ನಾನು ತೆಲುಗು-ತಮಿಳು-ಗುಜರಾತಿ-ಹಿಂದಿ-ಕನ್ನಡಿಗ

ಆಡುಭಾಷೆ-ಮಾತೃಭಾಷೆ-ಮನೆಮಾತು-ದೇಶಭಾಷೆ-ವ್ಯವಹಾರದ ಭಾಷೆ…
 M S Sriram
ಎಂ.ಎಸ್.ಶ್ರೀರಾಮ್
ಅನೇಕ ಭಾಷೆಗಳ ನಡುವೆ ಬೆಳೆವ ನಮ್ಮಂತಹವರಿಗೆ ಯಾವ ಭಾಷೆ ಪ್ರಧಾನವೆಂದು ಆಯ್ದುಕೊಳ್ಳುವುದು ಸುಲಭದ ಮಾತೇನೂ ಅಲ್ಲ.
i speakಮನೆಯಲ್ಲಿ ಆಡುತ್ತಿದ್ದುದು ಬೆಂಗಳೂರಿನ ಪ್ರಾಂತಕ್ಕೆ ವಿಶಿಷ್ಟವಾದ ಒಂದು ಸಮುದಾಯ ಮಾತನಾಡುವ ಹರುಕು ತೆಲುಗು. ತಾಯಿ ಆಂಧ್ರಪ್ರದೇಶದ ನೆಲ್ಲೂರಿನಿಂದ ಬಂದವರು. ಹೀಗಾಗಿ ರಜೆಗೆ ಅಲ್ಲಿಗೆ ಹೋದಾಗ ತುಸು ಶುದ್ಧವೆನ್ನಿಸುವ ತೆಲುಗೂ ನಮಗೆ ದಕ್ಕುತ್ತಿತ್ತು. ಆದರೆ ಇಲ್ಲೂ ಒಂದು ತೊಂದರೆ. ತಾಯಿಯ ಮಾತೃಭಾಷೆ ತಮಿಳು. ಅದೂ ಶುದ್ಧವಲ್ಲ. ನಮ್ಮ ಮನೆಯಲ್ಲಿನ ಅಪಭ್ರಂಶದ ತೆಲುಗಿನಂತೆ – ಒಂದು ಸಮುದಾಯದ ಭಾಷೆಗೆ ತಮಿಳು ಎನ್ನುವ ಹಣೆಪಟ್ಟಿ ಅಷ್ಟೇ. ಕನ್ನಡದ ತೆಲುಗಿನ ಲಿಪಿಯಲ್ಲಿ ಸಾಮ್ಯತೆಯಿತ್ತಾದ್ದರಿಂದ ಓದಿಯೂ ತೆಲುಗನ್ನು ದಕ್ಕಿಸಿಕೊಳ್ಳಬಹುದಿತ್ತು.
ಆದರೆ ಈ ಎಲ್ಲದರ ನಡುವೆ ಸೃಜನಶೀಲ ಬರವಣಿಗೆಗೆ ಆಯ್ಕೆಯಾದದ್ದು ಕನ್ನಡ. ತುಸು ಮಟ್ಟಿಗೆ ಓದಿದ್ದ ಕನ್ನಡ ದಿನನಿತ್ಯದ ವ್ಯವಹಾರಗಳಿಗೆ ಸರಳವಾಗಿ ಸಹಜವಾಗಿ ಬಳಸುತ್ತಿದ್ದುದರಿಂದ ಅಭಿವ್ಯಕ್ತಿಗೆ ಸರಿಯಾದ ಮಾಧ್ಯಮವೂ ಆಯಿತು. ವ್ಯವಹಾರದ – ಶಾಲೆಯಲ್ಲಿ ವ್ಯಾಸಂಗದ ಮಾಧ್ಯಮವಾದ ಇಂಗ್ಲೀಷಿನಲ್ಲೂ ಬರೆಯಬಹುದಿತ್ತು. ಆದರೆ ಕನ್ನಡಕ್ಕೆ – ಅಂದರೆ ಪರಿಸರದ ಭಾಷೆಗೆ ಒಂದು ವಿಶೇಷ ಆಪ್ತತೆಯಿದೆ. ಅದನ್ನು ದಕ್ಕಿಸಿಕೊಳ್ಳುವುದಕ್ಕೆ ಕನ್ನಡವೇ ಸೂಕ್ತವಾಯಿತು.
ಆದರೆ ತಮಾಷೆ ನೋಡಿ. ಕನ್ನಡವನ್ನು ಅಭಿವ್ಯಕಿಯ ಭಾಷೆಯನ್ನಾಗಿಸಿಕೊಂಡ ಕೂಡಲೇ ನಾಡು ಬಿಟ್ಟು ಹೋಗುವ ಪ್ರಮೇಯ ಬಂತು. ಮೊದಲು ಗುಜರಾತಿನ ಆಣಂದ್ ಗೆ, ನಂತರ ಹೈದರಾಬಾದಿಗೆ. ಗುಜರಾತಿನಲ್ಲಿ ಪರಿಸರ ಭಾಷೆಯಾದ ಗುಜರಾತೀ ಕಲಿಯಲು ಪ್ರಯತ್ನಸಿದ್ದಾಯಿತು. ಆದರೆ ಗುಜರಾತಿಗಳು ವಿರಳವಾಗಿದ್ದ ಕ್ಯಾಂಪಸ್ಸಿನಲ್ಲಿದ್ದದ್ದರಿಂದ ದೇಶಭಾಷೆಯಾದ ಹಿಂದಿ ಸಂವಹನ ಮಾಧ್ಯಮವಾಯಿತು.
ಗುಜರಾತಿ ಪತ್ರಿಕೆಯನ್ನು ತರಿಸಿ ಓದಿ – ಅಷ್ಟರ ಮಟ್ಟಿಗೆ ಆ ಭಾಷೆಯ ಮೇಲಿನ ಪ್ರೀತಿಯನ್ನು ತೋರಿಸಿದೆ. ಅಲ್ಲಿನ ಸಿನೇಮಾಗಳನ್ನು ಭಕ್ತಿಯಿಂದ ನೋಡಿದೆ. ಅಲ್ಲಿಯೂ ಕನ್ನಡ ತೆಲುಗಿನ ಗೆಳೆತನವಿದ್ದಂತೆ, ಲಿಪಿ ಹಿಂದಿಗೆ ಹತ್ತಿರವಾದದ್ದರಿಂದ ಅನುಕೂಲವಾಯಿತು. ಅಷ್ಟಾದರೂ ನನ್ನ ತಾಯಿನಾಡಿನ ಜೊತೆಗೆ ಸಂಪರ್ಕವಿದ್ದದ್ದು ಕನ್ನಡದ ಮೂಲಕವೇ. ತಾಯಿ-ತಂದೆಯರಿಗೆ ಇಂಗ್ಲೀಷಿನಲ್ಲಿ ಪತ್ರ ಬರೆಯುತ್ತಿದ್ದ ನನಗೆ ಇತರ ಸಂಪರ್ಕಕ್ಕೆಲ್ಲ ನನ್ನ ಬಾಲ್ಯದ ಪರಿಸರ ಭಾಷೆಯಲ್ಲಿ ಮಾಡುವುದೇ ಸಹಜವೆನ್ನಿಸಿತು.
ಆದರೆ ಹೈದರಾಬಾದಿನಲ್ಲಿರುತ್ತಾ – ಮಾತೃಭಾಷೆಯೂ ತೆಲುಗು, ಪರಿಸರದ ಭಾಷೆಯೂ ತೆಲುಗು, ವ್ಯವಹಾರದ ಭಾಷೆಯೂ ತೆಲುಗು ಆದ ವಿಚಿತ್ರ ಪ್ರಮೇಯ ಬಂತು. ಆಗ ನಾನು ತೆಲುಗು ಭಾಷೆಯನ್ನು ವ್ಯವಹಾರಕ್ಕಾಗಿ ಮತ್ತೆ ಕಲಿಯಬೇಕಾಯಿತು. ಪತ್ರವ್ಯವಹಾರ ತೆಲುಗಿನಲ್ಲಿ ಮಾಡುವುದನ್ನು ಕಲಿತೆ. ಹಾಗೆ ಕಲಿತರೂ ಕಡೆಗೆ ಸೃಜನಶೀಲ ಬರವಣಿಗೆಗೆ ಭಾಷೆ ದಕ್ಕಲೇ ಇಲ್ಲ. ಅದಕ್ಕೆ ಬೇಕಾದ ತಯಾರಿಯೇ ಬೇರೇನೋ. ಹೀಗಾಗಿಯೇ ಭಾಷೆಯ ಮೇಲಿನ ಹಿಡಿತವೂ ಸಂದರ್ಭದಿಂದ ಸಂದರ್ಭಕ್ಕೆ ಬದಲಾಗುತ್ತಾ ಹೋಗುತ್ತದೆ.
languagesನಿನ್ನೆಯಷ್ಟೇ ಭೇಟಿಯಾದವರೊಬ್ಬರು ನನಗೆ ಹೇಳಿದರು. ದೇಶದ ಪ್ರಧಾನ ಮಂತ್ರಿಯಾಗಿದ್ದ ದಿವಂಗತ ಪಿ.ವಿ.ನರಸಿಂಹಾರಾವು ಅನೇಕ ಭಾಷೆಗಳನ್ನು ಬಲ್ಲವರಾಗಿದ್ದರು. ಆದರೆ ಪ್ರಯೋಜನವೇನು. ಅವರ ಧ್ವನಿ ಯಾವ ಭಾಷೆಯಲ್ಲಿಯೂ ಕೇಳಿಬರಲಿಲ್ಲ!
ಆದರೆ ಸೃಜನಶೀಲ ಬರವಣಿಗೆಯನ್ನು ಮಾಡುವವರು ತಮ್ಮ ಅಭಿವ್ಯಕ್ತಿಯ ಭಾಷೆಯನ್ನು ಬದಲಾಯಿಸಿದ ಎರಡು ಉದಾಹರಣೆಗಳು ಇವೆ. ನನ್ನ ಪ್ರಿಯ ಲೇಖಕ ಮಿಲನ್ ಕುಂದೆರಾ ಚೆಕೋಸ್ಲವಾಕ್ಯಾದಿಂದ ಪಲಾಯನ ಮಾಡಿದಾಗ ಬಿಡಬೇಕಾಗಿ ಬಂದದ್ದು ತನ್ನ ಮನೆ, ಪರಿಸರವನ್ನಷ್ಟೇ ಅಲ್ಲ, ಬದಲಿಗೆ ಭಾಷೆಯನ್ನೂ ಬಿಡಬೇಕಾಗಿ ಬಂತು. ಅವನಿಗೆ ತಾನೆಂದೂ ತನ್ನ ದೇಶಕ್ಕೆ ವಾಪಸ್ಸಾಗುವುದಿಲ್ಲವೆನ್ನುವುದು ಮನದಟ್ಟಾಯಿತು. ಹೀಗಾಗಿಯೇ ಕಾಲಾಂತರದಲ್ಲಿ ಚೆಕ್ ಭಾಷೆಯ ಲೇಖಕನಾಗಿದ್ದ ಕುಂದೆರಾ ಸಂಪೂರ್ಣವಾಗಿ ಫ್ರೆಂಚ್ ಭಾಷೆಗೆ ಬದಲಾಗಿ ಹೋದ.
ಆ ಯತ್ನವನ್ನು ನಾನು ತೆಲುಗಿಗೆ ಮಾಡದಿರಲು, ಮತ್ತೆ ನನ್ನ ಪರಿಸರದ ಭಾಷೆಯ ವಾತಾವರಣಕ್ಕೆ ಬರುತ್ತೇನೆ ಎಂಬ ಭರವಸೆಯೇ ಇದ್ದಿರಬಹುದು. ಆದರೆ ಅದಕ್ಕಿಂತ ಗಮ್ಮತ್ತಿನ ವಿಚಾರ ಇಂಗ್ಲೀಷಿನಲ್ಲಿ ಹೆಸರು ಮಾಡಿದ ಭಾರತೀಯ (ಬಂಗಾಲೀ) ಮೂಲದ ಝುಂಪಾ ಲಹಿರಿಯದ್ದು. ಆಕೆ ಇಟಲಿಗೆ ಹೋಗಿ, ಅಲ್ಲಿ ಇಟಾಲಿಯನ್ ಕಲಿತು, ಅದೇ ಭಾಷೆಯಲ್ಲಿ ತನ್ನ ಹೊಸ ಪುಸ್ತಕವ ಕಾದಂಬರಿಯನ್ನು ರಚಿಸಿದ್ದಾಳೆ. ಸಾಲದ್ದಕ್ಕೆ ಅದಕ್ಕೆ ತಯಾರಿಯಾಗಿ ತನ್ನ ಓದು ಮತ್ತು ಇತರ ಎಲ್ಲ ವ್ಯವಹಾರಗಳನ್ನು ಪರಿಸರದ ಭಾಷೆಯಾದ ಇಟಾಲಿಯನ್ ನಲ್ಲಿ ಮಾಡಿದ್ದಳಂತೆ. ಇದೂ ಕುತೂಹಲದ ಸಾಧನೆಯೇ ಸರಿ.
ಹೀಗೆ ನಾವು ಕಾಣುತ್ತಿರುವ ವೈವಿಧ್ಯದ ವಾತಾವರಣದಲ್ಲಿ ತಾಯಿನುಡಿ – ಅಥವಾ ಮಾತೃಭಾಷೆ ಎನ್ನುವುದರ ಅರ್ಥವೇನು ಎಂಬುದನ್ನು ಪುನರಾವಲೋಕನ ಮಾಡಬೇಕಾಗುತ್ತದೆ.

‍ಲೇಖಕರು Admin

February 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: