ಅಪ್ಪ ಮಗಳ ಪ್ರವಾಸ ಕಥನ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

‘ಹೇಗಿತ್ತು ಪ್ರವಾಸ?’ ಎಂದೆ.

ಪಕ್ಕದಲ್ಲಿ ಕೂತ ಸುಮಾರು ಐವತ್ತರ ವ್ಯಕ್ತಿಯ ಬಳಿಯಿದ್ದ ಬ್ಯಾಗು ಮತ್ತಿತರ ವಸ್ತುಗಳನ್ನು ನೋಡಿ ಅವರು ಪ್ರವಾಸಕ್ಕೆ ಹೋಗಿ ಬಂದವರೆಂಬುದು ಸ್ಪಷ್ಟವಾಗಿ ತೋರುತ್ತಿತ್ತು.

ಬಸ್ಸು ನಿಂತಿತು…

ಒಂದೆರೆಡು ಜನ ಬಸ್ಸಿನ ಹಿಂಬಾಗಿಲಲ್ಲಿ‌ ಹತ್ತಿರಬೇಕೇನೋ. ಮತ್ತೆ ಬಸ್ಸು ಹೊರಟಿತು.

ನನ್ನ ಮೊದಲ ಪ್ರಶ್ನೆಗೆ ಇನ್ನೂ ಏನೂ ಉತ್ತರ ಬಂದಿರಲಿಲ್ಲ. ಆದರೆ ಬಸ್ಸಿನಲ್ಲಿ ಹಾಗೆ ಪಕ್ಕದಲ್ಲಿ ಕೂತವರ ಬಳಿ ಮಾತಾಡದೆ ಇರಲು ನನ್ನಿಂದ ಸುತಾರಾಂ ಸಾಧ್ಯವಿಲ್ಲ.‌

‘ಪ್ರವಾಸದಿಂದ ತುಂಬಾ ಆಯಾಸ ಆಗಿರಬೇಕಲ್ವ?’ ಎಂದು ಮರು ಪ್ರಶ್ನೆ ಹಾಕಿದೆ.

‘ನಾನು ಪ್ರವಾಸ ಹೋಗಿದ್ರೆ ಅಲ್ವಾ ಆಯಾಸ ಆಗೋದು?’ ಎಂದ ಧ್ವನಿಯಲ್ಲಿ ಏನೋ ಬೇಸರವಿದ್ದಂತೆ ಕಾಣಿಸಿತು.

‘ಮತ್ತೆ ಈ ಲಗ್ಗೇಜ್?’ ಎಂಬ ನನ್ನ ಪ್ರಶ್ನೆಯಲ್ಲಿರುವ ನಿಖರತೆಯನ್ನು ಆತ ಗಮನಿಸಿದ.

‘ಪ್ರವಾಸಕ್ಕೆಂದೇ ತೆಗೆದುಕೊಂಡು ಹೊರಟಿದ್ದು. ಆದರೆ ಹೋಗದೆ ಹಿಂತಿರುಗಬೇಕಾಯಿತು’ ಎಂದರವರು ವಿಷಾದದಲ್ಲಿ.

‘ಏಕೆ ಹಿಂತಿರುಗಿದಿರಿ? ಹವಾಮಾನ ಇಲಾಖೆ ಏನಾದರೂ ಮುನ್ಸೂಚನೆ ಕೊಟ್ಟಿತೆ?’

‘ಹವಾಮಾನ ಅಲ್ಲ ಅವಮಾನ ಇಲಾಖೆ’ ಎಂದು‌ ಸಣ್ಣಗೆ ನಕ್ಕರು.

‘ಯಾರಿಂದ ಅವಮಾನ ಆಯ್ತು ಸರ್ ?’

‘ನನ್ನ ಮಗಳಿಂದ’

‘ಹೌದೆ? ಏನು ಅವಮಾನ?’

‘ಬೇಡ ಬಿಡಿ. ನಿಮಗ್ಯಾಕೆ ಹೇಳಬೇಕು ಅದನ್ನ ಅಲ್ವಾ?’

ಎಂದವರು ಕೆಲಹೊತ್ತು ಏನೂ ಮಾತನಾಡಲಿಲ್ಲ.

ನಾನೂ ನನ್ನ ಪಾಡಿಗೆ ಮೊಬೈಲ್ ನಲ್ಲಿ ಸಿನಿಮಾ ನೋಡ್ತಾ ಕೂತಿದ್ದೆ. ಸಂಭ್ರಮ-ಸಂಕಟಗಳೆರಡನ್ನೂ ಮನುಷ್ಯ ಪಕ್ಕದಲ್ಲಿದ್ದವರ ಜೊತೆ ಹಂಚಿಕೊಳ್ಳದೇ ಬಹಳ ಹೊತ್ತು ಇರಲಾರ…

ಅವರೇ ನನ್ನ ಮೈ ತಿವಿದು ‘ಅದೇನಾಯ್ತು ಅಂದ್ರೆ…’

‘ಪರವಾಗಿಲ್ಲ ಬಿಡಿ , ಒತ್ತಾಯ ಏನಿಲ್ಲ. ಸುಮ್ಮನೆ ಕೇಳಿದ್ದೆ ಅಷ್ಟೆ’ ಎಂದು ಅವರ ವಿವರಣೆಯಿಂದ ತಪ್ಪಿಸಿಕೊಳ್ಳಲು ನೋಡಿದೆ.

‘ಅವಳು ಹನ್ನೆರೆಡು ವರ್ಷದವಳಿದ್ದಾಗಿನಿಂದ ಒಂದು ವರ್ಷವೂ ತಪ್ಪದೇ ನಡೆಸಿಕೊಂಡು ಬಂದದ್ದನ್ನು ಈ ವರ್ಷ ಬ್ರೇಕ್ ಮಾಡಿಬಿಟ್ಟಳು’

ಏನೋ ಕುತೂಹಲದ ವಿಷಯ ಅನ್ನಿಸಿತು.‌ ಸಿನಿಮಾನ ಅರ್ಧಕ್ಕೆ ನಿಲ್ಲಿಸಿ ಇವರ ಕತೆ ಕೇಳಲಾರಂಭಿಸಿದೆ.

‘ಅವಳು ಅಂದರೆ ಯಾರು ಸರ್?’

‘ನನ್ನ ಮಗಳು ಪ್ರೇರಿತ’

‘ಅವಳಿಗೆ ಹದಿನೈದು ವರ್ಷವಿದ್ದಾಗಿನಿಂದ ನೀವು ಬಿಡದೆ ನಡೆಸಿಕೊಂಡು ಬಂದದ್ದು ಏನು?’

‘ಪ್ರವಾಸ…’

‘ಮತ್ತೆ ಈ ವರ್ಷ ಏನಾಯಿತು?’ ಯಾಕೆ ವಾಪಾಸ್ಸು ಹೊರಟಿರಿ?’

‘ಮಗಳ ಯೋಜನೆ ಬೇರೆಯಾಗಿತ್ತು?’

‘ಹೌದಾ ? ಏನು ಯೋಜನೆ ಅವಳದ್ದು  ?’

‘ಕಳೆದ ಹದಿನೈದು ವರ್ಷಗಳಿಂದ ನಾವಿಬ್ಬರೂ ವರ್ಷಕ್ಕೊಮ್ಮೆ ಒಂದು ವಾರ ಪ್ರವಾಸ ಹೋಗುತ್ತಿದ್ದೆವು. ಇಬ್ಬರೂ ಇಷ್ಟು ವರ್ಷಗಳಲ್ಲಿ ಹೋದ ಎಲ್ಲಾ ಪ್ರವಾಸಗಳೂ ಸಕ್ಸೆಸ್ ಫುಲ್. ನಮ್ಮ ಜೊತೆ ಮತ್ಯಾರೂ ಬರುತ್ತಿರಲಿಲ್ಲ. ನಾನಾಗಲೀ,ಅವಳಾಗಲೀ ಬೇರೆ ಯಾರ ಜೊತೆಯೂ ಪ್ರವಾಸಕ್ಕೆ ಒಮ್ಮೆಯೂ ಹೋಗಿಲ್ಲ.’

‘ಸೋ ನೈಸ್ ಟು ಹಿಯರ್ ದಿಸ್ ಸರ್… ಎಷ್ಟು ಚೆಂದ ಅಪ್ಪ ಮಗಳ ಈ ಜೋಡಿ?’

‘ಹೌದು… ‌ತುಂಬಾ ಚೆಂದವಿತ್ತು…’

‘ಮತ್ತೆ ಈ ವರ್ಷ ಯಾಕೆ ಸರ್ ನೀವೋಬ್ಬರೇ ಹೊರಟು ವಾಪಸ್ಸು ಬಂದಿರಿ?  I am sorry to ask this. ನಿಮ್ಮ ಮಗಳಿಗೇನಾದರೂ…?’

‘ನೋ … ಡೋಂಟ್ ಅಸ್ಯೂಮ್ ಸಚ್ ಥಿಂಗ್ಸ್’

‘ಮತ್ತೇನಾಯಿತು ಹೇಳಿ’

‘ಈ ಬಾರಿ ಅವಳು ಬೇರೆ ಪ್ರವಾಸಕ್ಕೆ ಹೋದಳು. ನನ್ನನ್ನು ಒಬ್ಬನೇ ಪ್ರವಾಸಕ್ಕೆ ಹೋಗಬೇಕೆಂದು ಹಠ ಹಿಡಿದಳು. ಅವಳ ಒತ್ತಾಯಕ್ಕಾಗಿ ನಾನು ಹೊರಟು ಬಂದೆ. ಆದರೆ ಏರ್ ಪೋರ್ಟ್ ಗೆ ಹೋದವನಿಗೆ ಒಬ್ಬನೇ ಹೋಗಲು ಮನಸ್ಸಾಗಲೇ ಇಲ್ಲ. ಹಾಗಾಗಿ ವಾಪಾಸ್ ಬಂದೆ’

‘ಮಗಳು ಕೇಳುವುದಿಲ್ಲವೆ? ಯಾಕೆ ವಾಪಾಸ್ ಬಂದ್ರಿ ಅಂತ?’

‘ಅಯ್ಯೋ ಬಿಡ್ತಾಳಾ? ಕೇಳೇ ಕೇಳ್ತಾಳೆ. ಅದಕ್ಕೆ ಅಲ್ಲವೆ ನಾನು ಮೊಬೈಲ್ ಸ್ವಿಚ್ ಆಫ್ ಮಾಡಿರೋದು’

‘ಅದ್ಯಾಕೆ ನೀವು ಹಾಗೆ ಮಾಡಬೇಕು?’

‘ನಾನ್ ಪ್ರವಾಸ ಹೋಗ್ತಿಲ್ಲ ಅಂತಾ ಗೊತ್ತಾದ್ರೆ ಅವಳೂ ವಾಪಾಸ್ ಬಂದುಬಿಟ್ರೆ ಅಂತ’

‘ಪಾಪ , ಹಾಗ್ಯಾಕೆ ಮಾಡ್ತೀರ? ಭಯ ಆಗಲ್ವೆ ಮಗಳಿಗೆ?’

‘ಆಗ್ಲಿ ಬಿಡಿ. ನನ್ನ ಬಿಟ್ಟು ಹೋಗಿದ್ದಾಳೆ ಅಲ್ವಾ?’

‘ಅದು ಸರಿ , ಅವಳ್ಯಾಕೆ ಈ ಬಾರಿ ನಿಮ್ಮನ್ನು ಬಿಟ್ಟು ಹೋದ್ಲು?’

‘ಏನೋ ಗೊತ್ತಿಲ್ಲ… ಇಷ್ಟು ವರ್ಷ ಇಬ್ಬರೂ ಜೊತೆಯಲ್ಲೇ ಹೋಗ್ತಿದ್ವಿ. ಎಲ್ಲಾ ಪ್ರವಾಸಗಳಲ್ಲೂ ನಾವು ಸಾಕಷ್ಟು ಎಂಜಾಯ್ ಮಾಡಿದ್ದೀವಿ. ಕಲಿತಿದ್ದೀವಿ . ಡೇಂಜರಸ್ ಪರಿಸ್ಥಿತಿಗಳನ್ನ ಎದರಿಸಿದ್ದೀವಿ. ನಕ್ಕಿದ್ದೀವಿ. ಅತ್ತಿದ್ದೀವಿ. ಕುಣಿದಾಡಿದ್ದೀವಿ. ಆದ್ರೆ ಜೊತೆಯಲ್ಲಿ ಈ ಬಾರಿ ಅವಳು ನನ್ನ ಜೊತೆ ಬರಲಿಲ್ಲ’

‘ಅದೇ ಯಾಕೆ ಸರ್?’

ಪ್ರತಿ ಬಾರಿಯಂತೆ ಈ ಬಾರಿಯೂ ಪ್ರವಾಸಕ್ಕೆ ಹೊರಡುವ ಸಮಯ ಬಂದಾಗ ನನ್ನ ಬಳಿ ಬಂದು ಪ್ರೇರಿತಾ ಹೇಳಿದ್ದು ಹೀಗೆ:

‘ಅಪ್ಪ, ಈ ಬಾರಿ ನಾವಿಬ್ಬರೂ ಬೇರೆ ಬೇರೆ ಸ್ಥಳಕ್ಕೆ ಟೂರ್ ಹೋಗೋಣ. ಒಂದೇ ದಿನ ಹೊರಡೋಣ. ನಮ್ಮಿಬ್ಬರ ಸ್ಥಳಗಳ ಅಂತರ ಕನಿಷ್ಠ ಸಾವಿರ ಕಿ.ಮೀ. ಇರಲಿ. ಇದೊಂದು ಹೊಸ ಅನುಭವ ಆಗುತ್ತೆ. ಆಮೇಲೆ ಬಂದವರು ಇಬ್ಬರೂ ಅದರ ಬಗ್ಗೆ ಮಾತಾಡೋಣ. ಥ್ರಿಲ್ಲಿಂಗ್ ಆಗಿರುತ್ತೆ ಅಪ್ಪ.’

ನನಗೆ ಇದು ಶಾಕಿಂಗ್ ಅನ್ನಿಸಿದರೂ ಏನನ್ನೂ ತೋರಿಸಿಕೊಳ್ಳಲಿಲ್ಲ.

‘ಆಯ್ತು ಮಗಳೆ. ಹಾಗೆ ಮಾಡೋಣ ಅಂದೆ. ಎಲ್ಲಾ ಸಿದ್ಧತೆಗಳನ್ನು ನಾನೇ ಮಾಡಿಕೊಟ್ಟೆ. ಇಬ್ಬರೂ ಹೊರಟೆವು. ಅವಳು ಫ್ಲೈಟ್ ಹತ್ತಿದಳು. ಅದಾದ ಮೇಲೆ ನಾನು ಏರ್ ಪೋರ್ಟ್ ನಿಂದ ವಾಪಸ್ ಬಂದೆ’

‘ನೀವ್ಯಾಕೆ ಹೋಗಲಿಲ್ಲ?’ ನನ್ನ ಪ್ರಶ್ನೆ ಸಿದ್ಧವಾಗಿತ್ತು.

‘ಅವಳನ್ನು ಬಿಟ್ಟು ಒಬ್ಬನೇ ಹೋಗಬೇಕು ಅನ್ನಿಸಲಿಲ್ಲ. ಅವಳಿಗಾದರೂ ಇಂಥ ಯೋಚನೆ ಏಕೆ ಬಂದಿರಬಹುದು ಹೇಳಿ ನೀವು? ಹದಿನೈದು ವರ್ಷ ನಡೆದುಕೊಂಡು ಬಂದದ್ದನ್ನು ಮುರಿಯುವ ಮನಸ್ಸು ಅವಳು ಮಾಡಿದ್ದು ಏಕೆ? ಅಲ್ಲದೆ ಅವಳು ಹೊರಡುವಾಗ ಎಷ್ಟು ಖುಷಿಯಿಂದ ಹೊರಟಳು. ನನ್ನನ್ನು ಬಿಟ್ಟು ಹೋಗುತ್ತಿರುವ ಸಣ್ಣ ಪಶ್ಚಾತ್ತಾಪವೂ ಅವಳಿಗೆ ಇರಲಿಲ್ಲ. How cruel ಅಲ್ವಾ?’ ಎನ್ನುತ್ತಾ ಕಣ್ಣಂಚಲ್ಲಿ ನೀರು ಒರಸಿದರು.

ನನಗೆ ಏನು ಹೇಳಬೇಕೋ ತಿಳಿಯಲಿಲ್ಲ.

‘ತಪ್ಪು ತಿಳಿಯಬೇಡಿ. ನಿಮ್ಮೊಂದಿಗೆ ಪ್ರವಾಸಕ್ಕೆ ಪ್ರೇರಿತ ಅವರ ಅಮ್ಮ ಬರುತ್ತಿರಲಿಲ್ಲವೆ?’

‘ಅವಳು ಬದುಕಿದ್ದಿದ್ದರೆ ಬಹುಶಃ ಇವಳು ಹೀಗೆ ನಡೆದುಕೊಳ್ಳುತ್ತಿರಲಿಲ್ಲ ಅನ್ನಿಸುತ್ತೆ. ನಾನೇ ಇವಳಿಗೆ ಅನಗತ್ಯ ಫ್ರೀಡಂ ಕೊಟ್ಟು ಬೆಳೆಸಿದೆ. ಈಗ ಏನೂ ಹೇಳುವಂತಿಲ್ಲ’ ಯಾಕೋ ಅವರ ಧ್ವನಿಯಲ್ಲಿ ಯಾವುದೋ ಕಂಪ್ಲೇಂಟ್ ಇದ್ದಂತಿತ್ತು.

‘ಈಗ ನಿಮ್ಮ ಕಂಪ್ಲೇಂಟ್ ಏನು?’ ಎಂದು ನೇರವಾಗಿ ಕೇಳಿದೆ.

‘ನನಗನ್ನಿಸುತ್ತೆ. ಅವಳ ಜೊತೆ ಮತ್ಯಾರೋ ಪ್ರವಾಸಕ್ಕೆ ಅದೇ ಜಾಗಕ್ಕೆ ಹೋಗುತ್ತಾರೆ. ಅಥವಾ ಬೇರೆಡೆಯಿಂದ ಅಲ್ಲಿಗೆ ಬರುವವರಿದ್ದಾರೆ ಇರಬೇಕು. ಅದಕ್ಕೆ ಸಾವಿರ ಕಿ.ಮೀ. ದೂರ ಇರಲಿ ಎಂದು ಹಠ ಹಿಡಿದದ್ದು ಅನ್ನಿಸುತ್ತೆ ಅವಳು. ಅದ್ಯಾರೋ ನಾಕಾಣೆ. ಹುಡುಗನಾಗಿದ್ದರೆ? ಅಥವಾ ಅವಳ ಗೆಳತಿಯೂ ಇರಬಹುದು. ಬಾಯ್ ಫ್ರೆಂಡ್ ಆಗಿದ್ದರೆ..? ಒಂದೇ ರೂಮಿನಲ್ಲಿ ಇಬ್ಬರೂ ಉಳಿಯುತ್ತಾರೋ ಏನೋ? ಅವಳು ತುಂಬಾ ಮಾಡರ್ನ್ ಆಗಿ ಯೋಚಿಸುತ್ತಾಳೆ. ಅಗತ್ಯ ಎಚ್ಚರದೊಂದಿಗೆ ಇಬ್ಬರೂ ಒಂದು ವೇಳೆ ದೈಹಿಕವಾಗಿಯೂ ಸೇರಿಬಿಟ್ಟರೆ?’ ಎಂದು ಇನ್ನೂ ಏನೇನೋ ಹೇಳುವವರಿದ್ದರು. ನಾನೇ ಅವರ ಮಾತನ್ನು ತುಂಡರಿಸಿ,

‘ನಿಮ್ಮ ಮಗಳ ಬಗ್ಗೆ ನೀವೇ ಹೀಗೆ ಯೋಚಿಸುವುದು ತಪ್ಪಲ್ಲವೆ?’ ಎಂದೆ.

‘ಅಯ್ಯೋ… ಮನೆಯ ಮುಂದೆ ನಾವು ಬೆಳೆಸಿದ ಮರವೇ ನಮ್ಮ ಮಾತು ಕೇಳುವುದಿಲ್ಲ. ಹೇಗೇಗೋ ಬೆಳೆದುಕೊಂಡು ನಿಲ್ಲುವುದಿಲ್ಲವೆ? ಇನ್ನು ಮನುಷ್ಯರ ಬಗ್ಗೆ ಏನು ಹೇಳುವುದು?’ ಎಂದು ಅವರ ವಾದವನ್ನೇ ಮುಂದುವರಿಸುವಂತಿದ್ದರು…

ಇನ್ನೂ ಏನೇನು ಹೇಳುವವರಿದ್ದರೋ… ನನ್ನ ಸ್ಟಾಪ್ ಬಂತು ನಾನು ಇಳಿದು ಹೋದೆ.

*         *           *           *

ನಾಲ್ಕು ದಿನಗಳ ನಂತರ ನನ್ನ ಮೊಬೈಲ್ ಗೆ ಟ್ರೂ ಕಾಲರ್ ನಲ್ಲಿ “ಅಪ್ಪ ದಿ ಟ್ರಿಪ್ ಮೇಟ್” ಎಂಬ ಹೆಸರು ತೋರಿಸುತ್ತಿದ್ದ ನಂಬರ್ ನಿಂದ ಕಾಲ್ ಬಂತು . ರಿಸೀವ್ ಮಾಡಿದರೆ ಆ ವ್ಯಕ್ತಿ ಗಳಗಳನೆ ಅಳುತ್ತಿದ್ದರು.

“ಏನಾಯಿತು? ಯಾಕೆ ಹೀಗೆ ಅಳುತ್ತಿರುವಿರಿ?’ ಎಂದೆ.

ಆಗ ಅವರು ಮಗಳು ಟೂರ್ ಮುಗಿಸಿ ಬಂದ ದಿನ ನಡೆದದ್ದನ್ನು ವಿವರಿಸಿದರು.

*       *       *       *

ಓಡಿ ಬಂದವಳೇ ಅಪ್ಪನನ್ನು ತಬ್ಬಿಕೊಂಡು, ‘ಅಪ್ಪ,‌ ನಿನ್ನ ಮೊಬೈಲ್ ಏನಾಗಿದೆ? ಯಾಕೆ ಕಾಲ್ ಮಾಡಿಲ್ಲ? ನಾನೂ ಕಾಲ್ ಮಾಡಿದ್ರೆ ಹೋಗ್ತಿರ್ಲಿಲ್ಲವಲ್ಲ?’ ಎಂದಳು.

‘ನಾನು ಏರ್ ಪೋರ್ಟ್ ನಲ್ಲಿ ಆ ದಿನ ಮೊಬೈಲ್ ಕಳಕೊಂಡೆ. ನೀನು ಬ್ಯುಸಿ ಇರ್ತೀಯಾ ಅಂತ ಸುಮ್ನಿದ್ದೆ’ ಎಂದು ಸುಳ್ಳಾಡಿದರು ಅಪ್ಪ.

‘ಓಕೆ ಅಪ್ಪ. ನೋಡು ಈ ಸ್ವೆಟರ್ ನಿನಗೆ ಚೆನ್ನಾಗಿ ಕಾಣ್ಸುತ್ತೆ. ಹಾಕಿ ನೋಡು’ ಎಂದು ತಾನು ತಂದಿದ್ದ ಸ್ವೆಟರ್ ಕೊಟ್ಟು, ‘ನೀನೇನು ತಂದೆ ನನಗೆ?’ ಎಂದು ಚುಡಾಯಿಸಿದಳು.

ಅಪ್ಪ ಏನೋ ಹೇಳಲು ತಡವರಿಸಿದ…

ಮಗಳಿಗೆ ತಿಳಿಯದಂತೆ. ತನ್ನ ಮೊಬೈಲ್‌ನ್ನು ಕಿಟಕಿಯಿಂದಾಚೆ ದೂರ ಬಿಸಾಡಿದ .

ಆ ರಾತ್ರಿ ಅಪ್ಪನ ಎದೆಯ ಮೇಲೆ ಬೆರಳಾಡಿಸುತ್ತ ಮಲಗಿದ್ದ ಮಗಳು ಒಂದು ಮಾತು ಹೇಳಿದಳು ;

‘ಅಪ್ಪ, ಈ ಟೂರ್ ನೀನಿಲ್ಲದೆ ತುಂಬಾ ಬೋರ್ ಆಗಿತ್ತು. ಇನ್ಯಾವತ್ತೂ ನಾವು ಬೇರೆ ಬೇರೆ ಟೂರ್ ಹೋಗೋದು ಬೇಡ. It is not the place Appa; it is the people who make a trip memorable’ ಅಂತ ಹೇಳಿ ನಿದ್ದೆಗೆ ಜಾರಿದಳು.

ಅಪ್ಪನಿಗಾದ ಪಶ್ಚಾತ್ತಾಪ ಅಷ್ಟಿಷ್ಟಲ್ಲ…

ಬಾತ್ ರೂಮ್ ಗೆ ಹೋಗಿ ಕಣ್ಣೀರು ಸುರಿಸಿದ ಅಪ್ಪ, ಮಗಳು ತಂದಿದ್ದ ಸ್ವೆಟರ್ ಗೆ ಒಂದು ಮುತ್ತು ಕೊಟ್ಟು ಅದನ್ನೇ ಹಾಕಿಕೊಂಡು ಆ ರಾತ್ರಿಯಲ್ಲಿ ಬೆಳೆದು ನಿಂತ ಮಗಳ ಪಾದಮುಟ್ಟಿ ಕ್ಷಮೆ ಯಾಚಿಸಿದ.

*          *            *            *

‘ಇದನ್ನು ನನಗೆ ಹೇಳಲೇಬೇಕಿತ್ತಾ ನೀವು?’ ಎಂದೆ.

‘ನನ್ನ ಮಗಳ ಬಗ್ಗೆ ನಾನು ಯೋಚಿಸಿದ್ದನ್ನು ನಿಮಗೆ ಹೇಳಿದ್ದೆನಲ್ಲವೆ? ಹಾಗಾಗಿ ನಿಮಗೆ ಇದನ್ನು ಹೇಳಲೇಬೇಕಿತ್ತು… ಅದಕ್ಕಾಗಿಯೇ ಆ ರಾತ್ರಿಯಲ್ಲಿ ಕಿಟಕಿಯಿಂದ ಎಸೆದ ಮೊಬೈಲ್ ನ್ನು ಹುಡುಕಿಕೊಂಡು ಹೋಗಿ ಡಯಲ್ ಹಿಸ್ಟರಿಯಲ್ಲಿದ್ದ ನಿಮ್ಮ ನಂಬರ್ ಬರೆದುಕೊಂಡು ಮತ್ತೆ ಮೊಬೈಲ್ ನ್ನು ಬಿಸಾಡಿ ಬಂದಿದ್ದೆ.’

‘ಓಹ್! ಬಿಡಿ ನಾವು ಯಾರಿಗೆ ತಪ್ಪು ಮಾಡಿದ್ದೇವೋ ಅವರ ಅರಿವಿಗೆ ಬಾರದಂತೆ ಕೇಳುವ ಕ್ಷಮೆ ಪ್ರಾಮಾಣಿಕವಾದದ್ದಾಗಿರುತ್ತದೆ. ನೀವು ಅದನ್ನು ಮಾಡಿದ್ದೀರಿ . ಹಾಯಾಗಿರಿ’ ಎಂದು ಕಾಲ್ ಮುಗಿಸಿದೆ.

ನನಗೂ ಒಬ್ಬಳು ಹೆಣ್ಣು ಮಗಳಿದ್ದಿದ್ದರೆ ಎಲ್ಲಿ ಹಾಗೆಯೇ ಯೋಚಿಸಿಬಿಡುತ್ತಿದ್ದೆನೋ ಎಂಬ ಯೋಚನೆ ಬಂದರೆ ಅವಮಾನವಾದಂತಾಗುತ್ತದೆ.

ಆ ಅಪ್ಪ ಮಗಳ ಮುಂದಿನ ಪ್ರವಾಸ ಎಲ್ಲಿಗೋ?

January 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: