ನೀರೊಳಗಣ ಕಿಚ್ಚಿಗೆ…

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಆಕಾಶದಡಿ ಕೊಕ್ಕರೆಗಳಿರಲಿ
ಬೀದಿಗಳೊಳಗೆ ಹಾಡಲು ಮಕ್ಕಳಿರಲಿ
ಹಕ್ಕಿಗಳು ಉಸಿರಾಡಲು ಮರಗಳಿರಲಿ
ಜೀವಿಸುವ ಹಕ್ಕು ಮುಗಿದಂತೆ ಯಾವುದೂ ಖಾಲಿಯಾಗದಿರಲಿ
(ಎನ್ ಕೆ ಹನುಮಂತಯ್ಯ)

ಕವಿ ಎನ್ ಕೆ ಹನುಮಂತಯ್ಯನವರ ಈ ಕವಿತೆಯನ್ನು ಓದುವಾಗಲೆಲ್ಲ ಬದುಕು ಹೊಸ ರೂಪದಲ್ಲಿ ಎದುರಾಗುತ್ತದೆ. ಊರಿನಲ್ಲಿ ಎಲ್ಲಿಯಾದರೂ ಗುಂಪಲ್ಲಿ ಮಕ್ಕಳು ಸಿಕ್ಕರೆ ಈ ಪದ್ಯ ಹೇಳಿಕೊಟ್ಟಿದ್ದೇನೆ.. ಮನುಷ್ಯರಿಗೆ ಅಹಂಕಾರವೆಂದರೆ ಬಲು ಮೋಹ. ಎಂಥದ್ದೇ ಅರಿವು ಕಂಡರೂ, ಜೊತೆಗಿದ್ದರೂ, ನಾನು ಎಂಬ ಗರ್ವ ಮೆದುಳಿಗೇರ್ತು ಅಂದ್ರೆ ಜೀವ ತೆಗೆಯುವುದನ್ನು ಸಲೀಸು ಮಾಡಿಕೊಳ್ಳಲು ತವಕವೇರುತ್ತೆ. ಹಕ್ಕಿ, ಗಿಡ, ಮಕ್ಕಳು ಆಟ ಬಾಳು ಎಲ್ಲವನ್ನೂ ಹೊಸಕಿ ಪರಾಕ್ರಮ ಮೆರೆಯುವ ಭ್ರಮೆ.

ನನ್ನ ಊರಿನ ಸುತ್ತ ಹತ್ತು ಫರ್ಲಾಂಗಿನ ಅಂತರದಲ್ಲಿ ಅನೇಕ ಊರುಗಳಿವೆ. ಎಲ್ಲ ಊರಿನ ಜನರೂ ಪರಸ್ಪರ ಕೊಡುಕೊಳ್ಳು ನಂಟು ಬೆಸೆದುಕೊಂಡು ಒಕ್ಕಲಿನ ಆಗು ಹೋಗುಗಳ ಹಂಚಿಕೊಳ್ಳುವುದು ನಡೆದಿದೆ. ಇಷ್ಟೆಲ್ಲಾ ಬಂಧಗಳ ನಡುವೆಯೂ ಬಿದ್ದ ಕಾಯಿಯನ್ನು ಕದ್ದನೆಂಬ ಸಣ್ಣ ಕಾರಣವಲ್ಲದ ಕಾರಣವನ್ನು ನೆಪ ಮಾಡಿಕೊಂಡು ಎಳೆದು ಆಡುವ ಹುಡುಗನನ್ನು ಮರಕ್ಕೆ ಕಟ್ಟಿ ಜೀವಂತ ಸುಡಲು ಮುಂದಾಗುವ ಕಟ್ಟಕಡೆಯ ಕೇಡಿಗೆ ಏನು ಹೇಳೋದು?

ಜೀವಿಸುವ ಹಕ್ಕು ಅಮರವೆಂಬಂತೆ ಊರಿಗೆ ಒಳಿತನ್ನು ಊರಿ ಹೋದ ಹಿರಿಜೀವಗಳು ಊರಿನ ಸುತ್ತ ಅರಳಿ ಮರಗಳನ್ನು ಬೆಳೆಸಿ ಹೋಗಿದ್ದಾರೆ. ಅರಳಿ ಹಣ್ಣಿನ ಕಾಲ ಬಂದ್ರೆ ನಾವೆಲ್ಲ ಹಕ್ಕಿಗಳೇ ಆಗ್ತಿದ್ವಿ. ಸಾಕಾಗುವಷ್ಟು ಅರಳಿ ಹಣ್ಣು ಆಯ್ಕಂಡು ತಿಂದ್ಕಂಡು ಆನಂದದ ಪರಾಕಾಷ್ಟೆ ತಲುಪಿದ್ದು ಹೆಚ್ಚೇ.

ಊರಿನೆಲ್ಲ ಮಕ್ಕಳು ಒಂದೆಂಬಂತೆ ಆಡಿಕೊಂಡು ಬೆಳೆಯುತ್ತಿದ್ದೆವು. ಒಂದು ದಿನ ಅಚಾನಕ್ಕಾಗಿ ಮಗ್ಗುಲಿನ ಊರಿನ ತೆಂಗಿನ ತೋಟದಲ್ಲಿ ನಿಮ್ಮೂರ ಹುಡುಗನನ್ನು ಮರಕ್ಕೆ ಕಟ್ಟಾಕಿ ಬೆಂಕಿ ಇಕ್ಕೆವ್ರೆ ಅರ್ಧ ಸುಟ್ಟೇ ಹೋಗೆವ್ನೆ; ಸುತ್ಮುತ್ಲು ಊರೆಲ್ಲ ಸೆಲ್ಯೋಗಂಗೆ ವರ್ಲುತಾವ್ನೆ, ಯಾರೋ ಉತ್ತುಮ್ರು ನೋಡ್ಕಂಡು ಅರ್ಧ ಬೆಂದಿರ ಮಗನ ಬಿಡ್ಸೆವ್ರೆ ಅಂತ ದನಿಗೋದರು ವರ್ತ್ಮಾನ ಕೊಟ್ರು. ಊರಿನ ಜನ್ವೆಲ್ಲ ಹೋಗಿ ಅಗಾ ಇಗಾ ಅನ್ನೋವತ್ಗೆ ಬೆಂಕಿ ಹಚ್ದರು ನಾಪತ್ತೆ.

ಕೈಗ್ ಸಾಲ್ದುಡ್ಗುಗೆ ಬೆಂಕಿ ಇಕ್ಕೆವ್ರೆ ಇನ್ನೆಂಥಾ ಕಳ್ಳು ಒಣ್ಗಿದ್ ಜನ. ಮಕ್ಳುಮರಿ ಎತ್ತಿರರಾದ್ರೆ ಅರಾಸಾಗದು. ಇಂದೆ ಮುಂದೆ ಎಣಿಸ್ಕಮಕು ಇಲ್ದಿರೋ ಗುಂಡ್ರುಗೋವಿಗಳು ಇಂಥವೆಲ್ಲ ಮಾಡದು. ಎಲ್ ತೂರ್ಕಂಡವ್ರೆ ಇಡ್ಕಂಬಂದು ಟೇಶನ್ ಗೆ ಹಾಕುಸ್ರೋ ಸಾಯತಕ ಅಲ್ಲೇ ಕೊಳ್ಯಂಗ್ ಮಾಡ್ರಿ; ಇಂತ ನನ್ಮಕ್ಳುನ್ನ ತಿರುಗ್ಸಿ ಜೀವ್ಬೆರ್ಸೆ ಸುಟ್ರು ಏನು ಪಾಪ ಬರಲ್ಲ ಇವ್ರ್ ಸುಳಿ ಒಣ್ಗ, ಎಂತಾ ಬದುಕ್ ಮಾಡೆವ್ರೆ ಹೀಗೆ ಒಂದೇ ಸಮನೆ ಹುಡುಗನ ಬಂಧುವೊಬ್ಬರ ರೋಧನೆ ಮುಗಿಲು ಮುಟ್ಟಿತ್ತು. ನೆರೆದಿದ್ದ ಎಲ್ಲರೂ ಸೇರಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಆಡ್ಕಂಡು ಬೆಳೆಯುವ ವಯಸ್ಸಿನಲ್ಲಿ ನರಳುತ್ತಾ ಆಸ್ಪತ್ರೆ ಸೇರಿದ ಎಳೆಯ ಗುಣಕಂಡು ಬರೋ ಹೊತ್ತಿಗೆ ವರ್ಷವಿಡೀತು.

ಬೆಂಕಿ ಹಚ್ಚಿದ ನೆರೆಯೂರಿನವರು ಸಿಕ್ಕಿಬಿದ್ರು. ಪಂಚಾಯ್ತಿ, ಕೇಸು ಅಂತೆಲ್ಲಾ ಆಗಿ ಅವರು ಸಲೀಸಾಗಿ ಹೊರಬಂದ್ರು. ದುಡ್ಡಿನ ಜನ ಏನು ಬೇಕಾದರೂ ಜಯಿಸ್ಕಂತರೆ. ಮರ್ದಡೆಗೆ ಬಿದ್ದಿದ್ದವೆಲ್ಡು ಕಾಯಿ ಮುಟ್ಟಿದ್ಕೆ ಸುಡರು ನೆಟ್ಗೆಂದು ಬದ್ಕಲ್ಲ ಅಸಹಾಯಕರು ಸುಮ್ನೆ ಮಾತಾಡಿ ಕೈಬಿಟ್ರು. ಊರಿನಲ್ಲಿ ಎಲ್ಲವೂ ಬೇಸಾಯಕ್ಕೆ ಬೆಸ್ಕಂಡು ಗಿಡ ಗೆಂಟೆ ಅಂತ ಇರುವಾಗ ನಡುವೆ ಇಂಥವು ಬಂದು ಉರಿತವೆ. ಇಲ್ಲಿ ಜಾತಿನು ಬಂದೋತು. ಒಡವೆರೆದು ಒಳಿತು ಮಾಡಲು ಮುಂದಾದರೆ ನೂರೆಂಟು ರಗಳೆ. ಅಟಮಟ ಮಾಡಿಕೊಂಡು ಲೋಲು ಮಾಡುವ ಮಂದಿ ಯಾವುದೇ ಕೋಟಲೆಗೆ ಮುಂದಾಗಲು ಹೇಸಲ್ಲ.

ಸುಟ್ಟ ಎಳೆಯ ಹುಡುಗನಿಗೆ ಮಮತೆಯಿಂದ ಬೆಂಬಲಿಸಿದ ಅನೇಕರು ಕುಲಬಾಂದ್ಗ ಇಲ್ದಲೆ ಎಲ್ಲಾರ್ ಮನೆನು ತೂರ್ತರೆ ಅನ್ನೋ ಟೀಕೆಗೂ ಗುರಿಯಾದರು. ಅರಿವಿಗೆ ಎದುರಾಗುವ ಶಹರಗಳೆ ಕುಲವೊಂದ ಹಿಡಿದು ಕೊಲ್ಲುವಾಗ ಹಳ್ಳಿಗಳ ಕುಲಜುದ್ದ ಮುಗಿಯಲ್ಲ. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಗಳು ಎಷ್ಟೇ ಜನ ಹುಟ್ಟಿಬಂದರೂ ಬಣ್ಣದ ಗುಡಿ ಏರಿಸಿ (ಬಾವುಟ) ಹಾರಿಸಿಬಿಟ್ಟರೆ ಸಮುದಾಯಕ್ಕೆ ಭ್ರಮೆಯ ಪಿತ್ತವಿಡಿದು ಕುಲಧರ್ಮಗಳು ತನುವಿಗೆ ತೋರಣವಾಗಿಬಿಡುತ್ತವೆ. ಕಾಲಕಾಲಕ್ಕು ಇಂಥದ್ದನ್ನು ಚೆಲ್ಲಿ ಮುಗುದ ಮನಸುಗಳಿಗೆ ವರ್ಗ ವರ್ಣ ಕುಡಿಸಿಬಿಟ್ಟರೆ ಮುಗೀತು ಕಥೆ. ಯಾವ ಅರಿವು ಸೋತು ಬಿಡುತ್ತದೆ.

“ಮಂಡೆಬೋಳಾದಡೇನು ಮನ ಬೋಳಾಗದನ್ನಕ್ಕ” ಶರಣರು ಕೊಟ್ಟು ಹೋದ ಇಂಥಾ ದಟ್ಟ ಪ್ರಜ್ಞೆಯನ್ನು ಒಂದು ಗಂಟೆಯ ಶಬುದದಲ್ಲಿ ಸಮಾಧಿ ಮಾಡಲು ಆಗುತ್ತದೆ ಮತಿಕೆಟ್ಟವರಿಗೆ. ಸಮಾನತೆ ಮಾತನಾಡಲು ಬಿಡದಂತೆ ಹಲ್ಲೆ ಮಾಡುವ ಜನರ ಗುಂಪುಗಾರಿಕೆಯನ್ನು ಹಳ್ಳಿಗಳು ಪೋಷಿಸಿಕೊಳ್ಳುವಂತೆಯೂ ಹುನ್ನಾರಗಳು ಹೆಚ್ಚಿವೆ.

ಸುಟ್ಟವರಿಗೆ ಕೆಟ್ಟ ದರಿದ್ರ ಸುತ್ತಿಕೊಂಡಿದೆ. ಆಕಾರವೇ ಬದಲಾಗಿ ಹೋದ ಸುಟ್ಟ ಹುಡುಗ ಈಗ ಎತ್ತರಕ್ಕೆ ಬೆಳೆದಿದ್ದಾನೆ. ಸುಟ್ಟ ಕುರುಹುಗಳು ಲಕ್ಷಣಕ್ಕೆ ಹಾನಿ ಮಾಡಿವೆ. ಎಷ್ಟೆಷ್ಟೋ ಕಸುಬುಗಳನ್ನು ಕಲಿತು ಬಾಳು ಕಟ್ಟಿಕೊಂಡ ಹುಡುಗ ನನ್ನ ಊರಿನಲ್ಲಿ ಮೋಟ್ರುಗಳು ಸುಟ್ಟರೆ ಸುತ್ತುವ ಕೆಲಸ ಮಾಡುತ್ತಾನೆ. ಅವನ ಮನೆಯಲ್ಲಿ ಒಬ್ಬರು ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಿಸಿ ಸದಸ್ಯರಾಗಿದ್ದರು. ಅವಿದ್ಯಾವಂತರಾದ ಅವರ ಜೊತೆ ಕೈಗೂಡಿಸಿಕೊಂಡು ಒಂದಷ್ಟು ಗ್ರಾಮಕ್ಕೂ ಒಳಿತು ಮಾಡಿದ್ದಾನೆ. ಇವನದೇ ವಯೋಮಾನದ ಹುಡುಗರೆಲ್ಲ ಗುಂಪು ಕಟ್ಟಿಕೊಂಡು ಏನೇನೋ ಒಂದಿಷ್ಟು ಹಳತು ಹೊಸತುಗಳ ಬೆಸೆದು ರಾಜಕಾರಣ ಮಾಡುತ್ತಿವೆ. ಇವನಿಗೊಂದು ‘ಹೈಟೆಕ್’ ಎನ್ನುವ ಅಡ್ಡ ಹೆಸರು ಬಂದಿದೆ. ಏನೇನೋ ಪರಸ್ಪರ ಲೇವಡಿ ಮಾಡಿಕೊಂಡು ಒಟ್ಟು ಅವತ್ತಿನ ಗಾಳಿ ಅವತ್ತಿನ ಮಳೆಗೆ ಹೊಂದಿಕೊಂಡು ಬದುಕುತ್ತಿವೆ.

ಹೆಚ್ಚು ಸುಟ್ಟ ಗಾಯಗಳ ಕುರುಹು ಇರುವುದರಿಂದ ಮೊದಲಿನಂತೆ ನಡೆಯಲು ಇವನಿಗಾಗಲ್ಲ. ಎಷ್ಟೆಲ್ಲ ಸೊಗಸುಗಳು ಊರನ್ನು ಅಲಂಕರಿಸಿದ್ದರೂ ಕೂಡ ಆಗಾಗ ಇಂಥವು ನಡೆದು ಒಂದಷ್ಟು ದಿನ ಅತೃಪ್ತ ಮೌನಕ್ಕೆ ಊರು ಶರಣಾಗುತ್ತದೆ. ಜಾತಿ, ಕೊಲೆ, ಪ್ರೇಮ ವಿರೋಧಗಳಿಗೆಲ್ಲ ಮರ್ಯಾದೆ ಎಂಬ ಲೇಬಲ್ ಹಾಕಿಕೊಂಡು ಜೊಳ್ಳುಬಿದ್ದ ಜನ ಮಾನವತೆಯ ಬಯಲಿಗೆ ಬರಲ್ಲ.

ನಮ್ಮ ಊರಿನಲ್ಲಿ ‘ರಂಗವ್ವನ ತಗ್ಗು’ ಅಂತ ಇದೆ. ತುಂಬಾ ದಿನ ಈ ರಂಗವ್ವನ ಕುರಿತಾಗಿ ಯಾರನ್ನು ಕೇಳಿದರೂ ಏನೂ ಹೇಳುತ್ತಿರಲಿಲ್ಲ. ಈಗೀಗ ಒಂದಿಷ್ಟು ವಿಷಯಗಳು ಹೊರಗೆ ಇಣುಕುತ್ತಿವೆ. ರಂಗವ್ವನೆನ್ನುವ ಅವ್ವನಿಗೆ ಎಂಥದೊ ಖಾಯಿಲೆ ಬಂದು ಒಂದಷ್ಟು ದಿನ ಬಲು ಪಡ್ಪಾಟ್ಲು ಬಿದ್ರಂತೆ. ಎಂಥದು ಖಾಯಿಲೆ ಅಂದ್ರೆ ಯಾರು ಬಾಯಿ ಬಿಡಲ್ಲ. ಕ್ರಮೇಣ ಈ ಅವ್ವ ತೀರಿಕೊಂಡ ಮೇಲೆ ಊರಿನವರೆಲ್ಲ ಮಾತಾಡಿಕೊಂಡು ಊರಿಂದ ನಾಲ್ಕೈದು ಫರ್ಲಾಂಗು ದೂರವಿರುವ ಒಂದು ಆಳದ ಗುದ್ರಕ್ಕೆ ಎಸೆದು ಬಂದುದಾಗಿ ಕಥೆ ಬೆಳೆದಿದೆ. ಅಂದಿನಿಂದ ಈ ಜಾಗಕ್ಕೆ ರಂಗವ್ವನ ತಗ್ಗು ಎಂದೇ ಹೆಸರು.

ಇದೆಲ್ಲಾ ತಿಳಿದಾದ ಮೇಲೆ ಸೂಕ್ಷ್ಮವಾಗಿ ಊರನ್ನು ಗಮನಿಸಿದೆ. ಮನೆಮನೆಯಲ್ಲೂ ಓಡಾಡಿದೆ. ವಿಪರೀತ ಆದರ್ಶಗಳಿರುವಂತೆ ಮಾತಾಡುವ ಮಳ್ಳಿಗರು ಹೆಂಗಸರು ಅಡುಕ್ವಾಗಿರ್ಬೇಕು ಕಣಮ್ಮ ಇಲ್ಲ ಅಂದ್ರೆ ಮನೆ ಮಾನವೇ ಹೋಗುತ್ತೆ ಅನ್ನೋ ಪುರುಷ ಪ್ರಜ್ಞೆಗೆ ಧಿಮಾಕು ಮೆತ್ತಿ ಮನೆಯ ಅಮ್ಮಂದಿರಿಗೆ ಕಂಡೂ ಕಾಣದಂತೆ ಕಡಿವಾಣ ಹಾಕಿದ್ದಾರೆ. ಇಷ್ಟಾಗಿಯೂ ಒಂದಷ್ಟು ಜನ ಹೆಣ್ಣುಮಕ್ಕಳು ದ್ವಿಚಕ್ರ ವಾಹನ ಇಟ್ಕೊಂಡು ತಮ್ಮದೇ ಛಾಪು ಮೂಡಿಸಿಕೊಂಡು ಹೊಲ ಮನೆ ಅಂತ ಓಡಾಡ್ತಿದ್ರೆ ಕೀಳುಮಟ್ಟದ ಮಾತಾಡ್ತಾ ಅಂಗ್ಡಿಸಾಲಗೆ ಕಾಲ ಕಳೆಯುವ ಪೊಳ್ಳು ಗಂಡಸರ ಸಂಖ್ಯೆಗೇನೂ ಕೊರತೆ ಇಲ್ಲ.

ಕಿವಿಸಂದಿಗೆ ಅರ್ಧ ಸೇದಿದ ಬೀಡಿಯನ್ನು ಇಟ್ಕಂಡು, ಬೈಗಾದ್ರೆ  ಸಾಲ ಮಾಡಿ ಹೆಂಡಕ್ಕೆ ಜೋತುಬಿದ್ದು ಬದುಕು ಕರ್ಗೋಗ್ತಿದ್ರು ದೌಲಿಗೇನು ಕಡಿಮೆ ಇಲ್ಲ. ಗಂಡಸಿಗೆ ಮಾನವೆಂದರೆ ಕುಟುಂಬಗಳು ದಿವಾಳಿಯಾಗದಂತೆ ಕಾಯುವ ಅಮ್ಮಂದಿರ ಮಮತೆ ನಿಯತ್ತನ್ನು ಲೇವಡಿ ಮಾಡುವುದೇ ಆಗಿದೆ.

ನಿಧಾನಕ್ಕೆ ಊರಿನ ಒಳವಲಯದ ಗುಟ್ಟುಗಳು ಹೊರಬರುತ್ತಿವೆ. ಸುಟ್ಟದ್ದು ಸರಿ ಎಂದು ಸೊಕ್ಕಿನಿಂದ ಮಾತನಾಡುವ ಅಸಹ್ಯಗಳು ತಲೆ ಎತ್ತಿವೆ. ರಂಗವ್ವನನ್ನು ಹಾಗೆ ಎಸೆಯಬಾರದಿತ್ತು ಎಂಬ ಪ್ರಶ್ನೆಗೆ ಬರ್ಬಾರುದ್ ರೋಗ ಬಂದಿತ್ತು ಎಸ್ತಿದ್ದೇ ಸರಿ ಎಂದು ರೋಗಕ್ಕಿಂತಲೂ ಅಪಾಯದ ಅವಿವೇಕಿಗಳು ಮಾತಾಡಿದ್ದಿದೆ.

ಅಹಂನ ಅತಿರೇಕದ ಗಂಡುಗರ್ವದ ರೋಗಗಳಿಗೆ ಅರಿವಿನ ಮೆರುಗು ಅರ್ಥವೇ ಆಗಲ್ಲ. ಎಲ್ಲವನ್ನೂ ಕೀಳು ತರ್ಕದ ಜೊತೆಗಿಟ್ಟು ಊರಿನ ಘನತೆಗೆ ದಕ್ಕೆ ತರುವವರ ಸಂಖ್ಯೆಯೂ ಏರುತ್ತಿದೆ. ಹಳೆಯ ತಲೆಮಾರಿನ ಜನ ಎಷ್ಟೆಲ್ಲ ಆದರ್ಶಗಳನ್ನು ಸದ್ದಿಲ್ಲದೆ ಉಳಿಸಿ ಹೋಗಿದ್ದಾರೆ. ಇವತ್ತಿನ ಬದಲಾದ ತಲೆಮಾರುಗಳಿಗೆ ಮಾನವ ಪ್ರೇಮದ ಮಹತ್ವ ಮುಖ್ಯ ಎನಿಸಲ್ಲ. ಎಲ್ಲದಕ್ಕೂ ಆತ್ಮರತಿಯನ್ನೇ ಮೊದಲು ಮಾಡಿಕೊಂಡು ನುಗ್ಗುವ ಗುಂಪುಗಾರಿಕೆಗೆ ತಾನಾಯ್ತು ತನ್ನ ಕಣ್ಣಗ್ಲು ಗೊಂಬೆ ಆಯ್ತು ಅನ್ನೋ ಕರ್ಮ ಹಿಡಿದಿದೆ.

ನೀರೊಳಗಣ ಕಿಚ್ಚಿಗೆ ನೀರೇ ತಾಯಿ
ಕಲ್ಲೊಳಗಣ ಕಿಚ್ಚಿಗೆ ಕಲ್ಲೇ ತಾಯಿ
ಮರದೊಳಗಣ ಕಿಚ್ಚಿಗೆ ಮರವೇ ತಾಯಿ
ಅವು ಹೊರಹೊಮ್ಮಿದಾಗ ತಾಯ ತಿಂದು
ತಾವು ತಲೆದೋರುವಂತೆ ಕುರುಹಿಂದ ಅರಿವನರಿತು,
ಅರಿವು-ಕುರುಹ ನಷ್ಟವ ಮಾಡಿ ನಿಂದಲ್ಲಿಯೇ ಐಘಟದೂರ
ರಾಮೇಶ್ವರಲಿಂಗವು ಅಂಗವರಿತು ನಿಂದ ನಿಲುವು.
(ಶರಣ: ಮೆರೆಮಿಂಡ)

January 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Meghana N +91

    “ಮಾನವೀಯತೆ ಏನಾಗಿದೆ ನಿನಗಿಂದು ಹೀಗೇಕೆ ನಡು ಬೀದಿಯಲಿ ಮೌನವಾಗಿ ಮಲಗಿರುವೆ ” ಎಂಬ ಶರೀಫ ರವರ ಕವನ ಸಾಂಧರ್ಭಿಕವಾಗಿ ನೆನಪಿಗೆ ಬರುತ್ತಿದೆ ಸ್ವಹಿತಾಸಕ್ತಿಯನ್ನು ಕಾಪಾಡ್ತೀಕೊಳ್ಳುವ ಧಾವಂತದಲ್ಲಿ ಮಾನವೀಯನ್ನು ಮರೆತು ಜಾತಿ, ವರ್ಣ ಬೇಧ ಇತರೆ ಮೇಲು ಕೀಳು ಭಾವನೆಗಳನ್ನು ಹುಟ್ಟು ಹಾಕಿ ಅದನ್ನೇ ಸತ್ಯವೆಂದು ಬಿಂಬಿಸುವ ಇತರೆ ಜೀವಿಗಳ ಬದುಕುವ ಹಕ್ಕು ಕಸಿಯುವ ಕೃತ್ಯ ನಡೆಯುತ್ತಲೇ ಇದೆ ಹೀಗಿರುವಾಗ ಶೋಷಿತ ವರ್ಗದ ದನಿಯಾಗುವ ಈ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಇಂತಹ ಮಾನವೀಯ ಬರಹಗಳ ಸಮಾಜಕ್ಕೆ ಅತ್ಯಗತ್ಯ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: