ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’

ಕ್ಷಣ ಕ್ಷಣದ ಜ್ಞಾನೋದಯಗಳ ವಿಸ್ಟಾ

ರಾಜು ಎಂ ಎಸ್

ಕವಿ ಸಮಯವನ್ನು ಹಿಡಿದಿಡುವ ಅಮೂಲ್ಯ ಘಳಿಗೆಯಲ್ಲಿ, ಕವಿ ಬರೆಯುತ್ತಾನೆ. ಅದು ಅದಷ್ಟಕ್ಕೇ ಚಂದವೆನಿಸುವ ಸಾಹಿತ್ಯಾನುಭೂತಿ. ಈ ಭಾವ ಜಗತ್ತಿನಲ್ಲಿ ಕನ್ನಡಕದ ವಿಮರ್ಶಕ ಇಣುಕಿ, ಏನಿದೆ ಏನಿಲ್ಲ ಎಂದು ಹೇಳಹೊರಡುವುದು ಒಂದು ರೀತಿಯಲ್ಲಿ ಅತಿಕ್ರಮಣ ಎನಿಸುತ್ತದೆ. ‘ವಿಮರ್ಶೆ’ ಎಂದು ಕರೆಯುವುದೂ ಒಂದು ರೀತಿಯಲ್ಲಿ ಕಾವ್ಯದ ಓದಿಗೆ ಎಸಗುವ ಅಪಚಾರ ಅಂತೆಯೇ ಕಾವ್ಯಾತ್ಮಕತೆಯ ರಸಭಂಗ.

ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’ ಕವನಸಂಕಲನದ ಪುಟ ಪುಟದಲ್ಲೂ, ಓದು ಸಾಗುತ್ತಾ ಹೋದಂತೆ ಹೊಳಹು, ಜಿಜ್ಞಾಸೆ, ಕ್ಷಣ ಕ್ಷಣದ teeny-weeny enlightenments, ವಿಸ್ಮಯ, ತಕರಾರು, ಬೌದ್ಧಿಕ ಸಹಚರ್ಯ; ಶಬ್ದರೂಪಗಳಿಗಿಳಿಸಲಾಗದ ಭಾವಗಳು ಮೂಡುತ್ತವೆ. ಹೊಸ ಓದಿಗಾಗಿ ತಪಿಸುವವರಿಗೆ ಕೈಮರವಾಗಲು ಮಾಡಿಟ್ಟ ಟಿಪ್ಪಣಿಗಳನ್ನಿಲ್ಲಿ ಪ್ರಸ್ತುತಪಡಿಸಲಾಗಿದೆ.

ಇಲ್ಲಿನ ಕಾವ್ಯದ ಓದಿನ ಕ್ರಿಯೆ ಒಂದು ಧ್ವನಿಪೂರ್ಣ ಅನುಭೂತಿ ಎಂಬುದಕ್ಕಿಂತಲೂ;  ಕಾವ್ಯದ ಭಾವದ ರಸಾಸ್ವಾದನೆಯ ಘಳಿಗೆಗಳು ನಮ್ಮನ್ನು ನಾವು ತೆರೆದುಕೊಳ್ಳುವಂತೆ ಮಾಡುತ್ತವೆ.  ‘ಒಳಗೊಂದು ವಿಲಕ್ಷಣ ಮಿಶ್ರಣ’ದ ಓದು ಒಂದು ಬುದ್ಧಿಜನ್ಯ, ಜತನದಿ ಒಪ್ಪವಾಗಿ ಜೋಡಿಸಿದ ಇಮೇಜರಿಗಳ ಒಂದು ಬೌದ್ಧಿಕ ಕಸರತ್ತು ಆಗುತ್ತದೆ.

ಪೂರ್ಣಪ್ರಮಾಣದ ಕಥೆಗಳಿಗಾಗುವಷ್ಟು ಸರಕುಗಳ ತುಂಬಿಕೊಂಡಿರುವ ಪ್ರತೀ ಕವಿತೆಗಳೂ ಫಾರ್ಮುಲಾಯಿಕ್ ಬೀಜಗಥೆಗಳೆನ್ನಿಸುತ್ತವೆ. ಇಲ್ಲೊಂದು ಕವಿತೆಯ ಕಾವ್ಯ ನಾಯಕಿ ತನ್ನ ‘ಬಣ್ಣಗೆಟ್ಟ ಬದುಕ’ನ್ನು ವಾಚ್ಯವಾಗಿಸಿದ್ದಾಳೆ. ಇವಳೊಬ್ಬ ವೃದ್ಧ ತಾಯಿ. ತನ್ನ ಮನೆಯಲ್ಲಿ ಕುಳಿತು, ಸಾಗರದಾಚೆಯೆಲ್ಲೋ ನೌಕರಿಗಾಗಿ ಹಾರಿಹೋದ ತನ್ನ ಮಕ್ಕಳನ್ನು ನೆನೆದು ನಿಡುಸುಯ್ಯುತ್ತಿದ್ದಾಳೆ.

ಬಣ್ಣ ಬಣ್ಣದ ಹೊಳೆವ ನುಣುಪಾದ ಮಾಡ್ರನ್ ಟಾಯ್ಲೆಟ್ , ಡಿಜಿಟಲ್ ಗಡಿಯಾರ, ಬಣ್ಣದ ಟಿವಿ, ಗೀಸರ್, ಕುಕ್ಕರ್, ಜಾರು ಪರದೆಯ ಮೊಬೈಲ್ …., ಹೀಗೆ ಮೆಟಿರಿಯಲಿಸ್ಟಿಕ್ ಆದ ನಿರ್ಜೀವ ವಸ್ತುಗಳೊಡನೆಯ ಬಣ್ಣದ ಬಿಂಬಗಳ ನಟ್ಟನಡುವೆ ಉಸಿರಾಡುವ ನಿರ್ವರ್ಣ ವೃದ್ಧ ಏಕಾಂಗಿ ತಾಯಿ. ಮಕ್ಕಳ ಬರುವಿಕೆಗೆ ಕಾಯುತ್ತಾ ಅವರೊಂದಿಗೆ ಕೊನೆಯ ದಿನಗಳನ್ನು ಕಳೆಯಲು ಪರಿತಪಿಸುತ್ತಿದೆ ಈ ತಾಯಿ ಜೀವ.

“ಒಳಗೆಲ್ಲ ಖಾಲಿ ಖಾಲಿ…/ನಿನ್ನ ಕಳಕೊಂಡೆನೋ ಕಳಿಸಿಕೊಟ್ಟೆನೋ/ತಿಳಿಯದು “. ಈ ಅಜ್ಜಿ ತನ್ನ ಮೊಮ್ಮಕ್ಕಳೊಡನೆ ಆಡುವಾಗ, ತಾನು ಅಳುವ ಫೋಟೋ ಮೊಬೈಲ್ ನಲ್ಲಿ ತೆಗೆಯಲು ಕೇಳಿಕೊಂಡಾಗ, ಮೊಲದ ಕಿವಿಯೋ ಕೆಂಪು ಕನ್ನಡಕವೋ ಮೂಡಿಬರುತ್ತಿದೆ. ಬಿಂಬಗಳು ಕೂಡ ಇಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿವೆ.

ಕವನದ ತುಂಬಾ, ವಸ್ತುಗಳು ಅವಳ ಸುತ್ತ ಹರವಿ ಬಿದ್ದಿರುವಂತೆನಿಸಿದರೂ ಕೊನೆಗೆ ಅವಳಿಗೆ ಉಳಿದ ಸಂಗತಿಯೆಂದರೆ ಡಿಜಿಟಲ್ ಗಡಿಯಾರ. ಅದು ಕರಾರುವಕ್ಕಾಗಿ ಸಮಯ ತೋರಿಸುತ್ತಿದೆ, ಅವಳ ಸಾಯುವ ಸಮಯವೊಂದನ್ನು ಬಿಟ್ಟು!  ದುಬಾರಿ ದೂರದರ್ಶನವೂ ತೋರಿಸದು ಸತ್ಯದ ಪರಿ’. ತಾಯಿಯ ಬದುಕುವ ಭರವಸೆಗಳೆಲ್ಲಾ ಮಾಡ್ರನ್ ಟಾಯ್ಲೆಟ್ಟಿನಲ್ಲಿ ಫ್ಲಶ್ ಆಗಿ ಹೋದಂತೆ, ಅವಳ ಒಳಮನಸ್ಸಿನ ಬಣ್ಣದ ನಿಜ ಸ್ಥಿತಿಗಳೂ ಇಲ್ಲಿ ಫ್ಲಶ್ ಆಗಿ ತೊಳೆದು ಹೋಗುತ್ತಿವೆ. ಇದು ‘ಬಣ್ಣಗೆಟ್ಟಿದೆ ಬದುಕು’.

ಪರಿತ್ಯಕ್ತತೆಯ ಅನಾಥ ಪ್ರಜ್ಞೆಯನ್ನು ಶೋಧಿಸುವ ಇನ್ನೊಂದು ಕವನ ‘ಈ ಹಾದಿಯಲ್ಲಿ ಹಾದವರೆಷ್ಟು ಮಂದಿ?’ ಮನೆಯನ್ನೂ ನೆನಪನ್ನೂ ಬಿಟ್ಟು ಓಡಿಹೋಗಿದ್ದ ಕುಟುಂಬ ಸದಸ್ಯನನ್ನು ಹುಡುಕಿಕೊಂಡು ಹಾದಿಗುಂಟ ಹೊರಟಿರುವ ಕವಿತೆಯ ನಾಯಕ/ಕಿ ಬರೀ ಊಹೆಗಳ ತೂಗಿ ಭ್ರಮಿಸುತ್ತಿರುವ ಧ್ವನಿ ಇಲ್ಲಿದೆ. ಈ ಹಾದಿಯಲ್ಲಿ ಮನೆಬಿಟ್ಟು ಹಾದು ಹೋದವರೆಷ್ಟೋ ಮಂದಿ ಇದ್ದಿರಬಹುದು. ಅಲ್ಲಿ ಯಾವುದೋ ಒಂದು ಕಟ್ಟೆಯ ಮೇಲೆ ಕೂತು ಕಣ್ಣೀರಿಟ್ಟು ಹೋಗಿರಬಹುದೇ. ಹೀಗೆ ಸಾಗುತ್ತದೆ ಲಹರಿ.

“ಮುಂದೆ ಹೋಗಿ ಸುದ್ದಿಯಾಗುವನೇ? ಸುದ್ದಿ ತರುವನೇ? ಅಲ್ಲಿ ಯಾವುದೋ ಒಳಕೋಣೆಯ ಕತ್ತಲಲ್ಲಿ ಮಲಗಿರಬಹುದೇ?” ಎಂದು ಭವಿಷ್ಯದ ಕಡೆಗೆ ಆಸೆಗಣ್ಣಿನ ಊಹೆ ಇದೆ. ಅವನ ಗತದ ನೆನಪು ತರಿಸುವ ವಸ್ತುಗಳು ಇವೆ. ಅವನ ಟ್ರಂಕು ಈಗಾಗಲೇ ಗುಜರಿ ಪಾಲಾಗಿದೆ. ಅವನ ನೆನಪನ್ನಿಡಲು ಲಾಕರು ಇಲ್ಲ. “ಅವನದೊಂದು ಸಣ್ಣ ಲೋಕ, ಸಣ್ಣ ಜನ್ಮ, ವಿಲಕ್ಷಣ ಅವತಾರ ಮುಗಿದುಹೋಯಿತೆ”. ಹೀಗೆ ಪ್ರಲಾಪಿಸುತ್ತಾ, ಭೂತ-ಭವಿಷ್ಯಗಳ ಕೇಂದ್ರವಾದ ಇವನ ನಿರೀಕ್ಷೆಯೂ ಕಾಲ ಸರಿದಂತೆ ಮಾಯವಾಗುತ್ತಾ; ಶಿಕ್ಷೆ ಅವನಿಗೋ ಇವರಿಗೋ ಎನ್ನುವ ಅತಂತ್ರದ ವಿಲಕ್ಷಣತೆಯನ್ನು ಚಿತ್ರಿಸುವ ಕವನವಿದು.

ಸಾವು-ಕನಸು-ಬದುಕುಗಳ ಸಂಕೀರ್ಣ weirdness ಅನ್ನು ಕಟ್ಟಿಕೊಡುವ ಕವನಗಳಿವೆಯಿಲ್ಲಿ. ಇಲ್ಲಿನ ಕಾವ್ಯ ನಾಯಕನಿಗೆ  ಕನಸು ಮುಗಿಯಬಾರದೆಂಬ  ಹಂಬಲ.  ಆಪರೇಷನ್ ಥಿಯೇಟರ್ ಗೆ ಸಾಗಿಸುವ ಮುನ್ನಿನ ಕ್ಷಣಗಳ ಕನಸು; ಒಳಗೆ ಹೋದಾಗಿನ ಕನಸು; ಆಪರೇಷನ್ ನಂತರದ ಕನಸು …ಎಲ್ಲವೂ ಒಂದರೊಳಗೊಂದು ಹೆಣೆದುಕೊಂಡು ಕನಸು-ವಾಸ್ತವಗಳೆರಡರ ಸೀಮಾರೇಖೆಯನ್ನು ಅಳಿಸಿಹಾಕಿವೆ. ಮೆಡಿಕಲ್ಲೀ ಅಥೆಂಟಿಕ್, ಸೈಂಟಿಫಿಕಲಿ ಪ್ರಾಕ್ಟಿಕಲ್ ಆದ ಹಾಸ್ಪಿಟಲ್ ನ ಲೋಕವನ್ನು ಗ್ರಹಿಸಿಕೊಳ್ಳಲು ಇವನಿಗೆ ತನ್ನದೇ ಪ್ರತಿಮೆ-ಉಪಮೆಗಳು ಬೇಕಾಗಿವೆಯಿಲ್ಲಿ.

ಹಾಸು ಪತ್ರೆ’ ಯಲ್ಲಿ ‘ಗಲ್ಲಿಗೆ ಹೊರಟವನಂತೆ’ ತನ್ನ ತಾನೇ ಪರಿಗ್ರಹಿಸುತ್ತಿದ್ದಾನೆ. ಚಟ್ಟಕ್ಕೆ ಇಲ್ಲಿ ನಾಲ್ಕು ಗಾಲಿಗಳಿವೆ. ರಾಮ ನಾಮ ಸತ್ಯ ಹೈ ಹೇಳಿಸಿಕೊಳ್ಳಲಿಷ್ಟವಿಲ್ಲ. ಒಳಹೊಕ್ಕ ಅವನಿಗೆ ಭ್ರಮೆಯ ಪ್ರತಿಮೆಗಳು : ಬಣ್ಣದ ನೆರಳು ಕಾಣುತ್ತಿದೆ’, ‘ಬೆಳಕನ್ನು ಕೈಯಲ್ಲಿ ಹಿಡಿದಿದ್ದೇನೆ’.  ನಿಜಕ್ಕೂ ‘ಕನಸು ಕಾಣುವುದು’ ಎನ್ನುವ ಕಾಯಿಲೆಯ ಟ್ರೀಟ್ಮೆಂಟಿಗೆ ಆಪರೇಷನ್ ನಡೆಯುತ್ತಿದೆಯೇ… ಕನಸು ಕಾಣುವುದೆನ್ನುವ ಅರ್ಬುದದ ಲಾಸ್ಟ್ ಸ್ಟೇಜ್ ಆಗಿದೆಯೇ ಇದು, ಎನ್ನಿಸದಿರದು.

ಅರಿವಳಿಕೆ ಚುಚ್ಚಿದ ನಂತರ ಕನಸಿನೊಳಗಿಂದ ಇವನು ಅಲೌಕಿಕ ಜಗತ್ತಿನ ಬಾವಿ ತಳದಿಂದ ಮೇಲುಮುಖನಾಗಿ, ವಿಲೋಮಗತಿಯಲ್ಲಿ ಏರಿದ ಕನಸುಯಾನ ಶುರು. ತರ್ಕಾತೀತವಾದ ಕನಸ ಭ್ರಮಾಲೋಕದಲ್ಲಿ ಕೊನೆಯ ಕ್ಷಣಗಳ ಲೆಕ್ಕಾಚಾರದ ಮಗ್ಗಿ ಶುರುವಾಗಿ ಸೊನ್ನೆಗೆ ಬಂದು ನಿಂತಾಗ, ಕನಸರ್ಬುದ….,‘ಇಟ್ಸ್ ಓವರ್’. ಕನಸ ಕಾಯಿಲೆ ಗುಣವಾಯಿತೇ… ಕನಸ ಕಳಕೊಂಡವ ಜೀವಂತವಾಗಿ ಏಳುವನೇ… ಅಥವಾ “ಎಲ್ಲಾ ವೈಟಲ್ಸ್ ಫುಲ್ ನಾರ್ಮಲ್” ಆದರೂ ಬದುಕಿದಂತೆ ಸತ್ತಂತಿರುವನೇ… ಅಥವಾ ಆಪರೇಷನ್ ಫೇಲ್ಡ್ ಪೇಷಂಟ್ ಡೆಡ್ ಆಗಿ ‘ಕನಸು’ ವಿಜಯಶಾಲಿಯಾಯಿತೇ… “ಎದ್ದು ಕುಳಿತೆ / ನನ್ನ ಕನಸ ಮುಗಿಸುವವರ / ಮುಗಿಸಿಬಿಡುವ ಹುಚ್ಚು ಹುಮ್ಮಸ್ಸಿನಲಿ” ಎಂದು ಕವನ ಅಂತ್ಯಗಾಣುವಲ್ಲಿ ಗೆದ್ದದ್ದು ಯಾವುದು… ಮೆಡಿಕಲ್ ಸೈನ್ಸೋ, ಇವನ ಕನಸು ಕಳಕೊಂಡ ದೇಹವೋ… ದೇಹ ಕಳಕೊಂಡ ಕನಸೋ… ಒಟ್ಟಿನಲ್ಲಿ ಇದು ‘ಕನಸು ಮುಗಿಯಬಾರದು’.

‘ದ ಕೋರ್ಟ್ ಈಸ್ ಅಡ್ಜರ್ನ್ಡ್’ ಎಂಬ ಕವನದಲ್ಲಿ ವೃದ್ಧ ಮಾತಾ-ಪಿತರನ್ನು ಅವರ ಮಕ್ಕಳೇ ನೋಡಿಕೊಳ್ಳುವ ವ್ಯಾವಹಾರಿಕ ನಾಟಕವನ್ನು ಅಣಕಮಾಡಿ ಹೇಳುವುದನ್ನು ನೋಡಬಹುದು. ಇವೆರಡೂ ಜನರೇಶನ್ನಿನ ಇಬ್ಬದಿಯ ನಿಲುವುಗಳಡಿಯಲ್ಲಿ ತೀರ್ಪು, ನ್ಯಾಯದಾನ ನೀಡಲಾರದೇ ತಾತ್ಕಾಲಿಕವಾಗಿ ಮೊಟಕುಗೊಳಿಸಿದ ಅಡ್ಜರ್ನ್ಡ್ ಸ್ಥಿತಿಯನ್ನು ಹಿಡಿದಿಡಲು ಕವನ ಶ್ರಮಿಸುತ್ತಿದೆಯೇನೋ.

ಎಲ್ಲರ ಮನೆಗಳಲ್ಲಿ ನಡೆವ ವಾದ-ವಿವಾದ ತರ್ಕ-ಕುತರ್ಕಗಳ ಸರಣಿಗಳೇ ಇರಬಹುದೇನು ಇದು. ಇದು ಸಾರ್ವತ್ರಿಕ ವಿದ್ಯಮಾನವೇನೋ ಎನ್ನಿಸುವಂತೆ ಈ ಕವನದ ತರ್ಕ ಹೇಳುತ್ತದೆ . ಸಮಾಜಶಾಸ್ತ್ರೀಯ ನೆಲೆಯಿಂದ, ಮನೋವೈಜ್ಞಾನಿಕ ನೆಲೆಗಟ್ಟಿನೊಳಗಿಂದ ಇದನ್ನು ಇನ್ನೂ ವಿಷದಗೊಳಿಸಿಕೊಳ್ಳಬೇಕಾದ ಬಾಧ್ಯತೆಯನ್ನು ಕಾವ್ಯದೊಳಗಿನ ಧ್ವನಿಯೇ ನಿರಾಕರಿಸುವಂತೆ ವ್ಯಕ್ತವಾಗಿದೆ.

ಇಲ್ಲಿ ವೃದ್ಧರ ಪ್ರತಿನಿಧಿಯಾಗಿ ಅಥವಾ ಹೊಸ ಪೀಳಿಗೆಯವರ ಪ್ರತಿನಿಧಿಯಾಗಿ ನಿಂತು ಯಾವ ವಾದಗಳೂ ಮಂಡನೆಯಾಗಿಲ್ಲ. ಇವರಿಬ್ಬರಿಂದಲೂ ಹೊರ ನಿಂತು, ಒಬ್ಬ ತೀರ್ಪುಗಾರನ ಸ್ಥಾನದಲ್ಲಿ ನಿಂತು, ‘ತೃತೀಯ ಪುರುಷ ದೃಷ್ಟಿಕೋನ’ ( third person’s point of view) ದಿಂದ ತೀರ್ಪನ್ನು ನೀಡುವಂತೆ ಹೊಮ್ಮಿ ಬಂದಿದೆ ಈ ಕವನದ ಧ್ವನಿ.  “ಮಾನವೀಯತೆಯ ಕೋರ್ಸಿನಲ್ಲಿ ಮರುಕದ ಕ್ಲಾಸ್ ಬಂಕ್ ಮಾಡಿದವರೆಲ್ಲ” ಇಲ್ಲಿರುವವರು. ಕ್ಯೂಂಕಿ ಸಾಸ್ ಭೀ ಕಭೀ ಬಹೂ ಥೀ.

“ನೋಡಿಕೊಳ್ಳುತ್ತಿದ್ದೇವೆ,… ಸಾಕುತ್ತಿದ್ದೇವೆ… ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ ಮಕ್ಕಳು ಲೆಕ್ಕಾಚಾರದಿ”. “ಕೊಳಕು ವಿನ್ಯಾಸದ ಹೊಣೆಗಾರಿಕೆಯ ಸಂಸಾರಿಕ ನಾಟಕವಿದು” . ಈ ಕವನದೊಳಗಿನ ಸಾಲಿದೆ “ತೆರೆ ಸರಿಯುವುದಿಲ್ಲ”, ಅಂದರೆ ‘ಮಾಯೆ ‘ ಸರಿಯುವುದಿಲ್ಲ. ಜೀವನ ನಾಟಕದಲ್ಲಿ ಯಾರಿಗೂ ‘ಹಾವು ಮತ್ತು ಹಗ್ಗ’ದ ಮಾಯೆಯ ಪರದೆ ಸರಿಯುವುದಿಲ್ಲ. ಸರಿಯುವುದರೊಳಗೆ ಮುಖದ ಮೇಲೆ ಬಟ್ಟೆ ( ಕಫನ್) ಏರಿಸಿಕೊಂಡು ಮಣ್ಣಾಗುತ್ತಾರೆ ಎನ್ನುವ ವಾಸ್ತವಿಕ ನಾಟಕವಷ್ಟೇ ಇಲ್ಲಿ ಘಟಿಸುವುದು. ‘ದ ಲಾಸ್ಟ್ ಜಡ್ಜ್ಮೆಂಟ್’ ಹೇಗಾಗಲು ಸಾಧ್ಯ ಇಲ್ಲಿ…

ಹೆಣ್ಣಿನ ಜಗತ್ತೆಲ್ಲ ಹಿತ್ತಲಲ್ಲೇ. ‘ಹಿತ್ತಲ ಜಗದೊಳಗೆಲ್ಲ ನಿಷಿದ್’ ಎನ್ನುವ ಕವನವೊಂದಿದೆ. ಹೆಂಗಳೆಯರು ಮುಂಬಾಗಿಲಿನ, ಮುನ್ನೆಲೆಗೆ ಬಾರದವರು. ಕವಿತೆಯೊಳಗಿನ ಧ್ವನಿ ಹೇಳುತ್ತದೆ: “ನಿನ್ನ ಸ್ವರ್ಗಲೋಕ ಮೋರಿಯಲಿ ಮುಳುಗಿಹುದು ಎಚ್ಚರವಿಲ್ಲವೇ”. ಈ ಸಾಲಿನಲ್ಲಿ ಇವರ ಸ್ಥಳ ನಿಶ್ಚಯವನ್ನು ತೋರಿಸಲಾಗಿದೆ.

“ಹಾಸಿಗೆ ಇರುವುದು ನಿನಗೆ___ನಿದ್ರಿಸಲು ಅಲ್ಲ”; “ಮನೆ ಸದಸ್ಯಳಲ್ಲ ನೀನು”, ಹೀಗೆ ಇನ್ನೂ ಅನೇಕ ಸಾಲುಗಳು ಈ ಹೆಣ್ಣು ಜೀವಿಯ ಬಯಾಲಜಿ, ಕೆಮಿಸ್ಟ್ರಿ, ಸೈಕಾಲಜಿ, ಥಿಯಾಲಜಿ, ಜಿಯೋಗ್ರಫಿ, ಹೋಮ್ ಸೈನ್ಸ್ ಎಲ್ಲವನ್ನೂ dissect ಮಾಡಿಡುತ್ತದೆ. ಒಂದು ವಿಧದ ಹೇಯಕೃತ್ಯದಡಿ ನಲುಗಿದ ಗಿನಿಪಿಗ್ ಅನ್ನು ತೋರಿಸುವಂತೆ. ಸಹಾನುಭೂತಿಯನ್ನೂ ಮೀರಿದ ಒಂದು ರೀತಿಯಲ್ಲಿ dissection ಮಾಡಿಟ್ಟ, ಹಲಗೆ ಮೇಲೆ ಎರಡು ಕೈ, ಎರಡು ಕಾಲುಗಳಿಗೆ ಮೊಳೆ ಹೊಡೆದು ಎಲ್ಲವನ್ನೂ ಅಂದರೆ ಹೆಣ್ಣಿನ ಅಣುರೇಣುತೃಣವನ್ನೂ, ಕೌಟುಂಬಿಕ ‘ಲ್ಯಾಬ್’ನಲ್ಲಿ ಮತ್ತೆ ಮತ್ತೆ ಪುನರಾಧ್ಯಯನ ಮಾಡುತ್ತಿರುವಂತಿದೆಯೇನೋ ಅನ್ನಿಸುವಂತಹ, (ಸ್ತ್ರೀವಾದಿ ಲೇಖಕಿಯರ ಮಾರ್ದನಿಯನ್ನು) ಒಂದು ಪುರುಷ ಧ್ವನಿಯು ‘ಸ್ಪಾಟ್ ಲೈಟ್’ನಡಿ ಪ್ರಕಾಶಕ್ಕೊಡ್ಡುತ್ತಿದೆ.

ಇನ್ಮುಂದೆಯೂ ಈ ಶೋಷಣೆಗಳು ಕೊನೆಗೊಳ್ಳಲಾರವೇನೋ ಎನ್ನುವಂತಿದೆ. ಕೈಮರ ಹಿಡಿದು ತೋರುತ್ತಿರುವ ಭರವಸೆಯ ದನಿ ಇಲ್ಲಿ ಇದ್ದದ್ದೇ ಆದಲ್ಲಿ ಅದು ಒಂದೇ: “… ಕಣ್ಬಿಟ್ಟು ನೋಡು… ಎದ್ದು ನಡೆ”. ಪ್ರತಿಭಟನೆಯ ದನಿ ಇನ್ನೂ ತಾರಕಕ್ಕೇರಲಿದೆ ಎನ್ನುವ ಮುನ್ಸೂಚನೆಯೇ? ಅಥವಾ ಬರೀ ಪರಿಹರಿಸುವ ದಾರಿಯೊಂದೇ ಸಾಕೇ? ಈ ಹಿತ್ತಲ ಜಗದೊಳಗೆಲ್ಲ ನಿಷಿದ್ಧ ಎನ್ನಿಸುವಂತಹವುಗಳನ್ನು ಅವಳಿಗೆ ಮಾತ್ರ ಅರಿವು ಮಾಡಿಕೊಡಲಷ್ಟೇ ಶ್ರಮಿಸುವ ಸಾಲುಗಳಿವು.

ಶೋಷಣೆ ಮಾಡುವವನ/ಳ/ರ ನ್ನೂ ಎಜುಕೇಟ್ ಮಾಡುವ, ಜೆಂಡರ್ಡ್ ನಾಲೆಡ್ಜ್ ಅನ್ನು ತುಂಬುವ ಬಾಧ್ಯತೆಯೂ ಸಾಲುಗಳಂತ್ಯಕ್ಕೆ ಬೇಕಿತ್ತಾ… ಅಥವಾ ಅವೂ ವ್ಯರ್ಥವೆಂದು ಪುನಃ ಪುನಃ ಲೋಕ ಪ್ರೂವ್ ಮಾಡುತ್ತಲೇ ಇರುವುದರಿಂದ ಬರೀ,”ಎದ್ದು ನಡೆ” ಎನ್ನುತ್ತಾ ಗಮ್ಯ ತಲುಪಿ ನಿಲ್ಲಬಹುದಾದ ‘ಆರ್ಕಿಮಿಡಿಯನ್ ಪಾಯಿಂಟ್’…?

“ಗೋಡೆಗಳ ನಡುವೆ

ಸೇಫಾಗಿ ನಡೆಯುವ

ಸೇಫಾಗಿರುವ ಭರವಸೆಯ

ಐಸುಕಲ್ಲಿನ ನಂಬಿಕೆಯೇತಕೆ

ಎಂದಿದ್ದರೂ ಅದು ಕರಗುವುದೇ”.

ಸಾಲುಗಳಲ್ಲಿ ವಿಷಾದವಿಲ್ಲ. ಭಾರತದ ಕುಟುಂಬ ವ್ಯವಸ್ಥೆಯ ಅಂತಃಸತ್ವದ ಕುಸಿತ ಸತತವಾಗಿದೆಯೆನ್ನುವ ತಣ್ಣನೆಯ ವಾಸ್ತವ ಪ್ರಜ್ಞೆ.

ವಿಯರ್ಡ್ (wierd) ಎನ್ನಿಸಬಹುದಾದಂತಹ ಒಂದು ಕವಿತೆಯಿದೆ. ‘ಬೇಯಲಾರದು ಅರ್ಥದ ಮೊಟ್ಟೆ’. ಬಿಡಿ ಬಿಡಿ ಚುಟುಕುಗಳ ಪುಂಜಗಳ ನಡುವೆ ಕನೆಕ್ಟ್ ಆಗಿ ಅರ್ಥ ಸಿಕ್ಕಿದಂತಾದರೂ ಸಿಗದ  ಮೊಟ್ಟೆ-ಕೋಳಿ ನ್ಯಾಯ. ನಿಷ್ಕರುಣಿ ಜೀವನವು ನಮ್ಮನ್ನೆಷ್ಟು ಬೇಯಿಸಿದರೂ ಮೊಟ್ಟೆಯೊಡೆದು ಅರ್ಥ ನಿಚ್ಚಳವಾಗಿ ಹೊಮ್ಮದ ಹಸ್ಕಾಪೀಸ್ಕ ಪಿಂಡಗಳು ನಾವು ಎನ್ನುತ್ತಾನೆ ಕಾವ್ಯ ನಾಯಕ.

ಹುಟ್ಟು, ಬಾಲ್ಯ, ಯೌವ್ವನ, ನಡುವಯಸ್ಸು, ಸಾವು ಇವೆಲ್ಲವನ್ನೂ ನಿರ್ವಚಿಸುವ ಹುಕಿಗೆ ಬಿದ್ದ ದನಿಯೊಂದು ಇಲ್ಲಿದೆ. ಹುಟ್ಟಿದ್ದು ಪುಣ್ಯ ಫಲದಿಂದಲೋ ಅಥವಾ ತೃಷೆಯ ಹಾವು ಕುಟುಕಿದ್ದಕ್ಕೋ ? ಈ ಪಾಪಿ ಜಗದ ವಿಷ ಸಂಗತಿಗಳೂ ಚೇಳಿನಂತೆ ಹರಿದಾಡಿದಾಗಲೂ ಸಾವನ್ನೇ ಜರಿದು ಪ್ರಸವಿಸಿದ ಜಂತು-ಜೀವನದ ಸಾವು: ಇವನ ಹುಟ್ಟು!

ಬಾಲ್ಯದ ಎಳಸು ಕೈಗಳಿಗೆ ಜೀವನಾನುಭವಿ ಅಜ್ಜಿ ಕೊಟ್ಟ ಒಣಕೊಬ್ಬರಿ ಗಿರಗಿಟ್ಲೆಯ ಆಡಿಸುತಾ ಜೀವನವನ್ನು ತಿಂದು ಅನುಭವಿಸಬೇಕೋ, ಆಡಿ ಕಳೆಯಬೇಕೋ, ಅಥವಾ ಎರಡನ್ನೂ ಸಮಸಮನಾಗಿ ಮಾಡಬೇಕೋ, ಅಥವಾ ಎರಡನ್ನೂ ಬದಿಗಿಟ್ಟು ಜ್ಞಾನಾರ್ಜನೆಯ ಗಾಂಭೀರ್ಯವನ್ನು ಹೊರಬೇಕೋ? ಹುಂಬ ಹರೆಯದ ದಾಟುಬಕ್ಕೆಗಳಿಗೂ ಏನೇನೋ ಮೂಢನಂಬಿಕೆಯ ರಿಚುವಲ್, ಮೂರು ದಾರಿ ಕೂಡುವಲ್ಲಿ. ದಾರಿಗಳು ದಿಕ್ಕು ತಪ್ಪಿಸಿದ ಮೇಲೆ, ಈ ವ್ಯಕ್ತಿ ವಾಪಾಸ್ ಸಾವಧಾನದ ಬದುಕಿಗಿಳಿದರೂ ಪೂರ್ವಗ್ರಹದ ಹಣೆಪಟ್ಟಿಯನ್ನು ಇವನ ನಡತೆಗೆ ಹಚ್ಚಿ ಭವಿಷ್ಯವನ್ನು ಕೆಡಿಸುವವರು ನಮ್ಮವರೇ.

ಇಷ್ಟು ಕಾಲ ಮರೆಮಾಚಿದ್ದ, ತೋರಿಕೆಗಿಟ್ಟಿದ್ದ ‘ಮುಖ’ಬೆಲೆ, ಲಾಸ್ಟ್ ಮೇಕಪ್ಪಿನಂತೆ ಕರಗಿ ನೀರಾಗುವುದು ಹೆಣವಾದ ಮೇಲೆಯೇ. ಇಷ್ಟನ್ನು ನಿರ್ವಚಿಸುವ ಹುಕಿಗೆ ಬಿದ್ದ ಕಾವ್ಯದ ದನಿಯ ಗಂಟಲಮುಖಿ; ನೋಟ ಕಣ್ ದಿಗಂತಕ್ಕೆ ಸಿಕ್ಕಿಕೊಳ್ಳುವುದು. ನಿಜಕ್ಕೂ ಇದು ಮೊಟ್ಟೆಯೊಡೆದು ಬರಲಾರದ, ಬೇಯದ, ಅರೆಬೆಂದ ಜೀವನವೇ.

ಈ ಕವನ ಸಂಕಲನದಲ್ಲಿರುವ ಒಂದು ಕವಿತೆ, ‘ವರಲೆ’, ಕವಿಯೊಬ್ಬನ ಆತ್ಮವಿಮರ್ಶೆಯೇ? ಬುಕ್ ವರ್ಮ್ ನಂತಾದವ, ವರಲೆ ಹಿಡಿದು ಗೆದ್ದಲಿನಂತಾದನೇ? ಪ್ಯಾರಾಸೈಟ್-ಗೆದ್ದಲು ಪರವಸ್ತುವನ್ನು ತಿಂದು ಜೀರ್ಣಿಸಿಕೊಂಡಂತೆಯೇನು ಇದು? ಒಬ್ಬ ಕವಿಯ ಕೈ ಇನ್ನೊಬ್ಬ ಕವಿಯ ಜೇಬಿನಲ್ಲಿ ಎನ್ನುವಂತೆ ಇವ ಕಳ್ಳನೇ? ಕನ್ನಡಕದವರೆಂದರೆ, ಮಸೂರ ಬಳಸಿ ವಿಶ್ಲೇಷಿಸುವ ವಿಮರ್ಶಕರೆ? ಈ ಪುಸ್ತಕಗಳ ನಡುವೆ ಬಂಧಿಯಾದ ವ್ಯಕ್ತಿಗೊಂದು ಬಿರುದು ಕೊಡಲಿರುವರೇ… ಕವಿ, ಹುಚ್ಚ, ಕಳ್ಳ…. ಎಂದು? ಲೈಬ್ರರಿಯಲ್ಲಿ ಪುಸ್ತಕ ನೋಡಿ ತನ್ನ ತಾ ಒಳಗಣ್ಣಲಿ ಕಾಣಲಾಗದವನಿಗೆ, ಲೋಕದ ಮಸೂರದವರು ಕೊಟ್ಟ ಕನ್ನಡಿಯೇ ಬೇಕೇ ವಲ್ಮೀಕವ ಆವಿರ್ಭವಿಸಿಕೊಳ್ಳಲು? “ಸುಮ್ಮನಿದ್ದೆ…” ಎಂಬ ನುಡಿ ಇಲ್ಲಿ ಬಹಳ ಶಕ್ತಿಶಾಲಿ ಧ್ವನಿ; ಕೀಲಿಯೇ ಬೇಡ.

‘ಎಲ್ಲಿಗೆ ಸವಾರಿ’ ಎಂಬ ಕವನವನ್ನು ಅಬ್ಸರ್ಡ್ ಎನ್ನೋಣವೇ? ವರ್ಗ ಪಲ್ಲಟವೇ?  ಇಲ್ಲಿ, ಒಂದಿಡೀ ಕಾಲಮಾನದವರೆವಿಗೂ ನಡೆದಾಡಿದ ಬರಿಗಾಲುಗಳು ಬಯಲು-ಆಲಯಗಳನ್ನು ಪರಕಿಸಿ, ಕೊನೆಗೆ ಪಾರದರ್ಶಕತೆಯಲ್ಲಿ ಬದುಕುತ್ತಿರುವ, ಅರ್ಥವಂತರನ್ನು ಕೂಡಿಟ್ಟಿರುವ ಹುಚ್ಚಾಸ್ಪತ್ರೆಗೆ ಬಂದು ನೆಲೆ ನಿಲ್ಲುತ್ತವೆ. ದೇಹದ ಕೆಳತುದಿ (ಕಾಲುಗಳು) ಹುಡುಕಿಕೊಂಡ ಜಾಗವೆಂದರೆ, ದೇಹದ ಮೇಲ್ತುದಿ (ತಲೆಯು) ಹಸಗೆಟ್ಟು ಕೂತ ಹುಚ್ಚರ ಚಾವಡಿ.

‘ ಕ್ವಾಲಿಫೈಡ್’ ಎಂಬುದೊಂದು ಕವಿತೆ, ತುಂಬಾ ಸರಳವಾಗಿ ವೃತ್ತ ಪೂರ್ಣಗೊಳಿಸುವಂತೆ ಇದೆ. ಕೊನೆಯ ಉರುಳು, ಅಂದರೆ ಅವ ಹುಟ್ಟುವ ಮುನ್ನವೇ ಕರುಳ ಬಳ್ಳಿಯ ಉರುಳು ತಪ್ಪಿಸಿಕೊಂಡು ಬಂದವ, ಈಗ ಗಲ್ಲಿಗೇರಲು ಕ್ವಾಲಿಫೈಡ್ ಆದವ.  ಆ ಹೆಣ್ಣು (ತಾಯಿ) ನೀಡದ ಶಿಕ್ಷೆ ಈ ಹೆಣ್ಣಿನಿಂದ (ನ್ಯಾಯದೇವತೆ) (ರೇಪ್ ವಿಕ್ಟಿಮ್) ಬಂತು ಎಂದು ಧ್ವನಿಸುತ್ತದೆ.

ಹಸಿದವನ ಎಲೆಯ ಅನ್ನ, ಸತ್ತವನಿಗಿಟ್ಟ ಎಲೆಯ ಪಿಂಡ, ಇವೆರಡರ ಭೌತಿಕ ರೂಪ ಒಂದೇ. ಕಾಗೆಯು ಆ ಪಿಂಡವನ್ನು ಮುಟ್ಟದೇ ಇವನ ಎಲೆಯ ಬುತ್ತಿಯನ್ನು ಕಚ್ಚಿದ್ದು ಏಕೆ? “ಹಸಿವಿಗ್ಯಾವ ಅರ್ಥ ಹುಡುಕಬೇಕೋ” ಎನ್ನುತ್ತದೆ ‘ಕಾಗೆ ಬಂಗಾರ’ ವೆನ್ನುವ ಕವನ. ಸುಲಭದಿ ಬಗೆಹರಿಯುವ ಈ ಹಸಿವಿನಾಟಕ್ಕೆ ವಿಧಿಯಾಟ, ಕಾಕ ಪುರಾಣ ಓದು, ಅಪಶಕುನ, ಬಂಗಾರದ ಕಾಗೆ ದಾನ…ಹೀಗೆಂದುಕೊಳ್ಳುವುದು ಅನವಶ್ಯಕ. ಪ್ರಾಣಕ್ಕೆ’ಅನ್ನ’ ಮತ್ತು ‘ಹಸಿವು’ ಇವೆರಡೇ ಮೂಲಧಾತು. ಉಳಿದದ್ದೆಲ್ಲಾ ಕಾಗೆ ಬಂಗಾರದಷ್ಟೇ ಕೃತ್ರಿಮ.

ನಾಟಕವಾಡುವವನೊಬ್ಬ ಮುಖವಾಡ ಕಳಚಿಡುವಷ್ಟು ಬಸವಳಿದಿದ್ದಾನೆ. ಇವನ ಜೀವನದ ಹಕೀಕತ್ತು ತಿಳಿಯಲು ಜನರಿಗೆ ಆಸಕ್ತಿಯಿಲ್ಲ. ‘ಪಾತ್ರದ ಪ್ರೀತಿ ಬಿಟ್ಟು ನಿಂತಾಗ’ ಎನ್ನುವ ಕವನ ನಿರ್ವಚಿಸುವಂತೆ: ನಿಜ ಜೀವನದಿ ‘ನಟನೆ’ ಮಾತ್ರ ಬೇಡವೆಂದವರು, ನಾಟಕವನ್ನೇ ಆಸ್ವಾದಿಸಲು ಬಂದು ಕುಳಿತಿದ್ದಾರೆ. ಅಂಕ ಪರದೆಯೀಚೆ ಮತ್ತು ಆಚಿನ ಮುಖಗಳ ತುಲನೆ ಈ ಕವನದಲ್ಲಿದೆ.

ಪ್ಯಾಸಿವಿಟಿಯಿಂದಲೇ ತುಂಬಿದ ಕವಿತೆ ‘ ಮೂಕವಾಚಾಳಿಯ ಒಳಗುಟ್ಟು’. ನೈತ್ಯಾತ್ಮಕತೆಯನ್ನು ‘ವಾಚಾಳಿ’ಸುತ್ತಲೇ ‘ಮೂಕ’ತನವನ್ನು ಒಂದು ರೀತಿ banality ಯಂತೆ ತೋರಿಸುತ್ತದೆ. ಹೀಗೆ ತೋರಿದಾಗ, ಓದುಗ ಹುಡುಕ ಹೊರಡುವ ಆಕ್ಟಿವಿಸಂ, ‘ಸೌಂಡ್’ನೆಸ್, ಧನಾತ್ಮಕ ಕಾರ್ಯಗಳ ಸಾಧ್ಯಾಸಾಧ್ಯತೆಗಳನ್ನು ಸ್ಫುರಿಸುತ್ತದೆ. ಒಂದು ರೀತಿಯ ಬೆಡಗಿನ ವಚನದಂತೆಯೋ ಶಿಶುನಾಳರ ಒಗಟಿನ ಹಾಡಿನಂತೆಯೋ, ತೋರುವ ಇದು ಪಕ್ಕಾ ಲೌಕಿಕವಾದ ‘ಸಂವಹನ-ರಾಜಕಾರಣ’ವನ್ನು, ಭಾಷಾತೀತವಾದ ‘ಕ್ರಿಯಾ-ವಿಹೀನತೆ’ಯ ಸಾಫಲ್ಯ-ವೈಫಲ್ಯಗಳ ಜಿಜ್ಞಾಸೆಯನ್ನಿಡುತ್ತದೆ. ಈ’ಮೂಕ’ತನವೇ ಭಾಷೆ, ಕುಲ, ಅಧಿಕಾರ, ವರ್ಗ, ಶ್ರೇಣಿಗಳ ನಡುವಿನ ‘ಸೌಂಡು’ಲೋಕದ, ಕೊಕ್ಕೊಕ್ಕೋ… ಕೂಗದ, ಬೌಬೌ… ಮಾಡದ ಶುನಕ-ಕುಕ್ಕುಟ ಮೂಕೀಜುಗಲ್ಬಂದಿ. ಪಾಪದ ಕಣ್ಣುಗಳ’ನೀಕ್ಷಿಸಿ ಅರಿಯಬೇಕಾದುದೊಂದೇ ಉಳಿದ ದಾರಿ.

‘ಯಾರಿಗೆ ಹುಟ್ಟಿದವನು’ಎಂಬ ಕವನ ಎತ್ತುವ ಪ್ರಶ್ನೆಗಳನ್ನು ಗಮನಿಸಿದರೆ, ಆಧುನಿಕ ನಗರ ಜೀವನ ಎತ್ತ ಸಾಗುತ್ತಿದೆಯೆಂಬುದರ ತಲ್ಲಣ ಮೂಡಿಸುತ್ತದೆ. “ತಿಪ್ಪೆಗೆಸೆದ ಮಕ್ಕಳ ಹುಡುಕಿ ತೆಗೆದು ಬಂಜೆ ಮನೆಗಳ ಬಾಗಿಲಲ್ಲಿಟ್ಟು ಬರುತ್ತಿದ್ದ ಕಥೆ”ಯಲ್ಲಿನ  ಒಂದು ಮಗುವೇ ಆಗಿರಬಹುದಾದವನೊಬ್ಬ ಸಿಟಿಯ ಸ್ಲಮ್ಮಿನಲ್ಲಿ ದೇವರ ಗುಡಿಯ ಹುಡುಕ ಹೊರಡುತ್ತಾನೆ. ಹುಡುಕಿ ಕೊನೆಗೆ ಮೂಲದೇವರ ಕಾಣದಾಗಿ, ತಿಪ್ಪೆಗುಂಡಿಯಲ್ಲಿ ಕಂಡ ಅನಾಥ ತಾಯಿಯೊಬ್ಬಳನ್ನು ಸಾಕ್ಷಾತ್ಕರಿಸಿಕೊಳ್ಳುವಷ್ಟರಲ್ಲಿ ಆಗುವ ಎನ್ಲೈಟೆನ್ಮೆಂಟ್ ಎಂದರೆ ತಾನು ‘ಯಾರಿಗೆ ಹುಟ್ಟಿದವನು?’ ಎಂಬುದು.

ಮಾತೃಕೆಗಳಂತೆ ಕಾಣಬರುವ ಲೋಕ, ಸಿಟಿ, ಮನೆ, ಗುಡಿ, ತಿಪ್ಪೆ, ಬಸಿರು, ಕೊನೆಗೆ ಆ ಹಸಿವು, ಊಟದ ತಟ್ಟೆ ಇವೆಲ್ಲವೂ ಪಡಿಮೂಡಿಸಿರುವ over’lap’ping ಆವರಣಗಳಲ್ಲಿ, ಯಃಕಶ್ಚಿತ್ ಮನುಷ್ಯ ಜೀವಿಯ ಈ ಅವತಾರದ ಹೆಸರೇನು” ಎನ್ನಿಸಿ ಅಸ್ತಿತ್ವದ ಡೆಫಿನಿಷನ್ ಹುಡುಕಹಚ್ಚಿಸುತ್ತದೆ ಈ ಕವನ.

‘ನಿನ್ನ ಯಾತ್ರೆ ಯಾವ ಪಾತ್ರದಲಿ…’ ಎನ್ನುವ ಕವನದಲ್ಲಿ, ಅನಾಮಿಕ ಹುಡುಗನ ಇಹ-ಪರ, ಪೂರ್ವ-ಪರಗಳನ್ನು ಕೂಡಿಸುವ ಕೊಂಡಿ ‘ನಂಬಿಕೆ’ಯನ್ನು ಪ್ರಶ್ನಿಸದೇನೆ ಪ್ರಶ್ನಿಸುತ್ತದೆ. ಜನಪದರ ರಿಚುವಲ್ ಅನ್ನು ಕಾರಣ ಸಿದ್ಧಾಂತದೊಂದಿಗೆ ಮುಖಾಮುಖಿಯಾಗಿಸುವ ತಂತ್ರ ಇಲ್ಲಿದೆ. ಸೂತಕದ ಹಣತೆಯಡಿಯ ಅಕ್ಕಿ ಹಿಟ್ಟಿನ ಮೇಲೆ ಮೂಡಿ ಬರಬಹುದಾದ ಗೆರೆಯ ಸಂಜ್ಞೆಗಳನ್ನು ಗಣಿತದ ಗೀಟುಗಳೊಂದಿಗೆ ಸಾದೃಶ್ಯ-ವೈದೃಶ್ಯಗೊಳಿಸಿಕೊಳ್ಳುವ ಒಡಪು ಸ್ವಲ್ಪ ನಿಗೂಢವೆನಿಸಿ, ಎಣಿಕೆಗೆ ಸಿಗದಾ ‘ಪುನರಪಿ ಜನನಂ ಪುನರಪಿ ಮರಣಂ’ ಅನ್ನು ಸೂಚಿಸುತ್ತದೆ.

ಒಟ್ಟಿನಲ್ಲಿ ಎಲ್ಲಾ ಕವಿತೆಗಳೂ, ಸಾಮುದಾಯಿಕವಾದ ಸಾಮಾನ್ಯ ಗ್ರಹಿಕೆಗಳ ಮಾದರಿಗಳನ್ನು ಡಿಕನ್ಸ್ಟ್ರಕ್ಟ್  (deconstruct) ಮಾಡಬೇಕೆನ್ನುವ ವಿಭಿನ್ನ ದೃಷ್ಟಿಕೋನವನ್ನು ಪಠಿಸುತ್ತಲೇ, ಈಗಾಗಲೇ ಅನೇಕ ಕವಿಗಳು ಪ್ರಯೋಗಿಸಿರುವ ನವ್ಯ ಮಾದರಿಯ ಜಾಡಿನಲ್ಲೇ ವಿಹರಿಸುತ್ತವೆ.

ಜತನದಿಂದ ಕಟ್ಟಿಸಿಕೊಂಡಿರುವ ಸಂಕಥನಗಳಾಗಿರುವ, ಈ ಕವನಗಳು, ಒಳಗೊಂದು ವಿಲಕ್ಷಣ ಮಿಶ್ರಣವನ್ನು ತಮ್ಮ ಸಂರಚನೆ ಹಾಗೂ ಸಂವಿಧಾನಕ್ಕೆ ಬಳಸಿಕೊಂಡಿವೆ. ಈ ವಿಲಕ್ಷಣತೆಯೇ ಇವುಗಳ ಟ್ರಂಪ್ ಕಾರ್ಡ್ ಗಳಾಗಬಾರದೆನ್ನಿಸುತ್ತದೆ. ಏಕೆಂದರೆ ವಿಲಕ್ಷಣತೆಯಿಂದಲೇ ತುಂಬಿರುವ ಈ ಸುತ್ತಲಿನ ಜಗದೊಳಗೆ ಮಿಡಿಯುತ್ತಿರುವ ಮನುಜರು ಅದಾವುದೋ ಹೊಸ ಮುಂಜಾವಕ್ಕೆ ಚಿಲಿಪಿಲಿಗುಟ್ಟುವ ಗಿಳಿಗೊರವಂಕಗಳು. ಎಂತಹುದೇ dystopia ಘಟಿಸಿದರೂ ಅದರೊಳಗಿಂದಲೇ ಪುಟಿದೇಳುವ ಮಾನವೀಯ ಮೌಲ್ಯಗಳು ಎಂದಿಗೂ ಹಸಿರು. ಕವಿ ಇಂದ್ರಕುಮಾರ್ ರವರು ಕಟ್ಟಿಕೊಟ್ಟಿರುವ ಇಂತಹುದೇ ಇನ್ನೊಂದು ಮಟ್ಟದ ಕ್ಷಣಕ್ಷಣದ ಪುಟ್ಟ ಪುಟ್ಟ ಜ್ಞಾನೋದಯಗಳ vista ಮುಂದೆಯೂ ಯಶಸ್ವಿಯಾಗಿ ಪಸರಿಸಲಿ ಸತತ.

‍ಲೇಖಕರು Avadhi

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anagha H L

    ತುಂಬಾ ಮುಟ್ಟುವ, ಕವಿತೆಗಳ ಓದಿದಂತೆಯೆ ಆದ ವಿಮರ್ಶೆ,ಚನ್ನಾಗಿದೆ.

    ಪ್ರತಿಕ್ರಿಯೆ
  2. ತೇಜಸ್ ಜಿ ಎಲ್ ನಗೋಲತೇ

    ಇಂದ್ರಕುಮಾರ್ ಅಂಕಲ್ ರ ಒಳಗೊಂದು ವಿಲಕ್ಷಣ ಲಕ್ಷಣ ಕವನ ಸಂಕಲನದ ಒಂದೊಂದು ಕವನವನ್ನು ಓದಿ ಅನುಭವಿಸುತ್ತಿದ್ದರೆ ಹೊಟ್ಟೆಯಲ್ಲಿ ಖಂಡಿತ ವಿಚಿತ್ರವಾದ ಕೆಮಿಕಲ್ ರಿಯಾಕ್ಷನ್ ಆಗುತ್ತೆ.
    ಪ್ರತಿ ಕವನ ಓದಿದಷ್ಟು ಒಳ ಅರ್ಥ ಕಾಣುತ್ತೆ. ಒಂದು ಸಾಲಿನಲ್ಲೆ ನೂರಾರು ಭಾವನೆಗಳು ಅಡಗಿಸಿದ್ದಾರೆ. ನಾನು ಕವನ ಸಂಕಲನವನ್ನು ಇನ್ನೂ ಅರ್ಧ ಮಾತ್ರ ಓದಿರೋದು.. ನನಗೆ ಕವನಗಳನ್ನ ಓದುವಾಗ ಅನುಭವಿಸಿದ್ದನ್ನು ಹೇಗೆ ವರ್ಣಿಸಬೇಕೋ ತಿಳಿಯದು. ಎಲ್ಲಾರೂ ಒಂದು ಬಾರಿ ಪುಸ್ತಕ ಹಿಡಿದು ಓದಿ ಅದೇ ಒಂದು ಜಗತ್ತು.

    ಪ್ರತಿಕ್ರಿಯೆ
  3. Tejas GL

    ಇಂದ್ರಕುಮಾರ್ ಅಂಕಲ್ ರ ಒಳಗೊಂದು ವಿಲಕ್ಷಣ ಲಕ್ಷಣ ಕವನ ಸಂಕಲನದ ಒಂದೊಂದು ಕವನವನ್ನು ಓದಿ ಅನುಭವಿಸುತ್ತಿದ್ದರೆ ಹೊಟ್ಟೆಯಲ್ಲಿ ಖಂಡಿತ ವಿಚಿತ್ರವಾದ ಕೆಮಿಕಲ್ ರಿಯಾಕ್ಷನ್ ಆಗುತ್ತೆ. ಅದನ್ನು ಅನುಭವಿಸಿಯೇ ಸವಿಯಬೇಕು. ಪ್ರತಿ ಪದ ಹೊರಗಿನಿಂದ ಒಂದನ್ನು ಹೇಳಿದರೆ ಒಳಗಿನಿಂದ ನೂರಾರು ಭಾವನೆಗಳನ್ನು ಹೊರಹಾಕುತ್ತದೆ ಓದಿ ಅನುಭವಿಸುವವರಿಗೆ. ನಾನಿನ್ನು ಪೂರ್ತಿ ಓದಲು ಸಾಧ್ಯವಾಗಿಲ್ಲ. ನಾ ಓದಿದ ಕವನವೇಲ್ಲವೂ ಒಂದೊಂದು ಲೋಕ ಒಬ್ಬಬ್ಬರ ಜೀವನ. ನಾನು ಮೊದಲನೇ ಬಾರಿ ಓದಿದ ತಕ್ಷಣ ಒಂದು ಅರ್ಥವಾದರೆ ಮತ್ತೊಂದು ಬಾರಿ ಓದಿದಾಗ ಇನ್ನೂಂದು expression ಕವನದಿಂದ ಹೊರ ಬರುತ್ತಿತ್ತು. ಅಂಕಲ್ರು ಬಳಸಿರೋ ಪ್ರತೀ ಪದವೂ ಬಲಿಷ್ಟವಾಗಿವೆ. ಓದಿದ ಅನುಭವ ಹೇಳಲು ನನಗೆ ಬರುವುದಿಲ್ಲಾ ನೀವೇ ಒಮ್ಮೆ ಓದಿ ಓದಿದಷ್ಟು ಆಳಕ್ಕೆ ಅರ್ಥಯಿಸಿಕೊಂಡಷ್ಟು ಕವಿಯ ಭಾವನೆಯ ಪ್ರಪಂಚಕ್ಕೆ ಎಳೆಯುತ್ತೆದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: