ನಾವು ಬಂದೆವಾ… ಪೋಲೆಂಡ್ ನೋಡಲಿಕ್ಕss!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅಂತೂ ಅಂದುಕೊಂಡಿದ್ದಕ್ಕಿಂತ ಸರಿಯಾಗಿ 24 ಘಂಟೆಗಳ ನಂತರ ನಾವು ಪೋಲೆಂಡ್ ತಲುಪಿದ್ದೆವು. ಹಿಂದಿನ ದಿನ ತಲುಪಿದ್ದರೆ ಆ ದಿನ ನಾವು ರೈಸ್ ಕಾಂಪ್ಲೆ‌ಕ್ಸ್‌ಗೆ ಹೋಗಬೇಕಿತ್ತು. ಈಗ ಒಂದು ದಿನ ತಡವಾಗಿದ್ದರಿಂದ ಅದರ ಗತಿ ಏನಾಗುತ್ತದೋ ನಮಗೆ ಇನ್ನೂ ತಿಳಿದಿರಲಿಲ್ಲ. ಅದನ್ನೆಲ್ಲ ಹೋಟೆಲ್‌ಗೆ ಹೋದ ನಂತರ ಮಾತಾಡೋಣ ಎಂದುಕೊಂಡು ಲಗೇಜ್ ಎಲ್ಲವನ್ನೂ ಪಡೆದು ಹೊರಗೆ ಕಾಲಿಟ್ಟಾಗ ನಮಗಾಗಿ ಕ್ಯಾಬ್ ಡ್ರೈವರ್ ಕಾಯುತ್ತ ನಿಂತಿದ್ದರು.

ಏರ್‌ಪೋರ್ಟ್‌ನಿಂದ ನಮ್ಮ ನೋವೋಟೆಲ್ ಹೋಟೆಲ್ 15-20 ನಿಮಿಷಗಳ ಹಾದಿಯಷ್ಟೇ. ಹಾದಿಯುದ್ದಕ್ಕೂ ಸಾಲು ಸಾಲು ಮರಗಳು. ಊರು ಕೂಡಾ ತುಂಬ ಕ್ಲೀನ್ ಆಗಿತ್ತು. ನಿಜಕ್ಕೂ ಹೇಳಬೇಕೆಂದರೆ ಏರ್‌ಪೋರ್ಟ್‌ನಿಂದ ಊರು ಸೇರುವ ರಸ್ತೆ ಯಾವುದೇ ದೇಶದಲ್ಲೂ ಅತ್ಯಂತ ಸುಂದರವಾಗಿ, ಶುಭ್ರವಾಗಿ, ರಮಣೀಯವಾಗಿ ಇರುತ್ತದೆ! ಹಾಗಾಗಿ ಅದರ ನಿಜ ಸ್ವರೂಪ ತಿಳಿಯಲು ಮತ್ತೆರಡು ಮೂರು ದಿನ ಅಡ್ಡಾಡಬೇಕಷ್ಟೇ.

ಆದರೆ ಕೂಡಲೇ ಗಮನ ಸೆಳೆದ ಮತ್ತೊಂದು ಮುಖ್ಯ ವಿಷಯವೆಂದರೆ ಅಲ್ಲಿನ ಜನರ ಅದ್ಭುತ Traffic sense. ಎಲ್ಲರೂ ಸಾಲಾಗಿ ಲೇನ್ ಗೆರೆಗಳ ನಡುವೆ ಅತ್ತಿತ್ತ ಜರುಗದಂತೆ ಸಾಗುತ್ತಿದ್ದರು. ಎಲ್ಲಿಯೂ ಟ್ರಾಫಿಕ್ ಜಾಮ್ ಕೂಡಾ ಇರಲಿಲ್ಲ. ಇದರ ಜೊತೆಗೆ ಮತ್ತೊಂದು ಖುಷಿ ಕೊಟ್ಟ ಸಂಗತಿಯೆಂದರೆ ಊರ ಮಧ್ಯೆಯೇ ಅಲ್ಲಲ್ಲಿ ಇದ್ದ ಪ್ರಶಾಂತ ಕಾಲುದಾರಿಗಳು! ಆ ರಸ್ತೆಗಳಲ್ಲಿ ಹಲವಾರು ಜನ ಊರಾಚೆ ಎಲ್ಲಿಯೋ ಇದ್ದಂತೆ ಸಾಗುತ್ತಿದ್ದ ಸೈಕಲ್‌ ಸವಾರರು,  ನಾಯಿಗಳನ್ನು ನೆಮ್ಮದಿಯ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದವರು! ಅವರನ್ನೆಲ್ಲ ನೋಡಿ ಆಹಾ ಅದೇನು ಪುಣ್ಯವಂತರಪ್ಪಾ ಇವರು ಎಂದು ಕರುಬಿದೆ. ಅಂಥ ರಸ್ತೆಯಲ್ಲಿ ನಾವು ನೋವೋಟೆಲ್ ಹೋಟೆಲ್ ತಲುಪಲು ಹೆಚ್ಚು ಸಮಯವೇನೂ ಹಿಡಿಯಲಿಲ್ಲ.

ಹೋಟೆಲ್ ರೂಮ್ ಸಾಕಷ್ಟು ಚೆನ್ನಾಗಿತ್ತು, ವಿಶಾಲವಾಗಿಯೂ ಇತ್ತು. ಮೆತ್ತನೆಯ ಹಾಸಿಗೆ, ಸುಖವಾದ ಒರಗು ಕುರ್ಚಿ ಎಲ್ಲವನ್ನೂ ನೋಡುತ್ತಲೇ ಮನಸ್ಸಿಗೆ ನೆಮ್ಮದಿಯಾಯ್ತು. ಹೆಚ್ಚುಕಡಿಮೆ 24 ಘಂಟೆಗಳ ಪ್ರಯಾಣ. ದೇಹಕ್ಕೆ ತುರ್ತಾಗಿ ಸ್ನಾನದ ಅಗತ್ಯವಿತ್ತು. ಸ್ನಾನ ಮುಗಿಸಿದ ನಂತರ ದೇಹಕ್ಕೆ ಹೊಸ ಉತ್ಸಾಹ ತುಂಬಿಕೊಂಡಿತು. ಈಗ ಹೊಟ್ಟೆಯ ನೆನಪಾಯಿತು! ಬೆಳಗಿನ 5ಕ್ಕೆ ಹೊಟ್ಟೆಗೆ ಬಿದ್ದಿದ್ದಷ್ಟೇ. ಆ ನಂತರ ಬರೀ ಒಂದು ಕಾಫಿ ಮತ್ತು ಕಾಫಿಗೆಂದು ಹಣ ತೆತ್ತು ಪಡೆದ ಒಂದು ಲೋಟ ಬಿಸಿನೀರಷ್ಟೇ ಹೊಟ್ಟೆ ಸೇರಿತ್ತು! ಹಾಗಾಗಿ ಹೊಟ್ಟೆ ಕಾವ್ ಕಾವ್ ಅನ್ನುತ್ತಿತ್ತು.

ಮಗ ಸ್ನಾನ ಮುಗಿಸಿ ಬರುವುದರಲ್ಲಿ ಒಂದು ಕಾಫಿ ಮಾಡಿಕೊಂಡು ಕುಡಿಯೋಣವೆಂದು ಅಲ್ಲಿ ಇಟ್ಟಿದ್ದ ನೀರಿನ ಬಾಟಲ್ ತೆಗೆದೆ. ಕೂಡಲೇ ಚುಸ್ ಎಂದು ಸದ್ದಾಯಿತು. ‘ಅಯ್ಯೋ ಇವರ ಮಕ ಮುಚ್ಚ ನೀರಿನ ಬದಲು ಸೋಡಾ ಯಾಕ್ರೋ ಇಟ್ರಿ’ ಅಂತ ಸಿಟ್ಟು ಬಂದುಬಿಟ್ಟಿತು. ಅದು ಸೋಡಾ ಅಂತ ಗೊತ್ತಾದ ಕೂಡಲೇ ನನಗೆ ಇದ್ದಕ್ಕಿದ್ದಂತೆ ಬಾಯಾರಿಕೆಯೂ ಶುರುವಾಗಿ ಬಿಟ್ಟಿತು!

ಆ ಕ್ಷಣಕ್ಕೆ ನೀರು ಕುಡಿಯದಿದ್ದರೆ ಸತ್ತೇ ಹೋದೇನು ಅನ್ನಿಸುವಂಥ ಬಾಯಾರಿಕೆ!! ರಿಸೆಪ್ಷನ್‌ಗೆ ಫೋನ್ ಮಾಡಿ ‘ಅಣ್ಣ ನೀರು ಕಳಿಸಪ್ಪ, ರೂಮಿನಲ್ಲಿ ಸೋಡಾ ಇಟ್ಟುಬಿಟ್ಟಿದ್ದೀರಾ’ ಅಂದೆ. ಅತ್ತ ಕಡೆಯಿಂದ ಮಾಮೂಲು ‘yes mam, sure mam’ ಎಲ್ಲ ಆಯಿತು. ಮಗ ಸ್ನಾನ ಮುಗಿಸಿ ಈಚೆ ಬಂದ ಕೂಡಲೇ ಕತೆ ಹೇಳಿದೆ. ಅವನೋ ದಿನಕ್ಕೆ ಎಂಟು ಲೀಟರ್ ನೀರು ಕುಡಿಯುವವನು

. ಅಲ್ಲಿರುವುದು ಸೋಡಾ ಅಂದ ಕೂಡಲೇ ಅವನಿಗೂ ಬಾಯಾರಿಕೆ ಶುರುವಾಗಿಬಿಟ್ಟಿತು! ಹುಚ್ ನನ್ಮಕ್ಕಳು ಅಂತ ಬಯ್ದುಕೊಳ್ಳುತ್ತ ಕೂತಿರುವಾಗ ರೂಮ್ ಸರ್ವಿಸ್‌ನವರು ಮತ್ತೆರಡು ಬಾಟಲ್ ತಂದುಕೊಟ್ಟರು. ಒಳ್ಳೆಯ ಸರ್ವೀಸ್ ಎಂದು ಖುಷಿ ಪಡುತ್ತಾ ಅವರಿಗೆ ಧನ್ಯವಾದ ಅರ್ಪಿಸಿ ಬಂದು ಮತ್ತೆ ಬಾಟಲ್ ತೆಗೆದರೆ ಅದೇ ಸೋಡಾದ ಚುಸ್ ಶಬ್ದ! ಕಿವಿಗೆ ಕಾದ ಕಬ್ಬಿಣ ಸುರಿದಂತಾಯ್ತು. ಅಯ್ಯೋ ಇದೇನು ರೋಗ ಇವರಿಗೆ! ನಾವೇನು ಮದ್ ಮಧ್ಯಾಹ್ನ ಎಣ್ಣೆ ಹೊಡೆಯಕ್ಕೆ ಸೋಡಾ ಕೇಳ್ತಿದೀವಾ ಅಂತ ಮೈ ಉರಿದುಹೋಯಿತು. 

ಮತ್ತೆ ಕರೆ ಮಾಡಲು ಹೊರಟಾಗ ಮಗ ‘ಇರು ಊಟ ಏನಾದ್ರೂ ಇದ್ರೆ ಆರ್ಡರ್ ಮಾಡಿಬಿಡೋಣ. ನಿನ್ನ ನೀರಿನ ಕತೆ ಮುಗಿಯೋ ಹಾಗೇ ಕಾಣ್ತಿಲ್ಲ’ ಎಂದವನೇ ಮೆನು ತೆರೆದ. ನಾನು ಆಪರೇಷನ್ ಮುಗಿಸಿದ ವೈದ್ಯರ ಎದುರು ರೋಗಿಯ ಮನೆಯವರು ನಿಂತಂತೆ ಉಸಿರು ಬಿಗಿ ಹಿಡಿದು ನಿಂತೆ. ಅಲ್ಲಿ ಬೆಲೆ ತಕ್ಕಮಟ್ಟಿಗಿದ್ದರೆ ಬದುಕು ಸುಗಮ. ಇಲ್ಲವಾದರೆ ನಾಯಿಪಾಡು ಶುರುವಾಗುತ್ತದೆ ಎಂದು ನನಗೆ ಗೊತ್ತು. ಹಾಗಾಗಿ ಅವನೇನು ಹೇಳುತ್ತಾನೆ ಎಂದು ಆತಂಕದಲ್ಲಿ ಕಾದೆ.

ಅವನು ಅದರ ಮೇಲೆಲ್ಲ ಕಣ್ಣಾಡಿಸಿ ನಿಧಾನವಾಗಿ ‘ಪರವಾಗಿಲ್ಲ ಅಮ್ಮ, ಸರಿಸುಮಾರು ನಮ್ಮ ದೇಶದಷ್ಟೇ’ ಎಂದ. ಅಯ್ಯೋ ಹೃದಯ ಹಕ್ಕಿಯಾಯಿತು! ನೆಮ್ಮದಿಯಾಗಿ ತಿನ್ನಬಹುದಪ್ಪಾ ಅಂತ ಸಂಭ್ರಮದಿಂದ ‘ಎಷ್ಟು ಮಗಾ’ ಅಂದೆ. ‘ಪಿಜ್ಜಾಗೆ 24 ಜ಼್ಲಾಟಿ’ ಅಂದ. ಒಂದು ಜ಼್ಲಾಟಿಗೆ ಸುಮಾರು 20 ರೂಪಾಯಿ. ಅಂದರೆ ಪಿಜ್ಜಾಗೆ   ಸುಮಾರು 480 ರೂಪಾಯಿ. ತೀರಾ ಕಡಿಮೆ ಅಂತಿಲ್ಲದಿದ್ದರೂ, ನಮ್ಮ ದೇಶದಷ್ಟೇ ರೇಟು! ಪರವಾಗಿಲ್ಲ ತಿನ್ನಬಹುದಪ್ಪಾ ಅಂತ ಖುಷಿಯಾಯಿತು.

ಒಂದು ಪಿಜ್ಜಾಗೆ ಆರ್ಡರ್ ಕೊಟ್ಟು ಬಹಳ ತಾಳ್ಮೆಯಿಂದ ಅವರಿಗೆ ಅರ್ಥ ಮಾಡಿಸಿಯೇ ತೀರುತ್ತೇವೆ ಎನ್ನುವ ರೀತಿಯಲ್ಲಿ ‘ಈಗಾ… ನೀರು… ಏನ್ ಹೇಳಿ, ನೀರು… ಅದೇ ಈಗಾಗಲೇ ಇಟ್ಟಿದೀರಲ್ಲ ಚುಸ್ ಅನ್ನೋ ನೀರು… ಅದಲ್ಲ… ಅಂದರೆ ಈಗ ಇಟ್ಟಿದೀರಲ್ಲ, ಸೋಡಾ ಅದಲ್ಲ… ನೀರು… ಚುಸ್ ಅನ್ನದ ನೀರು… ಅದನ್ನ ಕಳಿಸಿಕೊಡ್ತೀರಾ ಎರಡು ಬಾಟಲ್’ ಎಂದು ಬಹಳ ಸಮಾಧಾನದಿಂದ ವಿವರಿಸಿದ.

ಒಂದಿಷ್ಟು ಹೊತ್ತಿನಲ್ಲಿ ಬೆಲ್ ಆಯಿತು… ಪಿಜ್ಜಾ ಮತ್ತು ನೀರು! ನನ್ನ ಮಗ ಖುಷಿ ಅದುಮಿಟ್ಟೂಕೊಳ್ಳುತ್ತಾ ‘ಅಮ್ಮಾಆಆಆ ದೊಡ್ ಡ್ ಡ್ ಡ್ಡ ಪಿಜ಼್ಜ಼ಾ!’ ಅಂದ. ಇಬ್ಬರಿಗೂ  ಸಕತ್ ಖುಷಿಯಾಯ್ತು ಹೊಟ್ಟೆ ತುಂಬುತ್ತದೆ ಅಂತ. ಸಾವಕಾಶವಾಗಿ ಕುಳಿತು ಅದನ್ನು ಕಬಳಿಸಿದೆವು. ಹೊಟ್ಟೆ ತುಂಬಿದ ಮೇಲೆ ಮತ್ತೆ ಇಬ್ಬರಿಗೂ ನೀರಿನ ನೆನಪಾಯ್ತು. ಈ ಸಲ ಸರಿಯಾಗಿ ಹೇಳಿದೆವಲ್ಲ, ಹಾಗಾಗಿ ಸರಿಯಾಗಿಯೇ ಕಳಿಸಿರ್ತಾರೆ ಬಿಡು ಎಂದುಕೊಳ್ಳುತ್ತ ಬಾಟಲ್ ತೆರೆದರೆ ಮತ್ತದೇ ಚುಸ್ ಶಬ್ದ! ಇಬ್ಬರ ಮುಖದಲ್ಲೂ ಹತಾಶೆ.

ನಾನು ‘ಇನ್ನಾಗಲ್ಲ ಮಗ ನನ್ಕೈಲಿ. ನೀರಿಲ್ದೆ ಸಾಯ್ತೀನಿ ಬಿಡು’ ಅಂದೆ ಮೆಲೋಡ್ರಾಮಾಟಿಕ್ ಆಗಿ. ನನ್ನ ಮಗನಿಗೆ ಗೊತ್ತು ನಾನು ಅಷ್ಟು ಸುಲಭಕ್ಕೆ ಸಾಯುವ ಘಟವಲ್ಲ ಎಂದು. ಹಾಗಾಗಿ ತಲೆಯೇ ಕೆಡಿಸಿಕೊಳ್ಳದೇ ಮತ್ತೆ ಅವರಿಗೆ ಕರೆ ಮಾಡಿ ಅವರಿಗೆ ಅರ್ಥ ಮಾಡಿಸಿಯೇ ಬಿಡುವವನಂತೆ ಒತ್ತಿಒತ್ತಿ ಹೇಳಿದ. ನನಗೆ ನೀರು ಬರುತ್ತದೆ ಅನ್ನುವ ನಂಬಿಕೆ ಇಲ್ಲದ್ದರಿಂದ ಅದರ ಆಸೆ ಬಿಟ್ಟು ಕಿಟಕಿಯಿಂದಾಚೆ ನೋಡುತ್ತ ನಿಂತೆ. ಸುಮಾರು ಹೊತ್ತಾದ ಮೇಲೆ ಮತ್ತೆ ಬಾಗಿಲು ತಟ್ಟಿದ ಸದ್ದು. ತೆರೆದರೆ ಇಇಇಇಇಷ್ಟು ದೊಡ್ಡ ಹರಿವಾಣದಲ್ಲಿ ಒಂದು ಬಾಟಲ್ ನೀರು ಹಿಡಿದು ನಿಂತಿದ್ದರು ರೂಮ್ ಸರ್ವೀಸ್ ಮಂದಿ. ಅದರ ಗತಿ ಇನ್ನೇನೋ, ಮತ್ತೆ ಚುಸ್ ಅನ್ನುತ್ತದಾ ಅಂತೆಲ್ಲ ಯೋಚಿಸುತ್ತ ಇರುವಾಗಲೇ  ಆತ ‘ಕಾರ್ಡಾ, ದುಡ್ಡಾ?’ ಎಂದರು.

ಓ! ಅಂದರೆ ಈಗ ನೀರಿಗೆ ಕಾಸು ಕೊಡಬೇಕು. ಇದು ಬಿಟ್ಟಿ ನೀರಲ್ಲ ಅಂದುಕೊಳ್ಳುತ್ತಾ ‘ಎಷ್ಟು?’ ಎಂದ. ‘19 ಜ಼್ಲಾಟಿ’ ಎಂದ! ನಾವು ಕಿವಿಗಳನ್ನೇ ನಂಬದಂತೆ ‘19 ಜ಼್ಲಾಟಿ! 19!!!! ಅಂದರೆ 380 ರೂಪಾಯಿ!!!’ ಎಂದುಕೊಳ್ಳುತ್ತಾ ‘ಬೇಡ ನೀರು’ ಎಂದು ನಿರಾಕರಿಸಿ ಬಾಗಿಲು ಬಡಿದೆವು. ಅಲ್ಲ ಮಾರಾಯರೇ ನಮ್ಮ ದೇಶದಲ್ಲಿ ಮಾಲ್‌ಗಳಲ್ಲಿ ಅರ್ಧ ಲೀಟರ್ ಬಾಟಲ್ ಒಂದಕ್ಕೆ 60 ರೂಪಾಯಿ ಹೇಳಿದಾಗ ‘ನಾವ್ಯಾಕ್ರೀ ಈ ದುಬಾರಿ ನೀರು ಕೊಳ್ಳಬೇಕು? ನಮಗೆ ಮಾಮೂಲಿ 20 ರೂಪಾಯಿ ಲೀಟರ್‌ನದ್ದು ಕೊಡಿ ಸಾಕು ಎಂದು ಶರಂಪರ ಕಿತ್ತಾಡುವ ನಾವು ಇಲ್ಲಿ ಆ ದುಬಾರಿ ಬೆಲೆಯ ಮೂರರಷ್ಟು ರೇಟ್ ಹೇಳಿದರೆ ಕೊಳ್ಳುವವರಾ!  ಸರಿ ಈ ನೀರಿನದ್ದು ಬಗೆಹರಿಯುವ ವಿಷಯವಲ್ಲ ಎಂದು ಅದನ್ನು ಒಂದು ಬದಿಗೆ ಸರಿಸಿ ಈ ದಿನವನ್ನು ಹೇಗೆ ವ್ಯರ್ಥ ಮಾಡದಂತೆ ಕಳೆಯುವುದು ಎಂದು ಯೋಚಿಸಲಾರಂಭಿಸಿದೆವು.

ನಾವು ವಿಮಾನ ರದ್ದಾದ ಕಾರಣ ಅಮೂಲ್ಯ ದಿನವನ್ನು ಕಳೆದುಕೊಂಡಿದ್ದೆವು. ಈಗ ನಮಗೆ ಸಮಯವಿದ್ದಿದ್ದು ಈ ಸಂಜೆಯ ಎರಡು ಮೂರು ಘಂಟೆ ಮತ್ತು ಮಾರನೆಯ ದಿನ ಬೆಳಿಗ್ಗೆ 80 ಕಿಲೋಮೀಟರ್ ದೂರದ ರೈಸ್ ಕಾಂಪ್ಲೆಕ್ಸ್‌ಗೆ ಹೋಗಿ, ಅದೆಷ್ಟು ಸಾಧ್ಯವೋ ಅಷ್ಟು ನೋಡಿ ನಂತರ ಮಧ್ಯಾಹ್ನ 3ಕ್ಕೆ ರೈಲು ಹತ್ತುವುದು ಎಂದಾಗಿ ಹೋಗಿತ್ತು. ಯಾವುದನ್ನೂ ಪೂರ್ತಿ ನೋಡಲಾಗದು ಎಂದು ಜ್ಞಾನೋದಯವಾಗಿ ಅಸಹಾಯಕತೆ ಆವರಿಸಿತ್ತು. ಆದರೂ ಇಷ್ಟು ದೂರದಿಂದ ಹೋಗಿ ಅಲ್ಲಿ ಎಷ್ಟಾಗುತ್ತದೋ ಅಷ್ಟನ್ನು ನೋಡುವುದೊಂದೇ ನಮಗಿದ್ದ ಆಯ್ಕೆ. ಆ ಎರಡು ಘಂಟೆಗಳು ಒಂದು ಊರನ್ನು ನೋಡಲು ಯಾವ ಮೂಲೆಗೆ ಸಾಧ್ಯ ಹೇಳಿ? ಆದರೂ ಸುಮ್ಮನೆ ರೂಮಿನಲ್ಲಿರುವುದರ ಬದಲಿಗೆ ಒಂದು ಸುತ್ತು ಹಾಕೋಣವೆಂದು ನಿರ್ಧರಿಸಿದೆವು.

ಇನ್ನೊಂದು ಸ್ವಲ್ಪ ಹೊತ್ತಿಗೆ ಹೊರಡಬೇಕು, ಇನ್ನು ಮಲಗುವುದೇನು ಎಂದು ಕಿಟಕಿಯಾಚೆ ಮತ್ತು ರೂಮಿನೊಳಗೆ ಕಣ್ಣಾಡಿಸುತ್ತ ನಿಂತೆವು. ಅಲ್ಲಿ ಮೂಲೆಯಲ್ಲಿಟ್ಟಿದ್ದ ಮೊಬೈಲ್ ಒಂದನ್ನು ನೋಡಿ ನಮ್ಮ ಮೊಬೈಲ್ ಚಾರ್ಜ್ ಮಾಡಿಲ್ಲವೆನ್ನುವುದು ನೆನಪಾಯಿತು, ಹಿಂದೆಯೇ ಯೂರೋಪ್‌ನ ಪ್ಲಗ್‌ಗಳಿಗೆ ಹಾಕುವ convertor ನಮ್ಮ ರೂಮಿನಲ್ಲಿ ಇಲ್ಲವೆಂಬುದೂ  ನೆನಪಾಯಿತು. ಬೇರೆ ದೇಶಗಳಿಗೆ ಹೋದರೆ ಮೊದಲು ಎದುರಾಗುವ ಸಮಸ್ಯೆಯೇ ಇದು.

ಅದ್ಯಾಕೆ ಒಂದೊಂದು ದೇಶದವರು ಒಂದೊಂದು ರೀತಿಯ ಡಿಜ಼ೈನ್ ಮಾಡಿಟ್ಟಿದ್ದಾರೋ ಎಂದು ಮೈ ಪರಚಿಕೊಳ್ಳುವಂತಾಗುತ್ತದೆ. ಭಾರತೀಯ ಪ್ಲಗ್‌ಗಳು ಸಪಾಟಾಗಿದ್ದರೆ, ಇವುಗಳ ಸುತ್ತ ಒಂದು ಪುಟ್ಟ ಗುಳಿ ಇರುತ್ತದೆ. ನಮ್ಮ ಪ್ಲಗ್‌ಗಳು ಆ ಗುಳಿಯೊಳಗೆ ಹೋಗುವುದೇ ಇಲ್ಲ. ಅದಕ್ಕೊಂದು convertor ಸಿಗುತ್ತದೆ. ಆದರೆ ನಾವು ಬೃಹಸ್ಪತಿಗಳು ಪ್ರತಿ ಬಾರಿ ಬೇರೆ ದೇಶಕ್ಕೆ ಹೊರಟಾಗಲೂ ಮತ್ತೊಂದು ಕೊಳ್ಳುವುದು ಮರೆತು ಇದರಲ್ಲೇ ಮ್ಯಾನೇಜ್ ಮಾಡಲು ಪರದಾಡುತ್ತೇವೆ.

ಈಗಲೂ ಅದೇ ಸ್ಥಿತಿ ಎದುರಾದಾಗ ಮಗ, ಅವನ ಅಪ್ಪನ ರೂಮ್‌ನಿಂದ ಅದನ್ನು ಬೇಡಿ ತಂದ. ಒಂದಿಷ್ಟು ಉಸಿರು ತುಂಬಿಕೊಂಡಿತು ಅಂತಾದ ಮೇಲೆ ಆ ಮೂಲೆಯಲ್ಲಿಟ್ಟಿರುವ ಮೊಬೈಲ್ ಯಾರದ್ದು ಎಂದು ತಲೆಗೆ ಬಂದಿತು. ನೋಡಿದರೆ ಅದರ ಪಕ್ಕದಲ್ಲೊಂದು ಕಾರ್ಡ್ `Take me out, I’m your Travel buddy’ ಎಂದು. ಸರಿಯಾಗಿ ಓದಿದ ಮೇಲೆ ತಿಳಿದದ್ದೇನೆಂದರೆ – ನಾವು ಆ ದೇಶಕ್ಕೆ, ಊರಿಗೆ ಹೊಸಬರು ಹೋಗಿರುತ್ತೇವಲ್ಲ, ನಮ್ಮ ಬಳಿ ಫೋನ್ ಮತ್ತು ಇಂಟರ್ನೆಟ್ ಸೌಲಭ್ಯ ಇರುವುದಿಲ್ಲವಲ್ಲ.

ಹಾಗಾಗಿ ಹೋಟೆಲ್ಲಿನ ರೂಮ್‌ನಲ್ಲೊಂದು ಅನಿಯಮಿತ ಉಚಿತ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದಾದಂಥ, ಅನಿಯಮಿತ ಉಚಿತ ಇಂಟರ್ನೆಟ್ ಸೌಲಭ್ಯವಿರುವ ಫೋನ್ ಅನ್ನು ನಮ್ಮಂಥ ಗ್ರಾಹಕರಿಗಾಗಿ ರೂಮಿನಲ್ಲಿ ಇಟ್ಟಿದ್ದಾರೆ ಎಂದು! ಅದನ್ನು ಹೊರಗೆ ಹೋಗುವಾಗ ನಾವು ಎಲ್ಲೆಡೆ ಒಯ್ಯಬಹುದು ಮತ್ತು ಉಪಯೋಗಿಸಬಹುದು. ಆದರೆ ಹಿಂತಿರುಗಿ ಬರುವಾಗ ಮಾತ್ರ ಅಲ್ಲಿಯೇ ಬಿಟ್ಟು ಬರಬೇಕು ಕಡ್ಡಾಯವಾಗಿ! ಅಪ್ಪಿ ತಪ್ಪಿ ಹಿಂತಿರುಗಿ ಬರುವಾಗ ಅಲ್ಲಿಯೇ ಬಿಡದೆ ಒಯ್ದರೂ ಅದು ಉಪಯೋಗಿಸಲಾಗುವುದಿಲ್ಲ ಎನ್ನುವ ಎಚ್ಚರಿಕೆಯೂ ಇತ್ತು ಆ ಕಾರ್ಡ್‌ನಲ್ಲಿ!

ನನಗೆ ಮತ್ತು ನನ್ನ ಮಗನಿಗೆ ಇದ್ಯಾವುದೋ ಸ್ವರ್ಗಲೋಕದ ಊರಿಗೆ ತಪ್ಪಿ ಬಂದುಬಿಟ್ಟಿದ್ದೇವಾ ಎಂದು ಅನುಮಾನ ಬರುವಷ್ಟು ಸಂತೋಷವಾಯಿತು! ಎಷ್ಟೋ ಬೇರೆ ದೇಶಗಳಿಗೆ ಹೋದಾಗ ಇರುವ ವೈಫೈ ಕೂಡಾ ಮೇಲಿನ ಮಹಡಿಗಳಿಗೆ ತಲುಪದೆ, ತಲುಪಿದರೂ ಆಮೆಯ ವೇಗದಿಂದ ಕಿರಿಕಿರಿ ಉಂಟುಮಾಡುವ ಸಂದರ್ಭಕ್ಕೆ ಹೊಂದಿಕೊಂಡ ಮನಸ್ಸಿಗೆ ‘ಜಗತ್ತಿನಲ್ಲಿ ಇಷ್ಟೆಲ್ಲ ಒಳ್ಳೆಯತನ ಇರುವ ದೇಶವೂ ಇದೆಯಾ?!’ ಎಂದು ಅನುಮಾನವಾಯಿತು. ಅದೂ ಅದೇನು 4 ಸ್ಟಾರ್ ಅಥವಾ 5 ಸ್ಟಾರ್ ಹೋಟೆಲ್ ಕೂಡಾ ಅಲ್ಲ.

ಸಾಧಾರಣವಾದ 3 ಸ್ಟಾರ್ ಹೋಟೆಲ್ಲಿನಲ್ಲಿ ಕಾಣದ ದೇಶಕ್ಕೆ ಹೋದ ಕೂಡಲೇ ಬದುಕು ಸರಳಗೊಳಿಸುವಂಥ ಇಂಥ ಸೌಲಭ್ಯಕ್ಕೆ ನಾವು ಮರುಳಾದೆವು. GPS ಎಂಬ ಮಾಯಾಮೋಹಿನಿಯನ್ನು ಹಿಂಬಾಲಿಸಿದರೆ ಆಯಿತು, ಇನ್ನು ಇಲ್ಲಿರುವವರೆಗೂ ರಸ್ತೆ ಗೊತ್ತಾಗದೇ, ದಾರಿ ತಪ್ಪಿಸಿಕೊಂಡು, ಊಟದ ಹೋಟೆಲ್ ಹುಡುಕಾಡುತ್ತ ಒದ್ದಾಡಬೇಕಿಲ್ಲ ಎಂಬ ವಿಷಯವೇ ನಮ್ಮನ್ನು ನಿರಾಳವಾಗಿಸಿ ಬಿಟ್ಟಿತು. 

ಐದು ಘಂಟೆಗೆ ಕೆಳಗಿಳಿದು ಬಂದಾಗ ಬಾಗಿಲುಗಳೇ ಇಲ್ಲದ ಉದ್ದದ ಗಾಡಿಯೊಂದು ನಮಗಾಗಿ ಕಾಯುತ್ತಿತ್ತು, ಅಲ್ಲಿ ನೋಡಿದರೆ ಸಾರಥಿಯ ಸೀಟಿನಲ್ಲಿ ಕೆಂಗೂದಲ ಚೆಲುವೆ! ಸುಮಾರು 20-21 ವರ್ಷವಿರಬಹುದು ಅಷ್ಟೇ. ಅರೆರೆ, ಸಾರಥಿ ಎಂದ ಕೂಡಲೇ ಗಂಡಸೇ ಅಂತ ಅಂದುಕೊಂಡ ನಮ್ಮ ಮಣಕುಗಟ್ಟಿದ ಮಿದುಳುಗಳಿಗೆ ಉಪ್ಪಿನ ಕಾಗದದಿಂದ ಉಜ್ಜಿದಂತಾಯಿತು! ಖುಷಿಯಿಂದ ಗಾಡಿ ಏರಿದೆವು.

ನಗುತ್ತಾ ನಮ್ಮನ್ನು ಸ್ವಾಗತಿಸಿ ತನ್ನ ಹೆಸರು ಆನ್ಯಾ ಎಂದು ಪರಿಚಯಿಸಿಕೊಂಡು ಯೂನಿವರ್ಸಿಟಿಯಲ್ಲಿ ಫಿಲಾಲಜಿ ಡಿಗ್ರಿ ಮಾಡುತ್ತಿದ್ದೇನೆ, ಇದು ಪಾರ್ಟ್ ಟೈಮ್ ಕೆಲಸ ಅಂದಳು ಆ ಚೆಲುವೆ. ಹತ್ತು ಸೀಟುಗಳ ಆ ವಾಹನದಲ್ಲಿ ನಾವು ನಾಲ್ಕೇ ಜನ. ಒಬ್ಬೊಬ್ಬರು ಒಂದೊಂದು ಸೀಟಿನಲ್ಲಿ ಕುಳಿತೆವು. ನಾನು ಬ್ಯಾಕ್ ಬೆಂಚ್ ವಿದ್ಯಾರ್ಥಿನಿ ಹಿಂದಿನ ಸೀಟಿನಲ್ಲಿ ಕುಳಿತರೆ ಫೋಟೋ ತೆಗೆಯಲು ಅನುಕೂಲ ಎಂದು ಅಲ್ಲಿ ಹೋಗಿ ಕುಳಿತೆ.

ವ್ರೋಟ್ಜ಼್ವಾನ ಬೀದಿಗಳಲ್ಲಿ ನಮ್ಮ ರಥ ಉರುಳಿತು. ಆನ್ಯಾ ಮೆಲುದನಿಯಲ್ಲಿ ಆ ರಸ್ತೆ ಬದಿಯಲ್ಲಿನ ಸ್ಥಳಗಳ, ಕಟ್ಟಡಗಳ ಪರಿಚಯ ಮಾಡಿಸುತ್ತಾ ಗಾಡಿ ಓಡಿಸಿದಳು. ಬೀದಿ ಬೀದಿಯಲ್ಲಿ ವಾಹನಗಳ ನಡುವೆಯೇ ಹಾದು ಹೋಗುವ ಟ್ರಾಮ್ ಸರ್ವೀಸ್, ಸೈಕಲ್ ಸವಾರರು, ಲೇನ್ ಜಪ್ಪಯ್ಯ ಅಂದರೂ ಬದಲಿಸದ ನಾಲ್ಕು ಚಕ್ರ ವಾಹನ ಸವಾರರು… ಇಡೀ ನಗರವೇ ಪ್ರಶಾಂತವಾಗಿ ತನ್ನ ಪಾಡಿಗೆ ತಾನು ಬದುಕುತ್ತಿತ್ತು.

‍ಲೇಖಕರು ಬಿ ವಿ ಭಾರತಿ

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: