ನಾ ಮೊಗಸಾಲೆ ಹೊಸ ಕವಿತೆ- ಬಯಲು

ಡಾ ನಾ ಮೊಗಸಾಲೆ

ಇರಲಿಲ್ಲ ಇವನಂಥ ಭಕ್ತನಿನ್ನೊಬ್ಬನೆನುವಂತೆ
ಇದ್ದೆ ಇದ್ದನು ಕುಚೇಲ ಭಾಗವತನಾಗಿ
ತೆರೆದರೂ ಮುಚ್ಚಿದರು ಅವನ ಕಣ್ಣಿನ ಒಳಗೆ
ಕೃಷ್ಣನಿದ್ದನು ಅಶರೀರಿ ಸಶರೀರಿಯಾಗಿ

ತೀರ ಕಷ್ಟದ ಬದುಕು ಅನ್ನ ಬಟ್ಟೆಯೋ ಹರುಕು
ಮುರುಕೆನುವ ದಾರುಣತೆಯನ್ನು ಮೀರಿ
ನಿಂತವನು ಶ್ರೀಮಂತನೆನ್ನುವ ರೀತಿ
ಕೃಷ್ಣನಿಂದಾಚೆ ಯೋಚಿಸಲಾರನೆಂಬುದಾಗಿ

ಅದೊಂದು ದಿನ ಮನೆಯಲ್ಲಿ ಹಿಡಿಯಕ್ಕಿಯೂ ಇಲ್ಲ
ಎಂದಳವನಿಗೆ ಮಡದಿ ತುಸೂ ನೋಯದೇ
ಆದರೂ ಕೇಳಬೇಕಿನಿಸಿತವಳಿಗೆ ‘ನೀವು
ಹೋಗಿ ಬರಲೇ ಇಲ್ಲ ಯಾಕೆ ದ್ವಾರಕೆಗೆ?’

ಮೌನ ಮುಖದಲಿ ಕುಚೇಲ ಹೊರಗೆ ಭಿಕ್ಷೆಗೆ ಹೊರಟ
ಬೊಗಸೆಯಕ್ಕಿಯ ತಂದು ತುಟಿ ಬೊಗಸೆಯೊಡೆದು
ನಕ್ಕು ಹೇಳಿದ ‘ನಿನ್ನೆಗಿಂತ ಹೆಚ್ಚಿದೆ ಇಂದು
ಅಕ್ಕಿಯೊಂದೊಂದರಲಿ ಇರುವ ಶ್ರೀ ಹರಿಯು’

ಆ ರಾತ್ರೆ ಅವಳು ಗಂಡನ ನೀವಿ ಹೇಳಿದಳು
‘ನಿರೀಕ್ಷೆಯಲ್ಲಿರಲಾರನೇ ಕೃಷ್ಣ ನಿಮ್ಮನ್ನು?
ಹೋಗಬಾರದೆ ನೀವು? ಸುಮ್ಮನೆ ಬಂದೆ ಎನುವಂತೆ
ಆದರೂ ಕೊಡಬಹುದಾತ ಬಹುತ್ವವನ್ನು!’

ಹೊರಟು ನಿಂತನು ಕುಚೇಲ ಮುಷ್ಠಿಯವಲಕ್ಕಿಯನು
ಕಟ್ಟಿ ಎಲೆವಸ್ತ್ರದಲಿ ನಗುಮುಖವ ಹೊತ್ತು
ದೂರ ದಾರಿಯು ನಡೆದು ಬಂತು ಹತ್ತಿರವಾಗಿ
ಹೆಜ್ಜೆ ಇಟ್ಟಲ್ಲೆಲ್ಲ ಹೂ ತುಳಿದ ಅನುಭವವು!

ಕೃಷ್ಣ ಕಂಡನು ಕುಚೇಲನ ‘ಬಾರೊ ಬಾರೆಂ’ದು
ಬಿಗಿದಪ್ಪಿ ಪೂಸಿದ ಬೆನ್ನು ಸಮೇತ ತಲೆಯ
ಆಮೇಲೆ ಕೇಳಿದ ‘ಏನು ತಂದೆಯೊ ತಂದೆ?
ನಿನ್ನ ಕೈ ತುತ್ತಿನಲೆ ಈ ದಿನದ ಆಹಾರ!’

ಬೆಣ್ಣೆ ಕರಗುವ ಹಾಗೆ ಕರಗಿ ಹೇಳಿದ ಕುಚೇಲ
‘ಹಿಡಿಯವಲಕ್ಕಿ ತಂದಿರುವೆ, ಆ ಮೇಲೆ ನಿನ್ನ
ನಾಮದ ಗಂಟು ತಲೆ ಮೇಲೆ ಇದೆ. ಇಳಿಸಲಿಕೆ
ಇಳಿಸುವೆಯೊ, ಇಳಿಸಿದರೆ ಕೊಡುವೆನದರ’

ಕೃಷ್ಣ ನಕ್ಕನು ನವಿಲು ತುಟಿಯಲ್ಲಿ ಮೆಲ್ಲನೆ ತಿಂದು
ಅವಲಕ್ಕಿಯನು ಪ್ರೀತಿಯಿಂದ, ತೇಗುತ್ತ
ಕುಚೇಲನೆದೆಯಲಿ ಮಿಂಚು ಮಿಂಚಿ ಆಹಾ! ಎಂಬ
ಮಾತು ಹೊರಬಂತು ‘ನಾನೇ ಭಾಗ್ಯವಂತ!’

ಕೃಷ್ಣನಪ್ಪಿದ ಮತ್ತೆ ಮತ್ತೆ ಗೆಳೆಯನ ಒಪ್ಪಿ
‘ನಿನಗೆ ನೀನೇ ಸಾಟಿ’ಯೆಂದು ಉಪಚರಿಸಿ
ಕೊಡದೆ ಕಳುಹಿದ ಬರಿಗೈಯಲಿ. ಕುಚೇಲನೋ
ಮರಳಿ ಬಂದನು ಜಗವನ್ನೆ ಗೆದ್ದ ಖುಶಿಯಲ್ಲಿ

ಬಂದು ನಿಂತರೆ ಕುಚೇಲ ತನ್ನ ಮನೆ ಇದ್ದಲ್ಲಿ
ಕೃಷ್ಣನರಮನೆಯಂಥ ಮಹಲೆದ್ದಿದೆ
ತನ್ನ ಸಂಸಾರವೂ ಶ್ರೀಮಂತವಾಗಿದೆ, ಅದನು
ಹೇಳಬೇಕೆನುವಂತೆ ಊರೂ ಇದೆ.

ಬೆರಗಾದ ಆತ ದ್ವಾರಕೆಗೆ ಮುಖ ಮಾಡಿ
ನಿಂತು ಬೇಡಿದನು ‘ನಿನ್ನಿಂದ ನಾನಿದನು
ಬೇಡಲೇ ಇಲ್ಲ, ತಗೋ ನೀ ಕೊಟ್ಟ ವಸ್ತ್ರವಿಲಾಸ
ಬತ್ತಲಾಗದೆ ಬಯಲು ಸಿಗದಿಲ್ಲಿ ಭಕ್ತನಿಗೂ

‍ಲೇಖಕರು Admin

August 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: