ಅಶೋಕ್ ಶೆಟ್ಟರ್ ಕಾಲಂ : ಅಸಹನೆಯ ಸಂಸ್ಕೃತಿ ಮತ್ತು ಅನಂತಮೂರ್ತಿಯವರ ಅಳಲು

ಈ ಹಿಂದೆ ’ಅವಧಿ’ಯಲ್ಲಿ ಪ್ರಕಟವಾಗಿದ್ದ ಬರಹ. ಯು ಆರ್ ನೆನಪಿನಲ್ಲಿ ಮತ್ತೆ ನಿಮ್ಮ ಓದಿಗೆ

***

– ಅಶೋಕ್ ಶೆಟ್ಟರ್

“ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ ನಮ್ಮ ಕನಸಿನ ಭಾರತ ನೋಡಲು ಸಾಧ್ಯವಿಲ್ಲವೆಂದು, ಭಾರತ ಸರ್ವ ಜನಾಂಗದ ಸುಂದರ ತೋಟವಾಗಿ ಉಳಿಯುವುದಿಲ್ಲವೆಂದು, ಗಾಂಧಿ, ನೆಹರು ತತ್ವಗಳು ಇಲ್ಲದ ದೇಶದಲ್ಲಿ ನಾನು ಬದುಕಲು ಇಚ್ಛೆ ಪಡುವುದಿಲ್ಲವೆಂದು ಮತ್ತು ಮೋದಿಯಂತಹವರು ದೇಶವನ್ನು ಮುನ್ನಡೆಸುವುದಾದರೆ ನಾನು ಮತ್ತು ನನ್ನಂಥವರು ಭಾರತದಲ್ಲಿ ಬದುಕಲು ಇಷ್ಟ ಪಡುವದಿಲ್ಲವೆಂದು ಸಾಹಿತಿ ಯು.ಆರ್.ಅನಂತಮೂರ್ತಿ ಹೇಳಿದ್ದಾರೆ.”
ನಿನ್ನೆ ( ಅಂದರೆ ಸಪ್ಟಂಬರ್ ೧೫ ರಂದು) ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಅನಂತಮೂರ್ತಿಯವರು ಹೇಳಿದ ಈ ಮಾತು ನಿನ್ನೆ ಮತ್ತು ಇಂದು ಮಾಧ್ಯಮಗಳಲ್ಲಿ ವರದಿಯಾಯಿತು. ಇದಕ್ಕೆ ಬಿಜೆಪಿ, ವಿ ಎಚ್ ಪಿ ಮತ್ತು ಅದರ ಹಲವಾರು ವಿವಿಧ ಹೆಸರಿನ ಸಂತತಿಗಳ ಬೆಂಬಲಿಗರು, ಸದಸ್ಯರು, ಮೋದಿಪ್ರಿಯರು ವ್ಯಕ್ತ ಪಡಿಸಿದ ಪ್ರತಿಕ್ರಿಯೆಗಳಲ್ಲಿ ಯಥಾಪ್ರಕಾರದ ಕಾಂಗ್ರೆಸ್ ಏಜಂಟ್, ಬುದ್ಧಿಜೀವಿ-ಲದ್ದಿಜೀವಿ, ಸಿಕ್ಯುಲರ್ ಮೊದಲಾದ ಹಳಸಲು ವಿಶೇಷಣಗಳನ್ನು ಹೊರತು ಪಡಿಸಿದ ಚಿಂತನಾರ್ಹ ವಾದಗಳಾಗಲೀ, ಭರ್ತ್ಸನೆಗೆ ಮೀರಿದ ಹೊಸ ಅಂಶಗಳಾಗಲೀ ಅಷ್ಟಾಗಿ ಕಂಡು ಬರಲಿಲ್ಲ. ಯಥೇಚ್ಛ ಕುಹಕವಿತ್ತು. ಕುಹಕ ಯಾವದೇ ಪಕ್ಷ ಅಥವಾ ಸಿದ್ಧಾಂತಕ್ಕೆ ಗೌರವವನ್ನು ತಂದುಕೊಡುವದು ಒತ್ತಟ್ಟಿಗಿರಲಿ ವಾಸ್ತವವಾಗಿ ಯಾವ ಪಕ್ಷ ಅಥವಾ ಸಿದ್ಧಾಂತದ ಪರವಾಗಿ ಅದು ವ್ಯಕ್ತವಾಗುತ್ತದೆಯೋ ಅದಕ್ಕೇ ಮುಳುವಾಗಬಲ್ಲದು. ಅದಕ್ಕೆ ನಂತರ ಬರೋಣ.
ಅನಂತಮೂರ್ತಿಯವರು ಪ್ರಜಾಪ್ರಭುತ್ವವಾದಿ ಎಂಬುದರಲ್ಲಿ ಅನುಮಾನವಿಲ್ಲ. ಭಾರತದಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ತಾವು ಗಳಿಸುವ ಮತಗಳ ಪ್ರಮಾಣ ಮತ್ತು ವಿಧಾನಸಭೆ ಅಥವಾ ಲೋಕಸಭೆಗೆ ಆರಿಸಿಬಂದ ತಮ್ಮ ಪಕ್ಷಗಳ ಅಭ್ಯರ್ಥಿಗಳ ಸಂಖ್ಯೆಯನ್ನು ಆಧರಿಸಿ ಸ್ವತಂತ್ರವಾಗಿ ಅಥವಾ ಇತರ ಸಮಾನ ಮನಸ್ಕ ಪಕ್ಷಗಳೊಂದಿಗೆ ಅಥವಾ ಒಂದು ಸಾಮಾನ್ಯ ಕಾರ್ಯಪ್ರಣಾಲಿಯ ನೆಲೆಯಲ್ಲಿ ಮೈತ್ರಿಕೂಟ ಏರ್ಪಡಿಸಿಕೊಂಡು ಸರಕಾರ ರಚಿಸುವದನ್ನು ನಾವು ೧೯೭೭ರಿಂದ ನೋಡಿಕೊಂಡು ಬಂದಿದ್ದೇವೆ. ನಮ್ಮ ಚುನಾವಣಾ ವ್ಯವಸ್ಥೆ ಬಹಳ ಆದರ್ಶದ ಮಾದರಿಯದಲ್ಲ, ಒಪ್ಪೋಣ. ಇದರಲ್ಲಿ ಹಣ, ಹೆಂಡ,ಸಾರಾಯಿ, ಸೀರೆ, ಪಂಚೆ ಹಂಚುವದರಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿಯೂ ಕಡಿಮೆಯೇನಿಲ್ಲ. ಕಾಂಗ್ರೆಸ್ ಗಿಂತ ಬಿಜೆಪಿ ಭಿನ್ನವೆಂದು ಭಾವಿಸಲು ಕಾರಣಗಳೂ ಈಗ ಇರಬೇಕಿಲ್ಲ .
ಬಿಜೆಪಿ ತಾನು ಪ್ರತಿನಿಧಿಸುತ್ತೇನೆ ಎಂದು ಹೇಳಿಕೊಳ್ಳುವ ಎಲ್ಲ ದೊಡ್ಡ ದೊಡ್ಡ ಸಿದ್ಧಾಂತ ಮೌಲ್ಯಗಳ ಹೊರತಾಗಿ ಕಾಂಗ್ರೆಸ್ ನ ಮಿರರ್ ಇಮೇಜ್ ಅಷ್ಟೇ ಆಗಿರಬಲ್ಲದು ಎಂಬುದನ್ನು ಕರ್ನಾಟಕದಲ್ಲಿನ ಅದರ ಐದು ವರ್ಷಗಳ ಆಳ್ವಿಕೆಯ ದಾಖಲೆ ತೋರಿಸುತ್ತದೆ. ಭಾರತದ ಬಿದ್ದುಹೋದ ಆರ್ಥಿಕ ವ್ಯವಸ್ಥೆಯನ್ನು ಹಿಡಿದೆತ್ತಿ, ಭಾರತವನ್ನು ಗುಜರಾತಿನಲ್ಲಿ ಮೋದಿಯವರು ಸಾಧಿಸಿದ್ದಾರೆ ಎಂದು ಬಿಜೆಪಿ ಬಿಂಬಿಸಿಕೊಂಡು ಬರುತ್ತಿರುವಂಥ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ಭಾರತವನ್ನು ನಂದನವನವಾಗಿ ಮಾಡುತ್ತಾರೆಂಬಂತೆ ಮೋದಿಯವರಾಗಲೇ ಪ್ರಧಾನಿ ಆಗೇ ಬಿಟ್ಟರು ಎಂಬಂತೆ ಸಂಭ್ರಮಿಸುತ್ತಿರುವ ಅವರ ಬೆಂಬಲಿಗರು ಆಡುತ್ತಿರುವದನ್ನು ನಾವು ನೋಡುತ್ತಿದ್ದೇವೆ. ಇದು ರಾಜಕೀಯದಲ್ಲಿ ಆಗುವಂಥದೇ.
ಈಗ ನನ್ನ ಪ್ರಶ್ನೆ ಏನೆಂದರೆ ಪ್ರಜಾಪ್ರಭುತ್ವವಾದಿಯಾದ ಅನಂತಮೂರ್ತಿಯವರು ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆಂದೋ ಅಂಥ ಭಾರತದಲ್ಲಿ ಬದುಕಲಿಚ್ಛಿಸುವದಿಲ್ಲವೆಂದೋ ಹೇಳುವದು ಯಾವ ರಾಜಕೀಯ ಪ್ರೌಢಿಮೆಯನ್ನು ತೋರುತ್ತದೆ? ಮೋದಿ ಪ್ರಧಾನಿಯಾಗುವದಾದರೆ ಭಾರತ ಹಲವು ಗಂಭೀರ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆಂದೋ, ಮೋದಿ ಪ್ರಧಾನಿಯಾಗಲು ಒತ್ತಾಸೆಯಾಗಿ ನಿಂತ ಕಾರ್ಪೋರೇಟ್ ವಲಯದ ಪ್ರಾಬಲ್ಯದಿಂದಾಗಿ ಒಂದು ಹೃದಯಹೀನ ವಾಣಿಜ್ಯೀಕೃತ ವಾತಾವರಣ ಸೃಷ್ಟಿಯಾಗುತ್ತದೆಂದೋ, ಮತೀಯ ವಿಭಜನೆ ಇನ್ನೂ ಹೆಚ್ಚಾಗುತ್ತದೆಂದೋ ಅಥವಾ ಇನ್ನೇನೋ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆಂದೋ ಅನಂತಮೂರ್ತಿಯವರು ಭಾವಿಸುವದಾದರೆ ಅದರ ಬಗ್ಗೆ ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ, ಬೌದ್ಧಿಕ ರಾಜಕೀಯ ಗುಂಪುಗಳೊಂದಿಗೆ ಕೈ ಜೋಡಿಸಿ ನಾನೊಂದು ಜನಜಾಗೃತಿಯ ಆಂದೋಲನ ಹಮ್ಮಿಕೊಳ್ಳುತ್ತೇನೆ, ಮೋದಿ ಪ್ರಧಾನಿಯಾಗದಂತೆ ನೋಡಿಕೊಳ್ಳುವಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡಾದ ಮೇಲೆ ಅದರ ಪ್ರಮುಖ ಅಭಿವ್ಯಕ್ತಿಯಾದ ಚುನಾವಣೆ ವ್ಯವಸ್ಥೆಯನ್ನೂ, ಅದರ ಫಲಿತಾಂಶಗಳನ್ನೂ ನಾವು ಗೌರವಿಸಬೇಕಾಗುತ್ತದೆ. ನಮ್ಮ ರಾಜಕೀಯ ಒಲವುಗಳೇನೇ ಇರಲಿ. ಬಿಜೆಪಿ ನಮ್ಮ ದೇಶದ ಚುನಾವಣಾ ಆಯೋಗದಿಂದ ಒಂದು ರಾಷ್ಟ್ರೀಯ ಪಕ್ಷವೆಂದು ಮಾನ್ಯತೆ ಪಡೆದ ಪಕ್ಷ. ಅದಕ್ಕೊಂದು ಸಿದ್ಧಾಂತವಿದೆ. ಅದನ್ನು ಹಿಂದು ರೈಟ್ ವಿಂಗ್ ಅಥವಾ ಬಲಪಂಥೀಯ ಸಿದ್ಧಾಂತವೆಂದು ಕರೆಯಲಾಗುತ್ತದೆ. ಅದನ್ನು ನಾವು ಒಪ್ಪುತ್ತೇವೋ ಬಿಡುತ್ತೆವೋ ಅದು ಬೇರೆ ಪ್ರಶ್ನೆ. ಆದರೆ ಅದನ್ನು ಒಪ್ಪುವ ಜನರೂ ಇದ್ದಾರೆ. ಬಲಪಂಥೀಯ ಸಿದ್ಧಾಂತವನ್ನು ಹೊಂದಿದ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸುವದು, ಸೆಂಟ್ರಿಸ್ಟ್ ಅಥವಾ ಎಡಪಂಥೀಯ ಸೋಷಲಿಸ್ಟ್ ಪಕ್ಷಗಳನ್ನು ಸೋಲಿಸಿ ಗೆದ್ದು ಬಂದು ಸರಕಾರವನ್ನು ರಚಿಸುವದು ಅಥವಾ ಸೋತು ಮೂಲೆ ಸೇರುವದು ಪ್ರಾನ್ಸ್ ದೇಶವನ್ನೂ ಒಳಗೊಂಡು ಯುರೋಪಿನ ದೇಶಗಳಲ್ಲಿ ನಾವು ನೋಡಿರುವಂಥದ್ದು. ಸೈದ್ಧಾಂತಿಕವಾಗಿ ಪೂರ್ವ ಪಶ್ಚಿಮವಾಗಿದ್ದರೂ ಸುದೀರ್ಘ ಕಾಲದ ವರೆಗೆ ಬಿಹಾರದಲ್ಲಿ ಸಮಾಜವಾದಿ ಹಿನ್ನೆಲೆಯ ಸಂಯುಕ್ತ ಜನತಾ ದಳದೊಂದಿಗೆ ಬಿಜೆಪಿ ಮೈತ್ರಿ ಸರಕಾರದಲ್ಲಿತ್ತು.
ಕೇಂದ್ರದಲ್ಲಿ ಹಲವು ಇತರ ಪಕ್ಷಗಳ ಸಹಯೋಗದಲ್ಲಿ ಎನ್.ಡಿ.ಎ ಮೈತ್ರಿಸರಕಾರದ ನೇತೃತ್ವ ವಹಿಸಿತ್ತು. ಹಲವು ಇತರ ಸೈದ್ಧಾಂತಿಕ ಹಿನ್ನೆಲೆಯ ಪಕ್ಷಗಳ ನಿಲುವುಗಳನ್ನು ಉಪೇಕ್ಷಿಸಿ ಅದು ತನ್ನ ಅಜೆಂಡಾವನ್ನು ಜಾರಿಗೊಳಿಸುತ್ತ ಹೋಗುವದು ಸಾಧ್ಯವಿರಲಿಲ್ಲ. (ಓಡಿಸಾದಲ್ಲಿ ಮಿತಿಮೀರಿದ ಕೋಮು ವಿದ್ವೇಷದಿಂದ ಆತಂಕಿತವಾದ ಅಲ್ಲಿಯ ಪ್ರಾದೇಶಿಕ ಪಕ್ಷ ಬಿಜು ಜನತಾ ದಳ ಬಿಜೆಪಿ ಯ ಮೈತ್ರಿಕೂಟದಿಂದ ಹಿಂದೆ ಸರಿದದ್ದನ್ನು ಸ್ಮರಿಸಬಹುದು). ಇಂಥ ಸನ್ನಿವೇಶಗಳಲ್ಲಿ ಅದರ ಹಿಂದುತ್ವವಾದಿ ಅಜೆಂಡಾ ಹಿನ್ನೆಲೆಗೆ ಸರಿಯಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವ ೩೭೦ ನೇ ಕಲಮಿನ ರದ್ಧತಿ, ಗೋ ಹತ್ಯೆ ನಿಷೇಧ, ಸಮಾನ ನಾಗರಿಕ ಸಂಹಿತೆಯೇ ಮೊದಲಾದ ತನ್ನ ಕಾರ್ಯಪ್ರಣಾಲಿಯನ್ನೂ ಅದು ಗಂಟು ಮೂಟೆ ಕಟ್ಟಿ ಇಡಬೇಕಾಯಿತು. ಇವೆಲ್ಲವುಗಳನ್ನು ನಾವು ಸಮಾಜವಾದಿ ಹಿನ್ನೆಲೆಯಿಂದ ಬಂದಂಥವರನ್ನೂ ಒಳಗೊಂಡು ಹಲವು ಥರದ ರಾಜಕೀಯ ರಚನೆಗಳು ಬಿಜೆಪಿ ತನ್ನ ಕೋಮು ಅಜೆಂಡಾವನ್ನು ಜಾರಿಗೊಳಿಸದಂತೆ ನಿಯಂತ್ರಿಸುವ ರಾಜಕೀಯ ಚಾಕಚಕ್ಯತೆಯಾಗಿಯೂ ನೋಡಬಹುದಲ್ಲವೆ?

ಕರ್ನಾಟಕದಲ್ಲಿ ನಮಗೂ ಒಂದು ಛಾನ್ಸ್ ಕೊಟ್ಟು ನೋಡಿ ಎಂದು ಬಿಜೆಪಿ ಗೋಗರೆಯಿತು. ಮತದಾರ ಛಾನ್ಸ್ ಕೊಟ್ಟ. ಬಹುಪಾಲು ಎಲ್ಲ ಚುನಾವಣೆಗಳಲ್ಲೂ ಕೈ ಹಿಡಿದೆತ್ತಿದ. ಜನರ ಸಂಕಟ ಸಮಸ್ಯೆಗಳಿಗೆ ಮಿಡಿಯದ ಬರಡುತನ ಈ ಸರಕಾರಕ್ಕೆ ಅಕಾಲಿಕವಾಗಿ ಬಂದೊದಗಿದೆ ಎಂದು ಮನದಟ್ಟಾದಾಗ ಆ ಸರಕಾರ ರಚಿಸಿದ್ದ ಪಕ್ಷವನ್ನು ತಿರಸ್ಕರಿಸಿದ. ಐದು ವರ್ಷಗಳ ಕಾಲ ತಾನು ವನವಾಸಕ್ಕಟ್ಟಿದ್ದ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆತಂದ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಹೇಗೆ ತನ್ನ ಮ್ಯಾಂಡೇಟ್ ಅನ್ನು ನಿರ್ವಹಿಸುತ್ತದೆ ಎನ್ನುವದನ್ನು ಅದರ ಅವಧಿ ಮುಗಿಯುವ ವರೆಗೆ ಮತದಾರ ನೋಡುತ್ತಾನೆ, ವಿರೋಧ ಪಕ್ಷಗಳಾಗಿ ಜೆಡಿಎಸ್ ಮತ್ತು ಬಿಜೆಪಿ ತಮ್ಮ ಹೊಣೆಗಾರಿಕೆಯನ್ನು ಹೇಗೆ ನಿರ್ವಹಿಸುತ್ತವೆ ಎನ್ನುವದನ್ನೂ ನೋಡುತ್ತಾನೆ. ಅವುಗಳ ಹಣೆಬರಹವನ್ನು ಮುಂದಿನ ಚುನಾವಣೆಯಲ್ಲಿ ತನ್ನ ಮತದ ಮೂಲಕ ಬರೆಯುತ್ತಾನೆ. ಮತದಾರನ ಪ್ರೌಢಿಮೆಯನ್ನು ಅವಮಾನಿಸಬೇಕಿಲ್ಲ. ಇಡೀ ಬಿಜೆಪಿ ಸರಕಾರದ ಕಾರ್ಯಕಾಲದುದ್ದಕ್ಕೂ ಅಧಿಕೃತ ವಿರೋಧ ಪಕ್ಷಕ್ಕೂ ಮಿಗಿಲಾಗಿ ಅದರ ಮಗ್ಗಲು ಮುಳ್ಳಾಗಿದ್ದ ಕುಮಾರಸ್ವಾಮಿ ಮೊನ್ನೆಯ ಉಪಚುನಾವಣೆಯಲ್ಲಿ ಅದೇ ಬಿಜೆಪಿಯೊಂದಿಗೆ ಮಾಡಿಕೊಂಡ ಸಂಧಿಸಾಧಕ ಸಂಧಾನಕ್ಕೆ ರೋಸಿದ ಮತದಾರ ಜೆಡಿಎಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿದ. ಇದನ್ನು ನಾವು ಗೌರವಿಸಬೇಕು ತಾನೆ?
ಹೊರಗೆ ನಿಂತು ಸಮಾಜದಲ್ಲಿ ಜನರನ್ನು ಮತೀಯ ಜಾತೀಯ ಪರಿಗಣನೆಗಳಗುಂಟ ವಿಭಾಗಿಸುವದು, ಕ್ಷೋಭೆಯನ್ನು ಉಂಟು ಮಾಡುವದು ಬೇರೆ. ಆಳ್ವಿಕೆಯ ಸರಕಾರವಾಗಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸಿಕೊಂಡು ಹೋಗುವದು ಬೇರೆ. ಬಾಯಿ ತೆಗೆದರೆ ಬೆಂಕಿ ಉಗುಳುವ ಪ್ರಮೋದ್ ಮುತಾಲಿಕ್ ನಂಥವರು ಕರ್ನಾಟಕದ ಬಿಜೆಪಿ ಸರಕಾರಕ್ಕೆ ಅಪಥ್ಯವಾದದ್ದು ಇಂಥ ಸಂದಿಗ್ಧಗಳಿಂದಲೇ. ಹುಡುಗ ಹುಡುಗಿಯರು ಬರ್ಥಡೇ ಪಾರ್ಟಿ ಮಾಡುವಲ್ಲಿ ನುಗ್ಗಿ ಅವರನ್ನು ಬಡಿದು ಬಿಸಾಕಿದ, ಅಥವಾ ತನ್ನ ಮುಸ್ಲಿಂ ಸಹಪಾಠಿಯೊಂದಿಗೆ ಯಾವುದಾದರೂ ಹುಡುಗಿ ಕಾಲಕ್ಷೇಪ ಮಾಡುತ್ತಿದ್ದರೆ ಹಿಡಿದೆಳೆದು ಹೊಡೆದ, ಚರ್ಚ್ ಮೇಲೆ ದಾಳಿ ಮಾಡಿದ ಬಿಜೆಪಿ ಬೆಂಬಲಿಗ ಧರ್ಮ ರಕ್ಷಕರು, ನೈತಿಕ ಪೋಲಿಸರು ಕೊಟ್ಟ ಕೊಡುಗೆ ಏನೆಂದರೆ ಮತದಾರರು ತಾವೇ ಬಹುಸಂಖ್ಯೆಯಲ್ಲಿ ಆರಿಸಿ ತಂದ ಬಿಜೆಪಿ ಉಮೇದುವಾರರನ್ನು ಇನ್ನು ನಡೆಯಿರಪ್ಪ ಸಾಕು ಎಂದು ಮನೆಗೆ ಕಳಿಸುವಂತೆ ಮಾಡಿದ್ದು.
ಬಿಜೆಪಿ ವಿಭಜನೆಯಾಗಿ ಕೆಜೆಪಿ, ಬಿ ಎಸ್ ಆರ್ ಎಂದು ಹೋಳಾದದ್ದು ಇದಕ್ಕೆ ಕಾರಣ ಎನ್ನುವಂತಿಲ್ಲ. ಅವು ಗಳಿಸಿದ್ದ ಹತ್ತೋ ಹನ್ನೊಂದೋ ಸ್ಥಾನಗಳನ್ನು ಬಿಜೆಪಿ ಗಳಿಸಿದ ಸ್ಥಾನಗಳಿಗೆ ಜೋಡಿಸಿದರೂ ಸ್ಥಿತಿ ಎಲ್ಲಿತ್ತೋ ಅಲ್ಲೇ. ಕರಾವಳಿಯಲ್ಲಿ ಯಡಿಯೂರಪ್ಪ ಅಥವಾ ಶ್ರೀರಾಮುಲುಗೆ ಅಂಥ ಬೇಸ್ ಏನೂ ಇರಲಿಲ್ಲವೆಂಬುದೂ ಸರ್ವವಿದಿತ. ಇಷ್ಟೇ, ಮತದಾರ ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ. ಮತ್ತು ಇದಕ್ಕೆ ಕಾರಣ ಸಂಘವೆಂಬ ಪರಿವಾರವೊಂದರ ಶಿಶುಗಳ ವರ್ತನೆಯನ್ನು ನಿಯಂತ್ರಿಸಲಾಗದ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ಅಥವಾ ಅದರ ಕುರಿತು ಮೌನವಾಗಿರುವ ಅಸಹಾಯಕತೆಗೆ ಬಿಜೆಪಿ ಸರಕಾರ ಒಳಗಾಗಿತ್ತೆಂಬುದು. ಇಂಥ ಸೂಕ್ಷ್ಮ ಗಳಲ್ಲಿ ನಾವು ನಮ್ಮ ಪ್ರಜಾಪ್ರಭುತ್ವದ ಸ್ವಾರಸ್ಯಗಳನ್ನು ಕಾಣಲು ನಿರಾಕರಿಸಿದರೆ ಹೇಗೆ?
ಅದರೆಲ್ಲ ಅಪಕ್ವತೆ, ಭ್ರಷ್ಟ ಸ್ವರೂಪದ ನಡುವೆಯೂ ನಮ್ಮ ಪ್ರಜಾಪ್ರಭುತ್ವದಲ್ಲಿ ಭಾರತದ ಮತದಾರ ಭ್ರಷ್ಟಗೊಂಡು ನಿಂತ, ನಿಷ್ಕ್ರಿಯಗೊಂಡ, ಅಹಂಕಾರವನ್ನು ಮೈಗೂಡಿಸಿಕೊಂಡ ಸರಕಾರಗಳನ್ನು ಮತ ಚಲಾಯಿಸುವ ಮುಖಾಂತರವೇ ಕೆಡವಿದ್ದಾನೆ, ಬೇರೆ ಸರಕಾರಗಳನ್ನು ಅಧಿಕಾರ ಸ್ಥಾನಕ್ಕೆ ತಂದಿದ್ದಾನೆ. ಒಂದು ವೇಳೆ ಮೋದಿ ನೇತೃತ್ವದಲ್ಲಿ ಗದ್ದುಗೆ ಏರುವ ಸರಕಾರ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಸರಕಾರವಾದರೆ ಆಗಲೂ ಅನಂತಮೂರ್ತಿಯವರಿಗೆ ಹಲವು ದೇಶಗಳ ಆಧುನಿಕ ರಾಜಕೀಯ ಚರಿತ್ರೆಯಲ್ಲಿ ದಮನಕಾರಿ ಪ್ರಭುತ್ವಗಳ ವಿರುದ್ಧ ಹೋರಾಡಿದ ಕವಿ ಲೇಖಕರಂತೆ ತಾವೂ ಹೋರಾಡುವದೊಂದೇ ಮಾರ್ಗವಾಗಬೇಕು. ಬಿಜೆಪಿ ಒಂದು ಫ್ಯಾಸಿಸ್ಟ್ ವ್ಯವಸ್ಥೆಯನ್ನು ಪ್ರತಿನಿಧಿಸುವದಾದರೆ ನಾನು ಅದರ ವಿರುದ್ಧ ಸೆಣಸುತ್ತೇನೆ, ನನ್ನನ್ನು ಕೊಂದರೂ ಸೈ, ಜೇಲಿಗಟ್ಟಿದರೂ ಸೈ ಎಂಬ ನೈತಿಕತೆ ಅನಂತಮೂರ್ತಿಯವರದಾಗಬೇಕು. ಅವರ ಆರೋಗ್ಯ ಈಗಿರುವ ಸ್ಥಿತಿಯಲ್ಲಿ ಅದು ಕಾರ್ಯಸಾಧುವಾಗಲಿಕ್ಕಿಲ್ಲ. ಆದರೆ ತಾತ್ವಿಕ ನೆಲೆಯಲ್ಲಿ ಅದರ ಅಂತಸ್ಸತ್ವ ಅದಾಗಿದ್ದರೇ ಚೆನ್ನ. “ಜೀನಾ ಯಂಹಾ ಮರನಾ ಯಂಹಾ, ಇಸ್ ಕೇ ಸಿವಾ ಜಾನಾ ಕಂಹಾ” ಎಂಬಂತೆ ಇಲ್ಲೇ ಈಸಬೇಕು ಇದ್ದು ಜೈಸಬೇಕು. ಅನಂತಮೂರ್ತಿಯವರಿಂದ ಪುರೋಗಾಮಿ ಚಿಂತನೆಯ ಹೊಸ ಪೀಳಿಗೆ ಈ ಬದ್ಧತೆಯನ್ನು ನಿರೀಕ್ಷಿಸಬೇಕೇ ವಿನ: ರೊಮ್ಯಂಟಿಕ ಆಗಿ “ಅವರನ್ನು ಉಳಿಸಿಕೊಳ್ಳುವ” ಮಾತನಾಡುವ ಹುಸಿ ಭಾವುಕತೆಯಿಂದ ಹೊರಬರಬೇಕು.
ಕಳೆದೆರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಸೋಲನ್ನುಂಡು ತಾನು ಪ್ರಾಬಲ್ಯ ಗಳಿಸಿಕೊಂಡು ಸರಕಾರ ರಚಿಸಿದ್ದ ರಾಜ್ಯಗಳಲ್ಲಿಯೂ ಸೋಲನುಭವಿಸಿ ಕಂಗೆಟ್ಟಿರುವ ಬಿಜೆಪಿ ಗೆ ಮುಳುಗುವ ಹಡಗಿಗೆ ಹುಲ್ಲು ಕಡ್ಡಿಯಾಸರೆಯಾಗಿ ನರೇಂದ್ರಭಾಯ್ ಮೋದಿ ಸಿಕ್ಕು ಅವರನ್ನು ಚುನಾವಣೆ ಪ್ರಚಾರ ಸಮಿತಿಯ ಮುಖ್ಯಸ್ಥನಾಗಿ ನೇಮಿಸಿದ್ದೇ ಕಾರಣವಾಗಿ ಬಿಹಾರದಲ್ಲಿ ಬಹುಕಾಲದ ರಾಜಕೀಯ ಮಿತ್ರನಾಗಿದ್ದ ಜೆಡಿಯು ಪಕ್ಷದ ಮೈತ್ರಿಗೆರವಾಗಿ ಸರಕಾರದಿಂದ ಹೊರಬಿದ್ದರೂ ಆರ್ ಎಸ್ ಎಸ್ ಪ್ರಣೀತ ನಿಲುವಿಗೆ ಅನುಗುಣವಾಗಿ, ಮೋದಿಯವರನ್ನೇ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಅನಿವಾರ್ಯತೆಗೆ ಅದು ಕಟ್ಟು ಬಿದ್ದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳ ಹೊರತು ಪಡಿಸಿ ಇನ್ನೊಂದು ಮೈತ್ರಿ ಪಕ್ಷವಿಲ್ಲದ, ಕರ್ನಾಟಕವನ್ನೂ ಒಳಗೊಂಡು ಹಲವೆಡೆ ತನ್ನ ಸರಕಾರಗಳನ್ನು ಕಳೆದುಕೊಂಡ ಮತ್ತು ಸಾರ್ವತ್ರಿಕ ಚುನಾವಣೆಗೆ ಮುನ್ನ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭೆಗಳಿಗೆ ಇಷ್ಟರಲ್ಲೇ ನಡೆಯಲಿರುವ ಚುನಾವಣೆಗಳಲ್ಲಿ ತನ್ನ ಇಲೆಕ್ಟೋರಲ್ ಗಳಿಕೆಯ ಬಗ್ಗೆ ಇನ್ನೂ ಖಚಿತತೆ ಇಲ್ಲದ ಸ್ಥಿತಿಯಲ್ಲಿ ನರೇಂದ್ರಭಾಯ್ ಮೋದಿ ಪ್ರಧಾನಿಯಾಗಲು ಬೇಕಾದ ಸಂಸದರ ಸಂಖ್ಯೆ ಬಿಜೆಪಿಗೆ ಎಲ್ಲಿಂದ ಬರುತ್ತದೆ? ಎಂಬ ಯಕ್ಷ ಪ್ರಶ್ನೆಯನ್ನು ಸ್ವಲ್ಪ ಪ್ರಬುದ್ಧವಾಗಿ ವಿಶ್ಲೇಷಿಸಿದರೆ ಅನಂತಮೂರ್ತಿಯವರು ಮೋದಿ ಪ್ರಧಾನಿಯಾದ ಸನ್ನಿವೇಶದಲ್ಲಿ ತಾವು ಬದುಕಿ ಉಳಿಯ ಬಯಸದ, ಭಾರತದಲ್ಲಿ ಇರಬಯಸದ ಮಾತುಗಳು ಸ್ವಲ್ಪ ಅವಸರದವು ಎನಿಸುತ್ತದೆ.
ಇದಕ್ಕಿಂತ ಬೇಸರದ ವಿಷಯವೆಂದರೆ ಅನಂತಮೂರ್ತಿಯವರ ಹಿಂದೆ ಸದಾ ಬಿದ್ದಿರಿ ಎಂದು ಆಜ್ಞೆಯಾಗಿದೆಯೇನೋ ಎಂಬಂತೆ ಆ ಹೇಳಿಕೆ ಬಂದೊಡನೆ ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತು ಬಂದ ಪ್ರತಿಕ್ರಿಯೆಗಳಲ್ಲಿ ಕಂಡುಬಂದ ಪೆದ್ದು ಪೆದ್ದು ಮಾತುಗಳು ಮತ್ತು ಸಂವೇದನಾಹೀನ ಪೆಡಸುತನ. ಅನಂತಮೂರ್ತಿ ಕನ್ನಡದ ಬಹುಮುಖ್ಯ ಬರಹಗಾರರಲ್ಲೊಬ್ಬರು. ಸಂಪ್ರದಾಯ ಮತ್ತು ಆಧುನಿಕತೆಗಳ ನಡುವಿನ ಸಂಘರ್ಷಗಳನ್ನು ತಮ್ಮ ಹಲವು ಕತೆ-ಕಾದಂಬರಿಗಳಲ್ಲಿ ಸೂಕ್ಷ್ಮವಾಗಿ ಗ್ರಹಿಸಿ ಚಿತ್ರಿಸಿದವರು. ತಮ್ಮ ತಾರುಣ್ಯದ ದಿನಗಳಿಂದಲೇ ಸಮಾಜವಾದಿ ಚಿಂತನೆಯನ್ನು ಬೆಳೆಸಿಕೊಂಡು ಬಂದವರು. ಕನ್ನಡಕ್ಕೆ ಸಂದ ಜ್ಞಾನಪೀಠ ಪ್ರಶಸ್ತಿಗಳ ಸಂಖ್ಯೆಗೆ ಮತ್ತೊಂದು ಅಂಕಿಯನ್ನು ಸೇರಿಸಿದವರು.ಜನಸಂಘದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಅಡಿಗರ ರಾಜಕೀಯ ನಿಲುವನ್ನು ನಿರಾಕರಿಸಿಯೂ ಅವರೊಂದಿಗಿನ ತಮ್ಮ ವೈಯಕ್ತಿಕ ಸ್ನೇಹ ಸಂಬಂಧ ಮುಕ್ಕಾಗದಂತೆ ಇದ್ದವರು. ಸೈದ್ಧಾಂತಿಕ ಭಿನ್ನತೆಗಳೇ ಬೇರೆ, ಮನುಷ್ಯ ಸಂಬಂಧಗಳೇ ಬೇರೆ. ಹೀಗಾಗಿ ಎಂಥ ಬದ್ಧ ರಾಜಕೀಯ ವೈರಿಯಾದರೂ ಆರೋಗ್ಯ, ಕುಟುಂಬದಂಥ ವಿಷಯಗಳಲ್ಲಿ ಸಂಕಷ್ಟಗಳು ಬಂದಾಗ ನಮ್ಮ ಕಡು ಭ್ರಷ್ಟ ರಾಜಕೀಯ ನಾಯಕರೂ ಮಾನವೀಯತೆ ತೋರುವ ಸಂದರ್ಭಗಳನ್ನು ನಾವು ನೋಡುತ್ತೇವೆ
ಅನಂತಮೂರ್ತಿಯವರ ಈ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಬಾಲಿಶವಾಗಿ ಮಾತನಾಡುವವರು ಕನಿಕರಕ್ಕೆ, ಹೆಚ್ಚೆಂದರೆ ಜುಗುಪ್ಸೆಗೆ ಮಾತ್ರ ಪಾತ್ರರಾಗಬಲ್ಲರು. ಭಾರತದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿಯೊಬ್ಬನನ್ನು ಅವನು ಹೊಂದಿರುವ ರಾಜಕೀಯ ಸೈದ್ಧಾಂತಿಕ ನಿಲುವುಗಳೇ ಕಾರಣವಾಗಿ ಅವನದೇ ನಾಡಿನಲ್ಲಿ ಯಾವುದೋ ಕಾಲ್ಪನಿಕ ಧರ್ಮರಕ್ಷಕ ಪಾತ್ರ ಹೊತ್ತು ಹೀಯಾಳಿಸುವ, ಕುಹಕವಾಡುವ ಸಂಸ್ಕೃತಿಯನ್ನು ವಿದ್ಯಾವಂತರಾಗಿರುವವರೂ ಒಳಗೊಂಡಂತ ಒಂದು ವರ್ಗ, ಒಂದು ರಾಜಕೀಯ ಸನ್ನಿವೇಶ ಪ್ರೇರೇಪಿಸುತ್ತಿದೆಯೆಂದರೆ ಬಹುಷ: ಅದು ಕರ್ನಾಟಕದಲ್ಲೇ ಇರಬೇಕು..!
ಈ ಸಂದರ್ಭದಲ್ಲಿ ಲೇಖಕ ವಿಕ್ರಮ್ ಹತ್ವಾರ್ ಬರೆದ ಈ ಮಾತುಗಳು ನೆನಪಾಗುತ್ತವೆ: “ತೇಜಸ್ವಿ ತೀರಿಕೊಂಡಾಗ, ತೇಜಸ್ವಿ ಇಲ್ಲದ ಜಗತ್ತಿನಲ್ಲಿ ನಾನಿರಲಾರೆ ಅಂದಿದ್ದರು ಅನಂತಮೂರ್ತಿ. ವಿಷಾದ, ನೋವು, ಹತಾಶೆ, ಅಸಹಾಯಕತೆ, ಅಸಹನೀಯತೆ ಎಲ್ಲವೂ ತುಂಬಿರುತ್ತದೆ ಮಾತಿನ ಹಿಂದೆ….ಇದು ನಿಜಕ್ಕೂ ಮಾತು ಸೋತ ಭಾರತ…”ಅಂತೆಯೇ ಟಿವಿ ಆಂಕರ್ ದೀಪಕ್ ತಿಮ್ಮಯ್ಯ ಬರೆದ ಒಂದು ಮಾತು ನೆನಪಾಗುತ್ತದೆ: “With the opportunity to know everything and speak about everything, I feel social media is creating unrest in the minds of, otherwise normal, mortals”….
ನಿಜಕ್ಕೂ ಚಿಂತೆಯಾಗುವದು ಅಸಹನೀಯತೆ ಎಂಬುದು ಒಂದು ಸಾಂಕ್ರಾಮಿಕ ಜಾಡ್ಯದಂತೆ ಬೆಳೆಯುತ್ತಿರುವ ಕುರಿತು.ಮೊನ್ನೆ ಫೇಸ್ ಬುಕ್ ನಲ್ಲಿ ಚಿತ್ರನಿರ್ದೇಶಕ ಕೆ.ಎಂ.ಚೈತನ್ಯ ಬರೆದ ಮಾತುಗಳು ಇಂತಿವೆ.:”ಭಾರತ ಚರ್ಚೆ, ಚಿಂತನೆ ಮತ್ತು ವಾದಗಳ ನಾಡು. ಪಶ್ಚಿಮದ ಜಗತ್ತಿನಲ್ಲೋ ಮಧ್ಯಪ್ರಾಚ್ಯದಲ್ಲೋ ಯಾರಾದರೂ ಬುದ್ಧನಂತೆ “ದೇವರಿದ್ದಾನೆಯೆ?” ಎಂದು ಕೇಳಿದ್ದರೆ ಅಂಥವನನ್ನು ಸುಟ್ಟುಹಾಕುತ್ತಿದ್ದರು.ಭಾರತದಲ್ಲಿ ಕುಳಿತು ಅದನ್ನುಚರ್ಚಿಸಿದರು, ಅಭಿಪ್ರಾಯಭಿನ್ನತೆಯನ್ನು ಒಪ್ಪಿದರು. ನಾವು ಪಶ್ಚಿಮದ ಅನುಕರಣೆಯಲ್ಲಿ ಎಷ್ಟು ಕಳೆದುಹೋಗಿದ್ದೇವೆಂದರೆ ನಾವು ಚರ್ಚಿಸುತ್ತಲೇ ಇಲ್ಲ. “ಒಂದೋ ನೀವು ನಮ್ಮೊಂದಿಗಿದ್ದೀರಿ ಇಲ್ಲವೇ ನಮ್ಮ ವಿರುದ್ಧವಾಗಿದ್ದೀರಿ” ಎಂದು ಹೇಳಿದ ಬುಷ್ ಎಂಬ ಮಂದಬುದ್ಧಿಯಂತಾಗುತ್ತಿದ್ದೇವೆ. ಕಲೆ ಸಮಾಜ ರಾಜಕಾರಣದಲ್ಲೆಲ್ಲ ಇದೇ ಪ್ರವೃತ್ತಿ. ಇದು ನಮ್ಮ ಸಮಾಜಕ್ಕೆ ಅವಮಾನ”
ಹೌದಲ್ಲವೇ?
 

‍ಲೇಖಕರು avadhi

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

20 ಪ್ರತಿಕ್ರಿಯೆಗಳು

  1. C P NAGARAJA

    ಮಾನ್ಯರೇ ,
    ಸಮಚಿತ್ತದ ನಿಮ್ಮ ಬರಹವನ್ನು ಓದಿ , ಒಂದು ಗಳಿಗೆ ನಾನು ಭಾವುಕನಾದೆ . ಏಕೆಂದರೆ ಯಾವುದೇ ಒಂದು ವಿಷಯವನ್ನು / ವ್ಯಕ್ತಿಯನ್ನು ಕುರಿತು ಒಪ್ಪುವ ಇಲ್ಲವೇ ವಿರೋಧಿಸುವ ನೆಲೆಗಳಲ್ಲೆ ಚಿಂತಿಸುವ ನನ್ನ ಮನಸ್ಸಿಗೆ ಒಂದು ಹೊಸ ದಿಕ್ಕನ್ನು ನಿಮ್ಮ ಬರಹದಲ್ಲಿ ತೋರಿಸಿದ್ದೀರಿ . ಜನರು ಆಡುವ ಮಾತುಗಳಿಗೆ ” ನೇರವಾದ ಅಥವಾ ರೂಪಕದ ಅರ್ಥಗಳು ” ಬಳಕೆಗೊಂಡ ಕಾಲ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹೊರಹೊಮ್ಮುತ್ತವೆ . “ತೇಜಸ್ವಿ ತೀರಿಕೊಂಡಾಗ, ತೇಜಸ್ವಿ ಇಲ್ಲದ ಜಗತ್ತಿನಲ್ಲಿ ನಾನಿರಲಾರೆ ಅಂದಿದ್ದರು ಅನಂತಮೂರ್ತಿ. ವಿಷಾದ, ನೋವು, ಹತಾಶೆ, ಅಸಹಾಯಕತೆ, ಅಸಹನೀಯತೆ ಎಲ್ಲವೂ ತುಂಬಿರುತ್ತದೆ ಮಾತಿನ ಹಿಂದೆ… ” ಎಂದು ವಿಕ್ರಮ್ ಹತ್ವಾರ್ ಅವರು ಹೇಳಿದ ಅರ್ಥವೇ , ಈ ಸಂದರ್ಭಕ್ಕೂ ಅನ್ವಯವಾಗಬಹುದೆಂದು ನಾನು ಭಾವಿಸಿದ್ದೇನೆ .
    ಸಿ ಪಿ ನಾಗರಾಜ ಬೆಂಗಳೂರು

    ಪ್ರತಿಕ್ರಿಯೆ
  2. laxminarasimha

    ಆಶೋಕ್ ಅವರೆ, ನಿಮ್ಮ ವಾದ ಸರಣಿ ವಿಹಿತವಾದದ್ದು. ಆದರೆ, ಈ ಮೋದಿ ಬಳಗದ “ಸೈಬರ್ ಸೈನಿಕ”ರು ತಮಗೆ ಸರಿಕಾಣದವರ ವಿರುದ್ಧ ಯುದ್ಧವನ್ನೇ ಸಾರುವ ಪರಿ ಕನ್ನಡ ಸಂಸ್ಕೃತಿಗೆ ಹೊಸತು.

    ಪ್ರತಿಕ್ರಿಯೆ
  3. Ananda Prasad

    ಉದಾರವಾದಿ ಧೋರಣೆಯ ಗಾಂಧಿ, ನೆಹರೂ ಹಾಕಿಕೊಟ್ಟ ಪರಂಪರೆಯಿಂದ ದೇಶ ಮೋದಿಯವರ ಅಸಹನೆ, ಸಂಕುಚಿತ ಮನೋಭಾವದ ರಾಜಕೀಯದ ಕಡೆಗೆ ಜಾರದಿರಲಿ ಎಂಬ ಸದಾಶಯದಿಂದ ಅನಂತಮೂರ್ತಿಯವರು ಗಾಢ ವಿಷಾದದಿಂದ ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ ಎಂದು ಕಾಣುತ್ತದೆ. ಆರೋಗ್ಯ ಸರಿಯಿಲ್ಲದಿರುವ ವಯಸ್ಸಾದವರು ತೀವ್ರ ದುಗುಡ ಹಾಗೂ ವಿಷಾದದಿಂದ ಅನಿಸಿಕೆಯನ್ನು ವ್ಯಕ್ತಪಡಿಸುವುದು ಸಹಜ. ಬಹುಶ: ಅನಂತಮೂರ್ತಿಯವರ ಮಾತುಗಳೂ ಕೂಡ ಅವರ ಆರೋಗ್ಯ ಸ್ಥಿತಿ ಹಾಗೂ ವಯಸ್ಸಿನ ಅಸಹಾಯಕತೆಯಿಂದ ಮೂಡಿಬಂದಿರುವಂತೆ ಕಾಣುತ್ತದೆ. ಹೀಗಾಗಿ ಅವರ ಮೇಲೆ ಅಸಭ್ಯ ಭಾಷೆ ಬಳಸಿ ಅಸಹನೆ ತೋರಿಸುವುದು ಕೆಟ್ಟ ಪರಂಪರೆಗೆ ನಾಂದಿಯಾದೀತು. ಅನಂತಮೂರ್ತಿಯವರ ಅನಿಸಿಕೆ ಮೋದಿಯ ಹಿಂಬಾಲಕರಿಗೆ ಸರಿಕಾಣದಿದ್ದರೆ ಸಭ್ಯ ಭಾಷೆಯಲ್ಲಿ ಪ್ರತಿಭಟಿಸಲು ಅವಕಾಶ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆ. ಕನ್ನಡಿಗರು ದೇಶದಲ್ಲಿಯೇ ಸಭ್ಯ ಸಂಸ್ಕೃತಿಗೆ ಹೆಸರಾದವರು. ಅದು ಈಗ ಮೋದಿಯ ಹಿಂಬಾಲಕರಿಂದಾಗಿ ಮರೆಯಾಗುತ್ತಿರುವುದು ತೀವ್ರ ವಿಷಾದನೀಯ. ಅಂತರ್ಜಾಲದಲ್ಲಿ ಮೋದಿ ಹಿಂಬಾಲಕರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ತೀರಾ ಕೆಳಮಟ್ಟದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದು ಕನ್ನಡಿಗರು ಈ ಮಟ್ಟಕ್ಕೆ ಇಳಿಯುತ್ತಿರುವುದು ಬಹಳ ಬೇಸರದ ವಿಚಾರ.

    ಪ್ರತಿಕ್ರಿಯೆ
  4. Anonymous

    ಅಲ್ಲಾ ಸ್ವಾಮಿ, ಮೋದಿಯವರು ಗಾ೦ಧಿ ನೆಹರೂ ತತ್ವ ಪಾಲಿಸುವುದಿಲ್ಲ ಎ೦ಬ ಒ೦ದೇ ಸ್ವಯ೦ಪ್ರೇರಿತ ಕಲ್ಪನೆಗೋಸ್ಕರ ದೇಶ ಬಿಡುವುದಾರೆ ಈ ವ್ಯಕ್ತಿ ಇಷ್ಟೊತ್ತಿಗಾಗಲೇ ದೇಶ ಬಿಟ್ಟಿರಬೇಕಾಗಿತ್ತಲ್ಲಾ.? ಈಗಿರುವ ಪರ೦ಪರಾಗತ ಸರ್ಕಾರ ಯಾವ ಘನ೦ದಾರಿ ಗಾ೦ಧಿ ನೆಹರೂ ತತ್ವ ಪಾಲಿಸಿದ್ದ್ದಾರೆ? ಇಡೀ ದೇಶವನ್ನು ಅಡ್ದಡ್ದ ಉದ್ದುದ್ದವಾಗೀ ನು೦ಗಿ ನೀರು ಕುಡಿದಿರುವ ಕಾ೦ಗ್ರೆಸ್ ಇವರಿಗೆ ಯಾವ ದೃಶ್ಟಿಯಲ್ಲಿ ಸರಿಕಾಣಿಸುತ್ತಿದೆ.?

    ಪ್ರತಿಕ್ರಿಯೆ
  5. K.S Parameshwar

    ಅಶೋಕ್ ಸರ್ ರವರೆ ನಿಮ್ಮ ಅಂಕಣ ಓದಿದ ನಂತರ ನನ್ನ ಕೆಲವು ಗೊಂದಲಗಳಿಗೆ ಉತ್ತರ ಸಿಕ್ಕಂತಾಗಿಯಿತು. ಧನ್ಯವಾದಗಳು

    ಪ್ರತಿಕ್ರಿಯೆ
  6. Rj

    ಒಂದು ರಾಜಕೀಯ ಪರಿಸ್ಥಿತಿಯ ಆವಾಂತರ ಮತ್ತು ಬೆಳವಣಿಗೆಗಳನ್ನು ಬಹಳಷ್ಟು ತಾಳ್ಮೆಯಿಂದ ಹೇಳಿದ್ದೀರಿ.ನನಗೆ ನಿಮ್ಮ ವಾದ ಹಿಡಿಸಿತು ಸರ್.
    -Rj

    ಪ್ರತಿಕ್ರಿಯೆ
  7. ರವೀಂದ್ರ ಮಾವಖಂಡ

    ಅಶೋಕ್ ಸರ್, ಅತ್ಯಂತ ವಿಶ್ಲೇಷಣಾತ್ಮಕವಾಗಿ ಹಾಗೂ ಬಹಳ ಸಂಯಮದಿಂದ ಬರೆದಿದ್ದೀರಿ. ಪ್ರಸ್ತುತ ವಿದ್ಯಮಾನಗಳಿಗೆ ನಿಮ್ಮ ಬರಹ ಅತ್ಯುತ್ತಮ ಪ್ರತಿಕ್ರಿಯೆಯಾಗಿದೆ.

    ಪ್ರತಿಕ್ರಿಯೆ
  8. narayanaswamy kempaiah

    Manya Shettar avare, nimma E baraha olleta tarka hagu vevechaneyinda kudide. Vayassadshtoo manushya hechchu bhavukatege olagaguttane. Bahushaha Anantha Murthyyavara E helike hagagirabhudu. Ondanthu nija. Namma neldalle ninthu ranahedigalagade Facist pravrittigala virudda namma horatada nelegalannu roopisabeku. – namaskara- K. Naryana Swamy, Kolar/Davangere.

    ಪ್ರತಿಕ್ರಿಯೆ
  9. Paremeswarappa

    ನಿಮ್ಮ ಅಭಿಪ್ರಾಯಗಳು ಸಮಚಿತ್ತದಿಂದ ಕೂಡಿವೆ. ಆದರೆ,ನೀವು ಹೇಳಿರುವ ವಿಕೃತ ಸೈಬರ್ ಸೈನಿಕರು ಮೋದಿ ಪರ ವಲಯದಲ್ಲಿ ಮಾತ್ರವಿಲ್ಲ. ಮೋದಿ ವಿರುದ್ಧದ ವಲಯದಲ್ಲೂ ಆ ವಿಕೃತಿಗಳು ಇದ್ದಾರೆ. ಸ್ವತಃ ಅನಂತಮೂರ್ತಿ ಹೇಳಿಕೆಯೇ ವಿಕೃತವಾದುದು !
    ನಿಮಗೆ ನೆನಪಿರಲಿ, ಮೋದಿಯ ಪರ ಬರೀ ಸಂಘಿಯ ಕೋಮುವಾದಿಗಳು ಮಾತ್ರವಷ್ಟೇ ಇಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ಸಹಿಸದ, ಬುದ್ಧಿಜೀವಿಗಳ ಸೋಗಲಾಡಿತದಿಂದ ಬೇಸತ್ತ ಜಾತ್ಯತೀತ ಯುವಕರೂ ಇದ್ದಾರೆ. ತಂತಿ ಮೇಲೆ ಬಿದ್ದ ಬಟ್ಟೆಯನ್ನು ಎಚ್ಚರಿದಿಂದಲೇ ತೆಗೆಯಬೇಕಿದೆ !

    ಪ್ರತಿಕ್ರಿಯೆ
  10. ಸುರೇಶ‍್ ಕುಮಾರ್

    ಗಾಂಧಿ (ಕನಸಿನ ಭಾರತ) ತತ್ವ ಮತ್ತು ನೆಹರೂ(ಕನಡಿನ ಭಾರತ) ತತ್ವ ಎರಡರೊ ಪರಸ್ಪರ ವಿರುದ್ದವಿರುವಾಗ ಗಾಂಧಿ-ನೆಹರೂ (ಎರಡೂ) ತತ್ವವಿಲ್ಲದ ಭಾರತವೆನ್ನುವ ಹೇಳಿಕೆಯೇ ಅರ್ಥರಹಿತ. ಮತ್ತು ಈ ಎರಡೂ ತತ್ವಗಳೂ ಗಾಳಿಗೆ ತೂರಿ ಹಲವು ದಶಕಗಳೇ ದಾಟಿರುವಾಗ ಇದು ಬಹಳ ವಿಳಂಭದ ಹೇಳಿಕೆಯಾಗಿದೆ. ಅಶೋಕ್ ಶೆಟ್ಟರ್ ಹೇಳಿರುವುದು ಸಮಂಜಸವಾದ ಮತ್ತು ಯೋಚಿಸಬೇಕಾದ ವಿಚಾರ. ಚುನಾವಣಾ ಪ್ರಜಾಪ್ರಭುತ್ವವನ್ನು ಒಪ್ಪಿದ ಮೇಲೆ ಅದಕ್ಕೆ ಬದ್ದವಾಗಿಯೇ ಜನರ ಆಯ್ಕೆಗಳನ್ನು ಗೌರವಿಸಬೇಕಾಗುತ್ತದೆ. ಅಂದಹಾಗೆ ಈ ಹೇಳಿಕೆ ನಮ್ಮ ‘ಸಂತ’ರ ಬಾಯಿಯಿಂದ ಹೊರಟಿದ್ದರೂ ಅಶೋಕಶೆಟ್ಟರದ್ದು ಇದೇ ನಿಲುವೇ ಆಗಿರುತ್ತಿತ್ತು(?) ಎನ್ನುವುದು ನನ್ನ ನಂಬಿಕೆಯಾಗಿದೆ!!!

    ಪ್ರತಿಕ್ರಿಯೆ
  11. Dr. Mohan Talakalukoppa

    ಡಾ. ಅನಂತಮೂರ್ತಿಯವರು ಪ್ರಜಾಪ್ರಭುತ್ವವಾದಿಯಲ್ಲದಿದ್ದರೂ ಪ್ರಭುತ್ವವಾದಿ ಎಂದು ಯಾವತ್ತೋ ಜನರಿಗೆ ಗೊತ್ತಾಗಿದೆ!

    ಪ್ರತಿಕ್ರಿಯೆ
  12. Triveni

    ಇದೇ ಅರ್ಥ ಬರುವ ಹೇಳಿಕೆಯನ್ನು ಭೈರಪ್ಪನವರೋ, ಚಿದಾನಂದಮೂರ್ತಿಗಳೋ ಮೋದಿ ಬದಲಿಗೆ ಇನ್ನಾವುದೋ ರಾಜಕೀಯ ನಾಯಕರ ಕುರಿತು ಕೊಟ್ಟಿದ್ದರೆಂದುಕೊಳ್ಳಿ. ಆಗಲೂ ಇದೇ ರೀತಿಯ ಸಮತೂಕದ/ಸಮಚಿತ್ತದ/ಸ್ಪಷ್ಟೀಕರಣದ ಬರಹಗಳು ಬರುತ್ತಿದ್ದವೇ? ಆಗ, ಯಾವುದೇ ವಿಚಾರಣೆ, ವಕಾಲತ್ತುಗಳಿಲ್ಲದೆ ಅವರಿಗೆ ಬರೀ ಮಾತಿನಲ್ಲಿಯೇ, ಮಾಧ್ಯಮಗಳಲ್ಲಿಯೇ ಶಿಕ್ಷೆ ವಿಧಿಸುತ್ತಿರಲಿಲ್ಲವೇ? ಅವರೂ ವಯೋವೃದ್ಧರು, ಅವರ ಭಾವನೆಗಳೇನಿದ್ದವು ಎಂಬುದನ್ನು ಯಾರಾದರೂ ವಿಚಾರಿಸಲು ಹೋಗುತ್ತಿದ್ದರಾ ನನಗಂತೂ ಅನುಮಾನವಿದೆ.
    ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ, ಒಬ್ಬರ ಬಗ್ಗೆ ಹಾರಾಡುವಾಗ ಊರಗಲವಾಗುವ ಇವರ ಬಾಯಿ, ಇನ್ನೊಬ್ಬರ ತಪ್ಪು ಕಂಡಾಗ ದಿವ್ಯ ಮೌನ! ಜನ ಬೇಸತ್ತಿರುವುದು ಈ ದ್ವಂದ್ವ ನಿಲುವಿಗೆ, ಆಷಾಢಭೂತಿ ಮನೋಭಾವಕ್ಕೆ ಹೊರತು ನಾಡಿನ ಸಾಹಿತಿಯೊಬ್ಬರನ್ನು ಹೇಗೆ ಗೌರವಿಸಬೇಕೆಂಬುದು ತಿಳಿಯದೆ ಅಲ್ಲ! ನಾಡು-ನುಡಿಗೆ ಗೌರವ ತಂದುಕೊಟ್ಟ ಯಾವುದೇ ಸಾಹಿತಿಯನ್ನು ನೋಯಿಸುವುದು ನನ್ನ ದೃಷ್ಟಿಯಲ್ಲಿ ಅಕ್ಷಮ್ಯ!

    ಪ್ರತಿಕ್ರಿಯೆ
  13. ಪದ್ಮ

    ಅಶೋಕ್ ಸರ್, ಅನಂತಮೂರ್ತಿಯವರ ಹೇಳಿಕೆಯ ನಂತರ, ಮೊದಲ ಬಾರಿಗೆ ನಾನು ಓದುತ್ತಿರುವ ಸಂಯಮ ಮತ್ತು ವಿಶ್ಲೇಷಣಾತ್ಮಕ ಬರಹ ಇದು. 🙂 ಥ್ಯಾಂಕ್ಸ್ ಸರ್.
    ಮೂರ್ತಿಯವರ ಕಥೆಗಳು ಮತ್ತು ವಿಚಾರಗಳನ್ನು ತುಂಬ ಇಷ್ಥಪಟ್ಟು ಓದಿದವಳು ನಾನು. ಆದರೆ ಅವರ ರಾಜಕೀಯ ನಿಲುವುಗಳು ಮಾತ್ರ ಯಾವತ್ತು ಕಂಫ್ಯೂಸಿಂಗ್ ಆಗೇ ಉಳಿದು ಬಿಟ್ಟಿದೆ ನನಗೆ! ಕೆಲವೊಂದು ತತ್ವಗಳು ಸುಮಾರು ೪೦-೪೫ ವರ್ಷಗಳ ಹಿಂದೆ ಅವರು ಹೇಳಬೇಕಿತ್ತು ಅನಿಸುತ್ತದೆ.
    ಮೋದಿ ಪರ ಎಷ್ಟು ಸೈಬರ್ ಬಳಗವಿದೆಯೋ ಅದರ ದುಪ್ಪಟ್ಟು ಅಥವ ಇನ್ನು ಹೆಚ್ಚು ವಿರೋಧೀ ಬಳಗವೂ ಇದೆ…ಯಾವುದೇ ಸೈಬರ್ ಬಳಗಕ್ಕೆ ಒಂದು ಪಕ್ಷ ಅಥವಾ ಒಂದು ವ್ಯಕ್ತಿಯನ್ನು ಗೆಲ್ಲಿಸಲು ಈ ಸದ್ಯದಲ್ಲಿ ಭಾರತದಲ್ಲಿ ಸಾಧ್ಯವಿಲ್ಲ. ಆದರೇ ಮೂರ್ತಿಯವರ ಹೇಳಿಕೆಗೆ ಯಾರೂ ಪ್ರತಿಕ್ರಯಿಸುವ ಅವಶ್ಯವಿಲ್ಲ ಎಂದರೇ, ವಾಕ್ ಸ್ವಾತಂತ್ರ್ಯ ಕೆಲವರ ಸೊತ್ತಷ್ಟೇ ಎನಿಸುತ್ತದೆ. ಅಲ್ಲದೇ, ಇದೇ ಮಾತನ್ನು ನಾನು ಹೇಳಿದ್ದರೇ ಯಾರೂ ಪ್ರತಿಕ್ರಯಿಸುತ್ತಿರಲಿಲ್ಲ! ಮೂರ್ತಿಯವರು ಹೇಳುವಾಗ ಪ್ರತಿಕ್ರಯಿಸದೇ ಇರಲು ಸಾಧ್ಯವಿಲ್ಲ! ಇದಕ್ಕಾಗಿ ಕನಿಕರ ಅಥವ ಜಿಗುಪ್ಸೆ ಪಡುವ ಅಗತ್ಯವಿಲ್ಲ ಎನಿಸುತ್ತದೆ.

    ಪ್ರತಿಕ್ರಿಯೆ
  14. ಕೊಡಸೆ

    ಮೈಸೂರು ವಿಶ್ವವಿದ್ಯಾಲಯದ ನೌಕರಿಯಲ್ಲಿದ್ದಾಗ ಮೀಸಲಾತಿಯನ್ನು ವಿರೋಧಿಸಿದ್ದ ಕಾರಣಕ್ಕೆ ದಲಿತ ವಿದ್ಯಾರ್ಥಿಗಳಿಂದ ಎದುರಿಸಿದ ಉಗ್ರ ಪ್ರತಿಭಟನೆಗೆ ಅನಂತಮೂರ್ತಿ ಅವರು ಒಂದು ತಿಂಗಳ ಕಾಲ ನಾಪತ್ತೆಯಾಗಿದ್ದರೆಂದು ವಿಚಾರವಾದಿ ಕೆ.ಎಸ್.ಭಗವಾನ್‍ ಅವರು ಇಂದು ರಾತ್ರಿ ಒಂದು ಟೆಲಿವಿಷನ್‍ ಸಂದರ್ಶನದಲ್ಲಿ ಹೇಳಿದರು. ಇದು ನಿಜವಲ್ಲ ಎಂದು ತಳ್ಳಿ ಹಾಕುವ ಆಧಾರಗಳು ಸಿಗುವವರೆಗೆ ಭಗವಾನ್‍ ಅವರನ್ನು ಸಂಶಯ ಪಡಲು ಸಾಧ್ಯವಿಲ್ಲ. ನಮ್ಮ ಅನೇಕ ವಿದ್ವಾಂಸರಲ್ಲಿ ಸಮಾಜವನ್ನು ಮುನ್ನಡೆಸುವ ಸಾಮರ್ಥ್ಯ ಇದೆ. ಆದರೆ ಅವರು ಅನಂತಮೂರ್ತಿ, ಗಿರೀಶ ಕಾರ್ನಾಡ ಅವರ ಭಟ್ಟಂಗಿಗಳಂತೆ ಕೆಲವೊಮ್ಮೆ ವರ್ತಿಸಿ ಬಿಡುತ್ತಾರೆ. ನಾಡಿನ ಸಾಕ್ಷಿಪ್ರಜ್ಞೆಗಳು ಎಂದು ತಮಗೆ ಬೇಕಿದ್ದವರನ್ನು ಬಣ್ಣಿಸುತ್ತಾರೆ. ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಬುದ್ಧಿಯನ್ನು ತನ್ನಷ್ಟಕ್ಕೆ ಅನುಸರಿಸುವ, ಬದುಕಿನಲ್ಲಿ ಅಳವಡಿಸಿಕೊಳ್ಳುವ ನಾಡಿನ ಸಾಮಾನ್ಯ ವ್ಯಕ್ತಿ ಈ ಪ್ರತಿಷ್ಠಿತರಿಗಿಂತ ಕಡಿಮೆ ಅಲ್ಲ ಎಂಬುದು ನನ್ನ ನಂಬಿಕೆ. ತೇಜಸ್ವಿ ಯಾವತ್ತೂ ವ್ಯಕ್ತಿ ಪೂಜೆಯನ್ನು ಒಪ್ಪಿದವರಲ್ಲ. ಅವರನ್ನು ಗೌರವಿಸುವುದು ಸರಿಯೇ. ಆರಾಧಿಸುವುದನ್ನು ಸ್ವತಃ ತೇಜಸ್ವಿ ಒಪ್ಪಿದವರಲ್ಲ. ಕುವೆಂಪು ಕೂಡ ಸ್ವತಂತ್ರ ಮತವನ್ನು ಗೌರವಿಸಿದವರು. ನಮ್ಮ ಹಳ್ಳಿಗಾಡಿನ ಸಹಸ್ರಾರು ಯುವಕರು ಅವಕಾಶ ಸಿಕ್ಕಿದರೆ ಯಾರಿಗೂ ಕಡಿಮೆ ಅಲ್ಲದಂಥ ಪ್ರತಿಭೆಯನ್ನು ಪ್ರದರ್ಶಿಸುವ ಸಾಮರ್ಥ್ಯ ಇದ್ದವರು. ಆದರೆ ಅವರಲ್ಲಿ ಹೆಚ್ಚಿನವರು ಹೈಸ್ಕೂಲು ಮೆಟ್ಟಿಲು ಹತ್ತಲಾಗದ ಅನೇಕ ನಟರ ಹುಚ್ಚು ಅಭಿಮಾನಿಗಳು. ಇಂಥ ಬೌಧ್ಧಿಕ ದಾರಿದ್ರ್ಯವನ್ನು ನಿವಾರಿಸುವ ಕೆಲಸವನ್ನು ನಾಡಿನ ಸಾಕ್ಷಿಪ್ರಜ್ಞೆಯೆಂದು ಬುರುಡೆ ಹೊಡೆಯುವ ಪ್ರಭೃತಿಗಳು ಮಾಡಿದ್ದರೆ ಅದರಿಂದ ಹೆಚ್ಚು ಪ್ರಯೋಜನವಾದೀತು…

    ಪ್ರತಿಕ್ರಿಯೆ
  15. ಉಷಾಕಟ್ಟೆಮನೆ

    ಸಮಚಿತ್ತದ, ಸಮತೋಲನದ ಬರಹ.
    ನಿನ್ನೆ ಪಬ್ಲಿಕ್ ಟೀವಿಯಲ್ಲಿ ಅನಂತಮೂರ್ತಿಯವರ ಸಂದರ್ಶನ ನೋಡಿದೆ. ಅಲ್ಲಿ ಅವರು ನೊಂದು ನುಡಿದ ಒಂದು ಮಾತು ನನ್ನನ್ನು ತುಂಬಾ ಕಾಡುತ್ತಿದೆ ಸರ್. ’ ನಾನು ಕನ್ನಡಪ್ರಭ ಪತ್ರಿಕೆಯನ್ನು ನನ್ನ ಹೆಂಡತಿ ಮಕ್ಕಳಿಗೆ ತೋರಿಸುವುದಿಲ್ಲ. ಅದರಲ್ಲಿ ನೀ ಸಾಯಿ..ಸಾಯಿ..ಎಂದೇ ಬರೆಯಲಾಗುತ್ತೆ.’ ಬಿನ್ನಾಭಿಪ್ರಾಯಗಳು ಅಸಹನೆಯಾಗಿ, ದ್ವೇಷವಾಗಿ ಬದಲಾಗಬಾರದು.

    ಪ್ರತಿಕ್ರಿಯೆ
  16. Narayan

    Well said Shettar.One thing is clear our personality is not only depending on our thoughts. It depends mainly on what type of followers we have. When Bhyrappa wrote Aavarana, many so-called honourable secularists attacked him with low level language, did you forget to write article against those people? Though Modi is neither convicted by any court or no evidence against him, how if people like Ananta Murthy can give such statements? Why so-called secularists, thinkers like you to blame Modi? Luckily, during our independence, number of secular people were less. So we got freedom. Freedom is same to all, no one is above our law.Same is applicable to all. There is no distinction among people in front of law. That should be

    ಪ್ರತಿಕ್ರಿಯೆ
    • Ashok Shettar

      Dear Shri Narayan
      Thanks for your response.If you remove the prefixes so-called and honourable, that describes me. Yes I’m a secularist simple, normal…! Yes of course, our personality is partly defined by what type of followers we have. As for Avarana, I seriously doubt it’s claim to be a work of literature. I haven’t kept track of who said what derogatory things about shri Bhairappa.
      You have asked “Why so-called secularists, thinkers like you to blame Modi?” I haven’t blamed him. I will criticise him if I want….!

      ಪ್ರತಿಕ್ರಿಯೆ
  17. Vikas Rao

    ಅತ್ತ ಎಡವೂ ಅಲ್ಲದ ಇತ್ತ ಬಲವೂ ಅಲ್ಲದ, ಸಮಭಾವದ ಸಮತೂಕದ ವಿಶ್ಲೇಷಣೆಯ ಕೊರತೆಯನ್ನು ನೀವು ತುಂಬಿದ್ದೀರಿ ಸಾರ್..!ಮತದಾರನ ಪ್ರೌಢಿಮೆಯ ವಿಷಯವೊಂದನ್ನು ಹೊರತುಪಡಿಸಿ ನೀವು ಹೇಳಿದ ಎಲ್ಲ ಮಾತುಗಳೂ ವಾಸ್ತವ ಎನಿಸುತ್ತದೆ.ನಿಷ್ಪ್ರಯೋಜಕರು, ಭ್ರಷ್ಟರು,ಅಪರಾಧಿಗಳು ಅಧಿಕಾರಕ್ಕೆ ಬಂದರೆ ಅದಕ್ಕೆ ನೇರ ಜವಾಬ್ದಾರಿ ಮತದಾರನ ಅರಿವು, ಜಾಗೃತಿ ಇವೇ ಆಗಿರುತ್ತವೆ ಎಂಬುದು ನನ್ನ ನಂಬಿಕೆ. ಕೆಲಸ ಮಾಡುವವನಲ್ಲದೆ ಕೆಲಸ ಮಾಡಿಸುವವನೂ ಬುದ್ಧಿವಂತನಾಗಿರಬೇಕಾಗಿರುತ್ತದೆ ಅಲ್ಲವೇ ಸರ್..? ಸಂವೇದನಾಶೀಲತೆ,ರಾಜಕೀಯ ಪ್ರಜ್ನೆ ,ಸೌಂದರ್ಯ ಪ್ರಜ್ನೆ ಮೊದಲಾದವುಗಳು ಕಲಾವಿದನಿಗೆ ಮಾತ್ರವಲ್ಲದೆ ಜನಸಾಮಾನ್ಯನಿಗೂ ಇರುವುದು ಮುಖ್ಯವಲ್ಲವೇ..?
    ಆವೇನೇ ಇರಲಿ, ಮೋದಿ ಪರರೂ, ವಿರೋಧಿಗಳೂ ಅಸಹ್ಯ ಹುಟ್ಟಿಸಿದ್ದ ಈ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ಆನಂದ ನೀಡಿತು.. ನಿಮಗೆ ಅಭಿನಂದನೆ ಮತ್ತು ಧನ್ಯವಾದಗಳು ಸರ್..!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: