ಕಥೆ ಹುಟ್ಟುವ ಕ್ಷಣ…

ಸುಧಾ ಆಡುಕಳ


“ಅಮ್ಮಾ, ಇವತ್ತೊಂಚೂರು ಲೇಟ್ ಆಂಡ್. ನಾಳೆ ಬೇಗ ಬರ್ಪೆ”
ಇವಳಿಗರ್ಥವಾಗಬೇಕೆಂದು ಅರ್ಧ ತುಳು, ಅರ್ಧ ಕನ್ನಡ ಬೆರೆಸಿ ಹೇಳುತ್ತಾಳೆ ಅವಳು.
ಅವಳ ತುಳು ಇವಳಿಗರ್ಥವಾಗದು, ಇವಳ ಕನ್ನಡ ಅವಳಿಗೆ ಅನ್ಯಭಾಷೆ.
ಅವಳು ಬೇಗ ಬರುವ ನಾಳೆ ಎಂದಿಗೂ ಬರುವುದಿಲ್ಲವೆಂಬ ಸತ್ಯ ತಿಳಿದ ಇವಳು ಅವಳಿಗೆಂದು ಚಾ ಮಾಡಲು ಹೋಗುತ್ತಾಳೆ.

“ಇವತ್ತು ಸಲ್ಪ ಬೇಗ ಹೋಗ್ತೇನೆ ಅಮ್ಮಾ, ಏನಿಲ್ಲ ಕೈಗೊಂದು ಚೂರು ಪೈಪು ತಾಗಿದೆ. ಡಾಕ್ಟರಿಗೆ ತೋರಿಸಿ ಹೋಗಬೇಕಮ್ಮ” ಹೀಗೆ ಹೇಳಿದಳೆಂದು ಇವಳು ಅರ್ಥಮಾಡಿಕೊಂಡಿದ್ದಾಳೆ.

ಪೈಪು ತಾಗಿತೆನ್ನುವಾಗ ಇವಳು ಎಚ್ಚರಾಗುತ್ತಾಳೆ. ಗಾಯವೇನಾದರೂ ಆಗಿರಬಹುದೆ? ಹಾಗಿದ್ದರೆ ಸುರಿಯುವ ರಕ್ತದಲ್ಲಿಯೇ ಪಾತ್ರೆ ತೊಳೆಯುವವಳೆ ಅವಳು. ಗಾಬರಿಯಿಂದ ಅವಳಿರುವಲ್ಲಿಗೆ ಹೋಗಿ ನೋಡಿದರೆ ಮುಂಗೈ ಒಂದಿಷ್ಟು ಬೀಗಿದೆ.

“ಇರು ಮಾರಾಯ್ತಿ, ಒಂಚೂರು ನೋವಿನ ಮುಲಾಮು ಹಚ್ಚುತ್ತೇನೆ. ಮತ್ತೆ ಪಾತ್ರೆ ತೊಳಿಯುವಿಯಂತೆ. ಮೊದಲು ಚಾ ಕುಡಿ” ಎನ್ನುತ್ತಾ ಹಬೆಯಾಡುವ ಚಾ ಇಟ್ಟು ಒಳಗೆ ಹೋಗುತ್ತಾಳೆ ಇವಳು.

ಬಂದು ನೋಡುವಾಗ ಅವಳು ಎಂದಿನ೦ತೆ ಬಿಸಿಯ ಚಹಾವನ್ನು ಅಗಲದ ಪಾತ್ರೆಯೊಂದಕ್ಕೆ ಸುರಿದು ತಣಿಸಿ ಕುಡಿದುಮುಗಿಸಿರುತ್ತಾಳೆ.

“ಎಲ್ಲಿ? ಕೈ ಇಲ್ಲಿ ಕೊಡು, ಸ್ವಲ್ಪ ಮುಲಾಮು ಹಚ್ಚುವ. ಎಲ್ಲಿ ತಾಗಿಸಿಕೊಂಡೆ ಮಾರಾಯ್ತಿ?” ಎಂದರೆ ಒದ್ದೆ ಕೈಯ್ಯನ್ನು ಇನ್ನಷ್ಟು ಒದ್ದೆಯಾದ ತನ್ನ ನೈಟಿಗೆ ಒರೆಸಿ ಮುಲಾಮು ನೀಡುವಂತೆ ಕೈಚಾಚುತ್ತಾಳೆ.

ಅವಳ ಮುಜುಗರದ ಪರಿಚಯವಿದ್ದ ಇವಳು ಅಲ್ಲಿಯೇ ಇರುವ ಒಣಬಟ್ಟೆಯಿಂದ ಅವಳ ಕೈಯ್ಯನ್ನು ತಾನೇ ಒರೆಸಿ ಉಬ್ಬಿದ ಜಾಗಕ್ಕೆ ನೋವಿನ ಮುಲಾಮಿನ ಲೇಪವನ್ನು ಹಚ್ಚಿ ಮೆಲ್ಲನೆ ನೀವುತ್ತಾಳೆ.

ಜಗದ ಸೋಜಿಗವೊಂದು ಘಟಿಸಿದಂತೆ ಇವಳನ್ನು ನೋಡುತ್ತಾ ಅವಳು ಹೇಳುತ್ತಾಳೆ, “ಅಮ್ಮನ ಕೈಗುಣ ತುಂಬ ಒಳ್ಳೆಯದುಂಟು. ಮುಟ್ಟಿದ್ದೇ ನೋವೆಲ್ಲಾ ಮಾಯ.”

ಎಷ್ಟು ಶತಮಾನದ ಹಳೆಯ ನೋವೋ ಅದು! ಮುಟ್ಟಿಸಿಕೊಳ್ಳಲಾಗದಂಥದ್ದು. ಕುಡಿಯುವ ಚಹಾವನ್ನು ಹೊರಗೇ ನಿಂತು ಕುಡಿಯುವ ಅವಳ ನಡೆಯ ಹಿಂದೆ ಎಷ್ಟು ಶತಮಾನಗಳ ಚಹರೆಯಿದೆಯೋ ಯಾರು ಬಲ್ಲರು? ನೋವಿದ್ದರೆ ಕೆಲಸ ಮಾಡದೇ ಹೋಗೆನ್ನಲು ಹೊರೆಯೇನೂ ಅಲ್ಲ ಇವಳಿಗೆ. ಆದರೆ ಅಷ್ಟಕ್ಕೇ ಕೆಲಸದಿಂದಲೇ ತೆಗೆದಾರೆಂಬ ಗಾಬರಿಯಿಂದ ಬೆಚ್ಚಿಹೋಗುವ ಅವಳ ನಡೆ ದಿಗಿಲು ಹುಟ್ಟಿಸುತ್ತದೆ. ಮನೆಯಲ್ಲಿರದ ದಿನ ಬರುವುದು ಬೇಡವೆಂದರೂ ಮತ್ತೆ ಬರುವವರೆಗೂ ಆತಂಕದಲ್ಲಿಯೇ ದಿನಗಳೆಯುತ್ತಾಳೇನೋ ಅವಳು ಎನಿಸುತ್ತದೆ. ಹೀಗೆ ಒಂದೆರಡು ದಿನ ಬೇಡವೆಂದು ಹೇಳಿ, ಬೇರೆಯವರನ್ನು ನೋಡಿ ಇವಳನ್ನು ಕೆಲಸದಿಂದಲೇ ಬಿಡಿಸಿದ ಜನರ ಸಹವಾಸ ಅವಳಿಗೆ ಕಲಿಸಿದ ಪಾಠವಿರಬಹುದು ಅದು.

ಮತ್ತೆ ಬಂದು ಪುಸ್ತಕ ಹಿಡಿದವಳನ್ನು ಬಾತಿದ ಅವಳ ಮುಂಗೈ ಕಾಡುತ್ತದೆ. ಕೇಳಿದರೆ ಸತ್ಯವೆಂದೂ ಅವಳ ಬಾಯಿಂದ ಹೊರಬರಲಾದೆಂಬ ನಿಜ ಇವಳಿಗೆ ತಿಳಿದಿದೆ. ತನ್ನ ಕೆಲಸಕ್ಕೆ ತೊಡಕಾಗದ ಕೆಲವು ನಿಗದಿತ ಪದಗಳಷ್ಟೇ ಅವಳಿಗೆ ಗೊತ್ತು. ಭಾಷೆಯ ಬೇರೆಯ ಆಯಾಮವೇ ಅವಳಿಗೆ ತಿಳಿಯದು. ಇತ್ತೀಚೆಗೆ ಮುಖದ ಮೇಲೆ, ಕಾಲಿನ ಮೇಲೆ, ಕೈಯ್ಯ ಮೇಲೆ ಉಬ್ಬಿದ ಗುರುತುಗಳು ಪದೇ, ಪದೇ ಕಾಣಿಸುತ್ತಿವೆ. ಕುಡುಕ ಗಂಡನೇನಾದರೂ ಹೊಡೆದಿರಬಹುದೆಂದರೆ ಗಂಡನಿಲ್ಲದ ಜೀವ ಅದು. ಮಗನಿದ್ದಾನೆ ಎಂದ ನೆನಪು. ಹದಿನೈದೋ, ಹದಿನಾರೋ ವರ್ಷವಿರಿಬೇಕು. ಅವನೇನಾದರೂ…

ಹೀಗೆ ಹೇಳುವುದಿರಲಿ, ಯೋಚಿಸಿದ್ದು ತಿಳಿದರೂ ಇವಳ ಮಕ್ಕಳಿಬ್ಬರೂ ಅಮ್ಮನ ಮೇಲೆ ಮುಗಿಬೀಳುತ್ತಾರೆ, “ಅಮ್ಮಾ, ನೀನು ಎಲ್ಲದರಲ್ಲೂ ಹೆಣ್ಣಿನ ಶೋಷಣೆಯ ಕಥೆಯನ್ನೇ ಹುಡುಕಬೇಡ. ನೀನೆಂದೂ ಕಂಡಿರದ ಆ ಹುಡುಗನನ್ನು ವಿನಾಕಾರಣ ಖಳನಾಯಕನನ್ನಾಗಿಸುವ ಚಾಳಿ ಬಿಡು. ಅವಳು ಹೇಳಿದ್ದನ್ನು ಸತ್ಯವೆಂದು ನಂಬುವುದೇ ನೀನವಳಿಗೆ ಮಾಡಬಹುದಾದ ದೊಡ್ಡ ಉಪಕಾರ.” ಕೆಲವೊಮ್ಮೆ ಹೌದೆನಿಸುತ್ತದೆ ಇವಳಿಗೆ.
“ನಾಳೆ ಬೇಗ ಬಂದು ಅಂಗಳಕ್ಕೆಲ್ಲ ನೀರು ಹಾಕ್ತೇನಮ್ಮ. ಇವತ್ತೊಂಚೂರು ಬೇಗ ಹೋಗ್ತೇನೆ. ಕೈ ನೋವೆಲ್ಲ ಹೋಯ್ತು. ಅಮ್ಮನ ಕೈಗುಣ ಒಳ್ಳೆದಿದೆ.”

ಉತ್ತರಕ್ಕೂ ಕಾಯದೇ ಹೊರಟವಳಿಗೆ ಮತ್ತೊಂದಿಷ್ಟು ಮುಲಾಮನ್ನು ಇನ್ನೊಂದು ಡಬ್ಬದಲ್ಲಿ ತುಂಬಿ ಕೈಗಿಡುತ್ತಾಳೆ ಇವಳು.

ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಇವಳೊಳಗೆ ಕಥೆಯೊಂದು ಹುಟ್ಟಿಕೊಳ್ಳುತ್ತದೆ.

‍ಲೇಖಕರು Admin

August 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: