ನಾಗರಾಜ ಎಂ ಹುಡೇದ ಓದಿದ ‘ಹನಿ ಹನಿ ಸೇರಿದಾಗ’

ನಾಗರಾಜ ಎಂ ಹುಡೇದ

ಲೇಖಕರಾದ ಗಂಗಾಧರ ನಾಯ್ಕ ಇವರು ಗದ್ಯಸಾಹಿತ್ಯದಲ್ಲಿ ವಿಭಿನ್ನ ಶೈಲಿಯಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ. ಅವರ ವಿಭಿನ್ನ ಅಲೋಚನೆ, ನೇರ ನಡೆ ನುಡಿಗಳು ಇಲ್ಲಿಯ ಎಲ್ಲ ಲೇಖನಗಳಲ್ಲೂ ಎದ್ದು ಕಾಣುತ್ತದೆ. ಅವರ ಬಾಲ್ಯದ ಅನುಭವಗಳ ಜೊತೆಗೆ ಇತ್ತಿಚೀನ ವಿದ್ಯಮಾನಗಳನ್ನೂ ಸೇರಿಸಿ ಒಂದು ಸುಂದರವಾದ ಹಾರದಂತೆ “ಹನಿ ಹನಿ ಸೇರಿದಾಗ” ಕೃತಿ ಇದೆ. ಇದು ಕಾದಂಬರಿಯ ಕಥೆಯಾಗಲೂ ಯೋಗ್ಯವಾಗಿತ್ತು ಎನಿಸುತ್ತದೆ. ವಿರಾಜ ಎನ್ನುವ ವಿದ್ಯಾರ್ಥಿಯ ಮೂಲಕ ಆರಂಭವನ್ನು ಚೆನ್ನಾಗಿ ಮಾಡಿದ್ದಾರೆ. ಹಾಗೆಯೇ ಲೇಖಕರಾದ ಗಂಗಾಧರ ಅವರು ಯಾಕಾಗಿ ಈ ಕೃತಿ ಓದಬೇಕು? ಎಂಬುದನ್ನು ತಮ್ಮ ನಾಲ್ಕು ಮಾತುಗಳಲ್ಲಿ ತಿಳಿಸಿದ್ದಾರೆ.

ಯುವ ಸಾಧಕ ಪ್ರಶಸ್ತಿಗೆ ಪಾತ್ರನಾದ ಆದರ್ಶ ವಿದ್ಯಾರ್ಥಿ ವಿರಾಜ ತಾನು ಇಲ್ಲಿಯವರೆಗೂ ಸಾಗಿ ಬಂದ ಪಯಣದ ಹಿನ್ನೋಟವೇ ಇದಾಗಿದೆ. ತನ್ನ ಯಶಸ್ಸಿಗೆ ಕಾರಣವಾದ ಅಂಶಗಳು ಬಾಲ್ಯದ ಘಟನೆಗಳನ್ನು ಕಥಾರೂಪದಲ್ಲಿ ಹೇಳುತ್ತಾ ಸಾಗಿದ್ದಾನೆ. ಇಲ್ಲಿ ಒಟ್ಟು ಎಪ್ಪತ್ತು ಹನಿ ಹನಿ ಅಧ್ಯಾಯಗಳಿವೆ. ಆಕಾರದಲ್ಲಿ ಹನಿಯಾಗಿದ್ದರೂ ಮೌಲ್ಯದಲ್ಲಿ ಜೇನಿನ ಕೊಡದಂತಿವೆ. ಇವುಗಳನ್ನು ಓದುತ್ತಾ ಸಾಗಿದರೆ, ವಿದ್ಯಾರ್ಥಿಗಳು ಆಲಸ್ಯ ತೊರೆದು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತವೆ. ಈ ಹನಿ ಹನಿ ಲೇಖನಗಳಿಂದ ಖಂಡಿತವಾಗಲೂ ಸ್ಪೂರ್ತಿ ಪಡೆಯುತ್ತಾರೆ.

ಲೇಖಕರಾದ ಗಂಗಾಧರ ನಾಯ್ಕ ಅವರು ಪ್ರೌಢಶಾಲೆಯ ಶಿಕ್ಷಕರಾಗಿರುವುದರಿಂದ ಬಹಳಷ್ಟು ಆಸ್ಥೆವಹಿಸಿ, ನಮ್ಮ ಮಕ್ಕಳಿಗೆ ಸ್ಫೂರ್ತಿ ತುಂಬಿ ಅವರಿಂದ ಏನಾದರೂ ಸಾಧನೆ ಆಗಲೇಬೇಕೆಂಬ ಛಲ ತೊಟ್ಟವರು.
ಮಕ್ಕಳನ್ನು ಅಂಕಗಳ ವೀರರನ್ನಾಗಿಸದೆ ಅವರ ಸರ್ವಾಂಗೀಣ ವಿಕಾಸಕ್ಕಾಗಿ, ಮೌಲ್ಯಯುತ, ಶಿಸ್ತುಬದ್ಧ ಜೀವನಕ್ಕಾಗಿ ಶ್ರೇಷ್ಠವೆಂಬುದನ್ನು ಪ್ರತಿ ಲೇಖನವೂ ಅನುಭವಾತ್ಮಕವಾಗಿ ಮೂಡಿ ಬಂದಿದೆ.

ವೈಯಕ್ತಿಕ ಸ್ವಚ್ಛತೆ ಮತ್ತು ಶಿಸ್ತು, ಆರೋಗ್ಯವೇ ಮಹಾಭಾಗ್ಯ, ಸಮಯವೆಂಬ ಸೌಭಾಗ್ಯ, ನಲಿ-ಕಲಿ ಎಂಬ ನರ್ತನಾಲಯ, ಹರಿದ ಅಂಗಿ, ಪೇಪರ್ ನಲ್ಲಿ ಪ್ರಪಂಚ, ಶಿಸ್ತುಬದ್ಧ ಬರವಣಿಗೆ, ಪ್ರವಾಸವೆಂಬ ಮಧುರಾನುಭವ, ವಿಜ್ಞಾನ ನಾಟಕಗಳು, ಆತ್ಮವಿಶ್ವಾಸ ತುಂಬಿದ ಸೈಕಲ್, ರಂಗವ್ವ ಕಲಿಸಿದ ಬದುಕಿನ ಪಾಠ ಮುಂತಾದುವು ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುತ್ತವೆ. ಗಾತ್ರದಲ್ಲಿ ಚಿಕ್ಕ ಲೇಖನಗಳಾದರೂ ಮಹತ್ವಪೂರ್ಣವಾದ ಅರ್ಥವನ್ನು ಧ್ವನಿಸುತ್ತವೆ.

ಮುನ್ನುಡಿ ಬರೆದಿರುವ ದಿವಾಕರ ಶೆಟ್ಟಿ ಎಚ್ ಅವರು “ಈ ಹನಿ ಹನಿ ಸೇರಿದಾಗ ಕೃತಿಯ ಸುಮಾರು ಎಪ್ಪತ್ತು ಬಿಡಿ ಅಧ್ಯಾಯಗಳು ಸಂವೇದನಾಶೀಲ ಓದುಗನ ಒಳಗಣ್ಣನ್ನು ತೆರೆಸುತ್ತಲೇ ಹೋಗುತ್ತವೆ. ಓದು,ಓದಿ ಅಂಕಗಳಿಸುವುದಕ್ಕೇ ಸೀಮಿತವಲ್ಲ, ಅನುಷ್ಠಾನಕ್ಕಾಗಿ ಎಂದು ಭಾವಿಸುವ ಓದುಗ ಪುಸ್ತಕ ಕೆಳಗಿಡುವಾಗ ಬದಲಾಗುತ್ತಾನೆ ಎಂದು ನಾನು ಭಾವಿಸುತ್ತೇನೆ. ಎಲ್ಲಕ್ಕಿಂತ ಗಂಗಾಧರ ನಾಯ್ಕ ಪುರದಮಠ ಅವರ ಪ್ರಾಂಜಲ ಮನಸ್ಸಿನ ಕಳಕಳಿ ಆಪ್ತವಾಗುವುದರಿಂದ ಪುಸ್ತಕವೂ ಆಪ್ತವಾಗುತ್ತದೆ.” ಎಂದಿದ್ದಾರೆ.

ಇವೆಲ್ಲವೂ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರನ್ನು ಕಣ್ಣುತೆರೆಸುವ ಲೇಖನಗಳಾಗಿವೆ. ಓದುತ್ತಾ ಹೋದಂತೆ ಅರಿವಿನ ಹರಿವು ಹೆಚ್ಚಾಗುತ್ತದೆ. ಪ್ರತಿ ಲೇಖನವೂ ಭಾಷಾ ಸೊಗಡಿನಿಂದ ಕಂಗೊಳಿಸುತ್ತವೆ. ಅನುಭವವೇ ಎರಕ ಹೊಯ್ದಂತಿವೆ. ಗಾದೆಮಾತು, ನುಡಿಗಟ್ಟಗಳನ್ನು ಬಳಸಿರುವುದರಿಂದ ಅವುಗಳ ಮೌಲ್ಯ ಹೆಚ್ಚಾಗಿದೆ. ಪ್ರತಿ ಲೇಖನಗಳಿಗೂ ಸುಂದರವಾದ ರೇಖಾ ಚಿತ್ರಗಳನ್ನು ಕಲಾವಿದ ಮನೋಜ ಪಾಲೇಕರ ಅವರು ಚಿತ್ರಿಸಿದ್ದಾರೆ. ಉತ್ತಮ ಕಾಗದದ ಬಳಕೆ , ಅಚ್ಚುಕಟ್ಟಾದ ಮುದ್ರಣದಿಂದ ಕೃತಿ ಆಕರ್ಷಕವಾಗಿದೆ.

ಲೇಖಕರು ಈಗಾಗಲೇ ಸ್ಫೂರ್ತಿಧಾಯಕ “ಡೋಂಟ್ ಗಿವ್ ಅಫ್ ಮುಂದಕ್ಕೆ ಸಾಗೋಣ” ಎಂಬ ಯಶಸ್ವಿ ಕೃತಿಯನ್ನು ವಿದ್ಯಾರ್ಥಿ ಸಮುದಾಯಕ್ಕೆ ನೀಡಿದ್ದಾರೆ. ಶೈಕ್ಷಣಿಕ ಚಿಂತನೆಗೆ ಹಚ್ಚುವ ಇಂತಹ ಕೃತಿಗಳು ಇನ್ನಷ್ಟು ಪ್ರಕಟವಾಗಲಿ ಎಂಬುದು ನಮ್ಮ ಆಶಯವಾಗಿದೆ.

‍ಲೇಖಕರು Admin

September 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: