ಇದು ಆಕಾಶವಾಣಿ.. ಈಗ ನೀವು ಕೇಳಲಿರುವ ಗೀತೆ.. ಎಸ್ ಪಿ ಬಿ ಅವರದ್ದು

ಬಿ ಕೆ ಸುಮತಿ, ಹಿರಿಯ ಉದ್ಘೋಷಕಿ, ಆಕಾಶವಾಣಿ

ನನ್ನ  ವೃತ್ತಿ ಜೀವನದಲ್ಲಿ, ‘ಆಕಾಶವಾಣಿ ಬೆಂಗಳೂರು..’ ಎಂದು ನಿಲಯ ಉದ್ಘೋಷಣೆ ಮಾಡುವಷ್ಟೇ ಸಲ  ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನೂ ಹೇಳಿರಬೇಕು ಎನಿಸುತ್ತದೆ.

ಪ್ರತಿ ದಿನ ಒಂದೊಂದು ಪ್ರಸಾರದಲ್ಲೂ ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಚಿತ್ರಗೀತೆಗಳಿಗೆ ಮೀಸಲು.

ನಾನು ಹೇಳುತ್ತಿರುವುದು ಬೆಂಗಳೂರು ಮುಖ್ಯವಾಹಿನಿಯ ಮಾತು . 65 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಉಣಬಡಿಸುತ್ತಾ.. ಎಲ್ಲ ವಾಹಿನಿಗಳ ತವರಾಗಿರುವ, ಎಲ್ಲ ಪರಿಕಲ್ಪನೆಗಳ ಒಡೆಯ ಆಗಿರುವ ‘ಬೆಂಗಳೂರು ಆಕಾಶವಾಣಿ’ ಮುಖ್ಯ ವಾಹಿನಿ ಎಂಬ ಭಾವಕೋಶದ ಬಗ್ಗೆ .

ಬಾಲು ಹಾಡಿದ ಮೊದಲ ಹಾಡು, ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ‘ಕನಸಿದೋ’  ಹಾಡಿನ ತಟ್ಟೆ ತಿರುಗಿದ ಜಾಗ. ಅಂದಿನಿಂದ ಇಂದಿನವರೆಗೆ ಬಾಲು ಹೆಸರನ್ನು ನಿತ್ಯನಾಮ ಸಂಕೀರ್ತನೆಯಾಗಿ ಹೇಳುತ್ತಾ ಬಂದಿರುವುದು ಆಕಾಶವಾಣಿ ಉದ್ಘೋಷಕರು.. 

ಇಂದು ಸಾವಿರಾರು ವಾಹಿನಿಗಳಿವೆ . ಆದರೆ ಗಾಯಕ, ಗಾಯಕಿ, ರಾಗ ಸಂಯೋಜನೆ, ರಚನಕಾರನ ಹೆಸರುಗಳನ್ನು ಹೇಳುವುದಿಲ್ಲ. ಬದಲಾಗಿ ನಾನು ನಿಮ್ಮ rj ಅಂತ ಒಂದು ಗಂಟೆಯಲ್ಲಿ ನಾಲ್ಕು ಬಾರಿ ಉಲಿಯುತ್ತಾರೆ. ಇರಲಿ ಬಿಡಿ, ಅದು ಬೇರೆಯೇ ವಿಷಯ.   

ಬಾಲು ಅವರ ಐದು ದಶಕಗಳ ಸಂಗೀತವನ್ನು  ಹಾಗೆ ಹಾಗೇ  ಶ್ರೋತೃಗಳಿಗೆ ಬಿಸಿ ಬಿಸಿಯಾಗಿ ತಿನ್ನುವ ಅನ್ನದಷ್ಟೇ ಪವಿತ್ರವಾಗಿ ತಲುಪಿಸಿದ್ದು ಆಕಾಶವಾಣಿ.   

ಶಂಕರಾಭರಣಂ, ಅಮೃತವರ್ಷಿಣಿ, ಗೀತಾ, ದೇವರಗುಡಿ, ಬಂಧನ, ಎದೆ ತುಂಬಿ ಹಾಡಿದೆ.. ಈ ಹಾಡು ಗಳ ಕಾಲಕ್ಕೂ.. ಕನಸಿದೋ,  ಇದುವೇ ಸುಂದರ ಕಲ್ಯಾಣನಗರ, ಸಾಗರಕೆ ಚಂದಿರ ತಂದಾ ಪ್ರಥಮ ಚುಂಬನ, ರಾಧಿಕೆ ನಿನ್ನ ಸರಸವಿದೇನೆ, ಕಣ್ಣಿಗೆ ಅಂದ ಕಾಡಿಗೆ ಚೆಂದ,  ಸಂಜೆಗೆಂಪು ಮೂಡಿತು, ಮದುವೆಯ ಈ ಬಂಧ, ನಿನ್ನ ಸನಿಹ ಸೇರಲೆಂದು ಮನಕೆ ಕಾತರಾ, ಈ ಹಾಡುಗಳ ಕಾಲಕ್ಕೂ ವ್ಯತ್ಯಾಸ ಇದೆ.   

ಬಾಲು ಅವರ ಗುಣಗಾನ ಮಾಡುತ್ತಿರುವ ಈ ವೇಳೆಯಲ್ಲಿ, ಒಂದು ವಾಹಿನಿಯೂ ಈ ಗೀತೆಗಳ, ಅಥವಾ ಇಂಥ ಹಲವು ಬಾಲು ಹಾಡುಗಳ ಪ್ರಸ್ತಾಪ ಮಾಡಲೇ ಇಲ್ಲ.   

ಬಾಲು ಅವರ ಧ್ವನಿ ಹೇಗೆ ಬದಲಾಗಿದೆ..  ಎಂಬುದು ಈ ಗೀತೆಗಳನ್ನು ಕೇಳಿದಾಗ ಅರ್ಥವಾಗುತ್ತದೆ.  ಒಂದು ವ್ಯಕ್ತಿತ್ವ ಚಿತ್ರಣ ದ ಹಾಗೆ, ಧ್ವನಿ ಚಿತ್ರಣ ಮಾಡಿಕೊಂಡರೆ, ರಾಧಿಕೆ ನಿನ್ನ ಸರಸವಿದೇನೆ.. ಗೀತೆಯಲ್ಲಿ ಕೇಳುವ ಆ ಹರೆಯದ  ಉತ್ಕಟತೆ,  2000 ದಶಕದ ನೀನು ನೀನೇ ನಾನು ನಾನು ನಾನೇ .. ಹಾಡುವಾಗ ಬೇರೆಯೇ ಎನಿಸುತ್ತದೆ. ತಂದೆ ಮಕ್ಕಳು ಚಿತ್ರದ  ಕಣ್ಣಿಗೆ ಚೆಂದ ಹಾಡಿನಲ್ಲಿ ಕೇಳುವ ಹುಡುಗು ತುಂಟುತನ, ಇವ ಯಾವ ಸೀಮೆ ಗಂಡು ಕಾಣಮ್ಮೊ.. ಹೇಳುವಾಗ ಮಾಗಿದ ರಸಿಕ ದನಿಯಾಗಿ ಮೂಡಿದ ಹಾಗೆ ಭಾಸ ವಾಗುತ್ತದೆ. 

ನಿನ್ನ ಸನಿಹ ಸೇರಲಿಂದು ಮನಕೆ ಕಾತರಾ.. ಬಾಹುಗಳಿಗೆ ನಿನ್ನ ಮೈಯ್ಯ ಬಳಸುವಾತರ..ಈ ಗೀತೆ ಕೇಳಿ, ನಂತರ ,ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು.. ಗೀತೆ ಕೇಳಿ.  ಒಂದು ಧ್ವನಿಯ ಪರಿಷ್ಕರಣೆ , ಪಳಗುವಿಕೆ ಹೇಗೆ ಆಗಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. 

ರಾಜೇಶ್, ಗಂಗಾಧರ್, ರಂಗ, ಕಲ್ಯಾಣಕುಮಾರ್, ಉದಯಕುಮಾರ್,  ಜಮಾನ ಒಂದಾದರೆ ನಂತರದ ದಿನಗಳ ವಿಷ್ಣುವರ್ಧನ್, ಅನಂತನಾಗ್, ಶಂಕರನಾಗ್, ರಮೇಶ್, ರವಿಚಂದ್ರನ್, ಕಾಲ ಒಂದು.   ಶಿವರಾಜಕುಮಾರ್, ಸುದೀಪ್, ದರ್ಶನ್ ಸಮಯವೇ ಬೇರೆ. 

ನಾಯಕರಿಗೆ ಬಾಲು ಧ್ವನಿ ಹೊಂದಿಸುತ್ತಿದ್ದರೇ, ಅಥವಾ ನಾಯಕರು ಬಾಲು ಧ್ವನಿಗೆ ಅಭಿನಯ ಮಾಡುತ್ತಿದ್ದರೇ ಎಂದರೆ ಉತ್ತರ ಸಿಗುವುದು ಕಷ್ಟ. 

ಕೆಲವು ಗೀತೆಗಳು ಗೀತೆಗಳಾಗಿ ಮಾತ್ರ ಗೆಲ್ಲುತ್ತವೆ. ಚಿತ್ರ ಅಥವಾ ನಾಯಕರಿಂದ ಅಲ್ಲ ಎಂಬುದೂ ಗಮನಾರ್ಹ.  ಚಲನ ಚಿತ್ರ ನೋಡುವ ಹವ್ಯಾಸ ಇಲ್ಲದವರು ಕೆಲವರು ಆದರೆ ಹಾಡುಗಳನ್ನು ಕೇಳುವ ಪರಿಪಾಠ ಇಟ್ಟುಕೊಂಡಿರುತ್ತಾರೆ .  ಅಂತಹ ಮಂದಿಗೆ ಆಕಾಶವಾಣಿ ಸಂಗಾತಿ.  ಉದ್ಘೋಷಕರೂ ಅಷ್ಟೇ, ಪ್ರತಿದಿನ ಹೊಸ ವಸ್ತು ಹುಡುಕಬೇಕು, ಹಾಡು ಹುಡುಕಬೇಕು, ಅದಕ್ಕೆ ತಕ್ಕ ಹಾಗೆ ಬರೆದುಕೊಳ್ಳಬೇಕು. ಒಂದೇ ಹಾಡು , ಆದರೆ ಉದ್ಘೋಷಕ ಕೊಡುವ ನಿರೂಪಣೆ ಮೂಲಕ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತದೆ.  

ಎಷ್ಟು ವಿಧದಲ್ಲಿ ಬಾಲು ಹಾಡುಗಳನ್ನು ವರ್ಗೀಕರಣ ಮಾಡಬಹುದು ಎಂದು ಯೋಚಿಸಿದರೆ.. ಅಬ್ಬಾ ಎನಿಸುತ್ತದೆ..ತುಂಟುತನದ  ಗೀತೆಗಳು, ಪ್ರೇಮ ಗೀತೆ ಗಳು, ಭಕ್ತಿಗೀತೆಗಳು, ದುಃಖದ ಗೀತೆ ಗಳು, ಸಂಭಾಷಣೆ ಶೈಲಿಯ ಗೀತೆಗಳು.ಸಾಹಸ ಪ್ರದರ್ಶನ ದ ಗೀತೆಗಳು,ಶಾಸ್ತ್ರೀಯ ಗೀತೆಗಳು, ಅಣುಕು ಅಥವಾ ಹಾಸ್ಯಗೀತೆಗಳು..  ತತ್ವ ಹೇಳುವ ಗೀತೆಗಳು, ಕನ್ನಡ ನಾಡಿನ ಗೀತೆಗಳು..ನಿವೇದನೆ ಹಾಡುಗಳು, ಪ್ರಕೃತಿ ಬಗ್ಗೆ, ಒಬ್ಬರೇ ಹಾಡಿರುವ ಗೀತೆಗಳು ಮತ್ತು ಇತರ ರ ಜೊತೆ ಹಾಡಿರುವ ಗೀತೆ ಗಳು.. ಹೀಗೆ ಹಲವು ವಿಭಾಗಗಳಲ್ಲಿ ಹೇಳುತ್ತಾ ಹೋದರೆ ವಾರಗಟ್ಟಲೆ ಪ್ರಸಾರ ಕ್ಕೆ ಆಗುವಷ್ಟು ಹಾಡುಗಳು ಇವೆ.

ಎಸ್ ಪಿ ಬಿ ಅವರು ಹಾಡಿರುವ ಶೀರ್ಷಿಕೆ ಗೀತೆ ಅಂತ ಶುರು ಮಾಡಿದರೆ, “ನಗು.. “”ಅಳು”, “ಹೂವು,” ಸಮಯ”, ಕಾಲ, ಹೀಗೆ..ಹೇಳುತ್ತಲೇ ಹೋಗಬಹುದು.ಒಂದೇ ಒಂದು ಗಂಟೆ ಅವರ ಹೆಸರಿಲ್ಲದೆ ನಾವು ಕಾರ್ಯಕ್ರಮ ಮಾಡಲಾರೆವು.

ಆಕಾಶವಾಣಿಯಲ್ಲಿ ಒಂದು ನಿಯಮ ವಿದೆ.ಚುನಾವಣೆ ಗೆ ನಿಂತ ವ್ಯಕ್ತಿ ಯ ಗೀತೆ ಪ್ರಸಾರ ಮಾಡಬಾರದು, ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ, ಅಂಬರೀಷ್ ಚುನಾವಣಾ ಕಣದಲ್ಲಿ ಇದ್ದು, ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಅವಧಿಯಲ್ಲಿ ನಾವು ಅಂಬರೀಶ್ ಹಾಡು ಹಾಕುವ ಹಾಗಿಲ್ಲ.

ನಾವು ಅಂಥ ಸಂದರ್ಭದಲ್ಲೆಲ್ಲ ಮಾತಾಡುತ್ತಿದ್ದೆವು.. ಎಸ್ಪಿಬಿ ಚುನಾವಣೆಗೆ ನಿಂತುಬಿಟ್ಟರೆ.. ಏನು ಮಾಡಬೇಕು.. ಹೇಗೆ ನಡೆಸುವುದು ಎಂದು.

ಬಾಲು ಚುನಾವಣೆ ಗೆ ನಿಂತಿದ್ದರೆ  ಕಾನೂನು ಸಡಿಲಿಕೆ ಆಗುತ್ತಿತ್ತೋ ಏನೋ..ಅವರು ಚುನಾವಣೆ ಗೆ ನಿಲ್ಲದೆಯೇ ದೊರೆಯಾದರು.ನಾಯಕರಾದರು. ಸಹಸ್ರ ಸಹಸ್ರ ಮನಗಳ ಭಾವ ರಾಯಭಾರಿಯಾದರು.ಮನಗಳ ಅಂತರಾಳದ ದಣಿಯಾದರು, ದನಿಯಾದರು.

ದಣಿವರಿಯದ ದನಿ ,ದಣಿ. ಬಾಲು. ಎಸ್. ಪಿ, ಬಾಲಸುಬ್ರಹ್ಮಣ್ಯಂ. ಎರಡು ಸಾಲು ಯಾವಾಗೋ ಹೇಗೋ ಸಾಂದರ್ಭಿಕ ವಾಗಿ ಕೇಳುವುದು ಒಂದು ರೀತಿ, ಅವರ ಹಾಡುಗಳನ್ನು ಪುನಃ ಹಾಡಿ ಹೊಟ್ಟೆ ಪಾಡು ಮಾಡಿಕೊಳ್ಳುವುದು ಒಂದು ರೀತಿ, ಅವರ ಜೊತೆಯಲ್ಲಿ ಸಾಗುತ್ತ ಅವರೊಂದಿಗೆ ಹಾಡುತ್ತಾ ಕಲಿತು ಮುಂದೆ ಸಾಗುವುದು ಇನ್ನೊಂದು ರೀತಿ.

ಆದರೆ ಅವರ ಗೀತೆಗಳನ್ನು ನಿತ್ಯ ಪ್ರಸಾರ ಮಾಡುವುದೇ ಕಾಯಕ  ಆಗಿರುವ ಉದ್ಘೋಷಕ ಬಂಧುಗಳು ನಿಜಕ್ಕೂ ಭಾಗ್ಯ ಶಾಲಿಗಳು. ಏಕೆಂದರೆ ಅಕ್ಷರ ಅಕ್ಷರ, ಉಸಿರು ಉಸಿರೂ, ಪ್ರತಿ ಘಳಿಗೆಯೂ ಗೀತೆಗಳ ಜೊತೆ. ಗೀತೆಯ ಅನುಭಾವ ನಮ್ಮ ಜೊತೆ. ಅನುಭಾವದ  ಅನುರಣನ ಆತ್ಮೀಯ ಶ್ರೋತೃಬಾಂಧವರ ಜೊತೆ.  ಅನಂತ ಅನುಭಾವ ದ ಆತ್ಮದಾನಂದ ತಂದ ಬಾಲೂ ಎಂಬ ಕಂದನ ಹೃದಯಕ್ಕೆ ನಮೋನಮಃ.

‍ಲೇಖಕರು avadhi

September 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Vasundhara k m

    ತುಂಬಾ ಆತ್ಮೀಯವಾದ ಬರಹ. ನಿಮ್ಮ ನೆನಪುಗಳು ಹಸಿರಾಗಿವೆ. ಇಂತಹ ಉತ್ತಮ ಬರಹಕ್ಕಾಗಿ ಧನ್ಯವಾದಗಳು

    ಪ್ರತಿಕ್ರಿಯೆ
  2. Srilakshmi S

    ಸುಮತಿ madam,
    ನೆನ್ನೆಯಿಂದ SPB ಅವರನ್ನು ಕುರಿತು ಹಲವು ಬರಹಗಾರರ ಅನಿಸಿಕೆ, ಅಭಿಮಾನದ ನುಡಿಗಳನ್ನು ಓದಿದೆ.
    ಆದರೆ ಇದು ನನಗೆ ತುಂಬಾ ರುಚಿಸಿತು….
    ಆಕಾಶವಾಣಿಯ ದೃಷ್ಟಿಕೋಣ ಇಟ್ಟುಕೊಂಡು ಬರೆದಿರುವ ಈ ಬರಹ super.
    ಹೀಗೆ ಹೆಚ್ಚು ಹೆಚ್ಚು ಬರೆಯುತ್ತಿರಿ.
    ನಿಮ್ಮ ಮಾತು ಕೇಳಲು ಖುಷಿ ಹಾಗೂ ಬರವಣಿಗೆ ಓದಲು ಸೊಗಸು

    ಪ್ರತಿಕ್ರಿಯೆ
  3. ಸುಮತಿ

    ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು. thanku very much

    ಪ್ರತಿಕ್ರಿಯೆ
  4. Nagashree S

    ಬಹಳ ಆಪ್ತವಾದ ಬರಹ ಮೇಡಂ.. ಎಸ್ ಪಿ ಬಿ ಯವರ ಗೀತೆಗಳ ಮಾಧುರ್ಯದಷ್ಟೇ ಚೆಂದದ ನುಡಿನಮನ. ನಿಮ್ಮ ಮಾತುಗಳು ನನ್ನದೂ ಕೂಡ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: