ಅಶೋಕ ಶೆಟ್ಟರ್ ಕಾಲಂ : ಮಧುಮಾಸ ಚಂದ್ರಮಾ, ನೈದಿಲೆಗೆ ಸಂಭ್ರಮಾ..


ಒಮ್ಮೊಮ್ಮೆ ನಾವು ಅತೀ ವೈಚಾರಿಕತೆಗೆ ಬೀಳುತ್ತೇವೆ, ನಮ್ಮ ಹಬ್ಬಗಳ ಸಂಕೇತಗಳಲ್ಲಿ ಕಾರ್ಯಕಾರಣ ಸಂಬಂಧ ಹುಡುಕತೊಡಗುತ್ತೇವೆ, ಅವುಗಳ ಆಚರಣೆಗಳ ವಿವರಗಳನ್ನು ಹಿಂಜಿ ಹಿಸುಕಿ ಅವುಗಳಲ್ಲಿ ನಮ್ಮ ಶ್ರೇಣೀಕೃತ ಸಮಾಜದ ವೈಕಲ್ಯಗಳನ್ನು ಹುಡುಕಿ ನಿಟ್ಟುಸಿರು ಬಿಡುತ್ತೇವೆ. ಹಬ್ಬದ ಆನಂದಕ್ಕೆ ಎರವಾಗುತ್ತೇವೆ, ಆದರೆ ಇಂಥ ವ್ಯಾಪಗಳಿಲ್ಲದ ಬಹುಪಾಲು ಜನ ಅವುಗಳನ್ನು ಆಚರಿಸುತ್ತಿರುತ್ತಾರೆ.
ಸಾಮಾನ್ಯರು ಕೂಡ ಹಬ್ಬ-ಹುಣ್ಣಿಮೆಗಳನ್ನು ತಮ್ಮದೇ ಮಿತಿಗಳಲ್ಲಿ ಆಚರಿಸಿ ಸಂಭ್ರಮಿಸುತ್ತಿರುತ್ತಾರೆ. ಹಲವಾರು ವರ್ಷಗಳ ಹಿಂದೆ ರೈತರ, ಕೂಲಿಕಾರರ, ಗ್ರಾಮೀಣ ಮಹಿಳೆಯರ, ನಗರದ ಬಡಜನರ ಕಷ್ಟಕಾರ್ಪಣ್ಯಗಳ ಕುರಿತು ಸದಾ ಯೋಚಿಸುತ್ತ, ಆ ಕುರಿತು ವಿಷಾದ ಪಟ್ಟುಕೊಳ್ಳುತ್ತಿದ್ದ ಕಾಮ್ರೇಡ್ ಒಬ್ಬರು ( ಈಗ ಅವರು ಕಮ್ಯುನಿಸ್ಟ್ ಪಕ್ಷವೊಂದರ ರಾಜ್ಯ ಮಟ್ಟದ ನಾಯಕರು) ಒಂದು ದಿನ ನನಗೆ “ಬಡವರು, ರೈತರು, ತ್ರಾಸಿನ್ಯಾಗ ಅದಾರ, ತೊಂದ್ರಿ ಪಡ್ತಾರ, ಶೋಷಣೆಗೆ ಒಳಗಾಗ್ಯಾರ ಹಂಗ ಹಿಂಗ ಅಂತ ನಾವು ತೆಲಿ ಕೆಡಿಸಿಕೊಂಡ್ ಕುಂತಿರ್ತೀವಲ್ಲಾ, ಹುಚ್ಚರ ನಾಂವ, ಎಕ್ಚುಅಲಿ ನೋಡಿದರ ಅವ್ರು ಜಾತ್ರಿ, ನಿಬ್ಬಣ, ಹಬ್ಬಾ ಹುಣಿಮಿ, ಸಂತೀಪ್ಯಾಟಿ ಅಂತ ಕುಲುಕುಲು ನಕ್ಕೊಂತ ಚೈನಿ ಹೊಡೀತಿರತಾರ” ಎಂದಿದ್ದರು ನಗುತ್ತ.
ನಾನು ಹಬ್ಬಗಳ ಕುರಿತು ಪುರಾಣಕತೆಗಳ ಕೆಸರುಮಡುವಿನಲ್ಲಿ ಬೀಳದೆ ಸುಮ್ಮನೇ ಹಬ್ಬಗಳ ಭಾಗವಾಗುತ್ತ ಬಂದಿದ್ದೇನೆ. ಅದು ರೂಢಿಸಿಕೊಂಡದ್ದಲ್ಲ, ಬಾಲ್ಯದಿಂದಲೂ ಬಂದು ಈಗಲೂ ಹಾಗೇ ಉಳಿದುಕೊಂಡದ್ದು. ಹಬ್ಬಗಳ ಆಚರಣೆಗಳ ಅರ್ಥವಿವರಣೆಯನ್ನು ಯಾರಾದರೂ ನೀಡುವ ಅಥವಾ ಯಾರನ್ನಾದರೂ ಹಾಗೆ ನೀಡುವಂತೆ ಕೇಳುವ ಸಂಸ್ಕೃತಿ ನಮ್ಮದಾಗಿರಲಿಲ್ಲ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಎಂಬ ಪಟ್ಟಣದಲ್ಲಿದ್ದ ನಮ್ಮ ಲಿಂಗಾಯತ ಶೆಟ್ಟರ ಕುಟುಂಬದಲ್ಲಿ ತೊಂದರೆ ತಾಪತ್ರಯಗಳ, ಆಡಚಣಿ ಆಪತ್ತುಗಳ ನಡುವೆ ಹಬ್ಬಗಳು ಬರುತ್ತಿದ್ದವು, ಅವುಗಳನ್ನು ಆಚರಿಸುವ ಒಂದು ಸಿದ್ಧಕ್ರಮಕ್ಕನುಗುಣವಾಗಿ ನಾವು ಅವುಗಳನ್ನು ಆಚರಿಸುತ್ತಿದ್ದೆವು ಮತ್ತು ಅವು ಮುಗಿದು ಹೋಗುತ್ತಿದ್ದವು.
ಗಣೇಶ ಚತುರ್ಥಿಯಲ್ಲಿ ಮಾವಿನ ಹಣ್ಣಿನ ಸೀಕರಣೆ, ಹೋಳಿಹುಣಿಮೆಯಲ್ಲಿ ಹೂರಣಹೋಳಿಗೆ, ದೀಪಾವಳಿಯಲ್ಲಿ ಕರ್ಚೀಕಾಯಿ, ಹುರೆಕ್ಕಿ ಹೋಳಿಗಿ, ಯುಗಾದಿ-ದಸರೆಗಳಲ್ಲಿ ಗೋದಿ ಹುಗ್ಗಿ ಅಥವಾ ಶಾವಿಗಿ ಪಾಯಸ, ಅಮಾವಾಸ್ಯೆಗಳಲ್ಲಿ ಹೂರಣಗಡಬು ಹೀಗೆ ಏನೋ ಒಂದು ಸಿಹಿ ಅಡುಗೆ ಇರುತ್ತಿತ್ತು. ಪೂಜೆ ಸ್ವಲ್ಪ ವಿಶೇಷವಾಗಿರುತ್ತಿತ್ತು. ಹೂವು ಗಂಧ, ತಳಿರು ತೋರಣಗಳ ಇರುವು ಆಹ್ಲಾದವನ್ನುಂಟು ಮಾಡುತ್ತಿತ್ತು
ಆ ಎಲ್ಲ ಹಬ್ಬಗಳ ಪೈಕಿ ನನಗೆ ಅತ್ಯಂತ ಮೋಹಕವೆನಿಸುತ್ತಿದ್ದುದು ಹೋಳಿ ಹಬ್ಬ. ನನಗೇನು ನಮ್ಮ ಇಡೀ ಟೋಳಿಗೆ ಹೋಳಿ ಹಬ್ಬದ ಸಂಭ್ರಮ ಕಾಮದಹನಕ್ಕೂ ಹದಿನೈದಿಪ್ಪತ್ತು ದಿನ ಮುಂಚೆಯೇ ಆರಂಭವಾಗುತ್ತಿತ್ತು. ಯಾರ ಯಾರ ಮನೆಯ ಆಸು ಪಾಸಿನಲ್ಲಿ, ಕಂಪೌಂಡ್ ಒಳಗಡೆ ಕಟ್ಟಿಗೆಯ ಸಂಗ್ರಹ ಇದೆ ಎಂಬುದನ್ನು ಹಗಲು ಹೊತ್ತು ಸ್ಟಡಿ ಮಾಡುತ್ತಿದ್ದೆವು. ಎಳ್ಳಷ್ಟೂ ಸದ್ದು ಗದ್ದಲವಾಗದ ಹಾಗೆ, ಯಾರು ಎಲ್ಲಿಂದ ರಾತ್ರಿಯ ಯಾವ ಪ್ರಹರದಲ್ಲಿ ಆ ಜಾಗ ಪ್ರವೇಶಿಸಿ ಹೊರಗಿರುವ ಇನ್ನ್ಯಾರ ಕೈಗೆ ಎಷ್ಟು ಪ್ರಮಾಣದಲ್ಲಿ ಅದನ್ನು ವರ್ಗಾಯಿಸಬೇಕು, ಯಾರು ಅದನ್ನು ಹೊತ್ತೊಯಬೇಕು, ಮನೆಯ ಯಾರಾದರೂ ಎಚ್ಚತ್ತರೆ ಪ್ಲ್ಯಾನ್ ಬಿ ಹೇಗಿರಬೇಕು ಎಂಬುದರ ರೂಪುರೇಷೆಯೆಲ್ಲ ಇದ್ದುದರಲ್ಲಿ ಸ್ವಲ್ಪ ಪ್ರೌಢ ವಯಸ್ಕರಾದ ಒಬ್ಬಿಬ್ಬರ ಮಾರ್ಗದರ್ಶನದಲ್ಲಿ ಸಿದ್ಧವಾಗಿ ಹೋಳಿಹಬ್ಬದ ಪ್ರಮುಖ ಚಟುವಟಿಕೆಯಾದ ಕಟ್ಟಿಗೆ ಕುಳ್ಳುಗಳ ಕಳ್ಳತನಕ್ಕೆ ನಾವು ಶ್ರದ್ಧೆಯಿಂದಲೂ ಉತ್ಸಾಹದಿಂದಲೂ ತೊಡಗುತ್ತಿದ್ದೆವು. ಸುಮಾರು ಇಪ್ಪತ್ತು ಇಪ್ಪತ್ತೈದು ಜನರ ಬಾಲ ಸೈನ್ಯ ಅದು. ಕದ್ದು ತಂದ ಕಟ್ಟಿಗೆಗಳನ್ನು ಒಂದು ಹೊಂಡದಂತಿದ್ದ ತಗ್ಗಿನಲ್ಲಿ ಒಗೆಯುತ್ತಿದ್ದೆವು. ಕಾಮದಹನದ ದಿನ ಬಂದಾಗ ಅವು ಒಂದೇನು ಮೂರು ಕಾಮಣ್ಣರನ್ನು ದಹಿಸುವಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿರುತ್ತಿದ್ದವು.

ಆಮೇಲೆ ಹಣ ಸಂಗ್ರಹ. ಮನೆಮನೆಗೆ ಹೋಗಿ ಮನೆಯವರ ತಲೆ ಚಿಟ್ಟು ಹಿಡಿಯುವಂತೆ ಎಲ್ಲರೂ ಲಬೋ ಲಬೋ ಬಾಯಿಬಡಿದುಕೊಂಡು ಹೊಯ್ಕೊಳ್ಳುತ್ತ ಢಂಕಣಕ ಢಂಕಣಕ ಹಲಿಗಿ ಬಾರಿಸಿ ಚೌಕಾಸಿ ಮಾಡಿ ಕೊನೆಗೆ ಅವರಿಂದ ಹಣ ಪೀಕಿಸಿ ಮುಂದಿನ ಮನೆಗೆ ಹೋಗಿ ಮತ್ತೆ ಲಬೋಲಬೋ. ಹಾಗೆ ಸಂಗ್ರಹವಾದ ಹಣದ ಲೆಕ್ಕ ಒಬ್ಬ ಇಡುತ್ತಿದ್ದ, ಸಾಮಾನು ಸರಂಜಾಮು ಮತ್ತೊಬ್ಬ ತರುತ್ತಿದ್ದ, ಕಾಮದಹನದ ರಾತ್ರಿ ಇಡೀ ದಿನ ಎಚ್ಚರ ಇರಬೇಕಲ್ಲ, ಹೀಗಾಗಿ ರಾತ್ರಿಯೆಲ್ಲ ತಿನ್ನಲು ಬೇಕಾದ ಚುರುಮುರಿ, ಖಾರಾ ಚೂಡಾ, ಕಾಮಣ್ಣನಿಗೆ ಪೂಜೆ ಮಾಡುವಾಗ ಒಡೆದು ನಂತರ ಅದರ ಕೊಬ್ರಿ ಹೋಳುಗಳನ್ನು ಚುರುಮುರಿಯೊದಿಗೆ ಸೇರಿಸಿ ದೇಣಿಗೆ ಕೊಟ್ಟ ಮನೆಗಳಿಗೆ ಪ್ರಸಾದವಾಗಿ ಕೊಡಲು ತೆಂಗಿನಕಾಯಿಗಳು, ಬೆಲ್ಲ, ಚಾಪುಡಿ, ಹಾಲು, ಬೀಡಿ-ಸಿಗರೇಟು, ಎಲಡಿಕೆ ತಂಬಾಕು ಒಂದೇ ಎರಡೇ..ಸಂಭ್ರಮವೋ ಸಂಭ್ರಮ.
ಆಮೇಲೆ ಫಾಲ್ಗುಣ ಶುಕ್ಲ ಹುಣ್ಣಿಮೆಯ ಹಿಂದಿನ ದಿನ ರಾತ್ರಿ ಬೆಳದಿಂಗಳಲ್ಲಿ ಮೀಯುತ್ತ ಉದ್ದನೆಯ ಕೋಲಿಗೆ ಒಣಹುಲ್ಲು ಚಿಂದಿ ಬಟ್ಟೆ ಇತ್ಯಾದಿ ಸ್ಟಫ್ ಮಾಡಿ ಹೊಲಗಳಲ್ಲಿ ಇರುವ ಬೆದರು ಬೊಭೆಯಂಥದೊಂದು ಶರೀರ ಸೃಷ್ಟಿಸಿ ಅದಕ್ಕೊಂದು ಪ್ಯಾಂಟ್ ಶರ್ಟು ತೊಡಿಸಿ ಒಂದು ಮುಖವನ್ನೂ ಮಾಡಿ ತಲೆಗೊಂದು ಮುಂಡಾಸು ಅಥವಾ ಟೋಪಿ ಹಾಕಿ, ಕಣ್ಣು ಮೂಗು ಮೀಸೆ ಬರೆದು ಎತ್ತಿ ಗೋಡೆಗಾನಿಸಿ ಇಟ್ಟರೆ ., ಅದೋ,ನಮ್ಮ ಕಾಮಣ್ಣ ರೆಡಿ.
ಈ ಸಲ ಹೋಳಿ ಹುಣ್ಣಿಮೆ ನನಗೆ ವಿಶಿಷ್ಟವಾಗಿತ್ತು. ಈ ವರ್ಷ ನನ್ನ ಹುಟ್ಟಿದ ದಿನವೂ ಹೋಳಿಹುಣ್ಣಿಮೆಯ ಓಕುಳಿಯ ದಿನವೂ ಮೇಳೈಸಿದ್ದವು, “ಚುಮು ಚುಮು ಬೆಳಕಿನ್ಯಾಗ ಒಂದೊಂದs ಕಾಮಣ್ಣ ಮೆರಕೊಂತ ಮನಿಗಿ ಬರಾಕತ್ತಿದ್ವು, ಆಗ ನೀ ಹುಟ್ಟಿದಿ” ಎಂದು ನಮ್ಮವ್ವ ತನ್ನ ತವರೂರು ಸತ್ತಿಗೇರಿಯಲ್ಲಿ ತಮ್ಮ ತಾಯಿಯ ಮನೆಯಲ್ಲಿ ನಾನು ಹುಟ್ಟಿದ ಪ್ರಸಂಗವನ್ನು ನನಗೆ ಆಗಾಗ ಹೇಳುತ್ತಿದ್ದಳು. ಒಮ್ಮೊಮ್ಮೆ ನನ್ನ ಕಿಡಿಗೇಡಿತನದಿಂದ ರೋಸಿ ಹೋದಾಗ “ಕಾಮಣ್ಣ ಮೆರಿಯೂವಾಗ ಹುಟ್ಟಿದಂವ ನೀ, ಅದಕ್ಕs ಇಷ್ಟ ಉರೀತಿ” ಎಂದು ಬೈಯ್ಯುತ್ತಲೂ ಇದ್ದಳು. ಧಾರವಾಡದಲ್ಲಿ ಸಾರ್ವಜನಿಕ ಗಣಪತಿ ಕೂಡ್ರಿಸುವಂತೆ ಕಾಮಣ್ಣರನ್ನು ಓಣಿಗಳಲ್ಲಿ ಸಾದಾಸೀದಾ ಮಂಟಪಗಳಲ್ಲಿ ಕೂಡ್ರಿಸುತ್ತಾರೆ. ಆಮೇಲೆ ದಹಿಸುತ್ತಾರೆ. ನಮ್ಮಲ್ಲಿ ಹಾಗಿರಲಿಲ್ಲ.
ಹುಣ್ಣಿಮೆಯ ದಿನ ಬೆಳಿಗ್ಗೆ ಕಾಮಣ್ಣನ ಮೆರವಣಿಗೆ ಶುರು. ಅದು ಮತ್ತೊಂದು ರೌಂಡ್ ಹಣ ಪೀಕಿಸುವ ಕಾರ್ಯಕ್ರಮ. ಊರಿನ ಹಲವಾರು ಓಣಿ- ಬೀದಿಗಳ ಕಾಮಣ್ಣಗಳು ಒಬ್ಬೊಬ್ಬನ ಹೆಗಲಿಗಾನಿ ಅವನ ಹಿಂದೆ ಹೊಯ್ಕೊ ಬಡಕೋ ಮಾಡುವ ಹತ್ತಾರು ಇತರರ ಪಟಾಲಂ ಗಳೊಂದಿಗೆ ಊರಿನ ಇನ್ನಿತರ ಪ್ರದೇಶದ ಮನೆಗಳಿಗೆ ಹೋಗುವದು, ಕಾಸು ಕೇಳುವದು ಇದು ಮಧ್ಯಾಹ್ನದ ವರೆಗೆ ನಡೆಯುತ್ತಿತ್ತು. ಕೊಡುವವರು ತಾನೇ ಎಷ್ಟಂತ ಕೊಡುತ್ತಾರೆ? ಎಷ್ಟುಕಾಮಣ್ಣಗಳಿಗೆ? ಒಂದಾಣೆ ಎರಡಾಣೆ ಕೊಟ್ಟು ಸಾಗಹಾಕುತ್ತಿದ್ದರು. ಶಪಿಸುತ್ತಲೂ ಇದ್ದರು. ಹೆಂಗಳೆಯರು “ಬೇಕ್ಕಾದ್ದಷ್ಟ್ ಹೊಯ್ಕೊರ್ರಿ, ಇಷ್ಟs, ಇದರ ಮ್ಯಾಲೆ ಒಂದ್ ನಯಾಪೈಸಾನೂ ಕೊಡೂದುಲ್ಲ” ಎಂದು ಕೈ ಜಾಡಿಸಿ ನಮ್ಮತ್ತ ಬೆನ್ನು ತಿರುವಿ ಒಳಗೆ ಹೋಗುತ್ತಿದ್ದರು. ನಾವು ಸ್ವಲ್ಪ ಹೊತ್ತು ಹೊಯ್ಕೊಂಡು ಅವರ ನಿರ್ಧಾರ ಅಚಲ ಅಂತ ಮನವರಿಕೆಯಾದ ಮೇಲೆ ಮುಂದಿನ ಮನೆಗೆ ಹೋಗುತ್ತಿದ್ದೆವು.
ರಾತ್ರಿಯೆಲ್ಲ ಎಚ್ಚರವಿದ್ದು ಬೆಳಗು ಹರಿಯುವ ಹೊತ್ತಿಗೆ ಕಾಮಣ್ಣನ ಸುತ್ತ ಕುಳ್ಳು ಕಟ್ಟಿಗೆ ಸೊಪ್ಪುಸದೆ ಎಲ್ಲ ಒಟ್ಟಿ ಬೆಂಕಿ ಹಚ್ಚಿ ಹೊಯ್ಕೊಳ್ಳುತ್ತ, ಕಿಡಿಗಳನ್ನು, ಹಾರಿಸಿ ಉದ್ದೋಉದ್ದ ಏಳುತ್ತಿದ್ದ ಬೆಂಕಿಯ ಕೆನ್ನಾಲಗೆಗಳ ಮೋಹಕ ಬೆಳಕಿನಲ್ಲಿ ಒಬ್ಬರೊಬ್ಬರು ನೋಡುತ್ತ ನಗುತ್ತ ಬೆಳಗಾಗುತ್ತಲೇ ಮನೆಗೆ ವಾಪಸಾಗಿ ಬಕೀಟಿನಲ್ಲಿ ಬಣ್ಣ ಕಲಸಿ ಬಾಟಲಿಗಳಲ್ಲಿ ತುಂಬಿಕೊಂಡು, ಬಣ್ಣದ ಪುಡಿಯ ಪಾಕೀಟುಗಳನ್ನು ಕಿಸೆಯಲ್ಲಿಟ್ಟುಕೊಂಡು ಓಕುಳಿಗೆ ಹೋಗುವದು ಇನ್ನೊಂದು ಮಜಲು. ಒಬ್ಬರೊಬ್ಬರ ಮುಖಕ್ಕೆ ವಿವಿಧ ಬಗೆಯ ಬಣ್ಣ, ಮಸಿ,ಇತ್ಯಾದಿ ತಿಕ್ಕಿ ಬಟ್ಟೆಗಳೆಲ್ಲ ತೊಯ್ದು ತಪ್ಪಡಿಯಾಗಿ ಮತ್ತೆ ಬಣ್ಣ ಕಲಸಿಕೊಳ್ಳಲು ಮನೆಯ ಬಳಿ ಬಂದರೆ ಸ್ವತ: ನಮ್ಮ ತಾಯಿ, ಅಕ್ಕ ತಂಗಿಯರು ಗುರುತು ಹಿಡಿಯಲಾರದೇ ಹಿಡಿದು “ಐ ಇಂವ ಅಶೋಕ, ಐ ಇಂವ ರುದ್ರಪ್ಪ, ಐ ಇಂವ ಬಾಲ್ಯಾ” ಎಂದು ಕೈ ಮಾಡಿ ತೋರಿಸುವದು, ಕೆಕ್ಯಕ್ಕಾಡಿಸಿ ನಗುವದು ಮಾಡುತ್ತ ನಮ್ಮ ಚೆಹರಾ ಪಟ್ಟಿ ಹಾಗಾದರೆ ಎಷ್ಟು ಬದಲಾಗಿರಬಹುದೆಂದು ನಮಗೇ ಗಾಬರಿಯಾಗಿ ಕನ್ನಡಿಯಲ್ಲಿ ನೋಡಿದರೆ ಅವು ನಿಜಕ್ಕೂ ಕರಾಬುಗೆಟ್ಟು ಹೋಗಿ ಬರೀ ಕಣ್ಣುಗಳು ಮತ್ತು ಬಾಯಿ ತೆರೆದರೆ ಹಲ್ಲುಗಳ ಸಾಲಿನ ಬಿಳುಪು ಮಾತ್ರ ಕಾಣುವಂತೆ ಮಾರ್ಪಟ್ಟು ಇನ್ನುಳಿದೆಲ್ಲವು ಬಣ್ಣದಲ್ಲಿ ಮುಳುಗಿ ಹೋಗಿ ನೀಲಿ ಹಸಿರು ಕೇಸರಿಗಳೆಲ್ಲ ಮೇಳೈಸಿದ ದಟ್ಟ ವಿಲಕ್ಷಣ ಬಣ್ಣವೊಂದನ್ನು ನಮ್ಮ ಮುಖ ಕಸಿ ಮಾಡಿಕೊಂಡಂತಿರುತ್ತಿತ್ತು. ಹೋಳಿ ಹುಣ್ಣಿಮೆ ಮುಗಿದೊಡನೆ ನಮಗೆ ಎಲ್ಲ ಖಾಲಿ ಖಾಲಿ ಎನ್ನ್ನಿಸುತ್ತಿತ್ತು. ಆ ಅಪಾರ ಕ್ರಿಯಾಶೀಲತೆಯ ಪರ್ವ ಮುಗಿದ ಸಂಕಟ ಒಂದೆಡೆಯಾದರೆ ಶಾಲೆ ಎಂಬ ಪೀಡೆಯೂ ವಾರ್ಷಿಕ ಪರೀಕ್ಷೆ ಎಂಬ ದೆವ್ವವೂ ಬಾಯ್ದೆರೆದು ನಿಂತಿರುತ್ತಿದ್ದವು.
ಧಾರವಾಡಕ್ಕೆ ಬಂದ ಮೇಲೆ ಬಣ್ಣದಾಟದ ನನ್ನ ಉತ್ಸಾಹ ಕುಂದಿತು. ದೆಹಲಿಯಲ್ಲಿದ್ದ ಐದು ವರ್ಷಗಳಲ್ಲಿ ಬಿಂದಾಸ್ ಹೋಳಿ ಆಡಿದೆನು. ಮತ್ತೆ ಅಧ್ಯಾಪಕನಾಗಿ ಧಾರವಾಡಕ್ಕೆ ಬಂದ ಮೇಲೆ ಕಳೆದ ಇಪ್ಪತ್ತಾರು ವರ್ಷಗಳಿಂದ ಬಣ್ಣದಾಟ ಸಾಂಕೇತಿಕ ಮಾತ್ರ. ಯೂನಿವರ್ಸಿಟಿ ಕ್ವಾರ್ಟರ್ಸ್ ನಲ್ಲಿದ್ದಾಗ ಗೆಸ್ಟ್ ಹೌಸ್ ನ ಸಿಬ್ಬಂದಿ ಅಥವಾ ಹಾಸ್ಟೆಲ್ ನಲ್ಲ್ಲಿರುತ್ತಿದ್ದ ವಿದ್ಯಾರ್ಥಿಗಳು ಬಣ್ಣ ಹಾಕಿ ಹೋಗುತ್ತಿದ್ದರು. ಅಲ್ಲಿಂದ ಹೊರಬಂದ ಮೇಲೆ ನಾನು ವಾಸಿಸುವ ಮೊಹಲ್ಲಾದ ಹಾಗೂ ನೆರೆಹೊರೆಯವರು ಬಂದು ಬಣ್ಣ ಹಾಕುತ್ತಾರೆ, ಅವರೊಂದಿಗೆ ಸ್ವಲ್ಪ ಹೊತ್ತು ಸಂಚರಿಸಿ ಮರಳಿ ಬರುತ್ತೇನೆ.
ಆದರೆ ಹೋಳಿಯಾಟದ ವರದಿಗಳನ್ನು, ಚಿತ್ರಗಳನ್ನು ಪತ್ರಿಕೆಯಲ್ಲಿ ಟಿವಿಯಲ್ಲಿ ಮುದದಿಂದ ಆಸ್ವಾದಿಸುತ್ತೇನೆ. ಹೊಸ ಚಿಗುರು, ಕೋಗಿಲೆಗಳ ಕೂಗು, ಋತುಗಳ ರಾಜ ವಸಂತನ ಆಗಮನ, ಬೇಸಿಗೆಯ ಧಗೆ, ಬೆಳದಿಂಗಳು, ಬಣ್ಣ….ಹೋಳಿ ನನಗೆ ಯಾವಾಗಲೂ ಇಷ್ಟ. ಪಾಠ ಮಾಡುವಾಗ, ಶಿವನ ವಿವಿಧ ರೂಪಗಳನ್ನು, ಆಯಾ ರೂಪಗಳಲ್ಲಿ ಶಿವನನ್ನು ಚಿತ್ರಿಸುವ ಕುರಿತ ಆಗಮ, ಪುರಾಣಗಳ ಶಿಲ್ಪಲಕ್ಷಣಗಳ ಕುರಿತ ಪ್ರಸ್ತಾಪಗಳನ್ನು ವಿದ್ಯಾರ್ಥಿಗಳಿಗೆ ವಿವರಿಸುವ ಸಂದರ್ಭಗಳಲ್ಲಿ ತ್ರಿಪುರಾಂತಕ, ಅಂಧಕಾಸುರಮರ್ದನರ ಜೊತೆ ಮದನಾಂತಕನೂ ಬರುತ್ತಾನೆ. ಕಬ್ಬಿನ ಜಲ್ಲೆಯ ಬಿಲ್ಲು, ಹೂವಿನ ಬಾಣ ಹೊತ್ತು ಬರುವ ಕಾಮದೇವನ ಕಲ್ಪನೆಯಲ್ಲಿರುವ ಕಾಠಿಣ್ಯ ಮತ್ತು ಮೃದುತ್ವದ ಸಮಾಗಮವೇ ನನಗೆ ತುಂಬ ಇಷ್ಟವಾಗುತ್ತದೆ. ರತಿದೇವಿ ಕಾಮದೇವರ ಚಿತ್ರಣದಲ್ಲಿ ಪಾರಂಪರಿಕ ಶೈಲಿಯ ವರ್ಣಚಿತ್ರ ಕಲಾವಿದರು ಮೈಯ್ಯೆಲ್ಲ ಕಣ್ಣಾಗಿ, ಕಣ್ನೋಟವೆಲ್ಲ ಕಾಮವಾಗಿ ತೊಡಗಿಕೊಂಡಂಥ ತನ್ಮಯತೆ ಕೆಲಚಿತ್ರಗಳಲ್ಲಿ ಕಂಡುಬರುತ್ತದೆ. ಧರ್ಮ, ಅರ್ಥ, ಮೋಕ್ಷಗಳೊಂದಿಗೆ ಪುರುಷಾರ್ಥಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕಾಮನನ್ನು ಶಿವ ಯಾಕೆ ಸುಟ್ಟ ಎಂಬುದು, ಕತೆಗಳನ್ನೋದಿಯೂ, ನನಗೆ ಅರ್ಥವಾಗಿಲ್ಲ.
ಕಾಮನೆಗಳು ಪ್ರೇಮದ ನವಿರನ್ನು ತೊರೆದು ಕಾಮಮಾತ್ರವಾಗಿ ಮೃಗೀಯಗೊಳ್ಳುವ ಸಾಧ್ಯತೆಯನ್ನು ನಿರುತ್ತೇಜಕಗೊಳಿಸಲೆಂದೆ? ಆದರೆ ಶೃಂಗಾರಭಾವ ರತಿಭಾವವಾಗದೇ ಹೋದಾಗ ಇರುವ ಸೊಗಸೇನು? ಶರಬಾಣ ಬಿಟ್ಟು ಉದ್ಧಟ ಕಾಮನು ಶಿವನ ತಪವ ಭಂಗಗೊಳಿಸಿದನೆಂದೇ ಇಟ್ಟುಕೊಳ್ಳೋಣ. ಶಿವನು ತ್ರಿಲೋಚನನಾಗಿ ಮನ್ಮಥನನ್ನು ಸುಟ್ಟೇ ಬಿಡುವದೇ? ಹಾಗಂತ ಕಾಮದಿಂದ ಮುಕ್ತನಾದನೇ? ಪಾರ್ವತಿಯೊಂದಿಗೆ ಮದುವೆಯೂ ಆಯಿತು, ಮಕ್ಕಳೂ ಆದವು. ಏನು ಕೇಡಾಯಿತು? ಲೋಕ ಕಲ್ಯಾಣಕ್ಕೆ ಅದರಿಂದೇನು ಕಂಟಕವಾಯಿತು? ಹಾಗೇ ಕೃಷ್ಣನ ಹೆಂಡತಿ ರುಕ್ಮಿಣಿ ಸಂಜಾತ ಪ್ರದ್ಯುಮ್ನನು ರತಿಯನ್ನು ಬಂಧಿಸಿಟ್ಟ ಶಂಭ ರಾಕ್ಷಸನನ್ನು ಕೊಂದು ಅವಳೊಂದಿಗೆ ದ್ವಾರಕೆಗೆ ಮರಳಿದ್ದು ಅಂದು ಅಲ್ಲಿ ವಸಂತೋತ್ಸವ ಇದ್ದದ್ದು.., ಅದು ಬೇರೆಯದೇ ಕತೆ.
ಕತೆಗಳಿಗೇನು, ಸಾಕಷ್ಟಿವೆ. ಪ್ರಶ್ನೆಗಳನ್ನೂ ಕೇಳುತ್ತ ಹೋಗಬಹುದು. ಪುರಾಣಗಳನ್ನು ಇತಿಹಾಸವೆಂಬಂತೆ ಗ್ರಹಿಸಿ ಸಮಾಜದ ವ್ಯಾಖ್ಯಾನಗಳಾಗಿ ಮಾರ್ಪಡಿಸಿ ನೊಂದು ಬೆಂದು ಮಾಡುವದು ನಮ್ಮ ಸಂಭ್ರಮವನ್ನು ನಾವೇ ಹತ್ತಿಕ್ಕುವದಕ್ಕಿಂತ ಹೆಚ್ಚಿನ ಪರಿಣಾಮ ಬೀರುತ್ತದೆಂದು ಅನ್ನಿಸುವದಿಲ್ಲ. ತಪೋಭಂಗಕ್ಕೆ ಕಾರಣನಾದ ಮನ್ಮಥನನ್ನು ಶಿವ ಮೂರನೆಯ ಕಣ್ಣು ತೆರೆದು ಸುಟ್ಟ ಘಟನೆಯಿಂದ ಇನ್ನೊಂಥರ ಪ್ರೇರಣೆ ಪಡೆದು ಅರಿಷಡ್ವರ್ಗಗಳ ಮೇಲೆ ವಿಜಯ ಸಾಧಿಸಿ, ಕಾಮದಿಂದ ವಿಮೋಚನೆ ಪಡೆದು, ಧ್ಯಾನಸಮಾಧಿ ಸ್ಥಿತಿಗೆ ಹೋಗೋಣ. ಎಂಥ ಬೋರಿಂಗ್ ಅಲ್ವಾ? ಕಾಮನ ಬಾಣ ತಾಕುತ್ತಲೇ ಶಿವನಿಗೆ ಸಮಸ್ತ ಜಗತ್ತೇ ರಂಗುರಂಗಾಗಿ ಕಂಡಿತಂತೆ ಎಂಬುದನ್ನು ನಂಬಿ ಈ ಮಧುಮಾಸವನ್ನು ಸ್ವಲ್ಪ ಪ್ಯಾಶನೇಟ್ ಆಗಿ ನೇವರಿಸಬಹುದಲ್ಲವೇ?
ಕೊನೇಪಕ್ಷ ಪುರಾಣಗಳನ್ನು, ದಂತಕತೆಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು ನಮ್ಮ ಪರಂಪರೆಯನ್ನು ಹೀಗಳೆಯುವ ವಿಮರ್ಶಾಪ್ರಜ್ಞೆಗೂ ಸ್ವಲ್ಪ ವಿರಾಮ ಕೊಟ್ಟು ಬೆಳಕಿಗೊಂದು ಹಬ್ಬ, ಬಣ್ಣಕ್ಕೊಂದು ಹಬ್ಬ ಸೃಷ್ಟಿಸಿದ ನಮ್ಮದೇ ಪರಂಪರೆಯ ಕಲ್ಪನಾಶ್ರೀಮಂತಿಕೆಯನ್ನು ಸ್ವಲ್ಪ ಮೆಚ್ಚಿ, ಸ್ವಲ್ಪ ನಮಿಸಿ ಚೈತ್ರ ವೈಶಾಖವೆಂಬ ಜೇನಿನಂತೆ ಸವಿಯಾದ ತಿಂಗಳುಗಳನ್ನು ಬಣ್ಣ ಬಣ್ನದ ಓಕುಳಿಯೊಂದಿಗೆ ಕೋಟ್ಯಾಂತರ ಜನ ಆನಂದಿಸುವದನ್ನಾದರೂ ಆನಂದಿಸಬಹುದಲ್ಲವೆ?
 

‍ಲೇಖಕರು G

March 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: