"ನಿನ್ನ ರಾವು ಹೊಡ್ಯಾ.. ನಿನ್ನ ದೆಯ್ಯ ಹೊಡ್ಯಾ"

ದೊಡ್ಡನ ನಂದಗೋಕುಲ

।ಕಳೆದ ವಾರದಿಂದ..।

ತಂಟೆ ಮಾಡೋ ಹಸವ ಹದ ಹಾಕೊದು ಎಂಗೆ? ಅದ್ರಿಗೆ ಬಂದ ಹಸಿಗೆ ಹೋರಿ ಕೊಡ್ಸೋದು ಯಾವ ದಿನ? ಯಾವ ಕರುಗೆ ಎಷ್ಟು ಹಲ್ಲ ಬಂದವೆ? ಆ ಎಮ್ಮೆ ಕಡಸು ಕ್ವಾಣನ ತಗೊಂಡ್ರೂ ಗಬ್ಬಾಗಲದು. ಗೌಡ್ರಿಗೇಳಿ

ಈ ಸಲ ಹಾಸನದ ಮಂಗ್ಳಾರ ಸಂತೇಲಿ ಸೀದ್ಬಿಡ್ಬೇಕು. ಆ ಲಗಾಡಿ  ಜೊತೆಲಿ ನೀಸಕಾಗಲ್ದು. ಅದ್ನು ಮಾರಿ ಹೋರಿಕರ ತಂದ್ರೆ, ಮನೇಲಿರೊದಕ್ಕೆ ಜೋಡಿ ಹಾಕ್ಭೋದು. ಮುಂದೆ ಒಳ್ಳೆ ಜೋಡಿ ಆಯ್ತವೆ. ಹೋತ ಎರಡಾದ್ರೆ ಗುದ್ದಾಡ್ತವೆ. ಬೀಜಕ್ಕೆ ಗಡ್ಡದ ಹೋತನ್ನ ಬಿಟ್ಟುಕಂಡು, ಈ ಸಲ ಹಬ್ಬಕ್ಕೆ ಈ ಗಂಡ ಮಾಲೆ ಕೆಂದನ್ನ, ದೇವ್ರಗೆಂತ ಬಿಟ್ಟು ಕೂದಾಕ್ಬಿಡ್ಬೇಕು. ನೆಣ ಬಂದು avadhi-h-r-sujatha-nammooru-nammoruಸಾಯ್ತವೆ ಅಂಗೇಯ…. ಅಂಥ ಸಣ್ಣ ಹುಡುಗ್ರಿಗೆ ಪಾಠ ಮಾಡೋನು. ಹಸಿನ ಮೇಲೆ ಬೀಳೋ ಹೋರಿನ ಎಂಗೆ ಹಿಡಕಟ್ಟು ಮಾಡದು. ಮೇವು ಎಚ್ಚಾಯ್ತು ಇವಕ್ಕೆ ಅಂದ್ರೆ ನೆಣ ಬಂದು ರಾಸು ಗಬ್ಬಾಗದೆ ಹೋಯ್ತವೆ. ಹುಚ್ಚಳ್ಳು ಇಂಡಿಯ ಬಿಡದಲೆ ಎರಡು ತಿಂಗಳು ತಿನ್ನಕ್ಕೆ ಕೊಟ್ರೆ ನೆಣ ಕರಗಿ ಗಬ್ಬಾಯ್ತವೆ. ಕದಬಳ್ಳಿ ಎಮ್ಮೆ ಯಾವ ದಿಕ್ಕಿಂದು…

ಈ ಬಿಳೆ ಹೋತ ಶ್ಯಾಡಣ್ಣರ ಮನೆ ಆಡಿನ ತಳಿ. ಇದರವ್ವ ಎಲ್ಡು, ಮೂರು ಮರಿ ಈಯೋದು. ವರ್ಷಕ್ಕೆ ಎರಡು ಸಲ ಮರಿ ಹಾಕ್ತವೆ. ಮಾರದೆ ಹೋದ್ರೆ ಕುರಿ ರೊಪ್ಪ ಮಾಡ್ಬೆಕಾಯ್ತದೆ ಗೌಡ್ರು ಮನೇಲಿ, ಅಷ್ಟೇಯಾ! ಇವ ಸುಧಾರ್ಸಕ್ಕೆ ಆಗ್ದಲೆ ಹೋದ್ರೆ ಏನ್ಮಾಡತೀನಿ?…. ಸೊಪ್ಪುಕಟ್ಟಿ ಮರಕ್ಕೆ ನೇತು ಹಾಕ್ತಿನಿ. ಇಲ್ಲದೆ ಹೋದ್ರೆ ಗಿಡಮರ ಒಂದನ್ನೂ ಬಿಡದೆ ಲೂಟಿ ಹೊಡಿತಾ ಹೋಯ್ತಿರ್ತವೆ. ಚಂಗ್ಲೆತ್ಕಂಡು…. ಇಲ್ದೆ ಹೋದ್ರೆ ಮುಂಗಾಲ ಕೂಡ್ಸಿ ಹಗ್ಗ ಕಟ್ಬಿಡಬೇಕು ಕಣೋ. ಆ ಕರಿ ಆಡು ಒಂದು ಮರಿನೆ ಹಾಕೊದು. ಬಿಳೆ ಎಮ್ಮೆ ಹೊತ್ತಿಗೆ ಎರಡು ಸೇರು ಹಾಲು ಕೊಡುತ್ತೆ. ಕರೆ ಎಮ್ಮೆ ಹೆಣ್ಣೊಳಿ ಸಾಲು. ಮಚ್ಚೆ ಎಮ್ಮೆ ಮಗಳ್ಯಾರು? ಗೊತ್ತಾ… ಹಿಂಗೆ ಪಾಠ ನಡ್ಯೋದು.  ಆದ್ರೆ, ಪ್ರಶ್ನೆ ಉತ್ತರ ಎರಡುನ್ನೂವೆ ದೊಡ್ಡ ಮೇಷ್ಟೇ ಹೇಳೋರು.

ದೊಡ್ಡಹಸ ಅನ್ನೋ ಅಡಿಗಾಲು ಎತ್ತರ ಇರೊ ಹಸ ಕೊಡೋ ಚಟಾಕು ಹಾಲಿಗೆ ಯಾರಾರ ಅದ್ನ ಸಾಕ್ತಾರಾ? ಹೇಳು. ಅದು….. ಹಳ್ಳಿಕಾರ ಹಸ. ಅದು ಒಂದೊಂದು ಕರ ಹಾಕುದ್ರೂವೆ, ಮನೆಗೆ ಒಂದೊಂದು ಬೆಳ್ಳಿ ಗಟ್ಟಿ ಬಂದಂಗೆ. ಮುಂದೆ ಅವು ಗಾಡಿ ಊಡೋಕೆ ದೊಡ್ಡೆತ್ತು ಆಯ್ತವೆ. ಸರಿಯಾದ ಜೋಡಿ ಹಾಕಂಡ್ರೆ. ಗೊತ್ತಾತೆನ್ಲಾ? ಹುರಳಿ ಬೇಸಿ ದಿನಾಲೂ ತಿನ್ನಕ್ಕೆ ಕೊಟ್ಕ್ಂದ್ರೆ ನಮ್ ಮಳೇಲಿ ಅಟ್ಲು ಗದ್ದೆ ಉಳೋಕೆ ತಟಪಟಿ ಎತ್ತು ಆಯ್ತವೆ ಅಂಥ ಮಾಡಿದಿಯಾ?ನೀನು .

ಇವು ಎಂಥ ನೀರ ಗದ್ದೆಗೆ ಇಳುದ್ರೂವೆ ನಿಭಾಯಿಸ್ಕಂತವೆ. ಇವಕ್ಕೆ ಕಾಲು ಸೋಲು ಅನ್ನದು ಇಲ್ಲ. ಮೈಭಾರ ಇಲ್ಲ ನೋಡು. ಅಂಗೇಯಾ… ಗೊಡ್ಡಹಸಿಗೆ ಆರು ಕಟ್ಟಿ ಊಡುದ್ರೆ, ನೆಣ ಬಿಸಲಿಗೆ ಕರಗಿ ಹೋರಿ ತಗಂದು ಗಬ್ಬಾಯ್ತವೆ ಕನೋ… ನೋಡು….. ಆ ಐನಾತಿ ಕಡಸನ್ನ ಸುಬ್ಬಣ್ಣರ ಮನೆ ದನಿನೊಳಗೆ ಬಿಟ್ಟಿದ್ದೆ. ಆ ವತ್ತಿಕೆರೆ ವಮ್ಮಂಗೆ ಬಳ್ಳೊಳ್ಳಿ ಕೊಟ್ಟಿದ್ರಲ್ಲ ನಾಟಿ ಹಸವ, ತವರೋರು… ಅದರ ತಳಿ ಅದು. ಒಂದುವರೆ ಸೇರು ಹಾಲು ಕರಿತಾವೆ ಅಂತೀನಿ…. ನೋಡೋಕು ಲಕ್ಷಣ. ಹಿಂಗೆ ಅವನ ಹಿಂಬಾಲಕರಿಗೆ ತಳಿ ಸುಧಾರಣೆ ಬಗ್ಗೆ ತಾನು ಊರು ಹುಟ್ಟದಾಗಿಂದ ಇದ್ದ ತಿಳಿವಳಿಕೆಯ, ತನ್ನ ಮುಂದಲ ಮಕ್ಳಿಗೆ ತಿದ್ದಿಹೇಳತಾ ಇರನು. ಬಯಲಲ್ಲಿ ಇವನ ಕುಟೆ ಅಡ್ಡಾಡ್ಕೊಂಡು ದನಿನ ಹೊಸ ಹುಡುಗ್ರು ತಮ್ಮ ಸುತ್ತಿನ ಲೋಕಜ್ಗ್ಯಾನವ ಒಂದೊಂದಾಗಿ ಕಂಡುಕೊಳ್ಳೋವು.

ದಿನ ತುಂಬುದ ಹಸ ಮೇಯೊ ಕಡೆಲೆ ಕರು ಹಾಕುಬುಟ್ರೆ, ತನ್ನ ಕಂಬಳಿ ಕೊಪ್ಪೆಲಿ ಕರು ಸುತ್ಕಂದು ಬಂದು ಬಿಳುಲ್ಲನ್ನ ಹಾಸಿ ಬೆಚ್ಚಗಿಡೊನು. ಹಸಿಗೆ ಬಿಸ್ನೀರಲ್ಲಿ ಮೈ ತೊಳ್ದು ಅಕ್ಕಿನೂ ಬೆಲ್ಲನು ತಿನ್ಸಿ, ಅದರ ನೊಂದ ಮಡಿಲಿಗೆ ಕೈಯೆಣ್ಣೆ ಅರಶಿನ ಕಲಸಿ ಹಚ್ಚೋನು. ಗಿಣ್ಣದ ಹಾಲ ಕರೆದ ಮೇಲೇ ಮೊಲೆ ಕುಡ್ಯೋಕೆ ಬಿಡುನು., ಹಂಗೆ ಕರಿನ ಜೊತೆಲಿ ಅಲ್ಲೇ ಮಾತು ಶುರು ಹಚ್ಚಕಳೊನು. ” ಹೆಚ್ಗೆ, ಹಾಲು ಕುಡಿಬೇಡ ಈರಣ ಆಯ್ತದೆ. ಇನ್ನೂ ಎಳೇ ಅನಕು ನೀನು” ಅಂಗೇ, ಕರು ಹಾಕಿದ ಹಸುಗಳು ಘಾಸಿಯಾಗಿ ಆಡೊವಾಗ, ತಾಯಿ ಮಗೂನ ನೆಕ್ಕೋವಾಗ ಅವನ ಮುಖದ ಮೇಲೆ ಅದಕ್ಕೆ ಸಾಕ್ಷಿಯಾಗಿ ತಿಳಿ ನಗು ಮೂಡೋದು. ಅವನಿಗವ್ನೆ ಹಾಡ್ಕೊಳ್ಳೊ ಪದಗಳು, ಬಾಯಲ್ಲಿ ಆ ಹೊತ್ತಲ್ಲಿ ಬರೋವು. ಅವನು ಶಿಳ್ಳೆಲಿ…. ಹಲ್ಲಿನ ಸಂದಿಂದ ನಾಲಿಗೆ ಹೊಳ್ಳಿಸಿ ಹಾಡ ನುಡಿಸಿದ ಅಂದ್ರೆ ಅವ್ನಿಗೆ ಆಗ, ಖುಷಿ ಆಗಿದೆ ಅಂಥ ಲೆಕ್ಕ.

ಒಂದಾ? ಎರಡಾ? ಊರ ಸುತ್ತ ಇರೊ ಹಲಸು, ಮಾವು, ನೇರಳೆ, ಸಂಪಿಗೆ, ಮರ ಮರವು…..ಬನಬನವು…..ಅವನ ವಾಸನೆಗೆ ತೆರಕೊಳವು. ಇದು ಜೀರಿಗೆ ಮಾವು, ಇದು ಕಾಡು ಮಾವು, ಪಿಡಚೆ ಗಾತ್ರ ಇದ್ರೂವೆ ಸಿಪ್ಟಾನ ಶೀಯ ಅಂತ ಊಟಕ್ಕೆ ನಂಚ್ಕೋಳೊನು. ಅದರ ನಾರು ಅವನ ಗಡ್ಡದಲೆಲ್ಲಾ ಅಂಟಿರೊದು. ಇದು ನಾಯಿ ನೇರಲೆ ತಿಂದರೆ ಕೆಮ್ಮು ಬರತ್ತೆ. ಜಮನೇರಳೆ ಏಟು ತಿಂತಿರ? ತಿನ್ನಿ. ಒಳ್ಳೆದು. ಮಠದ ತೋಪಲ್ಲಿ ಬಿಡೋ ಜಾಲಾರಿ ಹೂವ, ಬೆಟ್ಟತಾವರೆ, ಸಂಪಿಗೆ, ಕ್ವಾಣನ ಕಟ್ಟೆ ಕೆರೆಗೆಂಡೆ, ದೊಡ್ದ ಕೆರೆ ತಾವರೆ ಹೂವ, ತಾವರೆ ಬೇರು, ಹಳೆ ಮರಸಿನ ಕೆರೆ ಅಮಲದಹೂವು, ಬಿದಿರು ಕಳಲೆ, ಅಮಟೆಕಾಯಿ, ಕಾಡ್ಗೆಣಸು, ಎಲ್ಲಾ ಅವನು ಹೊದ್ಕೊಳ್ಳೊ ದಟ್ಟ, ವಲ್ಲಿಯ ತುಂ…ಬ ತುಂಬಿ, ಬುತ್ತಿಗಂಟಂಗೆ ಅವನ ಹೆಗಲಿಗೆ ಜೋತು ಬಿದ್ದಿರವು. ಬಂದವನೆ ಮೊರದಷ್ಟಗಲದ ತಾವರೆ ಎಲೆಯ ಹಾಸಿ, ಮೆಟ್ಲು ಮೇಲೆ ಸುರಿದು ಬಿಟ್ಟಾ ಅಂದ್ರೆ, ಮಕ್ಕಳ ಕಣ್ಣಲ್ಲಿ ತಾವರೆ ಹೂವು ಅರಳಿ ಜೀವನೆ ಕಳೆಕಟ್ಟೋದು.

cow5ಯಾವ ಮಳೆಗೆ… ಯಾವ ಗುಡುಗಿಗೆ… ಯಾವ ಅಣಬೆ ಸಾಲು? ಎಲ್ಲಿಂದ ಎಲ್ಲೀವರೆಗು ಅರಳ್ತವೆ? ಅವುಗಳ ಬೇರು ಹರಿಯೋ  ದಿಕ್ಕು ಯಾವುದು? ಯಾವ ಮಳೆಗೆ ಹುತ್ತದ ಹೂ ಒಡೀತಾವೆ? ಅಣಬೆ ಹೂಸೋದು ಯಾವಾಗ? ಹಳಸೋದು ಯಾವಾಗ? ಕುಳ್ಳ ಅಣಬೆ ಇದ್ದಂಗೆ ನಾಯ ಅಣಬೆ ಇರ್ತವೆ. ಹುಶಾರು, ಅದ ತಿನ್ಬಾರ್ದು. ಪ್ರಕ್ರುತಿ ಸಹಜ ತಿಳುವಳಿಕೆ ಅವನದ್ದು. “ಇವತ್ತು ಮಸ್ತಾಗಿ ಮೊಗ್ಗಾಗವೆ. ನಾಳೀಕೆ ಖಾರ ಅರ್ದು ಇಟ್ಕಳಿ ರಂಗವ್ವರೆ, ಮಟ್ಟಣಬೆ ಒಂದು ಮೂಟೆ ಸಿಕ್ತವೆ.” ಅಂತ ಅವನು ಅಂದ ಮಾರನೆ  ದಿವ್ಸದ ಸಂಜೇಲಿ ದನ ಬರೊದನ್ನೆ ನಾವು ಕಾಯ್ತಿದ್ವಿ. ನೋಡನ, ನಿಜ ಹೇಳ್ತಾನ? ಸುಳ್ಳು ಹೇಳ್ತಾನ. ಅನ್ಕಂತ.
ಏರಿ ಮೇಲೆ ಅವನ ದಂಡು ಕಾಣ್ತಿದ್ದಂಗೆ ಕೊಟ್ಟಿಗೆ ಮೆಟ್ಟಿಲ ಮೇಲೆ ಕೂತು ಕಾಯ್ತಿದ್ರೆ, ದೊಡ್ಡ  ದನಗಳ್ನ ಒಳಗೆ ಕೂಡಿ, ಕೊಟ್ಟಿಗೆ ಅಗಣಿ ಹಾಕೋನು. ಮಳೇಲಿ ನೆಂದು ತೊಪ್ಪೆ ಆದ ಕೊಪ್ಪೆನ, ನೀರೊಲೆ ಮೇಲೆ ಕಟ್ಟಿದ ತಂತಿಗೆ ಹರವಿ ಚಳಿಗೆ ಮೈ ಕಾಯಿಸ್ಕೊಂಡು ಬಂದು ವಲ್ಲಿ ಗಂಟು ಬಿಚ್ಚುದ್ರೆ,…ಅಬ್ಬಬ್ಬಾ!….ಸಣ್ಣಮೊಟ್ಟೆ, ದೊಡ್ಡಮೊಟ್ಟೆ ನೆಲದ ಮೇಲೆ ಚೆಲ್ಲಾಡಿ ಉರುಳುರುಳಿ ಅಣಬೆ ಚೆಂಡಾಡಿ ಹೋಗವು.

ಎಷ್ಟೋ ವರುಶದಿಂದ ಹಾದು ಬಂದ ಭೂಮಿ ತಾಯ ಒಡಲಲ್ಲಿ ಹರಿದಾಡೊ ಬೇರಲ್ಲಿ ಮಳೆ ಗುಡುಗಿನ ಸರಸಕ್ಕೆ ಅರಳೋ ಅಂಥ ಹೂವು ಇವು. ಕಾಸರಗಾಲು, ತಟ್ಟೆಯಾಕಾರದ ಕೊಡೆಯಂಥ ಬೇರಣಬೆ, ಕಿವಿ ಚೊಟ್ರೆಯಾಕಾರದ ಮರಣಬೆ, ಒಂದೊಂದು ಆಕಾರಕ್ಕೂ ಒಂದೊಂದು ಹೆಸ್ರು. ಮಳೆಯಲ್ಲಿ ನೆಂದ ಭೂಮಿಯ ಒಂದೊಂದು ಉಸುರಿಗೂ ಅರಳೊ ಬಿದಿರ ಕಳಲೆ, ಅಮಟೆಕಾಯಿ, ಆಡು ತಿರುಳು ಅಗಿದು ತಿಂದು ಆಚೆಗೆ ಉಗಿಯೊ ಬೀಜ ಅನ್ನೋ ತಾರಿಕಾಯಿ, ತೊಡಚಲ ಹಣ್ಣು, ದೊಡ್ಡೀಚಲ ಹಣ್ಣು, ಹೀಗೆ……. ದನಗಾಹಿಗಳ ಕಣ್ಣು, ಆ ತಾಯ ಒಡಲಲ್ಲಿ ಅರಳೋ ಒಂದೋಂದು ಉಸಿರಿನ ಬಯಕೆಯನ್ನು ಹುಡುಕತಾ ಇರತ್ತವೆ.

ಇಂಥ ಮಾಯಾವಿ ಚೆಲುವನ್ನಾ  ಆ…. ಅಂಥ ಬಾಯಿ ಕಳ್ಕೊಂದು ನೋಡ್ತಾ ಕುಂತಿರೊ ನಮಗೆ “ನೋಣ ಬಂತು ನೊಣ” ಅಂಥ ನಗ್ಸಿ, ಅವನ ಕಾರ್ಯಾಗಾರಕ್ಕೆ ಹೋಗೋನು. “ನಿಮ್ಮ ಇಸ್ಕೂಲಲ್ಲಿ ಸಿಲೇಟು, ಬಳಪ, ಎಲ್ಡೇ ಸಿಕ್ಕದು”. ಅಂತ ನಮ್ಮ ಆಡ್ಕಳನು. ಒಂದೊಂದ ದನಾನು ಅದರ ಗೊತ್ತಿನ ಗೊಂತಿಗೆ ಬಿಗ್ದು, ಎತ್ತುಗಳಿಗೆ ಬೆಯ್ಸಿಟ್ಟಿರೊ ಹುರುಳಿ ಹಂಚಿ ಮಗನ ಕೈಗೆ ಖಾಲಿ ಆದ ತಗಡಿನ ದಬ್ಬಿ ಕೊಟ್ರೆ, ಅದು ಅವ್ವ ಮಾಡೋ ಮಟ್ಟಣಬೆ ಸಾರಿನ ಘಮನಕ್ಕೆ ಹೊಟ್ಟೆ ದೊಡ್ಡದು ಮಾಡಕಂದು ಜೋತುಕೊಂಡು, ಜೊಲ್ಲ ತಡಿಲಾರ್ದೆ, ಮನದಲ್ಲಿದ್ದ ಪದವ ಆ ಡಬ್ಬಿ ಮೇಲೆ ತಾಳ ಕುಟ್ಕಂಡು ಕೊಟ್ಟಿಗೆಲಿ ಅಂಗೇ…. ಜಾರಿ ಬಿಡೊದು.

“ಮಟ್ಟಣಬೆ ಸಾರು ಮಾಡಿ,

ಕುಳ್ಳಣಬೆ ಕುಕ್ಕಲು ಮಾಡಿ

ಕಾಸರಗಾಲು ದೋಸೆ ಹುಯ್ದು

ಉಣ್ಣ ಬಾರಲಾ ಉಣ್ಣೆಗೊರವ

ಒಲ್ಲೆ ಕನ್ಲಾ …..ಣ್ಣೆಗೋರವ

ತಾಜಾ ಹಣ್ಣು, ಹುಳುಹುಪ್ಪಟೆ ತಿಂದು ಅರಗಿಸೊ ಹಕ್ಕಿ ಒಂದು ಮನುಷ್ಯನ ಆಸೆ ಜಗತ್ತಿನ ಕರೆಯೊಂದನ್ನ ಸಾರಾಸಗಟಾಗಿ ತಳ್ಳಿ ಹಾಕುಬುಡೋ ಪದ ಇದು. ಇದರಲ್ಲಿರದು ಸಾವಯವ ಜಗತ್ತಿನ ಮಹತ್ವ ಸಾರುವ ಅಂಶ……ಅಲ್ವಾ?
ಇನ್ನ, ಉಳೋ ಎತ್ತು, ಹಾಲು ಕರ್ಯೋ ದನಗಳಿಗೆ ಹಸ್ರುಲ್ಲಾಕಿ, ಉಳದ ದನಗಳಿಗೆ ಒಣಹುಲ್ಲ ಹಾಕಿ, ಹೊಟ್ಟಿನ ಗುಡ್ದೆಯಿಂದ ಹೊಟ್ಟು ತಂದು ಹರವಿ, ಕೊಟ್ಟಿಗೆನ ಗರಿಗುಡಸೋನು. ಹೊಟ್ಟಿನ ಗುಡ್ಡೆದೆ ಒಂದು ಕತೆ ಕನಪ್ಪಾ…ಹಿತ್ಲಲ್ಲಿ ಉದ್ದಕ್ಕೆ೩೦ ಅಡಿಯಷ್ಟು ಉದ್ದಕ್ಕಿರೋ ೩,೪ ಹುಲ್ಲು ಕೊಣಬೆ ಇರವು. ವರುಷ ಪೂರ್ತಿ ದನಗಳಿಗೆ ಹುಲ್ಲು ಬೇಕಲ್ಲಾ….ಅದರ ಕೊನೆಲಿ ಹಿಂಭಾಗಕ್ಕೆ ಹೊಟ್ಟಿನ ಗುಡ್ಡೆ ಇರೋದು. ಅದರ ಹಿಂಭಾಗದಲ್ಲಿ ಅವರಿವರ ಹಿತ್ತಲು ವಳಗೂ ಅಡ್ಡ ಉದ್ದಕೆ ಹುಲ್ಲು ಕೊಣಬೆ ಇರವು.

cow1ಇದೊಂಥರಾ… ಜನರ ಕಣ್ಣ ಮರೆಮಾಚ ಜಾಗ. ಮಳೆಗೆ ಚೂರೂ ನೆನಿದಿರೊ ಹಂಗೆ, ಹುಲ್ಲನ್ನ ವೈನಾಗಿ ಒಟ್ಟಿರೋರು. ಅದರ ಹಿಂದಿನ ಹೊಟ್ಟಿನ ಗುಡ್ಡೆ ಅನ್ನೋದು ದೊಗ್ದುದೊಗ್ದು, ಸಣ್ಣ ಮಾಡಿನ ಗೂಡಾಗಿ ಅದರ ವಳಿಕೆ ಗೂಡಾಗಿ ಹೋಗಿರೋದು. ಅಲ್ಲಿ ಕುಂತ್ರೆ ಯಾರ ಕಣ್ಣಿಗೂ ಕಾಣಲ್ರು ಅಂತವ ಹುಡುಗರು ಹಣ್ಣುಗಳ ಮುಚ್ಚಿಟ್ಟಿರರಾ? ಅವು ದೊಡ್ಡನ ಕೈಗೆ ಸಿಕ್ಕುಬಿಡವು. ಹಂಗೆ ಗಂಡಿನ ಜತೆಲಿ ಇರೊ ಸರಸ ಸಲ್ಲಾಪದ ಹೆಣ್ಣುಗಳು ಗುಟ್ಟಾಡುತಿರರಾ? ಅವ್ರು ಇವನ ಕೈಗೆ ಸಿಕ್ಕಿಬೀಳವ್ರು. ಇವನು ಲೊಚಗರಿತ ” ಅಲ್ಲಿ ಬಯಲಿಗೆ ಹೋದ್ರೆ ದನದ ಸರಸ, ಇಲ್ಲಿ ಹಿತ್ಲಿಗ ಬಂದ್ರೆ ಜನದ ಸರಸ ” ಅಂತ ಗೊಣಗಾಡನು. ಆಗ ಅವನು ಕಲ್ಲಿನಂಗೆ ಮುಖ ಮಾಡಿರನು.

” ಯಾರಲಾ ಅದು ದೊಡ್ಡ ?” ಅಂತ ಅವ್ವ ಏನಾರ ಕೇಳುದ್ರೂ ಮಾತ ನಿಲ್ಸಿಬಿಡೊನು. ಮನುಸುರ ಕುಟೆ ಅವನು ಮಾತಾಡೋದೆ ಕಮ್ಮಿ ಅನ್ನಿ. ಇನ್ನೊಂದೆರಡು ಹೊರೆ ಹುಲ್ಲ ತಂದು ಕೊಟ್ಟಿಗೆ ಅಟ್ಟಕ್ಕೆಸದು, ತಟ್ಟಾಡ್ತಾ, ಅತ್ಲಾಗೊಂದು ಇತ್ಲಾಗೊಂದು ಕಾಲೆಸಕಂದು, ಮನಿಗೆ ಹೋಗೊನು. ಮಗನ್ನ ವಿಚಾರಿಸಿಕೊಂಡು ಅವನ ಜೊತೆಲಿ ಇಲ್ಲಿಗೆ ಬಂದು ಉಂಡು, ಅವನ ಹುಲ್ಲುಗುಡಿಸಲ ತಲುಪದೋನೆ ಮಗನ ತಬ್ಬಿ, ದಿಂಬಿಗೆ ತಲೆ ಕೊಟ್ಟ ಅಂದ್ರೆ,  ಅಗ್ಗಳಪ್ಪಾ…..ಗೊರ್ರೋ… ಅಂತ  ಗೊರ್ಯೋಕೆ ಶುರು ಮಾಡನು. ಆ ಶಬುದಕ್ಕೆ ಗುಡಿಸಲ ಆಚೆಲಿ ಇರೊ ಅವನ ದೈವ ಉಡಸ್ಲಮ್ಮ, ಚಟಾರನೆ ಎದ್ದಳೆ ತಕಾ….ಆಗಲೇ ಸಂಚಾರಕ್ಕೆ ಹೊರಡೋಳು.

ಇನ್ನ ಕೋಳಿ ಕೂಗ್ಬೇಕು. ದೊಡ್ಡ ಗೊರಕೆ ನಿಲ್ಸಿ ಕಣ್ಬಿಡ್ಬೇಕು. ಎದ್ದು ಕಣ್ಣ ಉಜ್ಜಿ, ಹತ್ತಿರೋ ಪಿಸ್ರೆ ವರಸ್ಕಂಡು ಈಚಿಗೆ ಬರನಾ? ಆಗಲೇಯಾ… ದೇವ್ರು, ಊರ ಸರ್ಕೀಟು ಮುಗ್ಸಿ ಬಂದು “ನನ್ನ ಮಗ ಗೇಯಕ್ಕೆ ಹೊಂಟೀತಲ್ಲಪ್ಪಾ….” ಅಂತವ ಹೊಟ್ಟೆ ವಳಿಗೇ ಕನಿಕರಿಸಿ, ಕಣ್ಣ  ತುಂಬಕಂಡು, ಕಣ್ಣಮುಚ್ಚಿ, ರಾತ್ರಿ ಕಂಡ ಊರಿನ ಮನೆಮನೇ ಯೋಸ್ನೇಲಿ… ಯಾರ್ರಾರಿಗೆ ಏನೇನು ತಾಪತ್ರೆಯ? ಅನ್ನದ ನೆನಿತಾ ತಪಸ್ಸಿಗೆ ಕುಂತಬುಡಾದು. ಅಲ್ಲಿಗೆ ಅವನ ಒಂದು ದಿನದ ದಿನಚರಿ ಮುಗ್ಯೋದು…….
ನಾನು ದೊಡ್ದವಳಾದ್ಮೇಲೆ ಅವನ ನೆರೆ ಮನೆಯ ದೇವಿನ ಕೇಳಿದೆ. “ಅವನ ಹೆಂಡ್ತಿ ಹೊಸತರಲ್ಲೇ ಸತ್ತು ಹೋದ್ಲೇನೆ?.”

“ಇಲ್ಲ ತಗಳಿ. ಕಡ್ಲೆ ಕಾಯಿ ಮಾರೊ ಸಾಬಿ ಬರನಲ್ಲ ಊರಿಗೆ. ಅವನ ಜೊತೆ ಹೊಂಟೋಗಬುಟ್ಳು. ಮಗನ್ನು ಬಿಟ್ಟು ಓದ್ಲಲ್ಲ. ಅವಳ ದಾಸ್ಟ್ಯ ನೋಡಿ!  ಈಗ ಬೂಬಮ್ಮನೆ ಆಗೋಗವ್ಳೆ ಅಂತೀನಿ. ಪ್ಯಾಟೇಲವಳೆ. ಬುರ್ಖ ಹಾಕ್ಕಂದು ಓಡಾಡ್ತಳಂತೆ. ನಂಗೆನೊ ಸಂತಿಗೋದಾಗ, ಒಂಜಿನ್ಲೂ ಸಿಕ್ಕಿಲ್ರಪ್ಪಾ… ಸುಳ್ ಯಾಕೆ ಹೇಳ್ಲಿ? ನಮ್ಮ ಮಳ್ಳೆ ಮನೆ ಈರಿಗೆ  ಸಿಕ್ಕಿದ್ಲಂತೆ ಆಸ್ಪತ್ರೆಲಿ. ಜೀವ ತಡಿದೆಯ… ಎಲ್ಲಾನೂ ಕೇಳ್ಕಂಡಳಂತೆ. ಕಣ್ಣಿಗೆ ಬಿಟ್ಟಿರೊ ಕಿಂಡಿ ಪರದೇಲಿ ಸಂತಿಗೆ ಬರೊ ಮಗನ್ನ ನೋಡ್ಕತಿನಿ ಅಂತ ಬುಳುಬುಳನೆ ಅತ್ತು ಬುಟ್ಲಂತೆ ಕಣಿ…. ಆ ಸಾಬಿಗೂ ಮೂರು ಮಕ್ಳ ಹೆತ್ತವಳಂತೆ. ಆದ್ರೂವೆ…. ಥೋ ! ಹೆತ್ತ ಕರುಳಿನ ಸಂಕಟ. ಆ ಮಗ ಎನ್ ಕರ್ಮ ಮಾಡಿತ್ತೋ ತೆಗೀರಿ, ಅತ್ಲಾಗೆ. ದೊಡ್ಡಣ್ಣ ಮಾತ್ರವ ಮಗ ಚೆನಾಗಿ ಸಾಕಂಡ ತಗಳಿ. ಇನ್ನೇನ್ ನಾಕೈದು ವರ್ಸ ಅವರಪ್ಪ ಒದ್ದಾಡುಬುಟ್ರೆ….ಅವನ್ಗೂ ಒಂದು ಹೆಣ್ಣ ತಂದ್ರೆ ಆಯ್ತು. ಮನೆ ನಿಂತ್ಕತು ಅನಕಣಿ. ದೋಡ್ಡಣ್ಣ ರಾಮ ವನವಾಸ ನೀಸದಂಗೆ ನೀಸ್ಬುಟ್ಟ ಹಲ್ಲ ಕಚ್ಕಂಡು” ಅವಳಾಡೋ ಅರಿವಿನ ಮಾತಿಗೆ ಹರೇದ ನನ್ನ ತಲೆ ಕಲಸಿಹೋಗಿತ್ತು.

ಬೆಳಗ್ಗೆ ಬರೋ ಹೊಂಬೆಳಕಲ್ಲಿ ಮಳೆಗಾಲದ ದಿನದಲ್ಲಿ, ದನಗಳ ಗೊಲಸಿಗೆ ಬೀಳೊ ಹುಳವ, ಸೀಮೆಣ್ಣೆ ಸುರಿದು ನೆಲಕ್ಕೆ ಕೆಡವ್ತಾ, ಗೌಡ್ರ ಕೊಡೊ ನಿರ್ದೇಶನಕ್ಕೆ ಊಂಕಳ್ತಾ…..ಕೊಬ್ರಿಎಣ್ಣೆಲಿ ಬ್ಯಾಟರಿ ಶೆಲ್ಲಿನ ಕರಿಪುಡಿ ಕಲ್ಸತಾ, ದನಗಳ ಗಾಯಕ್ಕೆ  ತುಂಬೋ ನಮ್ಮ ದೊಡ್ಡ ಡಾಕ್ಟ್ರು ನೆನಪಾದ. ಸಂಜೆ ಬಂದಾಗ ಲಗಾಡಿ ಹಸು ಅದರ ಕರನ ಕಂಡ ಕೂಡ್ಲೆ ನೆಕ್ಕಿ ಗೂಟಕ್ಕೆ ಕಟ್ಟಹಾಕಿರೋ ಕರುಗೆ ಅನುಕೂಲ ಆಗೊ ಹಂಗೆ,, ಹಿಂತಿರುಗಿ ನಿಂತುಕೊಂಡು ಮೊಲೆ ಕೊಡೊ ಕಣ್ಣೋಟ ನೆಪ್ಪಾಯ್ತು. ಹಂಗೇ ಸಂಜೆ ಮುಂದೆ, ದೊಡ್ದ, ಬಂದು ನಿಂತ ಮಗನ ಕೈಯಿಗೆ ಜೇಬಿಗೆ ಅವನು ಸುರಿತಿದ್ದ ನೇರಳೆಹಣ್ಣು, ತೊಡಚಲು ಹಣ್ಣು ನೆನಪಾದವು. ಬೆಳೆದು ನಿಂತ ಅವನ ಮಗ ದ್ಯಾವಣಿ ಈಗ ನಿಜವಾದ ದೊಡ್ಡ ಆಳಾಗಿದ್ದ.  ಮೊದಲೇ ಹುಲ್ಲಾಳಗಿದ್ದ ದೊಡ್ಡ ಸೋತು ಮಗಿನಂಗಾಗಿದ್ದ.
ಅಂಗೇಯ….. ದನಕರಿನ ಮೇಲೆ ಅಕ್ಕರೆ ಇದ್ರೂ, ಬೇಕೋ?ಬೇಡವೋ? ಅಂತೂ ಅವನು ಬಯ್ಯುತ್ತಿದ್ದ  ಬೈಗುಳ ಅನ್ನವು ಒಮ್ಮಕೆ ತಲೆ ವಳಿಕೆ ಉಕ್ಕುಕ್ಕಿ ಬಂದವು.

“ನಿನ್ನ……….. ರಾವು ಹೊಡ್ಯಾ”

“ನಿನ್ನ …………ದೆಯ್ಯ ಹೊಡ್ಯಾ”

“ನಿನ್ನ ಮೈಮೇಲೆ ದೆವ್ವ ಬಂದೀತಾ?”

“ನಿನ್ನ ಸುಳಿ…….. ಹೊಡ್ಯಾ.ನಿನ್ನಮ್ಮನ್ನಾ…”

“ನಿನ್ನ ನಿನ್ನ ಏ ಬೋಳಿ…..ಊರ ಮುಂದಿನ ಕರನೆತ್ತಿ ಮರಕ್ಕೆ ನೇತ ಹಾಕ್ತಿನಿ ಇರು. ನಿನ್…ತಾಯೀನಾ…”

“ನಿನ್ನ, ನಿನ್ನ, ಮಾರಮ್ಮನ ಗುಡಿ ಮುಂದೆ ಕಡದು ತೋರಣ ಕಟ್ತೀನಿ ಇರು, ಏ ಕೆಂದ ಹೋತ, ಬಂದೆ,ಬಂದೆ……”
ಹಿಂ…ಗೆ ಅವನ ರಾಗಾಲಾಪಗಳು ಕೊಟ್ಟಿಗೆ ತುಂಬಿ ನನ್ನ ತಲೆಯ ತುಂಬಿ ಅಂದು ಹರಿದಾಡುದ್ವು. ಅವನ ಸ್ವರ ಸಂಭ್ರಮ ಅನ್ನವು ಕಿವಿಲ್ಲಿ ಉಳಕಂಡು, ನಿದ್ದೆಗಡರೋ ಮುಂಚೆ ಮಗನನ್ನು ತಬ್ಬಿ ಮಲಗುವಾಗ  ದೊಡ್ಡ ಕಣ್ಣೀರಾಕತಿದ್ದನಾ? ಎಂಬ ಪ್ರಶ್ನೆನ ಮನಸ್ನಲ್ಲಿ ತಂದು ಹುಟ್ಟು ಹಾಕಿದ್ವು. ನನ್ನ ಮನಸ್ಸೂ ಅನ್ನದು ಕರಗಿ ಮಳೆಗೆ ತೊಳೆದಿಟ್ಟಿರೋ ದನಮೇಯೋ ಹುಲ್ಲುಗಾವಲ ತಂದು ಹಸುರ ಮುಕ್ಕಳುಸ್ತಾ ಕಣ್ಣಗಲಕ್ಕೂ ಹರಡಕಂಡು ನಿಂತಕಂತು.

ಹುಲ್ಲ ವಳಗೆ ಮಧ್ಯಮಧ್ಯದಲ್ಲಿ  ಹೂತು ಹೋಗಿರೋ ಎಂತೆಂತೆವೋ ಹೆಸರಿಲ್ಲದಿರ ಸಣ್ಣ ಸಣ್ಣ ಗೆಡ್ಡೆ ಇರವು. ಮಳೆ ಬತಿದ್ದಂಗೆಯ ಅವು ಎಲೆ ಈಚೆಗೆ ಹಾಕುದ್ದೂ ಅಲ್ಲದೇಯ ಅಂದಚಂದದ ಬಣ್ಣಬಣ್ಣದ ಹೂವ ಮುಡಕಂದು ಕಣ್ಣ ಸೆರೆ ಹಾಕತಾ ಬಂದು ನಿಂತಕಂದವು.

‍ಲೇಖಕರು Admin

December 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: