ಆ ಕಟ್ಟಡ ಉದುರಿಬೀಳುವ ದೃಶ್ಯ…

ಉದಯ ಗಾಂವಕರ್

ನೊಯ್ಡಾದ ಸೂಪರ್‌ ಟೆಕ್‌ ಅವಳಿ ಕಟ್ಟಡಗಳು ನೆಲಕ್ಕುರುಳಿವೆ. ಈ ಕಟ್ಟಡದ ರಚನೆಗೆ ಹದಿನಾರು ವರ್ಷಗಳು ತಗುಲಿತ್ತು. ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ, ಒಟ್ಟಾಗಿ ಇನ್ನೂರು ಅಡಿಗಳಿದ್ದ ಈ ಅವಳಿ ಕಟ್ಟಡಗಳು ಎಂಟುವರೆ ಸೆಕೆಂಡುಗಳಲ್ಲಿ ಎಪ್ಪತ್ತು ಸಾವಿರ ಟನ್ ತ್ಯಾಜ್ಯದ ಗುಪ್ಪೆಯಾಗಿ ಪರಿಣಮಿಸಿದವು. ಈ ಕಟ್ಟಡಗಳನ್ನು ಉರುಳಿಸಲಿಕ್ಕಾಗಿಯೇ ಇಪ್ಪತ್ತು ಕೋಟಿ ರೂಪಾಯಿಗಳು ಖರ್ಚಾಯಿತು. ಕಿಲೋ ಮೀಟರುಗಳ ವರೆಗೆ ಧೂಳು ತುಂಬಿಸಿದ ಈ ಸ್ಫೋಟ ದೃಶ್ಯವನ್ನು ನಯಾಗಾರಾ ಜಲಾಪಾತವನ್ನು ನೋಡುತ್ತಿದ್ದೇವೇನೋ ಎಂಬಂತೆ ಜನರು ವೀಕ್ಷಿಸಿದರು. ಸುದ್ದಿ ಮಾಧ್ಯಮಗಳು ಮನಮೋಹಕ ದೃಶ್ಯವೆಂಬಂತೆ ಕಟ್ಟಡ ನೆಲಸಮವಾಗುವುದನ್ನು ವರದಿ ಮಾಡಿದವು.

ನೊಯ್ಡಾದ ಸೂಪರ್ಟೆಕ್‌ ಎಮರಾಲ್ಡ್‌ ಕೋರ್ಟ್‌ ಎಂಬ ವಸತಿ ಸಂಕೀರ್ಣದಲ್ಲಿ ಹದಿನಾಲ್ಕು ಅಪಾರ್ಟುಮೆಂಟುಗಳಿವೆ. ಈ ಅಪಾರ್ಟಮೆಂಟ್‌ ನಿವಾಸಿಗಳ ಬಳಕೆಗಾಗಿ ಮೀಸಲಿಡಬೇಕಿದ್ದ ಗಾರ್ಡನ್‌ ಜಾಗದಲ್ಲಿ ಕಂಪನಿಯು ನಲ್ವತ್ತು ಅಂತಸ್ತಿನ ಅವಳಿ ಕಟ್ಟಡಗಳನ್ನು ನೋಯ್ಡಾ ಪ್ರಾಧಿಕಾರದ ಅನುಮತಿಯೊಂದಿಗೆ ಇದೇ ಸೂಪರ್‌ಟೆಕ್‌ ಕಂಪನಿ ಕಟ್ಟಿತ್ತು. ಕಟ್ಟಡಗಳ ನಡುವಿನ ಕನಿಷ್ಠ ಅಂತರದ ಕುರಿತಾದ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.

ಹಣ, ಅಧಿಕಾರದ ಜೊತೆಗಿನ ಸಖ್ಯ ಮತ್ತು ತೋಳ್ಬಲದಿಂದ ಏನನ್ನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದ ಕಂಪನಿ ಈಗ ಸಾವಿರಾರು ಕೋಟಿ ನಷ್ಟವನ್ನು ಅನುಭವಿಸಬೇಕಾಗಿ ಬಂದಿದೆ. ಕೋರ್ಟ್‌ ಮೆಟ್ಟಿಲೇರಿದ ನಿವಾಸಿಗಳು ಯಾವ ಆಮಿಷಕ್ಕೂ ಮಣಿಯಲಿಲ್ಲ. ಯಾವ ಒತ್ತಡಕ್ಕೂ ಬಗ್ಗಲಿಲ್ಲ, ಯಾವ ಬೆದರಿಕೆಗೂ ಹೆದರಲಿಲ್ಲ.

ನನ್ನ ಆಸಕ್ತಿ ಇರುವುದು ಈ ಕಟ್ಟಡವನ್ನು ನೆಲಸಮಗೊಳಿಸಲು ಬಳಸಿದ ಸ್ಫೊಟಕಗಳ ಕುರಿತು. ಈ ಕಟ್ಟಡವನ್ನು ನೆಲಕ್ಕುರಳಿಸುವ ಹೊಣೆಹೊತ್ತ ಎಡಿಪೈಸ್‌ ಎಂಜಿನೀಯರಿಂಗ್‌ ಕಂಪನಿ ʼಜಲಪಾತ ಒಳಸ್ಪೋಟʼ ತಂತ್ರವನ್ನು ಈ ಕಾರ್ಯಕ್ಕೆ ಆಯ್ದುಕೊಂಡಿತು. ಈ ತಂತ್ರದ ಮೂಲಕ ಅಕ್ಕಪಕ್ಕದ ಕಟ್ಟಡಗಳಿಗೆ ಧಕ್ಕೆಯಾಗದ ಹಾಗೆ ಕಟ್ಟಡವನ್ನು ನೆಲಕ್ಕುರುಳಿಸಲು ಸಾಧ್ಯ. ಕಟ್ಟಡವು ಜಲಪಾತದಂತೆ ತನ್ನ ಬುಡದಲ್ಲೇ ರಾಶಿಯಾಗಿ ಬೀಳುವಂತೆ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ವಾಟರ್‌ ಫಾಲ್‌ ಇಂಪ್ಲೋಷನ್‌ ಕಾರ್ಯಾಚರಣೆಗಾಗಿ 3700 ಟನ್‌ ಸ್ಫೋಟಕಗಳನ್ನು ಬಳಸಲಾಗಿದೆ. ಮದ್ದು, ಬತ್ತಿಗಳಾಗಿ ಬಳಸಿದ ಈ ನೈಟ್ರೋ ರಾಸಾಯನಿಕಗಳ ಕತೆಯನ್ನು ಇಲ್ಲಿ ಹಂಚಿಕೊಳ್ಳಬೇಕು..

ಸ್ಫೋಟಕವಾಗಿ ಬಳಸಿದ ನೈಟ್ರೋ ರಾಸಾಯನಿಕಗಳಲ್ಲಿ ಅಮೋನಿಯಂ ನೈಟ್ರೇಟು ಕೂಡಾ ಒಂದು. ಹರಳಿನ ರೂಪದಲ್ಲಿರುವ ಈ ರಾಸಾಯನಿಕವು ಕೃಷಿಯ ದಿಕ್ಕು-ದೆಶೆಗಳನ್ನು ಬದಲಾಯಿಸಿದ ರಸಗೊಬ್ಬರ. ಸಸ್ಯಗಳ ಬೆಳವಣಿಗೆಗೆ, ಹಣ್ಣು ಬೆಳೆಗಳ ಉತ್ತಮ ಇಳುವರಿಗೆ ನೈಟ್ರೋಜನ್ ಬೇಕು. ವಾತಾವರಣದಲ್ಲಿ ನೈಟ್ರೋಜನ್ ಹೇರಳವಾಗಿದ್ದರೂ ಅವುಗಳನ್ನು ಸಸ್ಯಗಳು ನೇರವಾಗಿ ಪಡೆಯಲಾರವು. ಸಸ್ಯಗಳು ಪೋಷಕಾಂಶಗಳನ್ನು ಪಡೆಯಬೇಕಾದರೆ ಅವು ನೀರಿನಲ್ಲಿ ಕರಗಬೇಕಾಗುತ್ತವೆ. ಅಮೋನಿಯಂ ನೈಟ್ರೇಟಿನಲ್ಲಿ ಹತ್ತಿರ ಹತ್ತಿರ ಮೂವತ್ತು ಶೇಕಡಾದಷ್ಟು ನೈಟ್ರೋಜನ್ ಇರುತ್ತದೆ. ಇದು ನೀರಿನಲ್ಲಿ ಕರಗುತ್ತದೆ. ಜೊತೆಗೆ, ಬಹಳ ಅಗ್ಗ ಕೂಡಾ.

ಅಮೋನಿಯಂ ನೈಟ್ರೇಟು ರಾಸಾಯನಿಕ ಕ್ರೀಯೆಯಲ್ಲಿ ಪಾಲ್ಗೊಂಡ ಪ್ರತಿಕಾರಕಗಳ ಎಲೆಕ್ಟ್ರಾನುಗಳನ್ನು ಸೆಳೆಯಬಲ್ಲದು -ಇದೊಂದು ಶಕ್ತಿಶಾಲಿಯಾದ ಆಕ್ಸಿಡೀಕರಣ ದಲ್ಲಾಳಿ. ಹಾಗೆಯೇ, ಸಾವಿನ ದಲ್ಲಾಳಿ ಕೂಡಾ. ಶಾಖಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅಮೋನಿಯಂ ನೈಟ್ರೇಟು, ಇಂತಹ ಬಾಹ್ಯಪ್ರೇರಣೆಗೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ರಸಗೊಬ್ಬರದಿಂದ ಸ್ಪೋಟಕ ಸಾಮಗ್ರಿಯಾಗಿ ಬದಲಾಗಬಲ್ಲದು! ಹೀಗಾಗಿ, ಅಮೋನಿಯಂ ನೈಟ್ರೇಟು ಇತ್ತೀಚೆಗೆ ಗೊಬ್ಬರವಾಗಿ ಬಳಕೆಯದದ್ದಕ್ಕಿಂತ ಸ್ಫೋಟಕವಾಗಿ ಬಳಕೆಯಾದದ್ದೇ ಹೆಚ್ಚು.
ಅಮೋನಿಯಂ ನೈಟ್ರೇಟನ್ನು ಟ್ರೈ ನೈಟ್ರೋ ಟೋಲಿನ್ ಎಂಬ ಸ್ಫೋಟಕದೊಂದಿಗೋ ಡಿಸೆಲ್‌ನಂತಹ ಇಂಧನತೈಲದೊಂದಿಗೋ ಬೆರೆಕೆ ಹಾಕಿ ಬಾಂಬು ತಯಾರಿಸುತ್ತಾರೆ. ಬಾಂಬುಗಳು ಮೂಲತಃ ಗಣಿಗಾರಿಕೆಗಾಗಿಯೇ ಕಂಡುಹಿಡಿಯಲ್ಪಟ್ಟ ಸ್ಪೋಟಕ ಕಾಂಬಿನೇಷನ್‌ಗಳು. ಆನಂತರ, ರಕ್ಷಣಾಪಡೆಗಳು ಇವುಗಳನ್ನು ಬಳಸಿಕೊಂಡವು. 1996 ರ ಅಮೇರಿಕಾದ ಒಕ್ಲಾಮಾ ನಗರದ ಸ್ಫೋಟದಿಂದಲೂ ಅಮೋನಿಯಂ ನೈಟ್ರೇಟನ್ನು ಉಗ್ರಗಾಮಿಗಳು ಬಳಸುತ್ತಿದ್ದಾರೆ!

ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಸರ್ ಅಲ್ಫ್ರೆಡ್ ನೊಬೆಲ್‌ರ ತಂದೆ ನಡೆಸುತ್ತಿದ್ದ ಸ್ಫೋಟಕಗಳ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ನೊಬೆಲ್‌ರ ಇಬ್ಬರು ತಮ್ಮಂದಿರು ಅಸುನೀಗಿದ್ದರು. ಆನಂತರ, ಅಲ್ಫ್ರೆಡ್ ನೊಬೆಲ್ ನೈಟ್ರೋಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಬಳಸಬಹುದಾದ ಡೈನಮೈಟ್ ಎಂಬ ಸಂಯೋಜನೆಯನ್ನು ತಯಾರಿಸಿದರು. ಡೈನಮೈಟ್ ತಯಾರಾದದ್ದು 1897 ರಲ್ಲಿ. ಆನಂತರ, ಡೈನಮೈಟ್ ತಯಾರಿಸಿದ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲೋಸುಗುವೋ ಎಂಬಂತೆ ತನ್ನ ಆಸ್ತಿಯೆಲ್ಲ ನೊಬೆಲ್ ಪ್ರಶಸ್ತಿಗಳನ್ನು ನೀಡಲು ವಿನಿಯೋಗವಾಗಬೇಕೆಂಬ ಇಚ್ಛಾಪತ್ರವನ್ನು ಬರೆದು ಇದೇ ನೊಬೆಲ್ ಮಹಾಶಯ ಅಸುನೀಗಿದ್ದರು.

ಅಮೋನಿಯಂ ನೈಟ್ರೇಟು ಮತ್ತಿತರ ರಸಗೊಬ್ಬರಗಳನ್ನು ಹೇಬರ್ ಪ್ರಕ್ರಿಯೆ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ತಯಾರಿಸಿದ ಸಾಧನೆಗಾಗಿ ವಿಜ್ಞಾನಿ ಫ್ರಿಟ್ಞ್ ಹೇಬರರಿಗೆ 1918 ರಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಇದೇ ಹೇಬರ್ ಮಹಾಶಯನನ್ನು ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ರಾಸಾಯನಿಕ ಸಮರಪಡೆಯ ಮುಖ್ಯಸ್ಥರನ್ನಾಗಿಯೂ ಮಾಡಲಾಗಿತ್ತು. ಇದೇ ಹೇಬರ್ ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಗ್ಯಾಸ್ ದಾಳಿಯನ್ನು ನಿರ್ದೇಶಿಸಿ ಮಿತ್ರಪಡೆಯ ಸಾವಿರಾರು ಯೋಧರ ಸಾವಿಗೆ ಕಾರಣರಾಗಿದ್ದರು. ಅಮೋನಿಯಂ ನೈಟ್ರೇಟೆಂಬ ರಸಗೊಬ್ಬರ ರಕ್ತಲೇಪಿಸಿಕೊಂಡೇ ಹುಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?

ಹದಿಮೂರನೇ ಶತಮಾನದ ಹೊತ್ತಿಗೆ ಕೋವಿ ಮದ್ದಲ್ಲದೇ ಬೇರೆ ಸ್ಫೋಟಕಗಳೇ ಗೊತ್ತಿರಲಿಲ್ಲ. ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ; ಟಿ.ಎನ್.ಟಿ ರಂಗಪ್ರವೇಶ ಮಾಡಿದ್ದು ಮೊದಲ ವಿಶ್ವಸಮರದ ಸಂದರ್ಭದಲ್ಲಿ. 1991ರಲ್ಲಿ ಆರ್. ಡಿ. ಎಕ್ಸ್ ಎಂಬ ಸ್ಫೋಟಕಕ್ಕೆ ರಾಜೀವ ಗಾಂಧಿ ಬಲಿಯಾದರು.

ಅಮೋನಿಯಂ ನೈಟ್ರೇಟನ್ನು ರಸಗೊಬ್ಬರವಾಗಿ ಬಳಸುವಾಗಲೂ ಅಪಾಯವಿದ್ದೇ ಇದೆ. ಸಂಗ್ರಹಣೆ ಮತ್ತು ಬಳಕೆಯ ಯಾವ ಹಂತದಲ್ಲಿ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಟೆಕ್ಸಾಸ್ ನಗರದ ರಸಗೊಬ್ಬರ ಕಾರ್ಖಾನೆಯ ದುರಂತವೂ ಸೇರಿದಂತೆ ಎಷ್ಟೋ ಸಾವು-ನೋವುಗಳಿಗೆ ಈ ರಸಗೊಬ್ಬರ ಕಾರಣವಾಗಿದೆ. ರಸಗೊಬ್ಬರಕ್ಕಾಗಿ ಲೈನು ನಿಂತ ಹಾವೇರಿಯ ರೈತ ಪೋಲೀಸರ ಗುಂಡು ತಿಂದು ಸತ್ತ ನೆನಪು ಇನ್ನೂ ಮಾಸಿಲ್ಲ. ಹಾಗೆಯೇ, ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲೂ ಈ ರಸಗೊಬ್ಬರದ ಪಾತ್ರ ಇಲ್ಲದೇ ಇಲ್ಲ. ಹಸಿರು ಕ್ರಾಂತಿಯ ನೆವದಲ್ಲಿ, ಹಾಕಿದ ದುಡ್ಡಿಗೆ ಬರುವ ಇಳುವರಿ ಸಾಲುವುದಿಲ್ಲವೆಂಬ ಕೊರಗಲ್ಲಿ ನೆಲಕ್ಕೆ ಸುರಿದ ರಾಸಾಯನಿಕಗಳು ಇಂದು ರೈತನನ್ನೇ ತಿನ್ನುತ್ತಿವೆ.

ಈ ರಸಗೊಬ್ಬರಕ್ಕೆ ಮಾತ್ರವಲ್ಲ ನಾವು ನಡೆಯುವ ನೆಲ, ಕುಡಿಯುವ ನೀರು, ತಿನ್ನುವ ಅನ್ನಕ್ಕೆಲ್ಲ ರಕ್ತ ಮೆತ್ತಿಕೊಂಡಂತಿದೆ. ರಕ್ತದಲ್ಲಿ ಬೆಳೆದ ಗುಲಾಬಿ ಕಡುಕೆಂಪಾಗುವುದೇನೋ?

ಅದಲ್ಲದಿದ್ದರೆ, ಆ ಕಟ್ಟಡ ಉದುರಿಬೀಳುವ ದೃಶ್ಯ ಅಷ್ಟು ಮನಮೋಹಕವಾಗುತ್ತಿರಲಿಲ್ಲ.

‍ಲೇಖಕರು Admin

September 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: