ಜಿ ಎನ್ ನಾಗರಾಜ್ ಅಂಕಣ- ಸಿದ್ಧಲಿಂಗಯ್ಯ ಫೆನಾಮೆನನ್- ಜಾರುವ ದಾರಿಯಲ್ಲಿ..

ಸಿದ್ದಲಿಂಗಯ್ಯನವರು ಹೇಗೆ ಸಮಾಜದ ಮನಸ್ಸನ್ನು ಪ್ರಭಾವಿಸುವ ಶಕ್ತಿಯಾದರು ಎನ್ನುವುದನ್ನು ಜಿ ಎನ್ ನಾಗರಾಜ್ ಅವರು ತಮ್ಮ ಅಂಕಣದಲ್ಲಿ ಪರಿಶೀಲಿಸಿದ್ದಾರೆ. ಎರಡು ಭಾಗಗಳಲ್ಲಿ ಪ್ರಕಟವಾಗಿರುವ ಈ ವಿಶಿಷ್ಟ ನೋಟ ಚರ್ಚೆಗೆ ತೆರೆದಿದೆ. ನಿಮ್ಮಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿದ್ದೇವೆ.

ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳಿಸಿಕೊಡಿ.

ನಿನ್ನೆ ಪ್ರಕಟವಾದ ಭಾಗ ಇಲ್ಲಿದೆ –ಕ್ಲಿಕ್ಕಿಸಿ

ಮುಂದುವರಿದ ಭಾಗ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಸಿದ್ಧಲಿಂಗಯ್ಯ ಫೆನಾಮೆನನ್ ಅಧ್ಯಯನಕ್ಕೊಳಗಾಗಬೇಕು. ಅದರ ಏಳು ಬೀಳುಗಳೆರಡರಿಂದಲೂ ಚಳುವಳಿಗಳಿಕಾರರು ಆಳುವವರಿಗೆ ಎದುರಾದ ಸಾಹಿತಿಗಳು ಪಾಠಗಳನ್ನು ಕಲಿಯಲು ಸಾಧ್ಯವಾಗಬೇಕು.

ಕೃತ್ತಿಕಾ ನಕ್ಷತ್ರ ಉರಿದುರಿದು ಬಿತ್ತು
ದೇವಲೋಕದ ಪಕ್ಷಿ ಗರಿಗೆದರಿ ಹಾರಿತ್ತು
ರಾಮಕೃಷ್ಣ ಹೆಗಡೆ ಯುಗವು ಮುಗಿದಿತ್ತು
ಸಂಕಷ್ಟಗಳ ಕತ್ತಲೆಯ ನಾಡಿನಲ್ಲಿ
ಮುಗುಳುನಗೆಯ ಬೆಳುದಿಂಗಳ ಚೆಲ್ಲಿ ಬೆಳಕಾದಿರಿ
ಹಳ್ಳಿಗಾಡ ಕಂದಮ್ಮಗಳ ಕಣ್ಣಲ್ಲಿ ಬೆಳಕು
ಸ್ನೇಹ ಸೌಜನ್ಯದ ಅಮೃತದ ನಿಧಿಯನ್ನು ಹೊತ್ತು ತಂದಿರಿ ನೀವು ಗಂಧರ್ವ ಲೋಕದಿಂದ
ಜನಕೋಟಿ ನಿಮ್ಮ ನೆನೆವುದು.

-‘ರಾಮಕೃಷ್ಣ ಹೆಗಡೆಯವರಿಗೆ’ ಕವನ.


ರಾಜಕೀಯದ ಗಡಿಬಿಡಿ ವಳಗೋಡಾಡೋರಾ
ಪಾರ್ಲಿಮೆಂಟು ಅಸೆಂಬ್ಲೀಲಿ ಮ್ಯತ್ಗಿರೋ ಸೀಟ್ ಮ್ಯಾಲ್ ಕುಂತು
ಪಾನ್ ಬೀಡಾ ಅಗ್ಯೋ ನಾಯಕ್ರಾ
ನಿಮ್ಗೆ ಕೇಳ್ಸಲ್ವೇನ್ರಲೇ ನಮ್ ಕೂಳಿಲ್ಲದ ಕೂಗು
ಡೆಳ್ಳಿಗೂ ಬೆಂಗ್ಲೂರ್ಗು ಆಕಾಸ್ ದೇಲ್ ತಾರಾಡೋರಾ ದಿನ್ದಿನ್ಕು ಕುಬೇರ್ರಾಗಿ, ಬಡೂರುದ್ಧಾರ್ಕೋಸ್ಕರ….
ಸತ್ತೋಗೋರಾ

-‘ಹೊಲೆ ಮಾದಿಗರ ಹಾಡು’ ಸಂಕಲನದಿಂದ

ಈ ಎರಡು ಕವನಗಳು ಸಿದ್ಧಲಿಂಗಯ್ಯನವರಲ್ಲಿ ಉಂಟಾದ ಬದಲಾವಣೆಯ ದಿಕ್ಕು ದೆಸೆ, ಸ್ವರೂಪವನ್ನು ಸಂಶಯಕ್ಕೆಡೆಯಿಲ್ಲದಂತೆ ಮನಗಾಣಿಸುತ್ತದೆ. ಅವರು ಉಪಯೋಗಿಸಿದ ಭಾಷೆ, ಶೈಲಿ, ಉಪಮೆ, ರೂಪಕಗಳೂ ಕೂಡಾ ಎಷ್ಟೊಂದು ಪರಿಯಲ್ಲಿ ಬದಲಾಗಿಬಿಟ್ಟಿವೆ. ಆಕಾಶ ಭೂಮಿಗಳಷ್ಟು ಅಂತರ ಅಂತಾರಲ್ಲ ಅಷ್ಟು. ಹೆಗಡೆ ದೇವಲೋಕದ ಪಕ್ಷಿ, ಗಂಧರ್ವ ಲೋಕದಿಂದ ಇಳಿದು ಬಂದವರಾಗಿ ಬಿಟ್ಟಿದ್ದಾರೆ. ಕನ್ನಡಿಗರ ಅಸ್ಮಿತೆಯ ಬಹು ದೊಡ್ಡ ಐಕಾನ್ ಆಗಿ ತಾಯಿ ಭುವನೇಶ್ವರಿ ಎಂದೆಲ್ಲಾ ಆರಾಧಿಸಲ್ಪಡುವ ಕನ್ನಡವ್ವನನ್ನು ಕೂಡಾ ಮಾಲೀಕರ ಮಿಂಡಗಾತಿ, ಜಮೀನುದಾರರ ಜೊತೆಗಾತಿ ಎಂದು, ಮತ್ತೊಂದು ಐಕಾನ್ ಕೃಷ್ಣದೇವರಾಯನನ್ನು ಭಿಕ್ಷೆ ಹಾಕಿದವನು ಎಂದೆಲ್ಲಾ ಕರೆಯುವ ದಿಟ್ಟತನ‌ ತೋರಿದ ಸಿದ್ಧಲಿಂಗಯ್ಯನವರು ಇವರೇನೆ ಎಂದು ಅವರ ಅನೇಕ ವರ್ತನೆ, ಕ್ರಮಗಳ ಬಗ್ಗೆ ಅವರನ್ನು ಮೆಚ್ಚಿ ಮೆರೆಸಿದ ಜನರೆಲ್ಲ ಬೆಕ್ಕಸಪಡುವಂತಾಯ್ತು.

‘ಜಾರುವ ದಾರಿಯಲ್ಲಿ’ ಎಂಬುದು ಶಿವರಾಮ ಕಾರಂತರ ಒಂದು ಕಾದಂಬರಿಯ ಹೆಸರು. ಸ್ವತಃ ಶಿವರಾಮ ಕಾರಂತರೇ ತಮ್ಮ ಜೀವನದ ಇಳಿಗಾಲದಲ್ಲಿ ಜಾರಿಬಿಟ್ಟರು. ರಾಮ ಮಂದಿರ ಚಳುವಳಿ ಮಸೀದಿ ನಾಶಗಳನ್ನು ಬೆಂಬಲಿಸಿದರು. ಬದಲಾವಣೆ ಜಗದ ನಿಯಮ. ವ್ಯಕ್ತಿಗಳೂ ಬದಲಾಗುತ್ತಲೇ ಇರುತ್ತಾರೆ. ಎಲ್ಲ ವ್ಯಕ್ತಿಗಳಂತೆ ಸಾಹಿತಿಗಳೂ ಬದಲಾಗುತ್ತಾ ಸಾಗಿದ್ದಾರೆ.

ಕುವೆಂಪು, ಬೇಂದ್ರೆ, ಅಡಿಗರು, ಕೆ.ಎಸ್.ನರಸಿಂಹಸ್ವಾಮಿ, ತೇಜಸ್ವಿ, ಲಂಕೇಶ್, ಚಂಪಾ ಹೀಗೆ ಹಲ ಹಲವರ ಉದಾಹರಣೆಗಳಿವೆ. ಸಿದ್ಧಲಿಂಗಯ್ಯನವರಿಗೆ ಆಪ್ತ ಸಲಹೆಗಾರರಾಗಿದ್ದ ಡಿ.ಆರ್. ನಾಗರಾಜ್, ರಂಗಭೂಮಿಗೆ ಅವರನ್ನು ಸೆಳೆದ‌ ಪ್ರಸನ್ನರವರ ಉದಾಹರಣೆಗಳು ಅವರ ಮೇಲೆ ವೈಯುಕ್ತಿಕವಾಗಿ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಆದರೆ ಅಡಿಗರ ಮತ್ತು ಸಿದ್ಧಲಿಂಗಯ್ಯನವರ ಬದಲಾವಣೆಗಳು ಮಾತ್ರ ಟೀಕೆ, ಕಟು ಟೀಕೆಗಳಿಗೆ ಒಳಗಾಗಿವೆ. ಅದೂ ಮುಖ್ಯವಾಗಿ ಸಾಹಿತ್ಯೇತರ ಕಾರಣಗಳಿಗಾಗಿ. ಅದೇನೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಸಿದ್ಧಲಿಂಗಯ್ಯನವರ ಬಗೆಗಿನ ಟೀಕೆಗಳ ಕೆಲವು ಮಾದರಿಗಳಿಲ್ಲಿವೆ :
ಕೊನೆ ಕೊನೆಗೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡ ಅವರು ಹಲವರ ವ್ಯಂಗ್ಯಕ್ಕೆ ಗುರಿಯಾಗಿದ್ದರು.
ಪುರುಷೋತ್ತಮ ಬಿಳಿಮಲೆ

ಈಚಿನ ವರ್ಷಗಳಲ್ಲಿ ಸಿದ್ಧಲಿಂಗಯ್ಯನವರ ರಾಜಕೀಯ ಒಲವುಗಳು, ಅವರ ಮೊದಲ ಘಟ್ಟದ ವ್ಯಕ್ತಿತ್ವವನ್ನು ಮುಖಾಮುಖಿಗೊಳಿಸಿ ಕಸಿವಿಸಿ-ಪ್ರಶ್ನೆ ಹುಟ್ಟಿಸುತ್ತಿದ್ದವು. ಅವರಷ್ಟು ಓದುಗರ- ಚಳುವಳಿಗಾರರ ಪ್ರೀತಿಗೂ ತಾಪಕ್ಕೂ ಈಡಾದ ಮತ್ತೊಬ್ಬ ಸಮಕಾಲಿನ ಲೇಖಕರಿಲ್ಲವೇನೋ.
ರಹಮತ್ ತರೀಕೆರೆ

ಇದು ಕನ್ನಡದ ಇಬ್ಬರು ಮುಖ್ಯ ಲೇಖಕರು, ಸಿದ್ಧಲಿಂಗಯ್ಯನವರ ಜೊತೆ ಬಂಡಾಯ ಸಾಹಿತ್ಯ ಚಳುವಳಿಯ ಭಾಗವಾಗಿದ್ದವರು ನಿಧನದ ಸಮಯದಲ್ಲಿ ಸಲ್ಲಿಸುವ ಗೌರವದೊಡನೆ ಸೌಮ್ಯವಾಗಿ ಆಡಿದ ಮಾತುಗಳು.

ಮತ್ತೊಬ್ಬ ಪ್ರಮುಖ ಸಾಹಿತಿ ಎಸ್.ಜಿ ಸಿದ್ಧರಾಮಯ್ಯನವರು ಕವನದ ರೂಪದಲ್ಲಿ ಸಿದ್ಧಲಿಂಗಯ್ಯನವರನ್ನು ನೆನಪಿಸಿಕೊಂಡದ್ದು ಹೀಗೆ :

ಸಪ್ಪಲಾಗಿದ್ದ ಮಾತಿಗೆ ಸಾವಿರದ ಶಕ್ತಿ ಕೊಟ್ಟೆ
……..
ಬೆಳೆದ ರೈತ ಫಸಲು ಮರೆತ
ಹಂಗಿನರಮನೆಗೆ ಹೊರಟ
…..
ಕವಿ ಸತ್ತು ಕಾಲವಾಯಿತು ಅಂದುಕೊಂಡವರ
ಅಣಕಿಸಿ ತೋರಿದೆ ಬಡವರ
ನಗುವಿನ ಶಕ್ತಿ.
….
ಎಡ ಬಲಗಳ ಗೊಂದಳಿಯಲ್ಲಿ ಮೈಗೆ ಸವರಿದೆ ಎಣ್ಣೆ.

ಕೆಲವರಂತೂ ಬಹಳಷ್ಟು ಕಟುವಾಗಿ ಹೀಗೆ ಹೇಳಿದ್ದಾರೆ :

ಬೇಡಾ ಸರ್, ಆ ನರರಾಕ್ಷಸರ ಸಹವಾಸ. ಅದ್ರಿಂದ ನೀವೇನ್ ಪಡಕೊಂಡಿದ್ದೀರೋ ಗೊತ್ತಿಲ್ಲ ಸರ್. ನನ್ನ ಜನಗಳು ಅಂಥಾ ಕರುಳಿನ ಭಾಷೆಯಲ್ಲಿ ಹಾಡು ಕಟ್ಟಿದ್ರಲ್ಲಾ ಅದೇ ಮುಗ್ಧ ಜನರ ನಂಬಿಕೆ ಕಳೆದುಕೊಂಡಿದ್ದೀರಾ.
ಯಾಕೋ ಬೆನ್ನಿಗೆ ಇರಿದ್ಬಿಟ್ರಿ ಅನ್ನಿಸ್ತಿದೆ ಸರ್
– ‌ಮಂಜುಳಾ ಹುಲಿಕುಂಟೆ

ವಾರ್ತಾ ಭಾರತಿ ದಿನ ಪತ್ರಿಕೆಯಂತೂ ಸಂಪಾದಕೀಯದಲ್ಲಿಯೇ ಟೀಕೆ ಮಾಡಿತು :
ತನ್ನ ದಲಿತ ಅಸ್ಮಿತೆಯನ್ನು ಬಳಸಿಕೊಂಡು‌‌ ರಾಜಕೀಯ ಗಣ್ಯರ ಗೆಳೆತನ‌ ಬೆಳೆಸಿಕೊಂಡರು.‌ ರಾಜಕೀಯದ ಸಣ್ಣ ಪುಟ್ಟ ಸ್ಥಾನಗಳನ್ನು ತುಂಬತೊಡಗಿದರು. ಹಲವರಿಗೆ ಅದು ಸಮಯ ಸಾಧಕತನದಂತೆ ತೋರಿತು. ರಾಜಕಾರಣದ ಸೈಜುಗಲ್ಲುಗಳನ್ನು ಹೊರುವುದು ಅವರಿಗೆ ಅನಿವಾರ್ಯವಾಯಿತು.

ಅವರ ಬಗೆಗಿನ ಮೆಚ್ಚುಗೆ, ಹೊಗಳಿಕೆಯ ಮಾತುಗಳ ಬದಲಾಗಿ ಟೀಕೆ, ಕಟು ಟೀಕೆ, ತೆಗಳಿಕೆ, ನಿಂದನೆ, ಭರ್ತ್ಸನೆ, ಖಂಡನೆ ಎಂಬ ಎಲ್ಲ ರೀತಿಯ ಮಾತುಗಳು ಅಲಗಿನಂತೆ ಸಿದ್ಧಲಿಂಗಯ್ಯನವರ ವ್ಯಕ್ತಿತ್ವವನ್ನು ಇರಿದಿವೆ ಎಂದರೆ ತಪ್ಪಾಗಲಾರದು. ಇದೇಕೆ ಹೀಗಾಯ್ತು ಎಂಬುದನ್ನು ಹಲವು ಆಯಾಮಗಳಿಂದ ಶೋಧಿಸಬೇಕು. ಇದು ಎಲ್ಲ ಪ್ರಗತಿಪರ ಸಾಹಿತ್ಯ ಮತ್ತು ಚಳುವಳಿಗಳ ಮುಂದಿನ ಬೆಳವಣಿಗೆ ಹಾಗೂ‌ ಆರೋಗ್ಯಕ್ಕೆ ಅತ್ಯವಶ್ಯವಾಗಿದೆ.

ರಾಜಕಾರಣಿಗಳ ಸೈಜುಗಲ್ಲು ಹೊರುವುದು ಆರಂಭವಾದ ಮೇಲೆ ಸರಿಸುಮಾರು ಎಲ್ಲ ಸರ್ಕಾರಗಳು, ಅದರ ಮುಖ್ಯಮಂತ್ರಿಗಳ ಜೊತೆ ಸಂಬಂಧ ಬೆಳೆಸಿದರು. ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿಜೆಪಿ, ಆರೆಸ್ಸೆಸ್‌ನ ಸೈಜುಗಲ್ಲು ಹೊರಲು ಕೂಡಾ ಹಿಂದೆ‌ಮುಂದೆ ನೋಡಲಿಲ್ಲ. ಕೇವಲ ಒಂಚೂರು ಅಧಿಕಾರಕ್ಕಾಗಿ ಈ‌ ಮಟ್ಟಕ್ಕೆ ಇಳಿಯಬೇಕೆ ಎಂಬ‌ ಭಾವನೆ ದಲಿತ, ದಲಿತೇತರ ಪ್ರಗತಿಪರ ಸಾಹಿತಿ, ಚಿಂತಕರಲ್ಲಿ ಮೊಳೆಯಿತು. ಸಿದ್ಧಲಿಂಗಯ್ಯನವರನ್ನು ಇಂತಹ ನಿಂದನೆ, ಭರ್ತ್ಸನೆಗೆ ತುತ್ತಾಗಿಸಿತು.

ಸಿದ್ಧಲಿಂಗಯ್ಯನವರ ಈ ವರ್ತನೆ ಒಂದು ಸಾಮಾಜಿಕ ಪ್ರಕ್ರಿಯೆಯೇ ಅಥವಾ ಕೇವಲ ವೈಯುಕ್ತಿಕವೇ ? ಕೇವಲ ಸಿದ್ಧಲಿಂಗಯ್ಯನವರನ್ನು ನಿಂದಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆಯೇ? ಇಂತಹ ವರ್ತನೆ ಸಿದ್ಧಲಿಂಗಯ್ಯನವರಲ್ಲಿ ಮಾತ್ರ ಕಾಣುವುದಿಲ್ಲ. ಅಧಿಕಾರದಲ್ಲಿರುವವರನ್ನು ಓಲೈಸುವ ಪ್ರವೃತ್ತಿ ದಲಿತ ಚಳುವಳಿಯಲ್ಲಿ ವ್ಯಾಪಕವಾಗಿದೆ. ರೈತ ಚಳುವಳಿಯಲ್ಲೂ ಒಡಕುಗಳಿಗೆ ಕಾರಣವಾಗಿದೆ. ಸಮಾಜವಾದಿಗಳಲ್ಲಂತೂ ಮನಸ್ಸಿಗೆ ಬಂದ ಪಕ್ಷಗಳಲ್ಲೆಲ್ಲಾ ತೂರಿ ಅವರ ಪಕ್ಷವನ್ನೇ ವಿಸರ್ಜಿಸುವಂತಾಯಿತು. ಪ್ರಸಿದ್ಧ ಬಂಡಾಯಗಾರ ಜಾರ್ಜ್ ಫರ್ನಾಂಡಿಸ್‌ರವರ ಉದಾಹರಣೆ ಕಣ್ಣ ಮುಂದಿದೆ.

ಕಮ್ಯುನಿಸ್ಟ್ ಚಳುವಳಿಯನ್ನೂ ಸ್ವಲ್ಪ ಮಟ್ಟಿಗೆ ಬಾಧಿಸಿದೆ. ಈ ಓಲೈಕೆ ಪ್ರವೃತ್ತಿ ಬಿಜೆಪಿಯೇತರ ಪಕ್ಷಗಳ ಬಗ್ಗೆ ವ್ಯಾಪಕವಾಗಿದೆ. ಆದರೆ ಈ ಓಲೈಕೆ ಹಿಂದೆಲ್ಲ ತಾವು ಕಟುವಾಗಿ ವಿರೋಧಿಸಿದ್ದ ಕೋಮುವಾದಿಗಳ ಜೊತೆಗೆ ಹೊಂದಿಕೊಳ್ಳುವ ಪ್ರವೃತ್ತಿಯೂ ಸಿದ್ಧಲಿಂಗಯ್ಯನವರಿಗೆ ಸೀಮಿತವೇನಲ್ಲ. ಶ್ರೀನಿವಾಸ ಪ್ರಸಾದ್, ಬಾಬಾ ಗೌಡ ಪಾಟೀಲ್, ಶ್ಯಾಣಪ್ಪ, ಇತ್ತೀಚೆಗೆ ಮಹೇಶ್. ಹೀಗೆ ಕೆಲವು ಉದಾಹರಣೆಗಳು ರಾಜ್ಯ ಮಟ್ಟದಲ್ಲೂ ಇವೆ. ರಾಷ್ಟ್ರ ಮಟ್ಟದಲ್ಲಂತೂ ದಲಿತ ಚಳುವಳಿ ಮತ್ತು ರಾಜಕಾರಣದಲ್ಲಿ ಮತ್ತಷ್ಟು ಹೆಚ್ಚು. ದಲಿತರ ಹಿತಗಳನ್ನು ಸಂರಕ್ಷಿಸಲು ಅದೂ ಒಂದು ವಿಧಾನ ಎಂಬ ರಾಜಕೀಯ ತಂತ್ರಗಾರಿಕೆಯ ಮುಸುಕನ್ನು ಹೊದಿಸಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಸಿದ್ಧಲಿಂಗಯ್ಯನವರ ಬಗ್ಗೆಯೂ ಇಂತಹ ಸಮರ್ಥನೆಗಳನ್ನು ನೀಡಬಹುದು.

ಸಾಮಾಜಿಕ ಚಳುವಳಿಯ ನಾಯಕರ ಓಲೈಕೆ ರಾಜಕಾರಣ ಎಂಬುದು ಒಮ್ಮುಖವಲ್ಲ. ಓಲೈಸುವ ನಾಯಕರಿಗೆ ವೈಯುಕ್ತಿಕ ಆಸಕ್ತಿಯ ವಿಷಯ ಮಾತ್ರ. ಆದರೆ ಆಳುವವರಿಗೆ ಇದು ಬಹಳ ಜರೂರಿನದು. ತಮ್ಮ ಅಧಿಕಾರಕ್ಕೆ ಕುತ್ತು ತರಬಹುದಾದ ಯಾರೇ ಇರಲಿ, ಅವರನ್ನು ಮಟ್ಟಹಾಕಬೇಕು ಇಲ್ಲವೇ ಜೀರ್ಣಿಸಿಕೊಳ್ಳಬೇಕು. ಆಳುವವರು ತಮ್ಮ ಆಳ್ವಿಕೆಗೆ ಅನುಕೂಲವಾಗುವಂತೆ ರೂಪಿಸಿಕೊಂಡಿರುವ ವ್ಯವಸ್ಥೆ ಮೂರ್ನಾಲ್ಕು ರೂಪದಲ್ಲಿ ಅವರ ಸಹಾಯಕ್ಕೆ ಬರುತ್ತದೆ.

ಒಂದನೆಯದಾಗಿ, ಚುನಾವಣಾ ಪದ್ಧತಿ – ತುರ್ತು ಪರಿಸ್ಥಿತಿಯ ನಂತರ ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರದ ದಬ್ಬಾಳಿಕೆಯನ್ನು‌ ಎದುರಿಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಿದ್ದು ನರಗುಂದ, ನವಲಗುಂದ ರೈತ ಚಳುವಳಿ, ದಲಿತ ಚಳುವಳಿ, ಗೋಕಾಕ್ ಚಳುವಳಿ, ಬೆಂಗಳೂರಿನ ಸಾರ್ವಜನಿಕ ಕೈಗಾರಿಕೆಗಳ ಕಾರ್ಮಿಕ ಚಳುವಳಿ, ಸಾಂಸ್ಕೃತಿಕ ಚಳುವಳಿಗಳು. ಆದರೆ ಚುನಾವಣೆಯಲ್ಲಿ ಗೆಲುವು ದಕ್ಕಿದ್ದು ಇವೆಲ್ಲದರಿಂದ ಹರಿದಾರಿ ದೂರವಿದ್ದ ಜನತಾ ಪಕ್ಷಕ್ಕೆ. ಈ ಕೆಲವು ಚಳುವಳಿಗಳಲ್ಲಿ ಕ್ರಿಯಾಶೀಲವಾಗಿದ್ದ ಎರಡು ಕಮ್ಯುನಿಸ್ಟ್ ಪಕ್ಷಗಳಿಗೆ ಚೂರುಪಾರು ಸ್ಥಾನಗಳನ್ನು ಬಿಟ್ಟರೆ ಜನ ಚಳುವಳಿಗಳಿಗೆ ದಕ್ಕಿದ್ದು ಶೂನ್ಯ.

ಈ ಚಳುವಳಿಗಳಿಗೆ ಗಣನೀಯ ಸ್ಥಾನ ಸಿಕ್ಕು ಚಳುವಳಿಗಳಲ್ಲಿ ಎತ್ತಲಾದ ಜನ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳೋಣ. ಸಿದ್ಧಲಿಂಗಯ್ಯ, ಕೃಷ್ಣಪ್ಪ, ಮಹದೇವರು, ಕಮ್ಯುನಿಸ್ಟ್ ನಾಯಕರು, ರೈತ ಚಳುವಳಿಯ ನಾಯಕರು ಶಾಸಕರು ಮಾತ್ರವೇ ಅಲ್ಲದೆ ಜನ ಚಳುವಳಿಗಳೇ ಅಧಿಕಾರಕ್ಕೆ ಬಂದು ಮಂತ್ರಿಗಳಾಗಿದ್ದರೆ! ತಾವೇ ಆಳುವವರಾಗಿದ್ದರೆ ಆಳುವವರನ್ನು ಓಲೈಸುವ ಪ್ರಶ್ನೆ ಬರುತ್ತಿತ್ತೇ? ಚಳುವಳಿಗಳು, ಸಂಘಟನೆಗಳು ಮತ್ತಷ್ಟು ಬೆಳೆಯಲು ಅನುವಾಗುತ್ತಿರಲಿಲ್ಲವೇ?

ಎರಡನೆಯದಾಗಿ, ಜನ ಚಳುವಳಿಗಳಲ್ಲಿ ತಮ್ಮ ತುರ್ತು ಸಮಸ್ಯೆಗಳ ಪರಿಹಾರಕ್ಕಾಗಿ, ಆ ಸಮಸ್ಯೆಗಳಿಗೆ ಪರಿಹಾರವನ್ನು ಮುಂದಿಟ್ಟ ಸಂಘಟನೆ, ಅದರ ನಾಯಕರ ಸುತ್ತ ಜನರು ನೆರೆಯುತ್ತಾರೆ. ಸಮಸ್ಯೆಗಳ ತೀವ್ರತೆಯ ಆಧಾರದಲ್ಲಿ ಜನ ಚಳುವಳಿಗಳು ಬೃಹತ್ತಾಗಿ ಬೆಳೆಯುತ್ತವೆ. ಆದರೆ ಆಳುವವರು ರೂಪಿಸಿಕೊಂಡ ಮಾಧ್ಯಮಗಳು ಸಮಸ್ಯೆಗಳು, ಸಂಘಟನೆಯನ್ನು ಬದಿಗೆ ಸರಿಸಿ ಕೆಲ ನಾಯಕರನ್ನು ಎತ್ತಿ ತೋರಿಸುತ್ತವೆ. ಅವರ ಹೇಳಿಕೆ, ಭಾಷಣ, ಚಿತ್ರಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡುತ್ತವೆ. ಅಂತಹವರು ಸಾಹಿತಿ, ನಟ, ನಿರ್ದೇಶಕರಾಗಿ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿದವರಾದರೆ ಈ ಪ್ರಕ್ರಿಯೆ ಮತ್ತಷ್ಟು ಎತ್ತರಕ್ಕೇರಿ ವ್ಯಕ್ತಿ ವೈಭವೀಕರಣದೆಡೆಗೆ ಸಾಗುತ್ತದೆ. ಅಂತಹ ವ್ಯಕ್ತಿಗಳಲ್ಲಿ ವ್ಯಕ್ತಿ ನಿಷ್ಠತೆ ಪ್ರಧಾನವಾಗುತ್ತದೆ.

ಇದರಿಂದ ಕೆಲವರು ಮಾತ್ರ ನಾಯಕರು ಎಂಬ ಬಿಂಬ ಜನರಲ್ಲಿ ಮೂಡುತ್ತದೆ. ಅವರ ಜೊತೆ ಜೊತೆಗೇ, ಕೆಲವೊಮ್ಮೆ ಅವರಿಗಿಂತ ಹೆಚ್ಚು ಕಷ್ಟ ಪಟ್ಟು ದುಡಿದ ಹಲವು ನಾಯಕರಿಗೆ ತಾವೇನು ಲೆಕ್ಕಕ್ಕಿಲ್ಲವೇ ಎಂಬ ಅಸಮಧಾನ ಮೂಡುತ್ತದೆ. ಅಲ್ಲಿಂದಲೇ ಒಡಕು ಆರಂಭ. ತಾವೇ ನಾಯಕರೆಂಬ ಭಾವನೆ ಹೀಗೆ ಬಿಂಬಿತವಾದ ನಾಯಕರ ತಲೆಗೇರಿ ಅಧಿನಾಯಕತ್ವವನ್ನು ಸೃಷ್ಟಿಸುತ್ತದೆ. ಅದು ಅವರ ಬೆಳವಣಿಗೆಯನ್ನು ಕುಂಠಿತ ಮಾಡುತ್ತದೆ. ಸಂಘಟನೆ ವಿಘಟನೆಯಾಗಲು‌ ಸಹಾಯಕವಾಗುತ್ತದೆ. ಇಂತಹ ಪ್ರಕ್ರಿಯೆಗಳನ್ನು ರೈತ ಚಳುವಳಿ, ದಲಿತ ಚಳುವಳಿಗಳಲ್ಲಿ, ಇತರನೇಕ ಚಳುವಳಿಗಳಲ್ಲಿ ಒಡಕಿಗೆ ಕಾರಣವಾಗಿರುವುದನ್ನು ನೋಡಿದ್ದೇವೆ.

ಆಳುವವರು ಇಂತಹ ಅಧಿ‌ನಾಯಕರನ್ನು ಬುಟ್ಟಿಗೆ ಹಾಕಿಕೊಳ್ಳಲು ‘ಕ್ಯಾರಟ್ ಅಂಡ್ ಸ್ಟಿಕ್’ ನೀತಿ ಅನುಸರಿಸಲು ಸುಲಭವಾಗುತ್ತದೆ. ಗುಂಡೂರಾವ್ ಸರ್ಕಾರದ ಜೊತೆ ಸಂಘರ್ಷದಲ್ಲಿ ಪ್ರಾಣ ಬಲಿದಾನ, ಜೈಲು ಮತ್ತಿತರ ಸಂಕಟಗಳನ್ನು ಅನುಭವಿಸಿದ ಜನ‌ ಚಳುವಳಿಗಳನ್ನು ದೂರವಾಗಿಸಿ ಹೆಗಡೆ ಸರ್ಕಾರ ರಚಿತವಾಯಿತು. ಜನ ಚಳುವಳಿಗಳನ್ನು ಬಗ್ಗು ಬಡಿಯಲು ಅಥವಾ ಜೀರ್ಣಿಸಿಕೊಳ್ಳಲು ಹೆಗಡೆ ಮಾಡಿದ ಪ್ರಯತ್ನಗಳು ಅಂದು ಸರ್ವವಿದಿತ.

ಹೆಗಡೆ ಬೀಸಿದ ಬಲೆಗೆ ಸಿದ್ಧಲಿಂಗಯ್ಯನವರನ್ನೂ ಸೇರಿಸಿ ಹಲವರು ಸಿಕ್ಕಿ ಬಿದ್ದರು. ಮೇಲೆ ಉಲ್ಲೇಖಸಿದ ಹೆಗಡೆಯವರ ಬಗೆಗಿನ ಕವನ ಅದಕ್ಕೆ ಸಾಕ್ಷಿಯಾಗಿದೆ. ಆಳುವವರೆಂದರೆ ಉರಿದು ಬೀಳುತ್ತಿದ್ದ ಅವರ ಅರಿವು ಮಸಳಿಸಿ ಬಡವರ ಪರವಾದುದೆಂಬ ಚೂರು ಪಾರು ಕೆಲಸಗಳನ್ನು ವೈಭವೀಕರಿಸುವುದನ್ನು ಕಾಣುತ್ತೇವೆ. ಇಂತಹ ಸಾವಿರಾರು ಕವನಗಳು ಇಂದಿರಾಗಾಂಧಿಯವರಿಗೆ, ಅವರ ಗರೀಬಿ ಹಠಾವೋ, 20 ಅಂಶಗಳಿಗೆ ಅರ್ಪಿತವಾಗಿತ್ತೆಂಬುದನ್ನು ಅವರು ಮರೆತೇ ಬಿಟ್ಟರು.

ಸಿದ್ಧಲಿಂಗಯ್ಯನವರ ಮೊದಲ ಎರಡು ಕವನ ಸಂಕಲನಗಳು ಹೊರಬಂದಾಗ ರಾಜ್ಯದಲ್ಲಿ ಪ್ರಗತಿಪರ ಸರ್ಕಾರವೆಂದು ಸಿದ್ಧಲಿಂಗಯ್ಯನವರೇ ಹಲವು ಬಾರಿ ಹೇಳಿರುವ ದೇವರಾಜ ಅರಸರ ಸರ್ಕಾರ ಇತ್ತೆಂಬುದು ವಿಪರ್ಯಾಸ. ಅಂತೂ ಅವರು ಹೆಗಡೆಯವರ ಆಸ್ಥಾನ ವಿದ್ವಾಂಸರಲ್ಲಿ ಒಬ್ಬರಾದರು.‌ ಸಿದ್ಧಲಿಂಗಯ್ಯನವರ ವಿನಯ ಅವರಿಗೆ ಬಹಳ ಪ್ರಿಯವಾಗಿರಬೇಕು. ಜೊತೆಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಇವರ ಜೊತೆಗಿನ ಸಂಭಾಷಣೆಯೂ ಕೂಡಾ. ಹೀಗೆ ಸಿದ್ಧಲಿಂಗಯ್ಯನವರ ಬದುಕು ಪಡೆದುಕೊಂಡ ತಿರುವು ಒಂದು ಕಡೆ ಸಾಮಾಜಿಕ,ರಾಜಕೀಯ ಪರಿಸ್ಥಿತಿಯ ಪರಿಣಾಮ ಮತ್ತೊಂದೆಡೆ ಅವರ ವಿಶಿಷ್ಟ ವೈಯುಕ್ತಿಕ ನಡವಳಿಕೆಗಳ ಪರಿಣಾಮ.

ಸಿದ್ಧಲಿಂಗಯ್ಯನವರ ಈ ವರ್ತನೆಗಳನ್ನು ಅವರಂತೆಯೇ ದಲಿತ ಚಳುವಳಿಯ ನಾಯಕರೂ, ಬರಹಗಾರರೂ ಆದ ದೇವನೂರು ಮಹದೇವರು ಜೊತೆಗೆ ತುಲನೆ ಮಾಡುವುದು ರೂಢಿ. ಮಹದೇವರು ತಮಗೆ ಸರ್ಕಾರಗಳು ನೀಡ ಬಯಸಿದ ಹಲವು ಪ್ರಶಸ್ತಿ, ಪದವಿಗಳನ್ನು ನಿರಾಕರಿಸುತ್ತಾ ಬಂದುದು, ಅಂತಹವನ್ನೆಲ್ಲಾ ಆ ಕೆಲವೇ ದಿನಗಳಲ್ಲಿ ಸಿದ್ಧಲಿಂಗಯ್ಯನವರು ಒಪ್ಪಿಕೊಳ್ಳುತ್ತಾ ಹೋದುದು ಅವರಿಬ್ಬರ ವ್ಯಕ್ತಿತ್ವಗಳ ನಡುವಣ ವ್ಯತ್ಯಾಸ ಮತ್ತಷ್ಟು ಢಾಳಾಗಿ ಎದ್ದು ಕಾಣತೊಡಗಿತು.

ಸಾಮಾಜಿಕ ಪರಿಸ್ಥಿತಿಗಳ ಒತ್ತಡ, ಪ್ರಲೋಭನೆಗಳನ್ನು ವ್ಯಕ್ತಿಯೊಬ್ಬ ದೃಢವಾಗಿ ಎದುರಿಸಲು ಸಾಧ್ಯ ಎಂಬುದಕ್ಕೆ ಹಲ ಹಲವು ಉದಾಹರಣೆಗಳಿವೆ. ಆಳುವವರನ್ನು ಅವರ ಮಾತು, ಘೋಷಣೆ, ಭರವಸೆಗಳ ಮೇಲೆ ಅಳೆಯಬಾರದು. ಅವರ ನೀತಿ, ಧೋರಣೆ ಕ್ರಮಗಳನ್ನು, ದೈನಂದಿನ ಆಡಳಿತವನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕು, ವಿಮರ್ಶೆಗೊಳಪಡಿಸಬೇಕು. ಜನ ವಿರೋಧಿ, ದಲಿತ ವಿರೋಧಿ ಅಂಶಗಳನ್ನು ವಿರೋಧಿಸಬೇಕು. ಹೋರಾಟಗಳ ಮೂಲಕ ಜನರ ಮೇಲಾಗುವ ದುಷ್ಪರಿಣಾಮವನ್ನು ತಪ್ಪಿಸಬೇಕು. ಇದು ಜನ ಚಳುವಳಿಗಾರರ ನಿತ್ಯದ ಕೆಲಸ. ಆಳುವವರೊಡನೆ ಸಂಪರ್ಕ ಬೆಳೆಸುವ ಸಂದರ್ಭದಲ್ಲೂ ಅಂತರ ಕಾಪಾಡಿಕೊಳ್ಳಬೇಕು. ಇದು ಆಳುವವರೊಡ್ಡುವ ಬಲೆಗೆ ಬೀಳದೆ ನಮ್ಮತನವನ್ನು ರಕ್ಷಿಸಿಕೊಳ್ಳುವ ಮಾರ್ಗ.

ಈ ದಿಸೆಯಲ್ಲಿ ಆಳುವವರು ನೀಡುವ ಅಧಿಕಾರ, ಪ್ರಶಸ್ತಿಗಳನ್ನು ‌ನಿರಾಕರಿಸಬೇಕು ಎಂದು ಬಂಡಾಯ ಸಾಹಿತ್ಯ ಸಂಘಟನೆ ಒಂದು ನೀತಿ ಸಂಹಿತೆಯನ್ನು ರೂಪಿಸಿಕೊಂಡಿತ್ತು. ಮೊದ ಮೊದಲು ಇದರ ಬಗ್ಗೆ ಈ ಸಾಹಿತಿಗಳು ಎಚ್ಚರ ವಹಿಸಿದರು. ಸಾಮಾನ್ಯ ಕಾರ್ಯಕರ್ತರು ಈ ಆಧಾರದ ಮೇಲೆ ಟೀಕೆಗಳನ್ನು ಮಾಡುತ್ತಿದ್ದರು. ಆದರೆ ಕ್ರಮೇಣ ಒಬ್ಬೊಬ್ಬರಾಗಿ ಈ ಸಂಹಿತೆಗಳನ್ನು ಗಾಳಿಗೆ ತೂರಲಾಯಿತು. ಹಲವರು ಅಧಿಕಾರಸ್ಥರನ್ನು ಓಲೈಸಿ ವಿವಿಧ ಸ್ಥಾನಗಳನ್ನು ಪಡೆದರು.‌ ಅದರಲ್ಲಿ ಸಿದ್ಧಲಿಂಗಯ್ಯನವರು ಮೊದಲ ಸಾಲಿಗೆ ಸೇರಿ ಕೆಟ್ಟ ಮಾದರಿ ಹಾಕಿಕೊಟ್ಟರು ಎಂಬುದು ವಿಷಾದಕರ.

ತಮ್ಮ ಕವನಗಳ ಮೂಲಕ ತೋರಿದ ಪ್ರತಿಭಟನೆ, ಮೂಡಿಸಿದ ಅರಿವಿಗೆ ವಿರುದ್ಧವಾಗಿ ಸಿದ್ಧಲಿಂಗಯ್ಯನವರ ವ್ಯಕ್ತಿತ್ವ ಪಡೆದ ಈ ಸಂಕಟಕರ ತಿರುವಿಗೆ ಕಾರಣವೇನು ? ಎಂಬ ಪ್ರಶ್ನೆ ಮತ್ತಷ್ಟು ಆಳವಾದ ಪರಿಶೀಲನೆಯನ್ನು ಒತ್ತಾಯಿಸುತ್ತದೆ. ಈ ದಿಸೆಯಲ್ಲಿ ಅವರ ಬದುಕಿನ ಘಟನೆಗಳನ್ನು ವಿವರವಾಗಿ ಪರಿಶೀಲಿಸಿದರೆ ಅವರು ಎದುರಿಸಬೇಕಾದ ಅವರಿಗೆ ನೋವುಂಟುಮಾಡಿದ ಬಿಕ್ಕಟ್ಟುಗಳು ನಮ್ಮ ಮುಂದೆ ಬರುತ್ತವೆ.

ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿದಾಗ ಅದರಲ್ಲಿ ಅಂಬೇಡ್ಕರ್‌ವಾದಿಗಳು, ಸಮಾಜವಾದಿಗಳು, ಮಾರ್ಕ್ಸ್‌ವಾದಿಗಳು, ಇವ್ಯಾವುದೂ ಗೊತ್ತಿಲ್ಲದವರು ಎಲ್ಲರೂ ಇದ್ದರು. ದಿನ‌ಕಳೆದಂತೆ ಅಂಬೇಡ್ಕರ್‌ವಾದಿಗಳು ಮಾರ್ಕ್ಸ್‌ವಾದಿಗಳ ವಿರುದ್ಧ ಹರಿಹಾಯತೊಡಗಿದರು ಎಂಬ ಸಂಗತಿ ಹಲವು ಮೂಲಗಳಿಂದ ತಿಳಿಯುತ್ತದೆ. ಅದಕ್ಕೆ ಸಿದ್ಧಲಿಂಗಯ್ಯನವರೇ ಮುಖ್ಯ ಗುರಿಯಾದರು. ಸಿದ್ದಲಿಂಗಯ್ಯನವರ ಆತ್ಮ ಕಥನವೂ, ಅವರ ಭಾಷಣ, ಲೇಖನಗಳೂ ಇದನ್ನು ದಾಖಲಿಸಿವೆ.

ಊರುಕೇರಿಯಿಂದ ಈ ಪ್ರಸಂಗವನ್ನು ನೋಡೋಣ :
‘ನನ್ನನ್ನು ಮಾರ್ಕ್ಸ್‌ವಾದಿಗಳ ಕಟ್ಟಾ ಬೆಂಬಲಿಗನೆಂದು ಜರಿದ ಗೆಳೆಯರು ಮಾರ್ಕ್ಸಿಸ್ಟರ ಜೊತೆ ಯಾವುದೇ ಕಾರ್ಯಕ್ರಮ ಮಾಡಬಾರದೆಂದು ನಿರ್ಣಯ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದರು. ಎಲ್ಲಾ ಪ್ರಗತಿಪರ ಶಕ್ತಿಗಳ ಜೊತೆ ದಲಿತ ಶಕ್ತಿ ಒಗ್ಗೂಡಿ ಹೋರಾಡಬೇಕೆಂದು ನಾನು ತೀವ್ರವಾಗಿ ವಾದಿಸಿದೆ. ವಾಗ್ವಾದ ನಿಂದನೆಯ ಹಂತಕ್ಕೆ ಏರುತ್ತಿದ್ದಂತೆ ಎಸ್.ಗಣೇಶನ್, ಕೆ ರಾಮಯ್ಯ ನನ್ನ ಬೆಂಬಲಕ್ಕೆ ನಿಂತರು. ಈ ವಿವಾದ ಸಂಘಟನೆಯ ಒಗ್ಗಟ್ಟನ್ನು ಒಡೆಯುವುದನ್ನು ತಪ್ಪಿಸಿದರು. ಆದರೆ ಮಾರನೇ ದಿನವೂ ಮಾರ್ಕ್ಸಿಸ್ಟರ ಬಗ್ಗೆ ಟೀಕೆ, ನನ್ನ ಮಾರ್ಕಿಸ್ಟ್ ಸಹಾನುಭೂತಿಯ ಬಗ್ಗೆ ವಿಮರ್ಶೆ ಮುಂದುವರೆಯಿತು.’

ಮತ್ತೊಂದೆಡೆ ‘ದಲಿತ ಚಳುವಳಿ ಮತ್ತು ನಾನು’ ಎಂಬ ಲೇಖನದಲ್ಲಿ ‘ದಲಿತ ಸಂಘರ್ಷ ಸಮಿತಿಯಲ್ಲಿ ನನ್ನನ್ನು ಮಾರ್ಕ್ಸ್‌ವಾದಿಯೆಂದು ಗುರುತಿಸಿದ್ದು ಅನೇಕ ಸಲ ವಾಗ್ವಾದ, ವಿವಾದಗಳಿಗೆ‌ ಕಾರಣವಾಯಿತು. ಉಳಿದ ಕಾರ್ಯಕರ್ತರು ಮಾರ್ಕ್ಸ್‌ವಾದಿಗಳನ್ನು ಸಂಶಯದಿಂದ ನೋಡತೊಡಗಿದರು. ಇದರಿಂದ ಮಾರ್ಕ್ಸ್‌ವಾದಿ ಹಿನ್ನೆಲೆಯಿಂದ ಬಂದಿದ್ದ ಜನ್ನಿ, ಎನ್ ರಾಜಣ್ಣ, ಜನಕರಾಜ, ಗೋಪಿ ಮುಂತಾದ ಗೆಳೆಯರು ಮಾನಸಿಕ ಹಿಂಸೆಯನ್ನು ಅನುಭವಿಸಿ ಕ್ರಮೇಣ ದಲಿತ ಸಂಘರ್ಷ ಸಮಿತಿಯಿಂದ ದೂರಾದರು.’

ಸಿದ್ಧಲಿಂಗಯ್ಯನವರು ಹೇಳಿದ ಈ ಸಂಗಾತಿಗಳೆಲ್ಲ ಸಿದ್ಧಲಿಂಗಯ್ಯನವರು ವಾಸಿಸುತ್ತಿದ್ದ ಪ್ರದೇಶದಲ್ಲಿಯೇ ವಾಸವಾಗಿದ್ದವರು. ಅವರ ಸಂಘಟಿಸಿದ್ದ ರಾತ್ರಿ ಶಾಲೆಗಳ ವಿದ್ಯಾರ್ಥಿಗಳು. ಅವರೊಂದಿಗೇ ಬೆಳೆದವರು. ಚಳುವಳಿಗಳಲ್ಲಿ ಸಿದ್ಧಲಿಂಗಯ್ಯನವರ ಬಲಗೈಯಾಗಿದ್ದವರು. ಜನ್ನಿಯಂತೂ ಸಿದ್ಧಲಿಂಗಯ್ಯನವರ ಕವನಗಳನ್ನು‌ ಮನಸೆಳೆಯುವಂತೆ ಹಾಡಿ ಇಡೀ ರಾಜ್ಯದಲ್ಲಿ ಪಸರಿಸಿದವರು. ಇಂತಹವರು ಹಿಂಸೆ ತಡೆಯಲಾರದೆ ದೂರಾದರು ಎಂದರೆ ಈ ಎಲ್ಲ ವಿವಾದಗಳ ಮುಖ್ಯ ಗುರಿಯಾಗಿದ್ದ ಸಿದ್ಧಲಿಂಗಯ್ಯನವರ ಪರಿಸ್ಥಿತಿ ಹೇಗಿರಬೇಡ? ಅವರು ಹೇಳುತ್ತಾರೆ ನಾನು ಕೆಲವು ಸಲ ನಿಷ್ಕ್ರಿಯನಾಗಿರಬಹುದು, ಆದರೆ ದೂರಾಗಲಿಲ್ಲ.

ಇದಕ್ಕೆ ಮುಖ್ಯ ಕಾರಣ ಅವರ ಹಾಡುಗಳಲ್ಲಿದ್ದ, ನಾನು ಹಿಂದಿನ ಲೇಖನದಲ್ಲಿ ವಿವರಿಸಿದ ಮಾರ್ಕ್ಸ್‌ವಾದ ಮತ್ತು ಅಂಬೇಡ್ಕರ್ ವಾದದ ಬೆಸುಗೆ. ಬೇರ್ಪಡಿಸಲಾಗದ ಬೆಸುಗೆ. ದಲಿತ ಸಂಘರ್ಷ ಸಮಿತಿಯ ಅಧ್ಯಯನ ಶಿಬಿರಗಳ ಭಾಷಣಗಳಲ್ಲಿ ಮಾರ್ಕ್ಸ್‌ವಾದದ ಬಗ್ಗೆ ಪ್ರಸ್ತಾಪ. ಈ ಬೆಸುಗೆಯಿಂದಾಗಿ ಜನ ಚಳುವಳಿಗಳಲ್ಲಿ ಏರ್ಪಟ್ಟ ‘ನೀಲ್- ಲಾಲ್’ ಮೈತ್ರಿ,ಅದರಿಂದ ಬೆಳೆಯುತ್ತಿದ್ದ ಚಳುವಳಿಗಳು ಇವು ಅಂಬೇಡ್ಕರ್‌ವಾದಿಗಳನ್ನು ಕಂಗೆಡಿಸಿದಂತೆ ಕಾಣುತ್ತದೆ. ಇದು ಸಿದ್ಧಲಿಂಗಯ್ಯನವರನ್ನು ಮಾರ್ಕ್ಸ್‌ವಾದವನ್ನು ಬಿಡಬೇಕು, ಇಲ್ಲ ದಲಿತ ಸಂಘರ್ಷ ಸಮಿತಿಯಿಂದ ದೂರಾಗಬೇಕು ಎಂಬ ತುಯ್ತಕ್ಕೆ ಸಿಲುಕಿಸಿದೆ.

ಅದೇ ಸಮಯದಲ್ಲಿ ಸಿದ್ಧಲಿಂಗಯ್ಯನವರಿಗೆ ಮತ್ತೊಂದು ಬಿಕ್ಕಟ್ಟು ಎದುರಾಯಿತು. ಅವರೊಡನೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ, ರಾತ್ರಿ ಶಾಲೆಗಳು, ಹಲವು ಹೋರಾಟಗಳು, ಬಂಡಾಯ ಸಾಹಿತ್ಯ ಸಂಘಟನೆ, ಸಮುದಾಯಗಳ ಜೊತೆಗೆ ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವುದರಲ್ಲಿಯೂ ಮಾರ್ಕ್ಸ್‌ವಾದಿಗಳು ಜೊತೆಗೂಡುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎಂ.ಕೆ. ಭಟ್‌ರವರು ಮಾರ್ಕ್ಸ್‌ವಾದಿ ಪಕ್ಷವನ್ನು ಬಿಟ್ಟರು. ಅದು ಸಿದ್ಧಲಿಂಗಯ್ಯನವರಿಗೂ, ಅವರ ಜೊತೆಗೆ ಸಿದ್ಧಲಿಂಗಯ್ಯನವರಿಗೆ ಆಪ್ತರಾಗಿದ್ದ ಮೋಹನ್ ಕೊಂಡಜ್ಜಿ, ಪ್ರಸನ್ನ ಮೊದಲಾದವರೂ ಕೂಡಾ ಮಾರ್ಕ್ಸ್‌ವಾದಿಗಳಿಂದ ದೂರಾದರು. ಸಿದ್ಧಲಿಂಗಯ್ಯನವರಿಗೆ ಆಪ್ತ ಸಲಹೆಗಾರರೂ ಜೊತೆಯ ಹೋರಾಟಗಾರರೂ ಆಗಿದ್ದ ಡಿ.ಆರ್. ನಾಗರಾಜ್ ಬಂಡಾಯ ಸಾಹಿತ್ಯ ಸಂಘಟನೆಯಿಂದಲೇ ಹೊರನಡೆದಿದ್ದರು. ಇದು ಸಿದ್ಧಲಿಂಗಯ್ಯನವರಿಗೆ ಮಾರ್ಕ್ಸ್‌ವಾದಿಗಳ ಜೊತೆ ಇದ್ದ ನಿಕಟ ಸಂಪರ್ಕ ತುಂಡುಗಡಿಯಲು‌ ಕಾರಣವಾಯಿತು. ನಡೆಯುತ್ತಿದ್ದ ಬಿರುಸು ಚಳುವಳಿಗಳಲ್ಲಿ ಭಾಗವಹಿಸುವಿಕೆಗೆ ತೊಡಕುಗಳುಂಟಾದವು. ಜೊತೆಗೆ
ಮಾರ್ಕ್ಸ್‌ವಾದದ ಅಧ್ಯಯನಕ್ಕೆ ಕುಂದಾಯಿತು.

ಸಿದ್ಧಲಿಂಗಯ್ಯನವರ ಕಾವ್ಯ ರಚನೆ ನಿಧಾನಗತಿಯಲ್ಲಿ ಸಾಗುತ್ತಾ, ದೀರ್ಘ ಕಾಲ ವಿರಾಮ ತೆಗೆದುಕೊಂಡದ್ದಕ್ಕೆ ಈ ಎಲ್ಲ ಸಂಗತಿಗಳು ಕಾರಣವಾದಂತೆ ಕಾಣುತ್ತದೆ. ಅವರ ಕವನಗಳ ಮೊನಚು ಮತ್ತು ಅರಿವಿನ ಮೂಲವೇ ಮಾರ್ಕ್ಸ್‌ವಾದ ಮತ್ತು ಅಂಬೇಡ್ಕರ್‌ವಾದದ ಬೆಸುಗೆ. ಅವರು ತಮ್ಮ ಜೀವನದ ಕೊನೆಯವರೆಗೆ ಈ ಇಬ್ಬರೂ ನನ್ನ ಗುರುಗಳು ಎಂದೂ, ನನಗೆ ಮಾರ್ಕ್ಸ್‌ವಾದದ ಬಗ್ಗೆ ಬಹಳ ಗೌರವವೆಂದೂ ಹೇಳುತ್ತಾ ಬಂದಿದ್ದಾರೆ.

ಅಂತಹ ಬೆಸುಗೆಯ ಆಧಾರದ ಮೇಲೆ ಕಾವ್ಯ ರಚಿಸಿದರೆ ಅವರಿಗೆ ಪ್ರಿಯವಾದ ದಲಿತ ಚಳುವಳಿಯಲ್ಲಿ ತೀವ್ರ ಟೀಕೆಗೊಳಗಾಗುತ್ತದೆ. ಇಂತಹ ಅವರ ಡಿಲೆಮ್ಮಾದಲ್ಲಿ ಅವರ ಸಾಹಿತ್ಯ ರಚನೆ ಸಿಲುಕಿ ಅವರಂತೆಯೇ ಒದ್ದಾಡಿರಬಹುದು. ದಲಿತ ಸಂಘರ್ಷ ಸಮಿತಿಯಿಂದ ನಿಷ್ಕ್ರಿಯವಾದಂತೆ ಕಾವ್ಯ ರಚನೆಯಿಂದಲೂ ನಿಷ್ಕ್ರಿಯನಾಗುವ ಮನಸ್ಥಿತಿಗೆ ಅವರು ತಲುಪಿರಬಹುದೇ ?

ಹೋರಾಟ ಜೀವಿ ಮತ್ತು ಕಾವ್ಯದ ಮೂಲಕ ಕೋಟಿ ಕೋಟಿ ಜನರೊಡನೆ ಸಂಪರ್ಕ ಸಾಧಿಸಿದ್ದ ಅವರಿಗೆ ಇಂತಹ ಅಸಹನೀಯ ಪರಿಸ್ಥಿತಿ ಎದುರಾಯಿತು. ಅದೇ ಸಮಯಕ್ಕೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ಇವರೊಡನೆ ಸಾಂಗತ್ಯ ಬಯಸಿದರು. ಇದು ಸಿದ್ಧಲಿಂಗಯ್ಯನವರು ಎದುರಿಸುತ್ತಿದ್ದ ಬದುಕಿನ ಸಂಕಟ ಹಾಗೂ ಕಾವ್ಯ ಸಂಕಟಗಳೆರಡಕ್ಕೂ ಪರಿಹಾರದಂತೆ ಕಂಡಿತೇ? ಇದೇ ಸಮಯದಲ್ಲಿಯೇ ಬಿದ್ದು ಬಿದ್ದು ನಗುವಂತಹ ಹಾಸ್ಯದ ಮಾತುಗಳ ಸಂಭಾಷಣೆಯನ್ನು ರೂಢಿಸಿಕೊಂಡರೇ? ಕಾವ್ಯದಲ್ಲಿ ಕಾಣುತ್ತಿದ್ದ ಅಭಿವ್ಯಕ್ತಿಯನ್ನು ಈ ಮಾರ್ಗಕ್ಕೆ ತಿರುಗಿಸಿಕೊಂಡರೇ?

ಇವೆಲ್ಲವೂ ಮತ್ತಷ್ಟು ಅಧ್ಯಯನಕ್ಕೊಳಗಾಗಬೇಕಾದ ಪ್ರಮೇಯಗಳಾಗಿ ನಾನಿಲ್ಲಿ ಮಂಡಿಸುತ್ತಿದ್ದೇನೆ. ಇದು ಸಿದ್ಧಲಿಂಗಯ್ಯನವರ ವರ್ತನೆಗಳ ಸಮರ್ಥನೆಯಲ್ಲ. ಇಂತಹ ಸೈದ್ಧಾಂತಿಕ, ಸಂಘಟನಾ ಬಿಕ್ಕಟ್ಟುಗಳ ನಡುವೆಯೂ ಅವರು ದಲಿತ ಹಾಗೂ ಇತರೆಲ್ಲ ಶೋಷಿತ ಸಮುದಾಯಗಳಿಗೆ ಹೊಣೆಗಾರರಾಗಿ ಈ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಬೇಕಾಗಿತ್ತು. ಪ್ರಭುತ್ವದ ಎದುರಾಗಿ ನಿಂತ ಒಬ್ಬ ಚಳುವಳಿಕಾರನಿಗೆ ಇಂತಹ ಬಿಕ್ಕಟ್ಟುಗಳು ಹಲವು ಬಾರಿ ಬಂದು ಹೋಗುತ್ತವೆ. ಇದು ನನ್ನ ವೈಯುಕ್ತಿಕ ಅನುಭವದಿಂದ ಹೇಳುತ್ತಿರುವ ಮಾತು. ಅಂತಹ ಬಿಕ್ಕಟ್ಟುಗಳನ್ನು ಜನರನ್ನು ದೃಷ್ಟಿಯಿಂದಲೇ ಪರಿಹಾರ ಕಂಡುಕೊಳ್ಳಬೇಕು.

ಸಿದ್ಧಲಿಂಗಯ್ಯ ಫೆನಾಮೆನನ್ ಅಧ್ಯಯನಕ್ಕೊಳಗಾಗಬೇಕು. ಅದರ ಏಳು ಬೀಳುಗಳೆರಡರಿಂದಲೂ ಚಳುವಳಿಗಳಿಕಾರರು ಆಳುವವರಿಗೆ ಎದುರಾದ ಸಾಹಿತಿಗಳು ಪಾಠಗಳನ್ನು ಕಲಿಯಲು ಸಾಧ್ಯವಾಗಬೇಕು.

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: