ರಾಜು ಹೆಗಡೆ ಓದಿದ ‘ಗೋಪಿ ಮತ್ತು ಗಾಂಡಲೀನ’

ರಾಜು ಹೆಗಡೆ

(ಬಿ. ಆರ್. ಲಕ್ಷ್ಮಣರಾವ್ ಅವರ ‘ಗೋಪಿ ಮತ್ತು ಗಾಂಡಲೀನ’
ಕವನ ಸಂಕಲನ ಪ್ರಕಟವಾಗಿ ಐವತ್ತು ವರ್ಷವಾದ ಸಂದರ್ಭಕ್ಕೆ ಬರೆದ ಬರಹ)

ಈಗ ಸುಮಾರು ಐವತ್ತು ವರ್ಷಗಳ ಹಿಂದೆ ನಾವೆಲ್ಲ ಹುಡುಗರು, ದೈಹಿಕವಾಗಿ ಬೆಳೆಯುತ್ತಿರುವ ಹುಡುಗರು! ಮಧ್ಯಮವರ್ಗ ಎನ್ನುತ್ತಾರಲ್ಲ, ಅಂತ ಹಿನ್ನೆಲೆಯಿಂದ ಬಂದವರು. ಹೊರಗೆ ಬಹಳ ಅಪ್ಪಂಥವರ ಹಾಗೆ ‘ಗನಾ ಮಾಣಿ’ ಎಂದು ಕರೆಸಿಕೊಳ್ಳಲು ಬಯಸುವ, ಹಾಗೇಯೇ ಇರಲು ಚಡಪಡಿಸುತ್ತಿರುವ ಹುಡುಗರು. ಮಡಿ ಮೈಲಿಗೆ, ನೀತಿ ಅನೀತಿ ಎನ್ನುವುದರಲ್ಲಿ ಎಲ್ಲರೂ ಹೇಳುವುದನ್ನೇ ನಂಬಿದವರು. ಆದರೆ ಇದು ಅದಲ್ಲ, ಇದು ಸ್ವಲ್ಪ ಹೌದಾದರೂ ಮನುಷ್ಯರಿಗೆ ಹೀಗಿರಲು ಆಗುವುದಿಲ್ಲ ಎನ್ನುವುದನ್ನು ಅಸ್ಪಷ್ಟವಾಗಿ ಕಾಣುತ್ತಿದ್ದವರು.

ಆ ಟೈಮಲ್ಲಿ ಈ ‘ಗೋಪಿ…..ʼ ಸಿಕ್ಕಿದ! ಆಗಲೇ ನಾವು ಅಡಿಗರ ‘ಚಂಡೆ ಮದ್ದಲೆ’ ಕೇಳುತ್ತಾ, ಶರ್ಮರ ‘ಏಳು ಸುತ್ತಿನ ಕೋಟೆ’ಯನ್ನು ಭೇದಿಸಲಾಗದೆ ಒಂದು ನಮೂನೆ ಕಂಗಾಲಾಗಿದ್ದೆವು! ಅದರೂ ಅದರ ಭಾರವನ್ನು ಹೊತ್ತು ಆನಂದಿಸುತ್ತಿದ್ದವರು. ಆ ಅಂಥಾ ವೇಳೆಯಲ್ಲಿ ‘ಗಾಂಡಲೀನ’ ಎದುರಾದರೆ ಬಿಡಲಾಗುತ್ತದೆಯೇ!! ಮುನ್ನುಡಿಯಲ್ಲಿ ಲಂಕೇಶರೂ ಈ ದಾರಿಯನ್ನು ಹೊಗುವ ಬಗೆ ಹೇಗೆ ಎನ್ನುವುದನ್ನು ಹೆಗಲ ಮೇಲೆ ಕೈ ಇಟ್ಟು ಹೇಳಿದ್ದರು.

ಹಾಗೆಂದು ಇದು ಬರೀ ಅದೇ ಎಂದು ಹೇಳುವಂತಿಲ್ಲ. ಮೊದಲ ಕವನವನ್ನೇ ನೋಡಿ, ‘ನಾನು’ ಏನು ಎನ್ನುವುದನ್ನು, ಎತ್ತ ಕಡೆಗೆ ಪಯಣ ಎನ್ನುವುದನ್ನು ಹಗುರವಾಗಿ, ಆದರೆ ನಿಖರವಾಗಿ ಹೇಳುತ್ತದೆ;

‘ನಾನು ಕ್ರಮ
ವಾಗಿ ಪಂಚೇಂದ್ರಿಯ,
ಹೃದಯ.
ಮಿದುಳು
ಗಳ ದಾಸ.
ಈ ವ್ಯಾಸ
ದಲ್ಲೇ ನನ್ನ
ಭಾರತ, ಕುರುಕ್ಷೇತ್ರ
ಕರ್ಮಯೋಗ,
ವಿಶ್ವರೂಪ ದರ್ಶನ,
ಮುಕ್ತಿ.’

ಎಲ್ಲ ಇದ್ದರೂ, ಎಲ್ಲೇ ಬಿದ್ದರೂ ಅವರ ಲಕ್ಷ್ಯ ರಾಮಾಯಣವಲ್ಲ, ಭಾರತ, ಕರ್ಮಯೋಗ, ವಿಶ್ವರೂಪ ದರ್ಶನ, ಮುಕ್ತಿ. ಈ ಕವಿತೆಯ ನಂತರ ಒಂದೊಂದಾಗಿ ತೆರೆಯುತ್ತ ಹೋಗುತ್ತದೆ.

ಮೊದಲು ಸಿಗುವವನು ‘ಅಪ್ಪ’. ಪ್ರಶ್ನಾರ್ಥಕ, ಆಶ್ಚರ್ಯ ಸೂಚಕ ಚಿಹ್ನೆ ಇರುವ ಅಪ್ಪ! ತಂದೆ ತಾಯಿ ಎಂದ ಕೂಡಲೇ ನಾವು ದೇವರು, ದೇವತೆ ಎಂದೆಲ್ಲ ಹೇಳುತ್ತೇವೆ ಬಾಯಲ್ಲಿ. ನಿಜವಾಗಿ ಹಾಗೆಲ್ಲ ಇರುವುದಿಲ್ಲ. ಅವರ ಬಗ್ಗೆ ಆದರ, ಗೌರವ ಎಲ್ಲ ಒಳಗೆ ಇದ್ದರೂ, ಅಪ್ಪನಾದರೂ ಮನುಷ್ಯ, ಅಮ್ಮನಾದರೂ… ಹೀಗಿರುವಾಗ, ಸತ್ಯವನ್ನು ಮುಚ್ಚಿಟ್ಟು ಬಣ್ಣ ಬೆಡಗೆಗಳಿಂದ ಆ ಸಂಬಂಧವನ್ನು, ಅನುಭವವನ್ನು ಮುಚ್ಚಿಹಾಕುವುದು ತರವೇ. ಲಕ್ಷ್ಮಣರಾಯರು ಹಾಗೆಲ್ಲ ಹೇಳುವುದಿಲ್ಲ. ಇರುವುದೆಲ್ಲವ ಬಿಟ್ಟು, ಉಹುಂ, ಅದೆಲ್ಲಾ ಆಗುವುದಿಲ್ಲ, ಇಲ್ಲದಿರುವುದರ ಕಡೆಗೆ ತುಡಿದರೂ.

ಅವರ ಅಪ್ಪ ಹೀಗೆ;
‘….ನನಗಿಂತ ಕೊಚ ದಪ್ಪ, ಕೊಂಚ ಕುಳ್ಳ,
ದರ್ಪವೋ ಬೇಕಾದಷ್ಟು:ತನ್ನ ಜಾತಿ, ವಯಸ್ಸು, ಪರಿಶುದ್ಧತೆಯ ಬಗ್ಗೆ;
ಆದರೆ ವ್ಯವಹಾರಕ್ಕೆ ಬಂದಿರೋ ಸಕಥ್ ಸುಳ್ಳ.’

ಅಮ್ಮನ ಕುರಿತು ಇಷ್ಟಿಲ್ಲ!
‘ನಾನು’ ಅವಳ ಗಾಳಕ್ಕೆ ಸಿಕ್ಕ ಮೀನಾದರೂ, ಗುಮ್ಮನ ಹಾಗೆ ಕಾಡುವ ಅವಳ ಕಂಡರೆ ರೇಗಬೇಕನಿಸುತ್ತದೆ…

ಇವರಿಂದ ತಪ್ಪಿಸಿಕೊಂಡೋ ಒಪ್ಪಿಸಿಕೊಂಡೋ ಮುಂದಿಣುಕಿದರೆ ಕಾಣುತ್ತಾಳೆ;

‘ಬಾವಿ ಕಟ್ಟೆಯ ಮೇಲೆ ಕೂತ ವಾಸಂತಿ
ಎಂತ ಸುಂದರ ಅಂತಿ!’
ಕವನದ ನಾಯಕನ ‘ಭಾವಿ’ ಕಟ್ಟೆಯ ಮೇಲೂ ಕುಂತಳೆ ಈ ಶಕುಂತಳೆ!

ನಂತರ ‘ಪ್ರೇಮ ಗೀಮ….’ ಎಲ್ಲಾ ಶುರು. ಅದು ಲೈಲಾ ಮಜ್ನು, ಶಿವ ಪಾರ್ವತಿ, ರತಿ ಮನ್ಮಥರ ಥರದ್ದಲ್ಲ, ನನ್ನಂಥವರಿಗೆಲ್ಲ ಇರುವ ಸಹಜ ರೀತಿಯದು;

‘ಹುಡುಗಿ,
ಮುದ್ದು ಮುದ್ದಾಗಿ,
ಕ್ಲೀಷೆ ತುಂಬಿದ ಭಾಷೆಯಲ್ಲಿ,
ಪ್ರೇಮ ಗೀಮ ಮದುವೆ ಗಿದುವೆ ಇತ್ಯಾದಿ….
ಪೆದ್ದು ಪ್ರಶ್ನೆಗಳನ್ನೇ ಗುದ್ದಬೇಡ;
ವ್ಯಥಾ ಸದ್ದು ಬೇಡ’

ಒಳಗೆ ಹಾಗಿಲ್ಲದೇ ಕಂಡಕಂಡವರಿಗೆಲ್ಲ ಅಕ್ಕ, ತಂಗಿ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳುವಂತವರಲ್ಲ ಬಿ.ಆರ್.ರು. ಅನುಭವಕ್ಕೆ, ಅನಿಸಿಕೆಗೆ ಪ್ರಾಮಾಣಿಕರಾಗಿದ್ದವರು. ಆ ಕಾರಣದಿಂದಲೂ ಅವರ ಕವಿತೆ ನನಗೆ ತಟ್ಟುತ್ತದೆ. ಬೂದಿಯನ್ನು ಹಾರಿಸಿ ಹೂವಿನ ಕೆಂಡವನ್ನು ಕಾಣಿಸುತ್ತದೆ. ಆದರೆ ನಾವು ಇಂಥ ಹುಸಿ ಹೊದ್ದವರ ನಡುವೆಯೇ ಇರಬೇಕಾಗಿದೆ.

‘ವಿಜ್ಞಾನ’ ಕವಿತೆಯಲ್ಲಿ ಒಂದು ಮರ ಬರುತ್ತದೆ. ಇದು ‘ಬೇರುಸತ್ತೀ ಮರ’ವಲ್ಲ, ಬೇರಿರುವ ಮರ. ಹರವಾಗಿ ಬೆಳೆದ ಮರ. ಆದರೆ ಹೀಗೆ ಬೆಳೆದದ್ದರಿಂದಲೊ ಏನೋ ಅದರ ಬೇರುಗಳು ಹತ್ತಿರದಲ್ಲಿದ್ದ ಮನೆಯ, ಮನವ ಅಲ್ಲಾಡಿಸಿದೆ. ಈ ಮರವ ಇಡಲೂ ಆಗುತ್ತಿಲ್ಲ, ಕಡಿಯಲೂ ಆಗುತ್ತಿಲ್ಲ.

‘ಆದ್ದರಿಂದ ಈಗೇನು ಮಾಡೋಣ?
ಗಪಗಪ ಬಾಳು ಮುಕ್ಕೋಣ.’
(ಇದನ್ನು ಮತ್ತೆ ವಿವರಿಸುವುದು ಬೇಡ. ಇದು ಗೊತ್ತಾಗದಿರುವಷ್ಟು ದಡ್ಡರಲ್ಲ ಓದುಗರು!)
ಇದೆಲ್ಲ ಸರಿ, ಈ ಕವಿಯ ‘ಉರಿ’ಯೇ ಬೇರೆ!

‘ಪ್ರಿಯೆ, ಕಿತ್ತೊಗೆಯೆ ಮುಖವಾಡ
ಈ ಪೆದ್ದು ಗತ್ತೆಲ್ಲ ನನ್ನ ಬಳಿ ಬೇಡ’
ಎನ್ನುತ್ತಲೇ ಇದಕ್ಕೆ ನಮಗಾಪ್ತವಾದ ಪರಿಹಾರ ಹೇಳುತ್ತಾರೆ!

‘ಉರಿ ಉರಿ ಎಂದು ಖುಷಿಗೆ ನೀನು ಚೀರಬೇಕು;
ಆಗ ಗೀರಿ ನನ್ನ ಬೆಂಕಿ ಕಡ್ಡಿ ನಿನ್ನ ಮದ್ದಮೇಲೆ,
ಚರ‍್ರೆಂದು ಉರಿದು, ಹರಿದು, ಹಬ್ಬಿ ಧಗಧಗ ಜ್ವಾಲೆ,
ನಿನ್ನ ತಬ್ಬಿ, ಉರಿವ ಕೊಳ್ಳಿ ಮಾಡಿ ತೀರಬೇಕು.’

ಕವಿತೆಯನ್ನೇ ಹೇಳುತ್ತ ಹೋದರೆ ಸಾಕು, ಅದರ ವಿವರಣೆ ಕೊಡುವುದಕ್ಕಿಂತ ಎಂದನಿಸುತ್ತಿದೆ.
ಮೇಲಿನ ಹಾಗೆ ಕವಿ ಹೇಳುತ್ತಿರುವುದಕ್ಕೆ ಅವನದೇ ಆದ ಕಾರಣವಿದೆ;
‘ಅಗೆದದ್ದು, ಬಗೆದ್ದು, ಬಾಳನ್ನು ಸಿಗಿದಿದ್ದು,
ಶೂನ್ಯವನು ಜಗಿದದ್ದು, ಸಾಕು;
ಬಿಚ್ಚಿದ್ದು, ಬೆಚ್ಚಿದ್ದು, ಹೊಸದೆಂದು ಕೊಚ್ಚಿದ್ದು,
ಎಲ್ಲರನ್ನೂ ಚುಚ್ಚಿದ್ದು, ಸಾಕು’

ಕವಿಯ ತಳಮಳ ಹುಟ್ಟಿದ್ದು;

‘ಅಗೆದಾಗ ನಕ್ಕದ್ದು ಈಷ್ಟುದ್ದ ಬಂಡೆ;
ಗುದ್ದಲಿಯ ಕೆಲಸ ಅಲ್ಲಿಗೆ ನಿಂತಿದೆ…
ಅಪ್ಪನ ಗಂಟೆ ಗಣಗಣಾನ್ನುತ್ತೆ
ದೇವರ ಮನೇಲಿ;
ನನ್ನ ಮಂಡೆ ಭಣಭಣಾನ್ನುತ್ತೆ
ಶೂನ್ಯದ ಕೊನೇಲಿ’
ಈ ಇಂಥ ಕಾರಣಗಳಿಂದ ದೂರವಾಗಲು ಕ್ಯಾಬರೆಗೆ ಹೋದರೆ ಅಲ್ಲಿ ‘ಗಾಂಡಲೀನ’. ಅವಳನ್ನು ನೋಡದಿರುವುದು ಹೇಗೆ ಮತ್ತು ನೋಡುವುದು ಹೇಗೆ! ಮೊದಲೇ ಹೆಣ್ಣು ಹೆಂಡಾದಿಗಳಿಂದ ದೂರವಿದ್ದ ಗೃಹಸ್ಥ, ಸದ್ಗಹಸ್ಥ ಇವನು, ಗೋಪಿ! ಆದರೆ ‘ಅವಳೇ ಬಂದು ಹಂಡೆಹೊಟ್ಟೆಯ ಸವರಿ, ತೊಂಡೆ ತುಟಿಗಳನ್ನು ಚುಂಬಿಸಿದಾಗ…..ಹಾ ವೆಂಕಟಲಕ್ಷ್ಮೀ ಎಂದು ಧರ್ಮಪತ್ನಿಯ ನೆನೆದ ಪರನಾರೀ ಸಹೋದರ…’ ಮುಂದಿನದನ್ನು ಹೇಗೆ ಹೇಳಲಿ!

‘ಅವನೇ ಅಡ್ಡ ಬಿದ್ದನೋ, ಅಥವಾ ಜಾರಿ ಬಿದ್ದನೋ’ ಇಲ್ಲಿ ಕೇವಲ ಕಾಮ ಪ್ರಚೋದಕತೆ ಇದೆ ಎಂದು ತಿಳಿಯಬೇಕಾಗಿಲ್ಲ. ಆ ಒಂದು ಕಾವ್ಯ ವಸ್ತುವಿನ ಮೂಲಕ ಅವರು ತಮ್ಮ ಕಾಲದ, ನಮ್ಮಂತವರ ಮನಸ್ಸಿನ ಸಂಕಟಗಳನ್ನು, ಸಂಘರ್ಷವನ್ನು ಹೇಳುತ್ತಾರೆ. ಇನ್ನು ಬಹಳ ಮಂದಿ ಇಷ್ಟಪಟ್ಟ ‘ಫೋಟೋಗ್ರಾಫರರ’ ಪದ್ಯದ ಬಗ್ಗೆ ಹೇಳಿ ಎಂಡ್ ಮಾಡುತ್ತೇನೆ.

ತೇಜಸ್ವಿಯವರು ತಮ್ಮ ‘ಅಬಚೂರಿನ ಫೋಸ್ಟ್ ಆಫೀಸ್’ ಕತಾಸಂಕಲನದಲ್ಲಿ ಈ ಅರ್ಥದ ಮಾತು ಹೇಳಿದ ನೆನಪು: ‘ಈ ಫೋಟೋಗ್ರಾಫಿಯಿಂದ ನನಗೆ ಬರಹದಲ್ಲಿ ಒಂದು ಸನ್ನಿವೇಶವನ್ನು ಹಿಡಿದಿಡುವುದು ಹೇಗೆಂದು ಗೊತ್ತಾಯಿತು’ ಎಂದು. ಲಕ್ಷ್ಮಣರಾವ್ ಅವರ ಕವಿತೆಯ ಶಿಲ್ಪ ಕೂಡ ಹೀಗೆಯೇ ಮೂಡಿಬಂದಂತಿದೆ. ಇವರಿಗೂ ಫೋಟೋಗ್ರಫಿಯ ಹಿನ್ನೆಲೆ ಇದೆ. ಈ ಪದ್ಯದಲ್ಲಿ, ಕವನದ ನಾಯಕ ಒಂದು ನಮೂನೆಯಯ ನಿರಾಸಕ್ತಿಯ ಆಸಕ್ತಿಯಿಂದ (ಹೆಣ್ಣಿನ ಸಂದರ್ಭವನ್ನು ಬಿಟ್ಟು!) ಫೋಟೋಗ್ರಫಿಯನ್ನು ಮಾಡುತ್ತಿರುವಂತಿದೆ.

ನಂತರ, ಮದುವೆ ಮನೆಯ ಚಿತ್ರಗಳೆಲ್ಲ ಅಚ್ಚುಕಟ್ಟಾಗಿ ಬಂದಿವೆ. ಆದರೆ, ಕವಿತೆ ಓದಿದವರಿಗೆಲ್ಲ ಗೊತ್ತಿದೆ, ಕೊನೆಯಲ್ಲಿ ಅವನಲ್ಲಿ ಇರುವುದು ಬರೀ ನೆಗೆಟೀವ್ ಫೋಟೋಗಳು ಮಾತ್ರ. ಇದು ಎಲ್ಲವನ್ನೂ ಸಾಧಿಸಿದ, ಸಾಧಿಸದಿರುವವರಿಗೂ ಬರಬಹುದಾದ ಒಂದು ಮನಸ್ಥಿತಿ. ಈ ಸ್ಥಿತಿಯನ್ನು ಕವಿತೆ ಯಶಸ್ವಿಯಾಗಿ ಎನ್ನುತ್ತಾರಲ್ಲ, ಹಾಗೆ ಹಿಡಿದಿಟ್ಟಿದೆ. ಇದರ ಜೊತೆಗೆ, ‘ಹಿನ್ನೋಟದ ಕನ್ನಡಿ’ಯಲ್ಲಿ ಎಚ್.ಎಸ್.ವೆಂಕಟೇಶ ಮೂರ್ತಿಯವರು ಹೇಳಿರುವಂತೆ, ‘…..ಬಿಆರ್‌ಎಲ್ ಒಳ್ಳೆಯ ಕಸುಬುದಾರ ಕವಿಯಾದ್ದರಿಂದ ಅವರ ಕಾವ್ಯದಲ್ಲಿಕಲೆಗಾರಿಕೆಗೆ ಯಾವತ್ತೂ ಲೋಪ ಬರಲಾರದು. ಉಸಿರಿಗೆ ತಕ್ಕ ಏರಿಳಿತವುಳ್ಳ ಅಕೃತ್ರಿಮ ಲಯ, ಕ್ಲೀಷೆಗೆ ನಾಚುವ ಭಾಷೆಯ ಗರಿಮುರಿ ಬಳಕೆ, ಒಟ್ಟಾರೆ ಕಾವ್ಯ ಶಿಲ್ಪದ ಬಗ್ಗೆ ರಾಜಿಯಾಗದ ಕಾಳಜಿ, ಹೊಚ್ಚ ಹೊಸ ರೂಪಕಗಳನ್ನು ಓದುಗರು ಬೆರಗಾಗುವಂತೆ ಕಾಣುವ ಕಾಣಿಸುವ ಪರಿಣತಿ ಮತ್ತು ಪ್ರತಿಭೆ, ತನ್ನದೇ ಸ್ವಯಾರ್ಜಿತ ಜೀವನ ನೋಟ-ಇವೆಲ್ಲವೂ ಬಿಆರ್‌ಎಲ್ ಅವರಿಗೆ ಉಂಟು…..’

ಈ ಗೋಪಿಗೆ ಗಾಂಡಲೀನರಿಗೆ ಐವತ್ತು ವಸಂತವಾದರೂ (ಇದು ಪಕ್ಕಾ ವಸಂತವೇ!) ಹಳತಾಗಿದೆ ಎಂದು ಅನಿಸುವುದಿಲ್ಲ. ಹೀಗೇಯೇ ಲಕ್ಷ್ಮಣರಾವ್ ಕೂಡ. ನವನವ ‘ಉನ್ಮೇಶಶಾಲಿ’ಯಾಗಿ ‘ಉಲ್ಲೇಖಿ’ಸುತ್ತಿದ್ದಾರೆ.

ಇರಲಿ ಅವರು ಹೀಗೇ ಮತ್ತು ಹಾಗೇ….!

‍ಲೇಖಕರು Admin

August 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. SHRIDHAR B.NAYAK

    ರಾಜು ಎಷ್ಟು ಅದ್ಭುತವಾಗಿ ಬರೆದಿದ್ದಿರಿ.ನಿಮ್ಮ ಈ ರೀತಿಯ ಬರಹವನ್ನು ಮೊದಲಬಾರಿ ಓದಿದೆ.ಹೀಗೆ ಬರೆಯುತ್ತಲೇ ಇರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: