ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನಂತೆಯೇ ಥೇಟ್ ನಿನ್ನಂತೆಯೇ..

ಸರೋಜಿನಿ ಪಡಸಲಗಿ

ಹಾಗೇ ಸುಮ್ಮನೆ ಅವುಚಿ ಕುಳಿತ ಕವಿತೆ
ಕಿಸಕ್ಕೆಂದಿತು ಕಣ್ಣು ಮಿಟುಕಿಸಿ ಕೊಂಕಿಸಿ
ಮೆಲು ದನಿಯಲ್ಲಿ ಉಸುರಿತು ನಾ ಬಲು ನಿಗೂಢ
ನಿನ್ನಂತೆಯೇ ಥೇಟ್ ನಿನ್ನಂತೆಯೇ

ಏನೋ ಆಗ ಮಿಂಚಿತ್ತು ಅಲ್ಲಿ ಮಿಣುಕುತಿತ್ತು
ಸುತ್ತ ಇಣುಕುತಿತ್ತು ಕೈಗೆ ಸಿಗದೆ ಓಡುತಿತ್ತು
ತುಂಟ ಮಗುವಿನಂತೆ ಜಿಗಿದು ಆಡುತಿತ್ತು
ಎಲ್ಲಾ ಅಸ್ಪಷ್ಟ ಅಯೋಮಯದಾಟ
ಆಗ ಆಳ ಸುಳಿಯೊಳಗೆ ಗಿರಕಿ ಹೊಡೆಯುತ್ತ
ಎನ್ನುತ್ತಿತ್ತು ನಿನ್ನಂತೆಯೇ ಥೇಟ್ ನಿನ್ನಂತೆಯೇ

ಗೊಂದಲದ ಸಂತೆಯಲ್ಲಿ ತಪ್ಪಿಸಿಕೊಂಡು
ನುಣುಚಿ ಜಾರಿ ತೂಗುಮಣೆ ಏರಿ ಜೀಕಿ
ಭಾವನೆಗಳ ತೋಟದಲಿ ಕಣ್ಣುಮುಚ್ಚಾಲೆಯಾಡಿ
ಅಸ್ಪಷ್ಟ ಚಿತ್ರ ವೊಂದು ಮೂಡಿ ಅಯೋಮಯ
ಆಗ ಆಳ ಸುಳಿಯೊಳಗೆ ಗಿರಕಿ ಹೊಡೆಯುತ್ತ
ಎನ್ನುತಿತ್ತು ನಿನ್ನಂತೆಯೇ ಥೇಟ್ ನಿನ್ನಂತೆಯೇ

ಥಟ್ಟನೇ ತುಟಿಯಂಚಿನಲ್ಲಿ ನಗು ಅರಳಿಸಿ
ನೇರ ಎದೆಯ ಗೂಡಿಗೇ ಇಟ್ಟು ಲಗ್ಗೆ
ಚೆಲ್ಲಾಪಿಲ್ಲಿಯಾಗಿ ಹಾರಾಡಿ ಅಸ್ಪಷ್ಟತೆಯಲ್ಲೇ ಸ್ಪಷ್ಟತೆ
ಕುಪ್ಪಳಿಸುತ ಕವಿತೆ ಗರಿಗೆದರಿದ ಭಾವಗಳಿಗೆ
ತಾನೇ ಮುಕುಟವಾಗಿ ಗೂಢತೆಯಲಿ ತೇಲಿ
ಎನ್ನುತಿತ್ತು ನಿನ್ನಂತೆಯೇ ಥೇಟ್ ನಿನ್ನಂತೆಯೇ

ಮೋಹ ಮಮಕಾರದಿ ಮುದ್ದಿಸುತ ಕವಿತೆಯ
ಮನದಾಳದಲ್ಲಿ ವಿಚಿತ್ರ ತಾಕಲಾಟ ಹೋರಾಟ
ಕಣ್ಣಲಿಣುಕಿ ಇನಿತು ನಕ್ಕು ಹೇಳಿತಾಗ ಕವಿತೆ
ನಿನ್ನ ಭಾವನೆಗಳ ಕೂಸು ನಾ ಇರುವೆ
ನಿನ್ನಂತೆಯೇ
ನೀ ಸ್ವತಂತ್ರ ತೊಡಿಸು ನಿನ್ನ ಮನದ ತೊಡಿಗೆ
ಆದರೂ ಬಹಿರಂಗದಲಿ ನಾ ಬಲು ನಿಗೂಢ
ನಿನ್ನಂತೆಯೇ ಥೇಟ್ ನಿನ್ನಂತೆಯೇ

‍ಲೇಖಕರು avadhi

22 April, 2020

2 Comments

  1. Jayalaxmi Patil

    ಚೆಂದದ ಕವನ ಸರೋಜಿನಿ.

  2. Sarojini Padasalgi

    ಧನ್ಯವಾದಗಳು ಜಯಲಕ್ಷ್ಮಿ.
    ಧನ್ಯವಾದಗಳು ಅವಧಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading