‘ಕವಿತೆ ಬಂಚ್’ನಲ್ಲಿ ವಿಶ್ವನಾಥ ಎನ್ ನೇರಳಕಟ್ಟೆ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ವಿಶ್ವನಾಥ ಎನ್ ನೇರಳಕಟ್ಟೆ

ನಾನು ವಿಶ್ವನಾಥ… ಕನ್ನಡ ಉಪನ್ಯಾಸಕನಾಗಿದ್ದೇನೆ. ಡಾ. ಲಕ್ಷ್ಮೀದೇವಿ ಎಲ್. ಅವರ ಮಾರ್ಗದರ್ಶನದಲ್ಲಿ ‘ಡಾ| ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದ ಕುರಿತು ಪಿಎಚ್.ಡಿ. ಸಂಶೋಧನೆಯನ್ನು ನಡೆಸುತ್ತಿದ್ದೇನೆ. ನಾಲ್ಕು ಕೃತಿಗಳು ಪ್ರಕಟಗೊಂಡಿವೆ.

1. ಅಸ್ಪೃಶ್ಯರಾಗಿದ್ದೇವೆ!

ನಾವೆಲ್ಲರೂ ಈಗ ಬದಲಾಗಿದ್ದೇವೆ
ಪಕ್ಕದ ಮನೆಯವರ ಕೆಮ್ಮಿಗೂ
ತಲೆಕೆಡಿಸಿಕೊಳ್ಳುವಷ್ಟು ಸಂವೇದನಾಶೀಲರಾಗಿದ್ದೇವೆ
ಗತದ ವೈಭವವನು ನೆನೆದು
ಮರುಕಪಡುವ ಅಸಹಾಯಕರಾಗಿದ್ದೇವೆ

ನಾವೆಲ್ಲರೂ ಈಗ ಬಂಧಿಗಳಾಗಿದ್ದೇವೆ
ನಾಲ್ಕು ಗೋಡೆಗಳ ನಡುವೆ ಸಿಲುಕಿದ್ದೇವೆ
ತಪ್ಪಿಲ್ಲದೆಯೂ, ಬೇರೊಬ್ಬರ ತಪ್ಪಿಗೆ ಶಿಕ್ಷೆಯನ್ನು
ಅನುಭವಿಸುವ ಬಲಿಪಶುಗಳಾಗಿದ್ದೇವೆ

ನಾವೆಲ್ಲರೂ ಈಗ ಹೃದಯವಂತರಾಗಿದ್ದೇವೆ
ಪಟ್ಟಣದಿಂದ ಹಳ್ಳಿಗೆ ಮರಳಿ ಬಂದು
ಬದುಕನ್ನು ರೂಪಿಸಿಕೊಳ್ಳುವವರಾಗಿದ್ದೇವೆ
ಕಳೆದುಕೊಂಡ ಮನುಷ್ಯ ಸಂಬಂಧಗಳಿಗೆ
ಮರುಜೀವ ಕೊಡುವ ದೊಡ್ಡ ಮನಸ್ಸು ಮಾಡಿದ್ದೇವೆ
ನಾವೆಲ್ಲರೂ ಈಗ ಮನುಷ್ಯರಾಗುತ್ತಿದ್ದೇವೆ!

ನಾವೆಲ್ಲರೂ ಈಗ ಸಮಾನರಾಗಿದ್ದೇವೆ
ಪಕ್ಕದಲ್ಲಿರುವವರನ್ನು ಮುಟ್ಟಲು ಹೇಸುತ್ತಿದ್ದೇವೆ
ಪಕ್ಕದವರಿಂದ ಮುಟ್ಟಿಸಿಕೊಳ್ಳಲು ಹೆದರುತ್ತಿದ್ದೇವೆ
ಹೌದು, ಕೊರೋನಾ ಕೊಟ್ಟ ಹೊಡೆತಕ್ಕೆ
ನಾವೆಲ್ಲರೂ ಈಗ ಅಸ್ಪೃಶ್ಯರಾಗಿದ್ದೇವೆ!

2. ಕವಿತೆ ಹುಟ್ಟುತ್ತದೆ

ಕವಿತೆ ಹುಟ್ಟುತ್ತದೆ
ಬುದ್ಧನಾದಾಗ ಅಲ್ಲ
ಪಾಮರನಾದಾಗ

ಕವಿತೆ ಹುಟ್ಟುತ್ತದೆ
ನಾಯಕನಾದಾಗ ಅಲ್ಲ
ಸೇವಕನಾದಾಗ

ಕವಿತೆ ಹುಟ್ಟುತ್ತದೆ
ಸರ್ವಜ್ಞನಾದಾಗ ಅಲ್ಲ
ಮಗುವಾದಾಗ

ಕವಿತೆ ಹುಟ್ಟುತ್ತದೆ
ಮೆದುಳು ಓಡಿದಾಗ ಅಲ್ಲ
ಹೃದಯ ಭಾರವಾದಾಗ

ಕವಿತೆ ಹುಟ್ಟುತ್ತದೆ
ದೇವರಾದಾಗ ಅಲ್ಲ
‘ಮನುಷ್ಯ’ನಾದಾಗ

3. ಯುದ್ಧ ಮತ್ತು ಬುದ್ಧ

ನಿನ್ನೆ ರಾತ್ರಿ ಎಂಟು ಮುಕ್ಕಾಲರವರೆಗೂ
ಮೈಗೆ ಮೈ ತಾಗಿಸಿ
ಇಸ್ಪೀಟಾಡುತ್ತಾ ಕುಳಿತಿದ್ದವರು
ಎರಡೂ ಮುಕ್ಕಾಲು ಗುಂಪುಗಳಾಗಿ
ಇಂದು ಕಚ್ಚಾಡಿಕೊಳ್ಳುತ್ತಿದ್ದಾರೆ

ಕಲ್ಲಿನೇಟಿನ ಬಿಸಿಗೆ ತಾರಸಿ ಮೇಲಿದ್ದ
ಪಾರಿವಾಳದ ರೆಕ್ಕೆ ಮುರಿಯುತ್ತದೆ
ಕಿವಿಗೂ ಉಸಿರುಗಟ್ಟುವಂತೆ
ಯುದ್ಧದ ರಣಕಹಳೆ
ಊದಲ್ಪಡುತ್ತದೆ; ಅವರುಗಳ ಎದೆಯಲ್ಲಿ

ಕಿಟಕಿಗೆ ಗಲ್ಲ ಆನಿಸಿ ನೋಡುತ್ತಿರುವ
ನನ್ನೆದೆಯ ಆಕಾಶವಾಣಿಯಲ್ಲಿ
ಶಾಂತಿಯ ವಾರ್ತೆ ಬಿತ್ತರಗೊಳ್ಳುತ್ತದೆ-
‘ಬುದ್ಧಂ ಶರಣಂ ಗಚ್ಛಾಮಿ….’

ತಕ್ಷಣಕ್ಕೆ ನನ್ನ ತಲೆ ತೂಕ ಹಾಕುತ್ತದೆ
ಹೌದು! ಬುದ್ಧನಿಲ್ಲ ಅಲ್ಲಿ
ಅವನನ್ನೊಯ್ಯಬೇಕಾಗಿದೆ ನಾನು-
ಮಿಡಿತ ಮರೆತ ಹೃದಯಗಳ ಒಳಕ್ಕೆ

ಹುಡುಕತೊಡಗುತ್ತೇನೆ ಅಟ್ಟ ಸೇರಿರುವ
ಬುದ್ಧನ ಮೂರ್ತಿಯನ್ನು
ಅಷ್ಟು ಸುಲಭವಾಗಿ ಸಿಕ್ಕೀತೇ?
ಹ್ಞಾ! ಸಿಕ್ಕಿತು! ಸಿಕ್ಕಿತು!

ನನ್ನ ಕೈಯ್ಯೊಳಗಣ ಬುದ್ಧ
ರಣಾಂಗಣ ಸೇರಿಕೊಳ್ಳುತ್ತಾನೆ
ಗುಂಪುಗಳ ಮಧ್ಯೆ ನಿಂತ
ನಾನೀಗ ಖಾಲಿ ಕ್ಯಾಸೆಟ್ಟು
ದೊಣ್ಣೆ, ಮಚ್ಚುಗಳ ಭಯಕ್ಕೆ
ನನ್ನ ಪದಕೋಶ ಬರಿದಾಗುತ್ತದೆ

ಅಂದೂ ಒಂದು ದಿನ ಬುದ್ಧ ನಿಂತಿದ್ದನಂತೆ
ಹೀಗೆಯೇ-
ನೀರಿಗಾಗಿ ಕಚ್ಚಾಡುತ್ತಿರುವವರ ನಡುವೆ
ಆದರೆ ನನ್ನಂತೆ ಮಾತು ಮರೆತಿರಲಿಲ್ಲ
ಕೇಳಿದ್ದನಂತೆ- ‘ನೀರಿನ ಮೌಲ್ಯ ಹೆಚ್ಚೋ?
ಅಲ್ಲಾ ನಿಮ್ಮ ರಕ್ತದ್ದೋ?’
ಮುಂದೆ ನಡೆದದ್ದೆಲ್ಲಾ ಇತಿಹಾಸ
ಯೋಚಿಸಿದ ನನ್ನ ಮೆದುಳು
ಆಸೆಬುರುಕತನದ ಟಾನಿಕ್ಕನ್ನು ನೆಕ್ಕುತ್ತದೆ-
ಹಾಗಾದರೆ ನಾನೂ ಬುದ್ಧನಾಗಬಾರದೇಕೆ?

ನಾನೂ ಕೇಳಿಯೇಬಿಟ್ಟೆ- ‘ನಿಮಗೆ ಧರ್ಮ ಮುಖ್ಯವೋ?
ನಿಮ್ಮ ರಕ್ತವೋ?’
ಉತ್ತರವಿಲ್ಲ
ಕಣ್ಣುಗಳು ಮಾತ್ರ ಮಿಕಮಿಕ

ಬ್ಲಡ್‌ ಬ್ಯಾಂಕ್‌ಗಳು ಬಂದ ಮೇಲೆ
ರಕ್ತದ ಮೌಲ್ಯ ಕುಸಿದಿದೆಯೋ ಏನೋ?
ನಾನಿನ್ನೂ ಅಪ್‌ಡೇಟ್‌ ಆಗಿಲ್ಲ; ದಡ್ಡ

ಮೆದುಳು ಮುಕ್ಕಾಲು ಹಾದಿ ಸವೆಸುವಾಗಲೇ
ಕಲ್ಲೊಂದು ತೂರಿ ಬರುತ್ತದೆ ನನ್ನ ಕಡೆಗೆ
ಹಣೆಯಲ್ಲಿ ಕೆಂಪು ಶಾಸನ ಕೆತ್ತಲ್ಪಡುತ್ತದೆ

ನಾನೀಗ ಓಡತೊಡಗುತ್ತೇನೆ
ಮತ್ತು……

ನನ್ನ ಜೊತೆಗೆ ಬುದ್ಧನೂಕೂಡಾ!

4. ಭಾವನೆಗಳಿಗೆ ರುಜುವಾತಿಲ್ಲವೆಂದು

ನನ್ನ ಕವಿ ಹೃದಯಕ್ಕೆ
ಕಿವಿಯಾದರು ಅವರು
ಚಪ್ಪಾಳೆಯ ಸದ್ದು
ಹೊಗಳಿಕೆಯ ಗುದ್ದು
ಬೆನ್ನಲ್ಲೇ ತೂರಿಬಂತು ಪ್ರಶ್ನೆ-
‘ನೀನೇ ಬರೆದದ್ದೆಂದು ಸಾಕ್ಷಿ ಏನು?’

ಹೌದಲ್ಲಾ!
ನನ್ನಲ್ಲೂ ಈಗ ಅದೇ ಪ್ರಶ್ನೆ-
‘ನಾನೇ ಬರೆದದ್ದೆಂದು ಸಾಕ್ಷಿ ಏನು?’
ಹ್ಞಾ! ಹೊಳೆಯಿತು ನೋಡಿ ಈಗ
ಸುರಿಸಿದ್ದು ಹೃದಯ
ಆರಿಸಿದ್ದು ಮೆದುಳು
ಓಡಿತು ಕೈ
ಓಡಿಸಿದವ ನಾನು
ತಲೆಗೆ ಹೊಳೆದಷ್ಟನ್ನು ಉತ್ತರಿಸಿ
ನಾನು ನಿರಾಳನಾದೆ

ಉಹ್ಞೂ! ಅವರಲ್ಲಿನ್ನೂ ಅನುಮಾನದ ಹೊಗೆ ಉಸಿರಾಡುತ್ತಿದೆ
ನನ್ನೊಳಗಣ ಕೋಪ ಮರಿಯಿಟ್ಟಿತು
ಬಗೆದುಬಿಡಲೇ ನನ್ನೆದೆಯನ್ನು-
ಆಂಜನೇಯನ ಹಾಗೆ?
ಕಾಣಿಸಲೇ ಮೂರ್ತಗೊಂಡಿರುವ ಕವಿತೆಗಳನ್ನು?

ಇಲ್ಲ
ಅದೂ ಸಾಧ್ಯವಿಲ್ಲ
ತೋರಿಸಲಾದರೂ ಏನಿದೆ ಅಲ್ಲಿ?!
ಹೃದಯದಿಂದ ಹೊರ ಜಿಗಿದ ಕವಿತೆಗಳು
ಬೆಚ್ಚಗೆ ಬಚ್ಚಿಟ್ಟುಕೊಂಡಿವೆ ಹಾಳೆಗಳಲ್ಲಿ
ಮತ್ತು ಕೇಳಿಸಿಕೊಂಡವರ ಎದೆಗಳಲ್ಲಿ
ನನ್ನ ಹೃದಯವೀಗ ಬೆತ್ತಲೆ

ನನ್ನುತ್ತರಕ್ಕೆ ಕಾದು ಕುಳಿತ
ಅವರ ಕಣ್ಣುಗಳಲ್ಲೀಗ
ಎರಡು ವರ್ಷದ ಕೂಸುಗಳು
ಹೊರಳಾಡತೊಡಗಿವೆ

ನಾನೀಗ ತಿಳಿಸಬೇಕಾಗಿದೆ ಅವರಿಗೆ-
‘ಭಾವನೆಗಳಿಗೆ ರುಜುವಾತಿಲ್ಲ’ವೆಂದು

5. ಹೊಸ್ತಿಲಿನ ಹೊರಗೆ ಮತ್ತು ಒಳಗೆ

ಮನೆ ಹೊಸ್ತಿಲು ದಾಟಿ
ವೇದಿಕೆ ಮೇಲೆ ಮೈಕ್ ಮುಂದೆ
ನಿಂತ ಅವನು ವಟಗುಟ್ಟುತ್ತಾನೆ-
‘ಯತ್ರ ನಾರ‍್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾಃ’
ಬಾಯಿ ಪಾಠವನ್ನು ಭಟ್ಟಿ ಇಳಿಸಿದ
ಹೆಮ್ಮೆಯಿಂದ ಆಕಾಶಕ್ಕೇರುತ್ತಾನೆ
ದುಪ್ಪಟ್ಟು ಚಪ್ಪಾಳೆಗಳನ್ನು ಜೇಬಿಗಿಳಿಸಿಕೊಂಡು
ವೇದಿಕೆ ಇಳಿಯುತ್ತಾನೆ ಮತ್ತು
ಮೆಟ್ಟಿಲು ಜಾರುತ್ತಾನೆ

ಕ್ಷಣ ಮೊದಲು ಅವನಾಡಿದ್ದ ಮಾತುಗಳು
ಅವನ ಮನೆಯ ಹೊಸ್ತಿಲಲ್ಲಿಯೇ ನೇಣುಹಾಕಿಕೊಳ್ಳುತ್ತವೆ
ಪಕ್ಕದ ಮನೆಯ ವಿಧವೆಯನ್ನು ಕಂಡ ಕಣ್ಗಳು
ಬಟ್ಟೆ ಕಳಚಿಕೊಂಡ ದುಶ್ಯಾಸನರಾಗುತ್ತವೆ
ಲಿಮಿಟ್ಟು ಇಲ್ಲದ ಮನಸ್ಸು
ಬಟ್ಟೆಯೊಳಗಣ ಬಿಸಿಲೋಕಕ್ಕೂ ಲಗ್ಗೆಯಿಡುತ್ತದೆ
ಹಲವು ಬಾರಿ
ಬೇಲಿ ಹಾರುವ ಗೂಳಿಯಾಗುತ್ತಾನೆ
‘ರಸಿಕತನ’ವೆಂಬ ಅಗ್ಗದ ಮುಖವಾಡವನ್ನು
ಮತ್ತೂ ಬಿಗಿಯಾಗಿ ಕಟ್ಟಿಕೊಳ್ಳುತ್ತಾನೆ

ಮತ್ತೆ ಹೊಸ್ತಿಲು ದಾಟಿ
ಮತ್ತೆ ಮೈಕ್ ಮುಂದೆ ನಿಂತಾಗ
ಮತ್ತದೇ ಅವನು; ಮತ್ತದೇ ಮಾತು-
‘ಯತ್ರ ನಾರ‍್ಯಸ್ತು………………
…………………….. ದೇವತಾಃ’
ಮತ್ತದೇ ಚಪ್ಪಾಳೆಗಳು
ಅವನ ಜೇಬು ಸೇರಿಕೊಳ್ಳುತ್ತವೆ

6. ತೆವಳುವುದನ್ನು ಮರೆತ ನಾನು

ನಾನು ತೆವಳುತ್ತಾ ಸಾಗುತ್ತಿದ್ದೆ
‘ಎದ್ದು ನಿಂತರೆ ಚೆನ್ನಾಗಿತ್ತು’ ಎಂದರವರು

ಎದ್ದು ನಿಂತೆ
ಅವರ ಬಾಯಿಗಳು ಸದ್ದು ಮಾಡಿದವು
‘ನಿಂತರೆ ಸಾಲದು, ನಡೆಯಬೇಕು’

ನಡೆಯುತ್ತಾ ಹೊರಟೆ ಮತ್ತು
ಎಡವಿದೆ
‘ಎಡವದೆಯೇ ನಡೆ’ ಎಂಬ ಸಲಹೆ

ಎಡವದೆಯೇ ನಡೆಯುವುದನ್ನು ರೂಢಿಸಿಕೊಂಡೆ
‘ಈಜುವುದು ಗೊತ್ತಿಲ್ಲವಲ್ಲ ನಿನಗೆ?’
ಎಲುಬಿಲ್ಲದ ನಾಲಗೆಗಳು ನನ್ನ ಕಿವಿಗೆ ಮುತ್ತಿಕ್ಕಿದವು

ಮೀನಿನ ಅಪ್ಪನಂತೆ ಈಜಿದೆ
ಮತ್ತುಅವರ ಮುಖ ನೋಡಿದೆ
ಅವರೊಳಗಣ ಅತೃಪ್ತಆತ್ಮ ಪಿಸುಗುಟ್ಟಿತು
‘ಹಾರಲಾರೆ ನೀನು’

ಸವಾಲೇ ರೆಕ್ಕೆಗಳಾದವು ನನಗೆ
ಹಾರತೊಡಗಿದೆ ಮತ್ತು
ಹಾರುತ್ತಲೇಇದ್ದೆ

ಕೆಳಗನ್ನು ನೋಡಿದರೆ
ಮತ್ತೆ ತುಟಿಗಳ ಪಿಟಿಪಿಟಿ-
‘ಈಗ ತೆವಳು ನೀನು, ಸಾಧ್ಯವಾದರೆ’

ತೆವಳ ಹೊರಟ ನಾನೀಗ ಪರಾಜಿತ
ಏಕೆಂದರೆ, ಹಾರುವ ತರಾತುರಿಯಲ್ಲಿ
ಮರೆತೇಬಿಟ್ಟಿದ್ದೇನೆ- ತೆವಳುವುದನ್ನು

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: