ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಅಬ್ಬಾ..!! ಎಂದರು ದೇಜಗೌ

ಮುದ್ರಣ ಕ್ಷೇತ್ರದಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ದಿಂದ ಮುದ್ರಣದ ವೇಗ ಕಂಡು ನಿಬ್ಬೆರಗಾದ ದೇ. ಜ. ಗೌ.

ಹಿರಿಯ ಐಎಎಸ್ ಅಧಿಕಾರಿಗಳೂ, ‘ಜಾನಪದ ಲೋಕ’ದ ಅಧ್ಯಕ್ಷರೂ ಆದ, ಟಿ ತಿಮ್ಮೇಗೌಡರ ಅಭಿನಂದನಾ ಗ್ರಂಥ ಮುದ್ರಣದ ಸಮಯದಲ್ಲಿ ನಡೆದ ಒಂದು ಘಟನೆ.

ಆ ಅಭಿನಂದನಾ ಗ್ರಂಥಕ್ಕೆ ಸಂಪಾದಕರಾಗಿದ್ದವರು ಪ್ರೊ. ಚಂದ್ರಯ್ಯ ನಾಯ್ಡು. ಅವರ ಸಮಕ್ಷಮದಲ್ಲಿ ಕೊನೆ ಹಂತದ ಮುದ್ರಣ ಕಾರ್ಯ ನಡೆಯುತ್ತಿತ್ತು. ಕಾರ್ಯಕ್ರಮದ ದಿನ ಬೆಳಗ್ಗೆ, ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕರಾಗಿದ್ದ ಪ್ರಧಾನ್ ಗುರುದತ್ತ ಅವರು ಹಿರಿಯ ಸಾಹಿತಿ ದೇಜಗೌ (ದೇ.ಜವರೇಗೌಡರು) ಅವರೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದರು.

ಮೈಸೂರು ಬಿಟ್ಟಾಗಲೇ ಸಂಪಾದಕರಿಗೆ ಕರೆ ಮಾಡಿ ಮುದ್ರಣ ಕಾರ್ಯ ಮುಗಿದಿದೆಯೇ ಎಂದು ವಿಚಾರಿಸುತ್ತಿದ್ದರು. ಆಗ ನಾವು- ‘ನೀವು ಬೆಂಗಳೂರು ಪ್ರವೇಶಿಸುವ ಮಾರ್ಗದಲ್ಲಿ, ಸಿರ್ಸಿ ಸರ್ಕಲ್ಲಿನಲ್ಲಿಯೇ ಮುದ್ರಣಾಲಯವಿದೆ, ಹಾಗೇ ಬಂದು ಹೋಗಿ’ ಎಂದು ಕೇಳಿಕೊಂಡೆವು.

ನಮ್ಮ ಕೋರಿಕೆಯನ್ನು ಮನ್ನಿಸಿದ ಅವರು ಮುದ್ರಣಾಲಯಕ್ಕೆ ಬಂದವರೇ- ‘ಸಂಜೆ ಬಿಡುಗಡೆಯಾಗುವ ಪುಸ್ತಕಗಳನ್ನು ಕೊಡಿ, ಒಮ್ಮೆ ತಿರುವಿ ಹಾಕುತ್ತೇನೆ’ ಎಂದರು. ಚಂದ್ರಯ್ಯ ನಾಯ್ಡು ಅವರು, ‘ಪುಸ್ತಕಗಳು ಸಿದ್ಧವಾಗುತ್ತಿವೆ ಸರ್. ಹೇಗೂ ಬಂದಿದ್ದೀರಾ, ಒಮ್ಮೆ ದೇಜಗೌ ಅವರ ಲೇಖನವನ್ನು ಒಮ್ಮೆ ಕಣ್ಣಾಡಿಸಿ ಕೊಡಲಿ’ ಎಂದು ಕರಡನ್ನು ದೇಜಗೌ ಅವರ ಮುಂದೆ ಇಟ್ಟರು.

ದೇಜಗೌ ಅವರು ತುಸು ಗಾಬರಿ ಹಾಗೂ ಸಿಟ್ಟಿನಲ್ಲಿ-” ಏನ್ರಪ್ಪ, ಇನ್ನು ಕೆಲವೇ ಗಂಟೆಗಳಲ್ಲಿ ಕಾರ್ಯಕ್ರಮ ಶುರು ಆಗಬೇಕು. ಕಾರ್ಯಕ್ರಮದಲ್ಲಿ ಈ ಪುಸ್ತಕ ಲೋಕಾರ್ಪಣೆ ಮಾಡೋಕೆ ಅಂತಾನೇ ನಾವು ಮೈಸೂರಿನಿಂದ ಬಂದಿದ್ದೇವೆ. ಇಲ್ಲಿ ನೋಡಿದರೆ, ಪುಸ್ತಕ ಇನ್ನೂ ಕರಡು ತಿದ್ದುವ ಹಂತದಲ್ಲಿದೆಯಲ್ಲ!’ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮ ಮುದ್ರಣಾಲಯದ ಕಾರ್ಯವೈಖರಿ ಬಗ್ಗೆ ಗೊತ್ತಿದ್ದ ಪ್ರಧಾನ್ ಗುರುದತ್ತ- ‘ ಪುಸ್ತಕ ಸಿದ್ಧವಾಗುತ್ತೆ ಸರ್. ಏನೂ ಗಾಬರಿ ಬೇಡ, ಒಮ್ಮೆ ಕರಡು ನೋಡಿ’ ಎಂದು ಸಮಾಧಾನಪಡಿಸಿದರು. ನಂತರ ಅವರೊಮ್ಮೆ ಅಂತಿಮ ಕರಡು ನೋಡಿಕೊಟ್ಟಮೇಲೆ, ಅವರ ಎದುರಲ್ಲೇ ಮುದ್ರಣ ದೋಷಗಳನ್ನು ಕಂಪ್ಯೂಟರಿನಲ್ಲಿ ಸರಿಪಡಿಸಿ, ಟ್ರೇಸಿಂಗ್ ತೆಗೆದು, ಪೇಸ್ಟ್ ಅಪ್, ಪ್ಲೇಟ್ ಮತ್ತು ಮುದ್ರಣ ಮಾಡಿಸಿ, ಫಾರಂಗಳನ್ನು ಫೋಲ್ಡಿಂಗ್ ಮಾಡಿ, ಮೊದಲೇ ಸಿದ್ಧವಾಗಿದ್ದ ಬೇರೆ ಫಾರಂಗಳ ಜೊತೆ ಸೇರಿಸಿ, ಹೊಲಿದು, ಕೇಸ್ ಬೈಂಡಿಂಗ್ ಮಾಡಿದ ಒಂದು ಪುಸ್ತಕವನ್ನು ಅತ್ಯಂತ ಅಲ್ಪಾವಧಿಯಲ್ಲಿ ಸಿದ್ಧ ಮಾಡಿ ಅವರ ಕೈಯಲ್ಲಿ ಇಟ್ಟಾಗ,
ಪುಸ್ತಕ ಮತ್ತು ಮುದ್ರಣ ಕ್ಷೇತ್ರದ ಹೊಸ ತಂತ್ರಜ್ಞಾನಗಳ ವೇಗವನ್ನು ಕಂಡು ದೇಜಗೌ ನಿಬ್ಬೆರಗಾದರು.

ಅಬ್ಬಾ… ‘ಅತ್ಯಾಧುನಿಕ ತಂತ್ರಜ್ಞಾನದಿಂದ ಏನೇನೆಲ್ಲಾ ಸಾಧ್ಯವಾಗಿದೆಯಲ್ವಾ’? ಎಂದು ಉದ್ಗರಿಸಿದರು. ನೋಡನೋಡುತ್ತಿದ್ದಂತೆಯೇ ಒಂದು ಬುಕ್ ರೆಡಿ ಮಾಡಿಬಿಟ್ರಲ್ಲ, ಭೇಷ್ ಎಂದು ಶಹಬ್ಬಾಸ್ ಗಿರಿ ಕೊಟ್ಟರು.

ಹೊರಡುವ ಮುನ್ನ, ಹಿಂದಿನ ದಿನಗಳಲ್ಲಿ ಅವರ ಮತ್ತು ಗುರುಗಳಾದ ಕುವೆಂಪು ಅವರ ಪುಸ್ತಕಗಳ ಮುದ್ರಣ ಸಮಯದಲ್ಲಿ ಎದುರಾಗುತ್ತಿದ್ದ ಕಷ್ಟಗಳನ್ನು ನೆನಪಿಸಿಕೊಂಡರು. ”ಆಗೆಲ್ಲಾ ಒಮ್ಮೆಗೆ 8, 16, 24 ಪುಟಗಳನ್ನು, ಎರಡೋ – ಮೂರೋ ಚೆಸ್ ಗಳಿಗೆ ಅಚ್ಚು ಮೊಳೆಗಳನ್ನು ಜೋಡಿಸಿ, ಅದನ್ನು ಮುದ್ರಿಸಿಯೇ ಒಂದು ಕರಡನ್ನು ತೆಗೆದುಕೊಡುತ್ತಿದ್ದರು. ಅಕ್ಷರ ಜೋಡಣೆಯಾದ ಚೆಸ್ ಅನ್ನು ನಾವು ಕರಡು ತಿದ್ದಿ ಕೊಡುವವರಿಗೆ ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು’

‘ಕರಡನ್ನು ತಿದ್ದಿಕೊಟ್ಟರೆ,ತಪ್ಪುಗಳು ಇದ್ದ ಜಾಗದಲ್ಲಿನ ಮೊಳೆಗಳನ್ನು ತೆಗೆದು ಸರಿಯಾದ ಮೊಳೆಗಳನ್ನು ಹಾಕಿ, ಮುದ್ರಣ ಮಾಡಿ, ನಂತರ ಮೊಳೆಗಳನ್ನು ತೆಗೆದು ಕೇಸ್ ಗೆ ಹಾಕಿ, ಮತ್ತೆ 8, 16, 24 ಪುಟಗಳನ್ನು ಮೂರು ಚೆಸ್ ಗೆ ಮೊಳೆಗಳನ್ನು ಜೋಡಿಸಿ ಮತ್ತೆ ಕರಡು ತಿದ್ದಲು ಕೊಡಬೇಕಿತ್ತು, ಇದಕ್ಕೇ ಎಷ್ಟೋ ಸಮಯವಾಗಿ ಬಿಡುತ್ತಿತ್ತು. ಆನಂತರ, ಮುದ್ರಣವಾದ ಫಾರಂಗಳನ್ನು ಕೈಯಲ್ಲೇ ಮಡಚಿ, ಕೈಯಲ್ಲೇ ಹೊಲಿದು ಪುಸ್ತಕ ರೆಡಿ ಮಾಡಲು, ಹಲವು ತಿಂಗಳು ಕಳೆದುಹೋಗುತ್ತಿದ್ದವು. ಕರಡು ಸರಿಯಾಗಿ ತಿದ್ದದೆ, ಮುದ್ರಣ ದೋಷದಿಂದ ಆಗುತ್ತಿದ್ದ ಹಾಸ್ಯ ಪ್ರಸಂಗಗಳನ್ನು ದೇ. ಜ. ಗೌ ಅವರು ಹೇಳಿ ಎಲ್ಲರನ್ನೂ ನಗಿಸಿದರು.

ಅವತ್ತು ಸಂಜೆ, ಪುಸ್ತಕ ಲೋಕಾರ್ಪಣೆಯಾದ ಬಳಿಕ, ಅವರ ಭಾಷಣದಲ್ಲಿ, ಬೆಳಗ್ಗೆ ಮುದ್ರಣಾಲಯದಲ್ಲಿ ಆದ ಅನುಭವವನ್ನು ಉಲ್ಲೇಖಿಸಿದರು. ಪುಸ್ತಕ ಮುದ್ರಣದ ಕ್ವಾಲಿಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುದ್ರಣ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನದ ಸಾಧನೆಯನ್ನು ಹಾಡಿಹೊಗಳಿದರು.

‍ಲೇಖಕರು avadhi

April 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: