ನಾಗಮಂಗಲ ಕೃಷ್ಣಮೂರ್ತಿ ಮತ್ತು ’ಡವ್ ಕೋಟ್’ – ಶ್ರೀದೇವಿ ಕೆರೆಮನೆ

ಕಥೆ ಕಟ್ಟುವ ತಂತ್ರಗಾರಿಕೆಯಲ್ಲಿ ಭೂತ, ವರ್ತಮಾನ….

ಶ್ರೀದೇವಿ ಕೆರೆಮನೆ

(ನಾಗಮಂಗಲ ಕೃಷ್ಣಮೂರ್ತಿಯವರ ಕತೆಗಳು ಚರಿತ್ರೆಯನ್ನು, ಜಾನಪದವನ್ನು ಮತ್ತು ವರ್ತಮಾನದ ವಿದ್ಯಮಾನಗಳ ಜೊತೆಯಲ್ಲಿ ಗ್ರಹಿಸಿ ನಿರೂಪಿಸುವುದರಿಂದ ಅವರ ಕಥೆಗಳು ಅವರ ಸಮಕಾಲೀನರಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಉಪಶೀರ್ಷಿಕೆಯಲ್ಲಿ ಕಥೆಯನ್ನು ನಿರೂಪಿಸುವ ಕ್ರಮ ಇಲ್ಲಿನದು. ಕತೆಗೆ ವಸ್ತುವಿನ ಕೊರತೆ ಕತೆಗಾರರಿಗಿಲ್ಲ. ಆದರೆ ಕತೆಯ ನಡಿಗೆ ವೇಗದ್ದು. ಎಲ್ಲಿ ಬೇಕಲ್ಲಿಗೆ ಜಿಗಿಯುತ್ತದೆ. ಇದರಿಮದ ಕಥೆ ಹೇಳಲು ಸುಲಭವಾಗುತ್ತದೆನೋ.ಕತೆಯಲ್ಲಿ ನಿಧಾನ, ಕಟ್ಟುವ ಶೈಲಿ ಕಾಣಿಸುವ ವಿಧಾನಗಳು ಹಿನ್ನಲೆಗೆ ಸರಿಯುತ್ತವೆ.)
-ಅಮರೇಶ ನುಡಗೋಣಿ, ಮುನ್ನುಡಿಯಿಂದ
ಮೊನ್ನೆ ಅಕ್ಟೋಬರ್ 5 ರಂದು, ’ಹೇಗಿದ್ದೀರಿ?’ ತತ್ರಾಣಿಯ ಸ್ನೇಹಿತರಾದ ಕನ್ನಡ ಸಂಸೃತಿ ಇಲಾಖೆಯ ಬಸವರಾಜ್ ಹೂಗಾರ ಫೋನಾಯಿಸಿದ್ದರು. ‘ಹಾಯಾಗಿದ್ದೇನೆ’ ಎನ್ನಲು ಹೊರಟವಳು ಮಾತು ಬದಲಿಸಿ ‘ಶಾಲೇಲಿದ್ದೇನೆ’ ಎಂದಿದ್ದೆ. ಹಿಂದಿನ ರಜೆಯ ಹೊತ್ತಿಗೆ ಫೋನಾಯಿಸಿದ್ದ ಕಥೆಗಾರ ಮಿತ್ರ ಆನಂದ ಋಗ್ವೇದಿ ‘ಹಾಯಾಗಿದ್ದೇನೆ’ ಎಂಬ ಶಬ್ಧ ಕೇಳಿಯೇ ಬೋದಿಲೇರ್ನ ‘ಪಾಪದ ಹೂಗಳ’ನ್ನು ಕಳುಹಿಸಿದ್ದರು. ಬೋದಿಲೇರ್ ಇಡೀ ರಜೆ ಕಾಡಿಬಿಟ್ಟಿದ್ದ. ಆದಾಗ್ಯೂ ಸೂಟಿನಾ ಎಂದವರಿಗೆ ಸುಳ್ಳು ಹೇಳಲಾಗದೇ ‘ನಾಡಿದ್ದು ರಜೆ.’ ಎಂದು ಉತ್ತರಿಸುವಷ್ಟರಲ್ಲೇ ಪುಸ್ತಕ ಕಳುಹಿಸ್ತಿದ್ದೇನೆ. ಓದಿ ನೋಡಿ, ಎಂದಿದ್ದರು. ‘ಅರೆ! ನನಗೆ ಸುದ್ದೀನೆ ಕೊಡದೇ ಪುಸ್ತಕ ತಂದರೋ ಹೇಗೆ’ ಎಂದು ಅನುಮಾನಿಸಿ ನಾನು ಕೇಳುವಷ್ಟರಲ್ಲಿ 2008 ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಕಥೆ ಗೊತ್ತಲ್ಲ, ‘ಡವ್ ಕೋಟ್’. ನಾಗಮಂಗಲ ಕೃಷ್ಣಮೂರ್ತಿ ಯವರ ಸಂಕಲನ ಅದು. ಕಳುಹಿಸ್ತಿದ್ದೇನೆ. ಓದಿ ನೋಡಿ. ಮುಂದಿನ ಮಾತಿಗೆ ಅವಕಾಶವನ್ನೇ ಕೊಡದೇ ಫೋನ್ ಇಟ್ಟಿದ್ದರು.

‘ಡವ್ ಕೋಟ್’ ನಾಗಮಂಗಲ ಕೃಷ್ಣಮೂರ್ತಿಯವರ ಎರಡನೇ ಕಥಾಸಂಕಲನ. ಪ್ರಥಮ ಸಂಕಲನ ‘ಚಂದ್ರಾಸಾನಿ’. ‘ಡವ್ ಕೋಟ್’ ವಿಶಿಷ್ಟ ನೆಲೆಯಲ್ಲಿ ನಿಂತು ಓದುಗರನ್ನು ವಿವೇಚನೆಗೆ ಹಚ್ಚುವ ಸಂಕಲನ. ಮನುಷ್ಯ ಸಹಜ ಸಂಬಂಧಗಳ ಜೊತೆ ಜೊತೆಗೇ ಅಸಹಜ ಸಂಬಂಧಗಳ ತುಡಿತವನ್ನು ಚಿತ್ರಿಸುವ ನಾಗಮಂಗಲ ಕೃಷ್ಣಮೂರ್ತಿ ತನ್ನ ಚರಿತ್ರೆಯ ಜ್ಞಾನವನ್ನು ಕಥೆಗಳಲ್ಲಿ ಯಥೇಷ್ಚವಾಗಿ ಬಳಸಿಕೊಳ್ಳುತ್ತಾರೆ. ‘ನಾಗಮಂಗಲ ಕೃಷ್ಣಮೂರ್ತಿಯವರ ಕತೆಗಳು ಚರಿತ್ರೆಯನ್ನು, ಜಾನಪದವನ್ನು ಮತ್ತು ವರ್ತಮಾನದ ವಿದ್ಯಮಾನಗಳ ಜೊತೆಗೆ ಗ್ರಹಿಸಿ ನಿರೂಪಿಸುವುದರಿಂದ ಅವರ ಕಥೆಗಳು ಅವರ ಸಮಕಾಲೀನಗಿಂತ ಭಿನ್ನವಾಗಿ ನಿಲ್ಲುತ್ತವೆ.’ ಎಂದು ಮುನ್ನುಡಿಯಲ್ಲಿ ಅಮರೇಶ ನುಗಡೋಣಿ ಹೇಳುತ್ತಾರೆ.
ಇಡೀ ಸಂಕಲನದಲ್ಲಿನ ಕಥೆಗಳನ್ನು ನಾವು ವಿಭಾಗಿಸಿಕೊಳ್ಳಬಹುದು ಎಂದಾದರೆ ಎರಡು ಮುಖ್ಯ ಆಯಾಮಗಳನ್ನಾಗಿ ಗುರುತಿಸಬಹುದು. ‘ಕಾಡು ಬೆಕ್ಕಿನ ಕಣ್ಣು’, ‘ಕೊಳಲನೂದು ಕೃಷ್ಣ’, ‘ಅಗ್ನಿಕೊಂಡ’, ‘ಆಪರೇಷನ್ ಅಶ್ವಮೇಧ’, ‘ಮಾಯಕಾತಿ ನಂಬರ್-37’ ಮುಂತಾದ ಕಥೆಗಳಲ್ಲಿ ಹೆಣ್ಣು ಗಂಡಿನ ಸಂಬಂಧ ಎಳೆ ಎಳೆಯಾಗಿ ಚಿತ್ರಿತವಾಗುತ್ತದೆ. ‘ಕಾಡು ಬೆಕ್ಕಿನ ಕಣ್ಣು’, ‘ಆಪರೇಷನ್ ಅಶ್ವಮೇಧ’, ಕೊಳಲನೂದು ಕೃಷ್ಣ’ ಕಥೆಗಳಲ್ಲಿ ಇದು ಸ್ವಲ್ಪ ಢಾಳಾಗಿಯೇ ಗೋಚರಿಸುತ್ತದೆ. ‘ಅಗ್ನಿಕೊಂಡ’, ‘ಮಾಯಕಾತಿ ನಂಬರ್-37’ ಕಥೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತದೆ. ಉಳಿದ ಕಥೆಗಳಲ್ಲಿ ‘ಅನಂತ ತಾನ್ ಅನಂತವಾಗಿ’, ‘ದೀಪಾನ ಕೊಳ್ಳಿರಯ್ಯ’, ‘ಕರೆನ್ಸಿ ತತ’, ‘ಊರಿಗೆ ಆಳಲ್ಲ’, ‘ವರ್ತಮಾನದ ಸುಳಿವಿಗೆ ಸಿಕ್ಕು’ ಕಥೆಗಳು ಸಾಮಾಜಿಕ ಸಮಸ್ಯೆಯ ಎಳೆ ಹಿಡಿದು, ಸಮಾಜದ ಒಂದಲ್ಲ ಒಂದು ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಅದರ ಸುತ್ತ ಕಥೆ ಬಲೆಯಾಗುತ್ತದೆ. ಹಾಗೆ ನೋಡಿದರೆ ‘ಅಗ್ನಿಕೊಂಡ’ ಮೇಲಿನ ಎರಡೂ ವಿಭಾಗಗಳಲ್ಲೂ ಸ್ಥಾನ ಗಿಟ್ಟಿಸಿಕೊಂಡರೆ ‘ಡವ್ ಕೋಟ್’ ಹಾಗೂ ‘ಪತಂಗ ವಿಲಾಸ’ ಕಥೆಗಳು ಯಾವ ವಿಭಾಗಕ್ಕೂ ಸೇರದೇ, ತಮ್ಮದೇ ಹೊಸ ವಿಭಾಗವನ್ನೂ ಮಾಡಿಕೊಳ್ಳದೇ ವಿಭಿನ್ನವಾಗಿ ನಿಲ್ಲುತ್ತದೆ. ಇಷ್ಟಾಗಿ ಕೂಡ ತನ್ನದೇ ಆದ ನೆಲೆಯಲ್ಲಿ ವಿಭಿನ್ನವಾಗಿ ನಿಲ್ಲುತ್ತ ಹೊಸತನ ನೀಡುತ್ತದೆ.
ಮೊದಲ ಕಥೆ ‘ಕಾಡು ಬೆಕ್ಕಿನ ಕಣ್ಣು’ ಕಥೆಯ ಹಂದರವೇ ವಿಶಿಷ್ಟ. ಕಥೆಯಲ್ಲಿ ಸುಮತಿಯೇ ಹೇಳುವಂತೆ ‘ಯಾವುದೂ ಅರೆಕೊರೆಯಾಗದ ಆದರೆ ಎಲ್ಲವೂ ಅಯೋಮಯ’ವಾದ ಸಂಬಂದ. ಎಂದೋ ಬಸ್ನಲ್ಲಿ ಪಕ್ಕದಲ್ಲಿ ಕುಳಿತ ತಮ್ಮನ ವಯಸ್ಸಿನ ಹುಡುಗ ಫೋನ್ನಲ್ಲೇ ಸೆಳೆದು ಅದು ಹೇಗೋ ಆ ಮಹಾ ನಗರದಲ್ಲಿ ಮನೆಯನ್ನೂ ಹುಡುಕಿಕೊಂಡು ಬಂದು ಮೈಯನ್ನು ಸೆಳೆವ ಹುನ್ನಾರ ಮಾಡುವ ಕಥೆ ಅದು. ಒಮ್ಮೆ ಮಾತ್ರ ಬಸ್ನಲ್ಲಿ ಪಕ್ಕ ಕುಳಿತವನಿಗೆ ಫೋನ್ ನಂಬರ್ ಹೇಗೆ ಸಿಕ್ಕಿತು ಎಂಬ ಅಯೋಮಯ ಪ್ರಶ್ನೆಯೊಂದಿಗೆ ಇಬ್ಬರ ನಡುವಣ ಸಂಬಂಧವೂ ಅಯೋಮಯವಾಗಿಯೇ ಉಳಿಯುತ್ತದೆ. ಮಾತಿನಲ್ಲೆ ಅರಮನೆ ಕಟ್ಟುವ ಸುಖೇಶ ಗಂಡ, ಮಗ ಮನೆಗೆ ಬರುವವರೆಗೆ ಅವಳ ಎದೆಯ ಮಾತಿಗೆ ಧ್ವನಿಯಾದವ. ಈಕೆ ಮಾತಿನಲ್ಲಿ ಮುಳುಗಿದರೆ ಆತ ಮಾತಿನಲ್ಲೇ ‘ಮೈ’ ಮರೆಸುವ ಕಾತುರ ಹೊಂದಿದವ. ಆತನ ಮಾತಿನೊಳಗಿನ ಸುಳಿವು ದೊರಕಿದರೂ ಹೇಗೂ ನಿರಪಕಾರಿಯಾದ ನಿಸ್ಸಂತುವಿನ ಸ್ನೇಹ ಎಂದು ಹಾಯಾಗಿದ್ದ ಸುಮತಿಗೆ ಅದು ಹೇಗೋ ಆತ ಮನೆ ಹುಡುಕಿ ಎದುರು ಬಂದು ನಿಂತಾಗ ದಿಗ್ಭ್ರಮೆ…ಜೊತೆಗಿಷ್ಟು ನಿರಾಶೆ. ತಲೆ, ಹುಬ್ಬಿನ ಕೂದಲೆಲ್ಲ ಉದುರಿ ( ಇಲ್ಲಿ ಕಥೆಗಾರ ಆಕೆಯ ವಿರಹದಿಂದಲೇ ಆತ ಕುದಲು ಉದುರಿ ವಿಕಾರಿಯಾದ ಎಂಬಂತೆ ಚಿತ್ರಿಸಿದ್ದು ಉದ್ದೇಶಪೂರ್ವಕವಾಗಿಯೇ ಎಂಬುದು ಅರ್ಥವಾಗುತ್ತಿಲ್ಲ) ಕೃಷಕಾಯನಾಗಿ, ಸರಿಸೃಪದಂತೆ ಕಾಣುತ್ತಿದ್ದ ಈತನ ಬಳಿಯೇನಾ ತಾನು ತನ್ನ ಮನಸ್ಸಿನ ಭಾವನೆಗಳನ್ನೆಲ್ಲ ತೋಡಿಕೊಂಡು ಬೆತ್ತಲಾದದ್ದು ಎಂದು ಬೆಚ್ಚಿ ಬಿದ್ದವಳು ಸುಮ್ಮ ಸುಮ್ಮನೆ ಮಾತಿಗೆಳೆಯುವ, ಸ್ಪರ್ಶಸುಖಕ್ಕೆ ಹಾತೊರೆಯುವ ಆತನನ್ನು ಸಾಗಹಾಕುವುದು ಹೇಗೆಂದಿರುವಾಗಲೇ ಬಂದ ಗಂಡನ ಫೋನ್ ಸಹಾಯಕ್ಕೆ ಬಂದಿತು.
ಗಂಡನ ಅನುಮಾನಕ್ಕೆ ಏನೋ ಪರಿಹಾರ ನೀಡಿದಳಾದರೂ ತನ್ನೊಳಗೇ ಮೂಡುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲಳಾದ ಸುಮತಿ ನಿನ್ನೊಳಗೆ ನಾನು ಆಸೆ ಹುಟ್ಟಿಸಿದ್ದರೆ ಕ್ಷಮಿಸು ಎಂದು ದೂರ ಸರಿಯುವ ಮಾತನಾಡುತ್ತಾಳೆ. ಇದರ ಜೊತೆ ಜೊತೆಗೇ ಸಂಕಲನದ ಹತ್ತನೆಯ ಕಥೆ ‘ಆಪರೇಷನ್ ಅಶ್ವಮೇಧ’ ಕೂಡ ಇದೇ ಹಂದರದಲ್ಲೇ ಸಾಗುತ್ತದೆ ಮೇಲ್ನೋಟಕ್ಕೆ ಒಂದೇ ಥೀಮ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದು ಬೇರೆ ಬೇರೆ ಕಥೆಯಾದಂತೆ ಗೋಚರವಾಗುತ್ತದೆ. ಕಥೆಯ ಹೆಣಿಕೆಯಲ್ಲಿ ವಿಭಿನ್ನತೆಯಿದೆ, ತಂತ್ರಗಾರಿಕೆಯಲ್ಲಿ ವ್ಯತ್ಯಾಸವಿದೆ. ಆದರೂ ಆಳದಲ್ಲಿ ಒಂದೇ ಕಥೆ ಎನ್ನಿಸಿ ಬಿಡುತ್ತದೆ ಅದೂ ಒಂದೇ ಸಂಕಲನದಲ್ಲಿ ಓದುವಾಗ ಜೊತೆಗೆ ಸೃಷ್ಟಿಯಾದ ಕಥೆ ಎನ್ನಿಸುವುದು ಸುಳ್ಳಲ್ಲ. ಮೃಗಾಲಯಕ್ಕೆ ತಂದ ಅಪರೂಪದ, ಪ್ರಾಚೀನ ತಳಿಯ ಕುದುರೆಯೊಂದನ್ನು ಹೆಂಡತಿಗೆ ತೋರಿಸಬೇಕು ಎನ್ನುವ ಉಮ್ಮೇದಿಯ ಗಂಡ ಕೂಡ ಕುದುರೆಯ ಹೇಷಾರವವನ್ನು ತನ್ನೊಳಗೆ ತುಂಬಿಕೊಂಡವನು. ತನ್ನ ಬೆದೆ ತೀರಿಸಿಕೊಳ್ಳುವ ಭರದಲ್ಲಿ ಎರಡು ಸಲ ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಚಿಗುರನ್ನೇ ಮುರುಟಿ ಹಾಕಿದವನು. ಆತನ ಪ್ರೀತಿಯಲ್ಲಿ ಮನಸ್ಸು, ಮೈ ಅರಳಬೇಕಾಗಿದ್ದ ಗೀತಾಲಕ್ಷ್ಮಿಗೆ ಆತ ಹತ್ತಿರ ಬಂದರೆ ಸಾಕು ಎಲ್ಲವೂ ಮೈಲಿಗೆ ಆದಂತೆ ಚಡಪಡಿಸುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಆಕೆ ಶಾಂತಿ ಅರಸುತ್ತ ಆಶ್ರಮದ ಪ್ರವಚನದತ್ತ ಮುಖ ಮಾಡಿದ್ದಳು. ಆದರೆ ಅಲ್ಲಿ ಸಾಂತ್ವಾನ ಹೇಳುತ್ತಿದ್ದ ಜೋಡಿ ಕಣ್ಣುಗಳು ಕೂಡ ಕೊನೆಗೆ ‘ಜೀವ-ಭಾವ ಒಂದಾದ ಮೇಲೆ ಮಡಿವಂತಿಕೆ ಏಕೆ?’ ಎನ್ನುತ್ತ ಮೂಲ ವಿಷಯಕ್ಕೇ ಪ್ರವೇಶಿಸಿದಾಗ ಕೇವಲ ಮನಸ್ಸಿನ ಗೆಳೆಯ ಅಂದುಕೊಂಡಿದ್ದ ಗೀತಾಲಕ್ಷ್ಮಿ ಥರಗುಟ್ಟಿದ್ದಳು.
‘ಮನವಿಲ್ಲದವರಲ್ಲಿ ತನುವಿತ್ತು ಘಾಸಿಗೊಳ್ಳುವ ಬದಲು ತನುಮನವೆರಡೂ ಇರುವಲ್ಲಿ ಮೈಯಿ ಮೈಲಿಗೆಯೇ?’ ಎಂದು ಆಧುನಿಕ ವಚನಕಾರನಂತೆ ನುಡಿದು ಮೈಯನ್ನೂ ಬಯಸ ತೊಡಗಿದಾಗ ಕಂಗಾಲಾದ ಆಕೆ ಜಾರಿ ಹೋಗುತ್ತಿರುವ ಸೀರೆಗೆ ಹೋಮಕುಂಡದ ಬೆಂಕಿ ಹತ್ತಿದ್ದನ್ನೂ ಗಮನಿಸದೇ ಮುಖ್ಯ ಪ್ರಾಂಗಣಕ್ಕೆ ಓಡಿಬಂದು, ಅಲ್ಲಿ ನಡೆಯುತ್ತಿದ್ದ ಸರಕಾರಿ ಮಟ್ಟದ ಚಚರ್ೆಗೆ ಧಿಗ್ಗನೆ ತಡೆಯೊಡ್ಡಿ, ಆಗಷ್ಟೇ ಕೋರೆ ಹಲ್ಲು ಮೂಡಿ, ನಿಮಿರಿನಿಂತ ಕಿವಿಗಳಿಂದ ವಿಕಾರವಾಗಿ ಕಾಣುತ್ತಿದ್ದ ಸ್ವಾಮಿಜಿ ಬೆಚ್ಚಿ ನೆಲಕ್ಕೂರಿದ ಕಾಲುಗಳಿಗೆ ಗೊರಸು ಮೂಡಿದ್ದು ಎಲ್ಲರ ಕಂಗಳ ಅಚ್ಚರಿಗೆ ಕಾರಣವಾಗುವುದು; ವಿದೇಶದಿಂದ ತಂದ ಅಪರೂಪದ, ಪ್ರಾಚೀನ ತಳಿಯ, ಅದರ ಅವಯವಗಳಲ್ಲೆಲ್ಲ ವೀರ್ಯವರ್ಧಕವನ್ನು ತುಂಬಿಕೊಂಡಿರುವ ಖ್ಯಾತಿಗೆ ಪಾತ್ರವಾದ ಆ ಕುದುರೆಯ ಕಳವು ಪ್ರಕರಣಕ್ಕೊಂದು ಹೊಸ ತಿರುವು ಸಿಕ್ಕುವುದು ಎಲ್ಲವೂ ಕಥೆಗೊಂದು ಅದ್ಭುತ ತಿರುವನ್ನು ನೀಡುತ್ತದೆ
ಆದರೆ ಇವೆರಡೂ ಕಥೆಗಳಲ್ಲಿ ಕಥೆಗಾರ ತುಂಬು ಸಂಯಮ ತೊರಿಸಿದ್ದಾರೆ.
ಮನಸ್ಸು ಒಂದಾದ ಮೇಲೆ ಮೈಗೇನು ಮೈಲಿಗೆ ಎಂದು ಪದೇ ಪದೇ ಹೇಳಿದರೂ ಮೈ ಮೈಲಿಗೆ ಆಗದಂತೆ ಕಾಪಿಟ್ಟಿದ್ದಾರೆ. ಒಂದಾಗದ ಮೈ ಹೆಣ್ಣಿನ ಮಿತಿಯೋ ಅಥವಾ ಶಕ್ತಿಯೋ ಎಂಬ ವಿಚಾರವನ್ನು ಕಥೆಗಾರ ಚರ್ಚಿಸ ಹೋಗದೇ ಓದುಗರ ವಿವೇಚನೆಗೆ ಬಿಟ್ಟುಬಿಡುವುದರಿಂದಲೇ ಕಥೆ ಕುತೂಹಲ ಉಳಿಸಿಕೊಂಡಿದೆ. ಹಾಗೆ ನೋಡಿದರೆ ಈ ಎರಡೂ ಕಥೆಗಳಲ್ಲಿ ಮನಸ್ಸು ಒಂದಾದ ಲಕ್ಷಣವನ್ನೇ ಕಥೆಗಾರ ಎಲ್ಲೂ ಹೇಳದಿರುವುದರಿಂದ ಮನಸ್ಸು ಒಂದಾಗಿದ್ದು ಕೇವಲ ಪುರುಷ ಕಲ್ಪನೆಯಷ್ಟೇ ಎನ್ನುವ ಭಾವ ಹುಟ್ಟುತ್ತದೆ.

ಎರಡನೆಯ ಪ್ರಕಾರದ ಕಥೆಗಳಲ್ಲಿ ಭೃಷ್ಟತೆ, ಲಂಚಾವತಾರ, ಜಾತಿ ಸಮಸ್ಯೆ, ಬಹುರಾಷ್ಟ್ರೀಯ ಸಮಸ್ಯೆ, ಬಿ.ಟಿ. ಬೀಜದ ಸಮಸ್ಯೆ, ಕಾವೇರಿ ನೀರಿನ ಸಮಸ್ಯೆ, ಪುರೋಹಿತಶಾಹಿ ಸಮಸ್ಯೆಗಳು ಧಿಂಗಣಿಸುತ್ತದೆ. ‘ಅನಂತ ತಾನ್ ಅನಂತವಾಗಿ’ ಕಥೆಯಲ್ಲಿ ಭೃಷ್ಟತೆ ಬೃಹದಾಕಾರವಾಗಿ ಬೆಳೆದು, ಭೃಷ್ಟ ಅಧಿಕಾರಿ ಪುನಃ ಅಧಿಕಾರ ಪಡೆದು, ನಿಷ್ಟ ಅಧಿಕಾರಿಯ ಆತ್ಮಹತ್ಯೆಯಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ಬರುವ ರೆಕ್ಕೆಪುಕ್ಕದ ನರಹದ್ದು, ಬೃಷ್ಟ ಅಧಿಕಾರಿಯಾಗಿದ್ದ ದೊರೈರಾಜುವಿನ ರೂಪ ಎಂಬುವುದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ.
‘ದೀಪಾನ ಕೊಳ್ಳಿರಯ್ಯ’ ಕಥೆಯಲ್ಲಿ ಬಿ.ಟಿ. ಬೀಜದ ವಿರುದ್ಧ ಹೋರಾಡುತ್ತ ರೈತರು ಖಾಲಿ ಬಿದ್ದ ‘ಮಹಾಮಣ್ಣಿನ ದಿಬ್ಬ’ದಲ್ಲಿ ದೇಗುಲ ಕಟ್ಟಬೇಕೆಂದು ಅಗೆದಾಗ ಪುರಾತನ ಕಾಲದ ಹಗೇವು, ಬೀಜ ಸಂಗ್ರಹಾಗಾರ, ಕೃಷಿ ದೇವ ಬಲರಾಮನ ದೇಗುಲ ಎಲ್ಲವೂ ಉತ್ಖನನವಾಗಿತ್ತು. ಹಿಂದಿನ ಕಾಲದ ಸಾಂಪ್ರದಾಯಿಕ ಬೀಜಗಳನ್ನು ರಕ್ಷಿಸುವ ಸಲುವಾಗಿ ಆ ಜಾಗವನ್ನು ರೈತರಿಗೇ ಬಿಟ್ಟುಕೊಟ್ಟರೂ ಕೂಡ ಆ ಬೀಜ ಹಗೇವುನಲ್ಲಿ ದೊರೆತ ತಾಳೆಗರಿಯನ್ನು ಅಭ್ಯಸಿಸಿದ ಪದ್ಮನಾಭು ತನ್ನ ಪುರೋಹಿತಶಾಹಿ ಗುಣವನ್ನು ಪ್ರದರ್ಶಿಸಿದ್ದ. ಸರ್ಕಾರಿ ಮಟ್ಟಕ್ಕೆ ಹೋಗಿ ಅಲ್ಲೊಂದು ಶ್ರೀರಾಮನ ಮಂದಿರವಿತ್ತೆಂದು ಅಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂದು ಒತ್ತಾಯಿಸಿದ ಆತನ ಬೇಡಿಕೆಗೆ ಮಣಿದು, ಮಲ್ಟಿನ್ಯಾಷನಲ್ ಕಂಪನಿ ಸ್ಥಾಪಿಸಲು ಬಿಡದ ರೈತರ ಮೇಲೆ ಸೇಡು ತೀರಿಸಿಕೊಳ್ಳಲೋ ಎಂಬಂತೆ ಮತ್ತೆ ವಿದೇಶಿ ಕಂಪನಿಗೇ ದೇಗುಲ ನಿಮರ್ಾಣದ ಕೆಲಸ ವಹಿಸಿ ಸರಕಾರ ಕೃತಾರ್ಥವಾಯಿತು ಎಂಬಲ್ಲಿಗೆ ರೈತರ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದು ಹೋದದ್ದರ ಸುಳಿವು ನೀಡುತ್ತದೆ.
‘ಕರೆನ್ಸಿ ತಾತ’ ಕತೆಯಲ್ಲಿ ಮೋಟೇ ಗೌಡರ ಮೂರು ತಲೆಮಾರುಗಳ ‘ಮನೆ ದೇವ್ರು’ರ ಗಾಂಧಿತಾತ ಸಿನೇಮಾ ಥಿಯೇಟರ್ನ, ಬಾರ್ನ, ರಸ್ತೆಯ,ಹೇರ್ಕಟಿಂಗ್ ಶಾಪ್ನ ಹೆಸರಾಗಿ ಮಾತ್ರ ಉಳಿದು ಜನಮಾನಸದಿಂದ ದೂರವಾಗಿದ್ದಾರೆ. ಪಿತೃ ಪೂಜೆಗೆ ಮೋಟೇಗೌಡರು ಗಾಂಧಿ ತಾತನನ್ನು ಆರಾಧಿಸುತ್ತಿದ್ದರು. ಗಾಂಧಿ ತಾತನ ನೆನಪಲ್ಲಿ ಯಾವುದೋ ದುರ್ಬಲ ಕ್ಷಣದಲ್ಲಿ ಮೊಮ್ಮಗ ವಿಶ್ವಾಸನಿಗೆ ತಾವು ಕಾದಿಟ್ಟ ಬೆಳ್ಳಿಕರಂಡದಲ್ಲಿ ಜೋಪಾನವಾಗಿ ಕಾದಿಟ್ಟ ಗಾಂಧಿತಾತನ ಹಲ್ಲು ತೋರಿಸಿ ಕಥೆ ಹೇಳಿದ್ದರು. ಅದಾದ ವರ್ಷದಲ್ಲೇ ಆ ಮೊಮ್ಮಗ ಆಗರ್ಭ ಶ್ರೀಮಂತನಾಗಿ, ಗಾಂಧಿವಾದಿ ಕುಟುಂಬದ ಕುಡಿ ವಿಶ್ವಾಸ ಗೌಡ ಎಂ.ಎಲ್ ಎ. ಆಗಿ ಹೊರಹೊಮ್ಮದ್ದು ಸುದ್ದಿ ಆದ ತಿಂಗಳಲ್ಲೇ ಗಾಂಧಿ ವಸ್ತುಗಳನ್ನು ಅಕ್ರಮವಾಗಿ ವಿದೇಶಕ್ಕೆ ಮಾರಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ. ಒಟ್ಟಿನಲ್ಲಿ ವಿದೇಶಿ ಆಕ್ರಮಣವನ್ನು ಮತ್ತೊಮ್ಮೆ ನೆನಪಿಸಿ, ದೇಶಿಗರ ಅನೈತಿಕತೆಯನ್ನು ನೆನಪಿಸಲು ಕಥೆ ಯಶಸ್ವಿಯಾಗಿದೆ.
‘ಊರಿಗೆ ಆಳಲ್ಲ’ ಕಥೆ ಕೂಡ ಬೃಷ್ಟಾಚಾರದ ನೆಲೆಯೊಳಗೆ ಹೆಣೆಯಲಾಗಿದೆ. ಜಮೀನಿನ ಸಾಲ ತೀರಿಸಿಕೊಳ್ಳಲು ಜಾತ್ರೆಯಲ್ಲಿ ಬಿಕರಿಗಿಟ್ಟ ಹುಡುಗ ಅಪ್ಪನ ಸಾಲ ತೀರಿಸಲು ಪಟ್ಟಣ ಸೇರಿ ಅಲ್ಲೆಲ್ಲೂ ನೆಲೆ ನಿಲ್ಲಲಾಗದೇ ಊರಿಗೆ ಬಂದರೂ, ಅಲ್ಲಿ ಕೂಡ ಮತದಾರ ಪಟ್ಟಿಯಲ್ಲಿ, ರೇಶನ್ ಕಾರ್ಡಲ್ಲಿ ಹೆಸರು ತೆಗೆದು ಹಾಕಿದ್ದರಿಂದ ಏನೋ ಒಂದು ಉದ್ಯೋಗ ಮಾಡಬೇಕೆಂದು ಲೈಸನ್ಸ ರಹಿತ ಕ್ಯಾಂಟೀನ್ ಮಾಡಲು ಹೋಗಿ ಫೋಲಿಸ ರೈಡ್ನಿಂದ ಆ ಕೆಲಸವನ್ನೇ ನಿಲ್ಲಿಸಬೇಕಾಗಿ ಬರುವುದೂ, ಅದೇ ಜಾಗದಲ್ಲಿ ಮತ್ತೊಬ್ಬ ಕ್ಯಾಂಟಿನನ ನಿಮರ್ಿಸಿದ್ದು. ಮತ್ತು ತನ್ನ ಕ್ಯಾಂಟಿನ್ನ್ನು ನಿಲ್ಲಿಸಿದ ಫೋಲಿಸ್ ಇನ್ಸಫೆಕ್ಟರ್ ಅಲ್ಲಿನ ತಿಂಡಿಯನ್ನು ಹೆಂಡತಿ ಮಕ್ಕಳೊಟ್ಟಿಗೆ ಆಸ್ವಾದಿಸುವುದು.. ಎಲ್ಲಾ ಮುಗಿದ ನಂತರ ಕೊನೆಗೂ ಮತ್ತೆ ಪಟ್ಟಣ ಸೇರಬೇಕಾದದ್ದು ಈ ಕಥೆಯ ಹಂದರ. ಆದರೂ ಕಥೆ ಬರಿ ಕಥೆಯಾಗಿ ಉಳಿಯುತ್ತದೆಯೇ ಹೊರತು ಜಾಳಾದ ವಸ್ತು ಮತ್ತು ನಿರೂಪಣೆ ಅಷ್ಟೇನೂ ಗಮನ ಸೆಳೆಯುವಲ್ಲಿ ಯಶಸ್ವಿಯಾಗುವುದಿಲ್ಲ.
ವರ್ತಮಾನದ ಸೆಳವಿಗೆ ಸಿಕ್ಕಿ’ ಕಥೆ ಕೂಡ ನೀರು ಹಂಚಿಕೆಯ ವಿಷಯವನ್ನು ಒಳಗೊಂಡಿದೆ. ರೈತರ ಬವಣೆ, ನೀರಿಲ್ಲದ ಸಮಸ್ಯೆ ಎಲ್ಲವೂ ಈ ಕತೆಯ ವಸ್ತು. ತನ್ನದೇ ಆದ ನೆಲೆಯಲ್ಲಿ ನಿರೂಪಣೆಗೊಂಡ ಕತೆ ಜನರ ಬಾವನೆಗಳೊಟ್ಟಿಗೆ ಆಡಳಿತ ಯಂತ್ರ ಆಡುವ ಆಟವನ್ನು ಕಥೆಯಾಗಿಸುತ್ತದೆ. ಮತ್ತಿಷ್ಟು ಸದೃಢವಾಗಿ ನಿರೂಪಿತವಾಗಿದ್ದರೆ ಹೆಚ್ಚು ಯಶಸ್ವಿ ಆಗ ಬಹುದಾಗಿದ್ದರೂ ಕಥಾ ತಂತ್ರ ಆಸಕ್ತಿದಾಯಕವಾಗಿದೆ.
ಇವೆಲ್ಲದರ ನಡುವೆ ಎರಡು ಗುಂಪಿನಲ್ಲಿ ಬರುವ ‘ಅಗ್ನಿಕೊಂಡ’ ಕಥೆ ದಲಿತರ ನೋವನ್ನು ಹಾಗೂ ಅದರ ನಡುವೆಯೇ ಹೊತ್ತಿಕೊಂಡ ಪ್ರೇಮದ ಅಮಲನ್ನು ಯಶಸ್ವಿಯಾಗಿ ಹೇಳುತ್ತದೆ. ದೇಗುಲದ ಒಳಗೆ ಪ್ರವೇಶ ನಿಷಿದ್ಧವಾಗಿದ್ದ ದಲಿತರು ಅಗ್ನಿಕೊಂಡ ಹಾಯುವ ವೇಳೆಗೆ ದೇಗುಲ ಪ್ರವೇಶಿಸಿ ಕ್ರಾಂತಿ ನಿಮರ್ಿಸುವ ಯೋಚನೆ ಇರುವಾಗಲೇ ದಲಿತರಿಗೆ ಹಾಗೂ ಸವಣರ್ಿಯರಿಗೆ ನಡುವೆ ಹೊತ್ತಿಕೊಂಡ ಸಂಘರ್ಷದಲ್ಲಿ ಕೊಲೆ ಕೂಡ ನಡೆದು ಹದಿನೇಳು ವಷರ್éಗಳ ನಂತರ ತೀಮರ್ಾನಗೊಂಡ ಕೋರ್ಟ ತೀಮರ್ಾನ ಹಾಗೂ ಆ ಕಾಲದಲ್ಲಿ ಊರು ಬಿಟ್ಟು ಓಡಿಬಂದ ದಲಿತ ಹುಡುಗ ಹಾಗೂ ಪೂಜಾರಿಯ ಮಗಳು ಊರಿಗೆ ಹೊಗಿ ಅಲ್ಲಿನ ತಳಮಳವನ್ನು ಕಣ್ಣಾರೆ ಕಾಣುವ ಕಥೆ ಇದು. ಕಥೆಯ ನಿರೂಪಣೆ ಹಾಗೂ ಕಥೆ ಕಟ್ಟುವ ತಂತ್ರದಲ್ಲಿ ಯಶಸ್ವಿಯಾಗಿರುವ ಕಥೆಗಾರ ಒಂದು ಉತ್ತಮ ಕಥೆ ನೀಡಿದ್ದಾರೆ ಎಂದೇ ಹೇಳಬಹುದು. ‘ಕೊಳಲನೂದು ಕೃಷ್ಣ’ ಕೂಡ ನಿರೂಪಣೆಯಲ್ಲಿ ಯಶಸ್ಸು ಸಾಧಿಸಿದ ಕಥೆ. ಕಥೆಯ ಹಂದರ ಅಷ್ಟೇನೂ ಹೊಸತಲ್ಲವಾದರೂ ಕೂಡ ಕಥೆಗಾರ ಕಥೆ ಹೆಣಿಕೆಯಲ್ಲಿ ಹೊಸತನವನ್ನು ನೀಡಿ ಕಥೆಯನ್ನು ಅಪರೂಪದ ಕತೆಯನ್ನಾಗಿಸಿದ್ದಾರೆ. ಕಾಲೇಜು ದಿನಗಳ, ಹರೆಯದ ಉನ್ಮತ್ತತೆಯ ಮಿಲನದಿಂದ ಫಲಿತಗೊಂಡ ಬ್ರೂಣವನ್ನು ತೆಗೆಸಿ ತಮ್ಮದೇ ದಾರಿ ಹಿಡಿದು ಹೊರಟ ಯುವ ಜೊಡಿಯನ್ನು ಆ ಅಕಾಲಿಕ ಗರ್ಭಪಾತದ ಪಿಂಡವೆ ಕನಸಿನಲ್ಲಿ ಕಾಡಿ ಒಂದಾಗುವಂತೆ ಮಾಡುವ ಕಥೆ ಇದು. ಕಾಡಿದ ಅಂಗ ವೈಕಲ್ಯತೆಯ ನಡುವೆಯೂ ಪ್ರೀತಿ ಹೆಮ್ಮರವಾಗಿದ್ದ ಮುದಿ ಜೋಡಿಯೊಂದು ಕಸದ ತೊಟ್ಟಿಯಲ್ಲಿದ್ದ ಮಗುವನ್ನು ಸಾಕಲೆಂದು ತರುವುದು, ಮತ್ತು ಕನಸಿನಲ್ಲಿ ಕಂಡ ಅದೇ ಮಗುವೇ ವಾಸ್ತವದಲ್ಲಿ ಧಿಗ್ಗನೆ ಎದುರಿಗೆ ಬಂದು ಅಯೋಮಯವಾಗಿದ್ದರೂ ಅದು ಇಬ್ಬರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗುವು ಈ ಕತೆಯ ತಿರುಳು.
ಕೇಂದ್ರ ಕಥೆ ಎಂದೇ ಗುರುತಿಸಿರುವ ‘ಡವ್ ಕೋಟ್’ ಚರಿತ್ರೆಯ ಜ್ಞಾನವನ್ನೆಲ್ಲ ತನ್ನೊಳಗೆ ಇಟ್ಟುಕೊಂಡು ಅದರೊಟ್ಟಿಗೆ ಕಲ್ಪನೆಯನ್ನೂ ಹದವಾಗಿ ಬೆರೆಸಿದ ಅದ್ಭುತ ಕಥೆ ಎನ್ನಬಹುದು. ಬ್ರಿಟೀಷರ ಹಿಡಿತದಿಂದ ತಪ್ಪಿಸಿಕೊಳ್ಳಲೋಸುಗ ಫ್ರೆಂಚ್ ರಾಜನಿಗೆ ಕಳುಹಿಸಿದ ನಿರೂಪವನ್ನು ಹೊತ್ತು ಸಾಗಿದ ಟಿಪ್ಪುವಿನ ಡವ್ ಕೋಟ್ನಲ್ಲಿದ್ದ ಶ್ವೇತವರ್ಣದ ಪಾರಿವಾಳ ಫ್ರಾನ್ಗೆ ಹಾರಿ ಹೋಗಿ ಅಲ್ಲಿನ ಫ್ರೆಂಚ್ ಕ್ರಾಂತಿಗೆ ಸಾಕ್ಷಿಯಾಗಿ ಎರಡು ಶತಮಾನಗಳ ನಂತರ ಹಿಂತಿರುಗಿ, ಗಾಂಧಿ ತಾತನ ಆರೈಕೆ ಪಡೆದು ಮೈಸೂರಿಗೆ ಬರುವಷ್ಟರಲ್ಲಿ ಟಿಪ್ಪುವಿನ ಯುಗ ಅಂತ್ಯವಾಗಿರುತ್ತದೆ. ಟಿಪ್ಪುವಿಗಾಗಿ ಹುಡುಕುವ ಪಾರಿವಾಳಕ್ಕೆ ಕಾಣುವುದು ಮೈಸೂರು, ಶ್ರೀರಂಗಪಟ್ಟಣದ ಚರಿತ್ರೆಯನ್ನು ವಿವರಿಸುವ ರಂಗಾಚಾರಿ. ಆತ ಟಿಪ್ಪುವಿನ ಕಥೆ ಹೇಳುವಾಗೆಲ್ಲ ಹತ್ತಿರದಲ್ಲೇ ಕುಳಿತು ಆಸಕ್ತಿಯಿಂದ ಕೇಳುತ್ತಿದ್ದ ಪಾರಿವಾಳ ಕೊನೆಗೂ ಟಿಪ್ಪುವಿನ ಸುಳಿವು ಸಿಗದೇ ಗುಜರಾತಿಗೆ ಹಾರಿ ಹೋಗಿ ಅಲ್ಲೂ ಕೂಡ ಬರಿ ಮೈಯ್ಯಿನ ಫಕೀರನ ಸಿಗದೇ ನಿರಾಶೆ ಅನುಭವಿಸುವ ಕಥೆ ಇದು ಕೊನೆಯಲ್ಲಿ ಒಳಕೋಟೆಯ ನೆತ್ತಿ ಮೇಲೆ ಇರುವ ರಣಹದ್ದಿನ ದಬ್ಬಾಳಿಕೆಯ ಹೋಲಿಕೆ ಮಾಮರ್ಿಕವಾಗಿದೆ. ಇಡೀ ಕಥೆ ಶತಶತಮಾನಗಳ ಸರಹದ್ದನ್ನೂ ದಾಟಿ, ಟಿಪ್ಪು, ಫ್ರೆಂಚ್ ಕ್ರಾಂತಿ, ಗಾಂಧಿ ತಾತ ಹಾಗೂ ಇಂದಿನ ದೌರ್ಜನ್ಯವನ್ನು ಒಟ್ಟೊಟ್ಟಿಗೇ ಚಿತ್ರಿಸಿ ಓದುಗರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಪತಂಗ ವಿಲಾಸ ಕತೆಯಲ್ಲಿ ಕೂಡ ಅಲೋಕ ಮತ್ತು ಅರಳೀ ಮರದ ಹೋಲಿಕೆಯ ಜೊತೆಗೆ ಹೂವು ಹಣ್ಣು ಏನೂ ಬಿಡದ ಗಿಡದ ಹೋಲಿಕೆಯಲ್ಲಿ ಕೂಡ ಹೊಸ ರೀತಿಯಲ್ಲಿ ಮೂಡಿ ಬಂದಿದೆ. ಚಿಟ್ಟೆಯ ಸ್ಪರ್ಷದಿಂದ ಹೊಸ ಬದುಕಿಗೆ ಅಣಿಯಾಗುವ ಗಿಡದಂತೆ ಅಲೋಕ ಕೂಡ ಹೊಸ ಬದುಕಿಗೆ ಸಿದ್ಧವಾಗುವ ಪರಿ ಅಚ್ಚರಿ ಹುಟ್ಟಿಸುತ್ತದೆ,
ಕಥೆ, ಕಲ್ಪನೆ, ಕನಸು ಹೀಗೆ ಎಲ್ಲವೂ ಮಿಳಿತಗೊಂಡ ತಂತ್ರಗಾರಿಕೆ ಗಮನ ಸೆಳೆಯುತ್ತದೆ. ಕಥೆಗಾರ ಈ ತಂತ್ರವನ್ನು ಬಹುತೇಕ ಎಲ್ಲಾ ಕಥೆಗಳಲ್ಲೂ ಬಳಸಿಕೊಂಡಿದ್ದಾರೆ. ಕಥೆಯೊಳಗೆ ಒಂದು ಕಥೆ, ವಿವಿಧ ಹಂತಗಳಲ್ಲಿ ಕಥೆಯ ನಿರೂಪಣೆ, ಕಾದಂಬರಿಯ ಮಾದರಿಯಲ್ಲಿ ಎರಡು ವಿಭಿನ್ನ ಘಟನೆಗಳನ್ನು ಹೇಳುತ್ತ ಅವುಗಳಿಗೆ ಕೊಡುವ ‘ಲಿಂಕ್’ನ ತಂತ್ರಗಾರಿಕೆ ಕಥೆಗಳಿಗೆ ಹೊಸತನವನ್ನು ನೀಡಿದೆ. ಕಲ್ಪನೆಯ ಗರಿ ಬಿಚ್ಚಿ ಹಾರುತ್ತಿರುವಾಗಲೇ, ಹಠಾತ್ತಾಗಿ ಎದುರು ನಿಲ್ಲುವ ವಾಸ್ತವ ಕಥೆಯ ಹಣೆಯುವಿಕೆಯಲ್ಲಿ ಕಥೆಗಾರನಿಗೆ ಇರುವ ನೈಪುಣ್ಯವನ್ನು ತೋರಿಸುತ್ತದೆ. ಭಿನ್ನ ನೆಲೆಯಲ್ಲಿ ಕಟ್ಟಿಕೊಡುವ ಕಥೆಗಳು ವಾಸ್ತವ, ಫ್ಯಾಂಟಿಸಿಯ ಜೊತೆ ಜೊತೆಗೆ ಚರಿತ್ರೆ, ಸಾಮಾಜಿಕ ಸಮಸ್ಯೆ ಹೀಗೆ ಎಲ್ಲಾ ಆಯಾಮಗಳಲ್ಲೂ ದಿಟ್ಟಿ ಹಾಯಿಸುತ್ತದೆ. ಮತ್ತೊಂದಿಷ್ಟು ವೈವಿದ್ಯತೆ ಕಥಾ ವಸ್ತುವಿನ ಆಯ್ಕೆಯಲ್ಲಿದ್ದರೆ ಅಥವಾ ಒಂದೇ ಸಂಕಲನದಲ್ಲಾದರೂ ಒಂದೇ ರೀತಿಯ ವಿಷಯಗಳು ಇಣುಕದಿದ್ದರೆ ನಿಜಕ್ಕೂ ಅದ್ಭುತ ಕಥಾಸಂಕಲನ ಎನ್ನಲು ಅಡ್ಡಿಯಿಲ್ಲ.
 

‍ಲೇಖಕರು avadhi

October 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: