ಸಾರ್ತ್, ಎರಿಕ್ ಫ್ರಾಮ್, ಒವಿ ವಿಜಯನ್, ಬಶೀರ್, ಅಂತರ್ಜನಮ್, ಗುಹಾ, ಪಾರ್ತ ಚಾರ್ಟರ್ಜೀ ಎಲ್ಲ ಪರಿಚಯವಾಗಿದ್ದು ಇಲ್ಲೇ. ಇವರ ಯಾವ ಪುಸ್ತಕವನ್ನು ಕೊಳ್ಳುವಷ್ಟು ಹಣವಂತು ನನ್ನ ಬಳಿ ಇರುತ್ತಿರಲಿಲ್ಲ. ಆದರೆ ಇವರೆಲ್ಲಾ ಇದ್ದಾರೆ, ಇವರನ್ನ ಓದಬೇಕು ಎಂಬ ಆಸೆ ಚಿಗುರಿದ್ದು ಈ ಪ್ರೇಮಿಯರ್ ಬುಕ್ ಶಾಪ್ನಲ್ಲೇ.

ತುಂಬಾ ಚಿಕ್ಕ ಅಂಗಡಿಯಾದರು ಅಲ್ಲಿಗೆ ಗುಹಾ, ಅನಂತಮೂರ್ತಿ, ಕಾರ್ನಾಡ್ ಬಂದದ್ದು ನೋಡಿದ್ದೆ. ಅವರು ನಿಂತ ಜಾಗದಲ್ಲೇ ಹೋಗಿ ನಿಲ್ಲೋದು, ಸುಮ್ಮನೆ ಹೋಗಿ ಅಲ್ಲಿ ಕಾಲ ಕಳೆಯೋದು ಏನೋ ಒಂಥರಾ ಖುಷಿ ಕೊಡುತ್ತಿತ್ತು ಆಗ. ಇವೆಲ್ಲಾ ಮಾಡುವಾಗ ಯಾವತ್ತೂ ಗದರದೆ ಪುಸ್ತಕಗಳ ಹಿಂದೆ ಶಾಂತಚಿತ್ತದಿಂದ ಕೂರುತ್ತಿದ್ದವರು ಪುಸ್ತಕದಂಗಡಿಯ ಮಾಲೀಕ Mr. Shanbhag.

ಯಾವುದಾದ್ರು ಪುಸ್ತಕ ಕೇಳಿದ್ರೆ ಅಷ್ಟೊಂದು ಪುಸ್ತಕಗಳ ನಡುವಿಂದ ಥಟ್ ಅಂತ ಪುಸ್ತಕ ತೆಗೆದು ಕೊಡುತ್ತಿದ್ದವರು ಶ್ರೀ ಶಾನ್ಭಾಗ್ ರವರು. ಅವರ ತಲೆಯೇ ಲಕ್ಷಾಂತರ ಪುಸ್ತಕಗಳ ಕ್ಯಾಟ್ಲಾಗ್ ಅನ್ನಿಸುತ್ತಿತ್ತು. ಇವರು, ಈ ಪುಸ್ತಕದಂಗಡಿ ಒಂದು ಪೀಳಿಗೆಯ ವಿಭಿನ್ನ ಅಭಿರುಚಿಯ ಓದುಗಾರರನ್ನೇ ಬೆಂಗಳೂರು ನಗರಕ್ಕೆ ಕೊಡುಗೆಯಾಗಿ ಕೊಟ್ಟಿತು ಅಂತ ನನ್ನ ನಂಬಿಕೆ. ನನ್ನ ಸಹಪಾಠಿಗಳು ಸಪ್ನ, ಅಂಕಿತ ಪುಸ್ತಕದಂಗಡಿಗಳನ್ನೇ ಶ್ರೇಷ್ಠ ಪುಸ್ತಕದಂಗಡಿಗಳು ಎಂದು ಹೇಳುತ್ತಿದ್ದಾಗ ನಾನು ಒಳಗೊಳಗೇ ನಗುತ್ತಿದ್ದೆ. ಈಗಲೂ ನಗುತ್ತೇನೆ.

ಕೆಲ ವರ್ಷಗಳ ಹಿಂದೆ ಈ ಪ್ರೇಮಿಯರ್ ಬುಕ್ ಶಾಪ್ ಮುಚ್ಚಿದರು. ನೆನ್ನೆ ಕೋವಿಡ್ ರೋಗ ತಂದೊಡ್ಡಿದ್ದ complicationನಿಂದ Shanbhag ನಿಧನರಾದರಂತೆ… ತುಂಬಾ ಬೇಸರವಾಯಿತು… ಇನ್ನು ಒಂದು ದಶಕ ನಮ್ಮೊಡನಿದ್ದು ನಮಗೆಲ್ಲರಿಗೂ ಸರಿಯಾದ ದಾರಿ ತೋರಬೇಕಿದ್ದ ಹಿರಿಯ ಜೀವಗಳನ್ನ ಈ ಹಾಳು ರೋಗ ಏಕಾಏಕಿ ಕಿತ್ತುಕೊಂಡುಬಿಡುತ್ತಿದೆ… ಬಹುಶಃ ಶಾನ್ ಭಾಗ್ ಸ್ವರ್ಗ ಅಂತ ಇದ್ರೆ ಅದರ ಗ್ರಂಥಾಲಯಕ್ಕೆ ಹೋಗಿರಬೇಕು… ಹೋಗಿ ಬನ್ನಿ ಸರ್… We shall always remember you.

‍ಲೇಖಕರು Avadhi

May 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: