ನಾಗರೇಖಾ ಗಾಂವಕರ ಓದಿದ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’

ಆಶಾವಾದವನ್ನು ಬಿಂಬಿಸುವ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’

ನಾಗರೇಖಾ ಗಾಂವಕರ

ಬದುಕಿನ ನಿಜ ಮೌಲ್ಯವೇನೆಂದು ಅರ್ಥ ಮಾಡಿಕೊಳ್ಳುವುದು ಅದೆಷ್ಟು ಕಷ್ಟ. ನಮ್ಮ ಸಾಮಾಜಿಕ ಜೀವನ ವಿಧಾನಗಳು ಕಟ್ಟಿಕೊಟ್ಟ ಬದುಕು, ನಾವೇ ಕಟ್ಟಿಕೊಂಡ ಬದುಕು ಯೋಗ್ಯವಾದದ್ದೆ ಇತ್ಯಾದಿ ಯೋಚನೆಗಳು ಆಗಾಗ ಕಾಡುತ್ತವೆ. ಹಣದ ಉನ್ಮಾದ ಹೇಗಿರುತ್ತದೆ. ಪ್ರಾಪಂಚಿಕದ ಆಸೆಗಳು ಹೇಗಿರುತ್ತವೆ. ಈ ಎಲ್ಲ ಜಿಜ್ಞಾಸೆಗಳಿಗೆ ಒಂದು ಒತ್ತಾಸೆಯ ಧೈರ್ಯದ, ಮಾನಸಿಕ ಸದೃಢತೆಯನ್ನು ಹೊಂದುವತ್ತ ಬೇಕಾದ ಹಲವು ಸಂಗತಿಗಳನ್ನು ಬೇರೆ ಬೇರೆ ರೂಪಗಳಲ್ಲಿ ಝೆನ್ ಕಥಾನಕಗಳು, ಅನುಭವ ಕಥನಗಳು, ದಿನನಿತ್ಯದ ಆಗುಹೋಗುಗಳ ಸಂದರ್ಭೋಚಿತ ಘಟನೆಗಳನ್ನು ಉದಾಹರಿಸುತ್ತಾ ನೀಡಿದ ಚಿತ್ರಣಗಳು, ರಾಜಕೀಯ ನಾಯಕರ ಬದುಕಿನ ಬಧ್ಧತೆಗಳನ್ನು ಉದಾಹರಿಸುವ ಸಂಗತಿಗಳನ್ನು, ತನ್ನಂತೆ ಬರೆವ ಇತರರ ಪುಸ್ತಕವನ್ನು ಓದಿ ಅಭಿಪ್ರಾಯಿಸಿದ ಪರಿಚಯ ಲೇಖನಗಳು ಹೀಗೆ ಬಹು ವೈವಿಧ್ಯಮಯ ಸಾಹಿತ್ಯ ಕೃತಿಯಾಗಿ ನನಗೆ ಕಂಡು ಬಂದದ್ದು ಆರ್ ಡಿ ಹೆಗಡೆ ಆಲ್ಮನೆಯವರ “ತುಂಬಿದ ಬಟ್ಟಲು ಮತ್ತು ಇತರ ಬರಹಗಳು”

ಈ ಪುಸ್ತಕದ ಆತ್ಮಕಥೆ ಎಂಬ ಲೇಖನದಲ್ಲಿ “ಆತ್ಮಕಥೆ ವ್ಯಕ್ತಿ ತನಗಾಗಿ ತಾನೇ ಕಟ್ಟಿಕೊಳ್ಳುವ ಸ್ಮಾರಕವಾಗಬಾರದು. ಅದು ಮುಂದಿನ ಶತಮಾನಗಳಿಗೆ ತೆರೆದಿಟ್ಟ ಬೆಳಕಿನ ಕಿಂಡಿಯಾಗಬೇಕು” ಎನ್ನುತ್ತಾರೆ ಲೇಖಕರು. ಬಹುಮುಖ್ಯವಾದ ಸಂಗತಿಯದು. ಯಾಕೆಂದರೆ ಬಹಳಷ್ಟು ಆತ್ಮಕಥೆಗಳು ಆತ್ಮರತಿಯ ಕಥೆಗಳಾಗಿ ನೈಜತೆಯಿಂದ ವಿಮುಖವಾಗಿರುತ್ತವೆ. ಇದನ್ನು ಉಲ್ಲೇಖಿಸಿದ ಆಲ್ಮನೆಯವರು ಒಂದೊಮ್ಮೆ ತಾನು ಆತ್ಮಕಥೆಗಳ ಬಯಸಿ ಓದುವುದಾದರೆ ಅದು ನೆಲ್ಸನ್ ಮಂಡೇಲಾ ಅವರ “Long walk to Freedom” ಮತ್ತು ಆನ್ ಫ್ರಾಂಕ್ ಬರೆದ “The Dairy of a Young Girl” ಎಂದಿದ್ದಾರೆ. ಆನ್ ಫ್ರಾಂಕ್ ಕನ್ನಡಾನುವಾದ ಓದಿದ ಆಲ್ಮನೆಯವರು ನನಗೆ ಶುಭ ಕೋರಿದ್ದರು. ಹಾಗೂ ವಿಶ್ವಾಸದಿಂದ ‘ತುಂಬಿದ ಬಟ್ಟಲ’ನ್ನು ಕಳುಹಿಸಿಕೊಟ್ಟಿದ್ದರು.

ಹಿರಿಯರೂ ಶಿಸ್ತುಬದ್ಧ ವ್ಯಕ್ತಿತ್ವದವರೂ ಆದ ಆರ್ ಡಿ ಹೆಗಡೆ ಆಲ್ಮನೆಯವರ ‘ತುಂಬಿದ ಬಟ್ಟಲು ಮತ್ತು ಇತರ ಬರಹಗಳು’ ಕೈ ಸೇರಿ ಆಗಲೇ ತಿಂಗಳು ಕಳೆದಿವೆ. ಒಂದೇ ಗುಕ್ಕಿಗೆ ಓದಲಾಗದೇ ಹಾಗೇ ನಾಲ್ಕಾರು ಲೇಖನಗಳನ್ನು ಓದುತ್ತ ಕೆಲವೊಮ್ಮೆ ಒಂದೇ ಲೇಖನವನ್ನು ಎರಡೆರಡು ಬಾರಿ ಓದಿಸಿಕೊಳ್ಳುವ ವಿಶಿಷ್ಟವಾದ ಸರಳ ಶೈಲಿಯಿಂದ ಗಮನ ಸೆಳೆಯಿತು ಪುಸ್ತಕ. ಪ್ರತಿ ಲೇಖನಗಳು ನೀಡುವ ವಿಶಿಷ್ಟ ಸಂದೇಶಗಳು ನಿಜ ಮನುಜನಾಗುವ ಮಾನವತೆಯ ಸಾಕಾರವಾಗುವ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವುದು ವಿವೇಕಿಯಾದವನಿಗೆ ಕಷ್ಟ ಸಾಧ್ಯವಲ್ಲ ಎಂಬ ಪ್ರಜ್ಞೆಯ ಸುತ್ತಲೇ ಸುತ್ತುತ್ತವೆ ಎನಿಸುತ್ತದೆ.

ಇಲ್ಲಿಯ ಝೆನ್ ಕತೆಗಳು ನೀಡುವ ಬದುಕಿನ ಕುರಿತ ಸಂದೇಶಗಳು ಆಪ್ತವಾಗುತ್ತವೆ. ಹಕ್ಕಿಯಂತೆ ವ್ಯಕ್ತಿತ್ವವನ್ನು ಊರ್ಜಿತಗೊಳಿಸಿಕೊಳ್ಳುವಲ್ಲಿ, ಸಹಜ ಬದುಕಿನ ಸಾರ- ಅಂತರ೦ಗದ ಶುದ್ಧತೆ ಬಗ್ಗೆ, ಅಸ್ತಿತ್ವದ ನಶ್ವರತೆಯ ಬಗ್ಗೆ ಹೀಗೆ ಸತ್ಯದ ಸಾಕ್ಷಾತ್ಕಾರದ ಹಲವು ಸಂದೇಶಗಳು ಇಲ್ಲಿವೆ.

ಪುಸ್ತಕ ಪ್ರೀತಿಯ ಬಗ್ಗೆ ‘ಪುಸ್ತಕ ಪ್ರೀತಿಯ ಹಿರಿಯರು’, ‘ಪುಸ್ತಕ ಪ್ರೀತಿಯ ನೆನಪು’, ‘ಚಿಂತನ ಉತ್ತರ ಕನ್ನಡ’ದ ಪುಸ್ತಕ ಪ್ರೀತಿ’ ಹೀಗೆ ಮೂರು ಲೇಖನಗಳಿವೆ. ಪುಸ್ತಕ ಸಂಸ್ಕೃತಿಯ ಕುರಿತು, ಅದನ್ನು ಆಧರಿಸುವ ಕೆಲವು ಪುಸ್ತಕ ಪ್ರೇಮಿಗಳನ್ನು ನೆನೆಯುವ ಲೇಖನಗಳು ಓದುಗರಿಗೆ, ಬರಹಗಾರರಿಗೆ ಒಂದು ಸಂದೇಶದ೦ತಿವೆ.

‘ಸುಭಾಷಿತಗಳು’ ಎಂಬ ಲೇಖನ ಸುಭಾಷಿತಗಳ ಬಗ್ಗೆ ಕಿರಿದಾಗಿ ಅಷ್ಟೇ ಹಿರಿದಾದ ಅರ್ಥದಲ್ಲಿ ಹೇಳುವ ಪದಹಾರಗಳ ಬೆಡಗನ್ನು ಸುಂದರವಾಗಿ ಉಲ್ಲೇಖಿಸುತ್ತದೆ. ಈ ಸುಭಾಷಿತಗಳು ಕೂಡಾ ಸಾಮಾನ್ಯರ ಬದುಕಿನ ಜೀವನ ದರ್ಶನಗಳ ಮೂಲಕವೇ ಹುಟ್ಟಿಕೊಂಡಿರುವ೦ತಹುಗಳು ಎಂಬುದಕ್ಕೆ ಒಂದು ಉದಾಹರಣೆ ನೀಡುತ್ತಾರೆ. ಕಚೇರಿಯ ಡಿ ಗ್ರುಪ್ ನೌಕರನಾದ ‘ಅಣ್ಣು’ ಕಛೇರಿಯ ಸಿಬ್ಬಂದಿಯೊಬ್ಬರ ಆತ್ಮಹತ್ಯೆ ಬಗ್ಗೆ ಉದ್ಗರಿಸಿದ ಮಾತು ‘ಮನ್ಸö್ಯ ಒಕ್ಕಾಲಲ್ಲಿ ನಡೀಬೇಕು ಬದ್ಕಬೇಕು ಅಂದ್ರೆ. ಇವರು ಸತ್ರಲ್ಲ ತುಂಬಾ ಹಾರಾರ್ತ ನಡೆದ್ರು ಸಾರ್” ಎಂಬ ಜಾನಪದ ಸೊಗಡಿನ ಅನುಭವಾಮೃತ ಸಂಸ್ಕೃತದಲ್ಲಿ “ಚಲತ್ಯೇಕೇನ ಪಾದೇನ ತಿಷ್ಠತ್ಯೇಕೇನ ಬುದ್ದಿಮಾನ್‌ I ನಾಸಮೀಕ್ಷ್ಯ ಪರಂ ಸ್ಥಾನಂ ಪೂರ್ವಮಾಯಾತನಂ ತ್ಯಜೇತ್ II” ಅಂದರೆ ಬುದ್ದಿವಂತರು ಒಂದು ಕಾಲಿನಲ್ಲಿ ನಡೆಯುತ್ತಾನೆ ಮತ್ತು ಒಂದು ಕಾಲಿನಲ್ಲಿ ನಿಲ್ಲುತ್ತಾನೆ. ಇದರರ್ಥ ಮುಂದಿನ ಹೆಜ್ಜೆ ಭರವಸೆಯಿಂದ ಕೂಡಿದ್ದರೆ ಮಾತ್ರ ಹಿಂದಿನ ಹೆಜ್ಜೆಯನ್ನು ಕೀಳಬಹುದು. ಜನ ಸಾಮಾನ್ಯರ ಅನುಭವದ ನುಡಿಗಳೇ ಸಂಸ್ಕೃತ ರೂಪಾಂತರವಾಗಿರುವ ಮಹಿಮೆ ಇದು. ಹಾಗೇ ಅದೆಷ್ಟೋ ಗಾದೆಗಳೂ ಕೂಡಾ ವೇದಕ್ಕಿಂತಲೂ ಸಮಗ್ರವಾದ ಸಂಪನ್ನವಾದ ಜ್ಞಾನ ಕಣಜಗಳಲ್ಲವೇ?

ಇತರ ಲೇಖನಗಳ ಬಗ್ಗೆ ನೋಡುವುದಾದರೆ ‘ರಾಮಾಯಣದ ಮೂವರು ಸ್ತ್ರೀಯರು’ , ‘ರಾಮಾಯಣ: ಒಂದು ಟಿಪ್ಪಣಿ, ಶ್ರೀ ರಾಮನವಮಿ. ಅಪ್ರಿಯವಾದ ಸತ್ಯ, ವಾಲ್ಮೀಕಿ ಮುಗ್ಗರಿಸಿದಾಗ ಈ ಎಲ್ಲ ಬರೆಹಗಳು ಓದುಗನಲ್ಲಿ ಕೆಲವು ಪ್ರಶ್ನೆಗಳನ್ನು ಸೃಷ್ಟಿಸುತ್ತವೆ.ನಮ್ಮ ನಡಾವಳಿಗಳ ಸರಿ ತಪ್ಪು ನಿರ್ಣಯಗಳು ಪರ್ಯಾಯ ಕ್ರಮಗಳಲ್ಲಿ ವಿಶ್ಲೇಷಿಸಲ್ಪಡುತ್ತವೆ. ‘ರಾಮಾಯಣ: ಒಂದು ಟಿಪ್ಪಣಿ’ ಯಲ್ಲಿ ಬರುವ ಈ ಸಾಲು ‘Ramayana is a real life story not by facts, but by faith’ ನಮ್ಮ ಮಹಾಕಾವ್ಯಗಳ ಬಗ್ಗೆ ಇರಬೇಕಾದ ಒಂದು ಗೌರವಪೂರ್ವಕ ನಂಬುಗೆಯನ್ನು ಎತ್ತಿ ಹೇಳಿದರೆ, ‘ವಾಲ್ಮೀಕಿ ಮುಗ್ಗರಿಸಿದಾಗ’ ಲೇಖನದಲ್ಲಿ ರಾಮನಂತಹ ರಾಮನೇ ಮನುಷ್ಯ ಸಹಜವಾದ ಸ್ವಭಾವಗಳೀಂದ ಬಳಲುವುದನ್ನು, ಎಲ್ಲ ಬಲ್ಲವನಾಗಿದ್ದು ಪ್ರಿಯ ಪತ್ನಿಯ ಮಾತಿಗೆ ಮಾಯಾ ಜಿಂಕೆಯ ಹಿಂದೆ ಹೋಗುವುದನ್ನು ಉಲ್ಲೇಖಿಸಿ ನಂಬಿಕೆಗಳಿಗಿ೦ತ facts ಗಳ ಕಡೆಗೆ ಗಮನ ಸೆಳೆಯುತ್ತಾರೆ. ‘ತಾಯಿ’ ಎನ್ನಿಸಿಕೊಂಡ ಸೀತೆ ಲಕ್ಷ್ಮಣನ ಕುರಿತು ಆಡುವ ಕರ್ಣ ಕಠೋರ ನುಡಿಗಳು ಸೀತೆಯಂತಹ ಸ್ತ್ರೀ ಕೂಡಾ ಸ್ತ್ರೀ ಚಾಂಚಲ್ಯತನದಿ೦ದ ಬಳಲಿದ್ದನ್ನು ಗಮನಿಸಿದಾಗಿ ರಾಮಾಯಣ ಇಂತಹ ಫ್ಯಾಕ್ಟಗಳ ಮೂಲಕವೂ ಎಷ್ಟು ಗಂಭೀರವಾಗಿ ಚಿಂತಿಸಲ್ಪಡಬಹುದೆ೦ಬ ಪ್ರಶ್ನೆಗೆ ಕಾವು ಕೊಡುತ್ತದೆ.

‘ಪಾಂಡವರ ತಾಯಿ’ ಲೇಖನದಲ್ಲಿ ಲೇಖಕರು ಎತ್ತಿದ ಪ್ರಶ್ನೆ- ಕುಂತಿ ಮಾತ್ರತ್ವಕ್ಕೆ ಎರಡು ಬಗೆದಳೇ ಎಂಬ ಪ್ರಶ್ನೆ ಕರ್ಣನ ಪರವಾಗಿ ಏಕಮುಖವಾಗಿ ಚಿಂತಿಸಿದಾಗ ಮೂಡಬಹುದೇ ಹೊರತು ಸಮಗ್ರ ಮಹಾಭಾರತದ ದೃಷ್ಟಿಕೋನದಲ್ಲಿ ಮೂಡಲಾರದು. ಇಡೀ ಮಹಾಭಾರತವೂ ಕೃಷ್ಣರಸಾಯನವಾಗಿರುವುದುರಿಂದ ಆತನ ಇತರ ದಾಳಗಳಂತೆ ಕುಂತಿ ಕೂಡಾ ಬಳಕೆಯಾಗಿರುವುದರಲ್ಲಿ ಸಂದೇಹವಿಲ್ಲ. ಐದು ಮಕ್ಕಳ ಬಲಿಯೋ? ಅಥವಾ ಒಬ್ಬ ಪುತ್ರನ ಸಾವೋ? ಎಂಬ ಪ್ರಶ್ನೆ ಬಂದಾಗ ಯಾವ ದೇವ ಸ್ತ್ರೀಯಾದರೂ ಕೈಗೊಳ್ಳಬಹುದಾದ ನಿರ್ಧಾರವದು. ಹಾಗಾಗಿ ಕುಂತಿಯ ತಾಯ್ತನವನ್ನು ಅದರ ಹಿರಿಮೆಯನ್ನು ಈ ಹಿನ್ನೆಲೆಯಲ್ಲಿ ಕೂಡಾ ಗಮನಿಸಬೇಕಾಗುತ್ತದೆ. ಅಂತಹ ಆಲೋಚನೆಗಳಿಗೆ ಹಚ್ಚುವ ಕೆಲಸವನ್ನು ಈ ಲೇಖನ ಮಾಡಿಸುತ್ತದೆ.

ಇಲ್ಲಿಯ ಕತೆಗಳಲ್ಲಿ ‘ಅಲ್ಲಿ ಸಂಪಿಗೆ ಮರವಿತ್ತು’ ಕಥೆ ಹೃದಯಸ್ಪರ್ಷಿಯಾಗಿದೆ. ಮನುಷ್ಯ ಹೇಗೆ ಸಮಯದ ಕೂಸಾಗುತ್ತಾ ಬದುಕಿನ ತತ್ವವನ್ನೆ ಮರೆಯುತ್ತಾನೆ ಎನಿಸುತ್ತದೆ. ಬಾಲ್ಯದಲ್ಲಿ ಸಹಾಯ ಮಾಡಿದ ಗೋಪಯ್ಯನವರ ಕೊನೆಗಾಲದ ಆಸೆಯನ್ನು ತೀರಿಸಲು ಇಷ್ಟವಿದ್ದರೂ ತೀರಿಸಲಾಗದ ಸಂದರ್ಭ ಮಹೇಶನದಾದರೆ, ಗೋಪಯ್ಯ ತನ್ನ ಹೆಂಡತಿಗೆ ಕೊಟ್ಟ ಆಸೆ ಇಡೇರಿಸಲಾಗದ ಅಸಹಾಯಕತೆಗೆ ಆತ್ಮಹತ್ತೆಗೆ ಶರಣಾಗುವುದು ವಿಷಾದವನ್ನು ಎದೆಗಿಳಿಸುತ್ತದೆ. ‘ಅನುತ್ತರ’ ‘ಆ ಒಂದು ದಿನ’ ಕತೆ ಕೂಡಾ ಸದಾ ನೆನಪಾಗಿ ಕಾಡುವ ಕಥೆಗಳು. ಮನುಷ್ಯ ಸಂದರ್ಭನುಸಾರ ವರ್ತನೆಗಳಲ್ಲಿ ಹೇಗೆ ವ್ಯಕ್ತವಾಗುತ್ತಾ ಹೋಗುತ್ತಾನೆ ಎಂಬುದು ಇಲ್ಲಿಯ ಹಲವು ಕಲಥೆಗಳು ನಿರೂಪಿಸುತ್ತವೆ. ಮನುಷ್ಯನ ‘attitudinal changes’ನ್ನು ಮಾರ್ಮಿಕವಾಗಿ ವ್ಯಕ್ತಗೊಳಿಸುತ್ತವೆ ಪಾತ್ರಗಳು.

ಇಲ್ಲಿಯ ಲೇಖನಗಳು ಸಂಪ್ರದಾಯ ಮತ್ತು ಪರಂಪರೆಗಳ ನಡುವೆ ಬಹುದೊಡ್ಡ ಅಂತರವನ್ನು ಗ್ರಹಿಸುತ್ತವೆ. ಅಂತಹ ಅಂತರವನ್ನು ಅತಿ ಸೂಕ್ಷ್ಮವಾಗಿ ವಿವರಿಸುತ್ತವೆ. ಧರ್ಮ, ಆಚರಣೆ, ಸಂಸ್ಕೃತಿ ಇತ್ಯಾದಿ ಇತ್ಯಾದಿಗಳ ದಾಳವಾಗಿ ಹಿಡಿದು ಪ್ರತ್ಯೇಕತೆಯನ್ನು ಜಗತ್ತು ಬಹಳ ಚಾಣಾಕ್ಷತನದಿಂದ ಸಂಭಾಳಿಸುತ್ತಲೇ ಬರುತ್ತಿದೆ. ದೇವರ ಹೆಸರಿನಲ್ಲಿ ಮೌಢ್ಯವನ್ನು ಬಿತ್ತುತ್ತಲೇ ಅದನ್ನೆ ಕಸುಬಾಗಿ ಮಾಡಿಕೊಂಡ ಒಂದು ಬೌದ್ಧಿಕ ವಲಯದ ಶೋಷಣೆ ಇಂದಿನ ಜಗತ್ತಿಗೆ ಅರ್ಥ ಮಾಡಿಕೊಳ್ಳಲಾಗದ ವ್ಯಾಕರಣವೇನೋ ಅಲ್ಲ. ಆದರೆ ಭಾರತೀಯತೆಯನ್ನು ಅಭಿವ್ಯಕ್ತಿಸುವ ಒಂದು ಪರಂಪರೆಯನ್ನು ನಾವ್ಯಾರು ಅಲ್ಲಗಳೆಯಲಾರೆವು.

ಆ ಕಾರಣದಿಂದಲೇ ಅಲ್ಲವೇ ಅದೆಷ್ಟೋ ವಿಚಾರವಾದಿಗಳು ಮೌಢ್ಯಾಚರಣೆಯನ್ನು ವಿರೋಧಿಸುತ್ತಿದ್ದರೂ ತಮ್ಮ ಮಕ್ಕಳ ಮದುವೆ, ಮನೆ ಪ್ರವೇಶ, ಯಜ್ಞೋಪವೀತ ಇತ್ಯಾದಿ ಸಂದರ್ಭಗಳಲ್ಲಿ ಪರಂಪರೆಯ ಬಿಳಲಗೆ ಜೋತಾಡುವುದು.. ಎಲ್ಲ ದೇಶಗಳು, ಧರ್ಮಗಳು ತಮ್ಮದೇ ಆದ ಸಂಪ್ರದಾಯ ಪರಂಪರೆಗಳನ್ನು ಕೈಬಿಡದೇ ನೆಚ್ಚಿಕೊಂಡಿವೆ. ಅವು ಆ ಬದುಕಿನ ಜೀವನ ವಿಧಾನಗಳು. ಅದನ್ನು ನಿರಾಕರಿಸುವುದು ತಮ್ಮತನವನ್ನು ಬಿಟ್ಟುಕೊಟ್ಟಂತೆ. ಇಲ್ಲಿಯ ಬಹುತೇಕ ಲೇಖನಗಳು, ಕಥೆಗಳು ಸಂದೇಶಗಳು ಈ ತತ್ವವನ್ನೇ ಅಮೂರ್ತವಾಗಿ ಬಿಂಬಿಸುತ್ತವೆ. ಆಶಾವಾದವನ್ನೆ ಪ್ರತಿಪಾದಿಸುತ್ತವೆ. ಹೊರ ಅರ್ಥದಲ್ಲಿ ವಿಡಂಬನೆಯನ್ನು ಸಾರುವ ಬರೆಹಗಳಲ್ಲಿ ಸೂಕ್ಷ್ಮ ಅಭಿವ್ಯಕ್ತಿಯಲ್ಲಿ ಸಾಮರಸ್ಯವೇ ಬದುಕಿನ ಅಂತಿಮ ಸಾರ ಎಂಬ ನಿಲುವು ವ್ಯಕ್ತವಾಗಿದೆ.

‍ಲೇಖಕರು Admin

August 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: