ಹಾವೇರಿ ಗೋಲಿಬಾರ್‌ಗೆ 14 ವರುಷ, ರೈತರಿಗಿಲ್ಲ ಹರುಷ…

ಮಾಲತೇಶ ಅಂಗೂರ

ಹಾವೇರಿ ಜಿಲ್ಲೆ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಗೋಲಿಬಾರ್ ನಡೆದು ೧೪ ವರ್ಷಗಳು ಗತಿಸುತ್ತವೆ. ಸದ್ಯ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಯಡೆಯೂರಪ್ಪನವರ ನೇತೃತ್ವದ ಇದೇ ಬಿಜೆಪಿ ಸರ್ಕಾರ ಜೂ.೧೦-೨೦೦೮ರ ಸಂದರ್ಭದಲ್ಲಿ ಅಧಿಕಾರದಲ್ಲಿತ್ತು.

೨೦೦೮ರ ಜೂನ್ ೧೦ರಂದು ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ಹಾವೇರಿಯಲ್ಲಿ ನಡೆದ ರೈತರ ಹೋರಾಟ ವಿಕೋಪಕ್ಕೆ ತಿರುಗಿ ಗೋಲಿಬಾರ್ ನಡೆದಿತ್ತು. ಇದರಲ್ಲಿ ರೈತರಿಬ್ಬರು ಮೃತಪಟ್ಟರೇ, ೧೧ಜನ ತೀವ್ರ ಗಾಯಗೊಂಡಿದ್ದರು. ಮೃತಪಟ್ಟ ರೈತರ ಕುಟುಂಬಗಳಿಗೆ ಅಂದಿನ ಬಿಜೆಪಿ ಸರಕಾರ ಸರಕಾರಿ ನೌಕರಿ, ಪರಿಹಾರ ನೀಡಿತ್ತು. ಗಾಯಾಳುಗಳಿಗೂ ಅಲ್ಪ-ಸ್ವಲ್ಪ ಪರಿಹಾರವನ್ನು ನೀಡಿ ಕೈತೊಳೆದುಕೊಂಡಿತ್ತು.

ಸರಕಾರ ನೀಡಿದ ಪರಿಹಾರದ ಮೊತ್ತ ತಮ್ಮ ಚಿಕಿತ್ಸೆಗೂ ಸಾಲುತ್ತಿಲ್ಲ ಎನ್ನುವ ಕೂಗು ಗಾಯಾಳುಗಳದ್ದಾಗಿತ್ತು. ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ನೀಡುವ ಪರಿಹಾರದಲ್ಲಿ ಸರಕಾರ ತಾರತಮ್ಯವಂತೂ ಅನುಸರಿಸಿದ್ದು ಸುಳ್ಳಲ್ಲ!. ಸರಕಾರ ಕೊಟ್ಟಂತಹ ಪರಿಹಾರ ಗಾಯಾಳುಗಳ ಚಿಕಿತ್ಸೆಗೂ ಸಾಕಾಗಲಿಲ್ಲ.

ಆಳುವ ಸರಕಾರ ಬದಲಾಗಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದೇ ಸರ್ಕಾರ ಅಂದು ಗೋಲಿಬಾರ್ ತನಿಖೆಗೆ ನೇಮಿಸಿದ ಗೋಲಿಬಾರ್‌ನ ತನಿಖಾ ವರದಿ ಮಾತ್ರ ಬಿಜೆಪಿ ಸರ್ಕಾರ ಮತ್ತೆ ಅಧಿಕಾರದಲ್ಲಿದ್ದರೂ ಸಹ ಬಹಿರಂಗವಾಗಿಲ್ಲ. ಗೋಲಿಬಾರ್ ಘಟನೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿದ್ದ ಸಿದ್ದರಾಮಯ್ಯನವರು ನೇತೃತ್ವದ ಕಾಂಗ್ರೆಸ್ ಸರಕಾರ ಐದು ವರ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅದರೆ ಕಾಂಗ್ರೆಸ್ ಸರ್ಕಾರ ಮಾತ್ರ ಗೋಲಿಬಾರ್ ವರದಿ ಬಹಿರಂಗಕ್ಕೆ ಮುಂದಾಗಲಿಲ್ಲ.

ಗೋಲಿಬಾರ್ ತನಿಖಾ ವರದಿಯಲ್ಲಿ ಬಹಿರಂಗಪಡಿಸಲಾರದಂತ ಅಂಶಗಳು ಯಾವವು?. ಅಂತಾದ್ದೇನೈತಿ ಗೋಲಿಬಾರ್ ತನಿಖಾ ವರದಿಯಲ್ಲಿ ಎನ್ನುವ ಪ್ರಶ್ನೆ ಸುಮಾರು ವರ್ಷಗಳವರೆಗೆ ಜನರ ಮನದಲ್ಲಿತ್ತು. ೧೪ ವರ್ಷ ಕಳೆದಿರುವುದರಿಂದ ಜನರು ಸಹ ಗೋಲಿಬಾರ್ ಜನರ ಸ್ಮೃತಿ ಪಟಲದಿಂದ ಮರೆಯಾಗಿರಬಹುದೇನೋ?. ಬಿಜೆಪಿ-ಕಾಂಗ್ರೆಸ್‌ ಇರುವುದು ಸಹ ರಾಜಕೀಯ ಪಕ್ಷಗಳ ಹಣೆಬರಹವೇ ಇಷ್ಟು ಎನ್ನುತ್ತಾರೆ ರೈತ ಮುಖಂಡರು. ಹಾವೇರಿಗೆ ದೌಡಾಯಿಸಿದ್ದರು ಸಿಎಂ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಎಂಟು ದಿನದಲ್ಲೇ ಗೋಲಿಬಾರ್ ನಡೆದಿತ್ತು. ಬಿಜೆಪಿ ಈ ಘಟನೆಯಿಂದ ತತ್ತರಿಸಿ ಹೋಗಿತ್ತು.

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಹಾವೇರಿಗೆ ಬಂದು ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಸಿದ್ದಲಿಂಗಪ್ಪ ಚೂರಿ ಅವರ ಮನೆಯಲ್ಲಿ ಗಳಗಳನೆ ಅತ್ತು, ಕರೆದು ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿ ಹೋಗಿದ್ದರು. ಏನು ಮಾಡಬೇಕು. ಹೀಗೆ ಏಕಾಯಿತು ಎಂಬುದು ತಿಳಿಯದೇ ಸರಕಾರ ಕಂಗಾಲಾಗಿತ್ತು. ತನಿಖಾ ಆಯೋಗ ರಚನೆ: ಸರಕಾರ ಗೋಲಿಬಾರ್ ಪ್ರಕರಣದ ಸತ್ಯಾಂಶವನ್ನು ಅರಿಯುವುದಕ್ಕಾಗಿ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತು. ಜಗನ್ನಾಥ ಶೆಟ್ಟಿ ಆಯೋಗವೂ ಹಾವೇರಿಗೆ ಹಲವು ಬಾರಿ ಆಗಮಿಸಿ ತನಿಖೆ ನಡೆಸಿತು. ಅಲ್ಲದೇ ೧೦೦ಕ್ಕೂ ಹೆಚ್ಚು ಜನರಿಂದ ಸಾಕ್ಷಿ ಪಡೆಯಿತು.

ಅಂದಿನ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳೆಲ್ಲ ಸಾಕ್ಷಿ ಹೇಳಿ ಬಂದಿದ್ದರು. ಮೃತಪಟ್ಟವರು ರೈತರಲ್ಲ ಎಂದು ಕೂಡಾ ಸಾಕ್ಷಿ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ಹೀಗೆ ಆಗಿನ ಜನಪ್ರತಿನಿಧಿಗಳೆಲ್ಲ ಮೃತಪಟ್ಟವರು ರೈತರಲ್ಲ, ಗಲಭೆಕೋರರು ಎಂಬ ರೀತಿಯ ಹೇಳಿಕೆಗಳು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಹಾಗೂ ರೈತರನ್ನು ತೀವ್ರವಾಗಿ ಕೆರಳಿಸಿತ್ತು. ಈ ಹೇಳಿಕೆಯನ್ನು ಖಂಡಿಸಿ ಹಾವೇರಿಯಲ್ಲಿ ಪ್ರತಿಭಟನೆಗಳು ಸಹ ನಡೆದಿದ್ದವು.

ಗೋಲಿಬಾರ್ ನಡೆದ ಮರುದಿನದಿಂದಲೇ ಬಿಜೆಪಿ ವಿರುದ್ಧ ಟೀಕೆ ಮಾಡಲು ಕಾಂಗ್ರೆಸ್ ಗೋಲಿಬಾರ್ ಘಟನೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಎಲ್ಲ ಚುನಾವಣೆ, ಪ್ರಮುಖ ಸಮಾರಂಭಗಳಲ್ಲಿ ಕಾಂಗ್ರೆಸ್ ಇದನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿತ್ತು. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರ ಮೇಲೆ ಗುಂಡು ಹಾರಿಸಿದ ಬಿಜೆಪಿ ಸರಕಾರ ಎಂದು ಟೀಕಾ ಪ್ರಹಾರ ನಡೆಸಿ, ಬಿಜೆಪಿ ರೈತ ವಿರೋಧಿ ಎನ್ನುವದನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿತ್ತು.

ಈ ಮಧ್ಯೆ ಕಳೆದ ಹಲವು ವರ್ಷಗಳ ಹಿಂದೆ ತನಿಖೆ ಪೂರ್ಣಗೊಳಿಸಿದ ಜಗನ್ನಾಥ ಶೆಟ್ಟಿ ಆಯೋಗ, ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಈವರೆಗೂ ಸರಕಾರ ಮಾತ್ರ ಅದನ್ನು ಬಹಿರಂಗ ಪಡಿಸಿಲ್ಲ. ಆದರೆ ಕಾಂಗ್ರೆಸ್‌ಪಕ್ಷ ವಿರೋಧ ಪಕ್ಷವಾಗಿದ್ದ ಸಂದರ್ಭದಲ್ಲಿ ವಿಧಾನಸಭೆ ಅಧಿವೇಶನಗಳಲ್ಲೂ ಇದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಬಿಜೆಪಿ ವಿರುದ್ಧ ಹೋರಾಟಗಳನ್ನು ಮಾಡಿತ್ತು. ಹೀಗೆ ಸದನದೊಳಗೆ ಹಾಗೂ ಹೊರಗೆ ಬಿಜೆಪಿ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್‌ಗೆ ಗೋಲಿಬಾರ್ ಘಟನೆ ಹಾಗೂ ವರದಿ ಬಹಿರಂಗಗೊಳಿಸದಿರುವುದೇ ಪ್ರಮುಖ ಆಹಾರವಾಗಿತ್ತು.

ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಯಲ್ಲೂ ಗೋಲಿಬಾರ್ ಘಟನೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಮತ ಕೇಳುವುದು ಕಾಂಗ್ರೆಸ್ ಪರಿಪಾಠವಾಗಿತ್ತು. ಒಂದು ಹಂತದಲ್ಲಿ ಜಿಲ್ಲೆಯಲ್ಲಿ ರೈತರು ಕಾಂಗ್ರೆಸ್ ಪರ ಒಲವು ತೋರಲು ಗೋಲಿಬಾರ್ ಘಟನೆ ಕೂಡಾ ಕೆಲ ಮಟ್ಟಿಗೆ ಸಹಕಾರಿಯಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಕಾಂಗ್ರೆಸ್ ಇದನ್ನು ಬಳಕೆ ಮಾಡಿಕೊಂಡಿತ್ತು. ಆಗ ಬಿಜೆಪಿ ಸರಕಾರವಿತ್ತು ವರದಿ ಬಹಿರಂಗ ಪಡಿಸುವಂತೆ ಸರಕಾರಕ್ಕೆ ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತಿತ್ತು.

೨೦೧೩ರಿಂದ ೨೦೧೮ರವರೆಗೆ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಆಗ ಗೋಲಿಬಾರ್ ವಿರುದ್ಧ ಹಾಗೂ ವರದಿ ಬಹಿರಂಗಕ್ಕೆ ಆಗ್ರಹಿಸಿದ್ದ ಅಂದಿನ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಅವರು ಗೋಲಿಬಾರ್ ತನಿಖಾ ಆಯೋಗದ ವರದಿ ಬಹಿರಂಗ ಪಡಿಸಲಿಲ್ಲ. ವರದಿಯಲ್ಲಿ ಮೃತಪಟ್ಟವರು ರೈತರಲ್ಲ ಎಂಬ ಮಾಹಿತಿ ಸೋರಿಕೆಯಾಗಿದೆ. ಇದು ನಿವಾರಣೆಯಾಗಬೇಕೆಂದರೆ ವರದಿ ಬಹಿರಂಗ ಪಡಿಸಬೇಕೆಂಬ ಬೇಡಿಕೆ ರೈತರದ್ದು.

ಗೋಲಿಬಾರ್ ನಡೆದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದು.ಈಗಲಾದರೂ ತನಿಖಾ ಆಯೋಗದ ವರದಿಯನ್ನು ಬಹಿರಂಗಪಡಿಸಬೇಕೆನ್ನುವುದು ರೈತರ ಆಗ್ರಹವಾಗಿದೆ. ಗೋಲಿಬಾರ್ ನಡೆದು ೧೪ ವರ್ಷ ಕಳೆದರೂ ಸಹ ರೈತರ ಸ್ಥಿತಿ-ಗತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈಗಲೂ ಸಹ ಕಳಪೆ ಬಿತ್ತನೆ ಬೀಜದ ಸಮಸ್ಯೆ, ರಸಗೊಬ್ಬರದ ಸಮಸ್ಯೆ, ರೈತರ ಬೆಳೆಗಳಿಗೆ ಸರಿಯಾದ ಬೆಲೆಸಿಗದಿರುವುದು, ಕೊರೋನಾ ಸಂಕಷ್ಟ ಹೀಗೆ ಹಲವು ಹತ್ತು ಸಮಸ್ಯೆಗಳು ರೈತರನ್ನು ಬೆಂಬಿಡದೇ ಕಾಡುತ್ತಿವೆ.

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: