ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಮೊಗಸಾಲೆ ಅವರ ಹೊಸ ಕವಿತೆಗಳು

ಡಾ ನಾ ಮೊಗಸಾಲೆ

  • ಶಬರಿ

ವಿಂದ್ಯಾಟವಿಯಲಿ ಇದ್ದಳು ಶಬರಿ
ರಾಮನ ಕನಸೇ ಮರವಾಗಿ
ಮರದಲ್ಲರಳಿದ್ದವು ಹೂಗಳು
ರಾಮ ನಾಮವೇ ಜೇನಾಗಿ

ಸುತ್ತುಮುತ್ತಲನು ನೋಡುತ್ತಿದ್ದಳು
ಬಂದನೆ? ಬರುವನೆ ಶ್ರೀರಾಮ?
ಕಾಣದೆ ರಾಮಗೆ ನಿಟ್ಟುಸಿರಿಡುವಳು
ಅಯ್ಯೋ! ಬರಡಾಯಿತು ಜನುಮ

ಮರಗಿಡಗಳ ಎಲೆ ಅಲುಗಾಡಲು, ಅವು
ರಾಮನ ನೋಡಿರಬಹುದೆಂದು
ಕಾಮನಬಿಲ್ಲನು ನೋಡಿ ಕುಣಿಯುವ
ಮಗು ಮನಸಿನ ಒಳತೂರುವಳು

ಮೃಗ ಪಕ್ಷಿಗಳು ಸುಳಿದಾಡಿದರಾಕಡೆ
ರಾಮನೆ ಬಂದಿರಬಹುದೆಂದು
‘ನನ್ನೊಡೆಯನೆ ಬಂದೆಯ’ ಎನುವಳು
ಸೊಂಟದ ನೋವಿದ್ದರು ಎದ್ದು

ಆ ಬೆಳಗಿನ ಕನಸಲಿ ಅವಳಿಗೆ
ಶ್ರೀರಾಮನು ಲಕ್ಷ್ಮಣಸಹಿತ
ಬರುವುದು ಕಂಡಂತಾಯಿತು ತಕ್ಷಣ
ಎದ್ದಳು ರಾಮನ ಜಪಿಸುತ್ತ

ನಿತ್ಯ ವಿಧಿಗಳ ತೀರಿಸಿ ಕೊಯ್ದಳು
ಅನೇಕ ಮರಗಿಡಗಳ ಹಣ್ಣು
ಆರಿಸಿಕೊಡಬೇಕೆನ್ನುತ ಮುದತಳೆದಳು
ಕಣ್ಣನ್ನೂ ಹಣ್ಣಾಗಿಸಿ ನಿಂತು

ರಾಮ ಬಂದನು ಶಬರಿಯ ಮನೆಗೆ
ಮೊಗ್ಗು ಅರಳಿ ಹೂಬಿರಿದಂತೆ
ಅಪ್ಪಿ ಹಿಡಿದನು ಶಬರಿಯ, ತಾನು
ಕೌಸಲ್ಯೆಯ ಬಳಿಯಲಿ ಇರುವಂತೆ

ಶಬರಿ ಪೂಸಿದಳು ರಾಮನ ಮೈಮನ
ಸುಗಳನು ಪ್ರೀತಿಯ ಕೈಯಿಂದ
ಕಣ್ಣುಗಳಾದುವು ಬೆಳಗಿನ ಮಂಜು
ಗರಿಕೆಯ ಮೇಲಿಂದಿಳಿವಂಥ

ಎತ್ತಿ ತಂದಳು ಹಣ್ಣಿನ ಬುಟ್ಟಿಯ
ಆರಿಸಿಕೊಡಲಿಕೆ ಹಣ್ಣುಗಳ
ಕಚ್ಚಿ ನೋಡಿ, ಸವಿ ಇರುವುದನೆತ್ತಿ
ಕೊಟ್ಟಳು ‘ತಿನ್ನು ನೀ’ನೆನ್ನುತ್ತ

ರಾಮನು ಕೌಸಲ್ಯೆಯ ಕೈತುತ್ತು
ನೆನಪಿಸಿ ತಿಂದನು ಮೈಮರೆತು
ಹೇಳಿದ ಶಬರಿಗೆ ‘ತುಂಬಿತು ಹೊಟ್ಟೆ
ತಿನ್ನಲೆ ಇಲ್ಲ ಇಂಥದ್ದು’

ಶಬರಿಯ ಕಣ್ಣಿನ ಹೊರಪರೆ ಹರಿದು
ಶ್ರೀರಾಮನು ಕಂಡನು ಹರಿಯಾಗಿ
ಒಳಗಣ್ಣಲಿ ಸಾರ್ಥಕ್ಯದ ಸವಿ ಹುಟ್ಟಿ
ಹೊರಗಣ್ಣಲಿ ಹರಿಯಿತು ನದಿಯಾಗಿ


ಕವಿ ಮತ್ತು ಕಾಗೆ

ನಾವು ಏಳುವ ಮೊದಲೆ ಬರುವುದೀ ಕಾಗೆಯ ಬಳಗ
ಹಂಚಿಕೊಳ್ಳಲು ಸಿಕ್ಕಿದ್ದನ್ನು ನಮಗಿಂತ ಹೆಚ್ಚು
ನೋಡುತಿದ್ದರೆ ಯಾಕೊ ನನ್ನೊಳಗೆ ಇರುವುದ ತೊಳೆಯ
ಲಾರೆದಾಗಿದ್ದೇನೊ ನಾನೆಂಬ ಅಳುಕು!

ಒಮ್ಮೆ ಕೇಳಿದೆ ಇವಳ ‘ಹಾಕಬಹುದಲ್ಲವೆ ಅನ್ನ
ದಗುಳ ಪ್ರತಿನಿತ್ಯ! ಪಿತೃಶ್ರಾದ್ಧದಂದು ಮಾತ್ರ
ಯಾಕೆ?’ ಹೇಳಿದಳು ‘ಹಾಕುವೆನು ಪ್ರತಿನಿತ್ಯ
ಪರಿಹಾರವಾಗಲಿ ದೋಷ ನಮಗಿರುವುದೆಲ್ಲ’

ಸುಮ್ಮನೆ ಕರೆದೆ ಕೈಯಲಿ ತಿಂಡಿಯನ್ನಿಟ್ಟೊಮ್ಮೆ
ಎತ್ತಿಕೊಳಬೇಕೆಂದುಕೊಂಡೊಂದರ
ದೂರದಲಿ ನಿಂತ ಅದು ಕೊರಳು ಕೊಂಕಿಸಿ ನೋಡಿ
ಕುಪ್ಪಳಿಸಿ ಹಾರಿ ಹೋಯಿತು ನನ್ನಿಂದ ದೂರ

ಆ ರಾತ್ರೆ ಕನಸಿನಲಿ ನನ್ನ ದುಃಖವನ್ನೆಲ್ಲ
ಗಂಟು ಕಟ್ಟಿಟ್ಟುಕೊಂಡಂತೆ ತನ್ನ ತಲೆಯಲ್ಲಿ
ಹಾರಿಹೋಗುತ್ತಿತ್ತೊಂದು ಕಾಗೆ ಬುದ್ಧಗಯಾಕ್ಕೆ
‘ಅರೆ, ಪಿತೃವೆ ಇದು ನನ್ನ?’ ಎಂದರೆ, ಎಚ್ಚರಾದೆ!

‍ಲೇಖಕರು Avadhi

5 June, 2021

1 Comment

  1. km vasundhara

    ಚೆಂದದ ಕವಿತೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading