ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ

 

shivu with p sainath

ಶಿವು ಮೋರಿಗೇರಿ 

ಮತ್ತೀಗ್ಲೂ ನಂಗನ್ನಿಸೋದು ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ, ಮೂಲ ಮಣ್ಣಿನ ಮಿಂಚು ! ಅಂತ.

p sainath with vishuನಂಗೇನು ಗೊತ್ತಿತ್ತು ? ಈ ದಿನ ನಂಗೆ ಇಷ್ಟು ಮಹತ್ವದ್ದು ಅಂತ ! ಬೆಳಗ್ಗೆ ಬೆಳಗ್ಗೇನೇ ಗೊತ್ತಾದ ಮೊದಲ ಸುದ್ದಿ ಅಂದ್ರೆ ಅದು ನಮ್ಮ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ‘ಭಾರತೀಯ ಪತ್ರಿಕೋದ್ಯಮದ ಕೆಟ್ಟ ಹುಡುಗ’ ಎಂಬ ‘ಪ್ರಶಂಸೆ’ಗೆ ಗುರಿಯಾದ ದೇಶದ ಕಡು ಬಡ ಹಳ್ಳಿಗಳ ನಾಡಿ ಮಿಡಿತವನ್ನೇ ತಡಕಾಡುವ, ಇವರ ಸುತ್ತಾಟದಿಂದಲೇ ದೇಶದ ನೀತಿ ರೂಪಕರನ್ನು ತುದಿಗಾಲಲ್ಲಿ ನಿಲ್ಲಿಸುವ, ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಹಾಗೂ ಯುರೋಪಿಯನ್ ಕಮಿಷನ್ ನ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ, ಪ್ರತಿಷ್ಠಿತ ‘ಬ್ಲಿಟ್ಸ್’ ಪತ್ರಿಕೆಗೆ ರಾಜಿನಾಮೆ ಕೊಟ್ಟು ‘ಟೈಮ್ಸ್ ಆಫ್ ಇಂಡಿಯಾ’ದ ಸಹಕಾರದೊಂದಿಗೆ ಸತತವಾಗಿ ನನ್ನ ಭಾರತದ 80 ಸಾವಿರ ಕಿ.ಮೀ ದೂರವನ್ನು ಸಂಚರಿಸಿ ರಾಷ್ಟ್ರ ನಾಯಕರ ಎದೆಯಲ್ಲಿ ಸಂಚಲನ ಮೂಡಿಸಿದ, ಭಿನ್ನ ಪಯಣಿಗನೊಟ್ಟಿಗೆ ಅರೆ ಘಳಿಗೆ ಕಳೆಯುತ್ತೇನೆಂದು ?

ಒಂದು ವ್ರತದಂತೆ ಭಾರತದ ಹಳ್ಳಿಗಳನ್ನು ಸುತ್ತಿದ, ಮತ್ತೆ ಮತ್ತೆ ಸುತ್ತಿದ, ಉದ್ರಿ ಉಳಿದ ಊರುಗಳನ್ನ ನಿದ್ರೆಯಿಲ್ಲದೆ ಹುಡುಕಿಕೊಂಡು ಹೋದ, ಬರ್ಬರ ಬೀದಿಯಲ್ಲಿ, ಗಲೀಜು ಗಲ್ಲಿಯಲ್ಲಿ ಬೇಲಿ ಮರೆಯ ಮೆಳೆಗಳಲ್ಲಿ, ಯಜಮಾನರ ಹಟ್ಟಿಯಲ್ಲಿ ಧೂಳೇ ಕಾಣದ ಧಣಿ ಕೂರುವ ಪಟ್ಟದಲ್ಲಿ, ಒಟ್ಟಿನಲ್ಲಿ ಒರಿಜಿನಲ್ ಇಂಡಿಯಾವನ್ನು ಲೋಕಕ್ಕೆ ತೋರಿಸಿಕೊಟ್ಟ ಅಸಲಿ ಪತ್ರಕರ್ತನೊಟ್ಟಿಗೆ, ಹಾಗೆ ಸುತ್ತಿದಾಗ ಸಿಕ್ಕ ಸುದ್ದಿಯನ್ನೆಲ್ಲಾ ಬರೆಯುತ್ತಾ ಹೋಗಿ ಮತ್ತೆ ಎಲ್ಲವನ್ನೂ ಕೂಡಿಸಿಟ್ಟು ‘everybody loves a good drouht’ ಅನ್ನೋ ಭಾರತವನ್ನೇ ಬೆಚ್ಚಿ ಬೀಳಿಸಿದ ಪುಸ್ತಕ ತಂದ, ಭಿನ್ನ ಪಥಿಕ ಪಾಲಗುಮ್ಮಿ ಸಾಯಿನಾಥ್ ರ ಕ್ಲಾಸ್ ಕೇಳುತ್ತೇನೆಂದು ?

ವಿಷ್ಯ ಇಷ್ಟೆ, ಬೆಳಗ್ಗೆ ಇಂದು ಸಂಜೆ ನಾಲ್ಕಕ್ಕೆ ಪಿ. ಸಾಯಿನಾಥ್ ರೊಟ್ಟಿಗೆ ನಮ್ಮ ಇಲಾಖೆ ಅಧಿಕಾರಿಗಳ ಸಂವಾದ ಇದೆ ಅನ್ನೋದು ಗೊತ್ತಾದ ತಕ್ಷಣ ತಲೆಯಲ್ಲಿ ಸುಳಿದದ್ದು ಒಂದೆರಡಾ ? ಬಿಡಿ, ಅದೆಲ್ಲಾ ಹೇಳೋಕ್ಕೂ ಮಿಕ್ಕಿದ ವಿಷ್ಯವೊಂದಿದೆ. ಸಂಜೆ ನಾಲ್ಕುವರೆಗೆ ಎಲ್ಲರೊಟ್ಟಿಗೆ ಕೂತು ಪಿ.ಸಾಯಿನಾಥ್ ಬರೋದನ್ನೇ p sainath in inf dept pic harsha kugveಕಾಯುತ್ತಾ ಕೂಡುತ್ತಲೇ ಅದೊಂದು ಪ್ರಶ್ನೆ ಕಾಡ್ತಾನೇ ಇತ್ತು. ‘ಕೇಳಿಯೇ ಬಿಡೋಣ ಇವತ್ತು’. ಅಂದ್ಕೊಂಡು ‘ಆ ಪ್ರಶ್ನೆ ಆಮೇಲೆ ಯಾವುದೋ ವೈಬ್ರೈಟಲ್ಲಿ ಮರೆತೋದ್ರೆ ?’ ಅಂತ ಆ ಪ್ರಶ್ನೆಯನ್ನ ನನ್ನ ಬುಕ್ಕಲ್ಲಿ ಬರ್ಕೊಳ್ಳೋವಾಗ್ಲೇ ನನ್ನ ಹಿಂದೆಯೇ ಹಾಯ್ದು, ಬಂದದ್ದು   ‘ನೊಂದವರೆದೆಯ ನೋವಿನ ಕೂಗನ್ನು’ ಜಗತ್ತಿಗೆ ತೋರಿಸಿಕೊಟ್ಟ ಪತ್ರಕರ್ತ, ಚಿಂತಕ, ಸಂಶೋಧಕ, ಮೂಲ ಸುದ್ದಿ ಹೆಕ್ಕಿ ಲೋಕಕ್ಕೆ ತೋರಿಸುವ ಹಂಬಲದ ವರತೆ ಚೂರೂ ಬತ್ತದಂತೆ ಚಿತ್ತವಹಿಸಿರುವ ಪಿ.ಸಾಯಿನಾಥ್. ಜೊತೆಗೆ ನಮ್ಮ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್. ಮತ್ತು ನನ್ನ ಗುರುಗಳಾದ ಜಿ.ಎನ್ ಮೋಹನ್.

ನೋಡಿದ ತಕ್ಷಣ ನಂಗನ್ನಿಸಿದ್ದು ಅರೆ! ಇವತ್ತಿಗೂ ಅದೇ ಸಾಯಿನಾಥ್ ! ಲೈಫಲ್ಲಿ ಏನೆಲ್ಲಾ ಬಂದು ಹೋಗುತ್ತೆ ಅದದೇ ವ್ಯಕ್ತಿತ್ವ ಕಾಯ್ದುಕೊಳ್ಳೋದು ತಮಾಷೆ ಮಾತಲ್ಲ. ಸರಿ, ಶುರುವಾಯ್ತು ಸಂವಾದ. ಇಡೀ ಜಗತ್ತಿನ ಮೂಲ ಮಿಡಿತ ಅನಾವರಣಗೊಳ್ಳುತ್ತಾ ಹೋಗುತ್ತಲೇ ಇತ್ತು. ಈ ಸಂವಾದದಲ್ಲಿ ಎಷ್ಟೋ ದೇಶಗಳ ಸಂಸ್ಕೃತಿ ಬಂದೋಯ್ತು. ನಮ್ಮ ದೇಶದಲ್ಲಿ ಹೇಗೆ ಕೇವಲ 280 ಕಿ.ಮೀ ಅಂತರದ ಜರ್ನಿಯಲ್ಲಿ ನಲ್ವತ್ತು ಭಾಷೆಗಳ ಪಯಣ ಸಾಗುತ್ತೆ ಅನ್ನೋದು ಗೊತ್ತಾಯ್ತು. ರಾಮನಾಥ ಪುರಂನ ಒಬ್ಬ ಕಾರ್ಮಿಕ ತನ್ನ ಶಕ್ತಿಯ ಅರಿವೇ ಇಲ್ಲದೆ ಪುಡಿಗಾಸಿಗಾಗಿ ಐವತ್ತು ಮುಗಿಲೆತ್ತರದ 50 ಮರಗಳನ್ನ ದಿನಕ್ಕೆ ಮೂರು ಬಾರಿ ಹತ್ತಿಳಿಯುವ ಅಮಾಯಕತೆ ಸುಳಿದೋಯ್ತು.

ಇವತ್ತಿಗೂ ರಾಷ್ಟ್ರದ ಮೂರು ಹಿಂದಿ, ಮೂರು ಇಂಗ್ಲಿಷ್ ಮಾಧ್ಯಮಗಳು ಬಹಿರಂಗಪಡಿಸಿದ ಸಮೀಕ್ಷೆ ಪ್ರಕಾರ ಮುಖಪುಟದಲ್ಲಿ ಶೇ. 0.8 ರಷ್ಟು ಗ್ರಾಮೀಣ ಭಾಗದ ಸುದ್ದಿಗಳನ್ನು ಪ್ರತಿನಿಧಿಸುತ್ತವೆ. ಶೇ. 0.16 ರಷ್ಟು ಕೃಷಿ ಕುರಿತದ್ದು, ಉಳಿದ ಶೇಕಡವಾರೆಲ್ಲಾ ಮೇನ್ ಪೇಜಲ್ಲಿ ಕೂತ್ಕೊಳ್ಳೋದು ಬರೀ ಮೆಟ್ರೋ ನ್ಯೂಸ್. ಸುದ್ದಿ ಗೊತ್ತಾದ ತಕ್ಷಣ ಮೀಡಿಯಾ ಸಾಗ್ತಿರೋ ಹಾದಿ ಗೊತ್ತಾಯ್ತು. ಇದೆಲ್ಲದರ ನಡುವೆ ಬಂತೊಂದು ಸಿಹಿ ಸುದ್ದಿ ಅದೂ www.ruralindiaonline.org ಅನ್ನೋ ಹೆಸರಲ್ಲಿ ‘ಪರಿ’ ಅನ್ನೋ ಅಸಲಿ ಇಂಡಿಯಾವನ್ನು ಕಟ್ಟುತ್ತಿರೋ ಕನಸು. ಒಂದು ಇಂಡಿಯಾ ಕಟ್ಟೋದು ಅಂದ್ರೆ ಯಾರು ಬೇಕಿದ್ರೂ ಕೈ ಜೋಡಿಸಬಹುದು ಅಲ್ವಾ ? ನಿಜ್ವಾಗ್ಲೂ. ಆದ್ರೆ ಒಂದು ಕಂಡೀಷನ್. ನೀವು ಈ ದೇಶದ ಮೂಲ ಪ್ರತಿಭೆಯನ್ನ, ಸುದ್ದಿಯನ್ನ, ಸಂಸ್ಕೃತಿಯನ್ನ ಸಂಬಂಧಪಟ್ಟವರಿಂದಲೇ ಅನಾವರಣಗೊಳಿಸಬೇಕು. ಸುದ್ದಿಯೊಳಗೆ ನವ್ಯಾರೂ ಮೂಗು ತುರಿಸುವಂತಿಲ್ಲ. ಹೇಗೂ ಲಿಂಕ್ ಇದೆಯಲ್ವಾ ? ಹೆಚ್ಚಿನ ಮಾಹಿತಿ ನಿಮಗಲ್ಲಿ ಸಿಗುತ್ತೆ.

p sainath in inf deptಹೀಗೆ ಹೊಸದೊಂದು ಅಸಲಿ ಲೋಕ ಅನಾವರಣಗೊಳ್ಳುತ್ತಾ ಹೋಗುವುದನ್ನೇ ಮೈಮರೆತು ಕೂತು ಪಿ.ಸಾಯಿನಾಥ್ ಹೇಳಿದ್ದೆಲ್ಲವನ್ನೂ ಮೆದುಳ ಬರದ ಭೂಮಿಗೆ ಬಸಿದುಕೊಳ್ಳುತ್ತಿದ್ದವರೆಲ್ಲರಲ್ಲೂ ಮುಂದೇನು ಹೇಳ್ತಾರೆ ಅನ್ನೋ ಕುತೂಹಲ. ಅವರ ಮತ್ತಷ್ಟು ಮಾಹಿತಿಗೆ ನಮ್ಮ ನಿರ್ದೇಶಕರು ಮತ್ತು ಜಿಎನ್ ಸರ್ ಸಾಥ್ ಕೊಟ್ರು. ಇಷ್ಟೆಲ್ಲಾ ಅಸಲಿ ಹೇಳಿದ ಮೇಲೂ ಉಳಿದ ನಿಜವೇನು ಗೊತ್ತಾ ? ಈ ಲೇಖನದ ಮೊದಲೆರಡು ಪ್ಯಾರಾದ ಪದಗಳನ್ನು ಬಳಸಿದ್ದು ಜಿಎನ್ ಸರ್ ಅನುವಾದಿಸಿದ ‘everybody loves a good drought’ ಕೃತಿಯ ಕನ್ನಡ ಅವತರಣಿಕೆಯ ಪುಟಗಳಲ್ಲಿದೆ. ಇಡೀ ಪುಸ್ತಕವನ್ನೊಮ್ಮೆ ಓದಿ ಮುಗಿಸಿದರೆ ಎದೆಯೊಳಗೊಂದು ಜಾಗೃತಿ ಮೂಡುತ್ತೆ. ಪತ್ರಿಕೋದ್ಯಮಕ್ಕೆ ಕಾಲಿಡಬೇಕೆಂಬುವವರು ಓದಿದ್ರೆ, ಪತ್ರಿಕೋದ್ಯಮದ ಮತ್ತೊಂದು ಪಟ್ಟು ದಕ್ಕುತ್ತೆ. ಹೀಗಂದುಕೊಳ್ಳುತ್ತಲೇ ಸಂವಾದ ಮುಗಿದಿತ್ತು.

ಮತ್ತೀಗ್ಲೂ ನಂಗನ್ನಿಸೋದು ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ, ಮೂಲ ಮಣ್ಣಿನ ಮಿಂಚು ! ಅಂತ. ಆಮೇಲಿಷ್ಟು ಮಾಹಿತಿ ನೀಡಿ ಮತ್ತೊಂದು ಫೋಟೋ ಕ್ಲಿಕ್ಕಿಸಿಕೊಳ್ಳಲು ಅನುವು ಮಾಡಿಕೊಟ್ರು. ನಾನಲ್ಲಿಂದ ಬಂದುಬಿಟ್ಟೆ.

ಸಾಯಿನಾಥ್ ಚಿತ್ರಗಳು: ಜಿ ಎನ್ ಮೋಹನ್/ ಹರ್ಷ ಕುಗ್ವೆ  

‍ಲೇಖಕರು Admin

February 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: