ಎ ಎನ್ ಮೂರ್ತಿರಾಯರಿಗೆ ಸಿಕ್ಕಿದ ಅತ್ಯುತ್ತಮ ಮನ್ನಣೆ

ಎ ಎನ್ ಮೂರ್ತಿರಾಯರ ಬಗ್ಗೆ ಇದೇ ಮೊದಲ ಬಾರಿಗೆ ಒಂದು ಮಹತ್ವದ ಕೃತಿ ಹೊರಬರುತ್ತಿದೆ. ಸಾಹಿತಿ ಚೇತನ ಸೋಮೇಶ್ವರ ಅವರು ‘ಎ ಎನ್ ಮೂರ್ತಿರಾಯರ ಸಾಂಸ್ಕೃತಿಕ ಚಿಂತನೆ’ ಬಗ್ಗೆ ನಡೆಸಿದ ಸಂಶೋಧನೆಯ ಕೃತಿ ಇದು.

ಬಹುರೂಪಿ ಇದನ್ನು ಪ್ರಕಟಿಸುತ್ತಿದೆ. ಕೊಳ್ಳಲು 70191 82729 ನ್ನು ಸಂಪರ್ಕಿಸಿ

ಎ ಎನ್ ಮೂರ್ತಿರಾಯರ ಹುಟ್ಟುಹಬ್ಬ ಮೊನ್ನೆ ತಾನೇ ಜರುಗಿತು. ಈ ಒಂದು ಸಂದರ್ಭಕ್ಕಾಗಿ ‘ಲೋಕ ರೂಢಿಯ ಮೀರಿ’ ಕೃತಿಗೆ ಜೋಗಿ ಬರೆದ ಮುನ್ನುಡಿ ಇಲ್ಲಿದೆ-

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.

ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ

ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.

ನಾನು ಮತ್ತು ನನ್ನ ವಯಸ್ಸಿನ ಹಲವರು ಗಂಭೀರವಾಗಿ ಓದುವುದಕ್ಕೆ ಶುರುಮಾಡುವ ಹೊತ್ತಿಗೆ, ನವ್ಯ ಮನೋಧರ್ಮ ವ್ಯಾಪಕವಾಗಿ ಹಬ್ಬಿತ್ತು. ನವ್ಯ ಸಾಹಿತ್ಯವಲ್ಲದೇ ಮತ್ತೇನನ್ನು ಓದುವುದು ಕೂಡ ಕೊಂಚ ಹಳೆಯ ಮನೋಭಾವ ಎಂದು ನಮಗೆ ನಾವೇ ಅಂದುಕೊಳ್ಳುವಷ್ಟರ ಮಟ್ಟಿಗೆ ನವ್ಯದ ಲೇಖಕರು ದಾಂಧಲೆ ನಡೆಸಿದ್ದರು. ಈ ಗದ್ದಲದ ನಡುವೆ ಅನೇಕ ಮಹತ್ವದ ಲೇಖಕರು ನಮಗೆ ಔಟ್ ಆಫ್ ಫ್ಯಾಷನ್ ಆಗಿ ಕಾಣತೊಡಗಿದರು. ಅವರ ಅತ್ಯುತ್ತಮ ಪುಸ್ತಕಗಳನ್ನು ಕೂಡ ನಾವು ಕಡೆಗಣ್ಣಿನಿಂದ ನೋಡಿ ಸುಮ್ಮನಾಗುತ್ತಿದ್ದೆವು.

ಹಾಗೆ ನನ್ನನ್ನು ನಾನು ರೂಪಿಸಿಕೊಳ್ಳುತ್ತಿದ್ದ ದಿನಗಳಲ್ಲಿ ಓದದೇ ಇದ್ದ ಲೇಖಕರ ಪಟ್ಟಿಯಲ್ಲಿ ಎ ಎನ್ ಮೂರ್ತಿರಾಯರು ಕೂಡ ಇದ್ದಾರೆ. ಅಷ್ಟರಲ್ಲಾಗಲೇ ಅವರು ‘ದೇವರು’ ಎಂಬ ಕ್ರಾಂತಿಕಾರಿ ಕೃತಿಯನ್ನು ಬರೆದಿದ್ದರೂ ಕೂಡ, ನಮ್ಮನ್ನು ಹಿಡಿದಿಟ್ಟದ್ದು ಫ್ರೆಡೆರಿಕ್ ನೀಷೆ ಬರೆದ ‘ದಸ್ ಸ್ಪೋಕ್ ಝರತುಸ್ತ್ರ’ ಮುಂತಾದ ಪುಸ್ತಕಗಳು. ಇವುಗಳ ಗುಂಗಿನಲ್ಲಿದ್ದ ನಾನು ಎ ಎ ಮೂರ್ತಿರಾಯರ ದೇವರು ಕೃತಿಯನ್ನು ಓದಿದ ನಂತರ ಅದು ಹೈಸ್ಕೂಲು ಮಟ್ಟದ ಪ್ರಬಂಧದ ಧಾಟಿಯಲ್ಲಿದೆ ಎಂದು ಅದರ ಮೇಲೊಂದು ಷರಾ ಕೂಡ ಬರೆದುಬಿಟ್ಟಿದ್ದೆ.

ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದದ್ದರಿಂದ ನಮ್ಮ ಪಾಲಿಗೆ ದೇವರಿದ್ದಾನೋ ಇಲ್ಲವೋ ಎಂಬ ವಾದ ಹೊಸದೇನೂ ಆಗಿರಲಿಲ್ಲ. ನಾವು ನಿತ್ಯವೂ ಕೇಳುತ್ತಿದ್ದ ಅಜಾಮಿಳನ ಕತೆಗಳಲ್ಲಿ, ಕೃಷ್ಣ-ಕಂಸರ ವಾಗ್ವಾದದಲ್ಲಿ, ಯಕ್ಷಗಾನ ತಾಳಮದ್ದಲೆಯ ವಾದ-ಪ್ರತಿವಾದದಲ್ಲಿ ಆಸ್ತಿಕತೆ-ನಾಸ್ತಿಕತೆ ಅದ್ಭುತವಾಗಿ ಪ್ರಕಟವಾಗುತ್ತಿತ್ತು. ಅದರ ಮುಂದೆ ಮೂರ್ತಿರಾಯರ ದೇವರು ತೆಳುವಾಗಿ ಕಾಣಿಸುತ್ತಿತ್ತು.

ಬಹುಶಃ ಅದೇ ಕಾರಣಕ್ಕೆ ನಾನು ಅವರ ಪ್ರಬಂಧಗಳನ್ನೂ ಓದುವುದಕ್ಕೆ ಹೋಗಿರಲಿಲ್ಲ. ಅವರು ಅನುವಾದಿಸಿದ ಷೇಕ್ಸ್-ಪಿಯರನ ನಾಟಕಗಳು ಕೂಡ ಕೊಂಚ ನನ್ನಲ್ಲಿ ಅಂಥ ಆಸಕ್ತಿ ಹುಟ್ಟಿಸಿರಲಿಲ್ಲ. ಯಾಕೆಂದರೆ ರಾಮಚಂದ್ರ ದೇವ ಅನುವಾದದಲ್ಲಿದ್ದ ಬಿರುಸು, ಮೂರ್ತಿರಾಯರ ಪ್ರಬಂಧಗಳಲ್ಲಿ ಕಾಣಿಸಲೇ ಇಲ್ಲ. ನಾನು ಮೂರ್ತಿರಾಯರ ಜಗತ್ತಿಗೆ ಕಾಲಿಟ್ಟದ್ದು ಬೆಂಗಳೂರಿಗೆ ಬಂದು ನಾಲ್ಕೈದು ವರ್ಷಗಳ ನಂತರ. ಅವರನ್ನು ಓದುವಂತೆ ನನ್ನನ್ನು ಪ್ರೇರೇಪಿಸಿದವರು ಗಿರೀಶ ಕಾರ್ನಾಡರು. ಅವರನ್ನು ಸಂದರ್ಶನ ಮಾಡಲು ಹೋದಾಗ ಗಿರೀಶ ಕಾರ್ನಾಡರು, ಮೂರ್ತಿರಾಯರ ಭಾಷೆಯನ್ನು ಇನ್ನಿಲ್ಲದಂತೆ ಕೊಂಡಾಡಿದರು. ಅವರ ಪ್ರಬಂಧಗಳ ನವಿರಾದ ಶೈಲಿ, ನಿತ್ಯಯೌವನ, ಹೇಳಬೇಕಾದ್ದನ್ನು ಕೆಲವೇ ಪದಗಳಲ್ಲಿ ಹೇಳುವ ಕೌಶಲ, ಒಂದೇ ಒಂದು ಸಲ ಕೂಡ ಸಹನೆ ಕಳೆದುಕೊಳ್ಳದ ಅವರ ಗುಣ, ದೇವರ ಕುರಿತು ಬರೆಯುವಾಗ ಕೂಡ ವಾದೋನ್ಮತ್ತರಾಗದ ಸಹನಶೀಲತೆಯನ್ನು ಮೆಚ್ಚಿಕೊಂಡಿದ್ದರು.

ಅದಾದ ನಂತರ ನಾನು ಮೂರ್ತಿರಾಯರ ಪುಸ್ತಕಗಳನ್ನು ಕೈಗೆತ್ತಿಕೊಂಡೆ. ಅವರ ‘ಹಗಲುಗನಸುಗಳು’ ಸಂಕಲನದಿಂದ ಶುರುವಾದ ಓದು, ಅವರ ಪ್ರಬಂಧಗಳನ್ನು ದಾಟಿ, ‘ಸಂಜೆಗಣ್ಣಿನ ಹಿನ್ನೋಟ’ದ ತನಕ ಬಂದು ನಿಂತಿತು. ಈ ಮಧ್ಯೆ ಅವರನ್ನು ಸಂದರ್ಶಿಸಲೇಬೇಕು ಎಂಬ ಆಸೆಯೂ ಹುಟ್ಟಿ, ಒಂದು ಭೇಟಿಯೂ ಏರ್ಪಾಡಾಯಿತು. ಅವರ ಜತೆಗಿನ ಸಂದರ್ಶನಕ್ಕೆ ನಾನು ‘ಲಲಿತವನದ ಹವಳಗೆಂಪಿನ ಸಂಜೆ’ ಎಂದು ಹೆಸರು ಕೊಟ್ಟಿದ್ದೆ ಎಂದು ಅಸ್ಪಷ್ಟ ನೆನಪು.

ಚೇತನ್ ಸೋಮೇಶ್ವರ್ ಬರೆದ ಮೂರ್ತಿರಾಯರ ಕುರಿತ ‘ಲೋಕ ರೂಢಿಯ ದಾಟಿ’ ಪುಸ್ತಕ ಗಿರೀಶ್ ಕಾರ್ನಾಡರು ಹೇಳಿದ ಮಾತುಗಳನ್ನು ನೆನಪಿಸಿತು. ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾಯರ ಬರಹಗಳ ಸೊಗಸೇ ಬೇರೆ. ಅವರು ಏಕಕಾಲಕ್ಕೆ ಭಾಷೆಯ ಕುರಿತ ಪ್ರೀತಿಯನ್ನು ಹೆಚ್ಚಿಸುತ್ತಲೇ ಜೀವನ ಪ್ರೀತಿಯನ್ನೂ ಉಕ್ಕಿಸುವ ಪ್ರಬಂಧಗಳು. ತಮ್ಮ ವಿರೋಧವನ್ನು ದಾಖಲಿಸುವಾಗಲೂ ಯಾರನ್ನೂ ಧಿಕ್ಕರಿಸದ, ಬದುಕಿನ ಸಂಭ್ರಮದ ಕುರಿತು ಮಾತಾಡುವಾಗಲೂ ಅವುಗಳಿಂದ ವಂಚಿತರಾದವರ ಮೇಲಿನ ಸಹಾನುಭೂತಿ, ಪಾಪಪ್ರಜ್ಞೆ ಆಗದಂತೆ ಎಚ್ಚರವಹಿಸುವ, ಕಾಲದಿಂದ ಕಾಲಕ್ಕೆ ಆಗುವ ಬದಲಾವಣೆಯನ್ನು ಅತ್ಯಂತ ಸಹಜವೆಂಬಂತೆ ಸ್ವೀಕರಿಸುವ, ಕಠೋರ ಶಿಸ್ತು ಮತ್ತು ನಿಷ್ಕಾರಣ ಸ್ವೇಚ್ಛೆಯ ನಡುವೆ ತನ್ನ ಸ್ಥಾನ ಯಾವುದು ಎಂಬುದನ್ನು ಬಲ್ಲವರಂತೆ ಬರೆಯುವ ಮೂರ್ತಿರಾಯರು ತಮ್ಮ ಆತ್ಮಕಥೆಗೆ ಕೊಟ್ಟಿರುವ ಶೀರ್ಷಿಕೆ ಕೂಡ ಅವರ ಗ್ರಹಿಕೆಯನ್ನು ತೋರುತ್ತದೆ; ಸಂಜೆಗಣ್ಣಿನ ಹಿನ್ನೋಟ.

ಮೂರ್ತಿರಾಯರನ್ನು ಓದಿದ ನಂತರ ಯಾರನ್ನೇ ಆದರೂ ನಿರಾವಲಂಬ ವಿನಯವೊಂದು ಆವರಿಸದೇ ಇರಲಾರದು. ಘನತೆ ಮತ್ತು ಗರ್ವದ ಪರಿಪೂರ್ಣ ಸಮಾಗಮದಂತೆ ಕಾಣಿಸುತ್ತಿದ್ದ ಮೂರ್ತಿರಾಯರು ಉಡಾಫೆ ಮತ್ತು ಅಹಂಕಾರದ ಸಮೀಪವೂ ಸುಳಿಯಲಿಲ್ಲ. ಹೀಗಾಗಿ ಅವರು ಬರೆದ ದೇವರು ಕೃತಿಯೇ ದೇವರಂತೆ ಭಾಸವಾಗುತ್ತದೆ.

ಪೂರ್ವಸೂರಿಗಳ ಕುರಿತು ಬರೆಯುವುದು ಕಷ್ಟ ಮತ್ತು ಅನಗತ್ಯ ಎಂದು ನಂಬಿರುವ ಕಾಲದಲ್ಲಿ ಚೇತನ್ ಸೋಮೇಶ್ವರ, ಮೂರ್ತಿರಾಯರನ್ನು ಹಗಲುಗನಸಿನಂತೆ ನೆನಪಿಸಿಕೊಂಡಿದ್ದಾರೆ. ಪ್ರೀತಿಯಿಂದ ಓದುತ್ತಾ ಹೋದರೆ ಮೂರ್ತಿರಾಯರು ನಮ್ಮ ಕಣ್ಣಿಗೆ ಕೆ ಎಸ್ ನರಸಿಂಹಸ್ವಾಮಿಯವರ ಕಾವ್ಯದಿಂದ ಹುಟ್ಟಿಬಂದ ಸುಸಂಸ್ಕೃತ ಸಜ್ಜನನಂತೆ ಕಾಣಿಸುತ್ತಾರೆ. ಹೊಯ್ಸಳ ಕರ್ನಾಟಕ ಬ್ರಾಹ್ಮಣರ ಲಂಡನ್ ಎಂದೇ ಕರೆಯಬಹುದಾದ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳದಲ್ಲಿ ಹುಟ್ಟಿದ ಎ ಎನ್ ಮೂರ್ತಿರಾಯರ ಕುರಿತು ಬರೆಯಲು ಚೇತನ್ ಸೋಮೇಶ್ವರ ಬಳಸಿಕೊಂಡಿರುವ ಆಕರ ಮತ್ತು ಪರಿಕರಗಳು ಕೂಡ ಮೂರ್ತಿರಾಯರೇ ಸೃಜಿಸಿರುವಂಥವು. ಹೀಗಾಗಿ ಅವರದೇ ಆದ ಪದಗಳಿಂದ ಅವರನ್ನು ಕಟ್ಟಿಕೊಡುವ ಕೆಲಸ ಈ ಕೃತಿಯಲ್ಲಿ ಆಗಿದೆ ಎಂದು ಹೇಳಬಹುದು.

ಇಡೀ ಪುಸ್ತಕ ಮೂರ್ತಿರಾಯರನ್ನು ಬಗೆಬಗೆಯಾಗಿ ನೋಡಲು ಹವಣಿಸುತ್ತದೆ. ಒಬ್ಬ ಲೇಖಕನನ್ನು ಇಷ್ಟು ಆಯಾಮಗಳಿಂದ ನೋಡುವುದಕ್ಕೆ ಬೇಕಾದ ಮೂಲಸಾಮಗ್ರಿಗಳನ್ನು ಚೇತನ್ ಅತಿ ಜತನದಿಂದ ಸಂಗ್ರಹಿಸಿದ್ದಾರೆ ಅನ್ನುವುದೂ ಕೂಡ ಈ ಪುಸ್ತಕ ಓದುವಾಗ ಗೊತ್ತಾಗುತ್ತದೆ. ಅಕ್ಕರೆ, ಅಧ್ಯಯನ, ಶ್ರದ್ಧೆ ಮತ್ತು ಪ್ರತಿಭೆಯಿಂದ ಸಿದ್ಧವಾದಂತಿರುವ ಈ ಮೂರ್ತಿರಾವ್ ರಸಪಾಕದಲ್ಲಿ ನಮಗೆ ಎ ಎನ್ ಮೂರ್ತಿರಾಯರು ಅವರ ಸಕಲ ಸಿದ್ಧಿಸ್ವರೂಪಗಳಲ್ಲಿ ಕಾಣಸಿಗುತ್ತಾರೆ.

ಮೂರ್ತಿರಾಯರ ಕುರಿತು ಅವರು ಹೇಳುವ ಮಾತು ಇದು: ಆವೇಶ, ಆಕ್ರೋಶ, ವ್ಯಗ್ರತೆ, ಸಿನಿಕತೆಗಳು ಅವರ ಬರಹದಲ್ಲಿ ಕಾಣಿಸಿಕೊಳ್ಳದಿರಬೇಕಾದರೆ ಅವರ ಋಜು ಬಾಳೇ ಕಾರಣ. ಅವರ ಬರಹಗಳಲ್ಲಿ ಮಾತ್ರವಲ್ಲ, ಅವರ ಬದುಕಿನಲ್ಲೂ ಇಂಥ ಅಪಸವ್ಯಗಳಿರಲಿಲ್ಲ ಅನ್ನುವುದನ್ನು ಅವರ ಆತ್ಮಕತೆಯೇ ಹೇಳುತ್ತದೆ.

ಚೇತನ್ ಸೋಮೇಶ್ವರರು ಮೂರ್ತಿರಾಯರ ಬರಹವನ್ನು ಅದರ ಎಲ್ಲ ಮಗ್ಗುಲುಗಳಿಂದಲೂ ನೋಡಿದ್ದಾರೆ. ಬರಹದ ಜೊತೆ ಬದುಕು ಕೂಡ ತಳಕುಹಾಕಿಕೊಂಡಿರುವುದನ್ನೂ ನಾವು ಕಾಣಬಹುದು. ನೈತಿಕ ಮೌಲ್ಯಕೇಂದ್ರಿತ ಚಿಂತನೆಯಿಂದ ಪ್ರಭಾವಿತವಾದ ಅವರ ಬದುಕು ತತ್ಕಾಲ ಮತ್ತು ಸಾರ್ವಕಾಲಿಕತೆ ಎರಡನ್ನೂ ಸಮನ್ವಯಗೊಳಿಸಿರುವ ಪರಿಯನ್ನೂ ಚೇತನ್ ತೆರೆದಿಟ್ಟಿದ್ದಾರೆ.

ಒಬ್ಬ ವ್ಯಕ್ತಿಯ ಬರಹವನ್ನು ಬಗೆಯುವ ಇಂಥ ಕೃತಿಗಳು ಎಷ್ಟೋ ಸಂದರ್ಭದಲ್ಲಿ, ಆ ವ್ಯಕ್ತಿಯ ಸಾಹಿತ್ಯ ಕೃತಿಯನ್ನು ಓದದೇ ಇರುವವರ ಗಮನ ಸೆಳೆಯುವ ಸಾಧ್ಯತೆ ಕಡಿಮೆ. ಆದರೆ ಈ ಕೃತಿ, ಮೂರ್ತಿರಾಯರ ಬರಹಗಳನ್ನು ಓದದೇ ಇರುವವರನ್ನೂ ಸೆಳೆಯುತ್ತದೆ. ಅದಕ್ಕೆ ಕಾರಣ, ಮೂರ್ತಿರಾಯರನ್ನು ಬರಹಗಳ ಜೊತೆಗೇ ಕರೆದುಕೊಂಡು ಹೋಗುತ್ತಲೇ, ಸಮಾಜದ ನಡುವೆಯೂ ತಂದು ನಿಲ್ಲಿಸುವ ಲೇಖಕರ ನಿರೂಪಣಾ ಶೈಲಿ. ಮೂರ್ತಿರಾಯರು ಹೇಳುವ ‘ಐ ಯಾಮ್ ನಾಟ್ ರಿಲೀಜಿಯಸ್ ಬೈ ಟೆಂಪರಮೆಂಟ್’ ಎಂಬ ಸಾಲನ್ನು ಅವರ ಕುರಿತು ಬಂದ ಕೃತಿಗಳ ಹಿನ್ನೆಲೆಯಲ್ಲಿ, ಅವರ ಬದುಕಿನ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾ, ಮೂರ್ತಿರಾಯರನ್ನು ಅವರ ಚಿಂತನೆಗಳ ಮೂಲಕವೇ ಅರ್ಥಮಾಡಿಕೊಳ್ಳುವಂತೆ ಮಾಡುತ್ತಾರೆ.

ಚೇತನ್ ಸೋಮೇಶ್ವರರ ಈ ಕೃತಿ, ಮೂರ್ತಿರಾಯರ ಬರಹಗಳ ವಿಶ್ಲೇಷಣೆಯೂ ಹೌದು, ಅವರ ಬದುಕಿನ ಚಿತ್ರವೂ ಹೌದು. ಬದುಕು-ಬರಹಗಳ ಸಮೇತ ಒಬ್ಬ ವ್ಯಕ್ತಿಯನ್ನು ನಮ್ಮ ಮುಂದೆ ಕಟೆದು ನಿಲ್ಲಿಸುವ ಇಂಥ ಬರಹಗಳ ಗುಚ್ಛ ಲೇಖಕನೊಬ್ಬನನ್ನು ಅವನ ಕಾಲದಿಂದ ಇದ್ದಕ್ಕಿದ್ದಂತೆ ನಮ್ಮ ಕಾಲಕ್ಕೆ ತಂದು ನಿಲ್ಲಿಸುತ್ತದೆ. ಹೀಗೆ ಮೂರ್ತಿರಾಯರನ್ನು ನಮ್ಮ ನಡುವೆ ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಿ ಅವರನ್ನು ಸರಿಯಾದ ಕ್ರಮದಲ್ಲಿ ಓದುವುದಕ್ಕೆ ಅನುವು ಮಾಡಿಕೊಟ್ಟಿರುವ ಕೃತಿಯೊಂದನ್ನು ರಚನೆ ಮಾಡಿರುವ ಚೇತನ್ ಸೋಮೇಶ್ವರ ಅವರು ಅಭಿನಂದನಾರ್ಹರು.

ಎ ಎನ್ ಮೂರ್ತಿರಾಯರಿಗೆ ಸಿಕ್ಕಿದ ಅತ್ಯುತ್ತಮ ಮನ್ನಣೆ ಈ ಪುಸ್ತಕ ಎಂದು ಧಾರಾಳವಾಗಿ ಹೇಳಬಹುದು.

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: