ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವು ಓದಲೇಬೇಕಾದ ಮಂಜುಳ ಕಿರುಗಾವಲು ಅನುವಾದಿಸಿದ ಕವಿತೆಗಳು

ಸರ್ವೇಶ್ವರ್ ದಯಾಳ್ ಸಕ್ಸೇನಾ ಅವರದು ಹಿಂದಿ ಸಾಹಿತ್ಯ ಮತ್ತು ಪ್ರಾಯೋಗಿಕ ಕವಿತ್ವದಲ್ಲಿ ಬಹುಮುಖ್ಯ ಹೆಸರು.

“ಆಗಾಗ ನೋಯುವುದನ್ನು ರೂಢಿಸಿಕೊಂಡರೆ ಕೊನೆಗದು ಒಂದು ಧೀರ್ಘ ಪ್ರಯಾಣವಾಗುತ್ತದೆ” ಎಂದ ಸರ್ವೇಶ್ವರ್ ಅವರ ಕವಿತೆಗಳು ಮಂಜುಳ ಕಿರುಗಾವಲು

ಅವರ ಕೈ ಹಿಡಿದು ಕನ್ನಡಕ್ಕೆ ಪ್ರಯಾಣಿಸಿವೆ!!

ದೇಶ ಕಾಗದದ ಮೇಲೆ ಬರೆದ ನಕ್ಷೆಯಂತಿಲ್ಲ

ಒಂದೊಮ್ಮೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ,
ನೀವು ಮತ್ತೊಂದು ಕೋಣೆಯಲ್ಲಿ ಮಲಗಬಲ್ಲೀರಾ..?
ಒಂದೊಮ್ಮೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ ಶವಗಳು ಕೊಳೆಯುತ್ತಿದ್ದರೆ,
ಇನ್ನೊಂದು ಕೋಣೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದೇ..?
ಒಂದೊಮ್ಮೆ ಹೌದೆನ್ನುವಿರಾದರೆ
ನಾನು ನಿಮಗೆ ಏನು ಹೇಳುವುದಿಲ್ಲ

ದೇಶ ಕಾಗದದ ಮೇಲೆ ಬರೆದ ನಕ್ಷೆಯಾಗಿರುವುದಿಲ್ಲ
ಒಂದು ಭಾಗ ಹರಿದರೆ ಉಳಿದ ಭಾಗಗಳು ಹಾಗೆಯೇ ಸಾಕ್ಷಿಗಳಾಗಿರುತ್ತವೆ
ನದಿಗಳು, ಪರ್ವತ, ನಗರ, ಹಳ್ಳಿ
ಹಾಗೆಯೇ ತಮ್ಮ ತಮ್ಮ ಜಾಗದಲ್ಲಿ ವಿಚಲಿತವಾಗದಿವಿ ನೋಡಿ
ಒಂದೊಮ್ಮೆ ನೀ ಇದ ಒಪ್ಪುವುದಿಲ್ಲವೆಂದರೆ
ನಾ ನಿನ್ನೊಡನೆ ಇರಲಾರೆ

ಈ ಜಗತ್ತಿನಲ್ಲಿ ಮನುಷ್ಯನ ಪ್ರಾಣಕ್ಕಿಂತ ಯಾವುದು ದೊಡ್ಡದಲ್ಲ
ಈಶ್ವರನೂ ಅಲ್ಲ,
ಜ್ಞಾನವೂ ಅಲ್ಲ,
ಚುನಾವಣೆಯೂ ಅಲ್ಲ…
ಕಾಗದದ ಮೇಲೆ ಬರೆದ ಯಾವುದೇ ಪ್ರಾರ್ಥನೆ ಹರಿದು ಹೋಗಬಹುದು
ಮತ್ತದನ್ನು ನೆಲದ ಏಳು ಪದರಗಳಡಿ  ಹೂಳಲುಬಹುದು


ಎದ್ದು ನಿಂತ ಹೆಣಗಳು
ವಿವೇಕವನ್ನು
ಕುರುಡಾಗಿಸಿವೆ
ಯಾವ ಆಡಳಿತವು
ಬಂದೂಕಿನ ನಳಿಕೆಯಲ್ಲಿ ನಡೆಯುತ್ತಿದ್ದರೆ
ಅದು ಕೊಲೆಗಡುಕರ ದಂಧೆಯಾಗಿರುತ್ತದೆ
ನೀ ಇದ ಒಪ್ಪುವುದಿಲ್ಲವೆಂದರೆ
ನಾ ನಿನ್ನ ಒಂದು ಕ್ಷಣವೂ ಸಹಿಸಲಾರೆ

ನೆನಪಿರಲಿ,
ಒಂದು ಮಗುವಿನ ಹತ್ಯೆ
ಮಹಿಳೆಯ ಶವ
ಗುಂಡುಗಳಿಂದ ಛಿದ್ರಗೊಳಿಸಿದ ವ್ಯಕ್ತಿಯೊಬ್ಬನ ದೇಹ
ಯಾವುದೇ ಆಡಳಿತದಲ್ಲ
ಇಡೀ ರಾಷ್ಟ್ರದ ಪತನವಾಗಿರುತ್ತದೆ

ಹೀಗೆ ರಕ್ತ ಹರಿಸುವುದು
ನೆಲದ ಶೋಭೆಯಲ್ಲ,
ಆಗಸದಲ್ಲಿ ಹಾರುವ ಧ್ವಜಗಳನ್ನು
ಕಪ್ಪಾಗಿಸಿದಂತೆ…
ಯಾವ ನೆಲದ ಮೇಲೆ
ಯೋಧನ ಬೂಟಿನ ಗುರುತಿದಿಯೋ
ಅಲ್ಲಿ ಶವಗಳು ಉರುಳುತ್ತಿದ್ದರೆ…
ಆ ನೆಲ ನಿಮ್ಮ ರಕ್ತವನ್ನು ಬೆಂಕಿಯಾಗಿಸದಿರೇ ತಿಳಿದಿಕೋ
ನೀ ಬಂಜೆಯಾಗಿರುವೆ
ನಿನಗೆ ಇಲ್ಲಿ ಉಸಿರಾಡಲು ಸಹ ಅಧಿಕಾರವಿಲ್ಲವೆಂದರೆ
ನಿನಗಾಗಿಯಲ್ಲ ಈ ಜಗತ್ತು


ಕಡೆಯಾದಾಗೊಂದು
ಸ್ಪಷ್ಟವಾದ ಮಾತು
ಯಾವುದೇ ಕೊಲೆಗಡುಕನನ್ನು
ಎಂದಿಗೂ ಮನ್ನಿಸದಿರು
ಅವ ನಿನ್ನ ಗೆಳಯನಾಗಿರಲಿ,
ಧರ್ಮದ ಗುತ್ತಿಗೆದಾರನಾಗಿರಲಿ,
ಪ್ರಜಾಪ್ರಭುತ್ವದ ಸ್ವಯಂ ಘೋಷಿತ ಚೌಕಿದಾರನಾಗಿರಲಿ

 

ಚುಂಬಿಸಿ ಪಲ್ಲವಿಸು

ನನ್ನ ಚುಂಬಿಸಿ
ಮತ್ತೆ ಹೂವನ್ನಾಗಿಸು
ನನ್ನ ಚುಂಬಿಸಿ
ಮತ್ತೆ ಹಣ್ಣನ್ನಾಗಿಸು
ನನ್ನ ಚುಂಬಿಸಿ
ಮತ್ತೆ ಬೀಜವನ್ನಾಗಿಸು
ನನ್ನ ಚುಂಬಿಸಿ
ಮತ್ತೆ ಮರವನ್ನಾಗಿಸು
ಮತ್ತೆ ಪುನಃ ನನ್ನ ನೆರಳಿನಲ್ಲಿ ಕುಳಿತು ನರನರಗಳ ಒಗ್ಗೂಡಿಸು

ನನ್ನ ಚುಂಬಿಸಿ
ಮತ್ತೆ ಹಿಮಗಿರಿಯಾಗಿಸು
ನನ್ನ ಚುಂಬಿಸಿ
ಮತ್ತೆ ವಿಸ್ತಾರ ಸರೋವರವಾಗಿಸು
ನನ್ನ ಚುಂಬಿಸಿ
ಮತ್ತೆ ನದಿಯಾಗಿಸು
ಮತ್ತೆ ಪುನಃ ನನ್ನ ದಂಡೆಯ ಬಿಸಿಲಿನಲ್ಲಿ ನಿರ್ವಸ್ತ್ರನಾಗಿ ಜಳಕ ಮಾಡು

ನನ್ನ ಚುಂಬಿಸಿ
ಮತ್ತೆ ವಿಶಾಲ ಆಗಸವಾಗಿಸು
ನನ್ನ ಚುಂಬಿಸಿ
ಮತ್ತೆ ಜಲ ಭರಿತ ಮೇಘವಾಗಿಸು
ನನ್ನ ಚುಂಬಿಸಿ
ಮತ್ತೆ ತಂಗಾಳಿಯಾಗಿಸು
ಮತ್ತೆ ಪುನಃ ನನ್ನ ಅನಂತ ನೀಲಿಯನ್ನು ಕಾಮನಬಿಲ್ಲಿನಲ್ಲಿ ವಿಲೀನವಾಗಿಸು

‍ಲೇಖಕರು nalike

24 July, 2020

3 Comments

  1. Prajna Mattihalli

    Nice poems. Good job Manjula. Well done

  2. Vijaykumar

    Thumba changide ninna kavithegalu. well done

  3. ಕಾಜೂರು ಸತೀಶ್

    ಹಿಂದುಳಿದವನು
    ———————

    ಎಲ್ಲರೂ ಏರುದನಿಯಲ್ಲಿ ಮಾತನಾಡುತ್ತಿದ್ದಾಗ
    ಇವನು ಸದಾ ಮೌನಿಯಾಗಿರುತ್ತಿದ್ದ

    ಎಲ್ಲರೂ ಸರಸರ ನಡೆಯುತ್ತಿದ್ದಾಗ
    ಇವನು ಸದಾ ಹಿಂದಿರುತ್ತಿದ್ದ

    ಎಲ್ಲರೂ ಗಬಗಬ ತಿನ್ನುವುದರಲ್ಲಿ ಮುಳುಗಿದ್ದಾಗ
    ಇವನು ಮಂಕಾಗಿ ಮೂಲೆಯಲ್ಲಿ ಕುಳಿತಿರುತ್ತಿದ್ದ

    ಎಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದಾಗ
    ಇವನು ಕತ್ತಲ ಶೂನ್ಯದೊಳಗೆ ಕಣ್ಣುನೆಟ್ಟಿರುತ್ತಿದ್ದ

    ಆದರೂ
    ಗುಂಡಿನ ದಾಳಿ ನಡೆದಾಗ
    ಮೊದಲು ಸತ್ತುಬಿದ್ದದ್ದು ಇವನೇ ಆಗಿದ್ದ.
    *

    ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ
    ಕನ್ನಡಕ್ಕೆ- ಕಾಜೂರು ಸತೀಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading