ಕೋವಿಡ್ ಕಾಲದ ಕಥೆಗಳು ಕ್ರೋನ ಮಾರಮ್ಮ

ಶರತ್ ಪಿ ಕೆ

ಶನಿವಾರ ಸರಿಸುಮಾರು ರಾತ್ರಿ 2.20ರ ಸಮಯ, ಮಗ್ಗೆಗೆ ಹೋಗುವ ಗುಂಡಿ ಬಿದ್ದಿರುವ ಮುಖ್ಯರಸ್ತೆಯಿಂದ ಬಲಕ್ಕಿರುವ ಬಿಳಿಗರಹಳ್ಳಿಯ ಇಳಿಜಾರಿನ ಕಚ್ಛಾರಸ್ತೆಯಲ್ಲಿ, ಬಿಳಿ ಬನಿಯನ್ ಹಾಗೂ ಹರಿದ ಪಂಚೆಯನ್ನು ಕೈಯಲಿಡಿದುಕೊಂಡು, ಲೋಕೇಶಗೌಡರ ತೋಟವನ್ನು ದಾಟಿ ಓಡುತ್ತಾ ಬಂದು, ಮನೆಯ ಹಿಂಭಾಗದ ಕೊಟ್ಟಿಗೆಯ ಬಾಗಿಲಿನಿಂದ ಒಳ ನುಗ್ಗಿದವನೇ ಸಿದಾ ಬಚ್ಚಲು ಮನೆಗೆ ಹೋಗಿ ಏದುಸಿರು ಬಿಡುತ್ತಾ ಕೂತುಬಿಟ್ಟ ನಿಂಗಪ್ಪ.

ಬನಿಯನ್, ಪಂಚೆಯನ್ನು ಬಾಗಿಲ ಬಳಿ ಸುತ್ತಿ ಎಸೆದ ಒಳಚಡ್ಡಿ ಮಾತ್ರ ಅವನ ಮೈ ಮೇಲಿತ್ತು. ಮೈ ಕೈ ಎಲ್ಲಾ ಕಾಫಿಗಿಡಗಳ, ಬೇಲಿ ಮುಳ್ಳುಗಳ, ಪುಳ್ಳೆಗಳಿಂದ ತರಚಿ ರಕ್ತ ಸುರಿಯುತ್ತಿತ್ತು. ಓಡುವ ಬರದಲ್ಲಿ ಆ ರಾತ್ರಿಯ ಗೌಗತ್ತಲಲ್ಲಿ ರಸ್ತೆಯ ಗುಂಡಿಗಳು ಸರಿಯಾಗಿ ಕಾಣದೇ, ಊರಿದ ಕಾಲು ಕುಸಿದಂತಾಗಿ ಒಂದೆರೆಡು ಕಡೆ ದಡಾರನೆ ಬಿದ್ದಿದ್ದರ ಪರಿಣಾಮ ಮಂಡಿಯ ಚರ್ಮ ಕಿತ್ತು ಅಂಗೈಗಳು ಉಜ್ಜಿಹೋಗಿದ್ದವು.

ಸ್ವಲ್ಪ ಸಮಯ ಅಲ್ಲೇ ಕೂತು, ನಿದ್ದೆ ಬಂದು‌ ತೂಕಡಿಸಿದವನು, ಸೊಳ್ಳೆಗಳು ನುಡಿಸುತ್ತಿದ್ದ ವೀಣೆಯಂತ ಶಬ್ದಕ್ಕೆ ಎಚ್ಚರವಾದ. ಬೆರಳುಗಳಿಗೆ ಅಂಟಿದ್ದ ಆಡಿನ ರಕ್ತ, ಹಣೆ, ಮುಖ ಹಾಗೂ ಎದೆಯ ಮೇಲೆಲ್ಲಾ ಚಲ್ಲಿದ್ದ ಅರಿಶಿಣ ಕುಂಕುಮವನ್ನೆಲ್ಲಾ, ಹಂಡೆಯಲ್ಲಿ ಹೆಂಡತಿಯು ಕಾಯಿಸಿದ್ದ ಬಿಸಿ ನೀರಿನಲ್ಲಿ ತೊಳೆಯುತ್ತಾ ಕೂತವನೇ.. ಜಿರೋ ಕ್ಯಾಂಡಲ್ ಬಲ್ಬಿನ ಬೆಳಕಲ್ಲಿ ಕಾಲಿಗೆ ಮೆತ್ತಿದ್ದ ಮಣ್ಣು, ಅರಶಿಣ, ಕುಂಕುಮ ಹಾಗೂ ಮೇಕೆಯ ರಕ್ತದ ಜೊತೆಗೆ ತನ್ನ ಗಾಯದ ರಕ್ತವೂ ಬೆರಕೆಕೆಯಾಗಿ ಕಡು ಕಂದು ಬಣ್ಣದ ನೀರು ಬಚ್ಚಲು ತುಂಬ ಹರಿಯುತ್ತಿರುವುದನ್ನು ಕಂಡು ತನ್ನ ಬಗ್ಗೆ ತನಗೇ ಅಹಸ್ಯವಾಯಿತು. ಬುಳುಬುಳುನೆ ನೀರು‌ ಹೊಯ್ದುಕೊಂಡು ಬಚ್ಚಲು ಮನೆಯಲ್ಲೇ ನೇತುಹಾಕಿದ್ದ ಬಟ್ಟೆಗಳನ್ನು ತೊಟ್ಟು ಮಲಗಲು ಕೋಣೆಗೆ ಹೋದ.

*****

ಚನ್ನಾಪುರ, ಬಿಳಿಗರಹಳ್ಳಿ ದಾಟಿದ ಮೇಲೆ ಮಗ್ಗೆ ಸಿಗುತ್ತದೆ. ಮಗ್ಗೆಗೆ ಹೋಗುವ ಬಸ್ ಚನ್ನಾಪುರದಲ್ಲೇ ನಿಲ್ಲಿಸುತ್ತದೆ. ಬಿಳಿಗರಹಳ್ಳಿಗೆ ನಿಲುಗಡೆ ಇರಲಿಲ್ಲ. ಬಿಳಿಗರ ಹಳ್ಳಿಯ ಜನ ಚನ್ನಾಪುರದಲ್ಲೇ ಇಳಿದು ಮೂರು ಕಿ.ಮೀ ನಡೆದೇ ಬಿಳಿಗರಹಳ್ಳಿಗೆ ಹೋಗಬೇಕು.

ನಿಂಗಪ್ಪ ಬಿಳಿಗರಹಳ್ಳಿಯೆಂಬ ಮೂವತ್ತು ಮನೆಗಳಿರುವ ಚಿಕ್ಕ ಊರಿನ ಮಧ್ಯಮವರ್ಗದ ರೈತ. ಒಂದು ಎಕರೆ ಗದ್ದೆ, ಇಪ್ಪತ್ತು ಗುಂಟೆ ಹೊಲ ಇದ್ದು,‌ ಮಲೆನಾಡಿನಲ್ಲಿ ಮಳೆಜಾಸ್ತಿ ಇದ್ದುದ್ದರಿಂದ ಭತ್ತವನ್ನು ವರ್ಷಕ್ಕೊಮ್ಮೆ ಬೆಳೆಯುತ್ತಿದ್ದ. ಅವನು ಬೆಳೆಯುತ್ತಿದ್ದ ಎನ್ನುವುದಕ್ಕಿಂದ ಅವನ ಹೆಂಡತಿ ಬೆಳೆಯುತ್ತಿದ್ದಳು ಅನ್ನಬಹುದು. ಇನ್ನು ಹೊಲದಲ್ಲಿ‌ ಏನೂ ಬೆಳೆಯದೇ ಪಾಳು ಬಿಟ್ಟಿದ್ದ. ಬೆಳೆದದ್ದು ಮನೆಯಲ್ಲಿ ತಿನ್ನಲಷ್ಟೇ ಸಾಕಾಗುತ್ತಿದ್ದು. ಉಳಿದ ದಿನಗಳಲ್ಲಿ ಅವನು ಪಕ್ಕದ ಊರಿನ ಲೋಕೇಶಗೌಡರ ಕಾಫಿ ತೋಟಕ್ಕೆ ಕೂಲಿಗೆ ಹೋಗುತ್ತಿದ್ದ.

ಬಿಳಿಗರಹಳ್ಳಿಯ ಅಣ್ಣಪ್ಪಗೌಡರ ಮಗ ನಿಂಗಪ್ಪ. ನಿಂಗಪ್ಪನ ಮಡದಿ ಭಾಗೀರಥಿ. ಕೊಡ್ಲಿಪೇಟೆಯ ಸಾಹುಕಾರನ ತುಂಬು ಕುಟುಂಬದ ಮಗಳು ಭಾಗೀರಥಿ. ಭಾಗೀರಥಿಯ ಮನೆ ಕಡೆಯವರು ಅನುಕೂಲರಸ್ಥರಾಗಿದ್ದರು. ಭಾಗೀರಥಿ ಈ ಹೆಡಬಿಡಂಗಿ ನಿಂಗಪ್ಪನ ಮಡದಿಯಾಗಿದ್ದು ಸಾಮಾಜಿಕ ದುರಂತವೇ ಸರಿ.

ಅಣ್ಣಪ್ಪಗೌಡರು ರಾಯರಕೊಪ್ಪಲಿನ ಹೈಸ್ಕೂಲಿನಲ್ಲಿ ವಿಜ್ಞಾನದ ಮಾಸ್ತರ್ ಆಗಿದ್ದವರು. ಆದರ್ಶ ವ್ಯಕ್ತಿ. ಹೈಸ್ಕೂಲ್ ಹುಡುಗರ ಮನಸಿಗೆ ತಾಕುವಂತೆ ವಿಜ್ಞಾನದ ಪಾಠಗಳನ್ನು ಮಾಡುತ್ತಾ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುತ್ತಾ ಮತ್ತು ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಾ ನೈತಿಕಪ್ರಜ್ಞೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಣ್ಣಪ್ಪಗೌಡರಿಗೆ ವಂಶಪಾರಂಪರ್ಯವಾಗಿ ಬಂದಿದ್ದಷ್ಟೇ ಭೂಮಿ ಇತ್ತು, ದುಡಿಮೆಯಿಂದ ಭೂಮಿ‌ ಹೆಚ್ಚು ಮಾಡದಿದ್ದರೂ ಇದ್ದಿದ್ದನ್ನು ಕಳೆಯಲಿಲ್ಲ.

ಸುತ್ತಮುತ್ತಲಿನ ಹತ್ತು ಹಳ್ಳಿಯಲ್ಲೂ ಒಳ್ಳೆ ಹೆಸರು ಇದ್ದುದರಿಂದ ಹಾಗೂ ಮಾಸ್ತರ್ ಆಗಿದ್ದರಿಂದ ಅಪಾರ ಗೌರವನ್ನು ಅಣ್ಣಪ್ಪಗೌಡರು ಗಳಿಸಿದ್ದರು ಹಾಗೂ ತಮ್ಮ ಸೌಜನ್ಯಯುತ ನಡವಳಿಕೆಯಿಂದ ಹೆಸರನ್ನು ಉಳಿಸಿಕೊಂಡಿದ್ದರು.

ಹಾಗಾಗಿ ನಿಂಗಪ್ಪನಿಗೆ ಮದುವೆ ವಯಸ್ಸು ಆದಾಗ ಕೊಡ್ಲಿಪೇಟೆಯ ದೊಡ್ಡ ಜನ ಅವನ ಯೋಗ್ಯತೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೇ ಅವರ ತಂದೆಯಾದ ಅಣ್ಣಪ್ಪಗೌಡರ ವ್ಯಕ್ತಿತ್ವಕ್ಕೆ ತಲೆಬಾಗಿ ಮಗಳನ್ನು ಅದ್ದೂರಿಯಾಗಿ ಧಾರೆ ಎರೆದಿದ್ದರು.

ನಂತರದ ದಿನಗಳಲ್ಲಿ ತಿಳಿದುಬಂದ ಸಂಗತಿ ಎಂದರೇ, ಅಣ್ಣಪ್ಪಗೌಡರ ಮಗ ನಿಂಗಪ್ಪ ಬೇಜವಾಬ್ದಾರಿ ಮನುಷ್ಯನಾಗಿದ್ದು, ಯಾವುದನ್ನೂ ಸರಿಯಾಗಿ ಮಾಡದ ಅರ್ಧಂಬರ್ಧ ಗಿರಾಕಿ ಎಂಬುದು. ಕಾಲೇಜಿಗೆ ಹೋಗುವುದಾಗಿ ಅರ್ಧಕ್ಕೆ ಬಿಟ್ಟು ಬಂದು ಮನೆಯಲ್ಲಿ ಕೂತು ಅಪ್ಪನ ದುಡಿಮೆಯಲ್ಲಿ ಉಣ್ಣುತ್ತಿದ್ದವನು. ಅಣ್ಣಪ್ಪಗೌಡರು ತೀರಿಹೋದ ನಂತರ ಕುಡುಕನೂ ಆಗಿದ್ದನು.

ನಿಂಗಪ್ಪನ ಬಾಲಲೀಲೆಗಳು ಒಂದೆರೆಡಿರಲಿಲ್ಲ. ಅವುಗಳಲ್ಲಿ ಒಂದೆರೆಡನ್ನು ಹೇಳಬೇಕೆಂದರೇ, ಊರ ಸಾಹುಕಾರನ ಪೇಟೇ ನಾಯಿಯ ಬೆನ್ನಿಗೆ ಕಲ್ಲುಕಟ್ಟಿ ಕೆರೆಗೆ ಎಸೆದದ್ದು, ಮೂದೇವಿ ಎಂದು ಮೂದಲಿಸಿದ ಹೈ ಸ್ಕೂಲ್ ಮಾಸ್ತರ ಮುಖಕ್ಕೆ ಕಳ್ಳಿ ಹಾಲು ಎರಚಿದ್ದು, ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಕರಿಸದ ಚನ್ನಾಪುರದ ಚಂದ್ರನು ಕೂರುವ ಬೆಂಜಿನ ಮೇಲೆ, ಅಂಡಿಗೆ ಚುಚ್ಚುವಂತೆ  ಕೈವಾರ ಇಟ್ಟದ್ದು.. ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ.

ಇಂತಹ ದೂರುಗಳನ್ನೆಲ್ಲಾ ಅಣ್ಣಪ್ಪಗೌಡರು ಬಳಿ ಹೇಳಲು ಬಂದಾಗ ಅಣ್ಣಪ್ಪಗೌಡರು ಅಕ್ಷರಶಃ ಕುಸಿದುಹೋಗುತ್ತಿದ್ದರು. ಎಷ್ಟೇ ತಿದ್ದಲು ಯತ್ನಿಸಿದರೂ ಸಾಧ್ಯವಾಗದೇ… ಪೂರ್ವ ಜನ್ಮದ ಪಾಪದ ಫಲವೇ ಇದು! ಎಂದು ಸುಮ್ಮನಾಗುತ್ತಿದ್ದರು.

ಹೀಗಿರುವಾಗ‌ ತಾಳ್ಮೆಯ ಸಾಕಾರ ಮೂರ್ತಿಯಂತಿದ್ದ ಭಾಗೀರಥಿ ಬಾಳಿನಲ್ಲಿ ಬಂದ್ದದ್ದೆಲ್ಲಾ ಹಣೆಬರಹವೇ ಎಂದು‌ ನಿಂಗಪ್ಪನ್ನನ್ನು ಇದ್ದಂತೆ ಸ್ವೀಕರಿಸಿ ತನ್ನ ಬಾಳ ತೇರನ್ನು ನಿಂಗಪ್ಪನೊಂದಿಗೆ ಎಳೆಯಲು‌ ಶುರು ಮಾಡಿದಳು. ಅಣ್ಣಪ್ಪಗೌಡರು ಕಾಲವಾದ ನಂತರ ಮನೆಯ ಪೂರ್ಣ ಜವಾಬ್ದಾರಿ ಬಾಗೀರಥಿಯದ್ದೆ ಆಗಿತ್ತು. ಇರುವ ಕಡಿಮೆ ಭೂಮಿಯನ್ನು ಹದ ಮಾಡಿ ಬೆಳೆ ಬೆಳೆಯಲು ಬಿಳಿಗರ ಹಳ್ಳಿಯ ಕಡಿಮೆ ಜನಸಂಖ್ಯೆಯಲ್ಲಿಯ ಜನರ ವಿಶ್ಬಾಸವನ್ನೇ ಗಳಿಸಿ ಗದ್ದೆ, ಹೊಲಗಳ ಕೆಲಸವನ್ನು ಮಾಡಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಳು. ಹಾಗೂ ತನಗೆ ಸಹಾಯ ಮಾಡಿದವ ಅಕ್ಕಪಕ್ಕದವರ ಮನೆಯ ಗದ್ದೆ ಕೆಲಸಗಳಿಗೆ ತಾನೂ ಸಹಾಯ ಮಾಡಲು ಹೋಗುತ್ತಿದ್ದಳು.

ಕಾಲ ಕಳೆದಂತೆ ಈ ದಂಪತಿಗೆ ದಿನೇಶ ಹುಟ್ಟಿದ. ಹೇಗೋ ಬೆಳೆದು ದೊಡ್ಡವನಾದ. ದಿನೇಶನಿಗೆ ತನ್ನ ತತನಾದ ಅಣ್ಣಪ್ಪಗೌಡರ ಗುಣಗಳು ಸಾಕಷ್ಟು ಇದ್ದವು. ಓದುವುದರಲ್ಲಿ ಮುಂದಿದ್ದು, ಪ್ರಶ್ನೆ ಮಾಡದೇ ಏನನ್ನೂ ಒಪ್ಪದ ಜಾಣನಾಗಿದ್ದ. ದಿನೇಶನೂ ವಿಜ್ಞಾನದ ವಿದ್ಯಾರ್ಥಿಯಾಗಿ ಆಲೂರಿನ ಡಿಗ್ರಿ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದ. ಕೆಲಕಾಲ ಆಲೂರಿನ ಪಿ.ಯು.ಸಿ. ಕಾಲೇಜಿನಲ್ಲೇ ಕೆಲಸ ಮಾಡಿ ನಂತರದ ದಿನಗಳಲ್ಲಿ ಮೈಸೂರಿನ ಯಾವುದೋ ಪ್ರತಿಷ್ಠಿತ ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಅನುಭವ ಹೆಚ್ಚಾದಂತೆ ಸಂಬಳವೂ ಹೆಚ್ಚಾಯ್ತು.

ದಿನೇಶ ದುಡಿಯುವ ಹಾಗೆ ಆದಮೇಲೆ ಮನೆಯನ್ನು ಸುಧಾರಿಸಿದ. ಹಳೇ ಮನೆಯನ್ನು ರಿಪೇರಿ ಕೆಲಸ ಮಾಡಿಸಿ ಸುಣ್ಣ ಬಣ್ಣ ಮಾಡಿಸಿ ಭಾಗೀರಥಿ ಗೆ ಒಂದಿಷ್ಟು ಚಿನ್ನ ಮಾಡಿಸಿಕೊಟ್ಟಿದ್ದ. ಮನೆಗೆ ಕಲ್ಲರ್ ಟಿ.ವಿಯನ್ನೂ ತಂದು ಡಿಷ್ ಹಾಕಿಸಿಕೊಟ್ಟಿದ್ದ. ಊರಿಗೆ ಬಂದಾಗಗಲೆಲ್ಲಾ ಅಮ್ಮ ಅಪ್ಪನ್ನನ್ಮು ಚನ್ನಾಗಿ ನೋಡಿಕೊಂಡು, ಹೆಡಬಿಡಂಗಿ ಅಪ್ಪನಿಂದ ಏನೂ ತೊಂದರೆ ಆಗದಂತೆ ಹೇಗೆ ನಿರ್ವಹಣೆ ಮಾಡಬೇಕು ಎಂದು ಅಮ್ಮನಿಗೆ ಹೇಳಿಕೊಡುತ್ತಿದ್ದ.

ವಯಸ್ಸಾದಂತೆ ನಿಂಗಪ್ಪ ಸ್ವಲ್ಪ ಸೋತವನಂತೆ ಕಂಡರೂ, ಅವನ ಒಳಗಿದ್ದ ವಿಚಿತ್ರ ವ್ಯಕ್ತಿತ್ವ ತನ್ನ ಇರುವಿಕೆಯನ್ನು ಸಾಬೀತುಪಡಿಸಲು ಆಗಾಗ ಏನಾದರೊಂದು ಚಮತ್ಕಾರಗಳನ್ನು ಮಾಡುತ್ತಲೇ ಇತ್ತು.

ಸೈಕಲ್ ಕಲಿಯಲು ಯತ್ನಿಸುತ್ತಿದ್ದ ಕೇರಿಯ ಹುಡುಗನ ಅಂಗಿ ಬಿಚ್ಚಿ, ಅವನನ್ನು ಅವನದೇ ಸೈಕಲ್ಗೆ ಅಂಗಿಯಿಂದ ಕಟ್ಟಿ ಇಳಿಜಾರಿನ ಪ್ರದೇಶದಲ್ಲಿ ನೂಕಿಬಿಡುವುದು, ಊರ ಕೆರೆಯಲ್ಲಿ ಬಟ್ಟೆ ಹೊಗೆಯುವ ಕಲ್ಲಿನ ಕೆಳಗೆ ಚೇಳುಗಳನ್ನು ತಂದು ಬಿಡುವುದು. ಊರಿನ ಮನೆಗಳ ಹೊರ ಬಾಗಿಲಿನ ಬಲ್ಬ್ಗಳನ್ನು ರಾತ್ರಿ ಕದ್ದು ಬಿಚ್ಚಿ, ಮಗ್ಗೆಯಲ್ಲಿ ಮಾರಿಬಿಡುವುದು, ಹೀಗೆ ಅವನ ಸಾಹಸಗಾಥೆಗಳಿಂದ ಅವನು ಊರಿನಲ್ಲಿ ದಂತಕಥೆಯೇ ಆಗಿದ್ದ‌. ವಿಜ್ಞಾನದ ಮಾಸ್ತರರ ಹೊಟ್ಟೆಯಲ್ಲಿ ಹೇಗೆ ಈ ಅಜ್ಞಾನಿ ಹುಟ್ಟಿದ ಎಂದು ಊರ ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಬಾಗೀರಥಿಯ ಮುಖ ನೋಡಿ ನಿಂಗಪ್ಪನ್ನು ಸುಮ್ಮನೆ ಬಿಟ್ಟಿದ್ದರು.

ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಸೊಂಕು ಜಾಸ್ತಿಯಾಗಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಮಗ್ಗೆಯಲ್ಲಿ ಎಲ್ಲಾ ವಹಿವಾಟುಗಳು ಬಂದ್ ಆಗಿದ್ದವು. ಹಾಗಾಗಿ ಜನರ ಓಡಾಟಕ್ಕೆ ಕಡಿವಾಣಬಿದ್ದಿತ್ತು. ನಿಂಗಪ್ಪನಿಗೂ ಮನೆವಾಸ ಖಾಯಂ ಆಗಿತ್ತು. ಅಲ್ಲಿ ಇಲ್ಲಿ ಎಲ್ಲೋ ಕದ್ದು ಮುಚ್ಚಿ ಪೇಟೆಯಲ್ಲಿ ಜನ ಓಡಾಡುತ್ತಿದ್ದರಷ್ಟೇ. ಹಳ್ಳಿಯಲ್ಲಿ ಎಲ್ಲಾ ಮನೆಯಲ್ಲೇ ಇದ್ದದ್ದನ್ನು ಬೇಯಿಸಿಕೊಂಡು ಮನೆಯಲ್ಲೇ ಇದ್ದರು.

ಹೀಗೆ ಒಂದು ದಿನ ಟಿ.ವಿ.ಯಲ್ಲಿ ಬೆಳಗ್ಗೆ ಜೋತಿಷ್ಯ ಕಾರ್ಯಕ್ರಮವನ್ನು ನೋಡುತ್ತಾ ಕೂತ. ಬೆಳ್ಳಂಬೆಳಗ್ಗೆಯೇ ಇಂತಹ ಕಾರ್ಯಕ್ರಮಗಳು ಶುರುವಾದರೇ ಒಂದೊಂದು ಚಾನಲ್ನಲ್ಲಿ ಒಂದೊಂದು ರೀತಿಯ, ಬಗೆ ಬಗೆಯ ಜೋತಿಷ್ಯ ಕಾರ್ಯಕ್ರಮಗಳು ಮೂಡಿಬರುತ್ತಿದ್ದವು.  

ನಾನು ಅಂದ್ರೆ ನಂಬರು, ನಂಬರು ಅಂದ್ರೆ ನಾನು, ಬಹಳ ವಿಶೇಷವಾಗಿ ಜ್ವರ, ಮೊಸರನ್ನ ತಿನ್ರೋ ಮುಂಡೇವಾ,

ಹೀಗೆ ಚಿತ್ರ ವಿಚಿತ್ರ ಸಿನಿಮೀಯ ಡೈಲಾಗ್ ಗಳನ್ನು ಹೊಡೆಯುತ್ತಾ ವಿಕಾರವಾಗಿ ವೇಷಗಳನ್ನು, ಕೈಯಲ್ಲಿ ಷಣ್ಮುಖನ ಆಯುಧವನ್ನು, ರಟ್ಟೆ ಸೊಂಟ, ತಲೆಗೆಲ್ಲಾ ಬೆಳ್ಳಿಯವೋ ಚಿನ್ನದವೋ ಹಾವು ಹಲ್ಲಿಗಳ ಆಭರಣಗಳನ್ನು ಧರಿಸಿಕೊಂಡು ಬಂದು ಭವಿಷ್ಯ ಹೇಳುವುದಾಗಿ ಕೂರುತ್ತಿದ್ದ ಜೋತಿಷಿಗಳ ಬಗ್ಗೆ ನಿಂಗಪ್ಪನಿಗೆ ಭಯಂಕರ ಆಸಕ್ತಿ ಬಂತು.

ಚಾನೆಲ್ ಬದಲಿಸಿದಂತೆಲ್ಲಾ ಬಗೆ ಬಗೆಯ ಜೋತಿಷ್ಯದ ಕಾರ್ಯಕ್ರಮಗಳನ್ನು, ಒಂದಾದರೊಂದು ಚಾನೆಲ್ಗಳಲ್ಲಿ, ದಿನವೀಡಿ ಬರುವುದನ್ನು ಕಂಡು‌ ಹುಚ್ಚನಂತಾದ. ಅವರುಗಳು ಸತ್ಯದ ತಲೆಯ ಮೇಲೆ ಹೊಡೆದಂತೆ, ಖಂಡಾತುಂಡವಾಗಿ ಹೇಳುವುದನೆಲ್ಲಾ ನೋಡಿ ಇವನಿಗೆ ಬ್ರಹ್ಮಾಂಡವೇ ಅಲ್ಲಾಡಿದ ಅನುಭವವಾಗತೊಡಗಿತು.

ಒಂದು ಚಾನೆಲ್ನಲ್ಲಿ ಒಬ್ಬ ದಢೂತಿ ಜ್ಯೋತಿಷಿಯೊಬ್ಬ ಹೇಳಿದ್ದನ್ನೂ ಕೇಳುತ್ತಾ… ಇದನ್ನು ನಾನು ಮಾಡೇ ತಿರುತ್ತೇನೆ. ಈ ಸಮಸ್ತ ಬಿಳಿಗರಹಳ್ಳಿ ಜನಕ್ಕೆ ನಾನು ಏನು ಎಂದು ತೋರಿಸುತ್ತೇನೆ, ಎಂದು‌ ಎದ್ದು ನಿಂತ.

ರಾತ್ರಿ ಬರುವುದು ತಡವಾಗುವುದಾಗಿ ಭಾಗೀರಥಿಗೆ ತಿಳಿಸಿ, ಬಚ್ಚಲ ಹಂಡೆಗೆ ಉರಿ ಹಾಕಲು ಹೇಳಿ, ಇವತ್ತೊಂದು ಪೂಜೆ ಇದೆ ಎಂದು ಪೂಜೆ ಸಾಮಾನುಗಳ ಜೊತೆ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಡನ್ನು ಅಟ್ಟಿಕೊಂಡು ಮನೆಬಿಟ್ಟಿ.

******

ಶನಿವಾರ ಅಮಾವಾಸ್ಯೆಯ ರಾತ್ರಿ 12ಗಂಟೆ ಆಗುವ ಹೊತ್ತಿಗೆ ಮಗ್ಗೆಯ ಮಂತ್ರವಾದಿ ಎರಡು ಕುಕ್ಕೆಗಳಲ್ಲಿ ಏನೋ ವಸ್ತುಗಳನ್ನು ಹೊತ್ತು ತಂದಿದ್ದ. ಬಿಳಿಗರಹಳ್ಳಿಯ ಮುಖ್ಯದಾರದಲ್ಲೇ ಪೂಜೆ ಮಾಡಿಕೊಡುವುದಾಗಿ ಹಾಗೂ ಸಮಯಕ್ಕೆ ಸರಿಯಾಗಿ ಹಾಜರಾಗಲು ನಿಂಗಪ್ಪನಿಗೆ ತಿಳಿಸಿದ್ದ.

ಬಿಳಿಗರಹಳ್ಳಿಯ ರಸ್ತೆಯ ಪ್ರವೇಶದ್ವಾರದಲ್ಲಿ ಮಂತ್ರವಾದಿ ಬೆಳಗ್ಗೆಯೇ ಐದು ಅಡಿ ಮರದ ದಿಮ್ಮಿಯಂತ ಕೊರಡನ್ನು ಗುಂಡಿ ತೆಗೆದು‌ ನೆಟ್ಟು ಹೋಗಿದ್ದ. ಪೂಜಾ ವಿಧಿ ವಿಧಾನಗಳನ್ನಷ್ಟೇ ರಾತ್ರಿಗೆ ಬಾಕಿ ಉಳಿಸಿದ್ದ.

ನಿಂಗಪ್ಪ ತಂದಿದ್ದ ಅರಿಶಿಣ, ಕುಂಕುಮ, ರೇಷ್ಮೆ ಸೀರೆ, ಚಿನ್ನದ ತಾಳಿ, ಬಳೆಗಳನ್ನು ನೆಡಲಾಗಿದ್ದ ಮರದ ಕೊರಡಿಗೆ ಸರಸರನೇ ತೊಡಿಸಲಾರಂಭಿಸಿದವನೇ..

ಮೇಕೆಯನ್ನು‌ ಬೇಲಿಗೆ ಕಟ್ಟುಲು ಹೇಳಿ,…ನಿಂಗಪ್ಪ ಬೆತ್ತಲಾಗೊ ಅಂದ…!

ಅವಕ್ಕಾದ ನಿಂಗಪ್ಪ, ಯಾಕ್ ಸಾಮಿ‌ ಅಂದ.?

ಇದು ಕ್ರೋನ ಮಾರಮ್ಮ ಕಣೋ, ನೀನು ನೋಡಿದೆ ತಾನೆ ಗುರುಗಳು ಟಿ.ವಿ.ಯಲ್ಲಿ ಹೇಳಿದ್ದನ್ನ ? ಮಂತ್ರವಾದಿ ಕೇಳಿದ.

ಹು ಸಾಮಿ ಆದ್ರೆ ಅವ್ರು ಬಟ್ಟೆ ಬಿಚ್ಚು ಅಂತ ಎಲ್ಲೂ ಹೇಳ್ಲೇ ಇಲ್ವಲ್ಲ ಅಂದ ನಿಂಗಪ್ಪ.

ಹೇ, ಈ ದೇವಿಗೆ ಪೂಜೆ ಮಾಡುವವರು ಬೆತ್ತಲಾಗಿ ಪೂಜೆಮಾಡ್ಬೇಕು ಕಣೋ, ಅಷ್ಟಕ್ಕೂ ಈ ಗೌಗತ್ತಲಲ್ಲಿ‌ ನೀನು ಬಟ್ಟೆ ಹಾಕಿದ್ರು ಅಷ್ಟೇ ಬೆತ್ತಲಾಗಿದ್ರೂ ಅಷ್ಟೇ! ಅಂದ ಮಂತ್ರವಾದಿ.

ಮುಜುಗರದಿಂದಲೇ ಪಂಚೆ, ಒಳುಡುಪುಗಳನ್ನು ಕಳಚಿ ನಿಂತ ನಿಂಗಪ್ಪ.

ದೀಪದ ಬೆಳಕಿನಲ್ಲಿ ನಿಂಗಪ್ಪನ ಆ ಕಪ್ಪು ಆಕೃತಿಯನ್ನು ನೋಡಿ ಕ್ಷಣ ಕಾಲ ಮಂತ್ರವಾದಿಯೇ ಬೆದರಿ, ಮತ್ತೆ ಅವನ ಕಡೆ ತಿರುಗಿ ನೋಡದೆ ತನ್ನ ಪೂಜಾ ಕಾರ್ಯಗಳನ್ನು ಶುರುಮಾಡಿದ…

ಹ್ರಾ… ಹ್ರಿಂ…. ಫಟ್…. ತಥ್….ಸ್ವಾಹ ಅಂತ ಏನೇನೋ ಹೇಳುತ್ತಾ, ಕರ್ಪೂರ ಬೆಳಗುತ್ತಾ, ಹೂವು, ಹಾರ ಮತ್ತೊಂದು ಮಗಂದೊದನ್ನು ಆ ಕೊರಡಿಗೆ ಬಳಿಯುತ್ತಾ ನಾನು ತಂದಿದ್ದ ಎರಡು ಕುಕ್ಕೆಯಲ್ಲಿದ್ದ ಹಗ್ಗದಂತ ವಸ್ತುಗಳನ್ನು ಆ ಮರದ ಕೊರಡಿಗೆ ತೊಡಿಸುತ್ತಾ ಪೂಜೆ ಮುಂದುವರೆಸಿದ.

ಅತ್ತ, ಭಯ ಭಕ್ತಿಯಿಂದ ಬೆತ್ತಲಾಗಿ ನಡುಗುತಿದ್ದ ನಿಂಗಪ್ಪನ ಕಾಲು ಸೋತಂತಾಗಿ ಕೂರಲೆತ್ನಿಸಿದ.

ಚೂಪಾದ ಗರಿಕೆ ಹುಲ್ಲು ಒಣಗಿದ್ದರಿಂದ, ಅವನ ಅಂಡಿಗೆ ಸಾವಿರ ಸೂಚಿಗಳು ಒಟ್ಟಿಗೇ ಚುಚ್ಚಿದಂತಾಗಿ ಬೆಚ್ಚಿ ಎದ್ದು ನಿಂತ.

ಇನ್ನೇನು ಪೂಜೆ ಮುಗಿಯುವ ಹೊತ್ತಿಗೆ ಮೇಕೆ ಬಲಿಕೊಡಲು ಮಂತ್ರವಾದಿ ಹೇಳಿದ.

ಬೇಲಿಗೆ ಕಟ್ಟಿದ್ದ ಮೇಕೆಯನ್ನು ಅಲಂಕಾರಗೊಂಡ ಮರದ ಕೊರಡಿನ ಮುಂದೆ ನಿಲ್ಲಿಸಿ.. ಕುತ್ತಿಗೆಗೆ ಮಚ್ಚಿನಿಂದ‌ ಏಟು ಕೊಡಲು ನಿಂಗಪ್ಪ ಮುಂದಾದಾಗ,

ಅವನ ಆ ಅವತಾರವನ್ನು ಎಂದೂ‌ ಕಂಡಿರದ ಮೇಕೆ ಹೌಹಾರಿ, ಯಾವುದೋ ಕ್ಷುದ್ರಗ್ರಹದ ಜೀವಿ ಎಂದೆಣಿಸಿ ನಿಂತಲ್ಲಿಂದ ಓಡಲೆತ್ನಿಸಿದಾಗ ಮಚ್ಚಿನ ಏಟು ಕುತ್ತಿಗೆಗೆ ಬೀಳದೆ ಮೇಕೆ ಬುರುಡೆಗೆ ಬಿದ್ದು, ಎರಡು ಹೋಳಾಯಿತು. ಅಲಂಕಾರಗೊಂಡಿದ್ದ ಮರದ ಕೊರಡಿಗೆ ಹಾಗೂ ನಿಂಗಪ್ಪನ ಮುಖಕ್ಕೆ ರಕ್ತ ರಾಚಿತು.

****

ಶನಿವಾರ ರಾತ್ರಿ ದಿನೇಶ ಲಾಕ್ಡೌನ್ ತಪ್ಪಿಸಿಕೊಂಡು ಪತ್ರಿಕೆಯ ವಾಹನದಲ್ಲಿ ಮೈಸೂರಿನಿಂದ ರಾತ್ರಿ ಹಾಸನಕ್ಕೆ ಬಂದು, ಹಾಸದಿಂದ ರಾತ್ರಿಯೇ ಮತ್ತೆ ಗೂಡ್ಸ್ ಗಾಡಿಯಲ್ಲಿ ಬಂದು ಚನ್ನಾಪುರದಲ್ಲಿ ಇಳಿದ. ಬೆನ್ನಿನ ಮೇಲೆ ಬ್ಯಾಗ್ ನೇತುಹಾಕಿಕೊಂಡು ಬಿಳಿಗರ ಹಳ್ಳಿಯ ಕಡೆಗೆ ವೇಗವಾಗಿ ಹೆಜ್ಜೆ ಹಾಕುತ್ತ ಮುಖ್ಯದ್ವಾರಕ್ಕೆ ಬೆಳಗಿನ ಜಾವ ಬಂದ…

ಮುಖ್ಯದ್ವಾರದಲ್ಲಿ ಕಂಡ ಭೀಕರ ದೃಶ್ಯವನ್ನು ಕಂಡವನೇ ಗಾಬರಿಗೊಂಡು ಎದೆ ಹಿಡಿದುಕೊಂಡು ದೊಪ್ಪನೆ ನೆಲಕ್ಕೆ ಬಿದ್ದ,

ಎರಡು ಕೈಗಳಂತೆ ಹೊರ ಚಾಚಿರುವ ಮರದ ಕೊರಡಿಗೆ ಸೀರೆ ಉಡಿಸಿ, ಕೈಗಳಿಗೆ ಬಳೆ, ಮಣ್ಣಿನ ಮುಖವಾಡಕ್ಕೆ ಅರಿಶಿನ ಕುಂಕುಮವನ್ನು ಧರಿಸಿ, ತಾಳಿ ಹಾಕಿದ್ದರಲ್ಲದೇ. ಮಂತ್ರವಾದಿ ಆ ಕೊರಡಿಗೆ ಚೆಂಡು ಹೂವಿನ ಹಾರವನ್ನು ಹಾಕಿ ಅದರ ಮೇಲೆಲ್ಲಾ ಸತ್ತ ಹಾವಿನ ಮರಿಗಳನ್ನು ಚುಚ್ಚಿ, ಏಡಿ, ಚೇಳುಗಳನ್ನೆಲ್ಲಾ ಚುಚ್ಚಿದ ಹಾರವನ್ನು ಮಾಡಿ‌ಹಾಕಿದ್ದ. ಮತ್ತು ಆ ಕೊರಡಿನ ಕೊರಳಿಗೆ ತಲೆಬುರುಡೆಗಳ ಹಾರ, ಕೊರಡಿನ ತಲೆಗೆ ಬುರುಡೆಯ ಕಿರೀಟವನ್ನು ಹಾಕಲಾಗಿತ್ತು. ಆ ಕೊರಡಿನ ಮುಂದೆ ರಕ್ತ ಮಿಶ್ರಿತ ಅನ್ನದ ದೊಡ್ಡದಾದ ಪಾತ್ರೆ ಇತ್ತು. ಬಾಳೆದಿಂಡುಗಳನ್ನು ಕಡಿಯಲಾಗಿತ್ತು. ಎದುರಲ್ಲಿ ತಲೆ ಸೀಳಿಕೊಂಡು ರಕ್ತದ ಮಡುವಿನಲ್ಲಿ ಆಡು ಬಿದ್ದಿತ್ತು. ದೇಶದಿಂದ ಕರೋನವನ್ನು ತೊಲಗಿಸಲು ಟಿ.ವಿ. ಜ್ಯೋತಿಷಿ ಹೇಳಿದಂತೆ ಅವರು ಇವನೆಲ್ಲಾ ಮಾಡಿದ್ದರು.

****

ಬೆಳಗ್ಗೆ ಎಂಟರಿಂದ ಹತ್ತರವರೆಗೆ ಮಾತ್ರ ಬ್ಯಾಂಕ್ ಬಾಗಿಲು ತೆಗೆಯುವ ಕೊರೋನಾ ನಿಯಮ ಇದ್ದುದ್ದರಿಂದ, ನಿಂಗಪ್ಪನಿಂದ ಪೂಜೆಗೆಂದು ಪಡೆದ ಹತ್ತು ಸಾವಿರ ಹಣವನ್ನು ಅಕೌಂಟಿಗೆ ಹಾಕಲು ಮಗ್ಗೆಯ ಕರುನಾಡು ಬ್ಯಾಂಕಿನಲ್ಲಿ ಮಂತ್ರವಾದಿ ಕ್ಯೂ ನಿಂತಿದ್ದ…

ಅಂದು ರಾತ್ರಿ ಚನ್ನಾಪುರದಲ್ಲೂ ನಲವತ್ತು ಕುರಿಗಳ ಮಾರಣಹೋಮಕ್ಕೆ ಅವನು ತಯಾರಾಗಬೇಕಿತ್ತು.

ಮಧ್ಯರಾತ್ರಿ ಮನೆಗೆ ಓಡಿಬಂದು ಮಲಗಿದ್ದ ನಿಂಗಪ್ಪ ಯಾಕೋ ಚಳಿ, ಮೈ ಕೈ ನೀವು ಜ್ವರ ಎಂದು ಬೆಳಗ್ಗೆ 11 ಆದರೂ ಎದ್ದಿರಲಿಲ್ಲ.

ಅತ್ತ ಇವರುಗಳು ಮಾಡಿದ್ದ ವಾಮಾಚಾರದ ಬೀಕರ ದೃಶ್ಯಗಳನ್ನು ನೋಡಿ, ಎದೆ ಹಿಡಿದುಕೊಂಡು ಸತ್ತಿದ್ದ ದಿನೇಶನ ಹೆಣ ಹಾಗೂ ಕ್ರೋನ ಮಾರಮ್ಮನ ಪೂಜೆಗೆಂದು ಬಲಿಯಾಗಿದ್ದ ಮೇಕೆಯನ್ನು ನೋಡಿ ಬೆಚ್ಚಿಬಿದ್ದ ಊರಿನ ಜನ…

ನಿಂಗಪ್ಪ ಅವನ ಮಗನನ್ನು ಕ್ರೋನ ಮಾರಿಯಮ್ಮನಿಗೆ ನರಬಲಿ ಕೊಟ್ಟಿರುವುದಾಗಿ ಸುದ್ಧಿ ಹಬ್ಬಿಸಿದರು.

ಅಷ್ಟೇ….

‍ಲೇಖಕರು Avadhi

June 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Padmanabha ಆಗುಂಬೆ

    ಓದಿಸಿಕೊಂಡು ಹೋಗುವ ಕಥೆ.
    ಕೆಲವಷ್ಟು ಉಚ್ಚಾರಣಾ ದೋಷಗಳು ಇವೆ. ಉದಾಹರಣೆಗೆ ‘ಬಟ್ಟೆ ಹೊಗೆಯಲು’ !
    ಕಟ್ಟುಲು, ಬೀಕರ ಇತ್ಯಾದಿ ಅಕ್ಷರ ದೋಷಗಳಿವೆ. ದಯವಿಟ್ಟು ಸರಿಪಡಿಸಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: