ನಾಗೇಶ ಕೆ ಎನ್ ಕಂಡಂತೆ ‘ನಾನು ಹಿಂದೂ ರಾಮಯ್ಯ’

ನಾಗೇಶ ಕೆ ಎನ್

೯೦ರ ಹರೆಯದ ಹಿರಿಯ ಪತ್ರಕರ್ತ, ಮಾಧ್ಯಮ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರು ತಮ್ಮ ಅರವತ್ತು ವರ್ಷಗಳ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಪುಸ್ತಕ ಮೊನ್ನೆ ತಾನೆ ಬಿಡುಗಡೆ ಆಯಿತು.

ನಲವತ್ತೆಂಟು ವರ್ಷಗಳ ಕಾಲ “ದಿ ಹಿಂದೂ” ಎಂಬ ಪ್ರಮುಖ ಅಂಗ್ಲ ಪತ್ರಿಕೆಯ ಪ್ರತಿನಿಧಿಯಾಗಿ ಅವರ ಕೈಗೆಟುಕದ ಕ್ಷೇತ್ರವಾಗಲಿ, ಅಧಿಕಾರಿಗಳಾಗಲಿ, ಮಂತ್ರಿಮಹೋದಯರಾಗಲಿ, ಮುಖ್ಯಮಂತ್ರಿಗಳಾಗಲಿ ಇಲ್ಲವೇ ಇಲ್ಲವೆಂಬುದು ಅವರ ಕಥನ ನಿರೂಪಣೆಯಲ್ಲಿ ವೇದ್ಯವಾಗುತ್ತದೆ. ಪ್ರಾಯಶಃ ಶಕ್ತಿ ಕೇಂದ್ರದ ಅವರ ಸಂಪರ್ಕಗಳಿಂದ ರಾಮಯ್ಯನವರು ಸಹಕಾರಿ ಕ್ಷೇತ್ರ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವಲ್ಲಿ ಸಹಕಾರಿಯಾಗಿದೆ.

ದೈವದ ಬಗ್ಗೆ ಅವರಿಗಿರುವ ಅಪಾರವಾದ ನಂಬಿಕೆಯನ್ನು ಘಟನೆಗಳ ಮೂಲಕ ವಿವರಿಸಿದ್ದಾರೆ. ಅಂತೆಯೇ ಜ್ಯೋತಿಷ್ಯದ ಬಗ್ಗೆ ಇರುವ ಅನುಮಾನವನ್ನು “ನವಿರು ಒಗರು” ಅಧ್ಯಾಯದಲ್ಲಿ ನೀವಳಿಸಿದ್ದಾರೆ.

ಮಠ ಮಾನ್ಯಗಳ ಬಗೆಗೆ ಅವರಿಗಿರುವ ಗೌರವ “ಊರಿಗೆ ಬಂದರು ನಡೆದಾಡುವ ದೇವರು” ಎಂಬ ಶೀರ್ಷಿಕೆಯಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಬಗೆಗಿನ ಅಭಿಮಾನ ಮತ್ತು ಗೌರವ ಅಕ್ಷರ ರೂಪ ಪಡೆದಿದೆ. “ಯುಗಯೋಗಿಗೆ ಪೌರ ನಮನ” ಅಧ್ಯಾಯ ಶ್ರೀ ಭಾಲಗಂಗಾಧರನಾಥ ಸ್ವಾಮೀಜಿಯವರಿಗೆ ನಾಗಮಂಗಲದಲ್ಲಿ ಏರ್ಪಡಿಸಿದ್ದ ಗುರುವಂದನೆಯ ಕುರಿತದ್ದಾಗಿದೆ.

ಬಂದು ಹೋದ ಎಲ್ಲಾ ಮುಖ್ಯಮಂತ್ರಿಗಳ ಬಗೆಗೂ ರಾಮಯ್ಯ ತಮ್ಮ ಒಡನಾಟವನ್ನು ಕೆಲವು ಘಟನೆಗಳನ್ನು ದಾಖಲಿಸುವ ಮೂಲಕ ನೆನಪು ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಂಧಿರಾ ಗಾಂಧಿ ಸ್ಪರ್ಧಿಸಿದ್ದಾಗ ವೀರೇಂದ್ರ ಪಾಟೀಲರ ಭದ್ರಕೋಟೆಯಲ್ಲಿ ಒಕ್ಕಲಿಗರು ಹಾಗೂ ಕೃಷಿ ಕೂಲಿಗಳು ಇಂಧಿರಾ ಪರವಾಗಿ ವಾಲಬಹುದಾದ ಸೂಚನೆಯನ್ನು ತಮ್ಮ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರಕಟಿಸಿದುದಾಗಿ ದಾಖಲಿಸಿದ್ದಾರೆ.

ಜೆಡಿಎಸ್ – ಭಾಜಪ ೧೮-೧೮ ತಿಂಗಳ ಒಪ್ಪಂದದ ಪ್ರಕಾರ ಯಡಿಯೂರಪ್ಪನವರಿಗೆ ಅಧಿಕಾರ ಕೊಡಲು ತೊಡರುಗಾಲಾಕಿದ್ದು, ಭಾಜಪ ಗೆ ಅಧಿಕಾರ ಕೊಡಬಾರದೆಂದು ಹಠ ಹಿಡಿದದ್ದು ದೇವೇಗೌಡರು ಎಂಬುದನ್ನು ವಿಷದಪಡಿಸಿದ್ದಾರೆ. ಕಡೆಗೆ ಅದೇ ಕಾರಣಕ್ಕೆ ಯಡಿಯೂಪ್ಪನವರ ಪರ ಜನರ ಅನುಕಂಪವೂ ಸೇರಿ ಮಠಮಾನ್ಯಗಳ ಬೆಂಬಲದಲ್ಲಿ ಭಾಜಪ ಅಧಿಕಾರಕ್ಕೆ ಬಂದ ಬಗೆ ಬಣ್ಣಿಸಿದ್ದಾರೆ.

ಆಧುನಿಕ ಕೃಷಿ, ಹೈನುಗಾರಿಕೆ, ಮೀನು ಸಾಕಣೆ, ಇಂಡಾಫ್ ರಾಗಿಯಂಥ ಹೊಸ ತಳಿಗಳು, ನೀರಾವರಿ ಹೀಗೆ ಗ್ರಾಮ ಭಾರತದ ಅಭ್ಯುದಯಕ್ಕೆ ರೂಪಿಸಲಾದ ನೀರಾವರಿ ಯೋಜನೆಗಳು, ಕೃಷಿ ತಂತ್ರಜ್ಞಾನ ಅಭಿವೃದ್ಧಿಯ ಬಗೆಗೂ ದಾಖಲಿಸಿದ್ದಾರೆ.

ಇಷ್ಟು ದೀರ್ಘಕಾಲ ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಒಡನಾಡಿರುವ ಪಿ.ರಾಮಯ್ಯನವರ ಅನುಭವ ಪ್ರಾಯಶಃ ಕಳೆದ ೬೦ ವರ್ಷಗಳ ಕರ್ನಾಟಕದ ರಾಜಕೀಯ ಹಾಗೂ ಸಾಮಾಜಿಕ ಚರಿತ್ರೆಯನ್ನು ಬರೆಯುವಷ್ಟು ಅಗಾಧವಾಗಿ ಇರಲೇಬೇಕು ಎಂಬುದು ನನ್ನ ನಂಬಿಕೆ. ಆದರೆ ಈ ಪುಸ್ತಕದಲ್ಲಿ ಅವರ ನೆನಪುಗಳಷ್ಟೇ ಘಟನಾವಳಿಗಳ ರೂಪದಲ್ಲಿ ದಾಖಲಾಗಿವೆ. ಹಾಗಾಗಿ ಇದು ಅವರತ್ತು ವರ್ಷಗಳ ನೆನಪುಗಳು ಅಂದಿದ್ದರೇ ಚನ್ನಿತ್ತೇನೋ..

ಇನ್ನು ಇಡೀ ಪುಸ್ತಕದಲ್ಲಿ ದಾಖಲಾಗಿರುವ ಎಲ್ಲಾ ಸನ್ನಿವೇಷ, ಘಟನೆಗಳೂ ಪಿ.ರಾಮಯ್ಯನವರ ಸುತ್ತಲೇ ಗಿರಕಿ ಹೊಡೆಯುತ್ತಾ protagonist ಆಚೆಗೆ ನಮ್ಮನ್ನು ಕೊಂಡೊಯ್ಯುವುದಿಲ್ಲ. ಚರಿತ್ರಾರ್ಹ ಘಟನೆಗಳು, ಯೋಜನೆಗಳು, ವ್ಯಕ್ತಿಗಳನ್ನು ಚಿತ್ರಿಸುವಾಗ ಓದುಗರ ಕುತೂಹಲ ತಣಿಸುವ, ಚರಿತ್ರೆಯನ್ನು ತಿಳಿಯುವ ಜ್ಞಾನ ದಾಹವೂ ಇದರಲ್ಲಿ ತಣಿಯುವುದಿಲ್ಲ.

ಇಷ್ಟೆಲ್ಲದರ ನಡುವೆ ೯೦ ರ ಹಿರಿಯ ಜೀವ ತಮ್ಮ ನೆನಪುಗಳನ್ನು ದಾಖಲಿಸಿರುವುದಕ್ಕೆ ಅವರಿಗೆ ಅಭಿನಂದನೆಗಳು ಸಲ್ಲಬೇಕು. ಇದನ್ನು ಆಗುಮಾಡಿದ ಅವರ ಆಪ್ತ ಬಳಗ ಹಾಗೂ ಪ್ರಕಟಿಸಿದ ಅಭಿಮಾನಿ ಸಮೂಹಕ್ಕೂ ಅಭಿನಂದನೆಗಳು ಸಲ್ಲಬೇಕು.

‍ಲೇಖಕರು Admin

November 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: