ಹಂಪಿ ವಿವಿ, ’ಕುವೆಂಪು ಕನ್ನಡ ತಂತ್ರಾಂಶ’ ಮತ್ತು ವಿವೇಕ ರೈ

ಮೊದಲ ಆವೃತ್ತಿಗೆ ವಿಶ್ರಾಂತ ಕುಲಪತಿ ಡಾ. ಬಿ.ಎ ವಿವೇಕ ರೈ ಅವರ ಮಾತು

– ಡಾ. ಬಿ.ಎ. ವಿವೇಕ ರೈ



ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣದ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಹಾಗೂ ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವು ಆಗಿವೆ. `ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. `ಕನ್ನಡ’ ಮತ್ತು `ಅಭಿವೃದ್ಧಿ’ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಮಾಹಿತಿ ತಂತ್ರಜ್ಞಾನವು ಜಾಗತೀಕರಣದ ಪ್ರಮುಖ ಅಸ್ತ್ರವಾಗಿ ಪ್ರಯೋಗವಾಗುತ್ತಿರುವಾಗ ಈ ಅಸ್ತ್ರವನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸುವ ಹೊಣೆಗಾರಿಕೆಯು ಕನ್ನಡ ವಿಶ್ವವಿದ್ಯಾಲಯದ ಮೇಲೆ ಇದೆ. ಕನ್ನಡ ತಂತ್ರಾಂಶಗಳ ಅಭಿವೃದ್ಧಿಯ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕೆನ್ನುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಈ ಸಂಬಂಧ ಸಾಹಿತಿಗಳ, ಭಾಷಾ ತಜ್ಞರ, ತಂತ್ರಜ್ಞರ ಸಮಾಲೋಚನೆಯನ್ನು ನಡೆಸಿ ಕನ್ನಡವು ಸರ್ವವ್ಯಾಪಿಯಾಗಿ ಬೆಳೆಯಲು ಶ್ರಮಿಸುತ್ತಿದೆ.

ಕನ್ನಡ ತಂತ್ರಾಂಶದ ಸಮಸ್ಯೆಯು ಬಹಳ ಸಂಕೀರ್ಣವೂ ಜಟಿಲವೂ ಆಗಿರುವ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು `ಕುವೆಂಪು ಕನ್ನಡ ತಂತ್ರಾಂಶ’ ಎಂಬ ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸುವ ಮೂಲಕ ಕನ್ನಡಿಗರ ಅಗತ್ಯ ಮತ್ತು ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಹೊತ್ತಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಗೊಳಿಸುವ ಮತ್ತು ಕನ್ನಡ ಭಾಷೆಯನ್ನು ಪ್ರಕಾಶನ, ಆಡಳಿತ, ಶಿಕ್ಷಣ, ಕಾನೂನು, ತಂತ್ರಜ್ಞಾನ, ವೈದ್ಯಕೀಯ, ವ್ಯವಹಾರ ಮುಂತಾದ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಬಳಸುವ ಕೆಲಸವನ್ನು ನಿರ್ವಹಿಸುವುದು ಕನ್ನಡ ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ಕನ್ನಡ ಭಾಷೆಯು ತಂತ್ರಾಂಶ ಕ್ಷೇತ್ರದಲ್ಲಿ ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಮನಗೊಂಡು ಕನ್ನಡ ವಿಶ್ವವಿದ್ಯಾಲಯವು ನುರಿತ ತಂತ್ರಜ್ಞರ ಮಾರ್ಗದರ್ಶನದಲ್ಲಿ ಕುವೆಂಪು ಕನ್ನಡ ತಂತ್ರಾಂಶ ಎಂಬ ತಂತ್ರಾಂಶವನ್ನು ಸಿದ್ಧಪಡಿಸಿದೆ.

ಈ ತಂತ್ರಾಂಶವು ಮುಖ್ಯವಾಗಿ (1) ಕನ್ನಡ ಭಾಷೆಗೆ ಒಗ್ಗುವ ವಿವಿಧ ಇಪ್ಪತ್ತು ನಮೂನೆಯ ಕನ್ನಡ ಅಕ್ಷರಗಳು (ಟಿ.ಟಿ.ಎಫ್ ಫಾಂಟ್ಸ್) (2) ವಿವಿಧ ಇಪ್ಪತ್ತು ನಮೂನೆಯ ಅಂಚಿನ ವಿನ್ಯಾಸಗಳ ಫಾಂಟ್ ಗಳು (ಬಾರ್ಡರ್ ಡಿಸೈನ್ ಗಳು) (3) ಹೇಮಾವತಿ, ನೇತ್ರಾವತಿ, ಶರಾವತಿ, ಕಾವೇರಿ ಎಂಬ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳು (Keyboard Layouts) (4) ನಾಲ್ಕು ಪರಿವರ್ತಕಗಳು (Converters) ಹೊಂದಿದೆ. ಈ ತಂತ್ರಾಂಶವು ಕರ್ನಾಟಕ ಸರ್ಕಾರವು ನಿಗದಿಪಡಿಸಿದ ಗ್ಲಿಫ್ ಹಾಗೂ ಕೀಲಿಮಣೆಯ ಶಿಷ್ಟತೆ ಮತ್ತು ಏಕರೂಪತೆಗೆ ಅನುಗುಣವಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ಮೇಲಿನ ನಾಲ್ಕು ಬಗೆಯ ಸೌಲಭ್ಯಗಳನ್ನು ಹೊಂದಿರುವ `ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0′ ವನ್ನು ನಾಡಿಗೆ ಲೋಕಾರ್ಪಣೆ ಮಾಡಲು ಸಂತೋಷಪಡುತ್ತೇವೆ. ಕನ್ನಡದಲ್ಲಿ ಇಂತಹ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ತಿಳಿಸಿದವರು ಮತ್ತು ಈ ಕುವೆಂಪು ಕನ್ನಡ ತಂತ್ರಾಂಶವನ್ನು ರೂಪಿಸಲು ಎಲ್ಲಾ ರೀತಿಯ ಮಾರ್ಗದರ್ಶನ, ಸಲಹೆ, ಸೂಚನೆ ಮತ್ತು ನೆರವನ್ನು ಇತ್ತವರು ಕನ್ನಡದ ಹಿರಿಯ ಸಾಹಿತಿ ಮತ್ತು ಚಿಂತಕರಾದ ಶ್ರೀ ಪೂರ್ಣಚಂದ್ರ ತೇಜಸ್ವಿಯವರು. ಶ್ರೀ ತೇಜಸ್ವಿಯವರ ವಿಶೇಷವಾದ ಅನುಭವ ಮತ್ತು ಸೃಜನಶೀಲ ತಾಂತ್ರಿಕ ಪರಿಣತಿ ಮತ್ತು ನಿರಂತರ ಸಂಯೋಜನೆಯ, ಪ್ರೀತಿಯ ಕಾಯಕದ ಫಲವಾಗಿ ಕನ್ನಡ ವಿಶ್ವವಿದ್ಯಾಲಯವು ಈ ಕುವೆಂಪು ಕನ್ನಡ ತಂತ್ರಾಂಶವನ್ನು ಕನ್ನಡನಾಡಿಗೆ ಲೋಕಾರ್ಪಣೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಲು ಅಭಿಮಾನಪಡುತ್ತೇನೆ. ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು, ಹಾಸನದ ಶ್ರೀ ಆನಂದ, ಶ್ರೀ ಮಂಜಾಚಾರಿ ಮತ್ತು ಶ್ರೀ ಸುಧೀರ್ ಅವರು ತಮ್ಮ ಯುವ ತಂಡದ ನೆರವಿನಿಂದ ಕನ್ನಡದ ಈ ಕನಸನ್ನು ನನಸನ್ನಾಗಿಸಿದ್ದಾರೆ. ಪರಿಶ್ರಮ ಮತ್ತು ಪ್ರೀತಿ, ಅನ್ವೇಷಕ ಪ್ರವೃತ್ತಿ ಮತ್ತು ಆನ್ವಯಿಕ ದೃಷ್ಟಿಯುಳ್ಳ ಈ ಮೂವರು ತರುಣ ತಂತ್ರಜ್ಞರ ಸಾಧನೆ ಅಪೂರ್ವವಾದುದು. ಕನ್ನಡ ವಿಶ್ವವಿದ್ಯಾಲಯದ ಈ ನೂತನ ಪ್ರಯತ್ನಕ್ಕೆ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಹಿರಿಯ ಗಣಕ ತಜ್ಞರೂ ಆಗಿರುವ ಡಾ. ಕೆ ಚಿದಾನಂದ ಗೌಡರು ಮತ್ತು ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಟಿ.ಎನ್. ನಾಗಭೂಷಣ್ ಅವರು ಸಮಾಲೋಚಕ ತಜ್ಞರಾಗಿ ನಿರಂತರ ತಮ್ಮ ಮಾರ್ಗದರ್ಶನ ಮತ್ತು ಅನುಭವದ ಸಲಹೆಗಳ ಮೂಲಕ ಸಮರ್ಪಕ ನಿರ್ವಹಣೆಗೆ ಸಹಕರಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಕನ್ನಡದ ಹಿರಿಯ ಸಾಹಿತಿಗಳೂ ಆದ ಡಾ. ಚಂದ್ರಶೇಖರ ಕಂಬಾರರು ತಮ್ಮ ಶಾಸಕರ ನಿಧಿಯಿಂದ ಈ ಪ್ರಯತ್ನಕ್ಕೆ ಪ್ರಾರಂಭಿಕ ಆರ್ಥಿಕ ನೆರವನ್ನು ಕೊಟ್ಟಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಗಣಕ ಕೇಂದ್ರದ ತಜ್ಞರಾದ ಶ್ರೀ ಎಸ್.ಕೆ.ವಿಜಯೇಂದ್ರ ಮತ್ತು ಶ್ರೀ ಜಿ.ಸಿ.ರಾಜಕೃಷ್ಣ ಅವರು ತಾಂತ್ರಿಕ ಹಾಗೂ ಸಂಯೋಜನೆಯ ಸಹಕಾರವನ್ನು ನೀಡಿದ್ದಾರೆ.

ಕುವೆಂಪು ಕನ್ನಡ ತಂತ್ರಾಂಶದ ಬೀಟಾ ಆವೃತ್ತಿ 1.0 ಅನ್ನು ದಿನಾಂಕ 17.02.2007 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಆವೃತ್ತಿಯಲ್ಲಿದ್ದ ಲೋಪದೋಷಗಳನ್ನು ಬಳಕೆದಾರರಿಂದ ಪಡೆದು `ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0′ ಅನ್ನು ಸಿದ್ಧಪಡಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ನಮ್ಮೊಡನೆ ಇಲ್ಲದಿರುವುದು ತುಂಬಾ ವಿಷಾದದ ಸಂಗತಿ.

ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ
ನೆನಪಿಗಾಗಿ ನಾವು
`ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0′ ವನ್ನು
ಅರ್ಪಿಸುತ್ತಿದ್ದೇವೆ.

ಕುವೆಂಪು ಕನ್ನಡ ತಂತ್ರಾಂಶವು ಉಚಿತವಾಗಿ ಲಭ್ಯವಿದ್ದು, ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಅಂತರ್ಜಾಲ ತಾಣ www.kannadauniversity.org ನಲ್ಲಿ ಈ ತಂತ್ರಾಂಶದ ಆವೃತ್ತಿ 1.0 ಅನ್ನು ಡೌನ್ ಲೋಡ್ ಮಾಡಿಕೊಂಡು ಬಳಸಬಹುದು. ಈ ತಂತ್ರಾಂಶದ ಮುಂದಿನ ಅಭಿವೃದ್ಧಿಗೆ ನಿಮ್ಮ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಇ-ಮೇಲ್ ಮೂಲಕ ಈ ವಿಳಾಸಕ್ಕೆ ಕಳುಹಿಸಬಹುದು. ಇ-ಮೇಲ್ ವಿಳಾಸ: [email protected]

ಕುವೆಂಪು ಕನ್ನಡ ತಂತ್ರಾಂಶ 1.0 ಆವೃತ್ತಿಯ ಜೊತೆಗೆ ತಂತ್ರಾಂಶದ ಓಪನ್ ಸೋರ್ಸ್ಕೋಡ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಕ್ರಮವು ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಪ್ರಥಮ ಹೆಜ್ಜೆಯಾಗಿದೆ. ಈವರೆಗೂ ಕನ್ನಡ ಲಿಪಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿರುವ ತಂತ್ರಜ್ಞರು ಸೋರ್ಸ್ ಕೋಡ್ ಅನ್ನು ನೀಡಿರುವುದಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ಸಹಾಯಕವಾಗಲು ವಿಶ್ವವಿದ್ಯಾಲಯವು ಓಪನ್ ಸೋರ್ಸ್ ಕೋಡ್ ನೀಡುತ್ತಿದೆ. ಇದನ್ನು ಪಡೆಯುವ ಬಗೆಗಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವನ್ನು ವೀಕ್ಷಿಸಬದಾಗಿದೆ.

ಮುಂದಿನ ಆವೃತ್ತಿಗಳಲ್ಲಿ ಯೂನಿಕೋಡ್ ಇಂಜಿನ್, ಯೂನಿಕೋಡ್ ಫಾಂಟ್ಸ್, ಹೆಚ್ಚಿನ ಪರಿವರ್ತಕಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಆಧುನಿಕ ಸನ್ನಿವೇಶದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸುವ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯ, ಹಂಪಿಯು ರೂಪಿಸಿದ `ಕುವೆಂಪು ಕನ್ನಡ ತಂತ್ರಾಂಶ 1.0′ ಅನ್ನು ಕನ್ನಡಿಗರು ಆದರದಿಂದ ಬರಮಾಡಿಕೊಂಡು ನಂದಿನ ಬಳಕೆಯಲ್ಲಿ ಉಪಯೋಗಿಸಬೇಕೆಂದು ಸಮಸ್ತ ಕನ್ನಡಿಗರಲ್ಲಿ ವಿನಂತಿಸಿಕೊಳ್ಳುತ್ತೇನೆ.

‍ಲೇಖಕರು avadhi

January 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. h a patil

    – ನಿಜ ಸಾರ್ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ ಕುವೆಂಪು ಕನ್ನಡ ತಂತ್ರಾಂಶವನ್ನು ಎಲ್ಲರೂ ಬಳಸಲು ಮನಸು ಮಾಡಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: