-ಕೆ ಎನ್ ಲಾವಣ್ಯಪ್ರಭಾ
ನಿಮ್ಮಲೊಂದು ಬಿನ್ನಹ :
ಸುತ್ತ ಹತ್ತೂರ ಸುತ್ತಿ
ಕೊಕ್ಕಿನಲ್ಲಿ ನಾರು ಬೇರು ಹೆಕ್ಕಿ ತಂದು
ಎಳೆಎಳೆಯಾಗಿ ಬಿಡಿಸಿ ಹೆಣೆದು
ನಡುವೆ ಮೆತ್ತ ಹಾಸಿ ಹುಲ್ಲ
ಮರದ ಕೊಂಬೆ ರೆಂಬೆ ಮಧ್ಯ
ಗೂಡು ಕಟ್ಟಿ ಭದ್ರ
ತತ್ತಿಯಿಟ್ಟು ಪ್ರತಿದಿನವೂ
ಬೆಚ್ಚಗೆ ಶಾಖವಿರಿಸಲು
ಪುಟ್ಟ ಪುಟ್ಟ ಮರಿಗಳೆಲ್ಲಾ
ತತ್ತಿಯೊಡೆದು ಪಿಳುಕಿಸುತ್ತಾ
ಕಣ್ಣ ತೆರೆವ ಸಂಭ್ರಮಕೆ
ತಾಯಿ ಹೃದಯ ಹಿಗ್ಗಿ
ಪ್ರಾಣ ಸುಖಕೆ ಬೀಗಿ
ದೂರ ದೂರ ಮಾರು ದೂರ ಹಾರಿ
ಹೋಗಿ ತಿಂಡಿ ತೀರ್ಥ ಹುಡುಕಿ
ಹೆಕ್ಕಿ ತಂದು ಕೊಕ್ಕಿನಲ್ಲಿ
ಹಸಿವೆಯಿಂದ ಕೂಗುತಿರುವ
ಪುಟ್ಟ ಮರಿಗಳೆಲ್ಲದಕ್ಕೂ
ತುತ್ತನುಣಿಸಿ ಕಾಯ್ವ ನಮ್ಮಂಥ
ಹೆತ್ತ ಒಡಲಿಗೂ, ಮರಿಗಳಿಗೂ
ಹಸಿರು ಮರದ
ಮಮತೆಯೊಂದೇ
ನಮ್ಮ ಪೊರೆವ ತೊಟ್ಟಿಲು
ಬೆಳೆದ ಪುಟ್ಟ ಮರಿಗಳೆಲ್ಲಾ
ದೊಡ್ಡವಾಗಿ ರೆಕ್ಕೆ ಬೀಸಿ
ಚಿವ್ ಚಿವ್ ಗುಡುತ್ತಾ
ಹಾರಿ ತೇಲಲಿಕ್ಕೆ ಇರುವ
ವಾತ್ಸಲ್ಯದ ಮೆಟ್ಟಿಲು.

ನಿಮ್ಮಲೊಂದೇ ನಮ್ಮ ಬಿನ್ನಹ :
ಮರಗಳನ್ನು ಉಳಿಸಿ ಬೆಳೆಸಿ
ಗಾಳಿ ಗಂಧ ಪಸರಿಸುವ ಹಸಿರ
ಕಾಯ್ದು ಕರುಣೆ ತೋರಿ
ಮರಗಿಡದ ಅಳಿವು ಉಳಿವು ನಲಿವು
ನಮ್ಮ ಅಳಿವು ಉಳಿವು ನಲಿವೂ
ಅಲ್ಲವೇನು?
ಬುದ್ಧಿವಂತ ಮಾನವರೇ
ಪ್ರಾಣಿಪಕ್ಷಿ ಗಿಡಮರಗಳಿಗೂ
ಕೊಂಚ ಕರುಣೆ ಪ್ರೀತಿ ತೋರಿ
ಅಂಗೈಯಗಲ ಜಾಗ ನೀಡಿ
ನಾವೂ ನಿಮ್ಮ ಒಡನಾಡಿಗಳೇ
ಬಂಧು ಬಾಂಧವರಲ್ಲವೇ
ಹೇಳಿ ನೀವೇ ಮತ್ತೆ ?
ಹಿಡಿಪ್ರೀತಿಗಾಗಿ ಕಣ್ಣ ನೆಟ್ಟು
ಕಾತರಿಸಿ ನೀವು ಕೊಡುವ
ಭರವಸೆಗೆ ಕಾದು ಕೂತು
ನಿಮ್ಮೆಡೆಗೆ ಸಣ್ಣದೊಂದು ಆಸೆಗಣ್ಣ
ಬೀರಿ ತವಕಿಸುವ ಹಕ್ಕಿ ಸಂಕುಲಕ್ಕೆ
ನೀವೆಂದೆಂದೂ ಸದಾ ಪೊರೆವ
ಕರುಣಾಳು ದೇವರು.






0 Comments