ನಾನು 11 ದಿನ ಜೈಲಿನಲ್ಲಿದ್ದೆ..

ashok shettar

ಅಶೋಕ್ ಶೆಟ್ಟರ್ 

ಸಾವಕಾಶವಾಗಿ ನಾನು ಹೊದ್ದ ಕಂಬಳಿಯಿಂದ ನನ್ನನ್ನು ಅನಾವರಣಗೊಳಿಸಿಕೊಂಡು ನಿದ್ರೆಯಿಂದ ವಾಸ್ತವಕ್ಕೆ ಬರುತ್ತಿದ್ದ ನನ್ನ ಮುಂದೆ ಮೈಯೆಲ್ಲ ನಗುವಾಗಿ ನಿಂತು ತಮಾಷೆಯ ಧ್ವನಿಯಲ್ಲಿ ಹೇಳುತ್ತಿದ್ದ ಮಹೇಂದ್ರ ಸಿಂಗ್ ಸಿಸೋಡಿಯಾ, “ಅಶೋಕ್ ಭೈ ಮೈ ಏಕ್ ಸಿನಿಮಾ ಬನಾವೂಂಗಾ. ಪೆಹಲಾ ಶಾಟ್ ಏ ಹೋಗಾ ಕೀ ಏಕ ಆದಮಿ ದಿಲ್ಲೀ ಕೀ ಗರ್ಮೀ ಕೀ ಮೌಸಮ್ ಮೇ ಸುಬಹ ದಸ್ ಸಾಡೇ ದಸ ಬಜೇ ಆಹಿಸ್ತಾ ಆಹಿಸ್ತಾ ಕಂಬಲ್ ಕೋ ಸರಕಾಕೆ ಉಠ್ ರಹಾ ಹೈ..” (ಅಶೋಕಣ್ಣ, ನಾನು ಒಂದು ಸಿನಿಮಾ ಮಾಡ್ತೀನಿ. ಅದರ ಮೊದಲ ದೃಶ್ಯ ಏನಪ್ಪಾ ಅಂದ್ರೆ ಒಬ್ಬ ವ್ಯಕ್ತಿ ದಿಲ್ಲಿಯ ಬೇಸಿಗೆಯಲ್ಲಿ ಮುಂಜಾನೆ ಹತ್ತು ಹತ್ತೂವರೆ ಹೊತ್ತಿಗೆ ತಾನು ಹೊದ್ದ ಕಂಬಳಿಯಿಂದ ನಿಧಾನವಾಗಿ ಹೊರಗೆ ಬರುತ್ತಿದ್ದಾನೆ”) ಮಹೇಂದ್ರಸಿಂಗ್ ತನಗೋ ನನಗೋ ಬೇಸರವಾದಾಗ ತೊಡೆಯ ಮೇಲೆ ಅಡ್ಡಡ್ದವಾಗಿ ಢೋಲಕ್ ಇಟ್ಟುಕೊಂಡು ಬಾರಿಸುತ್ತ ಫೈಜ್ ಅಹ್ಮದ್ ಫೈಜ್ ನ “ಗುಲೋಮೇ ರಂಗ್ ಭರೇ ಬಾದ್ ನೌ ಬಹಾರ ಚಲೇ” ಅಥವಾ ಬೇರಾವುದೋ ಗಝಲ್ ಗಳನ್ನು ಹಾಡಿ ರಂಜಿಸುತ್ತಿದ್ದ ನನ್ನ ಹಾಸ್ಟೆಲ್ ನಲ್ಲಿಯ ನೆರೆಹೊರೆ (ನೇಬರ್).

mind prison“ಚಲ್ ಹಟ್”ಎಂದು ಹುಸಿ ಕೋಪ ನಟಿಸುತ್ತ ದೆಹಲಿಯ ತಿಹಾರ್ ಜೇಲಿನ ಅಂಗಳದಿಂದ ನಾನು ಮೇಲೆದ್ದು ಕಂಬಳಿಯನ್ನು ಝಾಡಿಸಿ ಮಡಿಸಿದೆ.ಈ ತಿಹಾರ್ ಜೇಲಿನ ಹನ್ನೊಂದು ದಿನಗಳ ವಾಸದ ನೆನಪಾದದ್ದು ಮೊನ್ನೆ ನನ್ನ ಫೈಲುಗಳನ್ನು ಜಾಲಾಡುತ್ತಿದ್ದಾಗ ಸಿಕ್ಕ ನನ್ನದೊಂದು ಹಳೆಯ ಲೇಖನದಿಂದಾಗಿ. ನಾನು ದೆಹಲಿಯಲ್ಲಿ ಇದ್ದಾಗ “ಸುಧಾ” ವಾರಪತ್ರಿಕೆಯಲ್ಲಿ “ನಾನು ಓದಿದ ಪುಸ್ತಕ” ಎಂಬ ಅಂಕಣವೊಂದು ಬರುತ್ತಿತ್ತು. ಅದರಲ್ಲಿ ನಾನು ಫ್ರಾಂಜ್ ಕಾಫ್ಕನ ಮೆಟಾಮಾರ್ಫಸಿಸ್ ಕುರಿತು, ಜೇಲಿನ ಪರಿಸರದಲ್ಲಿ ಅದರ ಓದು ನನಗೆ ನೀಡಿದ್ದ ವಿಶಿಷ್ಟ ಅನುಭವದ ಕುರಿತು ಬರೆದಿದ್ದೆ. ನಾನದನ್ನು ಓದಿದ್ದು ಅದೇ ತಿಹಾರ್ ಜೇಲಿನಲ್ಲಿ. ಇಷ್ಟಕ್ಕೂ ತಿಹಾರ್ ಜೇಲಿನಲ್ಲಿ ನಾವು ಏಕಿದ್ದೆವು, ಹೇಗಿದ್ದೆವು ಎಂಬುದಕ್ಕೆ ಬರುವದಾದರೆ:

ಅವು ೧೯೮೩ ರ ಕಡು ಬೇಸಗೆಯ ದಿನಗಳು. ಸಳಸಳ ಮೈ ಬೆವೆಯುತ್ತಿದ್ದ ಆ ದಿನಗಳಲ್ಲಿ ಜೆ ಎನ್ ಯು (ಜವಾಹರಲಾಲ್ ನೆಹರೂ ಯೂನಿವರ್ಸಿಟಿ) ಯ ವಿದ್ಯಾರ್ಥಿ ಸಂಘ ವಿಶ್ವವಿದ್ಯಾಲಯದ ಕುಲಪತಿಗಳನ್ನು ಘೇರಾವ್ ಮಾಡುವ ಕಾರ್ಯಕ್ರಮ ಹಾಕಿಕೊಂಡ ಭಾಗವಾಗಿ ಕುಲಪತಿ ಶ್ರೀವಾತ್ಸವ ತಮ್ಮದೇ ಮನೆಯಲ್ಲಿ ವಿದ್ಯಾರ್ಥಿಗಳ ದಿಗ್ಬಂಧನದಲ್ಲಿ ದಿಕ್ಕುತೋಚದಂತೆ ಕುಳಿತಿದ್ದರು. ಅವರ ಮನೆಯ ಪಾವರ್ ಸಪ್ಲೈ ಬಂದ್ ಮಾಡಲಾಗಿತ್ತು. ಅವರಿಗೆ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಎಂಥ ಚಪಾತಿಗಳನ್ನು ಕೊಡಮಾಡಲಾಗುತ್ತದೆ ಎಂಬುದನ್ನು ಮನಗಾಣಿಸಲು ಹಾಸ್ಟೆಲ್ ನಿಂದಲೇ ಊಟ ತರಿಸಿ ತಿನ್ನುವಂತೆ ಒತ್ತಾಯಿಸಲಾಗುತ್ತಿತ್ತು. ಹಾಸ್ಟೆಲ್ಲಿನಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಹಲವು ತೊಂದರೆಗಳ ಕುರಿತು ಹಲವಾರು ಸಲ ಗಮನ ಸೆಳೆದರೂ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಕಾಣದಾದಾಗ ಜೆ ಎನ್ ಯು ಸ್ಟುಡೆಂಟ್ಸ್ ಯೂನಿಯನ್ ( JNUSU) ಹಮ್ಮಿಕೊಂಡಿದ್ದ ಈ ತೀವ್ರತರ ಕ್ರಮ ದಿನಪತ್ರಿಕೆಗಳ ದೆಹಲಿ ಅವತರಣಿಕೆಗಳಲ್ಲಿ ಪ್ರತಿನಿತ್ಯ ವರದಿ ಆಗುತ್ತಲೇ ಇತ್ತು.

ದೆಹಲಿಯ ಲೆಫ್ಟನೆಂಟ್ ಗವರ್ನರ್ ಆಗಿದ್ದ ಜಗಮೋಹನ್ ( ಆಮೇಲೆ ಅವರು ಜಮ್ಮು ಕಾಶ್ಮೀರ್ ರಾಜ್ಯಪಾಲರಾಗಿ ಹೋದರು) ಈ ಬೆಳವಣಿಗೆಗಳನ್ನು ಗಮನಿಸುತ್ತಲೇ ಇದ್ದರು. ದೆಹಲಿಯ ಕಾಂಗ್ರೆಸ್ ಆಡಳಿತಕ್ಕೆ ಎಡಪಂಥೀಯರ ಭದ್ರಕೋಟೆಯಾಗಿದ್ದ ಜೆ ಎನ್ ಯೂ ಆವರಣದಲ್ಲಿ ಮಧ್ಯಪ್ರವೇಶಕ್ಕೆ ಒಂದು ಕಾರಣ ಬೇಕಾಗಿತ್ತು. ಕೊನೆಗೂ ಜಗಮೋಹನ್ ಕಮಾಂಡೋ ಪಡೆಯೊಂದನ್ನು ಕುಲಪತಿ ಶ್ರೀವಾತ್ಸವ ಅವರ ಮನೆಯ ಆವರಣದೊಳಕ್ಕೆ ನುಗ್ಗಿಸಿದರು.

ಕುಲಪತಿಗಳನ್ನು ಕೂಡಿಹಾಕಿದ್ದ ಕೋಣೆಯ ಬಾಗಿಲನ್ನು ಒಳಗಿನಿಂದ ಬೋಲ್ಟ್ ಮಾಡಿ ಅದಕ್ಕೆ ಬೆನ್ನು ತಾಕಿಸಿ ನಿಂತ ಹುಡುಗರ ಬೆನ್ನು ಚೆದುರುವಂತೆ ಹೊರಗಿನಿಂದ ಬಾಗಿಲನ್ನು ಗುದ್ದಿಕೊಂಡು ಒಳಬಂದ ಕಮಾಂಡೋಗಳು ಕ್ಷಣಾರ್ಧದಲ್ಲಿ ಕುಲಪತಿಗಳನ್ನು ಅಜ್ಞಾತ ಸ್ಥಳವೊಂದಕ್ಕೆ ಹೊತ್ತೊಯ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಮನಬಂದಂತೆ ಲಾಟಿಯಿಂದ ಥಳಿಸಿದರು. ಒಂದೆಡೆ ಹತ್ತಾರು ಪೋಲಿಸರ ನಡುವೆ ಸಿಗೆಬಿದ್ದು ಹೊಡೆಸಿಕೊಳ್ಳುತ್ತಿದ್ದ ವಿಜಯಾ ವೆಂಕಟರಾಮನ್ ಹಾಗೂ ರೇಣು ಠಾಕೂರ್ ಎಂಬಿಬ್ಬರು ಹುಡುಗಿಯರ ಪರವಾಗಿ ಪೋಲಿಸರೆಡೆ ಮುಖ ಮಾಡಿ ಕೂಗಾಡಿದ ನನಗೂ ಹೊಡೆತಗಳು ಬಿದ್ದವು. ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿಯಾಗಿ ಓಡಿದರು. ಪೋಲಿಸರು ಟಿಯರ್ ಗ್ಯಾಸ್ ಶೆಲ್ ಗಳನ್ನು ಫೈರ್ ಮಾಡುತ್ತಲೇ ಇದ್ದರು. ಆ ಮೇಲೆ ಮತ್ತಷ್ಟು ಪೋಲಿಸ್ ಪಡೆ ಆಗಮಿಸಿತು.

tv controlವಿಶ್ವವಿದ್ಯಾಲಯದ ಆವರಣದಲ್ಲಿ ಪೋಲಿಸರು ಮತ್ತು ಅವರ ಬೂಟಿನ ಸದ್ದು ಕೇಳುತ್ತ ಇನ್ನು ಅಲ್ಲಿ ಇರುವದು ಕ್ಷೇಮಕರವಲ್ಲ ಎಂದು ಅರ್ಥ ಮಾಡಿಕೊಂಡ JNUSU ಆವರಣದೊಳಕ್ಕೆ ಪೋಲಿಸರ ಆಗಮನ ಮತ್ತು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ ಇವನ್ನು ಪ್ರತಿಭಟಿಸಿ ಎಲ್ಲಾ ವಿದ್ಯಾರ್ಥಿಗಳು ಶಾಂತರೀತಿಯಿಂದ ಸ್ವತ: ತಾವೇ ಬಂಧನಕ್ಕೊಳಗಾಗಬೇಕೆಂದು ಕರೆ ಕೊಟ್ಟಿತು. ಐವತ್ತರಷ್ಟು ಹುಡುಗಿಯರನ್ನೂ ಒಳಗೊಂಡು ಸುಮಾರು ಮುನ್ನೂರೈವತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಂಧನಕ್ಕೊಳಗಾದರು. ಎಲ್ಲರನ್ನೂ ವ್ಯಾನ್ ಗಳಲ್ಲಿ ತುಂಬಿಕೊಂಡು ಒಂದು ಪೋಲಿಸ್ ಠಾಣೆಯ ಆವರಣದೊಳಕ್ಕೆ ತರಲಾಯಿತು. ವಿದ್ಯಾರ್ಥಿಗಳ ಹೆಸರು ನೋಂದಾಯಿಸಿಕೊಳ್ಳಲು ಕುಳಿತ ಅಧಿಕಾರಿಗೆ ಬಹುಪಾಲು ಎಲ್ಲರೂ ಯಾವುದೋ ಸುಳ್ಳು ಹೆಸರುಗಳನ್ನು ಹೇಳಿದರು.

ಯಾವನೋ ಜಾನವರ್ ಸಿಂಗ್ ಎಂದ. ನಿಮ್ಮ ತಂದೆಯ ಹೆಸರೇನು ಎಂದರೆ ನಾಮವರ್ ಸಿಂಗ್ ಎಂದ. ಅದು ಎಕ್ಚುಅಲಿ ಪ್ರಸಿದ್ಧ ಹಿಂದಿ ಸಾಹಿತ್ಯ ವಿಮರ್ಶಕರ ಹೆಸರಾಗಿತ್ತು. ಇನ್ಯಾವನೋ ತನ್ನ ತಂದೆಯ ಹೆಸರು ಎರಿಕ್ ಫ್ರಾಮ್ ಎಂದು ಹೇಳಿದ. ನನ್ನ ಸರದಿ ಬಂದಿತು. ಬೋಲೋ ತುಮ್ಹಾರಾ ನಾಮ್ ಕ್ಯಾ ಹೈ? ಎಂದ ನೋಂದಾಯಿಸಿಕೊಳ್ಳುವಾತ. ನಾನು “ರುದ್ರಪ್ಪಾ ಗಂಗಪ್ಪಾ ಶಿವಬಸಣ್ಣವರ್” ಎಂದೆ. “ಠೀಕ್ ಹೈ ಆಗೇ ಬಡೋ” ಎಂದ. ಹೀಗೆ ಏನೋ ಬಾಯಿಗೆ ಬಂದ ಯಾವುದೋ ಫಿಕ್ಶಿಸಿಯಸ್ ಹೆಸರು ಹೇಳುವದು ಮುಸಿಮುಸಿ ನಗುತ್ತ ಈಚೆ ಬರುವದು ಎಲ್ಲ ಆದ ಮೇಲೆ ಅಲ್ಲಿಂದ ಮತ್ತೆ ವ್ಯಾನೊಂದರಲ್ಲಿ ತುಂಬಿಕೊಂಡು ನಮ್ಮನ್ನು ತಿಹಾರ್ ಜೈಲಿನ ಕಿರಿದಾದ ಬಾಗಿಲಿನ ಒಳಗೆ ಸಾಗಿಸಲಾಯಿತು.

ನಾವು ಬಂಧನಕ್ಕೆ ಒಳಗಾಗಿದ್ದೇವೆ ಎಂದು ನಾವು ಭಾವಿಸಿದ್ದೆವು. ಆದರೆ ಊಂಹೂಂ, ಲೆಫ್ಟನೆಂಟ್ ಗವರ್ನರ್ ಜಗಮೋಹನ್ ಅವರ ಆಡಳಿತದ ಪ್ರಕಾರ ನಾವು, ಲೂಟಿ, ಬೆಂಕಿ ಹಚ್ಚುವಿಕೆ, ಕುಲಪತಿಗಳ ಕೊಲೆ ಯತ್ನ, ಹೆಣ್ಣುಮಕ್ಕಳ ಮೈಮೇಲೆ ಕೈಯಾಡಿಸುವಿಕೆಯೇ ಮೊದಲಾದ (arson, rioting, looting, attempt to murder vice-chancellor, molestation) ಅಪಾದನೆಗಳಡಿ ಬಂಧಿಸಲ್ಪಟ್ಟು ನ್ಯಾಯಾಂಗ ವಶಕ್ಕೆ ಒಪ್ಪಿಸಲ್ಪಟ್ಟವರಾಗಿದ್ದೆವು..! ಇದರಲ್ಲಿ ಮೊಲೆಸ್ಟೆಶನ್ (ಹೆಂಗಸರ ಮೈಮೇಲೆ ಕೈಯಾಡಿಸಿದ) ಅಪಾದನೆಯನ್ನು ವಿದ್ಯಾರ್ಥಿನಿಯರ ವಿರುದ್ಧವೂ ಮಾಡಲಾಗಿತ್ತು ಎನ್ನುವದು ಶ್ರೀಮಾನ್ ಜಗಮೋಹನ್ ಅವರ ಆಡಳಿತದ ಸ್ಪೇಶಾಲಿಟಿ..!!!ಮುಂದೊಮ್ಮೆ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಈ ಕೇಸಿನ ವಿಚಾರಣೆ ನಡೆಸುತ್ತಿದ್ದ ಜಡ್ಜ್ ಹುಡುಗಿಯರ ಮೇಲೆ ಮೊಲೆಸ್ಟೇಷನ್ ಕೇಸ್ ಹಾಕಿದ್ದು ನೋಡಿ ಪಕಪಕ ನಕ್ಕಿದ್ದರು..!

 

ಶುರು ಆಯ್ತು ಜೈಲು ವಾಸ. ಒಂದು ವಿಶಾಲವಾದ ಹಾಲ್ ನಲ್ಲಿ ಎಲ್ಲರೂ ಸಾಲುಸಾಲಾಗಿ ಮಲಗುವ ವ್ಯವಸ್ಥೆ ಮಾಡಲಾಯಿತು. ಅಲ್ಲಿ ಪರಸ್ಪರ ದೋಷಾರೋಪನೆ, ಚರ್ಚೆ ವಾಗ್ವಾದ ಇತ್ಯಾದಿ ಶುರುವಾಯಿತು. ಆ ಸಲ ಮಾರ್ಕಿಸ್ಟ್ ವಿದ್ಯಾರ್ಥಿಗಳ ಸಂಘಟನೆಗಳು ಇಲೆಕ್ಷನ್ ನಲ್ಲಿ ಸೋತು ಸೋಶಲಿಸ್ಟ್ ಸಂಘಟಣೆ JNUSU ನ ಚುಕ್ಕಾಣಿ ಹಿಡಿದಿತ್ತು. ನಳಿನರಂಜನ್ ಮೊಹಂತಿ ಎನ್ನುವಾತ ಅಧ್ಯಕ್ಷನಾಗಿದ್ದ. ಅವನ ಸುತ್ತ ಇದ್ದವರೆಲ್ಲ ಅಗ್ಗದ ಜನಪ್ರಿಯತೆಯ ಸ್ವರೂಪದ ಕಾರ್ಯಕ್ರಮಗಳನ್ನು ಹಾಕಿಕೊಂಡು ಹೋರಾಟ ಮಾಡಬೇಕೆನ್ನುವ ಅಭಿಮತದವರಾಗಿದ್ದರು. ಸಣ್ಣ ಪುಟ್ಟ ಕಾರಣಕ್ಕೆಲ್ಲ ಆಡಳಿತವನ್ನು ಕೆಣಕುವದು ಪ್ರಾರಂಭವಾಗಿತ್ತು. .ಜೈಲಿನೊಳಗೇ ನಮ್ಮ ವಿಶ್ವವಿದ್ಯಾಲಯದಲ್ಲಿ ಆಗುತ್ತಿದ್ದಂತೆ ಜನರಲ್ ಬಾಡಿ ಮೀಟಿಂಗ್,ವಿವಿಧ ಸಂಘಟನೆಗಳನ್ನು ಪ್ರತಿನಿಧಿಸುವವರ ಭಾಷಣಬಾಜಿ ಎಲ್ಲ ಶುರುವಾದವು. ಎ.ಐ.ಎಸ್.ಎಫ್, ಎಸ್ಎಫ್.ಐ, ಪಿ ಎಸ್ ಓ, ಪಿ ಎಸ್ ಎಫ್, ಫ್ರೀ ಥಿಂಕರ್ಸ್, ಎನ್.ಎಸ್.ಯು.ಐ ಮತ್ತು ಸೋಷಲಿಸ್ಟರ ಗುಂಪುಗಳ ಜನರೆಲ್ಲ ಇದ್ದುದರಿಂದ ವಾಗ್ವಾದಗಳೂ ಇರುತ್ತಿದ್ದವು. ಪ್ರತಿನಿತ್ಯ ಪತ್ರಿಕೆಗಳಲ್ಲಿ ಈ ಘಟನಾವಳಿಗಳ ಕುರಿತು ಪ್ರಕಟವಾಗುತ್ತಿದ್ದ ಸಂಪಾದಕೀಯ,ವರದಿ ಇತ್ಯಾದಿಗಳ ವಾಚನವಾಗುತ್ತಿತ್ತು. ಹೊರಗೆ ನಮ್ಮನ್ನು ಬೇಲ್ ಮೇಲೆ ಬಿಡಿಸಲು ಪ್ರಯತ್ನಗಳು ನಡೆದಿದ್ದವು.

ನಮಗೆ ಬಡಿಸಿದ ಆಹಾರ ಕೆಟ್ಟದಾಗಿತ್ತು. ನಾವು ಅದನ್ನು ಉಣ್ಣಲು ನಿರಾಕರಿಸಿದೆವು. ನಮ್ಮ ಕೇಸನ್ನು ಕೋರ್ಟಿನಲ್ಲಿ ಯಾರೋ ಮೂವ್ ಮಾಡಿ ನಮ್ಮ ಬೇಡಿಕೆಯಂತೆ ರೇಶನ್ ಒದಗಿಸಿ ನಮಗೆ ಬೇಕಾದ ಅಡುಗೆ ನಾವೇ ಮಾಡಿಕೊಳ್ಳಲು ಅನುವಾಗುವಂತೆ ತೀರ್ಪು ಹೊರಬೀಳಿಸಿದರು. ಒಂದು ಫುಡ್ ಕಮೀಟಿ ರಚಿತವಾಯಿತು, ಪೂರಿ, ಖೀರು, ಪಲಾವ್ ಹೀಗೆ ತರಹೇವಾರಿ ಅಡುಗೆ ಮಾಡಿದರು ಅಡುಗೆ ಮಾಡುವ ಪ್ರತಿಭೆ ಉಳ್ಳವರು. ಆಮೇಲೆ ಒಂದು ಸ್ಪೋರ್ಟ್ಸ್ ಕಮೀಟಿ ರಚಿತವಾಯಿತು. ವಾಲಿಬಾಲ್ ಹೊಡೆಯುತ್ತಿದ್ದ ಎದುರಾಳಿ ಟೀಮಿನವರಿಗೆ “ಔರ್ ಖೋಲ್ ಕೇ ದೋ” ಎಂಬ ಡಬಲ್ ಮೀನಿಂಗ್ ಉಳ್ಳ ಮಾತಾಡುತ್ತ ಅಜಾನುಬಾಹು ಶರೀರದ ದಿಗ್ವಿಜಯ ಸಿಂಗ್ ನಗಿಸುತ್ತಿದ್ದ. (ನಂತರ ಕೇಂದ್ರದಲ್ಲಿ ಪ್ರಧಾನಿ ಚಂದ್ರಶೇಖರ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾದ ಆತ ಅಕಾಲಿಕವಾಗಿ ಮರಣವನ್ನಪ್ಪಿದ)

ಈ ಮಧ್ಯೆ ಒಂದು ಘಟನೆಯಾಯಿತು. ಪ್ರತಿ ಮಧ್ಯಾಹ್ನ ಜೈಲಿನಲ್ಲಿದ್ದ ತಮ್ಮ ಗೆಳೆಯರನ್ನು ಗೆಳತಿಯರನ್ನು ನೋಡಲು ಜೈಲಿನಿಂದ ಹೊರಗಿದ್ದ ಜೆ ಎನ್ ಯು ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರತೊಡಗಿದರು. ಒಂದು ದೊಡ್ಡ ಹಾಲ್ ನಲ್ಲಿ ಎಲ್ಲರೂ ನಿಗದಿತ ಅವಧಿಯಲ್ಲಿ ಬೆರೆತಾದ ನಂತರ ಅವರು ವಾಪಸ್ ಹೋಗುತ್ತಿದ್ದರು. ಅವರನ್ನು ಗುರುತಿಸಲು ಅವರ ಮೊಳಕೈ ಮುಂಗೈ ನಡುವಿನ ಒಂದು ಭಾಗದಲ್ಲಿ ಒಂದು ಇಂಕು ಸವರಿದ ರಬ್ಬರ್ ಸ್ಟಾಂಪ್ ಮುದ್ರೆಯೊಂದನ್ನು ಹಾಕಿ ಜೈಲು ಸಿಬಂದಿ ಅವರನ್ನು ಒಳಗೆ ಬಿಡುತ್ತಿದ್ದರು. ಮತ್ತು ಹೊರಹೋಗುವಾಗ ಅದನ್ನು ಪರೀಕ್ಷಿಸಿ ಅವರನ್ನು ಹೊರಗೆ ಬಿಡುತ್ತಿದ್ದರು. ಅದ್ಯಾರಿಗೆ ಆ ಐಡಿಯಾ ಹೊಳೆಯಿತೋ ಒಂದು ದಿನ ಏನಾಯಿತೆಂದರೆ ಹಾಗೆ ಬಂದವರು ಸಳಸಳ ಬೆವೆಯುವ ಆ ಬೇಸಗೆಯ ಮಧ್ಯಾಹ್ನ ಬೆವರಿನ ತೇವವಿದ್ದ ಆ ಸ್ಟಾಂಪ್ ಮಾರ್ಕ್ ಅನ್ನು ಜೈಲಿನಲ್ಲಿದ್ದ ತಮ್ಮ ಗೆಳೆಯರ ಕೈಯ್ಯ ಅದೇ ಭಾಗಕ್ಕೆ ಒತ್ತಿ ಅದು ಅಲ್ಲಿ ಮೂಡುವಂತೆ ಮಾಡಿದ ಪರಿಣಾಮವಾಗಿ ಜೈಲಿನಲ್ಲಿದ್ದ ಹಲವರು ಗೇಟಿನಲ್ಲಿದ್ದ ಸಿಬ್ಬಂದಿಗೆ ಕೈ ತೋರಿಸಿ ಭೇಟಿಯಾಗಲು ಬಂದವರಂತೆ ಹೊರಗೆ ದಾಟಿಕೊಂಡರು.

prisonಜೈಲಿನ ಇನ್ನೊಂದು ಭಾಗದಲ್ಲಿದ್ದ ಹುಡುಗಿಯರಲ್ಲೂ ಕೆಲವರು ಈ ಉಪಾಯ ಅನುಸರಿಸಿ ಜಾಗ ಖಾಲಿ ಮಾಡಿದ್ದರು. ಸಂಜೆ ವಾರ್ಡರ್ ಇದ್ದಕ್ಕಿದ್ದಂತೆ ಕರಗಿದ ಕೈದಿಗಳ ಸಂಖ್ಯೆಯ ಬಗ್ಗೆ ಸಂಶಯಿತನಾಗಿ ತಲೆ ಎಣಿಕೆ ಮಾಡಿದ್ದೇ ಮಾಡಿದ್ದು. ಮರುದಿನ ಎಲ್ಲ ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಗಳಲ್ಲೂ “ತಿಹಾರ್ ಜೇಲಿನಿಂದ ಕೈದಿಗಳಾಗಿದ್ದ ನೂರಕ್ಕೂ ಮಿಕ್ಕಿ ಜೆ ಎನ್ ಯೂ ವಿದ್ಯಾರ್ಥಿಗಳು ಪರಾರಿ, ಜೇಲು ವಾರ್ಡರ್ ಸಸ್ಪೆಂಡ್” ಎಂಬುದೇ ಲೀಡ್ ಸುದ್ದಿ. ಹಾಗೆ ನಾಪತ್ತೆ ಆದವರನ್ನು ಹುಡುಕುವ ಪ್ರಯತ್ನ ನಡೆಯಿತಾದರೂ ಅವರು ತಮ್ಮ ನಿಜವಾದ ಹೆಸರನ್ನು ದಾಖಲಿಸಿದ್ದರೇ ತಾನೇ ಪತ್ತೆಯಾಗುವದು? ಆದರೆ ಜೈಲ್ ಆಡಳಿತ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡು ಒಂದು ಮುಚ್ಚಳಿಕೆ ಬರೆಸಿಕೊಂಡು ನಮ್ಮ ನಿಜವಾದ ಹೆಸರುಗಳನ್ನು ನಾವು ಹೇಳುವಂಥ ಸ್ಥಿತಿಯನ್ನು ನಿರ್ಮಿಸಿತು.

ಹಾಗೆ ಮಧ್ಯಾಹ್ನ ತನ್ನ ಗೆಳೆಯನೊಬ್ಬನನ್ನು ಭೇಟಿಯಾಗಲು ಬಂದ ಹುಡುಗಿಯೊಬ್ಬಳ ಕೈಯಲ್ಲಿಯೇ ನಾನು ಫ್ರಾಂಜ್ ಕಾಫ್ಕನ ಮೆಟಾಮಾರ್ಫಸಿಸ್ ಪುಸ್ತಕವನ್ನು ನೋಡಿದ್ದು. ಕನ್ನಡದಲ್ಲಿ ಗತಿ-ಸ್ಥಿತಿ ಎಂಬ ಶೀರ್ಷಿಕೆಯಲ್ಲಿ ಅನುವಾದಗೊಂಡಿದ್ದ ಅದನ್ನು ಕೆಲ ವರ್ಷಗಳಿಗೆ ಮೊದಲು ಓದಿದ್ದೆನಾದರೂ ಮತ್ತೊಮ್ಮೆ ಓದಬೇಕೆನ್ನಿಸಿತು. ನನ್ನ ಆಸಕ್ತಿಯನ್ನು ಗುರುತಿಸಿ ಯೂ ಕೆನ್ ಟೇಕ್ ಇಟ್ ಎಂದು ಆಕೆ ಅದನ್ನು ನನಗೆ ನೀಡಿದ್ದಳು. ಅದರ ಕುರಿತೇ ನಾನು ಸುಧಾದಲ್ಲಿ ಬರೆದಿದ್ದೆ.

ಆಮೇಲೆ ಯಾರೋ ಬೇಲ್ ಗೆ ವ್ಯವಸ್ಥೆ ಮಾಡಿದರು. ಹಾಗೆ ನಾನೂ ಬೇಲ್ ಮೇಲೆ ಹೊರಬಂದೆ. ಹನ್ನೊಂದು ದಿನಗಳ ವಾಸದ ನಂತರ ಮುಕ್ತವಾಗಿದ್ದ ಜಗತ್ತಿಗೆ ಬಂದಂತಾಗಿತ್ತು. ಬಿಡುಗಡೆಯಾಗುವ ಹೊತ್ತಿಗೆ ರಾತ್ರಿಯಾಗಿದ್ದರಿಂದ ವಿಠ್ಠಲಭಾಯಿ ಪಟೇಲ್ ಹೌಸ್ ನಲ್ಲಿ ಕೇರಳದ ಸಿ.ಪಿ.ಎಂ ಪಕ್ಷದ ಸಂಸದರೊಬ್ಬರ ಕೋಣೆಯಲ್ಲಿ ನಾನು ರಾತ್ರಿಯನ್ನು ಕಳೆದು ಮರುದಿನ ರಾತ್ರಿ ಜೆ ಎನ್ ಯೂ ಗೆ ಹೋದಾಗ ವಿಶ್ವವಿದ್ಯಾಲಯವನ್ನು ಅನಿರ್ದಿಷ್ಟಾವಧಿಯ ವರೆಗೆ ಮುಚ್ಚಿ ಹಾಕಿದ್ದರಿಂದಾಗಿ ಕ್ಯಾಂಪಸ್ ನಲ್ಲಿ ಯಾರೂ ಇರಲಿಲ್ಲ. ಹಾಸ್ಟೆಲ್ ಗೆ ಹೋದರೆ ಅದೂ ನಿರ್ಜನ. ಮರುದಿನ ಕೋಣೆಯಲ್ಲಿ ಒಂದು ಕಾಗದದ ಚೂರೂ ಉಳಿಯದಂತೆ ಎಲ್ಲ ಮೂಟೆ ಕಟ್ಟಿಕೊಂಡು ನಾನೂ ಹಾಸ್ಟೆಲ್ ಖಾಲಿ ಮಾಡಿ NIEPA ನಲ್ಲಿ ಯಾವುದೋ ಒಂದು ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುತ್ತ ಅಲ್ಲೆ ಕ್ವಾರ್ಟರ್ಸ್ ನಲ್ಲಿದ್ದ ಗೆಳೆಯನ ಫ್ಲ್ಯಾಟ್ ಗೆ ಸ್ಥಳಾಂತರಗೊಂಡೆ.

ಆ ಮೇಲೆ ಕೆಲಕಾಲ ನಮ್ಮ ಕೇಸ್ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ನಡೆಯಿತು. ನಾನೂ ಒಂದೆರಡು ಸಲ ಹೋಗಿಬಂದೆ. ಕೊನೆಗೊಮ್ಮೆ ಶ್ರೀಮಾನ್ ರಾಜೀವ ಗಾಂಧಿಯವರು ತಮ್ಮ ತಾಯಿ ಇಂದಿರಾ ಗಾಂಧಿಯವರ ಹತ್ಯೆಯ ಕುರಿತು ದೇಶಾದ್ಯಂತ ಇದ್ದ ಅನುಕಂಪದ ಅಲೆಯ ಪರಿಣಾಮವಾಗಿ ಅಭೂತಪೂರ್ವ ಬಹುಮತದಿಂದ ಆಯ್ಕೆಯಾಗಿ ಪ್ರಧಾನಿಯಾದ ಮೇಲೆ ಒಂದು ದಿನ ನಮ್ಮೆಲ್ಲರ ಮೇಲಿದ್ದ ಮೊಕದ್ದಮೆಗಳನ್ನು ಹಿಂದೆಗೆದುಕೊಳ್ಳುವ ಪೇಪರಿಗೆ ಸಹಿ ಹಾಕುವ ಮುಖಾಂತರ ನಾವು, ಅದರಲ್ಲೂ ವಿಶೇಷವಾಗಿ ಐ ಎ ಎಸ್, ಐ ಪಿ ಎಸ್ ಹುದ್ದೆಗಳ ಅಕಾಂಕ್ಷಿಗಳಾಗಿ ಲಿಖಿತ ಹಾಗೂ ಮೌಖಿಕ ಪರೀಕ್ಷೆ ಪಾಸಾಗಿದ್ದವರು, ನಿರಾಳವಾಗಿ ಉಸಿರಾಡಲು ಕಾರಣರಾದರು

ನನ್ನ ಅನುಭವಗಳ ಸರಪಣಿಯಲ್ಲಿ ಹೀಗೆ ದೆಹಲಿಯ ತಿಹಾರ್ ಎಂಬ ಕುಖ್ಯಾತ ಜೈಲಿನಲ್ಲಿ ನಾನು ಕಳೆದ ಹನ್ನೊಂದು ದಿನಗಳ ವಾಸ್ತವ್ಯದ ಕೊಂಡಿಯೊಂದು ಸೇರ್ಪಡೆಯಾಯಿತು…

‍ಲೇಖಕರು Admin

February 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. NS Shankar

    ‘ಗತಿ ಸ್ಥಿತಿ’ ಮೆಟಮಾರ್ಫಾಸಿಸ್ ಕೃತಿಯ ಅನುವಾದವಲ್ಲ. ಅದೊಂದು ಸ್ವತಂತ್ರ ಕೃತಿ. ಅದೇ ಲೇಖಕ (ಗಿರಿ ಅರ್ಥಾತ್ ಗಿರಿ ಹೆಗಡೆ) ಕಾಫ್ಕಾನ ಕೃತಿಯನ್ನು ರೂಪಾಂತರ ಎಂದು ಭಾಷಾಂತರಿಸಿದ್ದಾರೆ. ಗತಿ ಸ್ಥಿತಿಯ ಮೇಲೂ ಕಾಫ್ಕಾನ ಶೈಲಿಯ ದಟ್ಟ ಪ್ರಭಾವ ಇರುವುದು ನಿಜ.

    ಪ್ರತಿಕ್ರಿಯೆ
  2. ashok shettar

    ಎನ್. ಎಸ್. ಶಂಕರ್ ಅವರು ಹೇಳುತ್ತಿರುವದು ನಿಜ. ಮೆಟಮಾರ್ಫಾಸಿಸ್ ನ ಕನ್ನಡ ಅನುವಾದದ ಶೀರ್ಷಿಕೆ ರೂಪಾಂತರ. ಮೂರು ವರ್ಷದ ಹಿಂದೆ ಅವಧಿಗೆ ಅಂಕಣ ಬರೆಯುತ್ತಿದ್ದಾಗ ಈ ಬರಹ ಬರೆಯುವ ಸಂದರ್ಭದಲ್ಲಿ ಕನ್ ಫ್ಯೂಜ್ ಮಾಡಿಕೊಂಡು ಗಿರಿಯವರದೇ ಹೆಚ್ಚು ಪರಿಚಿತ ಕೃತಿ ಗತಿಸ್ಥಿತಿ ಯನ್ನು ಕಾಫ್ಕನಿಗೆ ತಳಕುಹಾಕಿದ್ದೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: