ಈ ನಾಟಕಕ್ಕೆ ಬಹುದೊಡ್ಡ ಸಾಧ್ಯತೆ ಇದೆ..

ಕದನ ಕೋಲಾಹಲದ ಮಹಿಳಾಂತರಂಗ

sabitha-bannadi

ಡಾ. ಸಬಿತಾ ಬನ್ನಾಡಿ

‘ಮಹಿಳಾಭಾರತ’ ಹೆಸರಿನ ಈ ನಾಟಕ ‘ಭಾರತ’ದ ಮಹಿಳೆ ಮತ್ತು ಭಾರತೀಯ ಮಹಿಳೆಯ ಅಂತರಂಗದ ಮಾತಿಗೆ ಕಿವಿಗೊಡುವ ಉದ್ದೇಶದಿಂದ ರಚಿತವಾದುದು.

ಹೆಣ್ಣಿನ ಚೈತನ್ಯ ನಾಶದ ಗಂಡುದಾರಿ, ಗಂಡಿನ ನಾಶದ ದಾರಿಯೂ ಆಗುವುದನ್ನು ದೃಶ್ಯದಲ್ಲಿ ದಾಟಿಸಲು ನಿರ್ದೇಶಕ ಶ್ರೀಪಾದ ಭಟ್ ತಮ್ಮದೇ ದಾರಿಯೊಂದರ ಹುಡುಕಾಟವನ್ನು ಈ ನಾಟಕದಲ್ಲಿ ಮಾಡುತ್ತಾರೆ.

shripad-bhatಎಲ್ಲಕ್ಕಿಂತ ಎತ್ತರದಲ್ಲಿ ಸದಾ ತೂಗುವ ತೊಟ್ಟಿಲು, ಹಿಡಿದಿಟ್ಟ ಗಾಳಿಯ ಚಲನೆ, ತಾಯ ಮಡಿಲಿನ ಮರುಕಳಿಸಿದ ಬಳಕೆ, ಕತೆಯಾಗುವ ಘಟನೆಗಳ ನೆರಳು, ನಸುಗತ್ತಲಿನ ಅನುಭವದ ಹಿಂದೆ ಬದಲಾಗುವ ಬಣ್ಣಗಳು, ಮುಖವಿಲ್ಲದ ಅಂಬಿಕೆ ಅಂಬಾಲಿಕೆಯರು, ಹೆಗಲಿಗೆ ಬಿದ್ದ ಹೊಣೆಗಾರಿಕೆಯ ರಿಲೇ ಹಿಡಿದೂ ಗುರಿಮುಟ್ಟದ ಸತ್ಯವತಿಯ ಅಳಲಿನ ಛಾಯೆಗಳು – ಹೀಗೆ ಹಲವು ಮಜಲಿನ ನಾಟಕದ ಭಾಷೆಯನ್ನು ಶೈಲೀಕೃತ ಅಭಿನಯದ ಮೂಲಕ ಮತ್ತು ಅತ್ಯುತ್ತಮ ರಂಗ ಸಜ್ಜಿಕೆ, ಬೆಳಕಿನ ಸಂಯೋಜನೆ, ಹಿತವಾದ ಸಂಗೀತದ ಬಳಕೆಯ ಮೂಲಕ ಈ ನಾಟಕ ರಂಗದಲ್ಲಿ ಬೆಳಗುತ್ತದೆ.

ಹೆಣ್ಣಿನ ಚೈತನ್ಯ, ಜ್ಞಾನ, ಅವಕಾಶ, ಆಯ್ಕೆಗಳನ್ನು ಕಿತ್ತುಕೊಳ್ಳುವ ಗಂಡಿನ ದಾರಿ – ಆತ್ಮಹತ್ಯೆಯ ದಾರಿ. ಗಂಡಿನ ಯುದ್ಧೋನ್ಮಾದ, ಸೇಡುಗಳು ಹೆಣ್ಣಿನ ಆಯ್ಕೆಯೂ ಆದಾಗ ಸಂಭವಿಸುವ ದುರಂತದ ಘೋರವಾದುದು. ಮಹಾಭಾರತದ ಅಂಬೆ, ದ್ರೌಪದಿಯರ ಸೇಡಿನ ಕತೆಯನ್ನು ಹೇಳುವ ಈ ನಾಟಕ ಅದರ ಜೊತೆ ಜೊತೆಗೇ ಇಂದಿನ ಹೆಣ್ಣೂ ಕೂಡ ತನ್ನದಲ್ಲದ ತಪ್ಪಿಗೆ ಮರ್ಯಾದಾ ಹತ್ಯೆಗೆ ಈಡಾಗುವುದನ್ನೂ ತಳುಕು ಹಾಕುತ್ತದೆ.

'ಮಹಿಳಾ ಭಾರತ' ತಾಲೀಮಿನ ವೇಳೆ

‘ಮಹಿಳಾ ಭಾರತ’ ತಾಲೀಮಿನ ವೇಳೆ

ಇಂದಿನವರ ಬಾಯಿಯಲ್ಲಿ ಹಿಂದಿನವರ ಕತೆಯಾಗಿ ಮನೆತನದಲ್ಲಿ ಹಿಂದೆ ನಡೆದು ಹೋದ ಅನ್ಯಾಯ ಮತ್ತು ಆ ಅನ್ಯಾಯಕ್ಕೆ ಒಳಗಾದ ಹೆಣ್ಣಿನ ಶಾಪ ಗಂಡುಗಳ ಸಾವಿನ ರೂಪದಲ್ಲಿ ಮರುಕಳಿಸುತ್ತಿರುವುದರ ಬಗ್ಗೆ ತಾಯಿಯಾದವಳ ಆತಂಕವನ್ನು ಈ ಕತೆ ಮುನ್ನೆಲೆಗೆ ತರುತ್ತದೆ. ಇಂದಿನ ದಿಟ್ಟ ಹೆಣ್ಣಿನ ಪ್ರತಿರೋಧದ ಪ್ರತಿನಿಧಿಯಾಗಿ ಮಗಳು ನಾಟಕದುದ್ದಕ್ಕೂ ಕಾಣಿಸಿಕೊಳ್ಳುತ್ತಾಳೆ. ಇವಳ ಪಾತ್ರಕ್ಕೆ ಒಂದು ಗಟ್ಟಿತನವಿದೆ.

ನಾಟಕದುದ್ದಕ್ಕೂ ಈ ಶಾಪ ಸ್ವಲ್ಪ ಹೆಚ್ಚೇ ಮಹತ್ವ ಪಡೆದುಕೊಂಡಂತನಿಸುತ್ತದೆ. ಇದು ವೈಭವೀಕೃತ ನೆಲೆಗೆ ಹೋದರೆ ಸಮಸ್ಯಾತ್ಮಕವಾಗುತ್ತದೆ. ಬದಲಿಗೆ ಇದನ್ನು ಸ್ವಲ್ಪ ತಗ್ಗಿಸಿ, ಹೆಣ್ಣಿನ ಚೈತನ್ಯ, ಜ್ಞಾನ, ಅವಕಾಶ, ಆಯ್ಕೆಗಳನ್ನು ಕಿತ್ತುಕೊಳ್ಳುವ ಗಂಡಿನ ದಾರಿ- ಆತ್ಮಹತ್ಯೆಯ ದಾರಿ ಎಂಬುದನ್ನು ಹಿಗ್ಗಿಸಿದ್ದರೆ ನಾಟಕದ ಪರಿಣಾಮ ಇನ್ನಷ್ಟು ತೀವ್ರವಾಗುತ್ತಿತ್ತು. ಯಾಕೆಂದರೆ, ಈ ದಾರಿಯ ಫಲಾನುಭವಿಗಳು ಗಂಡು ಹೆಣ್ಣುಗಳಿಬ್ಬರೂ ಎಂಬುದನ್ನು ಈ ನಾಟಕ ಚೆನ್ನಾಗಿ ಅರಿತಿದೆ.

ಹೆಣ್ಣುಮಕ್ಕಳಿಂದಲೇ ತುಂಬಿಕೊಂಡಿರುವ ಈ ನಾಟಕದಲ್ಲಿ ಯಾವ ಪಾತ್ರವೂ ಅಮುಖ್ಯವಲ್ಲ. ಇದರಲ್ಲಿ ಅಭಿನಯಿಸಿದ ಎಲ್ಲರಿಗೂ ಅಭಿನಯ ಧಕ್ಕಿದೆ. ದೃಶ್ಯಕಲೆಯಾಗಿ ಮತ್ತು ಆಶಯವಾಗಿ ಈ ನಾಟಕಕ್ಕೆ ಬಹುದೊಡ್ಡ ಸಾಧ್ಯತೆ ಇದೆ.

ದಿನಾಂಕ: 12/12/2016 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರದರ್ಶನಕ್ಕೆ ಪ್ರತಿಕ್ರಿಯೆ.

15337567_1157115457670201_8121445763767477656_n

ನಾಟಕ ರಚನೆ: ಕೆ.ಮಾಧವನ್

ಅನು: ಅಭಿಲಾಷಾ ಹಂದೆ.

ವಿನ್ಯಾಸ, ನಿರ್ದೇಶನ : ಡಾ.ಶ್ರೀಪಾದ ಭಟ್.

ಅಭಿನಯ : ರಥಬೀದಿ ಗೆಳೆಯರು ಉಡುಪಿ.

ರಂಗಸಜ್ಜಿಕೆ : ಕಿರಣ ಭಟ್, ದಾಮೋದರ ನಾಯ್ಕ್

‍ಲೇಖಕರು Admin

December 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: