ಅಶೋಕ್ ಶೆಟ್ಟರ್ ಕಾಲಂ : ಪ್ರಜಾಪ್ರಭುತ್ವ ಚಿರಾಯುವಾಗಲಿ

ಅಂಕಣ ಬರವಣಿಗೆಯ ಎಲ್ಲಾ ಆಯಾಮಗಳನ್ನೂ ಶೋಧಿಸುತ್ತಾ, ದುಡಿಸಿಕೊಳ್ಳುತ್ತಾ ಇದ್ದವರು ಅಶೋಕ್ ಶೆಟ್ಟರ್. ಅಂಕಣ ಬರೆಯಿರಿ ಎಂದಾಗ ’ಅಯ್ಯೋ, ಪ್ರತಿ ವಾರ ಬರೆಯುವಷ್ಟು ಏನಿರುತ್ತೆ’ ಎಂದವರು, ಪ್ರತಿವಾರ ಆಸಕ್ತಿ ಕೆರಳಿಸುವ, ಯೋಚನೆಗೆ ಹಚ್ಚುವ ಬರಹಗಳನ್ನೇ ಕೊಟ್ಟರು, ಆ ಮೂಲಕ ಬದುಕಿನ, ಸಮಾಜದ ಎಲ್ಲಾ ಮಗ್ಗುಲುಗಳನ್ನೂ ತೆರೆದಿಟ್ಟರು. ೪೦ ಅಂಕಣ ಬರೆದ ಕೂಡಲೆ, ’ಸಾಕು, ಇನ್ನು ನಿಲ್ಲಿಸ್ತೇನೆ’ ಅಂತ ಹೆದರಿಸುತ್ತಾ ಇದ್ದವರು, ಈಗ ’ಐವತ್ತಾಯಿತು, ಸಾಕು, ನನಗೆ ಬೇರೆ ಕೆಲಸಗಳ ಹೊರೆ ತುಂಬಾ ಇದೆ’ ಅಂದಿದ್ದಾರೆ. ಅವರನ್ನು ಬಿಟ್ಟುಕೊಡುವ ಮನಸ್ಸಿಲ್ಲದಿದ್ದರೂ, ಅವರ ಮಾತಿಗೆ ಇಲ್ಲ ಅನ್ನಲಾಗದೆ ’ಹೂ’ ಅನ್ನುತ್ತಿದ್ದೇವೆ. ಅವರ ಪ್ರೀತಿಗೆ, ವಿಶ್ವಾಸಕ್ಕೆ ’ಅವಧಿ’ಯ ವಂದನೆಗಳು. ಅವರ ಮತ್ತಷ್ಟು ಬರಹಗಳ ನಿರೀಕ್ಷೆ ಇದೆ ನಮಗೆ.

***


(“ಅವಧಿಯ ಪ್ರಿಯ ಓದುಗರೇ. ಕಳೆದ ಒಂದು ವರ್ಷದಿಂದ ನಾನು “ಅವಧಿ” ಗೆ ಬರೆಯುತ್ತ ಬಂದಿರುವ ಅಂಕಣಗಳ ಸರಣಿಯ ಕೊನೆಯ -ಐವತ್ತನೆಯ- ಬರಹ ಇಲ್ಲಿದೆ. ನನ್ನ ಬಾಲ್ಯ, ವಿದ್ಯಾರ್ಥಿದೆಸೆ, ಯೌವನ, ಪ್ರೇಮ, ನನ್ನ ಪೋಷಕರು, ನನ್ನ ಕಾಯಿಲೆಗಳು, ನಾನು ಕಲಿತ ವಿದ್ಯಾಸಂಸ್ಥೆಗಳು, ನನ್ನ ಸ್ನೇಹಗಳು, ವೃತ್ತಿಸಂಬಂಧಿ ಅನುಭವದ ತಮಾಷೆಗಳು, ನಾನು ಓದಿದ ಪುಸ್ತಕಗಳು, ಪ್ರವಾಸಗಳು, ಸಮಕಾಲೀನ ವಿದ್ಯಮಾನಗಳು, ಸಾಮಾಜಿಕ ಜಾಲತಾಣ, ರಾಜಕಾರಣ ಹೀಗೆ ಏನೆಲ್ಲ ವಿಷಯಗಳ ಕುರಿತು ಬರೆಯುತ್ತ ಬಂದೆ. ಓದಿದ, ಮೆಚ್ಚಿದ, ಪ್ರಶ್ನಿಸಿದ, ಟೀಕಿಸಿದ, ಒಟ್ಟಾರೆಯಾಗಿ ನನ್ನ ಬರಹಗಳಿಗೆ ಸ್ಪಂದಿಸಿದ ನಿಮಗೆಲ್ಲ ನನ್ನ ಧನ್ಯವಾದ ಸಲ್ಲುತ್ತದೆ.
ಚರಿತ್ರೆ ಪಾಠ ಮಾಡಿಕೊಂಡು, ಕವಿತೆ ಬರೆದುಕೊಂಡಿದ್ದ ನನ್ನನ್ನು ಅವಧಿಗೆ ಅಂಕಣ ಬರೆಯುವಂತೆ ಕೇಳಿ ಗದ್ಯ ಬರವಣಿಗೆಯ ಸಾಧ್ಯತೆಗಳನ್ನು ಶೋಧಿಸಲು ಅವಕಾಶವಿತ್ತ ಗೆಳೆಯ, ಸಂಗಾತಿ ಜಿ.ಎನ್.ಮೋಹನ್ ಮತ್ತು ಪ್ರತಿ ಮಂಗಳವಾರ ಫೋನ್ ಮಾಡಿ “ಸರ್ ನಮಸ್ತೆ. ಅಂಕಣ…” ಎಂದು ನೆನಪಿಸಿ. “ಆಯ್ತು, ಒಂಭತ್ತೂ ಮುಕ್ಕಾಲು ಗಂಟೆ ಹೊತ್ತಿಗೆ ಕಳಿಸ್ತೇನೆ” ಎಂದರೆ “ಓಕ್ಕೆ ಸರ್” ಎಂದು ಹೇಳಿ ಮರುದಿನ ಅದನ್ನು ಸಿಂಗಾರ ಬಂಗಾರ ಮಾಡಿ ಅವಧಿಯಲ್ಲಿ ಕಂಗೊಳಿಸುವಂತೆ ಮಾಡುತ್ತಿದ್ದ ಸಂಧ್ಯಾರಾಣಿಯವರಿಗೆ ನಾನು ಕೃತಜ್ಞ)
ಭಾರತ ಮತ್ತೊಂದು ಸಾರ್ವತ್ರಿಕ ಚುನಾವಣೆಗಳ ಹೊಸ್ತಿಲಲ್ಲಿದೆ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ಭಾರತದ ಚುನಾವಣೆ ಪ್ರಕ್ರಿಯೆ ಕೂಡ ಅತ್ಯಂತ ವಿರಾಟ್ ಸ್ವರೂಪದ್ದು ಮತ್ತು ಸವಾಲಿನದ್ದು. ಈ ಸಲದ ಚುನಾವಣೆಯಲ್ಲಿ ಹಣದ, ಪ್ರಚಾರದ, ಸಿದ್ಧಾಂತಗಳ ಭರಾಟೆ ಜೋರಾಗಿಯೇ ಇದೆ. ಕಳೆದೆರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಸೋತು ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರವಂಚಿತವಾಗಿ, ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದ ಬಿಜೆಪಿಗೆ ಇದು ಮಾಡು ಇಲ್ಲವೇ ಮಡಿ ಚುನಾವಣೆಯಾಗಿದೆ. ಕಾಂಗ್ರೆಸ್ಮುಕ್ತ ಭಾರತ್ ನಿರ್ಮಾಣಕ್ಕೆ ಹೊರಟಿರುವದಾಗಿ ಅದು ಸಾರಿಕೊಳ್ಳುತ್ತಿದೆಯಾದರೂ ಭಾರತದ ರಾಜಕೀಯದಲ್ಲಿ ಅತಿ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ನ ಬೇರುಗಳ ಆಳದ ಕಲ್ಪನೆ ಅದಕ್ಕಿದೆ.
ತಾನು ಚುಕ್ಕಾಣಿ ಹಿಡಿದ ಯೂಪಿಎ ಮೈತ್ರಿಕೂಟದ ಅವಧಿಯಲ್ಲಿ, ವಿಶೇಷವಾಗಿ ಯೂಪಿಎ-2 ಎಂದು ಕರೆಸಿಕೊಳ್ಳುವ ಕಳೆದೈದು ವರ್ಷದ ಅಧಿಕಾರಾವಧಿಯಲ್ಲಿ ಒಂದಾದ ಮೇಲೊಂದರಂತೆ ಬಂದ ಭ್ರಷ್ಟಾಚಾರದ ಹಗರಣಗಳ ಅಪಾದನೆಗಳಿಂದ ಕಂಗೆಟ್ಟ ಕಾಂಗ್ರೆಸ್ ಈ ಮಧ್ಯೆಯೇ ತಾನು ಜಾರಿಗೊಳಿಸಿದ ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಆಹಾರ ಭದ್ರತೆಯ ಹಕ್ಕು, ಲೋಕಪಾಲ್ ಕಾಯ್ದೆ, ನರೆಗಾದಂಥ ಉದ್ಯೋಗಖಾತ್ರಿಯೋಜನೆಗಳೇ ಮೊದಲಾದ ಸಾಧನೆಗಳನ್ನು ಬಿಂಬಿಸಿಕೊಳ್ಳುತ್ತಿದೆ. ಈ ನಡುವೆ ಭೃಷ್ಟಾಚಾರ ವಿರೋಧಿಸಿ ಮತ್ತು ಜನಲೋಕಪಾಲ ಕಾಯ್ದೆಗೆ ಆಗ್ರಹಿಸಿ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ಆಂದೋಲನದಿಂದೆದ್ದು ಬಂದ ಆಮ್ ಆದ್ಮಿ ಪಕ್ಷ ರಾಜಕೀಯ ಪರಿಸ್ಥಿತಿಗೆ ಹೊಸದೇ ಆದೊಂದು ಆಯಾಮವನ್ನು, ಮತದಾರರಿಗೆ ಒಂದು ಆಯ್ಕೆಯನ್ನು ಒದಗಿಸಿದೆ. ಸಮಾಧಾನದ ವಿಷಯವೆಂದರೆ ಗುಡಿಗುಂಡಾರ ನಿರ್ಮಾಣದಂಥ ಭಾವನಾತ್ಮಕ ಪ್ಲ್ಯಾಂಕ್ ಗಳ ಸುತ್ತ ಸುತ್ತುತ್ತಿಲ್ಲ ಈ ಸಲದ ಚುನಾವಣೆ ಪ್ರಚಾರ.
Hung Parliament ಎಂದು ಕರೆಸಿಕೊಳ್ಳುವ ವಿಭಜಿತ ಜನಾದೇಶವೇ ಈ ಸಲವೂ ಸಂಭಾವ್ಯವೆನ್ನಿಸುತ್ತಿದ್ದರೂ ಚುನಾವಣೋತ್ತರ ರಾಜಕೀಯ ಧೃವೀಕರಣದ ಕುರಿತು ಅಪಾರ ಕುತೂಹಲ ದೇಶದಲ್ಲಿ ಉಂಟಾಗಿದೆ. ತನ್ನ ನೇತೃತ್ವದ ಎನ್ಡಿಎ ಕೂಟದಲ್ಲಿದ್ದ ಬಿಜು ಜನತಾ ದಳದಂಥ, ಸಂಯುಕ್ತ ಜನತಾ ದಳದಂಥ ತನ್ನ ಪ್ರಮುಖ ಮಿತ್ರಪಕ್ಷಗಳ ಮೈತ್ರಿಗೆ ಎರವಾಗಿರುವ ಬಿಜೆಪಿಗೆ ಇದು ಬಹಳ ದೊಡ್ಡ ಸವಾಲಿನ ಚುನಾವಣೆಯಾಗಿದೆ. ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಪಂಜಾಬ್ ನಲ್ಲಿ ಅಕಾಲಿದಲ್ ಅದರೊಟ್ಟಿಗೆ ಉಳಿದುಕೊಂಡಿದ್ದು, ಇನ್ನುಳಿದಂತೆ ಹೊಸದಾಗಿ ರಾಜ್ಯಸಭೆ ಸದಸ್ಯ ರಾಮವಿಲಾಸ್ ಪಾಸ್ವಾನರ ಲೋಕಜನಶಕ್ತಿ ಪಕ್ಷ ಅದರ ತೆಕ್ಕೆಯೊಳಗೆ ಬಂದಿದೆ. ತಮಿಳ್ನಾಡಿನ ಕೆಲ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳು ಮತ್ತು ಒಂದು ಸೀಮಿತ ಪ್ರಾದೇಶಿಕ ಘಟಕದಲ್ಲಿ ಕುರ್ಮಿಗಳ ಮೇಲೆ ಪ್ರಭಾವವಿರುವ ಅಪ್ನಾದಲ್ ನಂಥ ರಚನೆಗಳೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ ಮುಖ್ಯವಾಗಿ ನಂಬಿಕೊಂಡಿರುವದು ಗುಜರಾತ್ ನಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ವಿಜಯ ಸಾಧಿಸಿ ಈಗ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ತಾನು ಘೋಷಿಸಿರುವ ನರೇಂದ್ರ ಮೋದಿಯವರ ವರ್ಚಸ್ಸು, ಮತ್ತು ಗುಜರಾತ್ ಮಾದರಿ ಎಂದು ಅದು ಬಿಂಬಿಸಿಕೊಳ್ಳುತ್ತ ಬಂದಿರುವ ಅಭಿವೃದ್ಧಿ ಕಾರ್ಯಗಳ ಕುರಿತ ಪ್ರಚಾರ ಸೆಳೆಯಬಹುದಾದ ಮತಗಳ ಪ್ರಮಾಣವನ್ನು. ಹೇಗಾದರೂ ಮಾಡಿ ಸಂಸತ್ ನಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ ಎರಡುನೂರಾ ಎಪ್ಪತ್ತೆರಡು ಸ್ಥಾನಗಳ ಗಡಿ ದಾಟುವದರತ್ತ ಲಕ್ಷ್ಯವನ್ನು ಕೇಂದ್ರೀಕರಿಸಿರುವ ಅದರ ಆಂತರಿಕ ಭಿನ್ನತೆ, ಹಿರಿಯ ನಾಯಕರ ಅತೃಪ್ತಿಯಂಥ ವಿದ್ಯಮಾನಗಳು ಚುನಾವಣೆ ಸಮೀಪವಾದಂತೆಲ್ಲ ಉಲ್ಬಣಿಸಿರುವದು ಆ ಪಕ್ಷ ಕೂಡ ಉಸಿರು ಬಿಗಿಹಿಡಿಯುವಂತೆ ಮಾಡಿದೆ.
ಚುನಾವಣೆ ಬರುತ್ತವೆ ಹೋಗುತ್ತವೆ, ಸರಕಾರಗಳು ರಚನೆಯಾಗುತ್ತವೆ, ಉರುಳುತ್ತವೆ, ಪಕ್ಷಗಳು ಬೆಳೆಯುತ್ತವೆ ಅಥವ ಬಲಗುಂದುತ್ತವೆ, ಮೈತ್ರಿಕೂಟಗಳ ಸಮೀಕರಣಗಳು ರಾಜಕೀಯ ಧೃವೀಕರಣಗಳು ಬದಲಾಗುತ್ತವೆ. ಇವೆಲ್ಲ ಆಗುಹೋಗುಗಳ ನಡುವೆ ಭಾರತ ಸ್ವಾತಂತ್ರ್ಯ ಪಡೆದಾಗಿನಿಂದ ಇದುವರೆಗೆ ಘಟಿತವಾದ ಹದಿನೈದು ಲೋಕಸಭೆಗಳಿಗೆ ಮತ್ತು ವಿವಿಧ ರಾಜ್ಯಗಳಲ್ಲಿ ನಡೆಯುತ್ತ ಬಂದಿರುವ ವಿಧಾನಸಭೆ ಚುನಾವಣೆಗಳಲ್ಲಿ ವಾಸ್ತವವಾಗಿ ಗೆಲುವು ಸಾಧಿಸುತ್ತ ಬಂದಿರುವದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ. ನಿಜ, ಹಲವು ಸಲ ಅದು ಪ್ರಜಾಪ್ರಭುತ್ವದ ಆದರ್ಶೀಕೃತ ಗ್ರಹಿಕೆಗಳ ಅಣಕದಂತೆ ತೋರುವದುಂಟು, ಮೇರೆ ಮೀರಿದ ಭ್ರಷ್ಟಾಚಾರದಿಂದಾಗಿ ಅದು ಒಳಗೆ ದೊಗರು ಬಿದ್ದ ವೃಕ್ಷದಂತೆ ಅನ್ನಿಸುವದುಂಟು. ಆದರೆ ಸಿನಿಕತನ ಸಾರ್ವತ್ರಿಕ ಎನ್ನಿಸುವಂತಾಗುವದರ ಮಧ್ಯೆಯೇ ನಮ್ಮ ರಾಜಕೀಯ ವ್ಯವಸ್ಥೆಯ ಗಟ್ಟಿತನ, ಚಲನಶೀಲತೆ, ಜೀವಂತಿಕೆಗಳ ಹೊಳಹು ಎಲ್ಲೋ ಮಿಂಚುವದುಂಟು.

ಚಿತ್ರ ಕೃಪೆ : ಸತೀಶ್ ಆಚಾರ್ಯ

ಉದಾಹರಣೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪರ್ಯಾಯವೇ ಇಲ್ಲ ಅಥವಾ ಟೀನಾ (TINA-There Is No Alternative to Congrss) ಎಂಬ ಸಂಕ್ಷೇಪಾಕ್ಷರ ಗಳಿಸಿದ್ದ ಪರಿಸ್ಥಿತಿ ಶಾಶ್ವತ ಎಂಬಂತಾಗಿದ್ದಾಗ ಜಯಪ್ರಕಾಶ್ ನಾರಾಯಣರ ಸಮಗ್ರ ಕ್ರಾಂತಿಯ ಕರೆ ಮತ್ತು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ್ದ ತುರ್ತು ಪರಿಸ್ಥಿಯ ಕುರಿತ ವಿರೋಧದ ಅಲೆಯಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಮೈತ್ರಿಕೂಟ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆಂತರಿಕ ಕಚ್ಚಾಟಗಳಿಂದಾಗಿ ಒಂದು ಸ್ಥಿರ ಸರಕಾರವನ್ನು ಕೊಡಲಾರದ ಜನತಾ, ಜನಸಂಘ,ಸಮಾಜವಾದಿ ಪಕ್ಷಗಳ ಆ ಮೈತ್ರಿಕೂಟದ ವೈಫಲ್ಯ ಪುನ: ಕಾಂಗ್ರೆಸ್ ಬರುವಿಕೆಗೆ ಕಾರಣವಾಗಿ ಇಂದಿರಾ ಗಾಂಧಿ ಮತ್ತೆ ಪ್ರಧಾನಮಂತ್ರಿಯಾಗುವ ಸೋಜಿಗ ನಡೆಯಿತು. ೧೯೮೪ ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಸಹಾನುಭೂತಿಯ ಅಲೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಬಹುಮತವನ್ನು ಸಾಧಿಸಿದ್ದೇ ಕೊನೆ. ಆಮೇಲೆ ಯಾವುದಾದರೂ ಒಂದು ಪಕ್ಷ ತಾನು ಮೂರನೆಯ ಎರಡರಷ್ಟು ಸ್ಥಾನಗಳ ಬಹುಮತ ಗಳಿಸಿ ಸ್ವಂತ ಬಲದ ಮೇಲೆ ಸರಕಾರ ರಚಿಸುವದು ಇತಿಹಾಸದ ಮಾತಾಗಿ ಹೋಯಿತು. ರಾಮಜನ್ಮಭೂಮಿಯ ವಿವಾದವನ್ನು ರಾಜಕೀಯ ವಿಷಯವಾಗಿಸಿಕೊಂಡು ದೊಡ್ಡ ಪಕ್ಷವಾಗಿ ಹೊಮ್ಮಿದ ಬಿಜೆಪಿ ಹಲವು ಇತರ ಕಾಂಗ್ರೆಸೇತರ ಪಕ್ಷಗಳೊಂದಿಗೆ ಕೈಜೋಡಿಸಿ ಮೈತ್ರಿಸರಕಾರ ರಚಿಸುವ ಅನಿವಾರ್ಯತೆಗೆ ಒಳಗಾಯಿತು. ರಾಜ್ಯಗಳ ಮಟ್ಟದಲ್ಲೂ ಕಾಂಗ್ರೆಸ್ ಬೇರುಗಳು ಶಿಥಿಲವಾಗತೊಡಗಿದವು.
ಆಂಧ್ರದಲ್ಲಿ ತೆಲುಗು ದೇಶಂ ಎಂಬ ಪ್ರಾದೇಶಿಕ ಪಕ್ಷ ರಚನೆಯಾಗಿ ಕಾಂಗ್ರೆಸ್ಗೆ ಮುಳುವಾದರೆ ಕರ್ನಾಟಕದಲ್ಲಿ ಗುಂಡೂರಾಯರ ಸರಕಾರ ಉರುಳಿ ಎಡ ಮತ್ತು ಬಲಪಂಥೀಯ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಜನತಾ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂತು. ದಲಿತರ ರಾಜಕೀಯ ಆಕಾಂಕ್ಷೆ ಬಹುಜನ ಪಕ್ಷವಾಗಿ ಅಭಿವ್ಯಕ್ತಿ ಪಡೆದು ಬ್ರಾಹ್ಮಣ, ಬನಿಯಾ, ಕ್ಷತ್ರಿಯ ಮೇಲ್ವರ್ಣಗಳ ವಿರೋಧದ ನೆಲೆಯಲ್ಲಿ “ತಿಲಕ್ ತರಾಜು ಔರ್ ತಲ್ವಾರ್, ಮಾರೋ ಇನ್ ಕೋ ಜೂತೆ ಚಾರ್” ಅಂದರೆ “ತಿಲಕ, ತಕ್ಕಡಿ, ತಲವಾರ್ (ಕತ್ತಿ) ಗಳಿಗೆ ಚಪ್ಪಲಿಯಿಂದ ಬಾರಿಸಿ ನಾಲ್ಕು” ಎನ್ನುವ ವಿಲಕ್ಷಣ ಘೋಷಣೆಯ ಅಲೆಯಲ್ಲಿ ತೇಲಿಬಂದು ರಾಜಕೀಯವಾಗಿ ಪ್ರಮುಖವಾದ ಉತ್ತರ ಪ್ರದೇಶ ರಾಜ್ಯದಲ್ಲಿ ಮಾಯಾವತಿ ಸರಕಾರ ರಚನೆಯಾಯಿತು. ಎಡರಂಗ ಶಾಶ್ವತವಾಗಿ ಗೂಟ ಹೊಡೆದುಕೊಂಡು ಕುಳಿತಂತಿದ್ದ ಬಂಗಾಲದಲ್ಲಿ ಅದನ್ನು ಕೆಡವಿ ಮಮತಾ ದೀದಿಯ ತೃಣಮೂಲ ಸರಕಾರ ಬಂದಿತು. ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮೈತ್ರಿ ಸರಕಾರ ಬಂದದ್ದೂ ಆಯಿತು, ಆಳಿದ್ದೂ ಆಯಿತು, ಅದು ಬಿದ್ದು ಮತ್ತೆ ಕಾಂಗ್ರೆಸ್ ಹಾಗೂ ಶರದ್ ಪವಾರ್ ರ ಎನ್ಸಿಪಿ ಸರಕಾರ ರಚನೆ ಆದದ್ದೂ ಆಯಿತು.
ಸಾರ್ವತ್ರಿಕ ಚುನಾವಣೆಗಳು ನನ್ನ ಗ್ರಹಿಕೆಗೆ ನಿಲುಕತೊಡಗಿದಾಗಿನಿಂದ ನಾನು ಗಮನಿಸಿದಂತೆ ಆಗ ಚುನಾವಣೆಗಳಲ್ಲಿ ಆಯಾ ಪಕ್ಷಗಳು ಗಳಿಸಿದ ಸ್ಥಾನ ಮತ್ತು ಮತಗಳ ಶೇಕಡಾವಾರು ಪ್ರಮಾಣದ ಜೊತೆಗೇ ಚರ್ಚಿತವಾಗುತ್ತಿದ್ದ ಇನ್ನೊಂದು ಅಂಶ ಚುನಾವಣಾ ಅಕ್ರಮಗಳ (Rigging) ಪ್ರಮಾಣದ್ದು. ಆಗ ಈಗಿನಂತೆ ಖಾಸಗಿ ಸುದ್ದಿ ಚಾನೆಲ್ ಗಳಿರಲಿಲ್ಲ. ಮತದಾನಕ್ಕೆ ಕಡ್ಡಾಯವಾಗಿ ಭಾವಚಿತ್ರವಿರುವ ಗುರುತಿನ ಚೀಟಿಗಳಿರುವದು ದೂರ ಉಳಿಯಿತು, ಅಂಥದೊಂದು ಕಲ್ಪನೆ ಕೂಡ ಇರಲಿಲ್ಲ. ಬಗಲಿಗೆ ಬಂದೂಕು ಏರಿಸಿಕೊಂಡು ಫ್ಯೂಡಲ್ ಧಣಿಗಳಾದ ಠಾಕೂರರ ಹತ್ತಿಪ್ಪತ್ತು ಜನ ಪುಂಡರ ಪಡೆಗಳು ಮತಗಟ್ಟೆಗಳನ್ನು ವಶಪಡಿಸಿಕೊಂಡು, ಒಳಗೆ ಪ್ರವೇಶಿಸಿ, ಮತಪತ್ರಗಳಿಗೆ ಮತಗಟ್ಟೆ ಅಧಿಕಾರಿಯ ಸಹಿ ಹಾಕಿಸಿಕೊಂಡು ಚುನಾವಣಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಪೋಸ್ಟಾಫೀಸ್ ನಲ್ಲಿ ಲಕೋಟೆಗಳಿಗೆ ಠಸ್ಸೆ ಹಾಕುವ ಹಾಗೆ ತಾವು ಇಚ್ಛಿಸಿದ ಅಭ್ಯರ್ಥಿಯ ಚಿಹ್ನೆಯ ಮುಂದೆ ಟಕಟಕಾ ಸೀಲ್ ಒತ್ತಿ ಮತಪೆಟ್ಟಿಗೆಗೆ ತುರುಕಿ ಬರುವದು ರ್ಯಾಂಪಂಟ್ ಆಗಿ ನಡೆಯುತ್ತಿತ್ತು, ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ್ ಮುಂತಾದ ಉತ್ತರ ಭಾರತದ ರಾಜ್ಯಗಳಲ್ಲಿ. ಆಗ ಈಗಿನಂತೆ ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ ಗಳೂ ಇರಲಿಲ್ಲ. ಒಬ್ಬ ಟಿ.ಎನ್.ಶೇಷನ್ ಭಾರತದ ಮುಖ್ಯ ಚುನಾವಣಾ ಕಮೀಶನರ್ ಆಗಿ ಬಂದ ನೋಡಿ. ನಿರ್ವಾಚನ್ ಸದನ್ ಎಂಬುದು ಜೀವ ತಳೆಯಿತು. ಎಲೆಕ್ಶನ್ ಕಮೀಶನ್ ಆಫ್ ಇಂಡಿಯಾ ಎಂಬುದೊಂದು ಜೀವಂತ ಸಂಸ್ಥೆಯಾಯಿತು. ಚುನಾವಣಾ ಅಕ್ರಮಗಳಿಗೆ ಕಡಿವಾಣ ಬೀಳತೊಡಗಿತು. ಅದೇ ಪ್ರಕ್ರಿಯೆ ಅದೇ ಸತ್ವದಲ್ಲಿ ಮುಂದುವರೆದಿದ್ದರೆ ಅಕ್ರಮಗಳು ಸಂಫೂರ್ಣ ಇಲ್ಲವಾಗಬಹುದಿತ್ತು. ಆದರೆ ನಮ್ಮ ರಾಜಕೀಯ ಪಕ್ಷಗಳೆಲ್ಲ ಭ್ರಷ್ಟವಾಗಿ ಹೋಗಿದ್ದವಲ್ಲ. ಚುನಾವಣಾ ಸುಧಾರಣೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ನಮ್ಮ ಸಂಸತ್ತು ಕೋಟ್ಯಾಧಿಪತಿಗಳ ಸದನವಾಗುತ್ತ ಹೋಯಿತು. ಪ್ರಶ್ನೆ ಎತ್ತುವದಕ್ಕಾಗಿ ಹಣ ಪಡೆಯುವ, ಅವಿಶ್ವಾಸ ಗೊತ್ತುವಳಿ ಪ್ರಸ್ತಾಪ ಬಂದಾಗ ಹಣ ಪಡೆದು ಕ್ರಾಸ್ ವೋಟ್ ಮಾಡಿ ಸರಕಾರಗಳನ್ನು ಉಳಿಸಿ ತಮ್ಮ ಪಕ್ಷಗಳಿಗೆ ದ್ರೋಹ ಬಗೆಯುವ ಅನಿಷ್ಟಗಳೆಲ್ಲ ಪ್ರಾರಂಭವಾದವು.
ಇಂದು ಎಡ ಪಕ್ಷಗಳನ್ನು ಹೊರತು ಪಡಿಸಿ ರಾಜಕೀಯ ಪಕ್ಷಗಳಲ್ಲಿ ವಂಶಪಾರಂಪರ್ಯದ ಅಧಿಕಾರ ಗ್ರಹಣ ಸಾರ್ವತ್ರಿಕವಾಗಿದೆ. ಎಂ.ಪಿ.ಗಳ ಎಂ.ಎಲ್.ಎ ಗಳ ಮಕ್ಕಳು ರಾಜಕುಮಾರರಂತೆ ತಮ್ಮ ತಂದೆಯರ ಸ್ವಾಭಾವಿಕ ಉತ್ತರಾಧಿಕಾರಿಗಳು. ರಾಜಕೀಯ ಅಧಿಕಾರವೆಂಬುದು ಒಂದೊಂದು ಕುಟುಂಬಗಳ-ಉದಾ ಡಿಎಂಕೆ, ಜೆಡಿಎಸ್,ಎಸ್.ಪಿ, ಇತ್ಯಾದಿಗಳಲ್ಲಿ- ಬಳುವಳಿಯಾಗಿ ಮುಂದುವರಿಯುವಂಥದು. ಜಾಗತೀಕರಣದ, ಖಾಸಗೀಕರಣದ ಈ ಯುಗದಲ್ಲಂತೂ ಕಾರ್ಪೋರೇಟ್ ವಲಯಕ್ಕೆ ದೇಶದ ಸಮಸ್ತ ನೆಲಜಲವನ್ನು ಬೇಕಾದರೆ ಒತ್ತೆ ಇಟ್ಟಾರು ಅಥವಾ ಮಾರಿಕೊಂಡಾರು ನಮ್ಮ ನಾಯಕರು. ನೈಸರ್ಗಿಕ ಸಂಪನ್ಮೂಲಗಳನ್ನು ದೋಚಿ ಕುಬೇರರಾದ ಕುಬ್ಜರ ಪದತಲದಲ್ಲಿ ಸಿದ್ಧಾಂತಗಳನ್ನು ನಾಯಿಯಂತೆ ಮಲಗಿಸಿಯಾರು. ಈಗ ಕಪ್ಪು ಬಾವುಟ ಪ್ರದರ್ಶನದಂಥ ’ಸಾತ್ವಿಕ’ ಪ್ರತಿಭಟಣೆಗಳು ಹಿನ್ನೆಲೆಗೆ ಸರಿದು ತಮ್ಮ ಮೆಚ್ಚಿನ ಜನನಾಯಕನ ಭದ್ರಕೋಟೆಯಾದ ರಾಜ್ಯಕ್ಕೆ ಅಥವಾ ಕ್ಷೇತ್ರಕ್ಕೆ ಪ್ರತಿಪಕ್ಷದ ಯಾವನಾದರೂ ಬಂದು ರೋಡ್ ಶೋ ಅಥವಾ ರ್ಯಾಲಿ ಮಾಡಲು ಬಂದರೆ ಕೋಳಿಮೊಟ್ಟೆ ಎಸೆಯುವ ಅಥವ ಮಸಿ ಬಳಿಯುವ ಅನಿಷ್ಟ ಪದ್ಧತಿಗಳು ಪ್ರಾರಂಭವಾಗಿವೆ.
ಎಂಥ ಉದಾತ್ತ ರಾಜಕೀಯ ಉದ್ದೇಶವೇ ಇರಲಿ ಒಂದು ರಾಜಕೀಯ ರಚನೆಯಲ್ಲಿ ವ್ಯಕ್ತಿಕೇಂದ್ರಿತ ವ್ಯವಸ್ಥೆ ಬಲಗೊಳ್ಳುತ್ತ ಹೋದರೆ ಅದು ಬರೀ ಆ ಪಕ್ಷದ ಆಂತರಿಕ ವಿಷಯವಾಗಿ ಉಳಿಯುವದಿಲ್ಲ. ಅದು ಒಂದು ದೇಶದ ರಾಜಕೀಯ ಸಾಮಾಜಿಕ ಸನ್ನಿವೇಶದ ಗತಿ ಮತ್ತು ದಿಕ್ಕುದೆಸೆಗಳನ್ನೇ ಪ್ರಭಾವಿಸತೊಡಗುತ್ತದೆ. ಅದು ಸರಿಯಾದ ನಿಟ್ಟಿನಲ್ಲೇ ಸಾಗುತ್ತದೆ ಎಂಬ ಗ್ಯಾರಂಟಿ ಇರುವದಿಲ್ಲ. ಆದ್ದರಿಂದ ಒಂದು ಪ್ರಬಲ ಆಳುವ ಪಕ್ಷಕ್ಕೆ ಇರುವ ಮಹತ್ವವೇ ಒಂದು ಪ್ರಬಲ ವಿರೋಧ ಪಕ್ಷಕ್ಕೂ ಇರುತ್ತದೆ ಪ್ರಜಾಪ್ರಭುತ್ವದಲ್ಲಿ. ಸಂವಿಧಾನದ್ದೇ ಒಂದು ಅಂಗವಾದ ನ್ಯಾಯಾಂಗದ ಮೇಲೆ ಗುರುತರ ಹೊಣೆ ಇರುತ್ತದೆ. ಫೋರ್ಥ್ ಎಸ್ಟೇಟ್ ಎಂದು ಕರೆಯಲ್ಪಡುವ ಮಾಧ್ಯಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಜೀವಾಳವಾಗಬೇಕಾಗುತ್ತದೆ. ಇಂದು ಅದೂ ಭ್ರಷ್ಟವಾಗುತ್ತಿದೆ.
ಅಂತೆಯೇ ರಾಜಕೀಯ ಪಕ್ಷಗಳೊಳಗೇ ಆಂತರಿಕ ಪ್ರಜಾಪ್ರಭುತ್ವದ (Inner Party Democracy) ಇರುವಿಕೆಯು ಬಹುಮುಖ್ಯ. ಆದರೆ ನಮ್ಮ ರಾಜಕೀಯ ಪಕ್ಷಗಳ ನೀತಿ-ನಿಯತ್ತು ಶೀಘ್ರಗತಿಯಿಂದ ಶಿಥಿಲವಾಗುತ್ತಿದೆ. ಅವುಗಳ ಹಿಂಬಾಲಕರು ತಕ್ಷಣದ ಲಾಭಗಳ ಮತ್ತು ವೈಯಕ್ತಿಕ ಸ್ವಾರ್ಥಸಾಧನೆಗಳ ಅಥವಾ ಜಾತಿ-ಕೋಮುಗಳ ಲಾಭ ಹಾನಿಗಳ ಲೆಕ್ಕಾಚಾರದಂಥ ಸಮೀಪಗಾಮಿ ಹಾಗೂ ಸಂಕುಚಿತ ಪರಿಗಣನೆಗಳಿಂದ ಮರುಳು ಕವಿಸಿಕೊಂಡು, ಚುನಾವಣಾ ಚರ್ಚೆಯೆಲ್ಲ ಒಬ್ಬಿಬ್ಬರು ವ್ಯಕ್ತಿಗಳ ಸುತ್ತ ಸುತ್ತುತ್ತ, ಹಾಸ್ಯಾಸ್ಪದವಾಗುತ್ತ, ವ್ಯಕ್ತಿಪೂಜೆಯಂಥ ಅಗ್ಗದ ಗಿಮಿಕ್ ಆಗುತ್ತ ನಡೆದಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಉಳಿವಿನ ದೂರಗಾಮಿ ಪ್ರಜ್ಞೆ ಹಿನ್ನೆಲೆಗೆ ಸರಿಯುತ್ತಿರುವದು ಆತಂಕಕಾರಿಯಾಗಿದೆ.
ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ ಯಾರು ಸೋಲುತ್ತಾರೋ ಗೊತ್ತಿಲ್ಲ, ಯಾರು ಗೆದ್ದರೂ ಯಾರು ಗೆದ್ದರೂ ಬಹಳ ದೊಡ್ಡ ಕ್ರಾಂತಿಯೇನೂ ಸಂಭವಿಸುವದಿಲ್ಲ. ಹೃದಯವಂತಿಕೆ ಹೃದಯಹೀನತೆಗಳ ಅನುಪಾತದಲ್ಲಿ ವ್ಯತ್ಯಾಸವಾಗುತ್ತದೆ ಅಷ್ಟೇ. ಆದರೆ ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳು ಮಾತ್ರ ಗೆಲ್ಲುವಂತಾಗಲಿ. ಸ್ವತಂತ್ರ ದೇಶವಾಗಿ ನಮ್ಮಷ್ಟೇ ಹಳೆಯದಾದ ನೆರೆಯ ಪಾಕಿಸ್ತಾನವೆಂಬ ದೇಶದಲ್ಲಿ ಇಂದಿಗೂ ಪ್ರಜಾಪ್ರಭುತ್ವವೆಂಬುದು ಯಶಸ್ವಿಯಾಗಿ ನೆಲೆಗೊಳ್ಳದೇ ಹಲವು ಅಧಿಕಾರಕೇಂದ್ರಗಳಲ್ಲಿ ತುಯ್ಯುವ ಅದರ ಪಡಪೋಸಿತನದ ಉದಾಹರಣೆ ನಮ್ಮ ಕಣ್ಣ ಮುಂದಿದೆ.
ನಮ್ಮ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳು ಚಿರಾಯುವಾಗಲಿ…!
 

‍ಲೇಖಕರು G

March 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ರುಕ್ಮಿಣಿ ನಾಗಣ್ಣವರ

    nayakarenisikondavaru prajegala hitaasaktiginta swahitasakti haagoo pakshada hitasaktgalannu pooraisikollalalu raajakeeya chukkane hididante toruttade… prajaaprabhutvakke beleye illadantaagide… 🙁

    ಪ್ರತಿಕ್ರಿಯೆ
  2. Rajendra Prasad

    ಮತ್ತೆ ನಿಮ್ಮ ನಿರೀಕ್ಷೆಯಲ್ಲಿ ಇದ್ದೀವಿ ಸರ್… 🙂 🙂

    ಪ್ರತಿಕ್ರಿಯೆ
  3. lalithasiddabasavaiah

    i was one among them who have been waiting for ur write up, thank u and a temporary GUD BYE sir.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: