ಸುಬ್ರಾಯ ಮತ್ತೀಹಳ್ಳಿ ಓದಿದ ‘ಯಾನ’

ಸುಬ್ರಾಯ ಮತ್ತೀಹಳ್ಳಿ

ಪ್ರವಾಸ ಪ್ರವೃತ್ತಿ ಬೆಳೆದಂತೇ ಪ್ರವಾಸ ಸಾಹಿತ್ಯಕ್ಕೂ ಸುಗ್ಗಿ ಮೂಡುತ್ತಿದೆ. ದೂರ ದೂರದ ಪ್ರದೇಶಗಳನ್ನು, ದೇಶ ವಿದೇಶಗಳನ್ನು ಸುತ್ತುವ, ಅದರ ಅನುಭವಗಳನ್ನು ದಾಖಲಿಸುವ ಉತ್ಸಾಹ ಕಂಡಾಗ ಖುಷಿಯ ಜೊತೆಗೇ ಸಂಕಟವೂ ಮೂಡುತ್ತದೆ. ಅಲ್ಲಿ ತನಗಾದ ಖುಷಿ ಕಷ್ಟಗಳ ವಿವರಗಳೇ ಇಡಿಕಿರಿದು ತುಂಬಿ, ಅಲ್ಲಿಯ ವೈಶಿಷ್ಟ್ಯಗಳು ಕಣ್ಮರೆಯಾಗುವ, ಸ್ವಯಂ ವೈಭವೀಕರಣವೇ ವಿಜ್ರಂಭಿಸುವಾಗ, ಅದೇಕೆ ಬರೆಯಬೇಕಿತ್ತೋ ಎಂದೆನ್ನಿಸಿದರೆ ಆಶ್ಚರ್ಯವಿಲ್ಲ. ಆದರೂ ಕನ್ನಡದ ನವೋದಯಕಾಲದಿಂದ ಈವರೆಗೂ ನೂರಾರು ಕೃತಿಗಳಲ್ಲಿ ಅಪರೂಪದ ಅನನ್ಯವಾದ ಸಾಕಷ್ಟು ಪ್ರವಾಸ ಕಥನಗಳು ಬಂದಿರುವುದು ನಿಜಕ್ಕೂ ಹೆಮ್ಮೆತರುವ ಸಂಗತಿ.

ಆದರೆ ಇತ್ತೀಚೆಗೆ ನಮ್ಮ ಉತ್ತರಕನ್ನಡ ಜಿಲ್ಲೆಯವರೇ ಆದ ಚಿಂತಕ ಪತ್ರಕರ್ತ, ಕತೆಗಾರ ಗಂಗಾಧರ ಕೊಳಗಿ ಅತ್ಯಂತ ವಿಶಿಷ್ಟವಾದ, ಅಷ್ಟೇ ಅಪರೂಪವಾದ ತಿರುಗಾಟದ ಅನುಭವಗಳನ್ನು, ರಸಮಯ ಶೈಲಿಯಲ್ಲಿ ಆಪ್ತವಾಗಿ ಕಟ್ಟಿಕೊಟ್ಟಿರುವುದು, ಶ್ಲಾಘನೀಯ ಅದು ದೂರದ ಹಿಮಾಲಯದ್ದೋ, ಅಮೇರಿಕಾದಂತ ದೂರದೇಶದ್ದೋ ಅಲ್ಲ.ಕಡೆಗಣಿಸುತ್ತೇವೆ.

ಇಲ್ಲೇ ನಾವಿರುವ ಭೌಗೋಲಿಕವಾಗಿ ನಮಗೆಲ್ಲ ಸುಪರಿಚಿತವಾಗಿರುವ ತಾಣದ ಆಂತರ್ಯಕ್ಕೆ ಇಳಿದಿರುವ ಕಥನವಿದು. ಅತೀ ಪರಿಚಯ ಅತೀ ಅವಜ್ಞೆಗೂ ಒಳಗಾಗುವುದು ಸಹಜ. ದಿನನಿತ್ಯ ಒಡನಾಡುವ ಮನುಷ್ಯನೊಬ್ಬನ ಅಂತರಂಗದ ವಿಶೇಷವನ್ನು ನಾವು ಗಮನಿಸಲಾರೆವು. ನಡೆದಾಡುವ ನೆಲದ ಮಹಿಮೆ ಯ ಬಗೆಗೆ ಅಲಕ್ಷಿಸುತ್ತೇವೆ. ಒಡನಾಡುವ ಸುತ್ತಲಿನ ಪರಿಸರದ ಸೂಕ್ಷ್ಮ ಅವಲೋಕನವಿಲ್ಲದೇ ಅದರ ಮಹತ್ವವನ್ನು ಕಡೆಗಣಿಸುತ್ತೇವೆ.

ಅದೆಲ್ಲಿಯದೋ ದೇಶ ವಿದೇಶಗಳ ಬೆರಗು ಮೂಡಿಸುವ ದೃಶ್ಯಾವಳಿಗಳನ್ನು ದೂರದರ್ಶನದಲ್ಲಿ ಕಂಡು, ಪ್ರತ್ಯಕ್ಷನೋಡಿಬರುವ ಕನಸು ಕಾಣುತ್ತೇವೆ. ನಮ್ಮ ಸುತ್ತಲಿನ ಮಹತ್ವಪೂರ್ಣ ದೃಶ್ಯಗಳನ್ನ, ಪಶು ಪಕ್ಷಿ ಸಸ್ಯಾದಿಗಳನ್ನ ಅಲಕ್ಷಿಸುತ್ತೇವೆ. ಮನೆಗೆದ್ದು ಮಾರುಗೆಲ್ಲುವವರು ನಾವಲ್ಲ.
ಗಂಗಾಧರ್‌ ದೇಶ ವಿದೇಶ ಸುತ್ತಿದವರಲ್ಲ. ಮಹತ್ವದ ಗ್ರಂಥಗಳ ಒಡನಾಡುತ್ತ, ತನ್ನ ಪರಿಸರವನ್ನೇ ಆಳವಾಗಿ ಬಗೆದು, ಚಿಕಿತ್ಸಕ ದೃಷ್ಟಿಕೋನದಿಂದ ವೀಕ್ಷಿಸುತ್ತ, ಅದರ ವೈಶಿಷ್ಟ್ಯಗಳನ್ನು ಬರಹದ ಮೂಲಕ ದಾಖಲಿಸುತ್ತಿರುವ ಅಪರೂಪದ ವ್ಯಕ್ತಿ.

ಬಿಡುವಾದಾಗೆಲ್ಲ ತೋಟ ಪಟ್ಟಿ, ಕಾಡು ಗುಡ್ಡ, ನದಿ ಸಾಗರಗಳನ್ನು ಸಂದರ್ಶಿಸುತ್ತ, ಒಂಟಿಯಾಗಿ ಧ್ಯಾನಿಸುತ್ತಿರುವ ವಿಚಿತ್ರ ವ್ಯಕ್ತಿ. ಹಾಗೆಂದು ತಮ್ಮ ಪರಿಸರದ, ಪ್ರಾಣಿ ಪಕ್ಷಿ ಸಸ್ಯಾದಿಗಳ ಅಗಾಧ ಅನುಭವಗಳನ್ನೆಲ್ಲವನ್ನೂ ಅಕ್ಷರಕ್ಕಿಳಿಸದೇ ತಮ್ಮೊಳಗೇ ಇಟ್ಟುಕೊಂಡ ಅಸಾಧ್ಯ ಜಿಪುಣರೂ ಅವರೇ. ಆದರೂ ಅವುಗಳಲ್ಲಿ ಕೆಲವನ್ನು ದಾಖಲಿಸುವ ಸಾಹಸವನ್ನು ಕೈಗೊಂಡುದು ನಿಜಕ್ಕೂ ಖುಷಿತರುವ ಸಂಗತಿ.

ಲೋಕಾರ್ಪಣಗೊಂಡಿರುವ ಪ್ರಸ್ತುತ ಕೃತಿ ʻʻ ಯಾನ ʼʼ ಸಾವಿರಾರು ಮೈಲಿ ದೂರದ ರಮ್ಯವಿವರಗಳಲ್ಲ. ನಮ್ಮದೇ ಪಶ್ಚಿಮ ಘಟ್ಟ, ನಮ್ಮದೇ ಶರಾವತಿ ನದಿ ಯ ಒಡನಾಟದ ಕುತೂಹಲಕರ ಸಂಗತಿಗಳ ಆಪ್ತ ಅನುಭವಗಳ ಪುಟ್ಟ ಗುಚ್ಛವಾಗಿದೆ. ಮೂರೇಮೂರು ಕ್ಷೇತ್ರಾನುಭವಗಳ ದಾಖಲೆ, ನಮ್ಮನ್ನು ನಮ್ಮದೇ ನೆಲದಲ್ಲಿ ಅಚ್ಚರಿಗೆ ಒಳಗಾಗಿಸುತ್ತದೆ. ಹಾಗೆಂದು ಸಾಂಪ್ರದಾಯಿಕ ಪ್ರವಾಸ ಕಥನಕ್ಕಿಂತ ಭಿನ್ನ ಮಾದರಿಯಲ್ಲಿ ಕೃತಿ ಅಭಿವ್ಯಕ್ತಗೊಂಡಿದೆ.

ಪರಿಸರದ ವಿಭಿನ್ನ ಒಡಲೊಳಗಿದ್ದಾಗ ಗಂಗಾಧರ್‌ ಅಂತರಂಗದ ಶೋಧನೆಗೂ ಇಳಿದು ಬಿಡುತ್ತಾರೆ. ಕಾಡನ್ನು ಆಧುನಿಕ ಮನುಷ್ಯ ಒಂದು ರೀತಿಯಲ್ಲಿ ವಿರೋಧಿಯಾಗಿಯೂ ಪರಿಗಣಿಸುತ್ತ, ಸ್ವಾರ್ಥಕ್ಕೆ ಬಳಸಿಕೊಳ್ಳುತ್ತ, ಅವ್ಯಾಹತವಾಗಿ ಸವರಿ ನಾಶಗೈಯ್ಯುವುದೋ, ಬೆಳೆಗಳಿಗೆ ಹಾನಿ, ಸಾಕುಪ್ರಾಣಿಗಳಿಗೆ ಹಾನಿ ಎಂದು ಕಾಡು ಪ್ರಾಣಿಗಳನ್ನು ನಿಷ್ಕರುಣೆಯಿಂದ ಬೇಟೆಯಾಡುವುದೋ ಕಂಡಾಗ ಕನಲುತ್ತಾರೆ.

ಬೆಳಗಾವಿಯಿಂದ ಪ್ರಾರಂಭಿಸಿ ಮೈಸೂರಿನ ವರೆಗಿನ ಸುಮಾರು ಒಂದೂವರೆ ಸಾವಿರ ಕಿಲೋಮೀಟರ್‌ ದೂರದ ಸೈಕಲ್‌ ಪ್ರವಾಸದ ರೋಚಕ ವಿವರಗಳು, ಮೊದಲನೆಯ ಸುದೀರ್ಘ ಲೇಖನದಲ್ಲಿ ಬಿಚ್ಚಿಕೊಂಡರೆ, ಶರಾವತಿ ನದಿಗೆ ನಿರ್ಮಿಸಿದ ಲಿಂಗನಮಕ್ಕಿ ಜಲವಿದ್ಯುತ್‌ ಆಣೇಕಟ್ಟಿನಿಂದ ನದಿಯ ಹಿನ್ನೀರಿನಲ್ಲಿ, ಪುಟ್ಟ ದೋಣಿಯಮೇಲೆ, ಕುಳಿತು, ಹೊಸನಗರದ ವರೆಗಿನ ಮೂರು ರಾತ್ರಿ ಮೂರು ಹಗಲುಗಳ ಜಲಯಾನದ ಮೈ ಜುಮ್ಮುದಟ್ಟಿಸುವ ವರ್ಣನೆ ಎರಡನೆಯ ಲೇಖನದಲ್ಲಿ ಮೂಡಿದೆ.

ಸ್ವಂತ ಊರಿನ ಪಕ್ಕದಲ್ಲಿಯೇ ಇರುವ ದಟ್ಟ ಕಾಡಿನ ಒಳಗಿನ ಅಪರೂಪದ ಸಸ್ಯ ʻʻ ಚೌತಿ ಮೆಣಸಿನ ಬಳ್ಳಿʼʼ ಯ ಶೋಧನೆಗಾಗಿ, ಸುರಿಯುವ ಮಳೆಯಲ್ಲಿಯೇ ಕಾಡು ನುಗ್ಗಿದ ಸಾಹಸ ದ ವಿವರಗಳು ಆಸಕ್ತಿ ಕೆರಳಿಸುತ್ತದೆ. ಪ್ರಾರಂಭದಲ್ಲಿ ಲೇಖಕರು ತಮ್ಮ ಬಾಲ್ಯಕ್ಕೆ ಮರಳುತ್ತಾರೆ. ಬಾಲ್ಯದ ತುಂಬೆಲ್ಲ ಸೈಕಲ್‌ ಹುಚ್ಚಿನಲ್ಲಿ ಬಳಲುವ ಮಕ್ಕಳು, ಯಾರೂ ಇಲ್ಲದ ಸಂದರ್ಭಸಿಕ್ಕರೆ ಸಾಕು ಯಾರೋ ನಿಲ್ಲಿಸಿದ ಸೈಕಲ್ಲನ್ನು ಅಪಹರಿಸಿ ಸವಾರಿಮಾಡುವುದನ್ನು ಬಿಡುತ್ತಲೇ ಇರಲಿಲ್ಲ.

ಸೈಕಲ್‌ ಒಡೆಯ ಬಂದು ನೋಡಿ, ಎರಡು ತಪರಾಕಿಯಿಟ್ಟು, ಬೈಗಳಸುರಿಸಿ ಹೋದರೂ ಕ್ಯಾರೇ ಎನ್ನದ ಮಕ್ಕಳು, ಮತ್ತೊಬ್ಬರ ಸೈಕಲ್‌ ಎಲ್ಲಿದೆ ಎಂದು ನೋಡುತ್ತಿದ್ದರು. ಲೇಖಕರೂ ಹಾಗೆಯೇ. ಇದೀಗ ಐವತ್ತು ದಾಟಿದ ಎಲ್ಲ ಪುರುಷರ ಬಾಲ್ಯವೂ ಸಾಮಾನ್ಯವಾಗಿ ಹಾಗೆಯೇ ಇತ್ತು. ಆಗ ಸೈಕಲ್‌ ಎಂದರೆ ಹಣವಂತರ, ಪ್ರತಿಷ್ಠಿತರ ಸೊತ್ತಾಗಿತ್ತು. ಮಕ್ಕಳಿಗೆ ಮಾತ್ರ ಅದು ಕೇವಲ ಕನಸಾಗಿತ್ತು.

ಎಸ್ಎಲ್ಲೆನ್‌ ಸ್ವಾಮಿ, ಚಾರಣವಾಗಲಿ, ಜಲಯಾನವಾಗಲೀ, ಆ ಕ್ಷೇತ್ರದಲ್ಲಿ ತಜ್ಞತೆಯುಳ್ಳವರು. ಸದಾ ಅಂಥ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಲ್ಲದೇ ಯುವ ಸಮುದಾಯವನ್ನು ಸಾಹಸ ಕ್ರೀಡಾ ಕ್ಷೇತ್ರಕ್ಕೆ ಆಹ್ವಾನಿಸುತ್ತ, ಅವರಿಗೆ ಸೂಕ್ತ ತರಬೇತಿ ನೀಡುತ್ತಿರುವ ಉತ್ಸಾಹಿಗಳು ಅವರು. ಅವರದೇ ಮುಖಂಡತ್ವದಲ್ಲಿ ನಡೆದ ಅಭಿಯಾನವಿದು.

ಎರಡನೆಯ ಲೇಖನ ಜಲಯಾನಕ್ಕೆ ಸಂಬಂಧಿಸಿದ್ದು. ಶರಾವತಿ ಹಿನ್ನೀರ ಪಯಣ. ಅದೂ ಸಹ ಸ್ವಾಮಿಯವರದೇ ಕಲ್ಪನೆಯ ಕೂಸು. ಕೃತಿಯಲ್ಲಿ ಅತ್ಯಂತ ಮನಮೋಹಕವಾಗಿ, ನೀರಪ್ರಪಂಚವನ್ನು ಅನಾವರಣ ಗೊಳಿಸಿದ ಲೇಖನವಿದು. ಸರಳ ಸುಭಗ ಶೈಲಿ, ಸುತ್ತಲಿನ ಪ್ರಕೃತಿ ವರ್ಣನೆ, ಪುಟ್ಟ ದೋಣಿಯಲ್ಲಿ, ಪ್ರವಾಹದ ವಿರುದ್ದ ಹುಟ್ಟುಹಾಕುತ್ತ ಸಾಗುವಾಗಿನ ಸಮಸ್ಯೆ, ಹಗಲಿನ ಬಿಸಿಲುರಿ, ರಾತ್ರಿ ಚಳಿಯ ಕಚಕುಳಿಯಲ್ಲಿಯೂ, ನೀರಮೇಲಣ ಕ್ಷಣಗಳ ರೋಚಕತೆಗಳು ಓದುಗರನ್ನು ಇಂಥ ಸಾಹಸಕ್ಕೆ ಆಹ್ವಾನಿಸುತ್ತದೆ.

ಜಲಯಾನದ ಕನಸು ಚಿಗುರಿದ್ದೂ ತಮ್ಮ ವಿಶೇಷ ಗ್ರಂಥಾಧ್ಯಯನದಿಂದ ಎನ್ನುತ್ತ, ಅದರ ಮೂಲವನ್ನು ಪ್ರಸ್ಥಾಪಿಸುತ್ತಾರೆ. ʻʻ ನನಗೆ ಮೊದಲಿಂದಲೂ ಸಮುದ್ರಯಾನದ ಬಗೆಗೆ ಸೆಳೆತವಿದ್ದೇ ಇದೆ. ಒಮ್ಮೆಯೂ ಸಮುದ್ರದಲ್ಲಿ ಹಡಗಿರಲಿ, ದೋಣಿಯಲ್ಲಿಯೂ ಹೋಗಿರದ ನನಗೆ ಆಬಗ್ಗೆ ಕುತೂಹಲ ಹುಟ್ಟಿಸಿದ್ದು ನಾರ್ವೆಯ ʻʻಥಾರ್‌ ಹೆಯರ್‌ ಡಾಹಾಲ್‌ʼʼ ಅವರ ʻ ದಿ ಕಾನ್‌ ಟೆಕಿ ಎಕ್ಸಪೆಡಿಶನ್‌ʼ ಎನ್ನುವ ಪುಸ್ತಕ.

ಮೊಳೆಗಳನ್ನು ಬಳಸದೇ ಹಗ್ಗಗಳಿಂದ ಒಂಭತ್ತು ಬಾಲ್ಸಾ ಮರಗಳ ದಿಮ್ಮಿಗಳಿಂದ ಕಟ್ಟಿಕೊಂಡ, ತೆಪ್ಪವೊಂದರಲ್ಲಿ ಐವರು ಸಹೋದ್ಯೋಗಿಗಳೊಂದಿಗೆ ದಕ್ಷಿಣ ಅಮೇರಿಕದಿಂದ ಸಾವಿತಾರು ಮೈಲಿ ದೂರದ ಪಾಲಿನೇಷಿಯನ್‌ ದ್ವೀಪಕ್ಕೆ ನೂರಾಎಂಟು ದಿನಗಳ ಕಾಲ ಮಾಡಿದ ಜಲಯಾನದ ಅನುಭವದ ಆ ಕನ್ನಡ ಅನುವಾದದ ಪುಸ್ತಕದ ಓದು ಮೈ ನವಿರೇಳಿಸಿತ್ತು. ಎಂದಾದರೂ ಸಮುದ್ರದಲ್ಲಿ ಯಾನ ಮಾಡಬೇಕು ಎಂದು ಕನಸು ಕಂಡಿದ್ದೆ.ʼʼ ಅದು ಇಲ್ಲಿ ಈಮೂಲಕ ನನಸಾಯಿತು ಎಂದೆನ್ನುತ್ತಾರೆ.
ಮೂರನೆಯ ಲೇಖನ ಪುಟ್ಟದು. ಅಪರೂಪದಲ್ಲಿ ಪಶ್ಚಿಮ ಘಟ್ಟದಲ್ಲಿ ದೊರಕುವ ಚೌತಿ ಕಾಳುಮೆಣಸಿನ ಅನ್ವೇಷಣೆಯ ಸಾಹಸ, ಬಳ್ಳಿ ಅಪರೂಪವಾದರೂ ಕಾಡಿನ ಅನುಭವ, ಅಲ್ಲಿಯ ರಕ್ತಹೀರುವ ಉಂಬಳ, ಕಾಡುಪ್ರಾಣಿಗಳ ಆವಾಸದ ವಿವರಗಳು ಆಕರ್ಷಕವಾಗಿ ಮೂಡಿ ಬಂದಿವೆ.

ಗಂಗಾಧರ ಕೊಳಗಿ ಯವರ ಗಾಢ ಮೌನದ ಅಳದಲ್ಲಿ, ಪರಿಸರದ ಅಸಂಖ್ಯಾತ ಜ್ಞಾನ ಹುದುಗಿದೆ. ಅವರ ಕತ್ತಲೆ ಕಾನು, ಕಾದಂಬರಿಯಾಗಲೀ, ಬರೆದ ಕೆಲವೇ ಕೆಲವು ಕತೆಗಳಲ್ಲಿಯಾಗಲೀ, ಪರಿಸರದ ಜನಜೀವನ, ಸಸ್ಯಸಂಪತ್ತುಗಳೇ ಜೀವಂತವಾಗಿ ಮೂಡಿಬಂದಿವೆ. ಹಲವು ವರ್ಷಗಳ ಪೂರ್ಣಚಂದ್ರ ತೇಜಸ್ವಿಯವರ ಆಪ್ತ ಒಡನಾಟ ಗಂಗಾಧರರನ್ನು ಸೂಕ್ಷ್ಮ ಪರಿಸರ ಪರಿವ್ರಾಜಕರನ್ನಾಗಿಯೇ ಸೃಷ್ಟಿಸಿಬಿಟ್ಟಿದೆ.

ಕೃತಿಯ ಬೆನ್ನುಡಿಯಲ್ಲಿ ಲಿಖಿತ ಗೊಂಡ ಮಾತುಗಳು ಅರ್ಥಪೂರ್ಣವಾಗಿವೆ. ʻʻ ಈ ಕಥನದ ಪ್ರವಾಸ ಅಥವಾ ಅಲೆದಾಟವೂ ಭಿನ್ನವಾದದ್ದೇ. ಆರಾಮವಾಗಿ, ಮೊದಲ ಹೆಜ್ಜೆಯಲ್ಲೇ ಕೊನೆಯ ನೋಟದಲ್ಲಿ ಇಂಥದ್ದೇ ಸಿಗುತ್ತದೆ ಎನ್ನುವ ಪೂರ್ವನಿಶ್ಚಯದ ಸಿದ್ಧಮಾದರಿಯದ್ದಲ್ಲ.

ಪ್ರತೀ ಹೆಜ್ಜೆಯಲ್ಲೂ ಅಪಾಯ ಎದುರಾಗಬಹುದಾದ ಸಾಧ್ಯತೆಯಿದ್ದರೂ ಹೊಸದನ್ನ ಹುಡುಕುವ ಕಾಣುವ ಕುತೂಹಲದ್ದು. ಯಾನದ ಅಂತ್ಯದಲ್ಲಿ ಏನು ದಕ್ಕುತ್ತದೆ ಎನ್ನುವುದೇ ನಿಗೂಢವಾಗಿರುವ ಈ ಅನುಭವ ಕಥನ ಒಂದು ರೀತಿಯಲ್ಲಿ ಆಧ್ಯಾತ್ಮಿಕ ಶೋಧನೆಯಂತೇ ಭಾಸವಾಗುತ್ತದೆ.ʼʼ

ಹೇಳಿಕೇಳಿ ಸಿದ್ಧಾಪುರ ತಾಲೂಕು ತನ್ನ ದಟ್ಟಾರಣ್ಯ, ಗಗನಚುಂಬಿ ಪರ್ವತಗಳ ಒಡಲಲ್ಲಿ, ಇನ್ನೂ ಅದೆಷ್ಟೋ ರೋಚಕ ಸಂಗತಿಗಳನ್ನು ಹುದುಗಿಸಿಟ್ಟುಕೊಂಡಿದೆ. ಜೋಗಾ ಜಲಪಾತದ ಆಚೀಚೆಗಿನ ದಟ್ಟಾರಣ್ಯವಂತೂ ವಿಶ್ವದಲ್ಲೇ ಅಪರೂಪವಾದ ಅಸಂಖ್ಯಾತ ಸಸ್ಯಗಳನ್ನು ಹೊಂದಿದೆ. ಸಿಂಗಳೀಕನಂಥ ಅಪರೂಪದ ಪ್ರಭೇದದ ತವರೂರು ಅದು. ಕಾನನಧ್ಯಾನಿ ಗಂಗಾಧರರ ಲೇಖನಿಯಿಂದ ಇಂಥಹ ಇನ್ನಷ್ಟು ಆಸಕ್ತಿದಾಯಕ ಅನುಭವಗಳು ಹರಿದು ಬರಲೆಂದು ಹಾರೈಸುತ್ತಿದ್ದೇನೆ.

‍ಲೇಖಕರು Admin

February 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನೂತನ

    ಗಂಗಾಧರ ಕೊಳಗಿಯವರ ಸೂಕ್ಷ್ಮ ಬರಹಗಳು ಪರಿಚಯವನ್ನು ಸೊಗಸಾಗಿ ಮಾಡಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: