ಗುಂಡುರಾವ್ ದೇಸಾಯಿ ಅವರ ಮಕ್ಕಳ ಕಥೆ- ಮಕ್ಕಳೇನು ಸಣ್ಣವರಲ್ಲ

ಗುಂಡುರಾವ್ ದೇಸಾಯಿ

ಶಾಲೆಯಲ್ಲಿ ಅಂದು ಯಾವುದೊ ಒತ್ತಡದ ಕೆಲಸದಲ್ಲಿದ್ದಾಗ ವಯಸ್ಸಾದ ಹೆಣ್ಣುಮಗಳು ಹತ್ತಾರು ದೊಡ್ಡ ಮಕ್ಕಳನ್ನು ಕರೆದುಕೊಂಡು ರಂಪ ಮಾಡುತ್ತ ಬಂದಳು. ಮೊದಲೆ ಹೆಡ್‌ಮಾಸ್ಟರ್ ಇರಲಿಲ್ಲ. ಅವರು ಇಲ್ಲದಾಗಲೆ ಇಂತಹ ಸಮಸ್ಯೆಗಳು ನನಗೆ ಕಾಡೋವು. ಹಿಂದೊಮ್ಮೆ ಬೇರೆ ಯಾವುದೆ ಶಾಲೆಯ ಮಕ್ಕಳು ಶಾಲೆಯ ಹಿಂದಿನ ಓಣಿಯಲ್ಲಿ ‘ಹೊರ ಮಲಗಿದ್ದ ಮುದುಕಿ ಮೇಲೆ ಕಲ್ಲು ಎತ್ತಿ ಹಾಕಿ ಹೋಗಿದ್ದರೂ..’ ‘ನಮ್ಮ ಶಾಲೆ ಮಕ್ಕಳು ಅವು’ ಎಂದು ಬಂದು ಕೆಲವರು ಜಗಳಾಡಿ ಹೋಗಿದ್ದರು. ಹಾಗೆ ಮಾಡಿದವರು ಬೇರೆಯವರು ಎಂದು ಗೊತ್ತಾದ ಮೇಲೆ ಕ್ಷಮೆ ಯಾಚಿಸಿ ಹೋಗಿದ್ದು ಬೇರೆ ಮಾತು.

ಈ ಸಾರಿ ಮತ್ತೇನು ಆಯ್ತಪ ಅಂತ ಭಯವಾಯಿತು. ಬಂದವರೆ ‘ನಾವು ಕಪಾಟು ಇಡೋಣ ಬ್ಯಾಡ್ರೀ ಸರಾ, ನಾವು ಎಲ್ಲಿಗೆ ಹೋಗೋಣ. ನಿಮ್ಮ ಹುಡುಗರ ಕಾಲಾಗ ಸಾಕುಸಾಕಾಗಿ ಹೋಗ್ಯಾದ. ಇವತ್ತು ಕಳುವು ಮಾಡ್ಯಾವ’ ಎಂದು ಕೂಗಲಾರಂಭಿಸಿದಳು. ‘ಏನಾಗ್ಯಾದಮ್ಮ?’ ಎಂದೆ. ಬೋರ್ ಹಾಕುತ್ತಿದ್ದ ಸೌಂಡು.. ಗಾಡಿ ಓಡಾಟ, ನೂರಾರು ಮಕ್ಕಳು ಜಮಾಯಿಸಿದ ಚೀರಾಟ. ಅಷ್ಟೋತ್ತನ ಏನು ಒದರಿದಳೊ ತಿಳಿಲಿಲ್ಲ. ಸಹೋದ್ಯೋಗಿಗಳು ಏನೋ ಹೇಳುತ್ತಿದ್ದುದು ಕಿವಿಗೆ ಬೀಳಲಿಲ್ಲ. ಆದರೆ ನನಗಂತೂ ‘ಹತ್ತು ಪಾಕೇಟ್ ಪಾರ್ಲೆ-ಜಿ’ ಕಳುವು ಮಾಡ್ಯಾರ ಅಂತ ಕೇಳಿದಂಗ ಆಯ್ತು.

ನಾನು ವಿಚಾರಸ್ತೀನಿ ಎಂದು ಆ ಗುಂಪನ್ನು ಸಮಾಧಾನಿಸಿ ಕಳಿಸಿದ ಎಲ್ಲಾರೂ ನಿಲ್ಲಿಸಿ ‘ಯರ‍್ಯಾರು ಹೋಗಿದ್ರಿ ರ‍್ಲೆ’ ಎಂದು ಕರೆದೆ. ‘ಇವರಿ ಹೋದವ’ ಅಂತ ಒಬ್ಬವ ಕೂಗಿದ. ಒಬ್ಬ ಸಿಕ್ಕ. ‘ನಾನಷ್ಟ ಅಲ್ಲ ಅವನು ಇದ್ದನರಿ’ ಅಂದ ಸಿಕ್ಕವ. ಮತ್ತೊಬ್ಬ ‘ಅವರಿಬ್ಬರೂ ಇದ್ರುರಿ’ ಓಡುತ್ತಿದ್ದ ಹುಡುಗರ ಕಡೆ ಬೆರಳು ತೋರಿಸಿದ. ಆರೇಳು ಮಂದಿ ಸಿಕ್ರು. ಏನೂ ಕೇಳದೆ ರೂಲ್ ಕಟ್ಟಿಗೆಯಿಂದ ಎಲ್ಲರಿಗೂ ಹೊಡೆದೆ. ‘ಬಿಸ್ಕೇಟ್ ಯಾಕ ಕದಿಯಾಕ ಹೋಗಿದ್ರೋ?’ ಅಂತ. ‘ಇಲ್ಲಾ ಸಾರ್ ನಾವು ಕದ್ದಿಲ್ಲ ಅಂತ’ ಎಲ್ಲಾ ಮಕ್ಕಳ ಉವಾಚ. ‘ಮತ್ಯಾಕ ಬಂದಳು ಆ ಅಜ್ಜಿ ಅಷ್ಟು ಮಂದಿನ ಕಟ್ಟಿಕ್ಕೊಂಡು. ಸುಳ್ಳು ಹೇಳತಿರಾ?’ ಅಂತ ಮತ್ತೆ ಹೊಡದೆ. ‘ಸಾರ್… ಏನೂ ಕಳುವು ಮಾಡಿಲ್ಲ’ ಅಂತ ಮತ್ತೆ ಒದರಿದವು. ಈಗ ಪಿತ್ತ ನೇತ್ತಿಗೇರಕತ್ತಿತ್ತು. ಮತ್ತೆ ಹೊಡೆಯಲು ಮುಂದಾದಾಗ ಮೇಡಂ ಒಬ್ಬರು ಅಡ್ಡ ಬಂದು ‘ಬಿಸ್ಕಟ್ ಕದ್ದಿಲ್ಲ ಏನೂ ಕದ್ದಿಲ್ಲ ಅವರು ಬಂದದ್ದೆ ಬೇರೆಯದಕ್ಕೆ, ನೀವು ತಿಳಿದುಕೊಂಡಿದ್ದು ಬೇರೆಯದಕ್ಕೆ’ ಅಂದ್ರು.

‘ಯಾವುದಕ್ಕೆ?’
‘ಪಾರಿವಾಳದ ಸಲುವಾಗ’
‘ಅವರು ಯಾಕೆ ಬಂದಿದ್ರು?’ ಎಂದೆ.
‘ಇವರು ನೋಡೋಕೆ ಹೋಗಿದ್ರು ಸರ್’
‘ನೋಡಿದ್ರ ಅವರು ಯಾಕೆ ಇಲ್ಲಿತನ ಬರಬೇಕು’
‘ಸರ್, ಕಳವು ಮಾಡಕ ಬಂದರ ಅಂತ ತಿಳುಕೊಂಡು ಚಾಡ ಹೇಳಾಕ ಬಂದರ‍್ರಿ’ ಎಂದ್ರು.
ತಲೆಬುಡ ಒಂದೂ ಅರ್ಥ ಆಗಲಿಲ್ಲ. ಅವರು ಮುಂದುವರೆದು ಇದಕ್ಕೆ ಸೂತ್ರಧಾರ ಇವನ ನೋಡಿ ಎಂದು ‘ನಾಗ’ ಎನ್ನುವವನ್ನು ತೋರಿಸಿ ‘ಸರ್… ಇವ ಮೊನ್ನೆ ವಿಜ್ಞಾನದಲ್ಲಿ ಜೀರ್ಣಾಂಗ ವ್ಯೂಹದ ಬಗ್ಗೆ ಪಾಠ ಮಾಡುವಾಗ ಪಾರಿವಾಳದದ್ದು ಹೀಗೆ ಇರುತ್ತಾ ಅಂತ ಕೇಳಿದ?’
‘ಹೌದು! ನೀವು ನನ್ನ ಕೇಳಿದ್ರಿ, ಪಾರಿವಾಳದ ಜೀರ್ಣಾಂಗ ವ್ಯವಸ್ಥೆ ಹೇಗಿರುತ್ತೆ? ಎಂದು’

‘ಹಾ. ಅದೆ ಸಾರ್. ನಾನು ವಿವರಿಸಿ ಹೇಳಿದೆ. ಆದರೆ ಇವರ ಅಕ್ಕ ಭೇಟಿಯಾದಾಗ ‘ನಾಗನ ಕಾಲಗ ಸಾಕಾಗೆದ್ರಿ. ಪಾರಿವಾಳ ಸಾಕ್ಯಾನ ಅದರ ಕಾಳಜಿ ಮಾಡಿಕೊಂಡು ಕೂತಾನ ಓದವಲ್ಲ ಏನು ಮಾಡವಲ್ಲ’ ಎಂದು ಹೇಳಿದಳು. ಇತ್ತೀಚಿಗೆ ಅದರ ಆಸೆಗೆ ಬಿದ್ದು ಸರಿಯಾಗಿ ಸಾಲಿಗೆ ಬರವಲ್ಲ ಎಂದು ಕಂಪ್ಲೇಂಟ್ ಮಾಡಿದ್ಲು’

ಮಕ್ಕಳು ಕಳವು ಮಾಡಿಲ್ಲ ಎಂದು ಗೊತ್ತಾಗಿ ‘ನಾಗ…. ಏನೊ ನೀನು ಸಾಲಿಗೆ ಬರವಲ್ಲಿ. ಮೊದಲಿನಂಗ ಇಲ್ಲ. ಹೌದು ಅಲ್ಲಿಗೆ ಏನು ಕಳವು ಮಾಡಕ ಹೋಗಿದ್ದೆʼ ಅಂದೆ.

‘ಇಲ್ಲ ಸಾರ್, ನಾನು ಎರಡು ಪಾರಿವಾಳ ಭಾರಿ ಸಾಕಿನಿ. ಚೆನ್ನಾಗಿ ಮೇದು ಗುಂಡಗುಂಡಗೆ ಇವೆ. ಅದರ ಮೇಲೆ ಅವರ ಕಣ್ಣು ಬಿದ್ದಾದ. ೮೦೦ರೂ ಕೊಡತಿನಿ ಕೊಡು ಅಂತ ಕೇಳಿದರು. ನಾನು ಕೊಡವಲ್ಲೆ’ ಎಂದ.

‘ಹಾಂ….! ಪಾರಿವಾಳ ಅಷ್ಟು ಬಾಳತಾವ?’
‘ಹೌದು ಸಾರ್ ಅದಕ ಡಿಮ್ಯಾಂಡು ಅದರಿ. ನನ್ನವು ಮೊದಲು ಒಂದಿತ್ತು. ಹೋದ ತಿಂಗಳ ಮಾನವಿಗೆ ಹೋಗಿ ಬಿಟ್ಟ ಬಂದೆ ಬರುವಾಗ ಇನ್ನೊಂದನ್ನು ಜೊತೆ ಮಾಡಿ ಕರಕೊಂಡು ಬಂತು’
‘ಅದೇಂಗಲೆ?’
‘ಸಾರ್ ನನ್ನದು ಗಂಡು ಜೊತಿಗೆ ಬಂದದ್ದು ಹೆಣ್ಣು. ಗಟ್ಟುಳ್ಳ ಗಂಡು ಅಥವಾ ಹೆಣ್ಣು ಪಾರಿವಾಳ ಹೀಂಗ ಮಾಡೋದುರಿ’ ಎಂದು ನಾಚುತ್ತ ಹೇಳಿದ.
‘ಅಲ್ಲೋ ಮಾನವಿ ಊರು ಎಲ್ಲೆ ಮಸ್ಕಿ ಎಲ್ಲೆ? ಹ್ಯಾಂಗ ಬಂದವು?’
‘ಇಲ್ಲ ಸಾರ್ ಗುರುತು ಆದ ಮೇಲೆ ಎಲ್ಲೇರ ಇದ್ರೂ ನಮ್ಮ ಮನಿಗೆ ಬರತಾವ. ಅವರೆಡು ಭಾರಿ ಜೋಡಿ ಅವ. ಅದಕರಿ ಅದರ ಮೇಲೆ ಕಣ್ಣು ಅವರಿಗೆ’
‘ಹೌದು ನೀನು ಹೋಗಿದ್ದು ಸರಿ. ಈ ಆರುಮಂದಿ ಅವನಿಂದ ಯಾಕ ಹೋಗಿದ್ರಿ?’ ಅಂದೆ.

‘ಸಾರ್…. ಅವರು ಪಾರಿವಾಳ ಸಾಕ್ಯಾರ’ಅಂದ.
‘ಹಾಂ……..!’
‘ಹೌದು ಸಾರ್. ಅವರು ಪಾರಿವಾಳಕ್ಕೆ ಒಳ್ಳೆ ಕಪಾಟು ಮಾಡಿದ್ರು ಅದನ್ನು ನೋಡಾಕ ಹೋಗಿದ್ವಿ ಅದರಂಗ ಮಾಡಬೇಕು ಅಂತ. ಆದರೆ ಆಕಿ ಹಿಂಗ ಅಪವಾದ ಕೊಟ್ಟಳು’
‘ಲೇ ನಿರುಪಾದಿ, ನೀನು ಈ ಊರವಲ್ಲ, ನಾಗರಬೆಂಚ್ಯಾವ. ನೀನು ಯಾಕಲೆ ಹೋಗಿದ್ದಿ?’ ಎಂದೆ
‘ಸಾರ್…….. ಅವನ ಎರಡು ಪಾರಿವಾಳ ನನ್ನತ್ರ ಬೆಳಸಾಕ ಕೊಟ್ಟಾನ್ರಿ’ ಎಂದ ನಾಗ ಅವನಿಗೆ ಮಾತಾಡಲು ಅವಕಾಶ ಕೊಡದೆ.
‘ಅವು ಎಲ್ಲಿಂದ ತಂದೆ?’ ಎಂದೆ
‘ಸಿನ್ನೂರಗ ಸರ್… ನಮ್ಮ ಮಾವ ಸಾಕಿದ್ದರಿ. ನನಗೆ ಎರಡು ಕೊಟ್ಟ. ನಮ್ಮಪ್ಪ ಬಯ್ಯತಾನ ಅಂತ ನಾಗನ ಕೈಯಾಗ ಬೆಳಸಾಕ ಕೊಟ್ಟಿನ್ರಿ’ ಎಂದ ನಿರುಪಾದಿ
‘ಹೌದು ಸಾಕುವ ನಿನಗೇನು ಲಾಭ?’
‘ಇಲ್ರಿ ಸರ್ ಅವು ಮರಿಹಾಕತಾವಲ್ರೀ ಅದರಾಗ ಎರಡು ನನಗರಿ….’ ಎಂದ ತಲೆತುರಿಸುತ್ತ.

‘ಅಲ್ಲೋ……… ಪಾರಿವಾಳನ್ನ ಏನು ಮಾಡತಾರಲೆ, ನಿಮಗ ಏನು ಸಿಗುತ್ತ?’ ಎಂದೆ
‘ಸರ್ ಜೂಜ ಆಡತಾರ ಸಾರ್. ನೂರು ಇನ್ನೂರ ಕಿ.ಮಿ ದೂರ ಹೋಗಿ ಬಿಟ್ಟುಬರತಾರ. ಯಾವುದು ಫಸ್ಟ ಬರುತ್ತೊ ಅವರು ಗೆದ್ದಂಗ’
‘ಅಲ್ಲ ಬರತಾವೇನೊ ಅವು?’
‘ಹಾಂ ಸಾರ್. ಇಲ್ಲಿ ಫೊನ್ ಮಾಡಿ ಹೇಳಿರತರಾ ಬಂದಕೂಡಲೆ ಇಲ್ಲಿ ಗುಡಿಮುಂದ ಬಂದು ಯಾವ ಪಾರಿವಾಳ ಕೂತಿರತದ ಅದು ಫಸ್ಟ. ಅವರದ್ದು ಗೆದ್ದಂಗ ಅಂತ’ ಎಂದ.

ಸ್ವಾರಸ್ಯ ಅನಸ್ತು. ‘ಮತ್ತೇನು ವಿಷಯ ಅದ ಪಾರಿವಾಳದ ಬಗ್ಗೆ? ಹೇಳ್ರಿ’ ಎಂದೆ.
‘ಸರ್. ಸ್ಪರ್ಧೆಗೆ ಬಿಟ್ಟಾಗ, ಅವು ಹಾರುವಾಗ ಬೇಕಂತಲೆ ನಡುವೆ ಹೆಣ್ಣು ಪಾರಿವಾಳನ ಬಿಡತಾರಿ. ಅದು ಊರಿಗೆ ಹೋಗೋದು ಬಿಟ್ಟು ಅಲ್ಲೆ ಇಳುಕೊಂಡು ಬಿಡುತ್ತ’ ಅಂತ ಮೋಸದ ರಹಸ್ಯ ತಿಳಿಸಿದ.
‘ಹಿಂಗೂ ಊಂಟಾ…?’
‘ಹೌದು ಸಾರ್’
‘ಹಾಗಾದ್ರೆ ನೀವು ಜೂಜಾಡತಿರೇನೊ’
‘ಇಲ್ಲಾ ಸಾರ್ ನಾವು ಬಡವರು. ಸಣ್ಣವರು. ಅಂತದೆಲ್ಲ ಆಡಲ್ಲ. ನಾವು ಪಾರಿವಾಳ ಸಾಕಿದ್ದರಿಂದ ಮನಿಗೆ ಸ್ವಲ್ಪ ಸಹಾಯ ಆಗ್ಯಾದ. ಆ ದುಡ್ಡನ್ನ ಮನೆಯವರಿಗೆ ಕೊಡತಿವಿ. ಮತ್ತೆ ಕೆಲವರಿಗೆ ಪಾರಸಿ ಅದೆ ಲಕ್ವಾ ಹೊಡದಿರುತ್ತಲ್ಲ ಸರ್ ಅವರಿಗೆ ಇದರ ರಕ್ತ ಹಚ್ಚತಾರ ಸಾರ್… ಅದು ಪವರ್ ಫುಲ್ ಔಷಧಿ’ ಎಂದು ಸುಮಾರು ಹೊತ್ತು ಪಾರಿವಾಳದ ವಿಸ್ಮಯ ಜಗತ್ತಿನ ಬಗ್ಗೆ ಹೇಳುತ್ತಾ ಹೋದಂತೆ ಅವರ ಮೇಲಿನ ಸಿಟ್ಟು ಕಡಿಮೆ ಆಯ್ತು. ‘ಅಲ್ಲೊ ಪಾರಿವಾಳ ಸಾಕ್ರಿ ತಪ್ಪಲ್ಲ ಆದರೆ ಅದರ ಹಿಂದೆ ಬಿದ್ದು ಅಭ್ಯಾಸ ಕಡಿಮೆ ಮಾಡಬೇಡಿ’

‘ಆಯ್ತು ಸರ್’
ಬೆರಿಕಿ ಅಲ್ಲದ ಹುಡುಗ ನನ್ನ ಹೊಡೆತ ತಿಂದು ಅಳುತ್ತ ಮೂಲೆಯಲ್ಲಿ ಕುಳಿತಿದ್ದ. ‘ಅಲ್ರೋ…. ನಿಮ್ಮ ಕ್ಲಾಸ ಅಲ್ಲ, ಊರಿನವನಲ್ಲ. ಇವ ಯಾಕ ನಿಮ್ಮಿಂದ ಬಂದಿದ್ದ’ ಎಂದೆ.

ʼಸಾರ್ ಅವನು ಊರಾಗ ಹದಿನೆಂಟು ಪಾರಿವಾಳ ಸಾಕ್ಯಾನ್ರಿ?ʼ
‘ಏನೋ ?’ಎಂದೆ
‘ಹೌದು ಸಾರ್… ನಾನು ನನ್ನ ಅಣ್ಣ ಸೇರಿ ಹದಿನೆಂಟು ಪಾರಿವಾಳ ಸಾಕಿವಿ, ಗಿಳಿ, ನವಿಲು ಅವರಿ’ ಅಂದ ನೋವಿನಲ್ಲು ಕಣ್ಣುವರೆಸಿಕೊಳ್ಳುತ್ತ.
ಅಂತೂ ಎಲ್ಲಾ ಕಳ್ಳರೆ. ಹಾಗಾಗಿ ನಿಮ್ಮ ಯೋಚನೆಗಳು ಕೂಡ್ಯಾವ ಅನಕೊಂಡೆ.

‘ಏನೆ ಆಗಲಿ, ಸಾಕಿ. ಅದು ಒಂದು ಹವ್ಯಾಸ ಆದರೆ ಶಾಲಿ ಕೆಲಸ ಕಡಿಮೆ ಮಾಡಬಾರದು’ ಎಂದೆ

‘ಆಯ್ತು ಸರ್….’ ಎಂದ್ರು ನಗುತ್ತಾ
‘ಒಂದು ವಿನಂತಿ ಸಾರ್, ನಾಳೆ ಝಾಂಡಕ್ಕ ಪಾರಿವಾಳ ತಂದು ಹಾರಸ್ತಿವಿರಿ ನೀವು ಒಪ್ಪಿಗೆ ಕೊಡಬೇಕು’ ಎಂದು ಕಣ್ಣರಳಿಸಿ ಕೇಳಿದ್ರು.
ನಾನು ಸಮ್ಮತಿಸಿದೆ.

ಝಾಂಡದ ದಿನ ಚಂದದ ಯೂನಿಫಾರಂ ಜೊತೆ ಎರಡು ಪಾರಿವಾಳ ಹಿಡುಕೊಂಡು ಬಂದಿದ್ರು ಖುಷಿಯಿಂದ ಮಕ್ಕಳೆಲ್ಲರಿಗೂ ತೋರಿಸಿದ್ರು. ಭುಜದ ಮೇಲಿಟ್ಟುಕೊಂಡು ಕುಣಿದರು. ನಮಗೂ ಹಿಡಿದುಕೊಳ್ಳಲು ಕೊಟ್ಟರು. ಝಾಂಡ ಹಾರುವಾಗ ಅದನ್ನು ಹಾರಿಸಿ ‘ಬೊಲೊ ಭಾರತ ಮಾತಾಕಿ ಜೈ’ ಎಂದ್ರು. ಅವರ ಕಣ್ಣುಗಳು ಅರಳಿದ್ದವು.

‍ಲೇಖಕರು Admin

August 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ರಮ್ಯವಾಗಿದೆ. ಅಸಲಿಯತ್ತು ಕತೆ.
    ಮಕ್ಕಳಗ ಹೊಡೆಯೋದು ಬ್ಯಾಡಪಾ ಅನ್ನೋದೊಂದು ಮಾತು ಕೊನ್ಯಾಗ ಬಂದು, ಮಕ್ಕಳ ಹತ್ತಿರ, ‘ಸಾರಿ ಕಣ್ರೀ’ ಅಂದಿದ್ರೆ ನನ್ನ ಕಣ್ಣಾಗ ಒಂದು ಹನಿ ಇಳಿದು ಖುಷಿಯಾಗ್ತಿತ್ತು.
    ಆಗ್ಲಿ, ಮಾಸ್ತರ ಮಕ್ಕಳಿಗೆ ಮೊದಲು ಮಾತಾಡಾಕ ಬಿಟ್ಟಿದ ಛಲೋದಿತ್ತು ನೋಡ್ರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: