ಸುಚಿತ್ರಾ ಹೆಗಡೆ ಲಹರಿ – ನಮ್ಮ ಪ್ರವಾಸಕ್ಕೆ ಜಯವಾಗಲಿ!

ಸುಚಿತ್ರಾ ಹೆಗಡೆ

ಈ ತಿಂಗಳ ‘ಅಪರಂಜಿ’ಯಲ್ಲಿ ಸುಚಿತ್ರಾ ಹೆಗಡೆ ಅವರ ಈ ಲಲಿತ ಪ್ರಬಂಧ ಪ್ರಕಟವಾಗಿದೆ.

ಆ ಬರಹ ಇಲ್ಲಿದೆ

ಲಾಕ್ ಡೌನ್ ಸಮಯ. ಟಿವಿಯಲ್ಲಿ ನ್ಯಾಷನಲ್ ಜಿಯೊಗ್ರಾಫಿಕ್ ಚಾನಲ್ ಬಿತ್ತರವಾಗುತ್ತಿತ್ತು. ಸಿಂಹವೊಂದು ತನ್ನ ಹಳೆಯ ಗಾಯಗಳನ್ನು ನೆಕ್ಕುತ್ತಾ ಮಲಗಿತ್ತು. ಅದನ್ನು ನೋಡುತ್ತಾ , ಹೊರಗೆಲ್ಲೂ ಹೋಗಲಾಗದೇ, ಮನೆಯಲ್ಲೂ ಕೂರಲಾಗದೇ ಮಾಡಿದ ಹಳೆಯ ಪ್ರವಾಸಗಳನ್ನೇ ನೆನೆಸಿಕೊಂಡು ಕೊರಗುತ್ತಿರುವ ನನ್ನನ್ನೇ ನೋಡಿದಂತಾಯಿತು. ಎಂದಿನಂತೆ ಹಿಂದಿನ ಪ್ರವಾಸಗಳನ್ನು ನೆನೆಯೋಣ ಅಂದರೆ ಎಲ್ಲಾ ಟೂರುಗಳು ಎರೆಡೆರಡು ಸಲ ಮನದಲ್ಲಿ ಆಗಲೇ ರೀವೈಂಡ್ ಆಗಿ ಮುಗಿದಿತ್ತು. ಅಷ್ಟರಲ್ಲಿ ನನ್ನ ಬಾಲ್ಯದ ಕನ್ನಡ ಶಾಲೆಗಳ ಪ್ರವಾಸಗಳ ಅಚ್ಚಳಿಯದ ನೆನಪುಗಳು ತುಂಟನಗುವಿನ ಜೊತೆಗೆ ಕಣ್ಣು ಮಿಟುಕಿಸಿತು.

ಶಾಲೆಗೆ ಹೋಗುವುದೇ ಒಂದು ದೊಡ್ಡ ಪ್ರವಾಸದಂತೆ ಕಾಣುವ ಈ ಕಾಲದಲ್ಲಿ, ನನ್ನ ಶಾಲಾದಿನಗಳಲ್ಲಿ ಹೋದ ಪ್ರವಾಸಗಳನ್ನು ತಿರುಗಿ ನೋಡಿದರೆ ಅದೆಂತಾ ಸೊಗಸು. ಆ ಕಾಲದಲ್ಲಿ ನಮ್ಮಲ್ಲಿಯ ಶಾಲಾ ಪ್ರವಾಸಗಳಿಗೆ ಅದರದ್ದೇ ಆದ ಒಂದು ವಿಶಿಷ್ಟ ಸೊಗಡಿತ್ತು. ಉತ್ತರ ಕನ್ನಡದಲ್ಲಿ ಓದಿದ ನನ್ನ ಸಮಕಾಲೀನರಲ್ಲಿ ಯಾರನ್ನೂ ವಿಚಾರಿಸಿದರೂ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಎಳ್ಳಷ್ಟೂ ಬದಲಾವಣೆಯಾಗುವದಿಲ್ಲ.

ಒಂದರಿಂದ ನಾಲ್ಕನೇ ಕ್ಲಾಸಿನ ಮಕ್ಕಳು ಪ್ರವಾಸ ಭಾಗ್ಯ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಇರಲೇ ಇಲ್ಲ. ಏನಿದ್ದರೂ ಐದನೇ ತರಗತಿಯಿಂದ ಮಾತ್ರ. ಪ್ರವಾಸಕ್ಕೆ ಹೋಗುವ ಏಕೈಕ ಅರ್ಹತೆ ಎಂದರೆ ಮಕ್ಕಳು ತಂದೆ ತಾಯಿಗಳನ್ನು ಇನ್ನಿಲ್ಲದಂತೆ ಪೀಡಿಸಿ ಕಾಡಿಸಿ ಪ್ರವಾಸಿ ಭತ್ಯೆಯನ್ನು ಗಿಟ್ಟಿಸಿ ಗುರುಗಳಿಗೆ ತಂದುಕೊಡುವದು. ಕೆಲವು ಮಕ್ಕಳ ಪಾಲಕರಿಗೆ ಆ ಐವತ್ತು ಅರವತ್ತು ರೂಪಾಯಿಗಳೂ ದೊಡ್ಡ ಹೊರೆಯಾಗಿ ಪರಿಣಮಿಸಿದಾಗ, ಮಕ್ಕಳು ತಮ್ಮಲ್ಲಿ ಹಾಸುಹೊಕ್ಕಾದ ಅದ್ಭುತ ಕ್ರಿಯಾಶೀಲತೆಯಿಂದಲೇ ಆ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು.

ಏಳನೆಯ ತರಗತಿಯಲ್ಲಿರುವಾಗ, ಮುರುಡೇಶ್ವರದ ಪ್ರವಾಸಕ್ಕೆ ಬೇಕಾದ ಐವತ್ತೈದು ರೂಪಾಯಿಗಳನ್ನು ನನ್ನ ಸಹಪಾಠಿಗಳಾದ ಗಣಪತಿ ಮತ್ತು ಕಿಶೋರ ಶಾಲೆಯದೇ ಆದ ಗೇರುಮರದ ತೋಪಿಗೆ ಹೋಗಿ ಗುಟ್ಟಾಗಿ ಕೆಜಿಗಟ್ಟಲೇ ಗೇರು ಬೀಜ ಸಂಗ್ರಹಿಸಿ, ಅದನ್ನು ನಮ್ಮೂರಿನ ಪ್ರಸಿದ್ಧ ವ್ಯಾಪಾರಿಯಾದ ವಾಮನ ಶೆಟ್ರಿಗೆ ಮಾರಾಟ ಮಾಡಿ ವೀರೋಚಿತವಾಗಿ ದುಡ್ಡು ತಂದು ಕೆರೆಯ ನೀರನ್ನು ಕೆರೆಗೇ ಚೆಲ್ಲಿದ್ದರು.

ಹೆಚ್ಚುವರಿಯಾಗಿ ಉಳಿದ ಹಣದಲ್ಲಿ ದಿಲ್ದಾರ್ ಆಗಿ ಇಡೀ ಕ್ಲಾಸಿಗೇ ಶೇಂಗಾ ಮತ್ತು ಹುರಿಗಡಲೆ ಪಾರ್ಟಿಯೂ ನಡೆದು ಮುಂದಿನ ಎರಡು ದಿನಗಳಲ್ಲಿ ಮಾಸ್ತರಾದಿಯಾಗಿ ಎಲ್ಲರೂ ಮೂಗು ಮುಚ್ಚಿಕೊಂಡು ನಾನಲ್ಲ..ನೀನು ಎಂಬ ಆರೋಪ ಪ್ರತ್ಯಾರೋಪಗಳ ಆಟಗಳಲ್ಲಿ ಬಿಜಿಯಾಗಿದ್ದೆವು.

ನಮ್ಮ ಉತ್ತರ ಕನ್ನಡದ ಶಾಲೆಗಳೋ ಈ ಶೈಕ್ಷಣಿಕ ಪ್ರವಾಸ ಎನ್ನುವ ವಿಷಯವನ್ನು ಪುಸ್ತಕದಲ್ಲಿರುವ ಸಿಲೆಬಸ್ ನಷ್ಟೇ ಕರಾರುವಾಕ್ಕಾಗಿ ಪಾಲಿಸುತ್ತಿದ್ದರು. ಮೊದಲು ಯಾವ ತರಗತಿಯ ಮಕ್ಕಳು ಎಷ್ಟು ದೂರದವರೆಗೆ ಟ್ರಿಪ್ ಹೋಗಬಹುದೆಂಬ ಸರ್ವೆ ನಡೆಯುತ್ತಿತ್ತು. ಯಾವ ಜಾಗಕ್ಕೆ ಹೋದರೆ ಏನು ಫ್ರೀಯಾಗಿ ಸಿಗುತ್ತದೆ ಎನ್ನುವುದಕ್ಕೆ ಪ್ರಥಮ ಪ್ರಾಶಸ್ತ್ಯ. ಮಠ ಮಂದಿರಗಳಲ್ಲಿ ಊಟ, ಗೇರುಬೀಜ ಫ್ಯಾಕ್ಟರಿಯಲ್ಲಿ ಗೇರುಬೀಜ, ಐಸ್ ಫ್ಯಾಕ್ಟರಿಯಲ್ಲಿ ಐಸ್ ಕ್ಯಾಂಡಿ ಹೀಗೆ..ಆದರೆ ಹೆಂಚಿನ ಫ್ಯಾಕ್ಟರಿಯಲ್ಲಿ ಹೆಂಚು ಫ್ರೀಯಾಗಿ ಕೊಟ್ಟಿದ್ದು ನೆನಪಿಗೆ ಬರುತ್ತಿಲ್ಲ.

ಕನ್ನಡ ಶಾಲೆಯ ಟ್ರಿಪ್ ಗಳಲ್ಲಿ ಮೊದಲನೆಯ ಪ್ರಾಶಸ್ತ್ಯ ಪುಣ್ಯ ಕ್ಷೇತ್ರಗಳು..ಆ ಯಾತ್ರೆಗಳಲ್ಲಿ ಇಡಗುಂಜಿ, ಗೋಕರ್ಣ, ಮುರುಡೇಶ್ವರ, ಗೋರೆ, ಸೋದೆ ಮತ್ತು ಚಿತ್ತಾಪುರ ಮಠಗಳು, ಎರಡನೆಯದಾಗಿ, ಐತಿಹಾಸಿಕ ಸ್ಥಳಗಳಾದ ಮಿರ್ಜಾನ್ ಕೋಟೆ, ಬನವಾಸಿ, ಭಟ್ಕಳ,ಗೇರುಸೊಪ್ಪ…ಇನ್ನು ಆರು ಮತ್ತು ಏಳನೆಯ ತರಗತಿಯ ಮಕ್ಕಳಿಗೆ ಫೀಲ್ಡ್ ಟ್ರಿಪ್ಗಳೂ ಇದ್ದವು….ಅಕ್ಕಪಕ್ಕದ ಹಂಚಿನ ಫ್ಯಾಕ್ಟರಿ, ದೀವಗಿಯ ಐಸ್ ಫ್ಯಾಕ್ಟರಿ ..ಇನ್ನೂ ಮುಂದುವರಿದ ಶಾಲೆಯಾದರೆ ಕುಮಟಾ ಮತ್ತು ಬೇಲೆಕೇರಿ ಬಂದರು. ಇನ್ನು ನಿಸರ್ಗ ಸೌಂದರ್ಯದ ಸ್ಥಳಗಳಾದರೆ ನಮ್ಮ ಇಡೀ ಜಿಲ್ಲೆಯೇ ಭೂಲೋಕ ಸ್ವರ್ಗ.. ಜೋಗ, ಉಂಚಳ್ಳಿ, ಮಾಗೋಡು ಮುಂತಾದ ಜಲಪಾತಗಳು…ಯಾಣಕ್ಕೆ ಚಾರಣ, ದಾಂಡೇಲಿಯ ಅಭಯಾರಣ್ಯ, ಕಾರವಾರದ ಬೀಚು..ಒಂದೇ..ಎರಡೇ..

ಮಕ್ಕಳಿಂದ ಸಂಗ್ರಹಿಸಿದ ಹಣದ ಬೆಲೆ ಚೆನ್ನಾಗಿ ಗೊತ್ತಿದ್ದ ಶಿಕ್ಷಕರು ಮಾಡುತ್ತಿದ್ದ ಹಣಕಾಸು ನಿರ್ವಹಣೆಯ ಕರಡು ಪ್ರತಿಯೇನಾದರೂ ನಮ್ಮ ಸರ್ಕಾರಗಳ ಕೈಗೆ ಸಿಕ್ಕಿದ್ದರೆ ನಮ್ಮ ಜಿಡಿಪಿ ಅಧ್ಯಯನಕ್ಕೆ ಇಸ್ರೋದವರೇ ಬರಬೇಕಿತ್ತು. ‘ಊಟ ಹೋದ್ರೆ ಕೋಟಿ ಲಾಭ’ಎನ್ನುವ ತತ್ವದಲ್ಲಿ ಅಸೀಮ ನಂಬಿಕೆಯಿಟ್ಟ ನಮ್ಮ ಶಿಕ್ಷಕರು ಊಟದ ಸಮಯಕ್ಕೆ ಸರಿಯಾಗಿ ಉಚಿತ ದಾಸೋಹದ ಛತ್ರಗಳಿರುವ ದೇವಸ್ಥಾನದ ಎದುರಿಗೆ ಪ್ರವಾಸದ ವಾಹನ ಬಂದು ನಿಲ್ಲುವ ವ್ಯವಸ್ಥೆ ಮಾಡುತ್ತಿದ್ದರು.

ಇನ್ನು ಮುಂದಿನದು ಮಕ್ಕಳಾದ ನಮ್ಮ ಪ್ರತಿಭಾ ಕಾರಂಜಿ ಕಾರ್ಯಕ್ರಮ. ಹೇಗೆ ಸರತಿ ಸಾಲನ್ನು ಬೇಧಿಸಿ ಮುನ್ನುಗ್ಗುವುದು, ಪಂಕ್ತಿಯಲ್ಲಿ ಬಾಳೆಲೆ ಹಿಡಿದು ಕುಳಿತುಕೊಳ್ಳುವದು, ನಾವು ಮಕ್ಕಳು ಎಂದುಕೊಂಡು ಸ್ವಲ್ಪವೇ ಬಡಿಸುವ ಸಮಾಜದ ಅಂಧಾಚರಣೆಗಳನ್ನು ಬದಲಿಸಿ ‘ಕಂಡರೆ ಮಾಣಿ..ಉಂಡರೆ ಗೋಣಿ’ ಎನ್ನುವ ಪ್ರಗತಿಪರ ನಂಬಿಕೆಗೆ ಬದಲಾಯಿಸುವುದು. ತೆಳುವಾದ ಸಾರು ಓಡಿಹೋಗದಂತೆ ಅನ್ನದ ಕಟ್ಟೆ ಕಟ್ಟುವುದು, ಕೊನೆಯಲ್ಲಿ ಬರುವ ಪಾಯಸಕ್ಕೆ ಹೊಟ್ಟೆಯಲ್ಲಿ ಆದಷ್ಟು ಜಾಗ ಇರುವಂತೆ ನೋಡಿಕೊಳ್ಳುವುದು ಇತ್ಯಾದಿ ಇತ್ಯಾದಿ.

ಇನ್ನು ಪ್ರವಾಸಕ್ಕೆ ಹೋಗುವ ವಾರಗಳ ಮೊದಲೇ ನಮ್ಮ ಅತಿಮುಖ್ಯವಾದ ತಯಾರಿ ಶುರುವಾಗುತ್ತಿತ್ತು. ಕಚ್ಚಾ ಪಟ್ಟಿಗಳಲ್ಲಿ ( ರಫ್ ನೋಟ್ ಬುಕ್) ಉಳಿದ ಖಾಲಿ ಹಾಳೆಗಳನ್ನು ಕತ್ತರಿಸಿ ನೂರಾರು ಚಿಕ್ಕ ಚಿಕ್ಕ ಚೀಟಿಗಳನ್ನಾಗಿ ಮಾಡಿ ಅದರಲ್ಲಿ ‘ನಮ್ಮ ಶಾಲೆಯ ಇಡಗುಂಜಿ ( ಯಾವ ಊರಿಗೆ ಹೋಗುತ್ತೇವೋ ಆ ಹೆಸರು) ಪ್ರವಾಸಕ್ಕೆ ಜಯವಾಗಲಿ’ ಎಂದು ಬರೆದು ಅದನ್ನು ಆದಷ್ಟು ಚಿಕ್ಕದಾಗಿ ಮಡಿಸಿ ಕಟ್ಟುಗಳನ್ನಾಗಿ ಮಾಡಿ ಇಟ್ಟುಕೊಳ್ಳುತ್ತಿದ್ದೆವು. ಯಾರು ಹೆಚ್ಚು ಚೀಟಿಗಳನ್ನು ಬರೆಯುತ್ತಾರೋ ಅವರಿಗೆ ಮುಂದಿನ ಸೀಟು ಬಿಟ್ಟು ಕೊಟ್ಟು ಗೌರವಿಸಲಾಗುತ್ತಿತ್ತು.

ಸೀತಾಪಹರಣವಾಗ ದಾರಿಯುದ್ದಕ್ಕೂ ಸೀತೆ ತನ್ನ ಆಭರಣಗಳನ್ನು ಒಂದೊಂದಾಗಿ ಬೀಳಿಸುತ್ತ ತನ್ನ ಗಮ್ಯದ ಕುರುಹುಗಳನ್ನು ರಾಮನಿಗೆ ತಿಳಿಯಪಡಿಸಿದಳಂತೆ. ನಾವೂ ಹಾಗೆಯೇ ನಮ್ಮ ಪ್ರವಾಸಕ್ಕೆ ಜಯವಾಗಲಿ ಎಂದು ನಮ್ಮ ಬಸ್ಸಿನಲ್ಲೇ ಜೋರಾಗಿ ಕಿರುಚುತ್ತ ಈ ಚೀಟಿಗಳನ್ನು ಕಿಟಕಿಯಿಂದಲೇ ಎಸೆಯುತ್ತಿದ್ದೆವು. ನಮ್ಮ ಬಸ್ಸು ಒಂದು ಸಲವೂ ಅಪಹರಣವಾಗದ್ದರಿಂದ, ಇಡೀ ಊರಿಗೆಲ್ಲ ನಮ್ಮ ಪ್ರವಾಸದ ಬಗ್ಗೆ ಬಿತ್ತರಿಸುವ ಈ ಮಹಾಕಾರ್ಯದ ಘನ ಉದ್ದೇಶದ ಬಗ್ಗೆ ಈಗಲೂ ನನಗೆ ಯಾವ ಕ್ಲಾರಿಟಿಯೂ ಇಲ್ಲ. ಆದರೂ ದಾರಿಯ ಅಷ್ಟೂ ಊರುಗಳಲ್ಲಿ ಚೀಟಿ ಹೆಕ್ಕಿ ಓದಿದ ಜನರು ಯಾವ ಶಾಲೆಯ ಮಕ್ಕಳು ಯಾವ ಊರಿಗೆ ಪ್ರವಾಸಕ್ಕೆ ಹೋಗಿದ್ದರು ಎನ್ನುವ ಬ್ರೇಕಿಂಗ್ ನ್ಯೂಸ್ ಅವರ ಚಾನಲ್ ನಲ್ಲಿಯೇ ಮೊದಲು ಬಿತ್ತರಿಸುತ್ತಿದ್ದರು. ಹ್ಞಾಂ..ಮರೆತಿದ್ದೆ..ನಮ್ಮಲ್ಲೇ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರವಾಸ ಮುಗಿಸಿ ಬರುವಾಗ ‘ನಮ್ಮ… ಪ್ರವಾಸಕ್ಕೆ ಜಯವಾಗಿದೆ’ ಎನ್ನುವ ಚೀಟಿಯನ್ನೂ ಬರೆದು ತಂದು ಕಿಟಕಿಯಲ್ಲಿ ಎಸೆದು ವಿಜಯದ ನಗು ಬೀರುತ್ತಿದ್ದರೆ ಉಳಿದವರದು ಪೆಚ್ಚುಮುಖ..!

ನಮ್ಮ ಇನ್ನೊಂದು ಮುಖ್ಯವಾದ ಸಿದ್ಧತೆಯೆಂದರೆ ದಾರಿಯಲ್ಲಿ ಬೇಕಾಗುವ ತಿಂಡಿ ತೀರ್ಥಗಳದ್ದು. ಪ್ಯಾಕೆಟ್ ತಿಂಡಿಗಳು ಇನ್ನೂ ಅತಿಥಿ ಪಾತ್ರಗಳನ್ನೇ ಮಾಡುತ್ತಿದ್ದವು. ಬಸ್ಸು ಸ್ಟಾರ್ಟ್ ಆಗುತ್ತಿದ್ದಂತೆ ಅಮ್ಮನನ್ನು ಕಾಡಿ ಬೇಡಿ ಮಾಡಿಸಿಕೊಂಡ ತಿಂಡಿ ತಿನಿಸುಗಳ ಹಂಚಿಕೆ ಶುರುವಾಗುತ್ತಿತ್ತು. ಅವಲಕ್ಕಿ, ಮುಂಡಕ್ಕಿ, ರವೆಲಾಡು, ವಿಧವಿಧವಾದ ಉಂಡೆಗಳು, ಚಕ್ಕುಲಿಗಳು ಕ್ಯಾಬಿನೆಟ್ ಖಾತೆಯಂತೆ ನಾಮುಂದು ತಾಮುಂದು ಎಂದು ಬಿಕರಿಯಾಗಿಬಿಡುತ್ತಿದ್ದವು. ನಂತರದ ಸರದಿ ಮುಳ್ಳೇ ಹಣ್ಣು, ಕಾರೆ ಹಣ್ಣು, ಕರಜಲು ಹಣ್ಣು ಮುಂತಾದ ಸ್ವತಂತ್ರ ಖಾತೆಗಳು. ಕೊನೆಯಲ್ಲಿ ನಾನು ಉಪ್ಪು ಖಾರ ತರುತ್ತೇನೆ..ನೀನು ನೆಲ್ಲಿಕಾಯಿ, ಹುಣಿಸೆಕಾಯಿ, ಮಾವಿನಕಾಯಿ ಏನಾದರೂ ತಾ…ಎಂಬ ಸಹಾಯಕ ಮಂತ್ರಿಗಳ ಸರದಿ. ಹೆಚ್ಚಿನ ಮಕ್ಕಳು ಎಲ್ಲರಿಗೂ ಹಂಚಿ ತಿಂದರೆ, ಇನ್ನು ಕೆಲವರು ಈ ಅಪರೂಪದ ತಿಂಡಿಗಳು ತಮಗೇ ಸಿಗಲ್ಲ ಎಂದು ಪ್ರವಾಸದುದ್ದಕ್ಕೂ ತಿನ್ನದೇ ಹಾಗೇ ಮನೆಗೆ ತಂದು ತಿನ್ನುವದೂ ಇತ್ತು! ರಸ್ನಾ ಎನ್ನುವ ಕಿತ್ತಳೆಗಿಂತ ಕಿತ್ತಳೆಯಾದ ಬಣ್ಣ ಬೆರೆಸಿದ ಪಾನೀಯ ನಮ್ಮ ಬೆವರೇಜಿನ ಲಿಸ್ಟಿನಲ್ಲಿ ಪ್ರಮುಖ ಸ್ಥಾನದಲ್ಲಿತ್ತು. ಬಸ್ಸು ಮುಂದೆ ಸಾಗುತ್ತಿದ್ದಂತೆ ಇಂಥ ಅಪವಿತ್ರ ಮೈತ್ರಿ ಯಿಂದ ಹೊಟ್ಟೆಯಲ್ಲಿ ಭಿನ್ನಮತದ ಅಪಸ್ವರ!

ಏನಾದರೂ ಕೊಳ್ಳಲು, ಐಸ್ಕ್ಯಾಂಡಿ ಅಥವಾ ಪೆಪ್ಸಿ ಎಂದು ಕರೆಯುತ್ತಿದ್ದ ಪೊಪ್ಸಿಕಲ್ ತಿನ್ನಲು ನಮ್ಮ ಹತ್ತಿರ ಇರುತ್ತಿದ್ದ ಪಾಕೆಟ್ ಮನಿ ಐದು ಅಥವಾ ಹತ್ತು ರೂಪಾಯಿಗಳು! ಆ ದುಡ್ಡು ಕಳೆಯದಂತೆ ಜೋಪಾನವಾಗಿಡಲು ವಿಧವಿಧದ ಸರ್ಕಸ್ ನಡೆಯುತ್ತಿತ್ತು. ಸೇಫ್ಟಿ ಪಿನ್ನು ಚುಚ್ಚಿದ ಕಳ್ಳಜೇಬುಗಳು, ಬ್ಯಾಗಿನ ಒಳಗಿನ ಕಾಣದ ಕಿಸೆ..ಇನ್ನೂ ಮುಂದೆ ಹೋಗಿ ನಮ್ಮ ಹಣವನ್ನು ಮಾಸ್ತರ ಹತ್ತಿರವೋ..ಅಕ್ಕೋರ ಹತ್ತಿರವೋ ಅಡ ಇಡುತ್ತಿದ್ದೆವು..ಬೇಕಾದಾಗ ಕೊಡುವ ಷರತ್ತಿನೊಂದಿಗೆ. ಮಾಸ್ತರರು ಜೋಳಿಗೆ ತುಂಬ ಮಕ್ಕಳ ನಾಣ್ಯಗಳನ್ನು ತುಂಬಿಕೊಂಡು ಹೋದಕಡೆಯಲ್ಲಲ್ಲ ಟಣಟಣ ಸದ್ದು ಮಾಡುತ್ತ ಪಿಗ್ಮಿ ಕಲೆಕ್ಟರನ ಥರ ಓಡಾಡುತ್ತಿದ್ದರು!

ಇನ್ನು ಹೈಸ್ಕೂಲಿಗೆ ಕಾಲಿಟ್ಟ ಮೇಲೆ ಶೈಕ್ಷಣಿಕ ಪ್ರವಾಸಗಳು ಮೇಕೋವರ್ ಮಾಡಿಸಿಕೊಂಡು ನಮ್ಮ ಜಿಲ್ಲೆಯನ್ನು ದಾಟಿ ವಿಸ್ತರಿಸಿಕೊಂಡವು. ಎರಡು ಮೂರು ದಿನಗಳ ಪ್ರವಾಸಗಳು ಶುರುವಾದವು. ಹಾಗೆಯೇ ನಮ್ಮ ಪ್ರವಾಸಿ ಸ್ಥಳಗಳೂ ಮೂರರ ಕಾಂಬಿನೇಶನ್ನಿನಲ್ಲಿ ಬದಲಾದವು. ಒಂದನೆಯದು ಬಿಜಾಪುರದ(ವಿಜಯಪುರ) ಗೋಳಗುಮ್ಮಟ, ಬಾದಾಮಿ ಮತ್ತು ಪಟ್ಟದ ಕಲ್ಲು..ಇಲ್ಲವಾದರೆ ಮೈಸೂರು, ಶ್ರೀರಂಗ ಪಟ್ಟಣ ಮತ್ತು ರಂಗನತಿಟ್ಟು…ಇನ್ನೊಂದು ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳ. ಇವುಗಳೆಲ್ಲ ಐದಾರು ನೂರರಿಂದ ಒಂದು ಸಾವಿರ ರೂಪಾಯಿಗಳವರೆಗಿನ ದುಬಾರಿ ಪ್ರವಾಸ. ಕೇವಲ ದುಡ್ಡಿದ್ದವರು ಮಾತ್ರ ಹೋಗುತ್ತಿದ್ದರು. ಒಂದೇ ಮನೆಯಲ್ಲಿ ಎರಡು ಮೂರು ಮಕ್ಕಳಿದ್ದರಂತೂ ವರ್ಷಕ್ಕೊಂದೇ ಮಗು ಪ್ರವಾಸದ ಫಲಾನುಭವಿ.

ಮೂರು ದಿವಸಗಳ ಪ್ರವಾಸಕ್ಕೆ ಬೇಕಾಗುವ ಮೂರು ಜೊತೆ ಬಟ್ಟೆಗಳು, ಅದನ್ನು ತುಂಬಲು ಬೇಕಾಗುವ ಬ್ಯಾಗು ಮತ್ತು ಕೈ ಖರ್ಚಿಗೆ ಬೇಕಾಗುವ ಹಣದ ಹೊಂದಿಸುವ ಕೆಲಸಕ್ಕೆ ವಾರಗಳೇ ಬೇಕಾಗಿತ್ತು. ಬಜೆಟ್ ಮಂಡಣೆಯಾಗಿ, ಎಷ್ಟೋ ಸುತ್ತುಗಳ ಚರ್ಚೆ, ವಾಗ್ಯುದ್ಧ, ಧರಣಿ, ನಿರಶನ, ಭಾವೋದ್ರಿಕ್ತ ಕಲಾಪಗಳು ನಡೆದು, ಕೊನೆಗೊಮ್ಮೆ ಅಷ್ಟೋ ಇಷ್ಟು ಹಣ ಬಿಡುಗಡೆಯಾಗುತ್ತಿತ್ತು. ಚಳಿಯೆಂದರೆ ಏನಂದು ಗೊತ್ತೇ ಇರದ ಕರಾವಳಿಯ ನಮಗೆ ಅದರ ಪರಿಚಯ ಮಾಡಿಸಿದ್ದೇ ಈ ಪ್ರವಾಸಗಳು. ಒಬ್ಬಬ್ಬಿರು ವರ್ಷಗಳಿಂದ ಟ್ರಂಕಿನಲ್ಲಿ ಜೋಪಾನವಾಗಿಟ್ಟ ನುಸಿಗುಳಿಗೆಯ ವಾಸನೆ ಹೊಡೆಯುವ ಸ್ವೆಟರೋ ಶಾಲೋ ಧರಿಸಿ ಪ್ರವಾಸದುದ್ದಕ್ಕೂ ಮಿಂಚುತ್ತಿದ್ದರು.

ಹೈಸ್ಕೂಲಿನಲ್ಲೂ ಶಿಕ್ಷಕರ ಆರ್ಥಿಕ ನಿರ್ವಹಣೆ ಯಾವ ಬಹುರಾಷ್ಟ್ರೀಯ ಕಂಪನಿಗಿಂತ ಕಡಿಮೆಯೇನಿರಲಿಲ್ಲ. ಪ್ರವಾಸದ ಒಟ್ಟೂ ಮೂರು ರಾತ್ರಿಗಳಲ್ಲಿ ಎರಡು ರಾತ್ರಿಗಳು ಬಸ್ಸಿನಲ್ಲಿಯೇ ಕಳೆಯುವಂತೆ ನೋಡಿಕೊಂಡು, ಮಧ್ಯದ ಒಂದು ರಾತ್ರಿಗಾಗಿ ಒಂದೊ ಎರಡೊ ಹಾಲ್ ಗಳನ್ನು ಬುಕ್ ಮಾಡಿ ನಮ್ಮನ್ನೆಲ್ಲ ಗಂಡುಮಕ್ಕಳು ಒಂದು ಕಡೆ ಮತ್ತು ಹೆಣ್ಣುಕ್ಕಳು ಇನ್ನೊಂದು ಕಡೆ ಸಾಲಾಗಿ ಮಲಗುವ ವ್ಯವಸ್ಥೆ ಮಾಡುತ್ತಿದ್ದರು. ಆ ಊರಿನಲ್ಲಿರುವ ಹಳೆಯ ವಿದ್ಯಾರ್ಥಿಯೋ, ಪರಿಚಿತರೋ ಇದ್ದರೆ ಅವರನ್ನು ಅವಶ್ಯವಾಗಿ ಭೆಟ್ಟಿಯಾಗಿ ಒಂದು ಊಟದ್ದೊ, ತಿಂಡಿಯದೋ ಖರ್ಚು ಕೂಡ ಉಳಿಸುತ್ತಿದ್ದರು. ಅಲ್ಲಿ ಪರಸ್ಪರ ಪ್ರೀತ್ಯಾದರಗಳೂ ಹಾಗೆಯೇ ಇರುತ್ತಿತ್ತು ಅನ್ನಿ.

ಈ ಪ್ರವಾಸಗಳು ದೊಡ್ಡದಾದ ಮತ್ತು ಅಪರಿಚಿತ ನಗರಗಳಲ್ಲಿ ನಡೆಯುತ್ತಿದ್ದುದರಿಂದ ಹೆಜ್ಜೆ ಹೆಜ್ಜೆಗೂ ವಿಶ್ವಾಸಮತ ಯಾಚಿಸುವಂತೆ ಮಕ್ಕಳ ತಲೆ ಎಣಿಕೆ ನಡೆಯುತ್ತಲೇ ಇರುತ್ತಿತ್ತು. ಅದರ ಮಧ್ಯದಲ್ಲೇ ತಲೆ ತಪ್ಪಿಸಿಕೊಂಡು ರಿಸಾರ್ಟಿಗೆ ಓಡುವ ಶಾಸಕರಂತೆ ಕೆಲವು ಮಕ್ಕಳು ನಾಪತ್ತೆಯಾಗುತ್ತಿದ್ದರು. ಹೆಣ್ಣುಮಕ್ಕಳು ಗುಟ್ಟಾಗಿ ಹೋಗಿ ಸರ, ಬಳೆ, ಟಿಕ್ಲಿ ಮುಂತಾದ ಶಾಪಿಂಗು ಮಾಡಿದ್ದು, ಗಂಡುಮಕ್ಕಳು ತಿಂಡಿ ತಿನಿಸು ಕೊಂಡಿದ್ದು ಮುಂತಾದ ಹಗರಣಗಳು ಮತ್ತು ವಿವಾದಗಳು ಭುಗಿಲೇಳುತ್ತಿದ್ದವು. ಕೈಯಲ್ಲಿ ಹಣ ಇರದ, ಈ ಥರದ ಚಟುವಟಿಕೆಗಳನ್ನು ಮಾಡಲಾಗದ ಕೆಲವು ಅದ್ಭುತ ಪ್ರತಿಭೆಯ ವರದಿಗಾರರು ಈ ಪ್ರಕರಣಗಳನ್ನು ಅತಿರಂಜಿತವಾಗಿ ವರದಿ ಮಾಡಿ ದಿನದ ಕೊನೆಯಲ್ಲಿ ಪಿಟಿ ಸರ್ ಎನ್ನುವ ಲೋಕಾಯುಕ್ತಕ್ಕೆ ಆರೋಪಿಗಳನ್ನು ಒಪ್ಪಿಸಿ ಶಕ್ತ್ಯಾನುಸಾರ ಒದೆಯೋ, ಪೆಟ್ಟೋ ಇಲ್ಲವೇ ಕಪಾಳಮೋಕ್ಷವೋ ಕೊಡಿಸಿದ್ದೂ ಇದೆ. ಪ್ರವಾಸದ ಖುಷಿಯಲ್ಲಿ ಮುಳುಗಿರುತ್ತಿದ್ದ ನಮಗೆ ಅದೆಲ್ಲ ಒಂದು ಲೆಕ್ಕವೇ ಅಲ್ಲ. ಮರುಕ್ಷಣದಲ್ಲೇ ನಾವುಗಳು ಬ್ರೂಕ್ ಬಾಂಡ್ ಚಹಾದಷ್ಟೇ ತಾಜಾ.

ಹಾಗೆ ನೋಡಿದರೆ ನಮ್ಮ ಪೀಳಿಗೆಯವರು ಶಾಲೆಯಲ್ಲಿ ಕಲಿತದ್ದಕ್ಕಿಂತ ಈ ಪ್ರವಾಸಗಳಿಂದ ಕಲಿತ ಜೀವನದ ಪಾಠಗಳೇ ಅಧಿಕ. ಈಗಿನ ಶಾಲೆಗಳಲ್ಲಿ, ತರಗತಿಗಳಲ್ಲಿ ಕಲಿಸಲು ಹರಸಾಹಸ ಮಾಡುವ ಬಹುಮುಖ್ಯ ಮೌಲ್ಯಗಳಾದ ಪರಸ್ಪರ ಹೊಂದಾಣಿಕೆ, ನಮ್ಮ ನಮ್ಮ ಕಂಫರ್ಟ ಝೋನ್ ಗಳನ್ನು ಬಿಟ್ಟು ಇರುವುದು, ಭಿನ್ನ ಭಾಷೆ, ಪರಿಸರ, ಸಂಸ್ಕೃತಿಗಳ ಅರಿವು ಮುಂತಾದ ನಾಳಿನ ಬದುಕಿಗೆ ಬೇಕಾಗುವ ವಿಷಯಗಳು ನಮ್ಮ ಪಯಣ ಮುಗಿಯುವಷ್ಟರಲ್ಲಿ ನಮಗರಿವಿಲ್ಲದಂತೆ ಮನದಟ್ಟಾಗಿಬಿಡುತ್ತಿತ್ತು.

ಬಾಲ್ಯದಲ್ಲಿ ನಾವು ಶಾಲಾ ಪ್ರವಾಸಗಳಿಗಿಂತ ಹೆಚ್ಚಾಗಿ ಹೋಗಿದ್ದು ನೆಂಟರ ಮನೆಗೆ ಮತ್ತು ಅಜ್ಜನಮನೆಯೆಂಬ ತಾಯಿಯ ತವರುಮನೆಗೆ. ಪ್ರತಿ ಬೇಸಿಗೆ ರಜೆಯಲ್ಲೂ ಕಡ್ಡಾಯವಾಗಿ ಹೋಗುತ್ತಿದ್ದ ಈ ಪ್ರವಾಸವೇ ನಮಗೆಲ್ಲರಿಗೂ ಅತಿಪ್ರಿಯವಾಗಿತ್ತು. ಕೂಡುಕುಟುಂಬಗಳೇ ಅಧಿಕವಾಗಿದ್ದ ಆ ಕಾಲದಲ್ಲಿ ಅಜ್ಜ, ಅಜ್ಜಿ, ಮಾವಂದಿರು, ಅತ್ತೆಯಂದಿರು, ಚಿಕ್ಕಮ್ಮಂದಿರು ಮತ್ತು ಅವರ ಮಕ್ಕಳಿಂದ ತುಂಬಿರುತ್ತಿದ್ದ ಅಜ್ಜನಮನೆಯಲ್ಲಿ ನಾವು ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳಂತೆ ವಿಹರಿಸುತ್ತಿದ್ದೆವು. ನಮ್ಮ ಅಜ್ಜನಮನೆಯ ಸಾಹಸಗಾಥೆಗಳು ಯಾವ ಹ್ಯಾರಿ ಪಾಟರ್ ಕಥೆಗಳಿಗಿಂತ ಕಮ್ಮಿಯೇನಿಲ್ಲ.

ಅದನ್ನೆಲ್ಲ ಈಗ ಹೊರಳಿ ನೆನೆದಾಗ, ಈಗಿನ ಮಕ್ಕಳು ಪ್ರವಾಸವಿರಲಿ, ಸ್ವಚ್ಛಂದವಾಗಿ ಶಾಲೆಗೆ ಹೋಗುವ, ಸಹಪಾಠಿಗಳ ಜೊತೆ ಮುಕ್ತವಾಗಿ ಬೆರೆಯುವ ಅವಕಾಶದಿಂದಲೂ ವಂಚಿತರಾಗಿರುವುದು ಬೇಸರ ತರಿಸುತ್ತದೆ. ಯುಗಯಗಾದಿ ಬಂದು ಹೋಗಿ, ಕಾಲ ಬದಲಾಗಿ, ಈಗ ನಾವು ಎಷ್ಟೇ ಐಷಾರಾಮಿ ಪ್ರವಾಸ ಮಾಡಿದರೂ ಆ ದಿನಗಳ ಮುಗ್ಧ ಸಂತಸ ಮತ್ತು ಶುದ್ಧ ಸಂಭ್ರಮ ಮರಳಿ ಬರಲಾರದು.

‍ಲೇಖಕರು Admin

February 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. AK

    This article took me back to my good old school days in “Sarakari Hiriya Prathamic Shale”. I am also from uttara kannada district and whatever you have written is so true . Those days will never come back !. We Never got tired of writing those Jayavagali cheeties those were the days filled with pure innocence !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: