’ನಮಗೆ ಯೂನಿಕೋಡ್ ಯಾಕೆ ಬೇಕು’ – ತೇಜಸ್ವಿ ಹೇಳ್ತಾ ಇದ್ರು

(ಕುವೆಂಪು ಕನ್ನಡ ತಂತ್ರಾಂಶದ ಬೀಟಾ ಆವೃತ್ತಿ 1.0 ಅನ್ನು ದಿನಾಂಕ 17.02.2007 ರಂದು

ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದು ಕಳುಹಿಸಿದ್ದ ಭಾಷಣದ ಪ್ರತಿ)

ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು. ಎಷ್ಟು ಅದ್ದೂರಿಯ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ, ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ, ಚಳವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ. ಈ ದೃಷ್ಟಿಯಿಂದ ಜಾಗತೀಕರಣದ ಈ ಪರ್ವಕಾಲದಲ್ಲಿ ಭಾರತದ ಎಲ್ಲ ದೇಶ ಭಾಷೆಗಳೂ ತುಂಬ ಅಪಾಯಕರ ಪರಿಸ್ಥಿತಿಯಲ್ಲಿವೆ ಎಂಬುದನ್ನು ನಿಸ್ಸಂಶಯವಾಗಿ ಒಪ್ಪಬಹುದು. ಇದಕ್ಕೆ ಮುಖ್ಯ ಕಾರಣ ಮನುಷ್ಯ ಸಮಾಜದ ಎಲ್ಲ ವಹಿವಾಟುಗಳೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು. ಕಂಪ್ಯೂಟರ್, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸರ್ವವ್ಯಾಪಿಯಾಗಿ ಅವರಿಸುತ್ತಿದೆ. ನಾವು ಕಂಪ್ಯೂಟರಿನಲ್ಲಿ ಇಂಗ್ಲೀಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ನಮ್ಮ ಭಾಷೆಯನ್ನೂ ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕಂಪ್ಯೂಟರೇನು ಕನ್ನಡಕ್ಕೆ ಹೊಸದಲ್ಲ. ನಮ್ಮ ತಂತ್ರಜ್ಞರು ಬಹಳ ಹಿಂದೆಯೇ ಕನ್ನಡ ಭಾಷೆಯನ್ನು ಕಂಪ್ಯೂಟರಿಗೆ ಅಳವಡಿಸಿದ್ದರು. ಮುದ್ರಣ, ಪುಸ್ತಕ ಪ್ರಕಾಶನ, ಕಚೇರಿಯ ವಹಿವಾಟುಗಳಲ್ಲಿ, ಟೈಪ್ರೈಟರ್ ಯಂತ್ರಕ್ಕಿಂತ ಹೆಚ್ಚು ವ್ಯಾಪಕವಾಗಿ, ಸಮರ್ಪಕವಾಗಿ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಲು ಸಾಧ್ಯವಿತ್ತು. ಆದರೆ ಕನ್ನಡ ತಂತ್ರಾಂಶ ಕ್ಷೇತ್ರ, ವಿಪರೀತ ಅಸ್ತವ್ಯಸ್ತ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಕನ್ನಡಕ್ಕೆ ಬಳಸುವ ಕೀಲಿಮಣೆ ವಿನ್ಯಾಸದಲ್ಲಿ ಏಕರೂಪತೆ ಇರಲಿಲ್ಲ. ಅಷ್ಟೆ ಅಲ್ಲದೆ ಕನ್ನಡ ಅಕ್ಷರಗಳ ಎನ್ಕೋಡಿಂಗ್ ಸಹ ಒಬ್ಬೊಬ್ಬರದು ಒಂದೊಂದು ರೀತಿ ಇತ್ತು. ಒಬ್ಬರ ತಂತ್ರಾಂಶದಲ್ಲಿ ರೂಪಿಸಿದ ಫೈಲ್ ಗಳನ್ನು ಇನ್ನೊಬ್ಬರ ಕಂಪ್ಯೂಟರಿಗೆ ಹಾಕಿ ತೆರೆಯುವಂತಿರಲಿಲ್ಲ. ಕೀಲಿಮಣೆ ವಿನ್ಯಾಸ ಸಹ ಬದಲಾಗುತ್ತಿದ್ದುದರಿಂದ, ಒಂದು ತಂತ್ರಾಂಶದಲ್ಲಿ ಕೆಲಸ ಮಾಡಿದವನು ಇನ್ನೊಂದರಲ್ಲಿ ಮಾಡುವಂತಿರಲಿಲ್ಲ. ದಿನಗಳೆದಂತೆ ಕನ್ನಡ ತಂತ್ರಾಂಶ ಕ್ಷೇತ್ರ ಅವ್ಯವಸ್ಥೆಯ ಆಗರವಾಗತೊಡಗಿತು. ಇವೆಲ್ಲವನ್ನೂ ನಿರ್ದೇಶಿಸಿ ನಿಯಂತ್ರಿಸಲು ಸಾಧ್ಯವಿದ್ದುದು ತಂತ್ರಾಂಶದ ಅತಿ ದೊಡ್ಡ ಗ್ರಾಹಕವಾದ ಸರ್ಕಾರಕ್ಕೆ, ಇಲ್ಲವೆ ಈ ನಾಡಿನ ವಿಶ್ವವಿದ್ಯಾಲಯಗಳಿಗೆ. ದುರದೃಷ್ಟವಶಾತ್ ಇವರು ಯಾರಿಗೂ ಎಲೆಕ್ಟ್ರಾನಿಕ್ ಮಾಧ್ಯಮದಿಂದ ನಮ್ಮ ಭಾಷೆಗಳಿಗೆ ಮುಂದೊದಗಲಿರುವ ಅಪಾಯವನ್ನು ಅಂದಾಜು ಮಾಡಲಾಗಲಿಲ್ಲ.

ಇಂಟರ್ನೆಟ್ ಆಗಮನದೊಂದಿಗೆ ಐಟಿ ಕ್ಷೇತ್ರ ಅಡೆತಡೆ ಇಲ್ಲದ ವೇಗದಲ್ಲಿ ವೈದ್ಯಕೀಯ ಕ್ಷೇತ್ರದಿಂದ ಹಿಡಿದು ವ್ಯಾಪಾರ ವಹಿವಾಟಿನವರೆಗೆ ತ್ರಿವಿಕ್ರಮ ಸದೃಶವಾಗಿ ಆಕ್ರಮಿಸುತ್ತಿದೆ. ಇ-ಮೇಲ್, ಇ-ವಾಣಿಜ್ಯ, ಇ-ಆಡಳಿತ ಇತ್ಯಾದಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಹಸ್ತಾಂತರಿಸಲಾಗುತ್ತಿದೆ. ವಾಣಿಜ್ಯ ಮತ್ತು ಆಡಳಿತವೇ ನಮ್ಮ ದೈನಂದಿನ ವ್ಯವಹಾರಗಳ ಮುಕ್ಕಾಲು ಅಂಶವಾಗಿರುವುದಿಂದ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕನ್ನಡವನ್ನು ಸಮರ್ಥವಾಗಿ ಉಪಯೋಗಿಸಲಾಗದಿದ್ದರೆ ಕನ್ನಡದ ದಿನಬಳಕೆ ಸಂಪೂರ್ಣ ಸ್ಥಗಿತವಾಗುತ್ತದೆ.

ಕನ್ನಡಕ್ಕಿರುವ ಸದ್ಯದ ಸೀಮಿತ ಮಾರುಕಟ್ಟೆ ದೆಸೆಯಿಂದ ಮತ್ತು ಸರ್ಕಾರದ ಹಲವು ತಪ್ಪು ನೀತಿಗಳಿಂದ ಕನ್ನಡ ಭಾಷೆಗೆ ಕೆಲಸ ಮಾಡುತ್ತಿದ್ದ ಸುಮಾರು ಇಪ್ಪತ್ತಮೂರು ಖಾಸಗಿ ಕಂಪನಿಗಳಲ್ಲಿ ಈಗ ಎರಡೇ ಎರಡು ಉಳಿದುಕೊಂಡಿವೆ. ಅವೂ ಸಹ ಬಂಡವಾಳದ ಮತ್ತು ಪ್ರೋತ್ಸಾಹದ ಕೊರತೆಯಿಂದ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಲು ಯೋಚಿಸುತ್ತಿವೆ.

ಭಾಷೆಗೆ ಸಂಬಂಧಪಟ್ಟ ತಂತ್ರಾಂಶ ಅಭಿವೃದ್ಧಿ ಕೇವಲ ಸಾಫ್ಟ್ ವೇರ್ ಎಂಜಿನಿಯರುಗಳ ಕೆಲಸ ಮಾತ್ರವಲ್ಲ. ಅದಕ್ಕೆ ಭಾಷಾಶಾಸ್ತ್ರಜ್ಞರು, ವ್ಯಾಕರಣ ಶಾಸ್ತ್ರಜ್ಞರು, ಸಾಹಿತ್ಯ ಪರಿಣತರು, ಉಚ್ಫಾರಣ ಶಾಸ್ತ್ರಜ್ಞರು ಮುಂತಾದವರೆಲ್ಲಾ ಸೇರಿ ಮಾಡಬೇಕಾದ ಕೆಲಸ. ಇದರ ಸಂಕೀರ್ಣತೆಯನ್ನೂ ಪ್ರಾಮುಖ್ಯತೆಯನ್ನೂ ಅರಿತು ಇವರೆಲ್ಲರನ್ನೂ ಒಟ್ಟು ಮಾಡಿ ಕೆಲಸ ಮಾಡಲು ಮುಂದಾಗುವಷ್ಟು ಸೂಕ್ಷ್ಮಜ್ಞತೆ ನಮ್ಮ ರಾಜಕಾರಣಿಗಳಲ್ಲಾಗಲೀ ಅಧಿಕಾರ ಶಾಹಿಯಲ್ಲಾಗಲೀ ಕಾಣದೇ ಅಸಹಾಯಕರಾಗಿ ನಾವು ಕುಳಿತಿದ್ದ ಸಂದರ್ಭದಲ್ಲಿ ಹಾಸನದ ಶ್ರೀ ಮಂಜಾಚಾರಿ, ಆನಂದ್, ಸುಧೀರ್ ಮೊದಲಾದ ತರುಣ ಸಾಫ್ಟ್ ವೇರ್ ಎಂಜಿನಿಯರುಗಳು ಕೇವಲ ಕನ್ನಡದ ಮೇಲಿನ ಅಭಿಮಾನದಿಂದ “ನಮ್ಮ ಕೈಲಾದುದನ್ನು ನಾವು ಮಾಡೇ ಮಾಡುತ್ತೇವೆ” ಎಂದು ಹಠ ಹಿಡಿದು ಮುಂದಾದರು. ಅದಕ್ಕೆ ತಕ್ಕಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶ್ರೀ ವಿವೇಕ ರೈಯವರು ಅದಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನೆಲ್ಲಾ ಒದಗಿಸಿಕೊಡಲು ಮುಂದಾಗಿದ್ದಲ್ಲದೆ ತಂತ್ರಾಂಶ ಅಭಿವೃದ್ಧಿಗಾಗಿ ಕುವೆಂಪು ಪ್ರತಿಷ್ಠಾನದ ಸಹಯೋಗದೊಂದಿಗೆ ಅಲ್ಲಿ ಒಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ತಂತ್ರಾಂಶ ಶಾಖೆಯನ್ನೇ ತೆರೆದಿದ್ದಾರೆ. ಹಾಸನದ ತರುಣರ ಮತ್ತು ಹಂಪಿ ವಿಶ್ವವಿದ್ಯಾಲಯದ ಈ ಮಹತ್ಕಾರ್ಯ ಮುಂಬರುವ ದಿನಗಳಲ್ಲಿ, ಕನ್ನಡ ಭಾಷಾಭಿವೃದ್ಧಿಯ ದೃಷ್ಠಿಯಿಂದ ಚರಿತ್ರಾರ್ಹ ದಿನವಾಗಲಿದೆ.

ಈ ತಂತ್ರಾಂಶ “ವಿಂಡೋಸ್ 95” ರಿಂದ ಹಿಡಿದು “ವಿಂಡೋಸ್ ಎಕ್ಸ್ ಪಿ” ವರೆಗೆ ಎಲ್ಲ ಆವೃತ್ತಿಗಳಲ್ಲೂ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಇದರಿಂದ ಆಗುವ ದೊಡ್ಡ ಅನುಕೂಲವೆಂದರೆ ಇವರು ಕೊಟ್ಟಿರುವ ಪರಿವರ್ತಕಗಳನ್ನು ಉಪಯೋಗಿಸಿ ಬೇರೆ ಬೇರೆ ತಂತ್ರಾಂಶಗಳಲ್ಲಿ ಮಾಡಿರುವ ಸವಾಲುಗಳನ್ನು ಅಥವಾ ಕಡತಗಳನ್ನು ಈ ತಂತ್ರಾಂಶಕ್ಕೆ ಆಮದು ಮಾಡಿಕೊಂಡರೆ ಸಾಕು, ಅನಂತರ ವಿಂಡೋಸ್ ಯಾವ ಆವೃತ್ತಿಯಲ್ಲಿ ಬೇಕಾದರೂ ನಾವು ಕೆಲಸ ಮಾಡಬಹುದು. ಈ ತಂತ್ರಾಂಶವನ್ನು ಉಚಿತವಾಗಿ ಎಲ್ಲರೂ ಪಡೆದು ಉಪಯೋಗಿಸುವದಷ್ಟೇ ಅಲ್ಲದೆ, ಸೋರ್ಸ್ ಕೋಡ್ ಸಹ ಕೊಡಲು ಹಂಪೆ ವಿಶ್ವವಿದ್ಯಾಲಯ ಮುಂದೆ ಬಂದಿರುವುದರಿಂದ ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡಲು ಇಚ್ಫಿಸುವ ಎಲ್ಲ ತರುಣರಿಗೂ ಇದರಿಂದ ಅಪಾರ ಸಹಾಯವಾಗುತ್ತದೆ. ಇದೊಂದು ನಿಜವಾದ ಅರ್ಥದಲ್ಲಿ ಹಂಪೆ ಕನ್ನಡ ವಿಶ್ವವಿದ್ಯಾಲಯದ ಚರಿತ್ರಾರ್ಹವಾದ ಹೆಜ್ಜೆ.

ಆದರೂ ಇದೊಂದು ಮೊದಲ ಹೆಜ್ಜೆ ಮಾತ್ರ ಎನ್ನುವುದನ್ನು ನಾವು ಮರೆಯಬಾರದು. ಇಂಗ್ಲೀಷಿನಷ್ಟೆ ಸಮರ್ಥವಾಗಿ ಕನ್ನಡ ಭಾಷೆಯನ್ನೂ ಉಪಯೋಗಿಸಲು ಇನ್ನೂ ಬಹಳ ದೂರ ಹೋಗಬೇಕಾಗಿದೆ.

 

‍ಲೇಖಕರು avadhi

January 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: