ರಕ್ಷಿಸುವ ಪ್ರತಿ ಮಗುವೂ ನನ್ನದೇ..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ನಾನು ಸೌಗಂಧಿನಿ. ಎರಡು ವರ್ಷದವಳಿರುವಾಗಲೇ ಅಮ್ಮ ಸತ್ತು ಹೋದಳಂತೆ. ನನ್ನನ್ನು ಯಾರೂ ಇಲ್ಲದ, ಒಂಟಿಯಾಗಿದ್ದ ನನ್ನ ದೊಡ್ಡವ್ವ ಸಾಕಿದಳು.  ಮೂರ್ನಾಲ್ಕು ಮನೆಗೆಲಸ ಮಾಡ್ತಿದ್ದಳು. ಯಾವಾಗಲಾದರೊಮ್ಮೆ ನನ್ನನ್ನೂ ಆ ಮನೆಗಳಿಗೆ ಕರ್ಕೊಂಡು ಹೋಗ್ತಿದ್ದಳು. ನಾನು ಸ್ವಲ್ಪ ದೊಡ್ಡವಳಾದ ಮೇಲೆ ಮನೆಯಲ್ಲಿಯೇ ಬಿಟ್ಟು ಹೋಗ್ತಿದ್ದಳು.

ಅಕ್ಕಪಕ್ಕದಲ್ಲಿ ನಮ್ಮಂತೆಯೇ ಕೂಲಿ ಕೆಲಸ ಮಾಡೋರ ಮನೆಗಳಿದ್ವು. ಎಲ್ಲಾ ಮಕ್ಕಳೊಂದಿಗೆ ಆಟವಾಡ್ತಿದ್ದೆ. ಪಕ್ಕದ ಮನೆಯವನು ನನ್ನನ್ನು ಒಳಗೆ ಕರೆದು ಮೈಯ್ಯೆಲ್ಲ ಮುಟ್ಟುತ್ತಿದ್ದ.. ಹಿಚುಕುತ್ತಿದ್ದ. ವಯಸ್ಸಾದವನು ಅವನು, ನೋವಾಗುತ್ತಿತ್ತು. ಒಂದು ದಿನ ದೊಡ್ಡವ್ವನಿಗೆ ಹೇಳಿದೆ. ಅವಳು ನೀನು ಹೆಣ್ಣು ಕಣವ್ವ, ಅವರ ಮನೆಗಳಿಗೆಲ್ಲ ಹೋಗ್ಬೇಡ ಅಂತ ನನಗೇ ಬುದ್ದಿ ಹೇಳಿದ್ಲು.

ದೊಡ್ಡವ್ವನಿಗೂ ದಣಿವಾಗುತ್ತಿತ್ತು. ತನಗೂ ಸ್ವಲ್ಪ ಸಹಾಯವಾಗಬಹುದು ಹಾಗೂ ಮನೆಯಲ್ಲಿ ಒಬ್ಬಳೇ ಇದ್ದರೆ ಆಗಬಹುದಾದ ಅಚಾತುರ್ಯಗಳಿಂದ ಪಾರು ಮಾಡುವ ಯೋಚನೆ ಮಾಡಿದಳು. ಕಟ್ಟಡ ಕಟ್ಟುವ ಕೆಲಸಕ್ಕೆ ಹೋಗುವ ಹೆಂಗಸರೊಂದಿಗೆ ಜೊತೆ ಮಾಡಿ ನನ್ನನ್ನೂ ಕೂಲಿಗೆ ಕಳುಹಿಸೋ ವ್ಯವಸ್ಥೆ ಮಾಡಿದಳು. 

ನಾನೂ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದೆ. ನನ್ನ ಕೆಲಸ ಮೇಸ್ತ್ರಿಗೂ ಇಷ್ಟವಾಗಿತ್ತು.

ಅದೊಂದು ದಿನ, ಒಬ್ಬ ಹುಡುಗ ಬಂದು, ಹೇ ಹುಡುಗಿ, ನಿನ್ನ ದೊಡ್ಡಮ್ಮನಿಗೆ ಆಕ್ಸಿಡೆಂಟ್ ಆಗಿದೆ, ಬಾ ಎಂದ. ಅನಿರೀಕ್ಷಿತವಾದ ಸುದ್ದಿಯಿಂದ ಗಾಬರಿಯಾದೆ. ಅವನ ಜೊತೆ ಓಡಿದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಂದು ಆಟೋ ಬಂತು. ಹತ್ತು, ಆಸ್ಪತ್ರೆ ದೂರ ಇದೆ ಅಂದ. ನಾನು ಅಳುತ್ತಲೇ ಕುಳಿತೆ. 

ಈ ಪ್ರಪಂಚದ ಜ್ಞಾನವೇ ಇರದ ನಾನು ಮೋಸಹೋಗಿದ್ದೆ. ಊರ ಹೊರಗಿನ ಪಾಳು ಕಟ್ಟಡದಲ್ಲಿ ಅವರಿಬ್ಬರೂ ನನ್ನ ಮೇಲೆರಗಿದರು. ಎಷ್ಟು ಪ್ರತಿರೋಧಿಸಿದರೂ, ಬೇಡಿದರೂ ಪ್ರಯೋಜನವಾಗಲಿಲ್ಲ. ಸಂಜೆ ಮಬ್ಬಾಗುವವರೆಗೂ ಕಾದಿದ್ದು, ಒಂದಷ್ಟು ದೂರ ತಂದು ನನ್ನನ್ನು ಕೆಳಗೆ ತಳ್ಳಿದರು. ಅವರನ್ನೆಂದೂ ನಾನು ನೋಡಿರಲೇ ಇಲ್ಲ. ನನ್ನನ್ನು ದೂರದಿಂದಲೇ ನೋಡುತ್ತಿದ್ದ ಅವರು ಹೊಂಚು ಹಾಕಿದ್ದರು. 

ದೇಹ ಅಗಾಧವಾದ ನೋವನುಭವಿಸುತ್ತಿತ್ತು. ಎದೆಗಳು ಹಿಂಡುತ್ತಿದ್ದವು. ಬಟ್ಟೆಯೆಲ್ಲಾ ರಕ್ತಸಿಕ್ತವಾಗಿತ್ತು. ಹಸಿವು, ದಾಹವಾಗುತ್ತಿತ್ತು.  ತಟ್ಟಾಡಿಕೊಂಡು ಮನೆ ಸೇರುವಷ್ಟರಲ್ಲಿ ಸರಿ ರಾತ್ರಿಯಾಗಿತ್ತು. ಅಷ್ಟರಲ್ಲಾಗಲೇ ದೊಡ್ಡವ್ವ ಗಾಬರಿಯಾಗಿದ್ದಳು. ತನ್ನ ಕೂಸಿನ ಮೇಲೆ ಯಾವ ಕ್ರೌರ್ಯವಾಗಬಾರದೆಂದು ಹೆಣಗಾಡಿದ್ದಳೋ ಅದು ನಡೆದೇ ಹೋಗಿತ್ತು. ಚೀತ್ಕರಿಸಿದಳು. ಹಣೆಹಣೆ ಚಚ್ಚಿಕೊಂಡು ತನ್ನ ಅಸಹಾಯಕತೆಯನ್ನು ಹಳಿದುಕೊಂಡಳು. ಅವಳ ಪ್ರೀತಿ ಅಂತಹುದ್ದು. ಹಡೆದಿರಲಿಲ್ಲ ಅಷ್ಟೆ.

ಜರ್ಝರಿತಳಾಗಿದ್ದ ನನ್ನ ತಬ್ಬಿಕೊಂಡು ಘೀಳಿಟ್ಟಳು. ನೀರೆರೆದು, ಉಣಬಡಿಸಿದ್ಲು. ಸೋತು ಹೋಗಿದ್ದೆವು ಇಬ್ಬರೂ.. ನಿದ್ರೆಯೂ ಮುಷ್ಕರ ಹೂಡಿತ್ತು. ಎರಡು ಮೂರು ದಿನಗಳು ದೊಡ್ಡವ್ವ ಕೆಲಸಕ್ಕೆ ಹೋಗಲಿಲ್ಲ. ಮಂಕಾಗಿದ್ದಳು. ಮಾತೂ ಕಡಿಮೆಯಾಗಿದ್ದವು. ಅದೆಂಥಾ ಅಸಹನೀಯ ನೋವುಣ್ಣುತ್ತಿದ್ದಳೋ, ಅವಳನ್ನು ನೋಡು ನನ್ನ ಸಂಕಟ ಇಮ್ಮಡಿಯಾಗಿತ್ತು. 

ಮೂರ್ನಾಲ್ಕು ತಿಂಗಳು ಕಳೆದವು. ನಾನು ಬಸಿರಾದ ಎಲ್ಲಾ ಲಕ್ಷಣಗಳೂ ಗೋಚರಿಸಿದ್ವು. ಆ ದಿನಕ್ಕಿಂತ ಈಗ ದೊಡ್ಡವ್ವ ದುಪ್ಪಟ್ಟು ಕಂಗಾಲಾದ್ಲು. ಅದೇನು ನಿರ್ಧರಿಸಿದ್ಲೋ ಗೊತ್ತಿಲ್ಲ.. ಅಲ್ಲಿರುವ ಎಲ್ಲರಿಗೂ ವಿಷಯ ತಿಳಿಯೋಕೆ ಮೊದಲೇ ಆ ಊರು ಬಿಟ್ಟುಬಿಟ್ಟೆವು. ಅಲ್ಲಿಂದ ಲಕ್ನೋಗೆ ಬಂದು, ಪರಿಚಿತರೊಬ್ಬರ ಸಹಾಯ ಪಡೆದು ಕೊಳಗೇರಿ ಸೇರಿದೆವು.

ನಾನು ಹೆಣ್ಣು ಮಗುವನ್ನು ಹಡೆದೆ. ದೊಡ್ಡವ್ವ ಆಗಲೇ ಸುಸ್ತಾಗ್ತಿದ್ಲು. ಮಗುವಿನ ಮುಖ ನೋಡಿ ನೋವು ಮರೆಯೋ ಪ್ರಯತ್ನವನ್ನು ಇಬ್ಬರೂ ಮಾಡಿದೆವು. 

ದೊಡ್ಡವ್ವ ತರ್ತಿದ್ದ ಪುಡಿಕಾಸು ಹೊಟ್ಟೆ ತುಂಬಿಸ್ತಾ ಇರಲಿಲ್ಲ. ಹಸಿವು ನನ್ನನ್ನು ಹೀಯಾಳಿಸಿತ್ತು, ವಯಸ್ಸಿರುವ ನಾನು ದುಡಿದು ದೊಡ್ಡವ್ವನನ್ನು ಮಗು ನೋಡ್ಕೊಳ್ಳೋಕೆ ಬಿಡೋದು ಅಂತ ಅಂದ್ಕೊಂಡೆ. ಅಲ್ಲಿದ್ದ ಕೆಲಸಕ್ಕೆ ಹೋಗ್ತಿದ್ದ ಕೆಲವು ಹೆಣ್ಣುಮಕ್ಕಳು ಪರಿಚಯವಾದ್ರು. ನನ್ನನ್ನೂ ಕೆಲಸಕ್ಕೆ ಕರ್ಕೊಂಡು ಹೋಗೋಕೆ ಕೇಳಿಕೊಂಡೆ. ಒಪ್ಪಿದ್ರು. ಅವರ ಜೊತೆ ಕೆಲಸಕ್ಕೆ ಹೊರಟೆ.

ಮೂರ್ನಾಲ್ಕು ಹುಡುಗಿಯರು ನನ್ನನ್ನೂ ಕರ್ಕೊಂಡು ಒಂದು ಆಟೋ ಹಿಡಿದರು. ನಗರದ ಜನದಟ್ಟಣೆಯ ಪ್ರದೇಶದಲ್ಲಿ ಇಳಿದರು. ಇಳಿದವರೇ ತಲೆ ಬಾಚ್ಕೊಂಡು ಕೂದಲು ಇಳಿಬಿಟ್ಟರು. ತುಟಿಗಳಿಗೆ ಬಣ್ಣ ತುಂಬಿದ್ರು. ಅಲ್ಲೇ ರಸ್ತೆ ಬದಿಯಲ್ಲಿ ನಿಂತರು. ನನ್ನನ್ನೂ ನಿಲ್ಲಿಸಿದ್ರು. ತಿರುಗಿ ನೋಡಿದೆ, ಅಲ್ಲಲ್ಲಿ ಹೀಗೇ ಹುಡುಗಿಯರು ನಿಂತಿದ್ರು. ಇದ್ಯಾವ ಕೆಲಸ ಅಂದೆ. ಅದರಲ್ಲೊಬ್ಬಳು ಹೊಟ್ಟೆ ಬಗೆಯುವ ಕೆಲಸ ಅಂದಳು. ಅವರೆಲ್ಲ ಗೊಳ್ಳಂತ ನಕ್ಕರು. 

ಸ್ವಲ್ಪ ಸಮಯದ ನಂತರ ಬಂದ ಗಂಡಸರೊಂದಿಗೆ ಒಬ್ಬೊಬ್ಬರೇ ಹೋಗೋಕೆ ಶುರು ಮಾಡಿದ್ರು. ಅವರಲ್ಲಿದ್ದ ಹಿರಿಯಳೊಬ್ಬಳು ನನಗೂ ಒಬ್ಬ ಗಂಡಸನ್ನು ಗೊತ್ತು ಮಾಡಿದ್ಲು. ಅವನು ಕೊಟ್ಟ ಮುನ್ನೂರು ರೂಪಾಯಲ್ಲಿ ಇನ್ನೂರು ರೂಪಾಯಿ ಅವಳೇ ಇಟ್ಕೊಂಡ್ಳು. ಉಳಿದದ್ದನ್ನು ನನಗೆ ಕೊಟ್ಟಳು. ಅವನಿಗೆ ವಾಪಾಸ್ ಇಲ್ಲಿಯೇ ಬಿಡು ಅಂದ್ಲು. ನಾನು ಆ ಗಂಡಸಿನ ಜೊತೆ ಹೋದೆ. 

ಈಗಾಗಲೇ ಒಮ್ಮೆ ಛಿದ್ರವಾಗಿದ್ದ ಮನಸ್ಸನ್ನು, ಕನ್ಯತ್ವವನ್ನು ಮತ್ತೆ ಮತ್ತೆ ಛಿದ್ರಗೊಳಿಸುತ್ತಲೇ ಹೋದೆ. ರಾತ್ರಿ ಮನೆಗೆ ಹೋಗಿ ದೊಡ್ಡವ್ವಳಿಗೆ ಹಣ ಕೊಟ್ಟೆ. ಎಲ್ಲಿಯದು ಅಂತ ಅವಳೂ ಕೇಳಲಿಲ್ಲ.. ನಾನೂ ಹೇಳಲಿಲ್ಲ.. ಎಲ್ಲವೂ ಅರ್ಥವಾಗಿತ್ತು. ಕಿತ್ತು ತಿನ್ನುತ್ತಿದ್ದ ಒಡಲ ಹಸಿವಿನ ಆಕ್ರಂದನದ ಮುಂದೆ ಎಲ್ಲವೂ ಗೌಣವಾಗಿ ಬಿಟ್ಟಿತ್ತು. ದಿನಕಳೆದಂತೆ ನನಗೂ ಪರಿಚಯವಾಯ್ತು. ಅಭ್ಯಾಸವೂ ಆಯ್ತು. ನಾನು ಒಬ್ಬಳೇ ಹೋಗೋಕೆ ಆರಂಭಿಸಿದೆ.

ಅದೊಂದು ದಿನ , ಗೋಮತಿ ನಗರದ ರಸ್ತೆಯಲ್ಲಿ ಗಿರಾಕಿಗಾಗಿ ಕಾದು ನಿಂತಿದ್ದೆ. ನಾಲ್ಕು ಹುಡುಗರು ಸಮೀಪ ಬಂದರು. ಚಾಕು ತೋರಿಸಿ ಸುಮ್ಮನೆ ಗಾಡಿ ಹತ್ತು ಅಂದ್ರು. ನನಗೂ ಭಯವಾಯ್ತು. ಓಡೋಕೆ ಪ್ರಯತ್ನಿಸಿದೆ, ನಾವು ಪೊಲೀಸರಿಗೆ ಹೇಳ್ತೀವಿ, ತಪ್ಪಿಸ್ಕೊಳ್ಳೋ ಪ್ರಯತ್ನ ಮಾಡ್ಬೇಡ, ಈ ಏರಿಯಾ ನಮ್ಮದು..ನಿನ್ನನ್ನು ಏನೂ ಮಾಡೋಲ್ಲ, ಗಾಡಿ ಹತ್ತು ಅಂದ್ರು. 

ಈವತ್ತಿಗೆ ಈ ಆಗಂತುಕರ ಸಂಚಿಗೆ ಬಲಿಯಾದೆ ಅಂದ್ಕೊಂಡೆ. ಗಾಡಿ ಲಕ್ನೋ ದಾಟಿ ಬಹಳ ದೂರದ ನಗರಕ್ಕೆ ತಲುಪಿತ್ತು.  ದಾರಿಯುದ್ದಕ್ಕೂ ಅಂಗಲಾಚಿ ಬೇಡಿಕೊಂಡೆ, ಮನೆಯಲ್ಲಿ ಎದೆಹಾಲು ಕುಡಿಯೋ ಮಗುವಿದೆ, ನಾನು ಹೋಗದಿದ್ರೆ ದೊಡ್ಡವ್ವ ಎದೆಯೊಡೆದು ಸಾಯ್ತಾಳೆ, ದಯವಿಟ್ಟು ಬಿಡಿ ಅಂತ ಗೋಗರೆದೆ.

ಇನ್ನೂ ಸರಿಯಾಗಿ ಮೀಸೆಯೂ ಬಂದಿರಲಿಲ್ಲ ಆ ಪಡ್ಡೆಗಳಿಗೂ.. ಎಲ್ಲರ ಕಿವಿಗಳೂ ಮುಚ್ಚಿ ಹೋಗಿದ್ದವು. ದಾರಿಯಲ್ಲಿ ತಪ್ಪಿಸ್ಕೊಳ್ಳೋ ಪ್ರಯತ್ನ ಮಾಡ್ದೆ, ಕೈ ಕಾಲು ಕಟ್ಟಿದ್ರು, ಬಾಯಿಗೆ ಒಬ್ಬ ಕೈ ತುರುಕಿದ. ಅವನ ಕೈಯನ್ನು ಗಟ್ಟಿಯಾಗಿ ಕಚ್ಚಿಬಿಟ್ಟೆ. ಸಿಟ್ಟು ನೆತ್ತಿಗೇರಿ ಕಟ್ಟನ್ನು ಇನ್ನೂ ಬಿಗಿಗೊಳಿಸಿದ. 

ನನ್ನ ಬದುಕಿನ ಇನ್ನೊಂದು ಕರಾಳ ಅಧ್ಯಾಯ ತೆರೆದುಕೊಂಡಿತು. ಎದೆಯ ಹಾಲು ಹೆಪ್ಪುಗಟ್ಟಿದ ಅಗಾಧ ನೋವು ನನ್ನನ್ನು ಹಿಂಡಿತ್ತು. ಆಗ್ರಾದ ಒಂದು ಬ್ರಾಥೆಲ್ ಗೆ ನನ್ನನ್ನು ಮಾರಿ ಹೋಗಿದ್ದರು. ಅದರ ಮಾಲೀಕ ಅತ್ಯಂತ ಕ್ರೂರಿ. ಅಲ್ಲಿಂದ ತಪ್ಪಿಸಿಕೊಂಡು ಬರಲು ನಾನು ಮಾಡಿದ ಸಾವಿರ ಪ್ರಯತ್ನಗಳೂ ವಿಫಲವಾಗಿದ್ದವು. ಹಾಗೆ ಪ್ರಯತ್ನ ಮಾಡಿದಾಗಲೆಲ್ಲ, ಕತ್ತು ಹಿಸುಕಿ, ದಿಂಬು ಒತ್ತಿ, ಚೂರಿಯಿಂದ ಗಾಯಗೊಳಿಸಿ ಭಯ ಹುಟ್ಟಿಸ್ತಾ ಇದ್ದ. 

ಅಲ್ಲಿ ದೈಹಿಕ ಹಿಂಸೆಯಷ್ಟೇ ಮಾನಸಿಕ ಹಿಂಸೆಯನ್ನೂ ಅನುಭವಿಸಿದೆ. ಪ್ರತಿ ಕ್ಷಣವೂ ಸಾಯುತ್ತಿದ್ದೆ. ಮನೆ ಮಾಲೀಕನ ಹತ್ತಿರ ಗನ್ ಇತ್ತು. ಎಷ್ಟೋ ಬಾರಿ ಅವನ ಕಾಲು ಹಿಡಿದು ಬೇಡಿಕೊಂಡೆ, ನನ್ನನ್ನು ಸುಟ್ಟುಬಿಡು ಎಂದು, ಆ ಧೂರ್ತ ತನ್ನ ಲಾಭವನ್ನೇ ಯೋಚಿಸುತ್ತಿದ್ದ..

ನನಗೆ ನನ್ನ ದೊಡ್ಡವ್ವ, ನನ್ನ ಒಡಲಕುಡಿಯ ನೆನಪಾದಾಗಲೆಲ್ಲ ಮೂರ್ಛೆ ಹೋದಂತಾಗುತ್ತಿತ್ತು. ಅದೆಷ್ಟು ಅಸಹಾಯಕಳಾಗಿದ್ದೆನೆಂದರೆ ಸಾಯಲೂ ಸ್ವತಂತ್ರಳಾಗಿರಲಿಲ್ಲ. ಯಾಂತ್ರಿಕವಾದ ಯಾತನಾಮಯ ದಿನಗಳನ್ನು ಕಳೆಯುತ್ತಿದ್ದೆ. 

ಗಿರಾಕಿಗಳೂ ವಿಚಿತ್ರವಾಗಿರುತ್ತಿದ್ರು, ಬಹುತೇಕರು ಕ್ರೂರಿಗಳೂ, ಮಾನಸಿಕ ಅಸ್ವಸ್ಥರೂ,  ಕೋಪಿಷ್ಠರೂ, ಹತಾಷರೂ, ವಿಕೃತ ಕಾಮಿಗಳೂ ಆಗಿರುತ್ತಿದ್ದರು. ಪ್ರತಿದಿನ ಕನಿಷ್ಠ 5 ಗಿರಾಕಿಗಳೆಂದರೂ ವರ್ಷದಲ್ಲಿ ಅಂದಾಜು 1800 ಅಪರಿಚಿತ, ವ್ಯಸನಿಗಳ ಜೊತೆ ಅವರ ತೃಷೆ ತೀರಿಸುವುದೆಂಥಾ ಕ್ರೌರ್ಯದ ಪರಮಾವಧಿ ಅನ್ನೋದು ಈ ವ್ಯವಸ್ಥೆಗೆ, ಈ ಸಮಾಜಕ್ಕೆ ಹೇಗೆ ತಿಳಿಯಬೇಕು!!

ವೇಶ್ಯೆಯರೆಂದರೆ ಸುಲಭದ ದುಡಿಮೆಯ ದಾರಿ, ಬಿಟ್ಟಿ ಸಂಪಾದನೆ, ಶ್ರೀಮಂತಿಕೆ, ಮನಮೋಹಕ ಮತ್ತು ಸೊಗಸಾದ, ಆರಾಮಾದ ದುಡಿಮೆ ಅಂತ ಅಂದ್ಕೊಳ್ತಾರೆ, ಆ ಕಳಂಕವನ್ನು ನಮ್ಮ ಮೇಲೆ ಆಪಾದಿಸ್ತಾರೆ.. ಈ ನರಕ ಯಾತನೆಯ ಬದುಕಿನ ಒಂದೊಂದು ಕ್ಷಣವೂ ದೌರ್ಜನ್ಯವೇ.

ಮತ್ತೊಂದು ದಿನ..!

ಗಿರಾಕಿಯೊಬ್ಬ ಹೆಚ್ಚು ಹಣ ಕೊಟ್ಟು ನನ್ನನ್ನು ಒಂದು ರಾತ್ರಿಗೆ ಅವನ ತೋಟದ ಮನೆಗೆ ಕರೆದುಕೊಂಡು ಹೋಗಲು ಕರಾರು ಮಾಡಿಕೊಂಡ.  ಹಾಗೆ ಹೋಗುವಾಗಲೆಲ್ಲಾ ಜೊತೆಗೆ ಗನ್ ಹಿಡಿದ ದಾಂಢಿಗರೂ ಜೊತೆಯಲ್ಲಿ ಬರ್ತಾ ಇದ್ರು. 

ಆ ದಾಂಢಿಗರು ಮೊದಲೇ ಕಾರೊಳಗೆ ಕೂತ್ಕೊಂಡ್ರು. ನಾನು ಒಂದು ಕ್ಷಣ ಯೋಚಿಸಿದೆ, ಇಂತಹ ಸುಸಂದರ್ಭ ಸಿಗೋಲ್ಲ ಅಂತ.. ಆ ಮನುಷ್ಯ ಕಾರಿಗೆ ಹತ್ತಲು ಹೇಳಿದ, ನಾನು ನನ್ನ ಸೆರಗನ್ನು ಕಾರಿಗೆ ಸಿಕ್ಕಿಸಿ, ಉಟ್ಟಿದ್ದ ಸೀರೆಯನ್ನು ಕಿತ್ತೆಸೆದು ಓಡಿದೆ ಓಡಿದೆ ಓಡಿದೆ.. ಸುಮಾರು ವರ್ಷಗಳೇ ಕಳೆದಿವೆ, ಹೊರಗಿನ ಪ್ರಪಂಚಕ್ಕೆ ಕಾಲಿಟ್ಟು.. ಬಹುಶಃ ಅಚಾನಕ್ಕಾದ ಈ ಘಟನೆಯನ್ನು ಊಹಿಸಿರದ ಅವರೆಲ್ಲರ ಕಣ್ಣಿಗೆ ಮಣ್ಣೆರೆಚಿದ್ದೆ!

ಅವರು ಹುಡುಕಿ ಬರಲಾರದಂತಹ ಸಂದಿಗೊಂದಿಗಳ ಓಟದಲ್ಲಿ ಯಶಸ್ವಿಯಾಗಿದ್ದೆ. ಎದೆ ಬಡಿತ ನನಗೇ ಕೇಳಿಸುವಷ್ಟು ನಾನೇ ಗಾಬರಿಯಾಗಿದ್ದೆ. ನನಗೇ ನಂಬಲಾಗುತ್ತಿಲ್ಲ.. ಎಂದೂ ಇಂತಹದೊಂದು ದಿನವನ್ನು ನಾನೂ ಊಹಿಸಿರಲಿಲ್ಲ.. ಅದೆಂದೋ ಸತ್ತು ಹೋಗಿದ್ದ ಬದುಕ ಹಣತೆ ಮತ್ತೆ ಸೆಣಸಾಡಿ ಹೊತ್ತಿಕೊಂಡಿತ್ತು. 

ಎಲ್ಲಿಗೆ ಹೋಗಲೂ ಭಯ, ಯಾರನ್ನು ನಂಬಲೂ ದಿಗಿಲು, ಈ ಜಗತ್ತು ನನ್ನ ಬದುಕಿನಲ್ಲಿ ನಂಬಿಕೆಯನ್ನೇ ಕಳೆದುಕೊಂಡು ಬಿಟ್ಟಿತ್ತು. ನಾನು ನೋಡಿದ್ದೆಲ್ಲವೂ ಅಗಾಧವಾದ ಕ್ರೌರ್ಯ.. ಕ್ರೌರ್ಯ.. ಕ್ರೌರ್ಯ..

ಆದರೂ ಪ್ರಯತ್ನ ಬಿಡದೆ ಧೈರ್ಯ ಮಾಡಿ ಒಂದು ಮನೆಯ ಗೇಟನ್ನು ಬಡಿದೆ, ಯುವತಿಯೊಬ್ಬಳು ಬಾಗಿಲು ತೆರೆದರು. ಪರೀಕ್ಷಿಸಲೆಂದು, ಅಮ್ಮಾ, ಒಂದು ಲೋಟ ಕುಡಿಯಲು ನೀರು ಕೊಡ್ತೀರಾ ಅಂದೆ. ಬಾಗಿಲು ಮುಚ್ಚಿ ಒಳ ಹೋಗಿ ನೀರು ತಂದರು, ಜೊತೆಯಲ್ಲಿ ಗಂಡಸೊಬ್ಬರು ಇದ್ದರು. ಅವರ ಸಂಭಾಷಣೆಯಿಂದ ಅವರ ಅಪ್ಪ ಅಂತ ತಿಳೀತು. ಗೇಟಿನ ಒಳಗೆ ಬಂದು ನೀರು ಕುಡಿ ಅಂತ ಹೇಳಿದ್ರು. ಸ್ವಲ್ಪ ಧೈರ್ಯ ಬಂತು. ಒಳಹೋದೆ. ನೀರನ್ನು ಗಟಗಟ ಕುಡಿದೆ. ಯಾವೂರು ಅಂದ್ರು? ಲಕ್ನೋ ಅಂದೆ.

ಅವರ ಅಪ್ಪ ಅಂತಹ ಆಸಕ್ತಿ ತೋರಿಸಲಿಲ್ಲ, ಒಳ ಹೋದರು. ಆದರೆ ಆ ಹುಡುಗಿ ಸ್ವಲ್ಪ ಕಾಳಜಿ ತೋರಿಸಿದಂತೆ ಅನಿಸಿತು. ನನಗೂ ಬೇರೆ ದಾರಿಯಿರಲಿಲ್ಲ. ತಂಗೀ, ನಾನು ಸ್ವಲ್ಪ ನಿಮ್ಮ ಜೊತೆ ಮಾತಾಡಬಹುದಾ ಅಂದೆ. ಮಾತಾಡು ಅಂದರು. ತೂಗಿಸಿ ತೂಗಿಸಿ ಸ್ವಲ್ಪ ಸ್ವಲ್ಪವೇ ನನ್ನ ಪರಿಸ್ಥಿತಿಯನ್ನು ಹೇಳಿಕೊಂಡೆ. ನನಗಿದ್ದುದು ಒಂದೇ ಗುರಿ, ನನ್ನ ದೊಡ್ಡವ್ವನನ್ನು, ನನ್ನ ಮಗುವನ್ನು ನೋಡುವ ಪ್ರಯತ್ನ ಮಾಡೋದು..

ನಂಬಿಕೆ ಕಳೆದುಕೊಂಡು ಕೊಚ್ಚಿ ಹೋಗುತ್ತಿದ್ದ ಜೀವಕ್ಕೆ ಹುಲ್ಲುಕಡ್ಡಿಯ ಆಸರೆಯಂತೆ, ಆ ಹುಡುಗಿ ನನಗೆ ಲಕ್ನೋ ತಲುಪುವ ಮಾರ್ಗದರ್ಶನ ಮಾಡಿದ್ರು. ಒಂದು ಹಳೆಯ ಹೊದಿಕೆಯನ್ನೂ ಕೊಟ್ಟರು. ಮತ್ತು ಅವರಲ್ಲಿ ಪ್ರಯಾಣಕ್ಕೆ ಬೇಡಿಕೊಂಡೆ,  ಸ್ವಲ್ಪ ಹಣವನ್ನೂ ಕೈಗಿತ್ತರು. ಅವರಿಗೆ ನನ್ನ ಕೃತಜ್ಞತೆಯನ್ನು ಮನದಟ್ಟಾಗುವಷ್ಟು ನಿವೇದಿಸಿ ಹೊರಟೆ.. 

ಆಗಲೇ ನನ್ನ ಮಗುವನ್ನು ಅಗಲಿ ನಾಲ್ಕೈದು ವರ್ಷಗಳೇ ಕಳೆದಿವೆಯೇನೋ! ಅದೆಷ್ಟು ಬೇಗ ನನ್ನ ಮಗು ಮತ್ತು ದೊಡ್ಡವ್ವನನ್ನು ನೋಡ್ತೀನೋ.. ಅನ್ನೋ ಕಾತುರದಲ್ಲಿ ರೈಲಿನ ನೂರು ಪಟ್ಟು ವೇಗದಲ್ಲಿ ನನ್ನ ಮನಸ್ಸು ಚಲಿಸುತ್ತಿತ್ತು. 

ನನ್ನ ದೊಡ್ಡವ್ವ ತನ್ನೂರನ್ನು ತೊರೆದು, ಮಗುವಾಗಿದ್ದ ನನ್ನನ್ನು ಅವುಚಿ ಓಡಿ ಬಂದ ಕತೆಯನ್ನು ಹೇಳಿದ್ದಳು. ಎಷ್ಟು ಬೇಡವೆಂದರೂ ಆ ನೆನಪು ನನ್ನನ್ನು ಒತ್ತರಿಸಿ ಬಂದಿತ್ತು. 

ನಾನು ಸೌಗಂಧಿನಿ. ನನ್ನ ಊರು ಉತ್ತರ ಪ್ರದೇಶದ ನಾತ್ ಪೂರ್ವ್. ಲಕ್ನೋದಿಂದ ಸುಮಾರು 60-70 ಕಿ.ಮೀ. ದೂರವಿರುವ ಇದೊಂದು ಸಣ್ಣ ಹಳ್ಳಿ. ತಲೆತಲಾಂತರದಿಂದ ಇಲ್ಲಿ ಹುಟ್ಟುವ ಹೆಣ್ಣುಗಳೆಲ್ಲರೂ ವೇಶ್ಯೆಯರೇ! ನನ್ನ ಅವ್ವನೂ ವೇಶ್ಯೆಯೇ ಆಗಿದ್ದಳಂತೆ. ದೊಡ್ಡವ್ವನೂ ಕೂಡ.

ಅವ್ವ ಸತ್ತು ನನ್ನನ್ನು ದೊಡ್ಡವ್ವನ ಮಡಿಲಿಗೆ ಹಾಕಿದಾಗ, ಅವ್ವನ ಚಿತೆಯ ಬೆಂಕಿ ಆರುವ ಮೊದಲೇ ನನ್ನನ್ನು ಅವುಚಿಕೊಂಡು ದೊಡ್ಡವ್ವ ಊರು ಬಿಟ್ಟು ಓಡಿ ಬಂದಿದ್ದಳು. ಯಾವ ಕಾರಣಕ್ಕೂ ನನ್ನ ಮಗುವನ್ನು ವೇಶ್ಯೆ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿ ಬಂದು ಬದುಕಿನ ದಾರಿಯನ್ನು ಬದಲಿಸಿ ಕೊಂಡಿದ್ದಳು. ನನ್ನ ಮೇಲೆರಗಿದ್ದ  ಆ ಕರಾಳ ದಿನದಂದು ದೊಡ್ಡವ್ವ ನನ್ನನ್ನು ತಬ್ಬಿ ಇದನ್ನೆಲ್ಲ ಹಲುಬಿಕೊಂಡಿದ್ದಳು ಅಸಹಾಯಕಳಾಗಿ..

ಈಗ ನನ್ನ ಸರದಿ. ಅದೇನೇ ಆಗಲಿ ನನ್ನ ಮಗುವನ್ನು ವೇಶ್ಯೆಯಾಗಲು ಬಿಡುವುದಿಲ್ಲ.. ಅವಳಿಗೆ ವಿದ್ಯೆ ಕೊಟ್ಟು ಈ ನೆಲದ ಮಗಳಾಗಿ ರೂಪಿಸ್ತೀನಿ. ಅವಳಾದರೂ ವೇಶ್ಯೆ ಎಂಬ ಗುರುತಿನಿಂದ ಮುಕ್ತಳಾಗುವಂತೆ ಮಾಡ್ತೀನಿ..

ಮನದಲ್ಲಿ ಆ ದಿನಗಳ ಕನಸುಗಳು ಸುರುಳಿ ಸುರುಳಿಯಾಗುತ್ತಿದ್ದವು. ಅಷ್ಟರಲ್ಲಿ ರೈಲು ನಿಂತಿತ್ತು. ಹೇಗೋ ಪತ್ತೆ ಮಾಡಿ ದೊಡ್ಡವ್ವನಿದ್ದ ಕೊಳಗೇರಿಗೆ ತಲುಪಿದೆ. ಗುರುತಿರದಂತಾಗಿತ್ತು ಆ ವಾತಾವರಣ. ಆ ಗುಡಿಸಲ ಹತ್ತಿರ ಹೋದೆ. ವಾಸವಿರುವ ಯಾವ ಗುರುತೂ ಕಾಣಲಿಲ್ಲ. ಎದೆ ಬಡಿತ ಹೆಚ್ಚಾಗಿತ್ತು. ನನ್ನ ಕಂದಮ್ಮನನ್ನು ನೋಡುವ ಕಾತುರ ಸಾವಿರ ಪಟ್ಟಾಗಿತ್ತು. ಪಕ್ಕದಲ್ಲಿ ವಿಚಾರಿಸಿದೆ, ಇನ್ನೆಲ್ಲಿ ಜಾಗ ಬದಲಿಸಿದ್ದಾರೋ.. ಎಲ್ಲಿ ಹುಡುಕಬೇಕೋ ಆತಂಕ ಹೆಚ್ಚಾಯಿತು.. 

ನನ್ನ ಕಡೆ ಬಂದ ಧ್ವನಿಯೊಂದು, ಯಾರು? ಸೌಗಂಧಿಯಾ? ಹೌದು, ನನ್ನ ದೊಡ್ಡವ್ವ ಎಲ್ಲಿ? ಅಂದೆ. ಅವರ ನೋಟದಲ್ಲಿ ಕಂಡ ನಿರಾಶೆ ನನ್ನನ್ನು ಕುಸಿಯುವಂತೆ ಮಾಡಿತ್ತು. ನಿನ್ನ ದೊಡ್ಡವ್ವ ನಿನ್ನದೇ ನೆನಪಲ್ಲಿ ಕೊರಗಿ ಕೊರಗಿ ಪ್ರಾಣ ಬಿಟ್ಟಳವ್ವ… ತಲೆ ಸುತ್ತಿದಂತಾಯ್ತು. ನನ್ನ ಮಗು? ಎಂದೆ. ಅದನ್ನು ನಾವೇ ಎಲ್ಲರೂ ನೋಡಿಕೊಳ್ತಿದ್ದೆವು. ನಮ್ಮಲ್ಲಿಯ ತಾಕಲಾಟದ ಒಂದು ತುತ್ತನ್ನೇ ಆ ತಬ್ಬಲಿಗೂ ಕೊಡ್ತಿದ್ದೆವು. ನಮ್ಮ ಮಕ್ಕಳ ಜೊತೇಲೇ ಆಡ್ಕೊಂಡಿದ್ಲು. ನಿನ್ನ ದೊಡ್ಡವ್ವ ಕೊನೆ ಉಸಿರಿರುವವರೆಗೂ ಅದನ್ನ ಚೆನ್ನಾಗಿಯೇ ಸಾಕಿದ್ಲು…

ಮತ್ತೆ ಎಲ್ಲಿ ನನ್ನ ಮಗಳು? ಅಂತ ಸುತ್ತಲೆಲ್ಲ ಕಣ್ಣಾಡಿಸಿದೆ. ಮತ್ತೆ ಆ ಕಣ್ಣುಗಳಲ್ಲಿ ನಿರಾಶೆಯ ನೋಟ!! ಅವಳು ಸತ್ತ ಎಷ್ಟೋ ದಿನಗಳ ನಂತರ ಅದ್ಯಾರೋ ಗಂಡ ಹೆಂಡತಿಯಂತೆ, ಬಂದು ಮಗು ನಮ್ಮ ಸಂಬಂಧಿ, ವಿಷಯ ತಿಳಿದು ಬಂದೆವು. ನಾವೇ ಸಾಕಿಕೊಳ್ತೇವೆ, ನಮ್ಮ ಮಗುವನ್ನು ಅನಾಥೆಯಾಗೋಕೆ ಬಿಡೋಕ್ಕಾಗುತ್ತಾ ಅಂತ ಕರ್ಕೊಂಡು ಹೋದ್ರು. ಅವರ ದೊಡ್ಡತನ ನೋಡಿ ನಾವೂ ನಿಟ್ಟುಸಿರಿಟ್ಟೆವು.. ಮಾತು ಮುಗಿದಿರಲೇ ಇಲ್ಲ, ನಾನು ನಿಂತ ಭೂಮಿ ಪ್ರಪಾತದಲ್ಲಿ ಮಗುಚಿತ್ತು..

ಪ್ರತಿದಿನವೂ ನಾನಿದ್ದ ಮನೆಗೆ ಮಾರಾಟವಾಗಿ ಬರುತ್ತಿದ್ದ ನೂರಾರು ಮಕ್ಕಳನ್ನು ನೋಡ್ತಾನೇ ಇದ್ದೆ. ಆಗೆಲ್ಲ ನನ್ನ ಕಂದಮ್ಮ ದೊಡ್ಡವ್ವನ ಮಡಿಲಲ್ಲಿ ಬೆಚ್ಚಗೆ ಮಲಗಿರೋ ಭ್ರಮೆಯಲ್ಲಿಯೇ ಇದ್ದೆ.. ಯಾವ ತಲೆಹಿಡುಕರು ಸಂಬಂಧಿಗಳ ವೇಷ ತೊಟ್ಟು, ಹೊಂಚು ಹಾಕಿ ನನ್ನ ಕುಡಿಯನ್ನು ಕೊಂಡೊಯ್ದಿದ್ದಾರೆ ಅಂತ ಹುಡುಕಲಿ.. ಪ್ರತಿ ಹೆಜ್ಜೆಯಲ್ಲೂ ನಡೆಯುತ್ತಿರುವ ಅತ್ಯಾಚಾರ, ಅನಾಚಾರಗಳ ಈ ನೆಲದಲ್ಲಿ ನನ್ನ ಮಗುವನ್ನು ಹುಡುಕುವುದಾದರೂ ಎಲ್ಲಿ..? 

ಅಯ್ಯೋ ನನ್ನ ದೊಡ್ಡವ್ವ ನಾನು ವೇಶ್ಯೆಯಾಗಬಾರದೆಂದು ಊರನ್ನೇ ತೊರೆದು ಬಂದಿದ್ದಳು, ಆದರೂ ನಾನು ಅದೇ ಕೂಪದೊಳಕ್ಕೆ ದೂಡಲ್ಪಟ್ಟೆ, ನನ್ನ ಕಂದಮ್ಮನ ಬದುಕಿನ ದಾರಿ ಬದಲಾಯಿಸಲು ಜೀವದ ಹಂಗಿಲ್ಲದೇ ಬಂದೆ…

ಅಯ್ಯೋ, ಆ ಪುಟ್ಟ ಕಂದನ ಒಡಲ ನೆತ್ತರ ನಾನೀಗ ನೆನೆಯುವುದು…

ಈ ಕ್ರೌರ್ಯಕ್ಕೆ ಯಾರನ್ನು ಹೊಣೆ ಮಾಡಲಿ???? 

ದುಃಖಿಸಲು ಹೃದಯವೂ ಇಲ್ಲ, ಮನಸ್ಸೂ ಇಲ್ಲ. ಎಲ್ಲವೂ ಮುರಿದ ಮನೆಯಾಗಿದೆ…

ದಿನವೂ ಕೊಲ್ಲುತ್ತಿದ್ದರೂ ಸಾಯದ ನಾನು ಸಾವಿಗೂ ಬೇಡವಾಗಿದ್ದೆ. 

ಸಾವಿಗೆ ಶರಣಾಗುವ ಬದಲಿಗೆ ಸತ್ತ ಮನಸ್ಸಿಗೆ, ದೇಹಕ್ಕೆ ಚೈತನ್ಯ ತುಂಬಿದೆ. ಹುಚ್ಚಿಯಂತೆ ಹುಡುಕಾಡಿದ ನಂತರ ಒಂದು ಸಂಸ್ಥೆಯ ಪರಿಚಯವಾಯ್ತು. ಅದರ ಮೂಲಕ ಮಕ್ಕಳನ್ನು ಮಾರಾಟ, ಸಾಗಾಟ ಮಾಡುವ ದಂಧೆಕೋರರನ್ನು ತಡೆಯುವ ಕೆಲಸದಲ್ಲಿ ತೊಡಗಿಸಿ ಕೊಂಡಿರುವೆ. ಬೃಹದಾಕಾರವಾಗಿ ಬೆಳೆದು ನಿಂತಿರುವ ಆ ಖದೀಮರನ್ನು ತಡೆಯುವುದು ಅಷ್ಟೇನೂ ಸುಲಭವಲ್ಲ ಎಂದು ಅರಿವಾಗಿದೆ. ಆದರೂ ಆಗೊಮ್ಮೆ ಈಗೊಮ್ಮೆ ಆ ಕೂಪದ ಚಕ್ರವ್ಯೂಹದೊಳಗೆ ಹೋಗುವ ಮೊದಲು ಒಂದೊಂದು ಮಗುವನ್ನು ಉಳಿಸಿದಾಗಲೂ ನನ್ನ ಮಗುವನ್ನು ಕಾಣುತ್ತಿದ್ದೇನೆ.??

ಸಾವಿರ ಪ್ರಶ್ನೆಗಳಿವೆ ನನ್ನ ಎದೆಯೊಳಗೆ!

ನಾತ್ ಪೂರ್ವ್ ಉತ್ತರ ಪ್ರದೇಶದ, ಲಕ್ನೋ ಸಮೀಪದ ಒಂದು ಸಣ್ಣ ಹಳ್ಳಿ. ಇಲ್ಲಿ ಪ್ರಸ್ತಾಪವಾದ ಕಾರಣವೆಂದರೆ, ಈ ಹಳ್ಳಿಯಲ್ಲಿರುವ ಬಹುತೇಕ ಮಹಿಳೆಯರು ವೇಶ್ಯೆಯರಾಗಿ ಬದುಕುತ್ತಿರುವುದೇ ಈ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಭಾರತದಲ್ಲಿ ಎಷ್ಟೋ ಹಳ್ಳಿಗಳು ಹೀಗೇ ವೇಶ್ಯಾವಾಟಿಕೆಯ ಹಳ್ಳಿಗಳಿವೆ. ಅವುಗಳಲ್ಲಿ ಈ ಹಳ್ಳಿಯೂ ಒಂದು. ಹಳ್ಳಿಯ ತುಂಬೆಲ್ಲ ಕಿತ್ತು ತಿನ್ನುವ ಬಡತನ. ಹಳ್ಳಿಯಲ್ಲಿರುವ ಎಲ್ಲ ಹೆಂಗಸರೂ ವೇಶ್ಯೆಯರೇ!!!

ತಲೆತಲಾಂತರದಿಂದ ಇಲ್ಲಿ ಹುಟ್ಟಿದ ಹೆಣ್ಣುಗಳೆಲ್ಲ ವೇಶ್ಯೆಯರಾಗಿಯೇ ಬದುಕಬೇಕೆಂಬ ಕರಾರು. ಯಾರಿಗೂ ವಿದ್ಯೆಯಿಲ್ಲ, ಬೇರೆ ಬದುಕಿಲ್ಲ. ಸಂಪ್ರದಾಯದ ಹೆಸರಲ್ಲಿ ಸುತ್ತಲಿನ ಸಮಾಜ ಇಲ್ಲಿಯ ಹೆಣ್ಣುಗಳನ್ನು ಕ್ರೂರವಾಗಿ, ಅಮಾನವೀಯವಾಗಿ, ಪ್ರಾಣಿಗಳಿಗಿಂತಲೂ ಕಡೆಯಾಗಿ ದುರುಪಯೋಗ ಮಾಡಿಕೊಂಡು ಬರುತ್ತಿದೆ. ಮೂಲಭೂತ ಸೌಲಭ್ಯಗಳಿಂದಲೂ ವಂಚಿತವಾಗಿರುವ ಪರಿಸ್ಥಿತಿಯಲ್ಲಿ, ಇಲ್ಲಿಯ ಪುರುಷ ಸಂತಾನ ಪಿಂಪ್ ಗಳಾಗಿ, ವೇಶ್ಯಾವಾಟಿಕೆಗೆ ಪೂರಕ ವ್ಯವಸ್ಥೆ ಮಾಡುವವರಾಗಿರುತ್ತಾರೆ. 

ಸುಮಾರು ನಾನ್ನೂರು ವರ್ಷಗಳ ಹಿಂದಿನ ಬ್ರಿಟಿಷ್ ವಸಾಹತು ಶಾಹಿ ಆಡಳಿತದಲ್ಲಿ ( 1871 ರ Criminal tribes act) ಬುಡಕಟ್ಟು ವಿರೋಧಿ ಕರಾಳ ಕಾಯ್ದೆಯನ್ನು ಜಾರಿಗೊಳಿಸಿದ್ದರ ಪರಿಣಾಮವಾಗಿ ಇಲ್ಲಿಯ ಬುಡಕಟ್ಟು ಸಮುದಾಯ, ಅದರಲ್ಲೂ ಪುರುಷರು ಜೀತಕ್ಕೆ ಆಳಾದರು. ಅವರ ಮೇಲಿನ ಬ್ರಿಟಿಷ್ ದೌರ್ಜನ್ಯ ತಾರಕಕ್ಕೇರಿತ್ತು. ದೀರ್ಘ ಕಾಲಿಕವಾಗಿ ಅದೇ ಸ್ಥಿತಿ ಮುಂದುವರಿದಾಗ, ಅನ್ಯ ಮಾರ್ಗವಿಲ್ಲದೆ ಅಲ್ಲಿಯ ಹೆಣ್ಣುಮಕ್ಕಳು ವೇಶ್ಯಾವಾಟಿಕೆಗೆ ತೊಡಗಿದರು.

ಮುಂದೆ ಈ ಸಮಾಜ, ಈ ವ್ಯವಸ್ಥೆಯು ಅದನ್ನೇ ವಂಶಪಾರಂಪರ್ಯವಾಗಿ ಮೌಢ್ಯತೆಯ ಪರಂಪರೆ ಮಾಡಿಬಿಟ್ಟಿತು. ಅದರ ಪರಿಣಾಮವಾಗಿ ಬಹುತೇಕ ‘ನಾಟ್’ ಸಮುದಾಯದವರೇ ಇರುವ ಆ ಹಳ್ಳಿಯಲ್ಲಿರುವ  ಹೆಣ್ಣುಗಳು ಸರಕಾಗಿದ್ದಾರೆ. ಮೌಢ್ಯತೆಯ ದಾಸರಾಗಿರುವ ಇವರ ಬದುಕು ದುಸ್ತರವಾಗಿ ಮೂಲಭೂತ ಸೌಕರ್ಯಗಳಿಲ್ಲದೇ ನಲುಗಿ ಹೋಗಿದೆ.

‍ಲೇಖಕರು ಲೀಲಾ ಸಂಪಿಗೆ

January 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: