ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ ಕವಿತೆ- ಸತ್ವ ಕಳೆದ ಬೇರು…

ನಾ ದಿವಾಕರ

ಹೊಸಕಿ ಎತ್ತೆಸೆದ ಬೇರಿಗೂ
ಕವಲು ಹಾದಿಗಳಿರಬಹುದು
ಆಂತರ್ಯದ ಚಿಗುರು ಉಸಿರಾಡುವಾಗ
ಮುದಿಯಾದರೂ  ವಿಕಸಿಸಲೇನಡ್ಡಿ ?
ಅವ್ಯಕ್ತ ಭಾವಕೋಶಗಳನರಸಿ
ನೆರೆಬದಿಯ ಹಣತೆಯತ್ತ ಸಾಗಲೆಣಿಸಿಹ
ನಾಡಿಗಳಿಗೆ ಇಳೆಯ ಹಂಗಿರದು
ಕಳೆದ ನೆಲೆಯ ಹಂಗೂ ಇರದು ಮಗೂ ;

ಸಂತೆಯೊಳಗಿನ ಬದುಕಿಗೆ ವಾರಸುದಾರನೆಲ್ಲಿ ಇಳೆಪದರದ ಮೇಲೆ
ಅಚ್ಚೊತ್ತಿದ ಹೆಜ್ಜೆಗಳೇ ಅನಾಥವಾಗಿವೆ
ಎದೆಯಾಂತರಾಳದ ಕವಲುಗಳು ಸೊರಗಿ
ಸುರುಟಿಹೋದ ಜೀವನಾಡಿಗಳಲಿ
ಭಾವದುದ್ಧೀಪನ  ಸಾಧ್ಯವೇ ಮಗೂ
ಘನವೋ ದ್ರವವೋ
ತ್ಯಾಜ್ಯದ ಧಾತುವಿಗೆ ನಿರ್ವಾತವೂ ಶೂನ್ಯ ;

ಬೃಹದಲೆಗಳಲೂ ಇಬ್ಬನಿ ಅಡಗಿರಬಹುದು
ಅದು ಸ್ವಂತಿಕೆಯ ದ್ಯೋತಕ
ಕೊಚ್ಚಿಹೋದ ರಾಗಭಾವಗಳೆಂದಿಗೂ
ಮಾರ್ದನಿಸಲಾರವು ಮಗೂ
ಉಂಡೆಸೆದ ಕಾಳುಗಳ ಹೆಕ್ಕಲೆಣಿಸುವ
ಹಕ್ಕಿಗೂ ನೆಲೆಸೆಲೆಯ ಹಂಗಿರಬಹುದು
ಸತ್ವಹೀನ ಬೇರಿನಲೂ ಕನಸುಗಳ
ಕಾನನ ಅಡಗಿರಬಹುದು ;

ಇಂದಲ್ಲಾ ನಾಳೆ ಹಸಿರು ಕಪ್ಪಾದೀತು
ನಾಳೆ ಎಣಿಸುವ ತಪ್ತ ಕಂಗಳಲಿ
ನಿನ್ನೆಯ ಪಳೆಯುಳಿಕೆಗಳಿರಲುಂಟು
ಚಾಚಿದ ತೋಳುಗಳಲಿ
ಭೂತಾವಶೇಷಗಳು ಪ್ರತಿಫಲಿಸಿದಾಗ
ಅಂತರಾಳದ ಕ್ಷೀಣ ಧ್ವನಿ ಮರಳಿ
ಪಲ್ಲವಿಸಬಹುದು ; ಅಸ್ಥಿಗೂ ಅಸ್ತಿತ್ವವಿದೆ
ಕನಸುವ ಹಂಬಲವೂ ಸಹಜ
ಅಳಿದ ಹೆಜ್ಜೆಗಳಲಿ ಅಕ್ಷರಗಳಿರದು ಮಗೂ
ಶೋಧಿಸದಿರು ದೃಷ್ಟಿ ಮಸುಕಾದೀತು ! 

‍ಲೇಖಕರು Admin

18 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading