'ಅಷ್ಟು ಹೊತ್ತಿಗೆ ನಾನಿರಬೇಕಲ್ಲ…' ಅಂದಿದ್ರು ಅನಂತಮೂರ್ತಿ

‘ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ

***


ಲಂಡನ್ ಅನುಭವ ಹೇಗಿತ್ತು?
-ಹೋಗೋದು ತುಂಬ ಕಷ್ಟ ಆಯ್ತು. ನಾಲ್ಕು ಸಲ ಡಯಾಲಿಸಿಸ್ ಮಾಡಿಸ್ಕೋತಿದ್ದೆ. ಅಷ್ಟು ದೂರ ಹೋಗೋದು ಸಾಧ್ಯವೇ ಇರಲಿಲ್ಲ. ಡಾಕ್ಟರಿಗೆ ಹೇಳಿ ನೀರನ್ನೆಲ್ಲ ವಿಸರ್ಜನೆ ಮಾಡಿಕೊಂಡು ಹದಿನಾಲ್ಕು ಗಂಟೆ ಡಯಾಲಿಸಿಸ್ ಇಲ್ಲದೇ ಇರೋ ಹಾಗೆ ಮಾಡಿಕೊಂಡು ಹೋದೆ. ಇಷ್ಟೆಲ್ಲ ಕಷ್ಟ ಪಟ್ಟು ಹೋಗಬೇಕಾ ಅನ್ನಿಸ್ತಿತ್ತು. ಆದರೆ ಮೊದಲ ಸಲ ಮಾತೃಭಾಷೆಯಲ್ಲಿ ಬರಿಯೋನನ್ನು ಕರೀತಿದ್ದಾರೆ. ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೀನಿ, ಕನ್ನಡದ ಮೂಲಕ ಅನ್ನಿಸಿದ್ದರಿಂದ ಹೋದೆ.
ನಿರೀಕ್ಷೆಗಳೇನಾದ್ರೂ ಇದ್ದವಾ?
-ಹೋಗೋವಾಗಲೇ ನಂಗೊಂದು ಸತ್ಯ ಗೊತ್ತಿತ್ತು. ಹೆಚ್ಚೆಂದರೆ ನನ್ನ ಎರಡೋ ಮೂರೋ ಪುಸ್ತಕ ಓದಿ ಆಯ್ಕೆ ಮಾಡಿದ್ದಾರೆ. ಅನುವಾದ ಆಗಿರೋದೇ ಅಷ್ಟು. ಸೂರ್ಯನ ಕುದುರೆ, ಸಂಸ್ಕಾರ ಮತ್ತು ಭಾರತೀಪುರ. ಅದು ಏನೇನೂ ಸಾಲದು. ಅಷ್ಟನ್ನೇ ಓದಿಕೊಂಡು ಆಯ್ಕೆ ಮಾಡಿದೋರು ಯಾರೂ ಅನ್ನೋದೂ ಗೊತ್ತಿಲ್ಲ. ಇದರಲ್ಲಿ ಯಾರ ಕೈವಾಡವೂ ಇರಲಿಲ್ಲ. ಯಾವ ಪ್ರಕಾಶಕನಿಗೂ ಇದು ಗೊತ್ತಿರಲಿಲ್ಲ ತೀರ್ಪುಗಾರರ ಪೈಕಿ ಯಾರೋ ಒಬ್ಬ ನನ್ನ ಕೃತಿಗಳನ್ನು ಓದಿ ಇಷ್ಟಪಟ್ಟು ಕರೆಸಿದ್ದ. ಅದು ಸಂತೋಷ ಆಯ್ತು.

ಅಲ್ಲಿನ ವ್ಯವಸ್ಥೆಗಳು ಹೇಗಿದ್ದವು?
-ಪ್ರವಾಸ ಚೆನ್ನಾಗಿತ್ತು. ಅಲ್ಲಿ ನಮ್ಮನ್ನೆಲ್ಲ ಒಂದು ರೂಮಲ್ಲಿ ಕೂರಿಸಿ ಒಬ್ಬೊಬ್ಬರನ್ನೇ ಕರಕೊಂಡು ಹೋಗಿ ಪರಿಚಯ ಮಾಡಿಕೊಟ್ಟರು. ಕೊಂಚ ನಾಟಕೀಯವೂ ಆಗಿತ್ತು. ಎಲಿಜಬೆತ್ ಹಾಲಲ್ಲಿ ನಾವು ನಮ್ಮ ಕೃತಿಗಳನ್ನು ಆರೇಳು ನಿಮಿಷ ಓದಬೇಕಾಗಿತ್ತು. ನನ್ನ ಹೆಸರನ್ನೇ ಮೊದಲು ಕರೆದರು. ಅಕ್ಷರ ಮಾಲೆಯ ಪ್ರಕಾರ ನನ್ನ ಹೆಸರು ಮೊದಲು ಬಂದಿದ್ದರಿಂದ. ಮೊದಲು ಇಂಗ್ಲಿಷಲ್ಲಿ ಓದಿ ಅಂದರು. ನಾನು ಮೊದಲು ಕನ್ನಡಲ್ಲಿ ಓದುತ್ತೇನೆ ಅಂತ ಹೇಳಿ ಕನ್ನಡದಲ್ಲೇ ಓದಿದೆ. ಅಲ್ಲಿ ನಿಂತು ಕನ್ನಡದಲ್ಲಿ ಓದುತ್ತಿರುವಾಗ ಶ್ರೀವಿಜಯ ಹೇಳಿದ ಮಾತು ನೆನಪಾಯಿತು. ಅವನು ಕನ್ನಡ ನಾಡಿಗೊಂದು ಗಡಿ ಹಾಕಿದ್ದ. ಕಾವೇರಿಯಿಂದಮಾ ಗೋದಾವರಿಯ ತನಕ ಅಂತ. ಹಾಗೆ ಹೇಳಿದ ಅವನೇ ಗಡಿಯೊಳಗೆ ಇರೋ ಭಾಷೆಯಲ್ಲಿ ಭಾವಿತವಾದ ಜನಪದ ಅಂತಲೂ ಕರೆದ. ಅದರ ಅರ್ಥ ಕನ್ನಡದ ಕಲ್ಪನಾ ಶಕ್ತಿಗೆ ಪ್ರಪಂಚವನ್ನು ಪ್ರತಿಬಿಂಬಿಸುವ ಶಕ್ತಿ ಇದೆ ಅಂತ. ಎಷ್ಟೋ ಪರ್ಷದ ಹಿಂದೆ ಅವನು ಗುರುತಿಸಿದ್ದನ್ನು ಸಾಕಾರಗೊಳಿಸಿದೆ ಅನ್ನಿಸಿತು. ಕನ್ನಡವನ್ನು ಗಡಿದಾಟಿಸಿದೆ ಅಂತ ಹೆಮ್ಮೆಯಾಯಿತು.
ನೆನಪು ಮಾಡಿಕೊಳ್ಳುವಂಥ ಮತ್ತೇನಾದರೂ ಅನುಭವ?
-ಇಂತಿಜಾರ್ ಹುಸೇನ್ ಅಂತ ಪಾಕಿಸ್ತಾನಿ ಲೇಖಕ ಒಬ್ಬ ಬಂದಿದ್ದ. ಅವನು ಬರೆದ ಬಸ್ತಿ ಅನ್ನೋ ಕಾದಂಬರಿ ಓದಿ ಅವನನ್ನೂ ಕರೆಸಿದ್ದರು. ಅವನು ಬಂದಿದ್ದ ಅಂತ ಪಾಕಿಸ್ತಾನದ ಅನೇಕ ಮಂದಿ ಪ್ರಜೆಗಳು ಬಂದಿದ್ದರು. ನನಗೆ ನಿರಾಶೆ ಆಗಿದ್ದು ಆಗಲೇ. ಭಾರತೀಯರು ಒಬ್ಬರೂ ಅಲ್ಲಿಗೆ ಬಂದಿರಲಿಲ್ಲ. ಬಹುಶಃ ಅಲ್ಲಿರೋರೆಲ್ಲ ಐಟಿಬಿಟಿ ಕೆಲಸ ಮಾಡೋಕು ಅಂತ ಕಾಣತ್ತೆ. ಅವರಿಗೆ ಭಾರತದಿಂದ ಒಂದು ಭಾಷೆಗೆ ಗೌರವ ಸಿಗುತ್ತೆ ಅಂತ ಅನ್ನಿಸಲೇ ಇಲ್ಲ. ಅವರನ್ನು ಕರೆಸೋ ವ್ಯವಸ್ಥೆ ಮಾಡಬೇಕಾಗಿದ್ದ ನೆಹರೂ ಸೆಂಟರ್ ಕೂಡ ಆ ಕೆಲಸ ಮಾಡಲಿಲ್ಲ.
ಪಾಕಿಸ್ತಾನಿ ಪ್ರಜೆಗಳ ಪ್ರತಿಕ್ರಿಯೆ ಏನಿತ್ತು.
-ಅವರೆಲ್ಲ ತುಂಬ ಪ್ರೀತಿ ತೋರಿಸಿದ್ರು. ಇಂತಿಜಾರ್ ಹುಸೇನ್ ನನ್ನ ನೋಡಿದ ತಕ್ಷಣ ತಬ್ಬಿಕೊಂಡ. ಅದನ್ನು ಅವರು ಫೋಟೋ ತೆಗೆದರು. ನಂತರ ನೀವೂ ಅವರನ್ನು ತಬ್ಬಿಕೊಳ್ಳಿ ಅಂತ ಹೇಳಿ, ಅದನ್ನೂ ಫೋಟೋ ತೆಗೆದರು. ಅವರಿಗೆಲ್ಲ ಈ ಪ್ರಶಸ್ತಿ ನಮ್ಮಿಬ್ಬರಲ್ಲಿ ಒಬ್ಬರಿಗೆ ಬರುತ್ತೆ ಅಂತ ಖಾತ್ರಿಯಾಗಿತ್ತು.
ಪ್ರಶಸ್ತಿ ಘೋಷಿಸಿದ ಗಳಿಗೆ ಏನನ್ನಿಸಿತು
-ನಮ್ಮನ್ನು ಪರಿಚಯಿಸಿದ ಎರಡನೇ ದಿನ ಪ್ರಶಸ್ತಿ ಘೋಷಣೆ ಇತ್ತು. ಅದಕ್ಕೆ ಸೂಟ್ ಹಾಕಿಕೊಂಡು ಬ್ಲಾಕ್ ಟೈ ಹಾಕಿಕೊಂಡು ಹೋಗಬೇಕು ಅಂತ ಕಡ್ಡಾಯ ಮಾಡಿದ್ದರು. ಎಲ್ಲರೂ ಅದೇ ಪ್ರಕಾರ ಬಂದಿದ್ದರು. ಅಲ್ಲೊಂದು ಶಾಂಪೇನ್ ಪಾರ್ಟಿ ಇತ್ತು. ಅದರ ಮಧ್ಯೆಯೆ ಘೋಷಣೆ ಮಾಡುವುದಕ್ಕೆ ಕ್ರಿಸ್ಟೋಫರ್ ರಿಕ್ಸ್ ಬಂದಿದ್ದರು.
ಅಲ್ಲೊಂದು ತಮಾಷೆ ನಡೀತು. ಅವರು ವಿಜೇತರ ಹೆಸರು ಓದೋದಕ್ಕೆ ಮುಂಚೆಯೇ ಅದರ ಪ್ರತಿಯನ್ನು ಪಿಟಿಐ ಮಂದಿಗೆ ಕೊಟ್ಟಿದ್ದರು. ಭಾರತಕ್ಕೂ ಅಲ್ಲಿಗೂ ಗಂಟೆಗಳ ವ್ಯತ್ಯಾಸ ಇರೋದರಿಂದ ಪ್ರಕಟಣೆಗೆ ಅಂತ ಕೊಟ್ಟಿರಬೇಕು. ಹೀಗಾಗಿ ಪ್ರಶಸ್ತಿ ಘೋಷಿಸುವ ಮುಂಚೆಯೇ ನನಗೆ ಗೊತ್ತಾಗಿ ಹೋಗಿತ್ತು. ಹೀಗಾಗಿ ಘೋಷಣೆಯ ಮಹತ್ವವೇ ಹೊರಟು ಹೋಯ್ತು. ಇಡೀ ಪ್ರಸಂಗ ಒಂಥರ ತಮಾಷೆಯಾಗಿತ್ತು. ನಾನು ಅದನ್ನು ತುಂಬ ಎಂಜಾಯ್ ಮಾಡಿಕೊಂಡು ನೋಡುತ್ತಾ ಇದ್ದೆ. ಪ್ರಶಸ್ತಿ ಮೊದಲೇ ಘೋಷಣೆ ಆಗಿರೋದು ಪಾಕಿಸ್ತಾನಿ ಲೇಖಕನಿಗೆ ಗೊತ್ತಿರಲಿಲ್ಲ. ಹೀಗಾಗಿ ಆತ ಆತಂಕದಲ್ಲಿದ್ದ.
ಘೋಷಣೆಯ ನಂತರ ಏನಾಯ್ತು?
-ಸಹಜವಾಗಿಯೇ ಅನೇಕರಿಗೆ ನಿರಾಶೆಯಾಯಿತು. ನಾನು ತೀರ್ಪುಗಾರನ ಹತ್ತಿರ ಹೋಗಿ ಖಾಸಗಿಯಾಗಿ ಕೆಲವು ಮಾತುಗಳನ್ನು ಹೇಳಿದೆ.
ನೀವು ಪ್ರಶಸ್ತಿ ಘೋಷಿಸುವ ಮೊದಲೇ ಅದು ಲೀಕ್ ಆಗಿತ್ತು. ಆದರೆ ಅದಕ್ಕೂ ಮುಂಚೆ ನಮ್ಮ ಮನಸ್ಸಿನಲ್ಲೇ ಅದು ಲೀಕ್ ಆಗಿಹೋಗಿತ್ತು. ಗ್ಲೋಬಲ್ ಪ್ರೆಸೆನ್ಸ್ ಇರಲಿ ಅನ್ನೋ ಒಂದೇ ಕಾರಣಕ್ಕೆ ನೀವು ಎಲ್ಲರನ್ನೂ ಕರೆಸಿದಿರಿ. ಕೊನೆಗೂ ನೀವು ಪ್ರಶಸ್ತಿಕೊಟ್ಟದ್ದು ಇಂಗ್ಲಿಷಿನಲ್ಲೇ ಬರೆಯುವವಳಿಗೆ. ಅದರಲ್ಲೂ ಅವಳು ತುಂಬ ಜಾಣತನದಿಂದ ಬರೆಯೋ ಲೇಖಕಿ. ನಮಗೂ ನಿಮಗೂ ಒಂದು ವ್ಯತ್ಯಾಸ ಇದೆ. ಏಶಿಯನ್ನರಾದ ನಾವು ಇಡೀ ಯುರೋಪನ್ನು ನಮ್ಮೊಳಗೆ ತಂದುಕೊಂಡಿದ್ದೀವಿ. ಆದರೆ ಯುರೋಪಿಯನ್ನರಾದ ನೀವು ಏಷಿಯನ್ನರನ್ನೂ ಹೊರಗಿಟ್ಟಿದ್ದೀರಿ. ಯುರೋಪಿನ ಬಹುದೊಡ್ಡ ಲೇಖಕ ಜೀನ್ ಪಾಲ್ ಸಾರ್ತ್ರ್. ಅವನ ನಂತರ ಜಾಗತಿಕವಾದ ಕಲ್ಪನಾಶಕ್ತಿ ಪ್ರದರ್ಶಿಸುವ ಲೇಖಕ ನಿಮ್ಮಿಂದ ಬಂದಿಲ್ಲ. ಅಂಥ ಲೇಖಕರು ಬಂದಿರೋದು ಲ್ಯಾಟಿನ್ ಅಮೆರಿಕಾ ಮತ್ತು ಚೀನಾದಿಂದ ಅಂದೆ. ನಾನಿದನ್ನು ನಗುತ್ತಲೇ ಹೇಳಿದೆ. ಅವನೂ ಅದನ್ನು ನಗುನಗುತ್ತಲೇ ಸ್ವೀಕರಿಸಿದ.
ನಿಮಗೆ ಆ ಕ್ಷಣ ನಿರಾಶೆ ಆಯಿತಾ?
-ಇಲ್ಲ. ನಾನು ನಿರೀಕ್ಷಿಸಿಕೊಂಡು ಹೋಗಿರಲಿಲ್ಲ. ಕನ್ನಡಕ್ಕೆ ಬಂದಿದೆ ಅಂತ ಹೋಗಿದ್ದೆ. ಕನ್ನಡದ ಒಳಗಿದ್ದ ಒಂದು ಕನಸು ಸಾಕಾರಗೊಳ್ಳುತ್ತಿದೆ ಅಂತ ಹೋಗಿದ್ದೆ. ಗಡಿದಾಟಿ ಹೋಗುವವರು ತಮ್ಮ ಕೃತಿಗಳ ಮೂಲಕವೇ ಹೋಗಬೇಕು. ಗಿರೀಶ್ ಕಾರ್ನಾಡರ ನಾಟಕ, ನನ್ನ ಕಾದಂಬರಿಗಳೆಲ್ಲ ಅಲ್ಲಿಗೆ ಹೋಗಿವೆ, ಕಾವ್ಯ ಅಷ್ಟಾಗಿ ಹೋಗಿಲ್ಲ, ಎಕೆ ರಾಮಾನುಜನ್ ಅನುವಾದ ಮಾಡಿದ್ದರಿಂದ ಸಂಸ್ಕಾರಕ್ಕೆ ಒಂದು ವಿಶೇಷ ಗೌರವವೂ ಪ್ರಾಪ್ತವಾಯ್ತು.
ಸಂಸ್ಕಾರದ ಬಗ್ಗೆ ಅವರ ಅಭಿಪ್ರಾಯ ಏನಿದೆ?
-ಇಲ್ಲೂ ಒಂದು ಸಮಸ್ಯೆ ಇದೆ. ಸಂಸ್ಕಾರ ಅಲ್ಲಿ ಬೇಕಾದಷ್ಟು ವಿಶ್ವವಿದ್ಯಾಲಯಗಳಿಗೆ ಪಠ್ಯ ಆಗಿದೆ. ಅವರು ಅದನ್ನು ಸಮಾಜಶಾಸ್ತ್ರ, ಮಾನವ ಶಾಸ್ತ್ರ ಅಂತ ಓದುತ್ತಾರೆಯೇ ಹೊರತು ಸಾಹಿತ್ಯ ಅಂತ ಅಲ್ಲ. ಹೀಗಾಗಿ ನಾನೊಂದು ಸೆಮಿನಾರಿಗೆ ಹೋಗಿದ್ದಾಗ ಹೇಳಿದ್ದೆ. ನಿಮ್ಮ ಲೇಖಕ ಸಾಲ್ ಬೆಲೋನನ್ನು ನಾವು ಸಾಹಿತಿ ಅಂತ ಓದುತ್ತೇವೆ. ಅದರ ಬದಲು ಅವನನ್ನು ನಾವು ಅಮೆರಿಕಾದ ಸಮಾಜದಲ್ಲಿ ಹೆಣ್ಣು ಗಂಡಿನ ಸಂಬಂಧದ ವಿಶ್ಲೇಷಣೆ ತಿಳಿಯಲು ಆಂಥ್ರಾಪಾಲಜಿ ಶಾಸ್ತ್ರದಡಿಯಲ್ಲಿ ಓದಿದರೆ ನಿಮಗೇನನ್ನಿಸುತ್ತೆ. ನೀವು ನನ್ನ ಸಂಸ್ಕಾರ ಕೃತಿಯನ್ನು ಭಾರತದಲ್ಲಿ ಜಾತೀಪದ್ದತಿ ಅನ್ನೋ ಪರಿಜ್ಞಾನಕ್ಕಾಗಿ ಓದುತ್ತೀರಿ. ಸಾಹಿತ್ಯ ಅಂತ ಅಲ್ಲ ಎಂದು ವಾದಿಸುತ್ತಿದ್ದೆ. ಆದರೆ ಇಲ್ಲಿ ಒಬ್ಬ ನನ್ನ ಕತೆಗಳನ್ನು ಸಾಹಿತ್ಯ ಅಂತ ಪರಿಗಣಿಸಿದ ಅಂತ ಸಂತೋಷವಾಯಿತು.
ಬೇಸರವೇನಾದರೂ ಇದೆಯಾ?
-ಅಂಥದ್ದೇನಿಲ್ಲ. ಆದರೆ ಲಂಡನ್ನಿನ ಭಾರತೀಯರು ನಾನು ಭಾರೀಯ ಲೇಖಕ ಅಂತ ಅಂದುಕೊಂಡಿಲ್ಲ ಅನ್ನೋ ನೋವಿದೆ. ಪಾಕಿಸ್ತಾನಿಯರು ಉರ್ದು ನಮ್ಮ ಭಾಷೆ, ಆ ಭಾಷೇಲಿ ಬರಿಯೋನು ನಮ್ಮ ಲೇಖಕ ಅಂದುಕೊಂಡು ಬಂದಿದ್ದರು. ಆದರೆ, ಭಾರತೀಯರಿಗೆ ಆ ಪ್ರೀತಿ ಇರಲಿಲ್ಲ.
ಬೂಕರ್ ಪ್ರಶಸ್ತಿ ಬಗ್ಗೆ ಏನನ್ನಿಸುತ್ತೆ?
-ಆ ಪ್ರಶಸ್ತಿ ಪಟ್ಟಿಯಲ್ಲಿ ಇಸ್ರೇಲಿ, ರಷಿಯನ್, ಫ್ರೆಂಚ್, ಪಾಕಿಸ್ತಾನಿ ಲೇಖಕರೂ ಇದ್ದರು. ಅವರಿಗೆ ಬರಬೇಕಾಗಿತ್ತು. ಬರಲಿಲ್ಲ. ಅದೊಂದು ಕಮರ್ಷಿಯಲ್ ಜಗತ್ತು. ಆ ಜಗತ್ತಿನ ಲೆಕ್ಕಾಚಾರವೇ ಬೇರೆ. ನಮ್ಮಲ್ಲಿ ಟಾಟಾ, ಬಿರ್ಲಾ ಮುಂತಾದ ಸಂಸ್ಥೆಗಳು ಕೊಡೋ ಪ್ರಶಸ್ತಿಯ ಹಾಗೇ ಅದೂ ಒಂದು ಅನ್ನಿಸಿತು. ಮಾರ್ಕೆಸ್ ಮುಂತಾದವರು ಹಿಂದೆ ಆ ಪಟ್ಟಿಯಲ್ಲಿದ್ದರು. ಅವರಿಗೆ ಪ್ರಶಸ್ತಿ ಬಂದಿರಲಿಲ್ಲ. ನೊಬೆಲ್ ಬಂದಿತ್ತು. ಬೂಕರ್ ಬರದಿದ್ದರೆ ನೊಬೆಲ್ ಬರುತ್ತೆ ಅನ್ನೋ ನಂಬಿಕೆ ಇದೆ. ನೊಬೆಲ್ ಪ್ರಶಸ್ತಿ ಕೊಡೋರು ನಮ್ಮ ಪಟ್ಟೀನ ನೋಡ್ತಾರೆ ಅನ್ನೋ ಜಂಬ ಬೂಕರ್ ಸಮಿತಿಗೂ ಇದೆ.
ಮುಂದಿನ ಸಲವೂ ನಿಮ್ಮ ಹೆಸರಿರುತ್ತೆ ಅಲ್ವಾ.
-ಇರಬಹುದು. ಅವರು ಆಯ್ಕೆ ಮಾಡಿದರೆ ಇದ್ದೇ ಇರುತ್ತೆ. ಆದರೆ ಇದು ಎರಡು ವರುಷಕ್ಕೊಮ್ಮೆ ಕೊಡೋ ಪ್ರಶಸ್ತಿ. ಅಷ್ಟು ಹೊತ್ತಿಗೆ ನಾನಿರಬೇಕಲ್ಲ.
 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಜಿ.ಎನ್ ನಾಗರಾಜ್

    ಬೂಕರ್ ಪ್ರಶಸ್ತಿಯ ಚರ್ಯೆಗಳನ್ನು ಅವಲೋಕಿಸಿದವರಿಗೆ ಹಾಗೂ ಈ ಬಾರಿಯ ಆಯ್ಕೆ ಪಟ್ಟಿಯನ್ನು ನೋಡಿದಾಗ ಅವರಿಗೆ ಬೇಕಿರುವುದು ತಮ್ಮದೊಂದು ವಿಶ್ವ ಪ್ರಶಸ್ತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುವ ಬಯಕೆಯೇ ಹೊರತು ನಿಜವಾಗಿ ವಿಶ್ವ ಪ್ರಶಸ್ತಿಯಾಗುವುದಲ್ಲ ಎನ್ನುವುದು ಕಣ್ಣಿಗೆ ಹೊಡೆಯುವಂತೆ ಕಾಣುತ್ತಿತ್ತು.ಬೂಕರ್ ಪ್ರಶಸ್ತಿ ಎಂಬದು ಆಂಗ್ಲೋ ಸ್ಯಾಕ್ಸನ್ ಬರಹಗಾರರಿಗೆ, ಅ ಮೂಲಕ ಅವರು ಬಿಂಬಿಸುವ ವಿಶ್ವ ಯಜಮಾನಿಕೆಯ ಮೌಲ್ಯಗಳಿಗೆ ವಿಶ್ವ ಮಾರುಕಟ್ಟೆಯನ್ನೊದಗಿಸುವ ಸಾಧನ.ಆಗಾಗ್ಗೆ ಒಬ್ಬ ಹೊರಗಿನ ಲೇಖಕರಿಗೆ ಪ್ರಶಸ್ತಿ ನೀಡಿದರೆ ಮಾತ್ರ ಈ ಪ್ರಶಸ್ತಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಅವಕಾಶ. ಹೀಗಾಗಿ ನಾನು ಪ್ರಶಸ್ತಿ ಘೋಷಣೆಗೆ ಮೊದಲೇ ಪ್ರತಿಕ್ರಿಯಿಸಿದ್ದಂತೆ ಅನಂತಮೂರ್ತಿಯವರಿಗೆ ಪ್ರಶಸ್ತಿ ನೀಡಿದರೆ ಅದು ಬೂಕರ್ ಗೆ ವಿಶ್ವ ಮನ್ನಣೆಯೇ ಹೊರತು ಬೇರೇನಲ್ಲ.
    ಇತ್ತೀಚೆಗೆ ಪಾಶ್ಚಿಮಾತ್ಯ ದೇಶಗಳಿಗೆ ಭಾರತದ ಮಾರುಕಟ್ಟೆಯ ಅವಶ್ಯಕತೆ ಹೆಚ್ಚುತ್ತಾ ನಡೆದಿದೆ. ಹೀಗಾಗಿ ವಿವಿಧ ಪ್ರಶಸ್ತಿಗಳಲ್ಲಿ, ಅಧಿಕಾರಿಗಳ ನೇಮಕದಲ್ಲಿ ಭಾರತೀಯರ ಹೆಸರು ಹೆಚ್ಚು ಹೆಚ್ಚು ಕೇಳಿ ಬರುತ್ತದೆ. ಹಾಗೆ ಬೇರೇ ಭಾಷೆಯವರಿಗೆ ಪ್ರಶಸ್ತಿ ನೀಡುವಾಗಲೂ ಅವರ ಆಯ್ಕೆ ತಮ್ಮ ಮೌಲ್ಯಗಳನ್ನು ಬಿತ್ತರಿಸುವ ಕೃತಿಗಳಿಗೇ ಪ್ರಧಾನತೆ.ಭಾರತದ ಸಂಸ್ಕೃತಿಯಲ್ಲಿ ಬೇರಿಳಿಸಿ ಅದನ್ನು ಪ್ರಗತಿಪರ ದಿಕ್ಕಿಗೆ ಕೊಂಡೊಯ್ಯವ ವಸ್ತು ಇರುವ ಅನಂತಮೂರ್ತಿಯವರ ಸಂಸ್ಕಾರವನ್ನು ವಿಶ್ವದ ಇಂಗ್ಲಿಷ್ ಓದುಗರು ಓದುವಂತೆ ಪ್ರೇರೇಪಿಸಿದರೆ ಅವರಿಗೇನು ಪ್ರಯೋಜನ. ಈ ಪ್ರಶಸ್ತಿಗಳು ಸಿಗಲಿ ಎಂದು ಬಯಸುತ್ತಲೇ ಈ ವಿಶ್ವ ವಾಸ್ತವವನ್ನು ನಾವು ಅರ್ಥೈಸಿಕೊಳ್ಳ ಬೇಕಾಗಿದೆ

    ಪ್ರತಿಕ್ರಿಯೆ
  2. sunil Rao

    ಅತ್ಯ೦ತ ಪ್ರಾಮಾಣಿಕ ಸ೦ದರ್ಶನ.
    ಆದರೆ, ಮನಸ್ಸಿನ ಮೂಲೆಯಲ್ಲಿದ್ದ, ಕೈ ತಪ್ಪಿದ ಬೇಸರ ಕೆಲವೊ೦ದು ಸಾಲುಗಳಲ್ಲಿ ಕಾಣುತ್ತದೆ. ಬೇಸರವಿಲ್ಲ ಎ೦ದು ತೋರಿದರೂ…ಅವರಿಗೆ ಬೇಸರವಾಗಿದೆ ಎ೦ದು ಕಾಣುತ್ತದೆ.

    ಪ್ರತಿಕ್ರಿಯೆ
  3. Ravi

    ಬರದಿದ್ದರು ಸಂತೋಷ. ಬಂದಿದ್ದರೂ ಸಂತೋಷ.ನೀವು ನಿಮ್ಮ ಅನಾರೋಗ್ಯದ ನಡುವೆ ಅಲ್ಲಿಯತನಕ ಹೋಗಿದ್ದು ಆ ನೆಲದವರಲ್ಲಿ ಕೆಲವರಾದರೂ ನೀವು ಹೇಳಿದ ಪಂಪ , ಕುಮಾರವ್ಯಾಸ, ಕಾರಂತರನ್ನು ಓದಿ ಚರ್ಚೆಗೊಳಗಾದರೆ ಅದುವೇ ಸಂತೋಷ. ನಿಮ್ಮ ಸಂಸ್ಕಾರ ಕೇವಲ ಸಮಾಜಶಾಸ್ತ್ರ ಎಂದು ಲಂಕೇಶರ ಕಲ್ಲು ಕರಗುವ ಸಮಯ ಒಂದು ಪ್ರೇಮಕಥೆ ಎಂದು
    ತೇಜಸ್ವಿಯವರ ನಿಗೂಡ ಮನುಷ್ಯರು ಒಂದು ಅಲೆಮಾರಿ ಕಥೆ ಎಂದು ಓದಿದರೆ ಇವುಗಳ ವಿಶಿಷ್ಟ ಕಾಣ್ಕೆಗಳನ್ನು ಅಲ್ಲಗಳೆದಂತಾಗುತ್ತದೆ.ಕನ್ನಡಕ್ಕೆ ಇಷ್ಟೊಂದು ಶಕ್ತಿಯಿದೆಯಾ, ಇಷ್ಟೊಂದು
    ವ್ಯಾಪ್ತಿಯಿದೆಯಾ ಎಂದು ಚಕಿತಗೊಳಿಸಿದ ಕೃತಿಗಳಿವು.

    ಪ್ರತಿಕ್ರಿಯೆ
  4. Gururaja kathriguppe

    I am having tears in my eye,after reading the last lines of URA. URA will live till kannada, kannada’s innersoul ‘secularism’ is on the earth. Throw the BOOKER, NOBLE, TO dustbin,they don’t understand the soul of indian languages.

    ಪ್ರತಿಕ್ರಿಯೆ
  5. N.viswanatha

    URA Will live for ever in the hearts of all Kannadigas Booker or not.N.Viswanatha

    ಪ್ರತಿಕ್ರಿಯೆ
  6. Anonymous

    heart touching… anantamurthy yavaru ii naadina odugara manasinalli nirantaravaagi neleyuriruttare…nanantu avara pustikeya ananya oduga…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: