ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಕಥನ – ಇಲ್ಲಿಗೀ ಕಥೆ ಮುಗಿಯಿತು..

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

23

ಉತ್ತರ ಪುರಾಣ

ಕರೋನಾ ಒಂದು ರೀತಿಯಲ್ಲಿ ಯಾವೊಂದು ಕ್ರಾಂತಿಯೂ, ಯುದ್ಧವೂ ಉಂಟುಮಾಡಲಾರದಷ್ಟು ವಿಪರೀತ ಬದಲಾವಣೆಗಳನ್ನು ನಮ್ಮ ನಿತ್ಯದ ಬದುಕಿನಲ್ಲಿ ತಂದೊಡ್ಡಿತು. ನಮ್ಮ ಜೀವನಶೈಲಿ, ಚಿಂತನಾ ವಿಧಾನಗಳಲ್ಲಿ ಬದಲಾವಣೆಗಳಾದವು. ಕರೋನಾ ದಾಳಿ ಆರಂಭವಾಗುತ್ತಿದ್ದಂತೆಯೇ ನಮ್ಮ ರಕ್ತದ ಪಿಎಚ್ ಮಟ್ಟವನ್ನು ಹೆಚ್ಚಿಸುವ ಆ ಮೂಲಕ ಕರೋನಾ ವೈರಸ್ಸನ್ನು ಹೋಗಲಾಡಿಸುವ ಉಪಾಯವಾಗಿ ಕಷಾಯಗಳ ಸೇವನೆ ಪ್ರಾರಂಭವಾಯಿತು.

ಇದುವರೆಗೆ ನಾವು ಮರೆತೆ ಬಿಟ್ಟಿದ್ದ ಶುಂಠಿ, ಕಪ್ಪು ಮೆಣಸು, ಚಕ್ಕೆ, ಲವಂಗ ಇತ್ಯಾದಿಗಳೆಲ್ಲ ನಮ್ಮ ದಿನ ನಿತ್ಯದ ಚಹಾ ಕಾಫಿಯ ಸ್ಥಳವನ್ನು ಆಕ್ರಮಿಸಿದವು. ಇವುಗಳ ಮಹತ್ವ ಎಷ್ಟಾಯಿತೆಂದರೆ ಏರ್‌ಪೋರ್ಟ್ನಂಥ ಕಡೆಯೂ ಅಲ್ಲಿಯ ಸಿಬ್ಬಂದಿಯವರು, ಗಗನ ಸಖಿಯರು ತಿಳಿ ಸಾರನ್ನು ಪಾನೀಯವಾಗಿ ಸೇವಿಸಲಾರಂಭಿಸಿದರು. ಕರೋನಾದಿಂದಾದ ಪರಿಣಾಮಗಳಲ್ಲಿ ಪರಂಪರಾಗತ ಆಹಾರ ಪದ್ಧತಿಗಳ ಕಡೆ ನಮ್ಮ ಗಮನ ಹರಿಯುವಂತಾಗಿದ್ದು ಒಂದು ಒಳ್ಳೆಯ ಸ್ವಾಗತಾರ್ಹ ಬದಲಾವಣೆಯೇ ಸರಿ.

ಎದ್ದು ಕಾಣುವಂತ ದೊಡ್ಡ ಬದಲಾವಣೆಯೆಂದರೆ ಶಾಲಾ ಮಕ್ಕಳ ವಿದ್ಯಾಭ್ಯಾಸ. ಬೆಳಿಗ್ಗೆ ೮ ಗಂಟೆಯಾದರೆ ಎಲ್.ಕೆ.ಜಿ.ಯಿಂದ ಹಿಡಿದು ಪ್ರೈಮರಿ ಶಾಲೆಗಳವರೆಗಿನ ಮಕ್ಕಳನ್ನು ತಾಯಂದಿರೋ, ಸ್ಕೂಲಿನ ಸಹಾಯಕರೋ ಕರೆದುಕೊಂಡು ಹೋಗುತ್ತಿದ್ದ ಮತ್ತು ಮಧ್ಯಾಹ್ನ ಮೂರು, ನಾಲ್ಕುಗಂಟೆಗೆ ಶಾಲೆಯಿಂದ ವಾಪಸಾಗುತ್ತಿದ್ದ ಮಕ್ಕಳ ಕಲರವ ಈಗ ಸಂಪೂರ್ಣ ಸ್ತಬ್ಧವಾಗಿದೆ. ಈ ಮಕ್ಕಳು ಮನೆ ಸೇರುವ ಮೊದಲು ಬೀದಿಯಲ್ಲೇ ಯಾವಯಾವುದೊ ಆಟಕ್ಕೆ ತೊಡಗಿರುತ್ತಿದ್ದರು. ಒಬ್ಬರನ್ನೊಬ್ಬರು ಎಳೆದಾಡುವ ಕಿಚಾಯಿಸುವ ದೃಶ್ಯವೂ ಇರುತ್ತಿತ್ತು.

ಇಂಥ ದೃಶ್ಯ ಮತ್ತೆ ಮರುಕಳಿಸಲು ಎಷ್ಟು ದಿನ ಕಾಯಬೇಕೋ ಗೊತ್ತಿಲ್ಲ. ನಮ್ಮ ಕಾಂಪೌಂಡಿಗೇ ಅಂಟಿಕೊಂಡಂತಿರುವ ದೇವಸ್ಥಾನದ ಅಂಗಳದಲ್ಲಿನ ನೇರಳೇ ಮರದ ಹಣ್ಣುಗಳೆಲ್ಲ ಈಗ ಕಲ್ಲು ಹೊಡೆಯುವ ಹುಡುಗರಿಲ್ಲದೆ ಅನಾಥವಾಗಿ ಕೆಳಗೆ ಬಿದ್ದಿವೆ. ಯಾರೊಬ್ಬರ ಮನೆಯ ಮುಂದೆಯೂ ಮದುವೆಯ ಚಪ್ಪರಗಳು ಕಾಣುತ್ತಿಲ್ಲ. ಸಾವಿನ ಶಾಮಿಯಾನಗಳೂ ಇಲ್ಲ. ನಾಗರ ಪಂಚಮಿ, ವರಮಹಾಲಕ್ಷ್ಮೀ, ಗಣೇಶನ ಹಬ್ಬ ಹೇಗೆ ಬಂದು ಹೇಗೆ ಹೋದವೋ ಗೊತ್ತೇ ಆಗಲಿಲ್ಲ.

ನಾವಿರುವ ಪ್ರದೇಶ ಹೆಚ್ಚೂ ಕಡಿಮೆ ಗ್ರಾಮಾಂತರ ಜಿಲ್ಲೆಗಳ ವಾತಾವರಣವಿರುವಂಥ ಪ್ರದೇಶ. ಹಸುಗಳನ್ನು ಕಟ್ಟಿ ಹಾಲು ಮಾರುವವರಿಂದ ಹಿಡಿದು ತರಕಾರಿ ವ್ಯಾಪಾರಿಗಳು, ದಿನಸಿ ಅಂಗಡಿಗಳವರು, ಸಣ್ಣಪುಟ್ಟ ವ್ಯಾಪಾರಿಗಳು, ಮನೆಗೆಲಸದವರು ಹೆಚ್ಚಿಗೆ ಇರುವಂಥ ಪ್ರದೇಶ. ನಮ್ಮ ಬೀದಿಯ ತರಕಾರಿ ವ್ಯಾಪಾರಕ್ಕೆ ಮನಸೋಲದವರೇ ಇಲ್ಲ. ಬೆಲೆಯ ದೃಷ್ಟಿಯಿಂದಲೂ ವೈವಿಧ್ಯದ ದೃಷ್ಟಿಯಿಂದಲೂ ಇವು ಎಲ್ಲರ ಗಮನ ಸೆಳೆಯುತ್ತಿದ್ದವು.

ರಸ್ತೆಯ ಇಕ್ಕೆಲಗಳ ತರಕಾರಿಯ ರಾಶಿಯನ್ನು ನೋಡಿದಾಗ ತರಕಾರಿಯ ಅಗತ್ಯವಿಲ್ಲದವರಿಗೂ ಅದನ್ನು ಕೊಳ್ಳುವ ಮನಸ್ಸಾಗುತ್ತಿತ್ತು. ನಾನಂತೂ ಯಾವ ಮಾಲ್ ತೆರೆಯಲಿ, ಅಲ್ಲಿ ಇದಕ್ಕಿಂತ ಕಡಿಮೆ ಬೆಲೆಗೇ ಸಿಗಲಿ, ನೇರವಾಗಿ ಹಳ್ಳಿಗಾಡಿನಿಂದ ಬಂದ ವ್ಯಾಪಾರಿಗಳ ಹತ್ತಿರ ಅವರ ಕಷ್ಟ ಸುಖ ವಿಚಾರಿಸುತ್ತಾ ತರಕಾರಿ ಕೊಳ್ಳುವುದನ್ನೇ ಇಂದಿಗೂ ಮುಂದುವರೆಸಿದ್ದೇನೆ. ಆದರೆ ಕರೋನಾ ಆಗಮನದ ನಂತರ ಈ ಜೀವಂತ ವಾತಾವರಣ ಮರೆಯಾಗಿಬಿಟ್ಟಿದೆ. ಹಸಿರು ತರಕಾರಿಗಳ ಹೊದಿಕೆ ಯಿಲ್ಲದೆ ಬೀದಿಯ ಇಕ್ಕೆಲಗಳು ಭಣಗುಡುತ್ತಿವೆ. ಈಗ ಎಲ್ಲೋ ಒಂದೆರಡು ತರಕಾರಿ ಅಂಗಡಿಗಳು, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರುವುದನ್ನು ಬಿಟ್ಟರೆ ತರಕಾರಿಯ ಜಾತ್ರೆಯು ಸದ್ಯಕ್ಕೆ ಗತವೈಭವವೆಂದೇ ಹೇಳಬೇಕು.

ಬೇರೆ ಬೇರೆ ಊರುಗಳಿಂದ, ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿದವರ ಸಂಖ್ಯೆ ಹೆಚ್ಚಾಗುತ್ತಾ ಬಂದಂತೆ ಅವರ ಊಟೋಪಹಾರಗಳಿಗಾಗಿ ಅನೇಕ ಸಣ್ಣಪುಟ್ಟ ಉಪಹಾರಗೃಹಗಳು, ಖಾನಾವಳಿಗಳು ಆರಂಭಗೊಂಡಿದ್ದವು. ಈಗ ಇವುಗಳ ಗ್ರಾಹಕರೆಲ್ಲ ತಮ್ಮ ತಮ್ಮ ಊರುಗಳಿಗೆ ತೆರಳಿದ ಮೇಲೆ ಇವರ ವ್ಯಾಪಾರಕ್ಕೂ ತಡೆಯುಂಟಾಗಿ ಅವರೂ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದರು. ಎಷ್ಟೊ ಮಂದಿ ಶಾಶ್ವತವಾಗಿ ತಮ್ಮ ಬದುಕನ್ನು ಕಳೆದುಕೊಂಡಿದ್ದರು. ನಮ್ಮ ಜನಪದ ಕಥೆಗಳಲ್ಲಿ ಮಾಯಾವಿಯೊಬ್ಬ ತನ್ನ ಮಂತ್ರದಂಡ ಬೀಸಿ ಎಲ್ಲವೂ ಕಲ್ಲಾಗಲೀ, ಎಂದು ಹೇಳಿದಾಗ ಆಗುವಂತೆ ಜನಜೀವನವೆಲ್ಲ ಸ್ಥಬ್ಧಗೊಂಡಿತು.

ಕರೋನಾದಿಂದ ಅತಿಹೆಚ್ಚು ನಷ್ಟಕ್ಕೊಳಗಾದವರಲ್ಲಿ ಬ್ಯೂಟಿಪಾರ್ಲರ್‌ಗಳೂ ಸೇರಿವೆ. ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂಬಂತಾಗಿದ್ದ ಇವುಗಳಿಗೆ, ಸೋಂಕಿನ ಭಯದಿಂದಾಗಿ ಜನ ಅತ್ತ ಕಡೆ ಮುಖ ಹಾಕಲೇ ಇಲ್ಲ. ಹೀಗಾಗಿ ಅಬ್ಬರದ ಬ್ಯುಸಿನೆಸ್‌ಗೆ ಕತ್ತಲಾವರಿಸತೊಡಗಿತು. ಜೀವನೋಪಾಯಕ್ಕಾಗಿ ಈ ವಿದ್ಯೆಯನ್ನು ಕಲಿತು ಅದನ್ನೇ ನೆಚ್ಚಿಕೊಂಡವರಿಗೆ ಆದಾಯವೇ ಇಲ್ಲದಂತಾಯಿತು. ೫೦-೬೦ ಸಾವಿರದಷ್ಟು ಬಾಡಿಗೆಯನ್ನು ಸಲೀಸಾಗಿ ಕೊಡುವಷ್ಟು ಸುಸ್ಥಿತಿಯಲ್ಲಿದ್ದ ಎಷ್ಟೋ ಪಾರ್ಲರ್‌ಗಳು ಈಗ ಈ ದುಬಾರಿ ಬಾಡಿಗೆಯನ್ನು ತೆರಲಾರದೆ ಸಂಪೂರ್ಣ ಮುಚ್ಚಿಹೋಗಿವೆ.

ಕರೋನಾದಿಂದಾಗಿ ಆಭರಣಗಳ ಭರಾಟೆಯೂ ತಗ್ಗಿಹೋಯಿತು. ಬಹುಶಃ ಟಿ.ವಿ. ದಾರಾವಾಹಿಗಳು ಪ್ರಾರಂಭವಾದ ನಂತರ ನಮ್ಮ ಮಹಿಳೆಯರು ಈ ಕೃತಕ ಆಭರಣಗಳಿಗೆ ಎಷ್ಟು ಶರಣಾಗಿದ್ದರೆಂದರೆ ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದು ಹಳೆಯ ಫ್ಯಾಶನ್ ಎಂಬಂತಾಗಿ ಚಿನ್ನದ ಒಡವೆಗಳಿಗಿಂತ ಕೃತಕ ಆಭರಣಗಳ ‘ಬೆಲೆ’ ಹೆಚ್ಚಾಗತೊಡಗಿತ್ತು. ಬೀದಿಗೆ ನಾಲ್ಕೈದರಂತೆ ತಲೆ ಎತ್ತಿದ್ದ ಕೃತಕ ಆಭರಣಗಳ ಅಂಗಡಿಗಳು, ಅವುಗಳಲ್ಲಿ ಸದಾ ಗಿಜಿಗುಡುತ್ತಿದ್ದ ಹೆಂಗಳೆಯರ ದೃಶ್ಯ ಈಗ ಕಣ್ಮರೆಯಾಗಿ ಹೋಯಿತು.

ಇಂಥ ಅಂಗಡಿಗಳು ಹಾಗೂ ವ್ಯಾಪಾರಗಳಲ್ಲಿ ಝಗಮಗಿಸುವ ದೀಪಗಳ ಬೆಳಕಿರುತ್ತಿದ್ದ ಕಡೆ ಈಗ ಕತ್ತಲಾವರಿಸಿದೆ. ಈಗ ಅಷ್ಟೋ ಇಷ್ಟೋ ಉಳಿದುಕೊಂಡಿರುವುದು ಹಣ್ಣು ತರಕಾರಿಗಳ ವ್ಯಾಪಾರ ಹಾಗೂ ದಿನಸಿ ಅಂಗಡಿಗಳು. ಕೊನೆಗೂ ಮನುಷ್ಯರಿಗೆ ಬೇಕಾಗಿರುವುದು ಈ ಮೂಲಭೂತ ಅವಶ್ಯಕತೆಗಳೇ ಹೊರತು ಹೊರಗಿನ ಥಳುಕು ಬಳುಕುಗಳಲ್ಲ ಎಂಬುದನ್ನು ಈ ಬದಲಾವಣೆಗಳು ಸೂಚಿಸುತ್ತಿರುವಂತಿದೆ.
ವಾಟ್ಸಪ್‌ನಲ್ಲಿ ಇತ್ತೀಚೆಗೆ ಯಾರೋ ಹಂಚಿಕೊಂಡಿದ್ದ ಒಂದು ಮಾತು ಹೀಗಿದೆ:
Teacher of the year
Award goes to Covid 19.
Taught us what live is about
Simplicity, Spirituality and uncertainity

| ಮುಗಿಯಿತು |

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: