ನಾಯಿ ಎಂಬ ತಿರುಗಾಡಿಯ ಜೊತೆಗೆ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ʻಅಮ್ಮಾ, ಬ್ಲ್ಯಾಕಿ ಎಲ್ಲೋಯ್ತು? ಕಾಣ್ತಾ ಇಲ್ಲʼ

ಯಾವುದೇ ಪರ್ವತ ಏರಲು ಹೊರಡಲಿ, ಅಲ್ಲೊಂದು ಬ್ಲ್ಯಾಕಿ ಈತನ ಹಿಂದೆ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಶುರುವಿಂದ ಕೊನೆಯವರೆಗೂ ಇವನಿಗೇ ಅಂಟಿಕೊಂಡು ಇದ್ದುಬಿಡುತ್ತವೆ. ಅದೆಲ್ಲಿಯಾದರೂ ಕೊಂಚ ಮಿಸ್ಸಾದರೂ ಚಿಂತೆಯಾಗಿ ಬಿಡುವ ಈ ಹುಡುಗ, ನಾಯಿ ಸಿಕ್ಕರೆ, ಎಂಥ ಕಠಿಣ ದುರ್ಗಮ ಬೆಟ್ಟಗಳಾದರೂ ಯಾವುದೇ ಪ್ರಯಾಸವಿಲ್ಲದೆ ಏರತೊಡಗುತ್ತಾನೆ.

ಮುಂದಿನಿಂದ ಈತನ ಕೈಹಿಡಿದು ನಡೆಸಲು ಮಾತ್ರ ನಾಯಿಯೊಂದು ಸಿಗಬೇಕು, ಅಷ್ಟೇ. ಈವರೆಗೆ ಮಾಡಿದ ಪ್ರತೀ ಚಾರಣದಲ್ಲೂ ಕಡಿಮೆ ಅಂದರೂ ಒಂದ್ಹತ್ತು ಬ್ಯ್ಲಾಕಿಗಳು ಬಂದು ಹೋಗಿದ್ದಾರೆ. ಕೆಲವು ಒಂದಿನಿತೂ ಬೇರೆ ಬಣ್ಣಕ್ಕೆ ಒಂದಿನಿತೂ ಜಾಗ ಬಿಡದಂತೆ ಕಪ್ಪೇ ಎನ್ನುವ ಹೊಳೆಯುವ ಕಣ್ಣಿನ ಮುದ್ದು ಬ್ಲ್ಯಾಕಿಗಳಾದರೆ, ಇನ್ನೂ ಕೆಲವು ಅಲ್ಪ ಸ್ವಲ್ಪ ಕಂದು ಬಣ್ಣಕ್ಕೂ ಜಾಗ ಬಿಟ್ಟ ಕಪ್ಪು ಬಣ್ಣದ ಬ್ಲ್ಯಾಕಿಗಳು. ಒಟ್ಟಾರೆ ಎಲ್ಲವೂ ಬ್ಲ್ಯಾಕಿ!

ಆಗಾಗ ಈ ಬ್ಲ್ಯಾಕಿಗಳ ನೆನಪೂ ಆಗುವುದುಂಟು. ಮೊನ್ನೆ ಹಠಾತ್ತನೆ ನೆನಪು ಮಾಡಿಕೊಂಡು ಅವೆಲ್ಲ ಈಗ ಏನು ಮಾಡುತ್ತಿರಬಹುದು ಎಂದು ಯೋಚಿಸಿದ. ಸ್ವಲ್ಪ ಹೊತ್ತಿನಲ್ಲಿ ಯಥಾ ಪ್ರಕಾರ ನಾವು ನಾಯಿ ಸಾಕಬೇಕು ಎಂದು ಕಣ್ತುಂಬಿಕೊಂಡು ಅಪ್ಲಿಕೇಶನ್‌ ಹಾಕುವಲ್ಲಿಗೆ ವಿಷಯ ಮುಕ್ತಾಯವಾಯಿತು.

ತಿರುಗಾಟದ ಹುಚ್ಚು ಇರುವವರನ್ನೆಲ್ಲ ನಾವು, ನಾಯಿ ಜೊತೆ ಹೋಲಿಸುವುದು ರೂಢಿ. ʻಬಹುಶಃ ನಿನ್ನ ಕಾಲಲ್ಲಿ ನಾಯಿಗೆರೆ ಇರಬೇಕು, ಹಾಗೆ ತಿರುಗ್ತೀ ನೋಡುʼ ಅಂತಲೋ, ʻಒಂಚೂರೂ ಜವಾಬ್ದಾರಿನೇ ಇಲ್ಲ, ನಾಯಿ ತಿರ್ಗಿದಂಗೆ ತಿರುಗೋದು ಮಾತ್ರ ಗೊತ್ತುʼ ಅಂತಲೋ ಹೊ(ತೆ)ಗಳುವವರೇ ಹೆಚ್ಚು.  ನಾಯಿಯನ್ನು ಸ್ವಲ್ಪ ಗ್ರೇ ಶೇಡಿನಲ್ಲಿ ʻತಿರುಗಾಡಿʼ ಎಂದು ಜರಿಯುವವರು ನಾಯಿಯ ತಿರುಗಾಡಿತನವನ್ನೊಮ್ಮೆ ಅವಲೋಕಿಸಬೇಕು ಅಂತ ನನಗೆ ಬಹಳ ಸಾರಿ ಅನಿಸಿದೆ. ಅದು ಉದ್ದೇಶ ಇಲ್ಲದೆ ತಿರುಗುವುದು ಇರಬಹುದು, ಆದರೆ, ತಿರುಗಿದ್ದನ್ನೆಲ್ಲ ಅದ್ಭುತವಾಗಿ ಅನುಭವಿಸುವ ತಾಕತ್ತು ಮಾತ್ರ ನಾಯಿಯೆಂಬ ಪ್ರಾಣಿಗೆ ಮಾತ್ರ ಇರುವುದು ಎಂಬ ಬಲವಾದ ಅನುಮಾನ ನನಗೆ.

ಎಷ್ಟೋ ಸಾರಿ ನೋಡಿದ್ದೇನೆ. ಹಿಂದೆಯೇ ಬಂದ ನಾಯಿ ಒಂದು ಎತ್ತರವನ್ನು ಏರಿ, ಬಂಡೆಯೊಂದರ ಮೇಲೆ ನಿಂತೋ, ಕೂತೋ, ಸುತ್ತಲೂ ಬೀಸುವ ಗಾಳಿಗೆ ಮುಖವೊಡ್ಡಿ ಅನುಭವಿಸುದನ್ನು ನೋಡಬೇಕು. ಅದರ ಕಣ್ಣ ಮಿಂಚು, ಹತ್ತಿ ಬಂದ ಖುಷಿ, ಮೈಬಗ್ಗಿಸಿ ಸಾಮಾನು ಹೊತ್ತು ತಂದ ಕತ್ತೆ/ಕುದುರೆಯಲ್ಲೋ, ಕತ್ತಿನ ಗಂಟೆಯಲ್ಲಾಡಿಸಿಕೊಂಡು ಕತ್ತು ಬಗ್ಗಿಸಿ ಮಂದೆಯಲ್ಲಿ ಮೇಯುವ ಕುರಿ/ಆಡು/ಹಸುಗಳಲ್ಲೋ ಕಾಣಲಾಗದು. ಬಹಳ ಸಾರಿ ನದೀ ತೀರಗಳಲ್ಲಿ, ಸಮುದ್ರ ತೀರಗಳಲ್ಲಿ ನಾಯಿ ಎತ್ತಲೋ ದೃಷ್ಟಿ ಹೊತ್ತೋ, ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ವಾಕ್‌ ಮಾಡುತ್ತಲೋ, ಅಥವಾ ಸುಮ್ಮನೆ ಕೂತು ಅಲೆಯನ್ನು ದಿಟ್ಟಿಸುವುದನ್ನೋ ನೋಡುವುದು ಕಂಡಾಗಲೆಲ್ಲ ಹೀಗೆ ಅನ್ನಿಸಿದ್ದುಂಟು. ಈ ನಾಯಿ ಎಂಬ ಪ್ರೀತಿ ಸುರಿಸುವ ಜೀವವನ್ನು ನಾವು ಪೂರ್ತಿಯಾಗಿ ಗ್ರಹಿಸಿಲ್ಲ ಎಂದು.

ಇನ್ನು, ನಾಯಿಗಳ ಜೊತೆ ಚಾರಣ ಮಾಡುವ ಸುಖವೇ ಬೇರೆ. ಯಾವುದೋ ಗೊತ್ತು ಗುರುತಿಲ್ಲದ ಊರಿನ ಅದ್ಯಾವುದೋ ಪರ್ವತದಲ್ಲಿ ನಡೆದು ಸಾಗುವಾಗ ಜೊತೆಗಿರುವ ನಾಯಿ ಎಷ್ಟೋ ಭಯಗಳನ್ನು ಹತ್ತಿರ ಸುಳಿಯದಂತೆ ಮಾಡುತ್ತದೆ. ಏಕತಾನತೆ ಆಗದಂತೆ, ಜೊತೆಗೊಬ್ಬ ಗೆಳೆಯನಂತೆ ಇರುವ ನಾಯಿಯ ಸಾಹಚರ್ಯ ಕೊಡುವ ಧೈರ್ಯ ದೊಡ್ಡದು. ಸಾಗಬೇಕಾದ ಹಾದಿಯ ಸ್ಪಷ್ಟತೆಯ ಜೊತೆಗೆ, ದಾರಿ ತಪ್ಪದಂತೆ ಕಾಯುವ ಇವುಗಳು ನಿಜವಾದ ಗೆಳೆಯರು, ಆಪತ್ಬಾಂಧವರು. ಅದರಲ್ಲೂ ಮೈತುಂಬ ದಪ್ಪ ದಪ್ಪ ರೋಮಭರಿತವಾಗಿರುವ ಕುರಿಕಾಯ್ವ ನೇಪಾಳಿ ನಾಯಿಗಳು, ಟಿಬೆಟಿಯನ್‌ ಶೀಪ್‌ ಡಾಗ್‌, ಹಿಮಾಚಲಿ ಗಡ್ಡಿ ನಾಯಿಗಳು, ಭುಟಿಯಾ ಶೀಪ್‌ ಡಾಗ್‌ಗಳಂತಹ ಪರ್ವತ ಪ್ರದೇಶದ ನಾಯಿಗಳು ಎಷ್ಟೇ ಫ್ರೆಂಡ್ಲೀ ಇರುತ್ತವೋ ಅಷ್ಟೇ ತಮ್ಮ ಒಡೆಯನಿಗೆ ವಿಧೇಯ.

ಒಂದು ೧೦-೧೨ ಕಿಮೀ ಚಾರಣ. ನಾನು, ಮಗ, ಮಹೇಶ ಬಿಟ್ಟರೆ ಯಾರೂ ಇರಲಿಲ್ಲ. ಗೈಡ್‌ ಅವಶ್ಯಕತೆ ಬೀಳದ ಚಾರಣವದು. ಹೋಗುತ್ತಿದ್ದುದು ಹಿಮಾಚಲದ ಮೂಲೆಯ ಹಳ್ಳಿಯೊಂದಕ್ಕೆ. ಹೊರಡುವ ಸಂದರ್ಭ ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ನಾಯಿಯೊಂದು, ʻನಡೀರಿ ಹೋಗೋಣʼ ಎಂಬಂತೆ ನಮ್ಮ ಹಿಂದೆ ಹೊರಟಿತು. ಇದೊಂದು ಪರಿಪಾಠವಾದ್ದರಿಂದ ನಾವೂ ʻಅಬ್ಬ, ನಾಯಿಯೊಂದು ಸಿಕ್ಕಿತು, ದಾರಿ ತುಂಬಾ ಮಗ ಖುಷಿಯಾಗಿರಲು ಇನ್ನೇನು ಬೇಕುʼ ಎಂಬಂತೆ ನಿರಾಳರಾದೆವು. ಈ ನಾಯಿ ನಾವು ಉಳಿದುಕೊಳ್ಳಲಿದ್ದ ಮನೆಯವರೆಗೂ ಬಂದು, ನಮ್ಮ ಜೊತೆ ಎರಡು ದಿನ ಉಳಿದುಕೊಂಡು, ನಾವು ತಿಂದಿದ್ದರಲ್ಲೆಲ್ಲಾ ಪಾಲು ಪಡೆದು, ಖುಷಿಯಾಗಿ ಬಿದ್ದುಕೊಂಡಿದ್ದು ಆಮೇಲೆ ಹಠಾತ್ತನೆ ಎಲ್ಲೋ ಮರೆಯಾಯಿತು.

ಬೆಳಗ್ಗೆ ಸೂರ್ಯನ ಹೊಂಬೆಳಕು ಕಿಟಕಿ ಪ್ರವೇಶಿಸುವ ಮೊದಲೇ ಇದು ಬಾಗಿಲ ಬಳಿ ನಿಂತು ಬಾಗಿಲು ಬಡಿಯುವಷ್ಟು ನಮ್ಮ ಜೊತೆ ಫ್ರೆಂಡಾಗಿ, ಮಗನೂ ಇದರೊಡೆಯ ನಾನೇ ಎಂಬಂತೆ ಜೊತೆಗೇ ಇರಿಸಿಕೊಂಡು, ಇನ್ನೇನು ಹೊರಡುವ ಮುನ್ನಾ ದಿನ ಕಾಣೆಯಾಗಿತ್ತು. ಅರೆ, ಇಷ್ಟು ದಿನ ಜೊತೆಗೇ ಇದ್ದದ್ದು ಈಗೆಲ್ಲಿ ಹೋಯಿತು ಎಂದು ಕಳವಳವಾದರೂ, ನಾವು ಬ್ಯಾಗೇರಿಸಿಕೊಂಡು ಹೊರಡುವಾಗ ಅದೆಲ್ಲಿಂದಲೋ ಮತ್ತೆ ಪ್ರತ್ಯಕ್ಷವಾಗಿ ನಮ್ಮ ಜೊತೆಗೆ ಪಯಣ ಶುರು ಮಾಡಿತು. ಮತ್ತದೇ ಹಳೇ ದಾರಿ. ನಾಯಿ ನಮ್ಮ ಮುಂದೆ, ನಾವು ಹಿಂದೆ!

ಆದರೆ ಈ ಬಾರಿ ಬೇಗ ತಲುಪುವ ಉದ್ದೇಶದಿಂದ ವಾಹನ ಹೋಗಬಲ್ಲ ರಸ್ತೆಯಿಂದ ನಾವು ಕಾರು ಪಾರ್ಕು ಮಾಡಿದ್ದ ಜಾಗದವರೆಗೆ ಏಳು ಕಿಮೀ ಕ್ರಮಿಸಲು ಬಾಡಿಗೆ ಕಾರೊಂದನ್ನು ಬರಹೇಳಿದ್ದೆವು. ಕಾರು ಬಂದು ನಮಗಾಗಿ ನಿಂತಿತ್ತು. ಇನ್ನೇನು ಕಾರು ಹತ್ತಬೇಕು ಎನ್ನುವಷ್ಟರಲ್ಲಿ ಮಗನಿಗೆ ಸಂಕಟ ಶುರುವಾಯಿತು. ಹಿಂದಿಂದೆ ಬಂದ ನಾಯಿಯನ್ನು ಬಿಟ್ಟು ಹೊರಡುವುದು ಅನ್ಯಾಯವಲ್ಲವೇ ಎಂಬುದವನ ಧರ್ಮ ಸಂಕಟ. ಕೊನೆಗೂ ಸಾಧ್ಯತೆ ಅಸಾಧ್ಯತೆ, ವಾಸ್ತವ ಚಿತ್ರಣ ವಿವರಣೆ ಎಲ್ಲಾ ನಡೆದು, ನಮ್ಮ ಮಾತಿಗೆ ಸರಿ ಎಂದು ತಲೆ ಅಲ್ಲಾಡಿಸಿ, ಕಣ್ತುಂಬಿಕೊಂಡು, ಅಲ್ಲೊಂದು ಪುಟಾಣಿ ಬೀಳ್ಕೊಡುಗೆ ಸಮಾರಂಭವೇ ನಡೆಯಿತು.

ನಾಯಿಗೆ ಟಾಟಾ ಹೇಳಿ, ಮುದ್ದು ಮಾಡಲಾಗಿ, ನಾವು ಕಾರು ಹತ್ತಿ ಹಿಂತಿರುಗಿ ನೋಡಿದರೆ, ನಾಯಿ ಕಾರಿನ ಹಿಂದೆ! ಸ್ವಲ್ಪ ಹೊತ್ತು ಬಂದೀತು, ಆಮೇಲೆ ಬರಲಿಕ್ಕಿಲ್ಲ ಎಂಬ ಊಹೆಯೂ ಸುಳ್ಳಾಗುವ ಎಲ್ಲ ಲಕ್ಷಣ ಕಾಣತೊಡಗಿತು. ಕೊನೆಗೂ ನಾಯಿ ಬರೋಬ್ಬರಿ ಏಳು ಕಿಮೀ ಓಡಿಬಂದಿತ್ತೆಂದರೆ ನಂಬಲೇ ಬೇಕು. ಕಾರಿಳಿದು, ದುಡ್ಡುಕೊಟ್ಟು ನಮ್ಮ ಕಾರು ಪಾರ್ಕು ಮಾಡುವಲ್ಲಿಗೆ ನಡೆದು ಸಾಗುವಷ್ಟರಲ್ಲಿ ಈ ನಾಯಿ ಪ್ರತ್ಯಕ್ಷ.

ಇನ್ನೇನು ನಮ್ಮ ಕಾರು ಹತ್ತಬೇಕು ಅನ್ನುವಷ್ಟರಲ್ಲಿ, ಅಲ್ಲೇ ಬದಿಯಲ್ಲಿದ್ದ ಕಾಂಪೌಂಡಿನೊಳಗಿಂದ ಹೊರಬಂದ ಮನೆಯೊಡೆಯ ʻಓಹೋ, ಎಲ್ಲೋ ಹೋಗಿದ್ದೆ ನೀನು? ಎರಡ್ಮೂರು ದಿನದಿಂದ ಕಾಣೆ. ಹುಡುಕಿ ಹುಡುಕಿ ಸಾಕಾಯ್ತು. ಯಾರದೋ ಜೊತೆಗೆ ಬೆಟ್ಟ ಹತ್ತಿರ್ತಿ ಅಂತ ಅಂದ್ಕೊಂಡೆʼ ಅನ್ನುತ್ತಾ ತನ್ನ ನಾಯಿಯನ್ನು ಸ್ವಾಗತಿಸಿದ. ಈ ನಾಯಿ ಅವನ ಕಾಲು ನೆಕ್ಕುತ್ತಾ, ಬಾಲ ಕುಣಿಸಿ ಕಾಂಪೌಂಡಿನೊಳಗೆ ಮಾಯವಾಗಿತು ಎಂಬಲ್ಲಿಗೆ ಒಂದು ನಾಯಿ ಅಧ್ಯಾಯ ಮುಗಿದಿತ್ತು.

ಇದೆಲ್ಲ ನೆನಪಾಗಲು ಕಾರಣ ಇದೆ. ಮೊನ್ನೆ ಮೊನ್ನೆ ಏನೋ ಓದುತ್ತಿದ್ದಾಗ ಲಿಂಕಿನಿಂದ ಲಿಂಕಿಗೆ ನೆಗೆದು ನೆಗೆದು ತಲುಪಿದ್ದು ಸಮುದ್ರಮಟ್ಟದಿಂದ ೨೩ ಸಾವಿರ ಅಡಿ ಎತ್ತರದ ಹಿಮಾಲಯದ ತುತ್ತ ತುದಿ. ಅದೂ ಒಂದು ನಾಯಿ ಜೊತೆ! ಮೇರಾ ಎಂಬ ನಾಯಿಯೊಂದು ಚಾರಣಿಗರ ಜೊತೆಯಲ್ಲಿ, ಯಾವುದೇ ಹೆಚ್ಚಿನ ಊಟೋಪಚಾರ, ತರಬೇತಿ, ಸೌಕರ್ಯಗಳಿಲ್ಲದೆ ನೇಪಾಳದ ಹಿಮಾಲಯದ ಅತೀ ಎತ್ತರದ ದುರ್ಗಮ ಹಿಮಪರ್ವತವೊಂದನ್ನು ಏರಿತ್ತು. ಇಷ್ಟು ಎತ್ತರವನ್ನು ನಾಯಿಯೊಂದು ಹತ್ತಿದ್ದು ಇದೇ ಮೊದಲು ಇರಬೇಕೆಂದು ಅಂದಾಜಿಸಿ, ಇದೊಂದು ಸುದ್ದಿಯಾಗಿತ್ತು.

ಮೇರಾ ಎಂಬ ಶಿಖರವನ್ನು ದಾಟುವಾಗ ಈ ನಾಯಿ ಹಿಂದೆ ಬರುತ್ತಿರುದನ್ನು ಕಂಡ ಗೈಡ್‌ ಕೂಡಾ ಈ ಗಟ್ಟಿಗಿತ್ತಿ ಹೆಣ್ಣುನಾಯಿಗೆ ಆ ಶಿಖರದ ಹೆಸರನ್ನೇ ಇಟ್ಟು ತಮ್ಮ ಹಿಂದಿಂದೆ ಬಂದ ನಾಯಿಯನ್ನು  ಸಮ್ಮಿಟ್‌ವರೆಗೂ ಕರೆದೊಯ್ದರಂತೆ. ಇಂಥದ್ದೇ ಘಟನೆ ನಮಗೆ ಮೊನ್ನೆ ಮೊನ್ನೆ ಕೇದಾರಕಂಠ ಹತ್ತಿದಾಗಲೂ ನಡೆಯಿತು. ಸೊಂಟದವರೆಗೆ ಹುಗಿಯುತ್ತಿದ್ದ ಹಿಮದ ಕಷ್ಟದ ಹಾದಿಯಲ್ಲಿ ನಾವು ಜಾರುತ್ತಾ, ಏಳುತ್ತಾ ನಿಧಾನವಾಗಿ ಹತ್ತುತ್ತಿದ್ದರೆ, ನಮ್ಮ ಜೊತೆಗಿದ್ದ ನಾಯಿಗಳೆರಡು, ನಿರಾಯಾಸವಾಗಿ, ಮುಂದೆ ನಡೆದು, ನಾವು ಬರುವವರೆಗೆ ಕಾದು ಮತ್ತೆ ಹತ್ತುವುದನ್ನು ಮುಂದುವರಿಸುತ್ತಿದ್ದವು.

ಇನ್ನೊಮ್ಮೆ ಹೀಗಾಯಿತು. ಅದು ಒಂದು ದಿನದ ಪುಟಾಣಿ ಚಾರಣ. ಉತ್ತರಾಖಂಡದ ಸರಿ ಎಂಬ ಹಳ್ಳಿಯಿಂದ ದೇವರಿಯಾ ತಾಲ್‌ ಎಂಬ ಸರೋವರಕ್ಕೆ ಚಾರಣ. ಮೇಲೆ ಚೌಕಂಬಾ ಹಿಮಪರ್ವತ, ದೇವರಿಯಾ ತಾಲ್‌ ಜೊತೆಗೆ ಅದ್ಭುತವಾಗಿ ಕಾಣುತ್ತಿತ್ತು. ನಾವು ಮೇಲೆ ಹತ್ತಿ ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತದೇ ದಿನ ಸಂಜೆಯ ಹೊತ್ತಿಗೆ ಇಳಿಯತೊಡಗಿದ್ದೆವು. ಒಂದು ಅರುವತ್ತರ ಆಸುಪಾಸಿನಾತ, ನಮ್ಮನ್ನು ಕರೆದು, ʻನನ್ನ ನಾಯಿ ಬೆಳಗಿನಿಂದ ಕಾಣುತ್ತಿಲ್ಲ. ಇಲ್ಲೆಲ್ಲ ಹುಡುಕಿ ಹುಡುಕಿ ಸಾಕಾಯಿತು, ಎಲ್ಲೂ ಇಲ್ಲ. ಪೂರ್ತಿ ಕಪ್ಪಗಿನ ನಾಯಿ. ಹೆಚ್ಚು ದೊಡ್ಡದಿಲ್ಲ. ಇನ್ನೂ ಒಂದು ವರ್ಷವಷ್ಟೇ ಅದಕ್ಕೆ. ಎಲ್ಲಿ ಹೋಯಿತೋ ಅರ್ಥವಾಗುತ್ತಿಲ್ಲ. ನೀವೇನಾದರೂ, ಸರೋವರದ ಸುತ್ತಮುತ್ತ ನೋಡಿದಿರಾ?ʼ ಎಂದು ಪ್ರಶ್ನಿಸಿದರು.

ಓಹ್‌, ಇವರು ಹೇಳುತ್ತಿರುವುದು ನಮ್ಮ ಜೊತೆ ಬಂದ ನಾಯಿಯೇ ಇರಬೇಕು ಎಂದು ನಮಗನಿಸಿ, ಆಗ ಸರೋವರ ಸುತ್ತಮುತ್ತ ಇತ್ತು. ಆಮೇಲೆ ಎಲ್ಲಿ ಹೋಯ್ತು ಗೊತ್ತಿಲ್ಲ ಎಂದೆವು. ಅವರು ಒಂದು ದೊಡ್ಡ ಕೋಲು ಊರಿಕೊಂಡು, ʻಎಷ್ಟು ಕಷ್ಟ ಗೊತ್ತಾ ಅದನ್ನು ಹುಡುಕಿಕೊಂಡು ಈ ಬೆಟ್ಟ ಹತ್ತೋದು. ಇದೇ ಮೊದಲ ಬಾರಿ ಹೀಗೆ ಇದು ಕಾಣೆಯಾದ್ದು, ಹಾಗಾಗಿ ಅದಕ್ಕೆ ಬರಲು ಗೊತ್ತಾಗುತ್ತೋ ಇಲ್ವೋ. ಈ ಚಾರಣ ಮಾಡೋರ ಜೊತೆಗೆ ತಿಂಡಿ ಆಸೆಗೆ ಅವರ ಹಿಂದೆಯೇ ಬೆಟ್ಟ ಹತ್ತೋದು. ಆಮೇಲೆ ಅಲ್ಲೇ ಬಾಕಿಯಾದ್ರೆ ಏನ್‌ ಮಾಡೋದು ಹೇಳಿʼ ಎಂದು ಬೈಯುತ್ತಾ ಮೇಲೆ ಹತ್ತತೊಡಗಿದರು.

ನಾನು ನನ್ನ ಪುಟಾಣಿ ಮಗನ ಮುಖ ನೋಡಿದೆ. ಆತನಿಗಿನ್ನೂ ಆಗ ಐದು ವಯಸ್ಸು. ಎಲ್ಲಿಂದ ಅರ್ಥವಾಗಬೇಕು. ʻನೋಡು, ನೀ ಮಾಡಿದ ಕೆಲಸದಿಂದ ಅವರ ನಾಯಿ ಈಗ ಮಿಸ್ಸಾಗಿದೆ ಎಂದೆ. ನಾನೇನೂ ಮಾಡ್ಲಿಲ್ಲ ಅಮ್ಮಾ, ಅದಿಕ್ಕೆ ನಾ ಇಷ್ಟ ಆಗಿದ್ಕೇ ನನ್ನ ಹಿಂದೆ ಬಂದಿದ್ದು ಎಂದ. ʻಇರು, ಅವರನ್ನು ಕರೆದು, ನಿನ್ನ ಕರಕೊಂಡು ನಾಯಿ ಹುಡ್ಕೋದಕ್ಕೆ ಹೇಳ್ತೀನಿ ನೋಡು. ನೀನೇ ತಾನೇ, ಬೇಡ ಎಂದರೂ ನಾಯಿಯನ್ನು ಕರೆದು ಕರೆದು ಬಿಸ್ಕೆಟ್‌ ಹಾಕಿ ದಾರಿಯುದ್ದಕ್ಕೂ ಕರಕೊಂಡು ಬೆಟ್ಟ ಹತ್ಸಿದ್ದು ಎಂದರೆ, ಪುಸಕ್ಕೆಂದು ತಪ್ಪಿಸಿಕೊಂಡು ಓಡಿದ.

ಹಿಂತಿರುಗಿ ನೋಡಿದೆ. ಅವರು ನಾನದುಕೊಂಡಿದ್ದಕ್ಕಿಂತಲೂ ಮೇಲೇರಿದ್ದರು. ನಾನು ಇಳಿಯುತ್ತಾ ಇಳಿಯುತ್ತಾ, ಬಹುಶಃ ಅವರ ನಾಯಿ ಅವರಿಗೆ ಹಾದಿಯಲ್ಲೇ ಮರಳಿ ಸಿಕ್ಕಿರಬಹುದು ಎಂದುಕೊಂಡೆ.

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: