ನಮ್ಮಮ್ಮ ಶ್ರೀಮತಿ ಗಿರಿಜಮ್ಮ..

ಶಶಿಧರ್‌ ಭಾರಿಘಾಟ್

ನಮ್ಮಮ್ಮ (ನಾವು ಐದು ಜನ ಮಕ್ಕಳು) ಶ್ರೀಮತಿ ಗಿರಿಜಮ್ಮ! ಕೆ.ಅರ್.ಪೇಟೆ ತಾಲ್ಲೂಕಿನ ಒಂದು ಸಣ್ಣ ಗ್ರಾಮ ಮಾದಪುರ. ಅಮ್ಮನ ತವರೂರು. ನಮ್ಮ ತಾತ ಬೆಂಗಳೂರು ನಗರಸಭೆ (ಪಾಲಿಕೆ ?) ಯಲ್ಲಿ ಕೆಲಸದಲ್ಲಿ ಇದ್ದರು.ಹಾಗಾಗಿ ಅಮ್ಮ ಒಂದು ರೀತಿಯಲ್ಲಿ ಬೆಂಗಳೂರಿನವರು, ಹುಟ್ಟಿನಿಂದಲೇ. ವಿಶ್ವೇಶ್ವರಪುರದಲ್ಲೇ ಆಡಿ, ಬೆಳೆದು, ಶಾಲೆ ಕಲಿತು ಮದುವೆಯಾಗಿ ಬಂದಿದ್ದು ಅಕ್ಕಿಹೆಬ್ಬಾಳು ಗ್ರಾಮದ ಒಂದು ಕೃಷಿ ಕಾಯಕದ ಕುಟುಂಬಕ್ಕೆ. ನಮ್ಮಪ್ಪ ಸಿಕ್ಕಿದ್ದ ಸರ್ಕಾರಿ ಕೆಲಸ ತೊರೆದು ಜಮೀನು ನೋಡಿಕೊಳ್ಳಲು ಊರಿಗೆ ಬಂದಿದ್ದರು.

ನನ್ನ ಚಿಕ್ಕಪ್ಪ ಕೂಡ ಬಿಎಸ್ಸಿ ಓದುತ್ತಿದ್ದವರು ವ್ಯವಸಾಯಕ್ಕೆ ಮನಗೊಟ್ಟು ಬಂದವರು.ನನ್ನ ತಾತ ಭಾರಿಘಾಟ್ ಕೃಷ್ಣಪ್ಪ. ಅಜ್ಜಿ ಪೊನ್ನಂಪೇಟೆಯ ಬಾಲಮ್ಮ. ಇನ್ನು ನನ್ನ ಅಮ್ಮನ ವಿಷಯಕ್ಕೆ ಬರುವುದಾದರೆ… ಬೆಂಗಳೂರಿನ ಬೆರಗು ಲೋಕದಿಂದ ನಮ್ಮಹಳ್ಳಿಗೆ ನಂದಾದೀಪದಂತೆ ಬಂದು, ಅವರ ನೆನಪನ್ನು ನಂದದಂತೆ ಜನರ ಮನದಲ್ಲಿ ಕಾಪಿಟ್ಟು ಹೋಗಿದ್ದಾರೆ.

ಇಂದಿಗೂ ನಮ್ಮ ಐಡಂಟಿಟಿ ಗಿರಿಯಮ್ಮನ ಮಕ್ಕಳೆಂದೇ!. ಒಂದು ರೀತಿಯ ಹಠದ ಸ್ವಭಾವ ಹಿಡಿದ ಕೆಲಸವನ್ನು ಮಾಡೇತೀರುವ ಛಲ. ನಗರದಿಂದ ಹಳ್ಳಿಗೆ ಬಂದು ಅಲ್ಲಿಯ ಜೀವನಕ್ಕೆ ಒಗ್ಗಿಕೊಂಡು, ಸೌದೆಒಲೆಯಲ್ಲಿ ಅಡುಗೆ ಮಾಡುತ್ತಾ ಗದ್ದೆಯಲ್ಲಿ ದುಡಿಯುವ ಶ್ರಮಜೀವಿಗಳಿಗೆ ರಾಗಿಮುದ್ದೆ ಬೇಯಿಸಿ, ಕಟ್ಟುತ್ತಾ, ಬಿಡುವಿನ ವೇಳೆಯಲ್ಲಿ ಊರ ಸೊಸೆಯರನ್ನು ಸೇರಿಸಿ, ಮಹಿಳಾ ಸಮಾಜ, ಗ್ರಂಥಾಲಯ, ಮಹಿಳೆಯರಿಗೆ ಆರೋಗ್ಯ ಕಾರ್ಯಕ್ರಮ ಮುಂತಾದ ಹತ್ತು ಹಲವು ಕೆಲಸಗಳಲ್ಲಿ ತೊಡಗಿಕೊಂಡು. ಒಂದು ರೀತಿಯ ಬಂಡಾಯದ ಬದುಕನ್ನು ಕಟ್ಟಿಕೊಂಡವರು.

ಯಾವುದೇ ಸಾಮಾಜಿಕ ಕೆಲಸಕ್ಕೆ ಮುಂದಾಗುತ್ತಿದ್ದ ಅಮ್ಮ, ನಮ್ಮೂರಿನಲ್ಲಿ ರೈಲ್ವೆ ನಿಲ್ದಾಣವಿದ್ದರೂ ಅನೇಕ ರೈಲುಗಳು ನಿಲ್ಲದಿದ್ದಾಗ ರೈಲು ನಿಲ್ಲಿಸುವ ಹೋರಾಟಕ್ಕೆ ಚಾಲನೆ ಕೊಟ್ಟು ಯಶಸ್ವಿಯಾದರು. ಮಹಿಳೆಯರಿಗಾಗಿ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆಯಂತ್ರಗಳನ್ನು ಸರ್ಕಾರದ ವಿವಿಧಯೋಜನೆ ಮೂಲಕ ದಕ್ಕುವಹಾಗೆ ಮಾಡಿ ಹೊಲಿಗೆ ತರಬೇತಿಗೆ ವ್ಯವಸ್ಥೆ ಮಾಡಿಮಾಡಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾದರು. ಯಾವುದೆ ಹೆಣ್ಣು ಮಗಳು (ಜಾತಿ ಭೇದವಿಲ್ಲದೆ) ಹೆರಿಗೆ ಸಂಕಟದಲ್ಲಿ ಇದ್ದಾಳೆಂದರೆ, ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಆಗುವರೆಗೂ ಜೊತೆಗಿದ್ದು, ತಾಯಿ ಮಗುವಿನ ಆರೋಗ್ಯ ಖಾತರಿ ಮಾಡಿಕೊಂಡು ಮನೆಬರುತ್ತಿದ್ದರು.

ಅಗತ್ಯ ಬಿದ್ದರೆ ಬಾಣಂತನಮುಗಿಸಿ. ಆಗೆಲ್ಲಾ (ಇಪ್ಪತ್ತು ಮೂವತ್ತು ವರ್ಷಗಳು ,ಅದಕ್ಖು ಹಿಂದೆ) ನಮ್ಮ ಹಳ್ಲಿಗೆ ತಾಗಿದಂತೆ ಹುಲ್ಲಿನ ಮೆದೆಗಳು, ತಿಪ್ಪೆಗಳು ಸಾಲುಸಾಲಾಗಿ ಇದ್ದವು. ಯಾವುದೋ ಕಾರಣಕ್ಕೆ ಹುಲ್ಲಿನ ಮೆದೆಗಳಿಗೆ, ತಿಪ್ಪೆಗಳಿಗೆ ಬೆಂಕಿಬಿದ್ದರೆ ಬೆಂಕಿ ಹರಡದಂತೆ ತಡೆಯಲು ಊರವರನ್ನು ಕೂಡಿಸಿ, ಬಾವಿಯಿಂದ ನೀರು ಸೇದಿಸಿ ಅಗ್ನಿ ಶಮನಕ್ಕೆ ಮುಂದಾಗುತ್ತಿದ್ದ ಅಮ್ಮನ ಬಗ್ಗೆ ಈಗಲೂ ಊರಿಗೆ ಹೋದಾಗಲೆಲ್ಲ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಖ್ಯಾತ ನಟಿ ಆರತಿ ಎಂದರೆ ತುಂಬಾ ಪ್ರೀತಿ. ಅವರನ್ನು ಮಹಿಳಾ ಸಮಾಜದ ಉದ್ಘಾಟನಾ ಸಮಾರಂಭಕ್ಕೆ ಕರೆತಂದಿದ್ದೇ ಒಂದು ಸಾಹಸ. ಊರಿಗೆ, ಅಥವಾ ಊರಿನಲ್ಲಿ ಯಾರಿಗಾದರೂ ವಿಧಾನಸೌದ ಯಾವುದಾದರೊಂದು ಕೆಲಸವಾಗಬೇಕೆಂದರೆ ಯಾರ ಪರಿಚಯ ಇರಲಿ ಬಿಡಲಿ ನೇರವಾಗಿ ಹೋಗಿ ಕೆಲಸ ಆಗುವಂತೆ ಮಾಡಿ ಬರುತ್ತಿದ್ದರು. ನಮ್ಮೂರಿನ ದೆವಾಲಯದ ಬಳಿ ಒಂದು ಸಮುದಾಯ ಭವನಕ್ಕೆ ಜಾಗ ಪಡೆಯುವಲ್ಲಿ ಅಮ್ಮ ಮಾಡಿದ ಪ್ರಯತ್ನವನ್ನು ಹಲವರು ನೆನಪಿಸಿಕೊಳ್ಳುತ್ತಾರೆ. ಸಂಪೂರ್ಣ ಸಾಕ್ಷರತಾ ಆಂದೋಲನದ ಸ್ವಯಂಸೇವಕಿಯಾಗಿ ರಾತ್ರಿ ಶಾಲೆಗಳನ್ನು ನಡೆಸಿದ್ದು, ಅಂಗನವಾಡಿ ಬರಲು ಕಾರಣರಾಗಿದ್ದ, ಮಹಿಳಾ ಸ್ವಸಹಾಯ ಸಂಘಗಳನ್ನು ಸ್ತಾಪಿಸಿದ್ದು, ಹಾಲಿನ ಡೈರಿ ಪ್ರಾರಂಭಕ್ಕೆ ಪ್ರೇರಣೆ ನೀಡಿದ್ದು… ಹೀಗೆ ಇದನ್ನೆಲ್ಲಾ ಇನ್ನೂ ವಿವರವಾಗಿ ಬರೆಯಬೇಕಿತ್ತು.

ಈ ಕೊರೊನ ಸಂಕಷ್ಟದ ಸಂದರ್ಭದಲ್ಲಿ ಅಮ್ಮ ಇದ್ದಿದ್ದರೆ ನಮ್ಮಷ್ಟು ನಿಷ್ಕ್ರಿಯ ರಾಗಿ ಇರುತ್ತಿರಲಿಲ್ಲ ಅನ್ನಿಸುತ್ತದೆ. ಹಳ್ಳಿಯ ಆರೋಗ್ಯ ಕ್ಕಾಗಿ ಏನನ್ನಾದರು ಒಂದಿಷ್ಟು ಮಾಡಿರುತ್ತಿದ್ದರು. ಸಿನಿಮಾ, ನಾಟಕವೆಂದರೆ ಅಮ್ಮನಿಗೆ ಅಚ್ಚುಮೆಚ್ಚು, ಬಾಲ್ಯದಲ್ಲಿ ಬೆಂಗಳೂರಿನಲ್ಲಿ ಕೆ.ಹಿರಣ್ಣಯ್ಯ ಮಿತ್ರಮಂಡಳಿ, ಗುಬ್ಬಿ ಕಂಪನಿ ನಾಟಕಗಳನ್ನು, ಸಿನಿಮಾಗಳನ್ನು ಯಥೇಚ್ಛವಾಗಿ ನೋಡುತ್ತಿದ್ದರು. (ಅವರ ತಂದೆಗೆ ಪಾಸ್ ದೊರಕುತ್ತಿತ್ತು!) ಮುಂದೆಯೂ ಕೂಡ, ಬೆಂಗಳೂರು, ಮೈಸೂರಿಗೆ ಹೋದರೆ ಸಿನೆಮಾ ಗ್ಯಾರಂಟಿ) ಅಮ್ಮ ತಮ್ಮ ಗೆಳತಿಯರೊಂದಿಗೆ ‘ಬೆಟ್’ ಕಟ್ಟಿದ್ದರಂತೆ, ಮದುವೆಯ ದಿನವೇ ಗಂಡನನ್ನು ಸಿನಿಮಾಗೆ ಕರೆದೊಯ್ಯುತ್ತೇನೆಂದು. ಧಾರೆಯ ನಂತರ ವಧುವರರು ನಾಪತ್ತೆ! ಅದು 1956 ನೆ ಇಸವಿ!ನಮಸ್ಕಾರ.

‍ಲೇಖಕರು Avadhi

May 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: