ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ ‘ಮಹಾಯಾನ’ ಆರಂಭ

ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನಸ್ವಾಮಿ ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

ನನ್ನವಳ ಕೇಳಿದೆನು.. ಚಂದ ನಿನಗಾವುದೆಂದು..??

ಅಂದು ಸಂಜೆ ರವೀಂದ್ರ ಕಲಾಕ್ಷೇತ್ರದಿಂದ ಹೊರಟ ನಾನು ಮಹಾನಗರ ಪಾಲಿಕೆ ಕಛೇರಿ ತಲುಪಿ ನನಗಾಗಿ ಕಾದಿದ್ದ ಪಾಲಿಕೆಯ ಪಿ.ಆರ್.ಓ ಆಗಿದ್ದ ಗೆಳೆಯ ಡಾ.ಬಿ.ಸಿ. ವೀರಪ್ಪ ಹಾಗೂ ಅಂದಿನ ಡಿ.ಸಿ ಅವರೊಂದಿಗೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ದಿನಾಚರಣೆ ಅಂಗವಾಗಿ ಮಾಡುತ್ತಿದ್ದ ಕಾರ್ಯಕ್ರಮದ ರೂಪುರೇಷೆಗಳನ್ನ ಕುರಿತು ಮಾತನಾಡಿ ಅಲ್ಲಿಂದ ಹೊರಟೆ.

ಮೆಜೆಸ್ಟಿಕ್‌ ತಲುಪಿ ಚಂದ್ರ ಲೇಔಟ್‌ ನ ಮನೆ ತಲುಪಲು ೬೧ಎ ಬಸ್‌ ಹಿಡಿದೆ. ಬಸ್‌ ನಲ್ಲೇ ತೂಕಡಿಕೆ.. ಜೋಂಪು.. ಅರೆನಿದ್ದೆ. ಆ ಅರೆನಿದ್ದೆಯಲ್ಲೇ ಮತ್ತೆ ಮತ್ತೆ ಅದೇ ದೃಶ್ಯಗಳು… ದಿಗ್ಗನೆಚ್ಚರವಾಯಿತು. ವಿಜಯನಗರ ತಲುಪಿದ್ದೆ..

ಆಗ ರಾತ್ರಿ ೭.೧೫ ರ ಸಮಯ.

೨೦೦೭ರ ಏಪ್ರಿಲ್‌ ೧೬

ಆ ದಿನ ಸೋಮವಾರ..

ನನ್ನ ಮೊದಲ ಮಗಳು ಕವಿತಾ ವರ್ಷ ಎಂ.ಡಿ ೧೫ ವರ್ಷ ತುಂಬಿ ೧೬ ವರ್ಷಕ್ಕೆ ಅಡಿ ಇಟ್ಟಿದ್ದಳು…

ನನ್ನ ಮಡದಿ ಕೆ.ಎಸ್.ಗಂಗಾಂಬಿಕೆ ತುಂಬು ಗರ್ಭಿಣಿ. ನನಗೊ ಚೊಚ್ಚಲ ಕಂದನನ್ನು ಬರಮಾಡಿಕೊಳ್ಳುವ ಸಂಭ್ರಮ ಸಡಗರ.. ಹೇಳಲಾಗದ ಆನಂದ… ವಿವರಿಸಲಾಗದ ಸಂತೋಷ ಕನಸುಗಳ ಮೆರವಣಿಗೆ.. ನಿಂತಲ್ಲಿ ನಿಲ್ಲಲಾಗದ ಕುಂತಲ್ಲಿ ಕೂರಲಾಗದ ಸ್ಥಿತಿ.. ರಂಗದಿಂದ ಒಂದಷ್ಟು ದಿನ ದೂರವಿದ್ದ ದಿನಗಳು.. ರಂಗದೆಡೆಗಿನ ಸೆಳೆತ ಚಡಪಡಿಕೆ.. ಇದೆಲ್ಲವನ್ನು ದೂರ ಸರಿಸಿ ಅವಳ ಸನಿಹ ಬಯಸುತ್ತಿತ್ತು ಮನ.. ಗರ್ಭ ಹೊತ್ತು ಬಳಲಿದ್ದ… ನೋವಿನಲ್ಲೂ ಯಾವುದೋ ಅವ್ಯಕ್ತ ಆನಂದ ಕಾಣುತ್ತಿದ್ದ ಮಡದಿಯ ಬಳಿ ನಾನಿರಬೇಕು ಎನಿಸುತ್ತಿತ್ತು..

ನಮ್ಮದೇ ಒಂದು ಕುಡಿ ಬೀಜಕಟ್ಟಿ ಅದು ಗರ್ಭದಲ್ಲೆ ಕಣ್ಣ ತೆರೆದು.. ಆ ಭೂಮಿಯಲ್ಲೇ ಅರಳಿ.. ಜೀವದಳೆದು.. ಕೈ ಕಾಲು ಮೂಡಿ ಆಕಾರ ಪಡೆದು.. ಕಣ್ಣು ಕವಿಗಳು.. ಮೂಗು ಬಾಯಿಗಳು.. ಗಲ್ಲ ಕೆನ್ನೆಗಳು ರೂಪ ಪಡೆದು ಮಗುವಾಗುವ ಆ ಎಲ್ಲಾ ಯಾನಗಳನ್ನು ಮುಗಿಸಿ.. ಒಂದು ಹೆಣ್ಣಾದವಳಿಗೆ ಸಾರ್ಥಕತೆಯನ್ನು ತಂದ ದಿನಗಳು.. ತನ್ನಪ್ಪನಿಗೆ ತಂದೆಯಾಗುವ ಯೋಗ ತಂದು.. ಕಂದನೊಂದು ಕಣ್ಣ ತೆರೆದು ಕಿಲಕಿಲ ನಗುವ ಹೊತ್ತು ಬರುವ ದಿನಗಳು.

ನನ್ನ ಅವಳ ಬದುಕಲೊಂದು ನವಿಲು ಕುಣಿದ ದಿನಗಳು
ಬಣ್ಣ ತುಂಬಿ ವಿಚಿತ್ರ ಚಿತ್ರ ಚಿಟ್ಟಿಯಾದ ದಿನಗಳು
ಬಯಲ ತುಂಬ ದೀಪ ಹಚ್ಚಿ ನಾವೇ ದೀಪವಾದ ದಿನಗಳು
ಏನೋ ಏನೋ ನೆನೆದು ದಣಿದು ತಣಿದ ದಿನಗಳು
ಕಂದನೊಂದು ಕಣ್ಣ ತೆರೆದು ಕಿಲಕಿಲ ನಗುವ ತರುವ ದಿನಗಳು.

ಮದುವೆ.. ಶಯನದ ಮೊದಲ ರಾತ್ರಿಯ ತುದಿಗಳಿಗೆ.. ನವಿರು ಭಾವೋನ್ಮಾದ.. ಸ್ಪರ್ಶ ಸ್ಪರ್ಶ ಸ್ಪರ್ಶ.. ಅನಿಶಂ ಆಲಿಂಗನ.. ಅಧರಂ ಛೇದನ ಚುಂಬನ… ಮಿಲನ ಮಹೋತ್ಸವದ ಸಾಲುಸಾಲು ದೀಪಗಳು… ಸಂಸಾರ ಸೋಪಾನದ ಒಂದೊಂದೇ ಹೆಜ್ಜೆ ಕ್ರಮಿಸುತ್ತಾ ಸುಖದ ಸಿಂಹಾಸನದಲಿ ಆಸೀನರಾದ ಗಂಡ ಹೆಂಡತಿಗೆ ತಮ್ಮದೇ ಆದ ಒಂದು ಕಳ್ಳುಬಳ್ಳಿ ಕುಡಿಯೊಡೆಯಬೇಕೆಂಬ ಮಹಾದಾಸೆ.

ಈ ಪ್ರಾಪಂಚಿಕ ಮೋಹದಿಂದ ನಾವೇನು ಬೇರೆಯಲ್ಲ ಅಲ್ವೇನ್ರಪ್ಪಾ?.. ನಾವು.. ಈ ಮನುಕುಲ.. ಬೇರೇನಾ..?.. ಇಲ್ಲ.. ಸಾಧ್ಯವೇ ಇಲ್ಲ…

ನನ್ನ ಮಡದಿ ಫಲವತಿ.. ಆ ದಿನಗಳಲ್ಲಿ ಹೆಣ್ಣಿಗೆ ಸಹಜವಾಗಿ ಬಯಕೆಗಳಿರುತ್ತವೆ.

ನಾನು ಕೇಳಿದೆ ‘ನಿನ್ನ ಯಾವ ಬಯಕೆಯ ಈಡೇರಿಸಲಿ ಮಡದಿ ಮನದನ್ನೆ.. ನನ್ನ ಜೀವದ ಸುರಹೊನ್ನೆʼ ಎಂದೆ. ನನ್ನ ಮಡದಿಯು ಕಣ್ಣಸನ್ನೆಯಲೇ ತನ್ನ ತಂಗಿ ಪ್ರೇಮಾಳನ್ನು ಹೊರ ಹೋಗುವಂತೆ ಆಜ್ಞೆಮಾಡಿ ನನ್ನ ಸನಿಹ ಬಂದು ಆಲಂಗಿಸಿ ನನ್ನ ಬಲಗೈಯ ತೆಗೆದು ತನ್ನ ತುಂಬು ಹೊಟ್ಟೆಯ ಮೇಲಿಟ್ಟುಕೊಂಡಳು.. ನಿಮ್ಮ ಮಗುವಿನ ತುಂಟಾಟ ನೋಡಿ.. ನನ್ನ ಒದೆಯುತ್ತಿದೆ.. ಇಲ್ಲಿ ನೋಡು ಕೈಯಾಡಿಸುತ್ತಿದೆ. ಇತ್ತ ನೋಡಿ ತಲೆಯಿಂದ ಗುಮ್ಮುತ್ತಿದೆ ಎನ್ನುತ್ತಾ ನನ್ನ ಶಿರವ ತೆಗೆದು ತನ್ನ ಗರ್ಭದ ಮೇಲಿಟ್ಟು ಕೇಳಿ.. ಆಲಿಸಿ ನಿಮ್ಮ ಕಂದನು ಕೊಡುವ ಕಾಟಗಳ.. ಮಾಡುವ ತುಂಟಾಟಗಳ ಎನ್ನುತ್ತಾ.. ನಿಮ್ಮ ಮಗು ನನ್ನ ಹೊಟ್ಟೆಯ ಈಜುಕೊಳ ಮಾಡಿಕೊಂಡು ಬಿಟ್ಟಿದೆ ನೋಡಿ ಎಂದು ತುಟಿಬಿರಿದು ನಸುನಕ್ಕಳು… ಅವಳ ಮಾಲುಗಣ್ಣು ಸಹ ನಗುತ್ತಿತ್ತು.. ಅವಳಿಗೆ ಸ್ವಲ್ಪ ಮಾಲ್ಗಣ್ಣಿತಪ್ಪ.. ಮಾಲ್ಗಣ್ಣು ಹುಡ್ಗಿನ್‌ ಮದ್ವೆ ಆದ್ರೆ ಅದೃಷ್ಟ ಒದ್ಕೊಂಡು ಬತ್ತದಂತೆ.. ಹೌದಾ..? ಆಹಾ.. ನನ್ನ ಅದೃಷ್ಟವೇ…!!

‘ಶಿಶು ಗರ್ಭದಲ್ಲೇ ಕಲಿಯುತ್ತದೆ ಈಜಾಡುವುದನ್ನು..’

ಹೂಂ.. ಈ ಹೊರ ಜಗತ್ತಿಗೆ ಬಂದ ಮೇಲೆ ಈ ಭವ ಸಾಗರವನ್ನು ಸಮರ್ಥವಾಗಿ ಈಜಿ ಜಯಸಬೇಕೆಲ್ಲಾ… ಹಾಗಾಗಿ ಮಗು ಈಜಾಡುವ ಮೊದಲ ಪಾಠಗಳನ್ನು ಗರ್ಭದಲ್ಲೇ ಕಲಿಯುತ್ತದೆ…

‘ಶಿಶುವಿಗೆ ಗರ್ಭವೇ ಮೊದಲ ಪಾಠಶಾಲೆ’ ನನ್ನ ಮಗು ಅವಳ ಗರ್ಭದಲಿ ಮಾಡುವ ತುಂಟಾಟಗಳನ್ನು.. ಆ ಚೇಷ್ಟೆಗಳನ್ನು.. ಆ ಸಹಜ ಕ್ರಿಯೆಗಳನ್ನು ಅವಳಿಗಾಗುವ ಆ ಅನುಭವಗಳನ್ನು ನಾನು ನನ್ನದಾಗಿಸಿಕೊಂಡೆ.. ಆನಂದ ಸಾಗರದಲ್ಲಿ ತೇಲಿ ಹೋದೆ.. ತಂದೆಯಾಗುವ ಮೊದಲ ಅನುಭವ.. ಅಪ್ಪನಾಗುವ ಆ ಖುಷಿ.. ಆ ಥ್ರಿಲ್..‌ ಆ ಪರಮ ಸಂತೋಷ.. ಆ ಆನಂದ ಎಲ್ಲೆಮೀರಿ ನನ್ನ ಮಡದಿಯ ಗರ್ಭದಲ್ಲಿರುವ ಆ ಕಂದನಿಗೆ, ಹೆಂಡತಿಯ ಹೊಟ್ಟೆಯ ಮೇಲಿಂದಲೇ ಒಂದು ಸಿಹಿ ಮುತ್ತನಿತ್ತು ನನ್ನ ಮಡದಿಯ ಮುಖ ನೋಡಿದೆ.. ನೋಟಗಳು ವಿನಿಮಯಗೊಂಡವು..ಇಬ್ಬರ ಮುಖದಲ್ಲೂ ನಗೆ ಮೂಡಿತು..ನಮ್ಮ ನಗೆ ಮೂಡಿದ್ದು ಆ ಮಗುವಿಗೆ ಗೊತ್ತಾಯಿತೇನೋ.. ಆ ಕಂದನೂ ಸಹ ನಕ್ಕಿರಬೇಕು. ಆ ಕಿಲಕಿಲ ಸದ್ದಿನ ಪ್ರತಿಧ್ವನಿ ನಮ್ಮಿಬ್ಬರ ಕಣ್ಣುಗಳಲ್ಲಿ ಆನಂದಬಾಷ್ಪವಾಗಿ ಹರಿಯಿತು…

‘ಏನು ಬೇಕು ನಿನಗೆʼ.. ಮತ್ತೆ ಕೇಳಿದೆ..

ಅದಾಗಲೇ ಹುಣಸೇ ಕಾಯಿ ತಿಂದು ಆಗಿತ್ತು.. ಗಿಣಿಮೂತಿ ಮಾವಿನಕಾಯಿ ಕಚ್ಚಿ ಆಗಿತ್ತು. ಊರಿನ ಜಾತ್ರೆಯ ಸುತ್ತಿ ಆಗಿತ್ತು. ಅಲ್ಲಿಯ ಕಾಯ್‌ ಮಿಠಾಯಿ, ಕಲ್ಯಾಣಸೇವೆ, ಖಾರಾಸೇವೆ, ಕಡ್ಲೆಪುರಿ ಮೆದ್ದು ಆಗಿತ್ತು. ತುಂಬಾ ಇಷ್ಟ ಎಂದು ಖಾರದ ಕಡುಬು.. ಸಿಹಿ ಕಡುಬು.. ಒಬ್ಬಟ್ಟಿನ ಸಮಾರಾಧನೆ ಮುಗಿದಿತ್ತು..  ನವರಂಗ್ ಟಾಕೀಸ್‌ ನಲ್ಲಿ ಕುಂತು ರವಿಚಂದ್ರನ್ನನ ‘ರಾಮಾಚಾರಿʼ ಸಿನಿಮಾ ನೋಡಿಯಾಗಿತ್ತು. ‘ಯಾರಿವಳು.. ಯಾರಿವಳು.. ಸೂಜಿಮಲ್ಲಿ ಕಣ್ಣವಳು..’ ಹಾಡು ಬಂದಾಗ ಆ ಕತ್ತಲೆಯಲ್ಲಿ ಕೈಕೈ ಹಿಡಿದು ಕುಳಿತಿದ್ದೂ ಆಗಿತ್ತು. ಸಿನಿಮಾ ನೋಡುತ್ತಾ..ನೋಡುತ್ತಾ ನನ್ನ ಭುಜಕ್ಕೊರಗಿ ಮಲಗಿ ಅವಳು ಅತ್ತಿದ್ದು ಆಗಿತ್ತು.

ಅವಳು ‘ನಿಮಗೆಂತಾ ಮಗು ಬೇಕು’ ಎಂದಾಗ ನಾನು ನಿನ್ನಂಥ ಮಾಲುಗಣ್ಣಿನ ಹೆಣ್ಣುಮಗು ಬೇಕು ಎಂದು ಅವಳನ್ನು ರೇಗಿಸಿದ್ದೂ ಆಗಿತ್ತು. ಆಗ ಅವಳು ಹುಸಿಕೋಪ ತೋರಿ ನನ್ನ ಕಿವಿ ಹಿಂಡಿದ್ದೂ ಆಗಿತ್ತು. ನಮ್ಮ ಮಗುವು ಬೆಳ್ಳಗುಟ್ಟಲಿ ಎಂದು ನನ್ನ ದೊಡ್ಡಮ್ಮ ವೀರಾಂಭ ಮುದ್ದಪ್ಪ ಅವರು ಹೇಳಿದಂತೆ ಅಚ್ಚಕೇಸರಿಯನ್ನು ಹಾಲು ಜೇನಿನಲ್ಲದ್ದಿ ತಿನ್ನಿಸಿಯೂ ಆಗಿತ್ತು. ನನ್ನಮ್ಮ ಮಂಗಳಗೌರಮ್ಮನವರು ಊರಿಗೆ ಮೊದಲೆ ಮಗುವಿಗೆ ಅಂತೇಳಿ ಚಿನ್ನದ ಕಿವಿಸುತ್ತು, ಬೆಳ್ಳಿಯ ಕಾಲ್‌ ಚೈನ್‌, ಬೆಳ್ಳಿ ಉಡ್ದಾರ ಎಲ್ಲಾ ತಂದೂ ಆಗಿತ್ತು. ಅವರಮ್ಮ ಲಿಂಗಮ್ಮನವರು ಕಾಲ್ಚೀಲ, ಸ್ವೆಟರ್‌, ಕುಲಾವಿ ಜೊತೆಗೆ ಕಳೇ ಬಟ್ಟೆಗಳನ್ನು ಜೋಡಿಸಿಕೊಂಡು ಆಗಿತ್ತು. ಇದನ್ನೆಲ್ಲಾ ಕಂಡು ಅವಳು ಹಿರಿಹಿರಿ ಹಿಗ್ಗಿದ್ದೂ ಆಗಿತ್ತು.

ಅವರಪ್ಪ ಸಿದ್ದಲಿಂಗಪ್ಪನವರು ಬಣ್ಣದ ತೊಟ್ಟಿಲು ತಂದಿದ್ದೂ ಆಗಿತ್ತು… ರೀ.. ವಿದ್ಯಾರ್ಥಿ ಭವನ್ನಿನ ಮಸಾಲ್‌ ದೋಸೆ ಹಾಗೂ ರವೆ ವಡೆಯನ್ನು ಚಪ್ಪರಿಸಿದ್ದೂ ಆಗಿತ್ತು. ಕಣ್ರೀ.. ದ್ವಾರಕಾ ಹೋಟೆಲಿನ ಕಾಯ್‌ ಚಟ್ನಿ ಆಸೆಗೆ ಅಲ್ಲಿಯ ಖಾಲಿದೋಸೆನೂ ತಿಂದು ಬಂದೂ ಆಗಿತ್ತು. ಗುಂಡಪ್ಪನ ಸ್ವೀಟ್ಸೂ.. ವಿ ವಿ ಪುರಂನ ಪಾನಿಪುರಿ ಎಲ್ಲಾ ಮುಗಿದಿತ್ತು ಕಣ್ರಪ್ಪಾ.. ನಮ್ಮ ಮನೆದೇವ್ರು ಮಾದಪ್ಪನಿಗೆ ಮುಡುಕುತೊರೆ ಮಲ್ಲಿಕಾರ್ಜುನನಿಗೆ ಮತ್ತೆ ಭ್ರಮರಾಂಬಿಕೆಗೆ ಸುಸೂತ್ರವಾಗಿ ಹೆರಿಗೆ ಆಗಲಪ್ಪಾ ಎಂದು ಹರಕೆ ಕಟ್ಟಿಯೂ ಆಗಿತ್ತು.

ನಮ್ಮ ತಂದೆ ಬಸೆಟ್ಟಪ್ಪ ಮೇಸ್ಟ್ರುಗಳು ಗಂಡು ಹುಟ್ಟಿದರೆ ತನ್ನಪ್ಪನ ಹೆಸರಾದ ‘ಶಾಂತಮಲ್ಲಪ್ಪ’ ಎಂದು ಹೆಸರಿಡಬೇಕೆಂತಲೂ, ಹೆಣ್ಣು ಮಗು ಹುಟ್ಟಿದರೆ ಮನೆದೇವರು ಮಾತೆ ‘ಭ್ರಮರಾಂಬಿಕಾದೇವಿ’ ಎಂದು ಹೆಸರಿಡಬೇಕೆಂತಲೂ ಹೇಳಿ ಆಗಿತ್ತು. ತಿಂಗಳಿಗೊಮ್ಮೆ ಕಾರ್ಡರೋಡ್‌ ಆಸ್ಪತ್ರೆಯ ಡಾಕ್ಟರ್‌ ಬಳಿ ಚೆಕಪ್ಪೂ ಆಗುತ್ತಿತ್ತು. ಅವರ ಸಲಹೆಯಂತೆ ಕಾಲಕಾಲಕ್ಕೆ ಔಷಧೋಪಚಾರ ನಡೆಯುತ್ತಿತ್ತು. ನನ್ನಕ್ಕಂದಿರು ನನ್ನವಳನ್ನು ಅರಿಸಿನ ಕುಂಕುಮಕ್ಕೆ ಕರೆದು ಔತಣ ಮಾಡಿ ಸೀರೆಯುಡಿಸಿಯೂ ಆಗಿತ್ತು… ಹೆರಿಗೆಯ ದಿನ ನಿಗಧಿಯಾಗಿತ್ತು.

ಒಟ್ಟಿನಲ್ಲಿ.. ಮನೆಯಲ್ಲಿ ಸಡಗರ ತುಂಬಿತ್ತು..

ನನ್ನವಳ ಮತ್ತೆ ಕೇಳಿದೆ ‘ಏನು ಬೇಕು ನಿನಗೆ.. ನಿನ್ನ ಬಯಕೆ ಏನು’.. ಮನದನ್ನೆ ಮೆಲ್ಲನುಸಿರಿದಳು…

ಅವಳು ನಸುನಗುತ್ತಾ ಹೇಳಿದಳು.. ‘ನನ್ನ ಬಯಕೆ ತೀರಿಸುವಿರಾʼ ಎಂದಳು.. ‘ಹೂಂʼ ಹೇಳು ಎಂದೆ ನಾನು ‘ನಾನು.. ನಾನೇನಾದರೂ ಹೆರಿಗೆ ಸಮಯದಲ್ಲಿ ತೀರಿ ಹೋದರೆ ನೀವು ಇನ್ನೊಂದು ಮದುವೆ ಆಗಿ’ ಎಂದಳು.. ನಾನು ‘ಗರʼ ಬಡಿದವನಂತೆ ಕುಳಿತುಬಿಟ್ಟೆ.

ಇದು ಹೆಣ್ಣಿಗೆ ಹೆರಿಗೆ ಸಮಯದ ಬಯಕೆಯೇ? ಅಥವಾ ಭಯದ ಅಭಿವ್ಯಕ್ತಿಯೇ? ಅಥವಾ ತನ್ನ ಗಂಡ ನಾನೋದರೂ ಚೆನ್ನಾಗಿರಬೇಕೆಂಬ ಪ್ರೀತಿಯ ಪರಾಕಾಷ್ಟೆಯೇ?.. ಏನಿದು..?

ನಾನು ಸ್ತಂಭೀಭೂತನಾಗಿ ಕುಳಿತುಬಿಟ್ಟಿದ್ದೆ.. ಆಗ ಅವಳೇ ಸನಿಹ ಬಂದು ಮೈದಡಲಿ ನಗೆಚೆಲ್ಲಿ.. ‘ಭಯಗೊಂಡಿರಾ.. ಬೇಜಾರಾಯಿತಾʼ ಎಂದು ತಲೆ ನೇವರಿಸಿ ಹೇಳಿದಳು..

‘ನಾನು ನಿಮ್ಮನ್ನು ಇದುವರೆಗೂ ನನ್ನ ಮೇಲೊಂದು ಕವನ.. ಕವಿತೆ ಬರೆಯಿರಿ ಎಂದು ಕೇಳಿಲ್ಲ. ಈಗ ಕೇಳುತ್ತಿದ್ದೇನೆ.. ಹ್ಞಾಂ ನನ್ನ ಮೇಲೆ ಕವಿತೆ ಬರೆಯಿರಿ ಎಂದಲ್ಲಾ.. ನನ್ನ ಮಗುವಿನ ಮೇಲೊಂದು ಕವಿತೆ ಬರೆಯಿರಿ ’ ಎಂದಳು…

‍ಲೇಖಕರು Avadhi

June 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Rudresh Adarangi

    ಮಹಾಮನೆ ಅವರ ಅಂಕಣ ಚೆನ್ನಾಗಿ ಮೂಡಿ ಬಂದಿದೆ. ಅವರ ಬದುಕು ಬಯಲು ಆಗಸ ಸಮುದ್ರ ಯಾನ. ಭವದ ಭಾವ ಮಡುಗಟ್ಟಿದೆ. ಮನಸ್ಸನ್ನು ಮಸಿ ಮಾಡಿ ಮೋಡಿಯಲ್ಲಿ ಕೆತ್ತನೆ ಮಾಡಿದ್ದಾರೆ ನಮ್ ಮಾಯ್ ಕಾರ ಮಹಾಮನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: