ನಾವು ಹಳ್ಳಿ ಹೈದರು ನಮ್ಮನೆಲ್ಲಿಗೊಯ್ದರು..

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ‘ಸಿರಿ ಪಾದ’ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ಹಳ್ಳಿಯ ಮಕ್ಕಳ  ದೆಹಲಿಯ ಪಯಣದ

ರಂಗಾನುಭವ ಭಾಗ ೧

ನಾಟ್ಯಶಾಸ್ತ್ರದಲ್ಲಿ  ರಂಗಸಾಲೆ ಅಥವಾ ರಂಗಮಂದಿರದ ಕುರಿತು ಒಂದು ಆಸಕ್ತಿದಾಯಕ ವಿವರವಿದೆ. ನೇಪಥ್ಯದಿಂದ ರಂಗಸ್ಥಳಕ್ಕೆ ಕಲಾವಿದರು ಪ್ರವೇಶ ಪಡೆಯುವಲ್ಲಿ ಎರಡು ದ್ವಾರಗಳಿದ್ದು ಅದಕ್ಕೆ ಎರಡು ಹೊಸ್ತಿಲುಗಳು. ಆ ಹೊಸ್ತಿಲಿಗೆ ‘ನಿಯತಿ’ ಮತ್ತು ‘ಮೃತ್ಯು’ದೇವತೆಗಳನ್ನು ಆವಾಹಿಸಲಾಗಿರುತ್ತದೆ. ಕಲಾವಿದರು ನೇಪಥ್ಯದಿಂದ ಹೊರಟು ರಂಗಮಂದಿರದ ಮೇಲೆ ಬರುವಾಗ ಅವನು ತನ್ನ ‘ನಿಯತಿ’ಯನ್ನು ಅತಿಕ್ರಮಿಸಿ, ನಂತರ ತನ್ನದೇ ‘ಮರಣʼವನ್ನು ಹಾದು ವೇದಿಕೆಯಮೇಲೆ ಕಾಣಿಸಿಕೊಳ್ಳುತ್ತಾನೆ.

ಕಲಾವಿದ ತಾನಲ್ಲದ, ಹೊಸ ವ್ಯಕ್ತಿಯ (ಪಾತ್ರದ) ಜೀವಂತಿಕೆಗೆ ಕಾರಣನಾಗಬೇಕು ಎಂಬುದು ಇದರ ಸಂಕೇತ.ಕಲಾವಿದರ ‘ಪರಕಾಯಪ್ರವೇಶ’, ‘ಪರಭಾವಕರಣ’, ‘ಉತ್ಸರ್ಗ ವಿಸರ್ಗ’,‘ಇನ್ನರ್ ರಿಯಲಿಸಂ’ ಇತ್ಯಾದಿ ಹಲವು ಹೆಸರುಗಳಿಂದ ಕೂಡಿದ ಬಹು ಚರ್ಚಿತ ಸಂಗತಿಯಿದು.

ನಿಯತಿಯನ್ನು, ಮೃತ್ಯುವನ್ನು ಮೀರುವದು ಕಲಾವಿದರಿಗೆ ಅನಿವಾರ್ಯ.ಅವರಿಗೆ ನೀಡುವ ತರಬೇತಿಯಲ್ಲಿ ಬಹು ಮುಖ್ಯ ಭಾಗವನ್ನು ಆವರಿಸುವ ಸಂಗತಿಯೆಂದರೆ ಇದೇ. ಆದರೆ ಬಹುಗಹನವಾದ ಈ ವಿಚಾರವನ್ನು ಆಚಾರಕ್ಕೆ ತರುವದು ದೊಡ್ಡವರಿಗೆ ಎಷ್ಟು ಕಷ್ಟವೋ ಮಕ್ಕಳಿಗೆ ಅಷ್ಟೇ ಸರಳ.!  ದೊಡ್ಡವರಿಗೆ ಬಹು ತ್ರಾಸದಾಯಕವಾದ ಈ ಕ್ರಿಯಾಸಂಗತಿ ಮಕ್ಕಳಿಗೆ ತುಂಬ ಸಲೀಸು.!ಅವರು ಈ ಅಗ್ನಿಕೊಂಡವನ್ನು ಸುಲಭವಾಗಿ ದಾಟುತ್ತಾರಲ್ಲದೇ, ಅವರ ಕೈ ಹಿಡಿದು ಹೊರಟರೆ ದೊಡ್ಡವರಾದ ನಮ್ಮನ್ನೂ ಅದರಿಂದ ದಾಟಿಸುತ್ತಾರೆ!.

ದೈನಿಕದ ಧಾರಾವಾಹಿ ಬದುಕಿನಲ್ಲಿ ಹಲವು ಪಾತ್ರಗಳ ನಿಭಾವಣೆಯಲ್ಲಿ ನಾವು ಹಿರಿಯರು ಉಬ್ಬಸ ಪಡುತ್ತಿರುವ ಹೊತ್ತಿನಲ್ಲೇ ಈ ಫಟಿಂಗರು, ತಾವಿರುವ ಮಾತ್ರವಲ್ಲ ತಾವಾಗಬಯಸುವ ಪಾತ್ರವನ್ನೂ ಸುಲಭವಾಗಿ ಅನುಭವಿಸುವ ಸಾಧ್ಯತೆ ಹೊಂದಿರುತ್ತಾರೆ.ಅಹಂ ಅನ್ನು ಗೆದ್ದು ಇನ್ನೊಂದಾಗುವ ಕ್ರಿಯೆ ನಮಗೆ ಮುಕ್ತಿಯಂತಹ ಘನಂದಾರಿ ಕರ್ಮವಾಗಿ ಕಾಣಿಸುವ ಹೊತ್ತಿಗೇ, ಮಕ್ಕಳು ಅದಲ್ಲದ ಇನ್ನೊಂದಾಗಿ ಸುಖಿಸುತ್ತಿರುತ್ತಾರೆ, ಅದೇನು ಮಹಾ ಎಂಬಂತೆ.

ನಿಮಗೆ ತಿಳಿದಿದೆಯೇ?ರಂಗದ ಮೇಲೆ ಮಖವಾಡತೊಟ್ಟು ಅಭಿನಯಿಸುವ ಸಂದರ್ಭದಲ್ಲಿಯೂ ಮಕ್ಕಳು ತಾವು ಕಾಣಿಸುತ್ತಿದ್ದೇವೆ ಎಂಬ ಭಾವದಲ್ಲಿಯೇ ಪೂರ್ಣವಾಗಿ ಸಂತೋಷದಿಂದ ರಂಗದಮೇಲೆ ಬದುಕುತ್ತಾರೆ(ದೊಡ್ಡವರ ಅಧಿಕ ಪ್ರಸಂಗದ ಮೂಗುತೂರಿಸುವಿಕೆ ಇಲ್ಲದಿದ್ದರೆ).

ನನ್ನ ಬೌದ್ಧಿಕ ಚಾಪಲ್ಯಕ್ಕೋ, ಕೆಲವೊಮ್ಮೆ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯೆಂಬ ಸ್ವಘೋಷಿತ ಅಹಂಗಾಗಿಯೋ ನಾನು ಆಗಾಗ ದೊಡ್ಡವರಿಗಾಗಿ ದೊಡ್ಡವರ ನಾಟಕ ಮಾಡುತ್ತಿರುವೆನಾದರೂ, ಹೊಸ  ಸೃಜನಶೀಲ ಕಲ್ಪನೆಗಾಗಿ,   ಕುಸಿಯುವ ‘ಊರ್ಜೆ’ಯನ್ನು ಮರಳಿಗಳಿಸಿಕೊಳ್ಳುವದಕ್ಕಾಗಿ, ಹೊಸ ಉಸಿರಿಗಾಗಿ ನಾನು ಮರಳುವದು ಮಕ್ಕಳ ನಾಟಕಕ್ಕೇ. ದೈನಂದಿನ ವಸ್ತು ಜಗತ್ತಿನ ತರ್ಕವನ್ನು ಮೀರುವದಕ್ಕೆ ಮತ್ತು ಹೊಸ ಸತ್ಯದ ಸಾಧ್ಯತೆ ಹುಡುಕುವ ವಿಧಾನಗಳ ಅನ್ವೇಷಣೆಗೆ ಮಕ್ಕಳ ನಾಟಕ ಬಹುದೊಡ್ಡ ಅವಕಾಶ.

ನಾನಿರುವ ನೆಲೆಯಿಂದ ನನ್ನ ಎತ್ತರಕ್ಕೊಯ್ದ ಅವರ ಋಣ ಬಹುದೊಡ್ಡದು. ನಾಟಕ ಅಂದರೆ ‘ಸ್ವಾತಂತ್ರ್ಯ’ ಎಂದು ಹೇಳಿದ, ಪುಣ್ಯಕೋಟಿ ನಾಟಕದಲ್ಲಿ ಹುಲಿಯನ್ನು  ಸಾಯಿಸದೇ ಇರೋಕಾಗತ್ತ? ಅಂತ ಕೇಳಿದ ಎಷ್ಟೆಲ್ಲ ಮಕ್ಕಳು, ನನಗೆ ಹದ್ದನ್ನು ಮೀರುವ ಹಾದಿಯನ್ನೂ, ಎಲ್ಲಿ ಆಚೆಯ ದಂಡೆ ಅನ್ನೋದನ್ನೂ ಕಾಣಿಸಿದ್ದಾರೆ.ಅವರು ರಂಗಜಗತ್ತಿನ ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳಂತೆ.ರಂಗಭೂಮಿಯಲ್ಲಿ ಅಧಿಕೃತವಾದ ಅಥವಾ ಅಕಾಡೆಮಿಕ್ ಅನ್ನಬಹುದಾದ ಅಧ್ಯಯನವನ್ನೇನೂ ಮಾಡದ ಹಳ್ಳಿಯಂಚಿನ ನನಗೆ ದೆಹಲಿ ಕಾಣಿಸಿದವರು  ಹಳ್ಳಿಯ ಈ ಮಕ್ಕಳೇ. ಅಂತಹ ಹಳ್ಳಿ ಮಕ್ಕಳ ಜತೆ ನಡೆಸಿದ ದಿಲ್ಲಿಪಯಣದ ರಂಗಾನುಭವದ ಮೂರು ಘಟನೆಗಳನ್ನು ಹಂಚಿಕೊಳ್ಳುವೆ. ಮೊದಲು ಕೂರಾಡಿ ಎಂಬ ಹಳ್ಳಿಗೆ ಹೋಗೋಣ.

ಕತೆ ೧.    ಕೂರಾಡಿಯ ‘ಕಂಸಾಯಣ’

ಈ ಕತೆಯ ಆರಂಭಕ್ಕೆ ಕಾರಣರಾದವರು ದಿವಂಗತ ಕೂರಾಡಿ ಸೀತಾರಾಮಶೆಟ್ಟರು.ಈ ಕತೆಯಲ್ಲಿ ಕೂರಾಡಿ ಹಳ್ಳಿಯೊಂದರ ಶಾಲೆ ಮತ್ತು ಸೀತಾರಾಮಶೆಟ್ಟಿ ಎನ್ನುವ ವ್ಯಕ್ತಿ ಇವರಿಬ್ಬರೂ ಅಭಿನ್ನ ಎಂಬಂತೆ ಇದ್ದಾರೆ.

ಹಲವರಿರುತ್ತಾರೆ ಬದುಕು ಕರೆದತ್ತ ಪಯಣಿಸುವವರು; ಕೆಲವರಿರುತ್ತಾರೆ ತನ್ನಿಷ್ಟದಂತೆ ಬದುಕ ದಾರಿ ಸವೆಸುವವರು. ಹಲವರಿಗೆ ಬದುಕು ಅದು ವಿಧಿ ಬರೆದ ಕರ್ಮ. ಕೆಲವರಿಗೆ ಮಾತ್ರ ಅದು ಹಟ ಹಿಡಿದು ರೂಢಿಸಿದ ಜೀವನದ ಧರ್ಮ.  ಹಲವರಿಗೆ ಬದುಕು ಎಂದೋ ನಿಲ್ಲಬೇಕಾದ ತಾಣಕ್ಕಾಗಿ ಈಗಿನಿಂದಲೇ ಮಾಡುವ ತಯಾರಿ;

ಕೆಲವರಿಗೆ ಅದು ಚಲನಶೀಲ, ನಿಲುಗಡೆಯ ಸಾವು ಬಯಸದ ಚಾರಣ. ಅಂಥವರಿಗೆ ಮಾತ್ರ ಕ್ಷಣ ಕ್ಷಣಕ್ಕೂ ಬದುಕು ಒಡ್ಡುವ ಹಲವು ಪಂಥಾಹ್ವಾನದ ಪ್ರಯಾಸವನ್ನು, ಕೆಲವು ಸಾರ್ಥಕ ಕ್ಷಣಗಳ ಮುಂದೆ ನಿವಾಳಿಸಲು ಸಾಧ್ಯ.ಅಂಥವರು ಕೆಲವರೇ. ಈ ಕೆಲವರಲ್ಲಿ  ಒಬ್ಬರು ಕೂರಾಡಿ ಸೀತಾರಾಮ ಶೆಟ್ಟಿಯವರು.

ಅವರನ್ನು ನಾನು ನೋಡಿದ್ದು ಬಿ.ವಿ.ಕಾರಂತರು ತುಮರಿಯಲ್ಲಿ ಕೆ.ಜಿ.ಕೃಷ್ಣಮೂರ್ತಿಯವರು ಸಂಘಟಿಸಿದ, ಅವರ ಜೀವಿತದ ಕೊನೆಯ ರಂಗ ಶಿಬಿರ ನಡೆಸಿಕೊಟ್ಟ ಕಾಲದಲ್ಲಿ.ಐ.ಕೆ.ಬೋಳುವಾರರು ನನ್ನನ್ನು ಶೆಟ್ಟರಿಗೆ ಪರಿಚಯಿಸುತ್ತ ‘ಇವರು ನಿಮ್ಮ ಹಾಗೇ ಹೈಸ್ಕೂಲು ಮೇಷ್ಟ್ರು.ಮತ್ತೆ ನಿಮ್ಮ ಹಾಗೇ ನಾಟಕದ ಮೇಷ್ಟ್ರು’ ಎಂದಿದ್ದರು. ಆ ಕಾಲಕ್ಕೆ ಕೂರಾಡಿಯವರು ನಾಟಕ ರಂಗದಲ್ಲಿ ಹೆಡ್‌ಮೇಷ್ಟ್ರು, ನಾನು ಬರೀ ಮೇಷ್ಟ್ರು.ಆಗಲೇ ನಮ್ಮಿಬ್ಬರಿಗೂ ಸಣ್ಣ ಲವ್ ಬೆಳೆಯಿತು.

೨೦೦೯. ಬೆಂಗಳೂರಿನಲ್ಲಿ ಎನ್.ಎಸ್.ಡಿ.ಆರ್.ಆರ್.ಸಿ.ಯಿಂದ ನಾಟಕೋತ್ಸವ. ಕೂರಾಡಿಯವರು ಲಾವಣ್ಯ ತಂಡದಿಂದ ‘ದೃಷ್ಟಿ’ ತಂದಿದ್ದರು. ನಾನು ಹಾವೇರಿ ತಂಡದವರ ‘ಉಷಾಹರಣ’ನಾಟಕ ತಂದಿದ್ದೆ. ಸುರೇಶ ಅನಗಳ್ಳಿಯವರ ಚೇಂಬರಿನಲ್ಲಿ ಕುಳಿತು ಕೂರಾಡಿಯವರು ಹೇಳಿದರು.“ ಈ ವರ್ಷ ನಮ್ಮಲ್ಲಿಗೆ ಶ್ರೀಪಾದ ಭಟ್ಟರನ್ನು ಕಳಿಸಿಕೊಡಿ” ಅಂತ. ಅನಗಳ್ಳಿ ತಮಾಶೆ ಮಾಡುತ್ತ “ನೀವು ಹೇಳಿದವರನ್ನು ಕಳಿಸಲು ಸಾಧ್ಯವಿಲ್ಲ.

ನಾವು ಕಳಿಸಿದ ನಿರ್ದೇಶಕರಿಂದ ನಾಟಕ ಮಾಡಿಸಬೇಕು” ಎಂದರು.ಕೂರಾಡಿ ತಕ್ಷಣ “ನಿಮ್ಮ ಎನ್.ಎಸ್.ಡಿ.ಯವರು ನಿರ್ದೇಶಕರಿಗೆ ಕೊಡುವ ಸಂಭಾವನೆಯನ್ನು ನಾನು ನಾಳೆಯೇ ಇವರಿಗೆ ಕೈಯಿಂದ ಕೊಡ್ತೆ. ಕಳಿಸ್ತೀರೊ, ಇವರನ್ನೇ, ಇಲ್ದಿದ್ರೆ ನಾನೆ ರ‍್ಕಂಡ ಹೋಗ್ತೆ. ನಾವೇನು ನಿಮ್ ಎನ್.ಎಸ್.ಡಿ.ಇದ್ದದ್ದಕ್ಕೇ ನಾಟಕ ಮಾಡೂದಾ.”ಅಂದರು. ಅನಗಳ್ಳಿ ನಕ್ಕರು. ನನಗೆ ನಿಜಕ್ಕೂ ಈ ಸಂಭಾಷಣೆ ಪೂರ್ತಿ ಅರ್ಥವಾಗಿರಲಿಲ್ಲ. ಅನಗಳ್ಳಿ ನನ್ನ ನಾಟಕದ ಮೇಷ್ಟ್ರಾಗಿದ್ದರಿಂದ ನಾನೂ ಅವರನ್ನು ಏನೆಂದು ಆ ಸಮಯದಲ್ಲಿ ಕೇಳಹೋಗಲಿಲ್ಲ.

ಹೀಗೆ ನಾನು ಕಣ್ಣು ಬಾಯಿ ಬಿಟ್ಟುಕೊಂಡು ಇವನ್ನೆಲ್ಲ ನೋಡುತ್ತಿರುವಂತೆಯೇ, ನಿಜವಾಗಿಯೂ ನನಗೆ ಇವೆಲ್ಲ ಸರಿಯಾಗಿ ಅರ್ಥವಾಗುವ ಮೊದಲೇ ನಾನು ಬ್ರಹ್ಮಾವರ ಸಮೀಪದ ಕೂರಾಡಿ ಎಂಬ ಹಳ್ಳಿಯ ಶಾಲೆಯೊಂದಕ್ಕೆ ನಾಟಕ ನಿರ್ದೇಶಿಸಲು ನೇಮಕ ಆಗಿಬಿಟ್ಟಿದ್ದೆ. ಅಂದು ಕೂರಾಡಿಯ ಶೆಟ್ಟರ ಗತ್ತು ಕಂಡೆ.

ಆರ್ಥಿಕವಾಗಿ ಹಿಂದುಳಿದ, ಹಳ್ಳಿಗಾಡಿನ ಮಕ್ಕಳನ್ನು ಹೊಂದಿದ ಪ್ರೌಢಶಾಲೆಯೊಂದನ್ನು ಕೂರಾಡಿ ಎಂಬ ಹಳ್ಳಿಯಲ್ಲಿ ಸೀತಾರಾಮರು ನಡೆಸುತ್ತಿದ್ದರು.ಅಲ್ಲಿ ಅವರು ಶಾಲಾ ಮಕ್ಕಳಿಗೆಂದು ‘ಸವಿತಂ’ (ಸರ್ವೋದಯ ವಿದ್ಯಾರ್ಥಿತಂಡ) ಎಂಬ ರಂಗತಂಡವನ್ನು ನಡೆಸುತ್ತಿದ್ದರು. ಅವರೇ ಸ್ವತಹ ಪ್ರಸಿದ್ಧ ನಾಟಕ ನಿರ್ದೇಶಕರಾಗಿದ್ದರೂ ಕೂಡ ಮಕ್ಕಳಿಗೆ ಹೊಸಕಲಿಕೆಗೆ ನೆರವಾಗಲೆಂದು ಹೊರಗಿನ ನಿರ್ದೇಶಕರನ್ನು ಕರೆಸಿ ನಾಟಕ ಮಾಡಿಸುತ್ತಿದ್ದರು.

ಆ ವರ್ಷ ನಾನು ಆ ಶಾಲೆಯ ನಂಟಿಗೆ ನೆಂಟನಾದೆ.ಜತೆಗೆ ಕೂರಾಡಿಯವರ ಸ್ನೇಹಿತರಾದ ರಂಗನಿರ್ದೇಶಕರೂ, ಸಂಘಟಕರೂ ಆದ ಉದ್ಯಾವರ ನಾಗೇಶ ಮತ್ತು ರಾಜುಮಣಿಪಾಲ ಇವರ ಸ್ನೇಹ ವರ್ತುಲವನ್ನೂ ಸೇರಿದೆ. ಮುಂದೆ ಉಡುಪಿಯಲ್ಲಿ ದಶಕಗಳ ಕಾಲ ನನ್ನನ್ನು ಬೆಳಗಿಸಿದ ಹಲವು ರಂಗಚಟುವಟಿಕೆಗಳಿಗೆ ಕಾರಣವಾದ ರಂಗಸಂಬಂಧವಿದು.

ಅಗಷ್ಟ್ ಕೊನೆಯಲ್ಲಿ ಕೆಲದಿನಗಳು ರಜೆ ಹಾಕಿ ನಾನು ಕೂರಾಡಿಗೆ ಹೋದೆ. ಕೂರಾಡಿಯ ಶಾಲೆ, ಅಲ್ಲಿಯ ಬಯಲು ರಂಗ ಮಂದಿರ, ಶಾಲಾ ಮೈದಾನ, ಎದುರುಗಡೆಯಲ್ಲೇ ಇರುವ ಪುಟ್ಟ ವಸತಿ ಗೃಹ, ಪ್ರೀತಿಯ ಶಿಕ್ಷಕರು, ರಭಸದ ತೊರೆಯಂತಿರುವ ಮಕ್ಕಳು . . .ನಿಜ,  ನಾನು ನೆಮ್ಮದಿಯಲ್ಲಿ ತುಳುಕಿದೆ.

‘ಕಂಸಾಯಣ’ ನಾಟಕ ಎತ್ತಿಕೊಂಡೆ.ಎಚ್.ಎಸ್.ವೆಂಕಟೇಶಮೂರ್ತಿಯವರ ಪಠ್ಯವದು. ಬಿ.ವಿ.ಕಾರಂತರ ನೆಲದಲ್ಲಿ ‘ಗೋಕುಲನಿರ್ಗಮನ’ದ ನಂತರದರ ಕತೆ ಹೇಳುವ ಉಮೆದಿಯೂ ಜತೆಗಿತ್ತು. ಮಥುರೆಯನ್ನು ವೃಂದಾವನ ಮಾಡುವ ಕಥನವದು.ಈ ನಾಟಕ, ಗೋಕುಲ ನಿರ್ಗಮನದ ನಂತರದ ಕತೆಯನ್ನು ಹೇಳುತ್ತದೆ. ಆದರೆ ಅಷ್ಟೇ ಅಲ್ಲ.ಇದು ಕೇವಲ ಗೋಕುಲ ನಿರ್ಗಮನದ ಮುಂದುವರಿದ ಭಾಗವಲ್ಲ;

ಅದರ ಜತೆ ಸಂವಾದಿಸುವ ಮಹತ್ವಾಕಾಂಕ್ಷೆಹೊಂದಿದ್ದು. ಗೋಕುಲವೇ ನಿರ್ಗಮನವಾದ ವಿಷಾದದಲ್ಲಿ ಗೋಕುಲನಿರ್ಗಮನ ಕೊನೆಯಾದರೆ, ನಾವಿರುವ ತಾಣದಲ್ಲಿಯೇ ಗೋಕುಲವನ್ನು ಮರುಸೃಷ್ಟಿಸಿಕೊಳ್ಳಬಲ್ಲ ಸಾಧ್ಯತೆಯಕಡೆ ಈ ನಾಟಕ ಗಮನಸೆಳೆಯುತ್ತದೆ.

ಮಥುರೆಯ ಹಿಂಸ್ರ ರಾಜಕೀಯದ ನಡುವೆಯೂ ಬೃಂದಾವನವನ್ನು ಸೃಷ್ಟಿಸ ಬಯಸುವ ಕಥಾನಕವಿದು. ವ್ಯಾಖ್ಯಾನಗಳ ನಡುವೆ ಆಖ್ಯಾನಗಳು ಕಳೆದು ಹೋಗದಂತೆ, ಆಖ್ಯಾನವೇ ವ್ಯಾಖ್ಯಾನವೂ ಆಗುವಂತೆ, ರಂಗಭೂಮಿಯ ಸಂಭ್ರಮಗಳು ಜನಮಾನಸದಿಂದ ದೂರಹೋಗದಂತೆ, ಶುಷ್ಕ ಬುದ್ಧಿಮತ್ತೆ ಮತ್ತು ಅತಿಭಾವುಕತೆಯ ಭಾರದ ನಡುವೆ ವಿವೇಕ ತಪ್ಪದಂತೆ ಸೂಕ್ತ ಮಧ್ಯಪ್ರವೇಶ ಮಾಡುತ್ತದೆ ಇದು. ನಗರ ಮತ್ತು ಗ್ರಾಮೀಣ ಬದುಕಿನ ಅಂತೆಯೇ ಪುರಾಣ ಮತ್ತು ಇತಿಹಾಸದ ವಾಗ್ವಾದವನ್ನೂ ನವಿರಾಗಿ ಎತ್ತಿಕೊಳ್ಳುವ ಪಠ್ಯವಿದು. ಜನಪದ, ಆಧುನಿಕ ಈ ಎರಡೂ ರಂಗಭೂಮಿಯ ಗುಣಗಳನ್ನು ಸೇರಿಸಲು ಇದು ಒತ್ತಾಯಿಸುತ್ತದೆ.

ಮಕ್ಕಳಮೂಲಕ ಕಾವ್ಯದ ಭಾಷೆಯನ್ನು ರಂಗದಲ್ಲಿಯೂ ಓದಬಹುದಾದ ಸಾಧ್ಯತೆಯನ್ನು ಹುಡುಕಬೇಕು ಮತ್ತು ಅವರ ಭಾವದೀಪ್ತಿಯನ್ನು ಮೀಟುತ್ತಲೇ ಭಾಷೆಯ ಅಭಿಜಾತ ಶಕ್ತಿಯನ್ನು ಅವರ ಆಧುನಿಕ ಮನಸ್ಸಿಗೆ ದಾಟಿಸಬೇಕು ಎಂಬ ಹಂಬಲದಿಂದ ಈ ರಂಗಪಠ್ಯ ಕಟ್ಟಲು ಪ್ರಯತ್ನಿಸಿದೆ.ಕಿರಣಭಟ್ ಬಿಡಿಸಿಕೊಟ್ಟ ರಂಗಚಿತ್ರಗಳಿಗೆ ದಾಮೋದರ ನಾಯ್ಕ್ ಮೂರ್ತರೂಪ ನಿಡಲು ಯತ್ನಿಸುತ್ತಿದ್ದ.

ಮಕ್ಕಳ ನಾಟಕದಲ್ಲಿ ಮಾತ್ರ ಸಾಧ್ಯವಾಗುವ ತುಂಟತನ, ತರ್ಕದ ಬೇಲಿಹಾರುವ ಸಾಧ್ಯತೆ ಇವನ್ನೆಲ್ಲ ಗಮನದಲ್ಲಿಟ್ಟು ಆಟ ಕಟ್ಟಲಾಯಿತು.ಉಧಾ.ಪು.ತಿ.ನ. ಅವರ ಗೋಕುಲ ನಿರ್ಗಮನ ನಾಟಕದಲ್ಲಿದಲ್ಲಿ ಕೃಷ್ಣ ಕೊಳಲನ್ನು ಗೋಕುಲದಲ್ಲಿಯೇ ಬಿಟ್ಟು ಹೋಗ್ತಾನೆ.

ಈ ನಾಟಕದಲ್ಲಿ  ಆತ ಕೊಳಲು ತರ‍್ತಾನೆ. ‘ಹೊಳಲಿಗೆ ತಾನೆ ಕೊಳಲಿನ ಅವಶ್ಯಕತೆ ಇರೋದು?’. ಹೀಗಾಗಿ ಅಗತ್ಯವಾದ ಕಡೆಗಳಲೆಲ್ಲ ದೊಡ್ಡಗಾತ್ರದ ಕೊಳಲು ರಂಗದಲ್ಲೆಲ್ಲ ಪ್ರತಿಮೆಯಾಗಿ ಚಲಿಸುವಂತೆ ಮಾಡಲಾಯಿತು. ಚಕ್ರ ಕಟ್ಟಿಕೊಂಡ ಕೊಳಲನ್ನು ಹಿಡಿದು ಮಕ್ಕಳು ಆಡಿದ್ದೇ ಅಡಿದ್ದು.ಕತೆಯಲ್ಲಿ ಆನೆಯೊಂದನ್ನು ಕೃಷ್ಣ ವಧಿಸಬೇಕಾದ ಸನ್ನಿವೇಶವಿದೆ. ಆ ದೃಶ್ಯದಲ್ಲಿ ಮಕ್ಕಳೆಲ್ಲ ಗುಂಪಾಗಿ ವೇದಿಕೆಯ ಮೇಲೆ ಕರ‍್ಟೂನ್ ಮಾದರಿಯ ಆನೆಯನ್ನು ಎಲ್ಲರೆದುರೇ ಸೃಷ್ಟಿಸುವದು,  ಕೃಷ್ಣ ಆ ಆನೆಯ ಮೇಲೇರಿದ ನಂತರ ಗುಂಪು ಚದುರಿ ಆನೆಯನ್ನು ವಿಸರ್ಜಿಸುವದು ಒಂದು ಆಟ.

ನಂತರ ಕುಣಿಯುತ್ತ ನಿರ್ಗಮಿಸುವ ಮಕ್ಕಳ ಕೈಯಲ್ಲಿ ಸೊಂಡಿಲು, ಬಾಲ ಇವೆಲ್ಲ ಲಾಸ್ಯವಾಡುತ್ತವೆ. ಆ ಮಕ್ಕಳ ಭಾಷೆಯಲ್ಲೇ ಹೇಳೋದಾದರೆ ‘ಗಮ್ಮತ್’ ಆಟ. ಮಕ್ಕಳ ಕುಣಿತ ಮತ್ತು ರಂಗ ಚಲನೆಯನ್ನು ಅನುಸರಿಸಿ ಸಂಗೀತ ಸಂಯೋಜಿಸಿದ್ದೆ. ಹೀಗಾಗಿ ಮಕ್ಕಳಿಗೆ ನಾಟಕದಲ್ಲಿ ಮಾತು ಬೇರೆ ಗೀತಬೇರೆ ಎಂದು ಅನಿಸಲೇ ಇಲ್ಲ. ತಾಲೀಮಿನ ಸಂದರ್ಭದಲ್ಲಿ ನಮ್ಮ ವ್ಯಾಯಾಮ ಮತ್ತು ರಂಗಾಟಗಳೆಂದರೆ ನಾಟಕದ ಹಾಡುಗಳನ್ನು ಹಾಡುತ್ತ ದೇಹವನ್ನು ಅದಕ್ಕೆ ಒಪ್ಪಿಸಿ ಕುಣಿಯುವದೇ ಆಗಿತ್ತು. ಹೀಗಾಗಿ ದಿನಕ್ಕೊಂದು ವಿನ್ಯಾಸ ಅದಕ್ಕೆ ಒದಗುತ್ತ ಬಂತು.ಮಕ್ಕಳಿಗೆ ಹಾಡುಗಳು ಪ್ರಿಯವಾದವು;

ಎಲ್ಲರೂ ಕುಂತಲ್ಲಿ ನಿಂತಲ್ಲಿ ಹಾಡುತ್ತಿದ್ದರು; ಆ ಶಾಲೆಯ ಹಲವು ಮಕ್ಕಳು, ನಾಟಕದಲ್ಲಿ ಇಲ್ಲದ ಮಕ್ಕಳೂ ಹಾಡುಗಳನ್ನು ಗುನುಗುನುಗಿ ಸುತ್ತಿದ್ದರು. ಮಂಜುಳ ಸುಬ್ರಹ್ಮಣ್ಯ ಆಡುತ್ತ ಹಾಡುತ್ತಿದ್ದ ಮಕ್ಕಳ ದೇಹಕ್ಕೆ ಅಗತ್ಯ ಆಂಗಿಕ ಮುದ್ರೆಗಳನ್ನು ಜೋಡಿಸುತ್ತ ಅದನ್ನು ನಾಟ್ಯವಾಗಿಸಿದರು.ಶಾಲೆಯಲ್ಲಿರುವ ಮುರಿದ ಬೇಂಚು ಕುರ್ಚಿಗಳು ದಾಮೋದರ ನಾಯ್ಕರ ಕೈಯಲ್ಲಿ ರಂಗಸಜ್ಜಿಕೆಗಳಾದವು.

ಮುಂದೆ ನಾಟಕ ನೋಡಿದ ಎಚ್.ಎಸ್.ವಿ.ಯವರು ‘ಶ್ರೀಪಾದ ಭಟ್ಟರು ಈ ನಾಟಕವನ್ನು ಮೊದಲು ಪ್ರಯೋಗಿಸಿದಾಗ ನನಗೆ ಹೊಸ ಸಾಧ್ಯತೆಯೊಂದು ಗಮನಕ್ಕೆ ಬಂತು. ಬುಡಕಟ್ಟು ಮತ್ತು ನಾಗರಿಕ ಜಗತ್ತಿನ ಘರ್ಷಣೆಯಾಗಿ ಅದನ್ನು ಪಡಿಮೂಡಿಸುವ ಸಾಧ್ಯತೆ ಹೊಳೆಯಿತುʼ ಅಂತ ದಾಖಲಿಸಿದ್ದಾರೆ.

ಕೂರಾಡಿ ಶೆಟ್ಟರು ದಿನವೂ ರಿರ‍್ಸಲ್ಲಿಗೆ ಬಂದು ಕೂರುತ್ತಿದ್ದರು.ನಾನು ಕಟ್ಟುತ್ತಿದ್ದ ದೃಶ್ಯಗಳ ಮೊದಲ ಪ್ರೇಕ್ಷಕರು ಅವರೇ.ನಾನು ಅವರ ಮುಂದೆ ಮಕ್ಕಳನ್ನು ಸೇರಿಕೊಂಡು ಆಟಕಟ್ಟುವ ಆಟಗಾರ.೧೦ ದಿನಗಳಲ್ಲಿ ಕಂಸಾಯಣದ ಮುಕ್ಕಾಲು ಭಾಗ ಸಿದ್ಧ.ಆ ಹಿರಿಯರ ಮುಂದೆ ಮಕ್ಕಳ ಜತೆ ನಟಿಸುತ್ತ ಕುಣಿಯುವಾಗ ನನಗೆ ಯಾವತ್ತೂ ಮುಜುಗರ ಆಗಲಿಲ್ಲ; ಏಕೆಂದರೆ ಅವರು ಹೊರಗಿನವರು ಅನಿಸಲೇ ಇಲ್ಲ. ಆಟ ಸಿದ್ದಗೊಳ್ಳುವ ಪರಿಯನ್ನು ಅವರು ಚಪ್ಪರಿಸಿ ಆನಂದಿಸುತ್ತಿದ್ದರು.

ನನಗೋ ಅವರ ಮುಂದೆಯೇ ಕುಣಿಯುವ ತವಕ.ಆ ದಿನಗಳಲ್ಲಿ ಒಂದು ದಿನವೂ ನನಗೆ ನಿರ್ದೇಶನದಲ್ಲಿ ಹೀಗೆ ಆಗಬೇಕಿತ್ತು ಅನ್ನುವ ಸೂಚನೆಯನ್ನು ನೀಡಿದವರಲ್ಲ; ಆ ಹೊತ್ತಿಗಾಗಲೇ  ಆ ಭಾಗದ ಹೆಸರಾಂತ ನಿರ್ದೇಶಕರಾಗಿದ್ದರೂ. ಆ ಹನ್ನೆರಡು ದಿನಗಳ ನಂತರ ನಾಟಕವನ್ನು ಅವರ ಕೈಗೊಪ್ಪಿಸಿ ಶಾಲೆಗೆ ಮರಳಿದೆ.ಅಕ್ಟೋಬರ್ ರಜೆಯಲ್ಲಿ ನಾಟಕ ಪೂರ್ತಿಗೊಳಿಸಿ ಪ್ರದರ್ಶನ ಮಾಡುವದೆಂದು ಇಬ್ಬರೂ ನಿರ್ಧರಿಸಿದ್ದೆವು.

ಆದರೆ ಆಘಾತ ಕಾದಿತ್ತು.ಆ ಅಂಥ ಅವರ ಗಟ್ಟಿಜೀವಕ್ಕೆ ಪಾರ್ಶ್ವವಾಯು ಎರಗಿತ್ತು. ಗೆಳೆಯ ಉದ್ಯಾವರ ನನ್ನನ್ನು ಅವರಿದ್ದ ಆಸ್ಪತ್ರೆಗೆ ಕರೆದೊಯ್ದರು.ಕೂರಾಡಿಯವರ ಶ್ರೀಮತಿಯವರು ಹನಿಗಣ್ಣಾಗಿ ಹೇಳಿದರು.“ಅವರಿಗೆ ನಾಟಕದ್ದೇ ಚಿಂತೆ.ಇನ್ನು ಹೇಗೋ ಏನೋ ಅಂತ” ನಾನು ಅವರಲ್ಲಿಗೆ ಹೋದೆ. ತೊದಲುತ್ತ ಏನೋ ಹೇಳ ಬಂದರು. ನಾನೆಂದೆ . . . “ ಅದು ನನ್ನ ನಾಟಕ. ಪ್ರದರ್ಶನಕ್ಕೆ ನಿಮ್ಮ ಕರೀತೇನೆ. ಬನ್ನಿ ಅಷ್ಟೆ”. ಹೆಚ್ಚು ಮಾತನಾಡಲಾಗಲಿಲ್ಲ ನನಗೆ. ಅರರೇ!ನಾನೇ ನಾಟಕದ ಹುಚ್ಚ ಅಂತಿದ್ದೆ. ಇವರು ಅದರಲ್ಲಿ ನನ್ನ ದೊಡ್ಡಪ್ಪ.!!

ವಾರದಲ್ಲಿ ನಾಟಕ ಸಿದ್ಧಮಾಡಿ ಅವರಿಗೆ ತೋರಿಸಿದೆವು.

ಅಸಾಧಾರಣ ಮಕ್ಕಳವು.ಕಂಸನ ಪಾತ್ರವನ್ನು ಅಭಿಜಿತ್ ಅನ್ನುವ ಹುಡುಗ ಮಾಡ್ತಿದ್ದ. ಆತ ನನ್ನನ್ನು ಅದ್ಯಾವಪರಿ ನುಂಗ್ತಿದ್ದ ಅಂದರೆ, ಅವನಿಗಾಗಿ ನಾನು ಪಾತ್ರದ ನಡೆಗೆ ಸಂಕೀರ್ಣಚಲನೆಯನ್ನು ಎಷ್ಟು ಸೃಷ್ಟಿಸಿದರೂ ಅದನ್ನು ಸಲೀಸಾಗಿ ಅನುಸರಿಸಿ ಮುಂದೆ?ಅನ್ನುವಂತೆ ನೋಡ್ತಿದ್ದ.ಎಲ್ಲರೂ ಅಷ್ಟೆ. ಹಳ್ಳಿಯ ಶುದ್ಧ ಜೇನುತುಪ್ಪದಂತವರು.

ನಾಟಕ, ರಾಷ್ಟ್ರೀಯ ನಾಟಕ ಶಾಲೆ ಏರ್ಪಡಿಸುವ‘ಜಶ್ನೆಬಚಪನ್’ ಉತ್ಸವಕ್ಕೆ ಆಯ್ಕೆಯಾಯಿತು. ಹಳ್ಳಿ ಶಾಲೆಯ ತಂಡ ದೆಹಲಿಗೆ ಹೊರಟಿತು. ನಾಟಕದ ಆರಂಭದಲ್ಲಿ ಗೋಕುಲದ ಹಳ್ಳಿಯಿಂದ ಮಥುರೆಯ ನಗರಕ್ಕೆ ಹೊರಟ ಗೊಲ್ಲರ ತಂಡ ‘ನಾವು ಹಳ್ಳಿ ಹೈದರು ನಮ್ಮನೆಲ್ಲಿಗೊಯ್ದರು’ ಅಂತ ಹಾಡುವ ಹಾಡೊಂದಿದೆ. ಕೂರಾಡಿಯ ಹಳ್ಳಿ ಹೈದರೂ ದಿಲ್ಲಿಯ ಶಹರಕ್ಕೆ ಹೀಗೆ ನಡೆದರು.

ಈ ಮಧ್ಯೆ ವೀಲ್‌ಚೇರಿನಲ್ಲಿ ಮಾತ್ರ ಕುಳಿತುಕೊಳ್ಳಬಹುದಾಗಿರುವ ಸ್ಥಿತಿಯಲ್ಲಿ ಕೂರಾಡಿಯವರೂ ದೆಹಲಿಗೆ ಹೊರಟರು. ವಿಮಾನ ಯಾನಮಾಡಲು ಎಷ್ಟೇ ಒತ್ತಾಯಿಸಿದರೂ ಕೂಡ, ಮಕ್ಕಳೊಂದಿಗೆ ರೇಲ್ವೆಯಲ್ಲಿಯೇ ಬರುವದಾಗಿ ಹಠಹಿಡಿದು ಬಂದರು.!ದೆಹಲಿಯಲ್ಲಿ ಅವರ ಮಕ್ಕಳ ನಾಟಕ ನೋಡಿ ಹನಿಗಣ್ಣಾದರು. ತೊದಲುತ್ತಲೇ ಅಭಿಮಾನದಿಂದ ಅಲ್ಲಿಯ ಚರ್ಚೆಗಳಲ್ಲಿ ಭಾಗವಹಿಸಿದರು.

ರಾಷ್ಟ್ರೀಯ ನಾಟಕಶಾಲೆ ದೆಹಲಿಯಲ್ಲಿ ‘ಥಿಯೇಟರ್ ಇನ್ ಎಜುಕೇಷನ್’ ಅನ್ನುವ ವಿಭಾಗವಿದೆ. ಮಕ್ಕಳ ನಾಟಕೋತ್ಸವವನ್ನು ಸಂಘಟಿಸುವವರು ಈ ಘಟಕದವರು. ಮಕ್ಕಳಿಗಾಗಿ ದೊಡ್ಡವರು ಅಭಿನಯಿಸುವ ತಂಡವಿದು.ಎನ್.ಎಸ್.ಡಿ.ಯಲ್ಲಿ ಪದವಿ ಪಡೆದ ಹಿರಿಯರನ್ನು ಈ ತಂಡ ಒಳಗೊಂಡಿರುತ್ತದೆ.ತುಂಬ ಮಹತ್ವದ, ಸಾಮಾಜಿಕ ಜವಾಬ್ದಾರಿಯ ಪಠ್ಯಗಳನ್ನು ಈ ತಂಡ ಅಭಿನಯಿಸುತ್ತದೆ. ಅವರ ಸಂಘಟನೆಯ ಪ್ರೀತಿ, ಶಿಸ್ತು ಇವೆಲ್ಲ ನಮಗೆ ಉತ್ತಮ ಕಲಿಕೆಯೇ ಆಗಿದೆ.

ನಮ್ಮಂತಹ ಹವ್ಯಾಸಿ ರಂಗಕರ್ಮಿಗಳನ್ನು ಅವರು ನಡೆಸಿಕೊಳ್ಳುವ ಬಗೆ, ಉಳಿದವರ ಕೆಲಸವನ್ನೂ ಅವರು ಗೌರವಿಸುವ ಪರಿ,  ಭಾಷೆತಿಳಿಯದೇ ಗಲಿಬಿಲಿಗೊಳ್ಳುವ ನಮ್ಮನ್ನು ಸಂತೈಸುವ ಅವರ ರೀತಿ ಇವೆಲ್ಲ ನೋಡಿದ ನನಗೆ ‘ಏರಿದವನು ಚಿಕ್ಕವನಿರಲೇ ಬೇಕೆಂಬಾ ಮಾತನು ಸಾರಿದನು’ ಎಂದ ಕುವೆಂಪು ಕವನ ಪದೇ ಪದೇ ನೆನಪಾಗುತ್ತಿತ್ತು. ಎರಡು ನಾಟಕಗಳನ್ನು ಮಾಡುತ್ತಲೇ, ಹೆಗಲಮೇಲೆ ನೆಟ್ಟಗೆ ತಲೆಯಿರಿಸಿಕೊಳ್ಳಲು ಕಷ್ಟವಾಗುವ ನಮಗೆ ಅವರಿಂದ ಕಲಿಯೋದಕ್ಕೆ ಬಹಳವಿದೆ.

ನಾವು ಹಿರಿಯರು ಅನಿಸಿಕೊಂಡವರೆಲ್ಲ ಅನಗತ್ಯ ಗಾಬರಿ, ಗಾಂಭೀರ್ಯ, ತುಂಬಿಕೊಂಡು,ಎಷ್ಟು ಮಾತನಾಡಿದರೆ ಸರಿಯಾದೀತು ಅಂತ ಲೆಕ್ಕಾಚಾರ ಹಾಕಿ ನಡೆಯುತ್ತಿದ್ದ ವೇಳೆಯಲ್ಲಿಯೇ, ನಮ್ಮ ಮಕ್ಕಳು ಬ್ರಹ್ಮಾವರ ಪೇಟೆಯಲ್ಲಿರುವಷ್ಟೇ ಸಲೀಸಾಗಿ ಗದ್ದಲ ಮಾಡಿಕೊಂಡು ಬಿಡುಬೀಸಾಗಿ ಇದ್ದರು. ವಸತಿ ಮತ್ತು ಆಹಾರಕ್ಕೆ ಉತ್ತಮ ವ್ಯವಸ್ಥೆ ಮಾಡುತ್ತಾರಲ್ಲಿ. ಅಲ್ಲಿಯ ಕ್ಯಾಂಟೀನಿನಲ್ಲಿ ಮುಂಜಾನೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಪ್ರಾದೇಶಿಕ ವೈವಿಧ್ಯದ ಎಲ್ಲ ಬಗೆಯ ತಿಂಡಿಗಳನ್ನೂ ಇಟ್ಟಿರುತ್ತಾರೆ.

ದೇಶದ ಬೇರೆ ಬೇರೆ ಕಡೆಯ ಜನರು, ಅದರಲ್ಲಿಯೂ ಮಿಲಿಟರಿ ಸಂಬಂಧದ ಕಛೇರಿಯವರು ಬಂದು ಹೋಗುವ ತಾಣವಾಗಿತ್ತದು. ಅಂತಹ ಕಾಂಪ್ಲಿಮೆಂಟರಿ ಬ್ರೇಕ್ ಫಾಸ್ಟ್ ನೀಡುವ ಕ್ಯಾಂಟೀನನ್ನು ನಮ್ಮ ಮಕ್ಕಳು ಮೊದಲಸಾರಿ ನೋಡಿದವು. ನಮಗೂ ಮೊದಲ ಅನುಭವವೇ ಅದು. ಹಣ್ಣಿನಿಂದ ಹಿಡಿದು ಮಾಂಸದವರೆಗೆ ಎಲ್ಲವೂ ಅಲ್ಲಿ ಲಭ್ಯ. ನಿಮಗೆ ಬೇಕಾದುದನ್ನು ಆಯ್ದು ತಿಂದರಾಯ್ತು. ನಾವು ಅನುಮಾನಿಸುತ್ತ ಒಳಗೊಳಗೇ ಆಸೆಯಿದ್ದರೂ ಅದನ್ನು ಕಾಣಿಸಿಕೊಳ್ಳದೇ ಎರಡು ಇಡ್ಲಿಯನ್ನೋ, ದೋಸೆಯನ್ನೋ ತಾಟಿನಲ್ಲಿ ಹಾಕಿಕೊಂಡು, ಉಳಿದವುಗಳನ್ನು ಹಾಗೆ ಕಡೆಗಣ್ಣಿಂದ ನೋಡಿಕೊಂಡು ಟೇಬಲ್ ಮೇಲಿಟ್ಟುಕೊಂಡೆವು.

ಮಕ್ಕಳಿಗೆ ಇಲ್ಲಿ ಬೇಕಾದುದನ್ನು ಎಷ್ಟುಬೇಕೋ ಅಷ್ಟು ತಿನ್ನಬಹುದು ಅಂತ ಸೂಚನೆ ಸಿಕ್ಕಿದ್ದೇ ತಡ . . . ಅವರು ಒಮ್ಮೆ ಟೇಬಲ್ ಗಳ ಮೇಲೆ ಸಾಲಾಗಿ ಪೇರಿಸಿಟ್ಟ ದೇಶದ ಬಹುತ್ವದ ಮಾದರಿಯಂತಿದ್ದ ತಿನಿಸುಗಳನ್ನು ಹೀಗೆ ಕಣ್ಣಾಡಿಸಿದವರೇ, ತಟ್ಟೆಗಳನ್ನು ಎತ್ತಿಕೊಂಡು ಆಕ್ರಮಿಸಿಬಿಟ್ಟರು. . .ಅದೂ ಹೇಗೆಂತೀರಿ?. . .

 ಇಡ್ಲಿ ನಂತರ ದೋಸೆ ನಂತರ ಕಾರ್ನ್ಫ್ಲೆಕ್ಸ್ ನಂತರ ಚಪಾತಿ ಆಮೇಲೆ ಆಮ್ಲೆಟ್, ಬ್ರೆಡ್, ಅದಕ್ಕೆ ಜಾಮ್ ಮತ್ತು ಸಂಬಾರ್, ಆನಂತರ ಹಣ್ಣುಗಳು ಹೀಗೆ ಇತ್ಯಾದಿಗಳನೆಲ್ಲ ಒಂದಾದನಂತರ ಒಂದನ್ನು, ಯಾವ ಭಿನ್ನಭೇದವ ಮಾಡದೇ ಅವರು ಒಕ್ಕೊರಲಿನಿಂದ ತಿನ್ನುತ್ತಿದ್ದಂತೇ, ನೋಡನೋಡುತ್ತ ಎಲ್ಲ ವೈವಿದ್ಯಗಳೂ ಮೇಜಿನ ಮೇಲಿಂದ ಮಂಜಿನಂತೇ ಕರಗಿ ಇನ್ನಿಲ್ಲದಂತಾಗಲು, ಕ್ಯಾಂಟೀನಿನ ನೌಕರರೆಲ್ಲ ತುಸುಹೊತ್ತು ದಂಗುಬಡಿದು ನಿಂತವರು ಲಗುಬಗೆಯಿಂದ ಅಡಿಗೆ ಮನೆಗೆ ಓಡಾಡಿ ಮತ್ತೆ ಅವುಗಳನ್ನು ಭರ್ತಿಮಾಡುವವರೆಗೂ, ನಮ್ಮ ಮಕ್ಕಳು ತಾಳ್ಮೆಗೆಡದೇ ಕಾದು ಮತ್ತೆ ಆಹಾರ ವೈವಿದ್ಯಗಳು ಅಡಿಗೆ ಮನೆಯಿಂದ ಬಂದಿಳಿಯುತ್ತಿದ್ದಂತೇ ಅವನ್ನೂ ಸ್ವೀಕರಿಸಿದಂತವರಾಗಿ, ನಂತರ ಹಣ್ಣಿನ ರಸ ಕುಡಿದು, ಹರ‍್ಲಿಕ್ಸ್ ರುಚಿ ನೋಡಿ, ಕೊನೆಯದಾಗಿ ಕಾಫಿ ಕುಡಿಯಲು ಬಂದು ನಿಂತವರಾಗಿ. . .

ನಮಗೆ ಗಾಬರಿ. ಎಲ್ಲಿ ಇವರೆಲ್ಲರ ಅವಕೃಪೆಗೆ ತುತ್ತಾಗಿ ಬಿಡುತ್ತೇವೋ ಅಂತ. ಆದರೆ ಆ ಹೋಟೆಲ್ಲಿನವರು ತುಂಬ ಪ್ರಿಯವಾಗಿ ಸನ್ನಿವೇಶವನ್ನು ನಿಭಾಯಿಸಿ ನಮ್ಮ ಮುಜುಗರ ಕಡಿಮೆ ಮಾಡಿದ್ದಲ್ಲದೇ, ಕೊನೆಯದಿನ ತುಂಬ ಬೇಗನೆ ನಾವು ಹೊರಡುವವರಿದ್ದುದರಿಂದ ಸಾಕಷ್ಟು ಆಹಾರವನ್ನು ರೇಲಿನಲ್ಲಿ ತಿನ್ನಲು ಪಾರ್ಸಲ್ ಮಾಡಿಯೂ ಕೊಟ್ಟರು.

ಬಂದ ಒಂದೆರಡು ಗಂಟೆಯಲ್ಲಿಯೇ ಹೋಟೆಲ್ಲಿನವರನ್ನೂ, ನಮಗಾಗಿ ನೀಡಿದ ಬಸ್ ಚಾಲಕ ಮತ್ತು ಸಂಘಟನಾ ಕಲಾವಿದರನ್ನೂ ಯಾವತ್ತಿನ ಪರಿಚಯದ ಚಿಗಪ್ಪ ದೊಡಪ್ಪಂದಿರೇನೋ ಎಂಬಂತೆ ಹರಕು ಮುರುಕು ಹಿಂದಿ ಕನ್ನಡಾಂಗ್ಲ ನುಡಿಗಟ್ಟಿನಲ್ಲಿ ಹೈ ಬೈ ಎಂದು ಮಾತನಾಡಿಸುತ್ತ ಅವರ ಕಣ್ಣುಗಳಲ್ಲಿ ಹೊಸ ಸಂಬಂಧದ ಪ್ರೀತಿಯನುಕ್ಕಿಸಿ ಓಡಾಡುತ್ತ, ಸಮಯ ಸಿಕ್ಕಲೆಲ್ಲ ನಾಟಕದ ಹಾಡು ಕುಣಿತವನ್ನು ಅದು, ರಸ್ತೆ, ಬಸ್ಸು, ಹೋಟೆಲ್ ಅನ್ನುವ ಭೇದವನರಿಯದ ನೀಲಗಗನದಂತೆ ಆವರಿಸಿಕೊಂಡುಬಿಟ್ಟಿದ್ದರು ಈ ಮಕ್ಕಳು!!! ನಾವು ಮಕ್ಕಳೊಂದಿಗೆ ರಿಹರ್ಸಲ್ಲಿಗೆ ಬರುವದರೊಳಗೆ ಸಂಘಟಕನೆಯ ಹಲವರ ಮೊಬೈಲಿನಲ್ಲಿ ನಮ್ಮ ಮಕ್ಕಳ ಹಾಡು, ಕುಣಿತಗಳು ಹರಿದಾಡುತ್ತಿದ್ದವು.

ಕೂರಾಡಿಯ ಶಾಲಾ ಅಂಗಳಲ್ಲಿ ನೀಡಿದ ಪ್ರದರ್ಶನದಷ್ಟೇ ಸಲೀಸಾಗಿ ಮಕ್ಕಳು ಎನ್.ಎಸ್.ಡಿ.ಅಂಗಣದಲ್ಲಿಯೂ ಪ್ರವಹಿಸಿದರು. ನಾಟಕ ಮುಗಿದೊಡನೆ ಬಂದು ಮಾತನಾಡಿಸಿದ ಹಲವು ಹಿರಿಯರು, ಕಾರಂತರ ಗೋಕುಲ ನಿರ್ಗಮನದಂತೆ ಸೊಗಸಾದ ಚಲನೆಯನ್ನೂ, ಹಾಡನ್ನೂ, ಚಿತ್ರವನ್ನೂ ಕಂಡೆವು ಎಂದಾಗ ನಮಗೆಲ್ಲ ಪುಳಕ! ಆದರೆ ನಿಜವೇನೆಂದರೆ ಅದು ಮಕ್ಕಳ ಮುಗ್ಧತೆಯ ಬದುಕಿನ ಸೊಗಸಾಗಿತ್ತು, ಗೆಲುವಾಗಿತ್ತು.

ಅವರಿಗೆ ಉಡುಪಿಯ ಬಯಲು, ಎನ್.ಎಸ್.ಡಿ.ಯ ಬಯಲೂ ಒಂದೇ ಆಗಿತ್ತು.ಯಾವ ಹಮ್ಮು ಬಿಮ್ಮು ಅವರಲ್ಲಿರಲಿಲ್ಲ ಮತ್ತು ಅವರು ನಮ್ಮಂತೆ ಭ್ರಷ್ಟರಾಗಿರಲಿಲ್ಲ. ಹೀಗಾಗಿ ಉತ್ಸವನವೊಂದೇ ಅವರ ಪ್ರದರ್ಶನದ ಸ್ಥಾಯಿಭಾವವಾಗಿದ್ದ ಕಾರಣವದು.

ಜಶ್ನೆ ಬಚಪನ್ ಉತ್ಸವದಲ್ಲಿ ರಂಗಪ್ರದರ್ಶನದಷ್ಟೇ ಮುಖ್ಯವಾದ ಇನ್ನೊಂದು ‘ಸೆಷನ್’ ನಾಟಕದ ಮಾರನೆಯ ದಿನ ಅಲ್ಲಿ ನಡೆಯುವ ಪ್ರಯೋಗ ಚರ್ಚೆಯದು. ಸಂಘಟಕರು ತುಂಬ ಸೊಗಸಾಗಿ, ಶಿಸ್ತಿನಿಂದ ಅದನ್ನು ನಡೆಸುತ್ತಾರೆ.ಹಿಂದಿನ ದಿನ ರಂಗಪ್ರಯೋಗ ನೀಡಿದ ಬೇರೆ ಬೇರೆ ನಾಟಕದ ಮಕ್ಕಳ ತಂಡಗಳನ್ನೆಲ್ಲ ಒಂದೆಡೆ ಸೇರಿಸಿ, ಪ್ರೇಕ್ಷಕರಾಗಿದ್ದ ಹಿರಿಯಕಲಾವಿದರಿಂದ ರಂಗಾಟ ಕಟ್ಟಿದ ಪ್ರಕ್ರಿಯೆ ಮತ್ತು ಪ್ರದರ್ಶನದ ಕುರಿತು ತುಸು ದೀರ್ಘ ಚರ್ಚೆಯೇ ನಡೆಯುತ್ತದಲ್ಲಿ.

ಆವತ್ತು ಅದರ ನಿರ್ದೇಶಕರಾಗಿದ್ದ ಅಬ್ದುಲ್ ಲತೀಫ್ ಕಟಾಣಾ ಸ್ವತಹ ಹಾಜರಿದ್ದು ನಾಟಕದ ಬಹುಮುಖ್ಯ ಚರ್ಚೆ ನಡೆಸಿದ್ದರು. ನನಗೆ ಹಿಂದಿ, ಇಂಗ್ಲೀಷ್ ಮಾತನಾಡಲು ಬರುವದಿಲ್ಲ, ಅಥವಾ ಹೀಗೆನ್ನಬಹುದೇನೊ, ಕನ್ನಡದ ಹೊರತೂ ಮತ್ಯಾವ ಭಾಷೆಯಲ್ಲಿಯೂ ನನಗೆ ಮಾತನಾಡಲು ಬರದು.ಹೀಗಾಗಿ ಆಗ ಅಲ್ಲಿಯೇ ಕಲಾವಿದರಾಗಿದ್ದ ಕರ್ನಾಟಕದ ವೀಣಾಶರ್ಮ ಅನುವಾದಕರಾಗಿ ಪಾಲ್ಗೊಂಡಿದ್ದರು. ಬಹುತೇಕ ಎಲ್ಲರದೂ ಒಂದೇ ಪ್ರಶ್ನೆ. ಈ ಹಂತದ ಪ್ರದರ್ಶನ ನೀಡಲು ನೀವು ಎಷ್ಟು ಕಾಲ ತೆಗೆದುಕೊಂಡಿರಿ ಅಂತ.

ನಿಜವಾಗಿ ನಾಟಕ ಸಿದ್ಧಪಡಿಸಿದ್ದು ೧೫ ದಿನದಲ್ಲಿ. ಈಗಿನ ರಿಹರ್ಸಲ್ ಇತ್ಯಾದಿ ದಿನಗಳನ್ನು ಅದಕ್ಕೆ ಸೇರಿಸಿಕೊಂಡರೂ ೨೫ ದಿನ ದಾಟದು. ನಾವು ಸುಳ್ಳುಹೇಳುತ್ತಿದ್ದೇವೆಂದು ಅವರ ವಾದ. ಅದರ ಮರ್ಮವನ್ನು, ಅದು ನಿರ್ಮಾಣವಾದ ಸಂದರ್ಭದ ಕೂರಾಡಿಯ ದುರ್ಘಟನೆ ಮತ್ತು ಸಂಕಟವನ್ನೂ ವಿವರಿಸಲು ನಮಗೆ ಕಷ್ಟವಾಗಿತ್ತು. ಆಗ ಕಂಸನ ಪಾತ್ರಮಾಡುತ್ತಿದ್ದ ಅಭಿಜಿತ ಎದ್ದು ನಿಂತ. ಕಂಸನ ಒಂದು ಭಂಗಿಯನ್ನು ನೆನಪಿಸುವಂತೆ ಒಮ್ಮೆ ಕಾಲನೆತ್ತಿ ನೆಲಕ್ಕಪ್ಪಳಿಸಿ ಬಾಗಿನಿಂತ.

ನನ್ನನ್ನು ತೋರಿಸುತ್ತ, “ಇವರು ಒಮ್ಮೆ ಹೀಗೆ ಕಾಲನ್ನು ಎತ್ತಿಟ್ಟರೆ ನಮ್ಮ ಎದೆಯಲ್ಲೆಲ್ಲ ‘ಝುಂ’ ಅನುತ್ತಿತ್ತು” ಅಂದ. ಒಂದು ಕ್ಷಣದ ಮೌನದ ನಂತರ ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದಂತೆ ಕಠಾಣಾ ಅವರು “ನಮಗೆ ಉತ್ತರ ದೊರೆಯಿತು” ಎಂದು ಘೋಷಿಸಿದರು. ಮಕ್ಕಳು ನನಗೆ ನಿಜವಾದ ದೆಹಲಿ ದರ್ಶನ ಮಾಡಿಸಿದ್ದರು ಮತ್ತು ದೆಹಲಿಗೆ ನನ್ನನ್ನು ಪರಿಚಯಿಸಿದ್ದರು.

ಅಂದು ವಸತಿಗೃಹಕ್ಕೆ ಮರಳುವಾಗ ನಮ್ಮನ್ನು ಕರೆತರುವ ಬಸ್ಸಿನಲ್ಲಿ ಆಸ್ಸಾಮಿನ ಮಕ್ಕಳೂ ಇದ್ದರು. ರಂಗ ಚರ್ಚೆಯ ಸಮಯದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ನೋಡಿದ್ದರಷ್ಟೆ. ಇಬ್ಬರಿಗೂ ದೈನಂದಿನ ಬಳಕೆಯ ಒಬ್ಬರ ಭಾಷೆ ಇನ್ನೊಬ್ಬರಿಗೆ ಬರುತ್ತಿರಲಿಲ್ಲ, ಆದರೆ ಬಸ್ಸಿನಲ್ಲಿ ಎಲ್ಲರೂ ಒಟ್ಟಿಗೇ ಹಾಡುತ್ತ ಕುಣಿಯುತ್ತ ಹೇಗೆ ಬೆರೆತಿದ್ದರೆಂದರೆ ‘ಕಮ್ಯುನಿಟಿ ಥಿಯೇಟರ್’ ಕಟ್ಟುªಬಗೆಯ ಕುರಿತು ಮರುಚಿಂತನೆ ನಡೆಸುವಂತೆ ಅದು ನಮ್ಮನ್ನು ಒತ್ತಾಯಿಸುತ್ತಿತ್ತು.

ವಾಪಾಸು ರೂಮಿನ ಹತ್ತಿರ ಬಂದರೂ ಯಾರೂ ಮಲಗಲು ಸಿದ್ದರಿಲ್ಲ. ಆಸ್ಸಾಮಿನ ಮಕ್ಕಳೊಂದಿಗೆ ಅದೇನೇನು ಹರಟಿದರೋ?ಅಂತೂ ಎಷ್ಟೋ ಹೊತ್ತಿನ ನಂತರ ಬಲಾತ್ಕಾರವಾಗಿ ಜಬರು ಮಾಡಿ ಅವರನೆಲ್ಲ ಮಲಗಿಸಬೇಕಾಯ್ತು.

ನಂತರ, ಹಲವು ಸಾರಿ ದೆಹಲಿಯ ರಂಗೋತ್ಸವಕ್ಕೆ ಹೋದೆನಾದರೂ, ಅವಕೆಲ್ಲ ಈ ರಂಗಘಟನೆಯೇ ಮೂಲ ಅಂತೆನಿಸುವದು ನನಗೆ.ವಾಪಾಸು ಬರುವಾಗ ಕಿವಿಯಲೆಲ್ಲ ಅದೇ ಹಾಡ ಗುಂಗು, “ನಾವು ಹಳ್ಳಿ ಹೈದರು ನಮ್ಮನೆಲ್ಲಿಗೊಯ್ದರು”.

                                                                                       ಮುಂದುವರಿಯುವುದು

‍ಲೇಖಕರು ಶ್ರೀಪಾದ್ ಭಟ್

September 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ನಾನೂ ದೆಹಲಿಗೆ ಹೋಗಿ ಬಂದಂತೆನಿಸಿತು. ಈ ನಾಟಕದ ದೇವಕಿಯ ಪಾತ್ರ ಮಾಡಿದ ಹುಡುಗಿ ಕಟ್ಟಿಕೊಡುವ ಗಾಢ ವಿಷಾದ ಭಾವವನ್ನು ನಾನು ಇಲ್ಲಿಯವರೆಗೂ ರಂಗದಲ್ಲಿ ನೋಡಿಲ್ಲ. ಅದು ಕಲಿಸಿ ಬರುವುದೂ ಅಲ್ಲ ಅನಿಸುತ್ತದೆ. ಪಾತ್ರವೇ ತಾನಾಗಿಬಿಡುವ ದಿವ್ಯವದು!

    ಪ್ರತಿಕ್ರಿಯೆ
  2. ಅರೆಹೊಳೆ ಸದಾಶಿವ ರಾವ್

    ಕಂಸಾಯಣ ಕಟ್ಡಿದ ಬಗೆ ಮತ್ತು ಹಳ್ಳಿ ಹೈದರ ದೆಹಲಿ ಪಯಣದ ಕತೆ ಕಣ್ಣಿಗೆ ಕಟ್ಟುವಂತಿದೆ. ಸರ್, ಮಕ್ಕಳೊಂದಿಗೆ ಮಗುವಾಗಿ ತಾವು ನಾಟಕ ಕಟ್ಟುವ ರೀತಿ ಅನನ್ಯ….ಅದನ್ನನುಭವಿಸುವ ಸೌಭಾಗ್ಯ ನಮ್ಮದೂ ಆಗಿದ್ದು ಅದ್ರಷ್ಟ.

    ತಮ್ಮ ಈ ಬರಹವೂ ಎಂದಿನಂತೇ ಅತ್ಯಾಪ್ತವಾಗಿದೆ. ಮತ್ತೆ ಮತ್ತೆ ಕಾಯುವಂತೆ ‘ಸಿರಿಪಾದ’ ಮಾಡುತ್ತಿದೆ. ಅಭಿನಂದನೆಗಳು

    ಪ್ರತಿಕ್ರಿಯೆ
  3. Ahalya Ballal

    ಅದೆಷ್ಟು ಸಮರ್ಪಣಾಭಾವದಿಂದ ಬರೆದಿದ್ದೀರಿ!
    ಮಕ್ಕಳು ನಿಮ್ಮ ಕೈಹಿಡಿದು ಮುನ್ನಡೆಸುವುದಂತೂ ಸರಿಯೇ ಸರಿ, ನನ್ನ ಕಣ್ಣಿಗೆ ಅತ್ಯಂತ ಉಜ್ವಲವಾಗಿ ಕಂಡ ಸಾಲೆಂದರೆ “ನಾವಿರುವ ತಾಣದಲ್ಲಿಯೇ ಗೋಕುಲವನ್ನು ಮರುಸೃಷ್ಟಿಸಿಕೊಳ್ಳಬಲ್ಲ ಸಾಧ್ಯತೆಯ ಕಡೆ ಈ ನಾಟಕ ಗಮನ ಸೆಳೆಯುತ್ತದೆ.”

    ಇಂದು ರಂಗಭೂಮಿ ಎತ್ತ ಹೇಗೆ ಎಲ್ಲಿ ಎಂಬೆಲ್ಲ ಪ್ರಶ್ನೆಗಳ ಪರದೆಯ ಹಿಂದೆ ನಿಂತಿರುವಾಗ ಇದು ನನಗೆ ದಿಕ್ಸೂಚಿಯಾಗಿ ಕಾಣಿಸ್ತಿದೆ.

    ಪ್ರತಿಕ್ರಿಯೆ
  4. ಕಿರಣ ಭಟ್

    ‘ಕಂಸಾಯಣ’ ದಂಥ ಮಕ್ಕಳ ರಂಗಕ್ರಿಯೆಯ ಭಾಗವಾದ ಹೆಮ್ಮೆ ನನಗೆ. ಆ ನಾಟಕಕ್ಕೆ ನೀನು ಕಂಪೋಸ್ ಮಾಡಿದ ಹಾಡುಗಳು ಮಕ್ಕಳ ನಾಟಕವೊಂದರಲ್ಲಿ ನಾನು ಕೇಳಿದ ಅತ್ಯುತ್ತಮ ಹಾಡುಗಳು. ಜೊತೆಗೆ ಆ ಹಾಡುಗಳ ಕೋರಿಯೋಗ್ರಫಿ ಕೂಡ.

    ಪ್ರತಿಕ್ರಿಯೆ
  5. Deepa Hiregutti

    ಮಕ್ಕಳ ಜತೆ ನಾವೂ ದೆಹಲಿಗೆ ಹೋಗಿ ನಾಟಕ ಮಾಡಿ ಬಂದ ಹಾಗೆಬಾಯಿತು. ಆಪ್ತವಾಗಿದೆ ಸರ್ ಬರೆಹ.

    ಪ್ರತಿಕ್ರಿಯೆ
  6. Prashanth Patgar

    ನಾಟಕ ಸರ್ ರವರ ರಕ್ತದಲ್ಲಿಯೇ ಇದೆ. ನನ್ನ ಸಾಕ್ಷಿ ಇದೆ. ಹಾ!

    ಪ್ರತಿಕ್ರಿಯೆ
  7. Kavya Kadame

    ನೇಪಥ್ಯದಿಂದ ರಂಗಸ್ಥಳಕ್ಕೆ ಬರುವಾಗ ಅಲ್ಲಿ ನಿಯತಿ ಮತ್ತು ಮೃತ್ಯು ದೇವತೆಗಳನ್ನು ಆವಾಹಿಸುವುದು ಎಷ್ಟೊಂದು ಅರ್ಥವಂತಿಕೆಯನ್ನು ಹೊತ್ತಿದೆ. ಆ ಎರಡೂ ಹೊಸ್ತಿಲುಗಳನ್ನು ಮಕ್ಕಳು ಸಲೀಸಾಗಿ ದಾಟಿಬಿಡೋದು ಅವರ ಉಜ್ವಲ ಜೀವಂತಿಕೆಯಿಂದಲೇ ಏನೋ. ಅವರು ಎಲ್ಲರ ಜೊತೆಗೆ ಭಾಷೆಯ ಗಡಿಯಿಲ್ಲದೇ ಹೊಂದಿಕೊಂಡು ಮಾತು ಶುರು ಮಾಡಿದ್ದು, ಕೂರಾಡಿಯ ಶೆಟ್ಟರ ನಾಟಕದ ಕುರಿತಾದ ಬದ್ಧತೆ ಮುಂತಾದ ಎಲ್ಲ ವಿವರಗಳು ಇಷ್ಟವಾದವು. ಫೋಟೋಗಳು ಎಷ್ಟು ಪೂರಕವಾಗಿವೆ ಅಂದರೆ ಅವುಗಳಲ್ಲೇ ಒಂದೊಂದು ಕತೆಗಳಿವೆ.  

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: