ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು, ಬಸ್ಸತ್ತಿ ಕುಳಿತೆ..

-ಕವಿತಾ ವಿರೂಪಾಕ್ಷ

ಬಸ್ ನಿಲ್ದಾಣದ ಬೆಂಚು

ಇದ್ದ ಹತ್ತು ಬೆಂಚುಗಳಲ್ಲಿ
ಹತ್ತಾರು ಜನ ;
ಜಾಗ ಹುಡುಕಿದೆ
ಕುಳಿತವರ ನಡುವಿನ
ಆರಾಮದ ಅಂತರ
ಬೆಂಚುಗಳ ತುಂಬಿಸಿತ್ತು.
ಅಲ್ಲೇ
ಅನತಿ ದೂರದಿ
ಹೆಗಲಿಗೆ ಬ್ಯಾಗೇರಿಸಿ ನಿಂತೆ.

ವಯಸ್ಸು,ಲಿಂಗ,
ಆರೋಗ್ಯ,ರೋಗ
ಉತ್ತಮ,ಅಧಮ,
ಜಾತಿ,ಧರ್ಮ
ಯಾವುದನ್ನೂ,
ಯಾರನ್ನೂ ಲೆಕ್ಕಿಸದೆ
ಹೊತ್ತು ಹೊತ್ತು ಮೆತ್ತಗಾಗದೆ
ದೃಢವಾಗಿ ಮಲಗಿತ್ತು ಬೆಂಚು.

ಆಹಾ..
ಧ್ಯಾನಸ್ಥ ಬೆಂಚು
ಅದೆಷ್ಟು ತಾದಾತ್ಮ್ಯ .
ನಕ್ಕವರೆಷ್ಟೋ
ಅತ್ತವರೆಷ್ಟೋ
ಕೈಗಂಟಿದ ಕೊಳಕ ಒರೆಸಿ ಎದ್ದವರೆಷ್ಟೋ..,

ಹೆಂಗಸರ ಮಕ್ಕಳ
ಮುಟ್ಟು,ಮೈಲಿಗೆ
ಕಾಲ್ಮಡಿ,ಹೇಸಿಗೆ
ಯಾವುದನ್ನೂ ಲೆಕ್ಕಿಸದೆ
ಎಲ್ಲವ ಮೈಗಂಟಿಸಿ
ತಣ್ಣಗೆ ಮಲಗಿತ್ತು
ಉಗ್ರ ಅಂತಃಕರಣೀಯ..

ದೂರದಿ ನಿಂತು
ಇದೆಲ್ಲವ ನೋಡುತ್ತಿದ್ದ ನಾನು
ಕ್ಷಣ ಕಲ್ಲು.

ಎಲ್ಲರನ್ನೂ
ಪ್ರೀತಿಸುವಂತೆ,ಓಲೈಸುವಂತೆ,
ಸಂಭಾಳಿಸುವಂತೆ,ಗುರುತಿಸುವಂತೆ,
ಸಹಿಸುವಂತೆ
ನಟನೆ ಮಾಡುವ
ಮನುಷ್ಯನಿಗೂ ,
ಎಲ್ಲರನ್ನೂ ಎಲ್ಲವನ್ನೂ
ನಿಜಕ್ಕೂ ಸಹಿಸುವ ನಿನಗೂ
ಅದೆಷ್ಟು ವ್ಯತ್ಯಾಸ?!

ಸಮಯವಾಯಿತು
ಕಾಯುತ್ತಿದ್ದ ಬಸ್ಸು ಬಂದಿತು.
ಎಲ್ಲರೂ ಹೊರಟರು;
ಜೊತೆಗೆ ನಾನೂ.,
ಆದರೆ
ಮನಸ್ಸಾಗಲಿಲ್ಲ
ಕಾಲ್ಗಳೇ ಅತ್ತ ಹೆಜ್ಜೆ ಕಿತ್ತವು,
ಹತ್ತಿರವಾದಂತೆ ರೂಪ ಸ್ಪಷ್ಟ ಬೆಂಚಿನೊಳಗಣ ಬುದ್ಧ
ಕಣ್ಮುಚ್ಚಿ ನಕ್ಕ!
ಸ್ಥಾವರ ಬುದ್ಧ !!
ಮುಟ್ಟಿ ಕಣ್ಗೊತ್ತಿಕೊಂಡೆ.

ಇತ್ತ,
ಹೊರಡಲನುವಾದ ಬಸ್ಸು
ಹಾರ್ನ್ ಮಾಡಿತು
ಕಾಲವೇ ಕೂಗಿದಂತೆ..

ಬದುಕಿನರ್ಧ ನಟನೆ
ಕೊನೆ ಕ್ಷಣದ ಜ್ಞಾನವನ್ನು
ಪಡೆದ ಜಂಗಮ
ನಾನು,ಬಸ್ಸತ್ತಿ ಕುಳಿತೆ.

ಬಸ್ಸೇನೋ ಹೊರಟಿತು;
ಹಾಗೆ ಕಾಲವೂ..
ಆದರೆ
ಮನುಜನಲ್ಲಾಗದ ಬದಲಾವಣೆ
ಬಸ್ಟ್ಯಾಂಡಿನ ಮೂಲೆಯಲ್ಲಿ
ಬೋರಲು ಬಿದ್ದಿತ್ತು,
ದೀರ್ಘಕಾಲದ ರೋಗಗ್ರಸ್ಥ
ರೋಗಿಯಂತೆ…!!

‍ಲೇಖಕರು Admin

9 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading