'ಯೂನಿಕೋಡು ಮತ್ತು ಜಯ ಹೇ ಕರ್ನಾಟಕ ಮಾತೆ' – ಜೋಗಿ ಬರೀತಾರೆ

ಜೋಗಿ

ಮಡಿಕೇರಿಯ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕುಳಿತರೆ ಮತ್ತದೇ ಸನಾತನ ಸಮಸ್ಯೆ. ಹಳೇ ಬ್ರೌಸರು, ಯೂನಿಕೋಡ್‌ ಇಲ್ಲದ ಕಂಪ್ಯೂಟರುಗಳು, ಇನ್‌ಸ್ಕ್ರಿಪ್ಟ್ ಕೀಬೋರ್ಡಿಲ್ಲದ ಬರಹ ಮತ್ತು ನುಡಿ ತಂತ್ರಾಂಶಗಳು. ನಮ್ಮದೇ ಲ್ಯಾಪ್‌ಟಾಪ್‌ ಒಯ್ದರೆ, ವೈಫೈ ಕನೆಕ್ಟಿವಿಟಿ ಇಲ್ಲ ಎಂಬ ಉತ್ತರ. ಕಷ್ಟಗಳು ಒಂದೆರಡಲ್ಲ. ಅದನ್ನೆಲ್ಲ ನೋಡುತ್ತ ಕೂತಾಗ ಮೂರು ವರುಷದ ಹಿಂದೆ ಅನುಭವಿಸಿದ ಸಮಸ್ಯೆ ಮತ್ತೆ ನೆನಪಾಯಿತು. ನಾನೊಂದು ಲ್ಯಾಪ್‌ಟಾಪ್‌ ಕೊಳ್ಳಲು ಹೊರಟಿದ್ದೆ. ಜೋಬಲ್ಲಿ ಐವತ್ತು ಸಾವಿರ ಇಟ್ಟುಕೊಂಡು ಒಂದು ಅಂಗಡಿಯೊಳಗೆ ನುಗ್ಗಿದರೆ, ಅಂಗಡಿಯಾತ ನನ್ನನ್ನೇ ಕೆಕ್ಕರಿಸಿ ನೋಡಿ, “ಯಾಕೆ ಬೇಕು ಲ್ಯಾಪ್‌ಟಾಪು?’ ಎಂದು ವಿಚಿತ್ರ ಇಂಗ್ಲಿಷಿನಲ್ಲಿ ಕೇಳಿದ. ಬಹುಶಃ ಮಲಯಾಳಿ ಹುಡುಗನಿರಬೇಕು. ಕಷ್ಟಪಟ್ಟು ಮಾರ್ಕೆಟಿಂಗ್‌ ಭಾಷೆಯನ್ನು ಒಗ್ಗಿಸಿಕೊಳ್ಳಲು ಹೆಣಗುತ್ತಿದ್ದಂತೆ ಕಾಣಿಸುತ್ತಿದ್ದ.

“ಯಾಕಾದರೂ ಅಂದ್ಕೋ. ಅದನ್ನು ಕಟ್ಟಿಕೊಂಡು ನಿಂಗೇನಾಗಬೇಕು’ ಅಂತ ನಾನು ಅಹಂಕಾರಿ ಗಿರಾಕಿಯಂತೆ ತಿರುಗಿ ಬಿದ್ದೆ. ಹಾಗೆ ರೇಗಿದ್ದೇ ತಡ, ಈತನಿಗೆ ಏನೂ ಗೊತ್ತಿಲ್ಲ ಎನ್ನುವ ತೀರ್ಮಾನಕ್ಕೆ ಬಂದ ಅವನು, ತನಗೆ ಗೊತ್ತಿದ್ದೆಲ್ಲವನ್ನೂ ವಿವರಿಸತೊಡಗಿದ. ಅವನು ಇಂಗ್ಲಿಷಿನಲ್ಲಿ ಹೇಳಿದ್ದರ ಪೈಕಿ ನನಗೆ ಅರ್ಥವಾದದ್ದು ಇಷ್ಟು:

ಒಂದೊಂದು ಉದ್ದೇಶಕ್ಕೆ ಒಂದೊಂದು ಕಂಪ್ಯೂಟರ್‌ ಬಳಸುತ್ತಾರೆ. ಕೇವಲ ಡಿಟಿಪಿ ಮಾಡುವುದಾದರೆ ಕಡಿಮೆ ಮೆಮರಿ ಇರುವ ಸಾಮಾನ್ಯ ಕಂಪ್ಯೂಟರ್‌ ಸಾಕು. ನೀವು ಇಂಟರ್‌ನೆಟ್‌ ಬಳಸುವವರಾಗಿದ್ದರೆ ಅದಕ್ಕೆ ಇನ್ನಷ್ಟು ಹೆಚ್ಚಿನ ಪರಿಕರಗಳನ್ನು ಹೊಂದಿರುವ ಕಂಪ್ಯೂಟರ್‌ ಬೇಕಾಗುತ್ತದೆ. ನೀವು ಅದರೊಂದಿಗೆ ಸಿನೆಮಾ ನೋಡೋದು, ಹಾಡು ಕೇಳ್ಳೋದು ಕೂಡ ಮಾಡುತ್ತೀರಾದರೆ ನಿಮಗೆ ಒಳ್ಳೆಯ ಸ್ರಿನ್‌ ರೆಸಲ್ಯೂಷನ್‌ ಇರುವ ಹೆಚ್ಚಿನ ಡೆಡಿಕೇಟೆಡ್‌ ಮೆಮರಿ ಇರುವ ವಿಡಿಯೋ ಕಾರ್ಡ್‌ ಬೇಕಾಗುತ್ತೆ. ಇದಲ್ಲದೇ ನೀವು ಗ್ರಾಫಿಕ್‌ ಕೂಡ ಮಾಡೋದಾಗಿದ್ದರೆ ಐ ಥ್ರಿ, ಐ ಫೋರ್‌, ಐ ಫೈವ್‌ ಪ್ರಾಸೆಸರ್‌ ಇರುವ ಕಂಪ್ಯೂಟರ್‌ ತಗೋಬಹುದು. ಅದರಲ್ಲಿ ಏಕಕಾಲಕ್ಕೆ ಹಲವಾರು ಕೆಲಸಗಳನ್ನು ಮಾಡುವ ಮಲ್ಟಿಟಾಸ್ಕಿಂಗ್‌ ವ್ಯವಸ್ಥೆ ಇರುತ್ತೆ. ಪ್ರೊಸೆಸರ್‌ ಸ್ಪೀಡ್‌ ಜಾಸ್ತಿ ಇರೋದರಿಂದ ಪ್ರೋಗ್ರಾಮ್‌ ಬರೆಯುವವರಿಗೆ, ಗ್ರಾಫಿಕ್‌ ಬಳಸುವವರಿಗೆ, ಸಿನೆಮಾ ಎಡಿಟ್‌ ಮಾಡುವವರಿಗೆ ಅದು ಅನುಕೂಲಕರ.

ಇಷ್ಟಕ್ಕೇ ನಾನು ಸುಸ್ತಾಗಿ ಹೋಗಿದ್ದೆ. ಸರಿಯಾಗಿ ಐದು ವರ್ಷಗಳ ಹಿಂದೆ ಒಂದು ಶೋರೂಮಿಗೆ ಹೋಗಿ ಆ ಲ್ಯಾಪ್‌ಟಾಪ್‌ ಕೊಡಿ ಎಂದು ಅಂಡರ್‌ ವೇರ್‌ ಕೊಳ್ಳುವಷ್ಟೇ ಸರಳವಾಗಿ ಲ್ಯಾಪ್‌ಟಾಪ್‌ ಕೊಂಡುಕೊಂಡಿದ್ದೆ. ಈಗ ನೋಡಿದರೆ ಅದರಲ್ಲೇ ಸಾವಿರ ಆಯ್ಕೆಗಳು, ಸಾವಿರ ಗೊಂದಲಗಳು, ಲಕ್ಷ ಸಮಸ್ಯೆಗಳು. ನನ್ನ ಅಗತ್ಯ ಇಷ್ಟೇ. ನಾನು ಕನ್ನಡದಲ್ಲಿ ಬರೆಯಬೇಕು. ಅದಕ್ಕೋಸ್ಕರ ಒಂದು ಸಾಫ್ಟ್‌ವೇರ್‌ ಕೊಂಡುಕೊಂಡಿದ್ದೇನೆ. ಸಾಧ್ಯವಾದರೆ ಅದನ್ನು ಪೇಜ್‌ಮೇಕರ್‌ ಸಾಫ್ಟ್‌ವೇರ್‌ ಬಳಸಿ ಪುಸ್ತಕರೂಪದಲ್ಲಿ ತರೋದಕ್ಕೆ ಆಗಬೇಕು. ಬೇಜಾರಾದಾಗ ಒಳ್ಳೇ ಸಿನೆಮಾ ನೋಡಬೇಕು, ಕೆಲಸ ಮಾಡುವಾಗಲೂ ಸಂಗೀತ ಕೇಳ್ತಿರಬೇಕು. ತೀರಾ ಬೇಸರವಾದಾಗ ಊರಿಂದಾಚೆ ಹೋಗಿ ಬರೆಯಲು ಕೂರುತ್ತೇನೆ. ಕನಿಷ್ಠ ಮೂರು ನಾಲ್ಕು ಗಂಟೆಯಾದರೂ ಬ್ಯಾಟರಿ ಬ್ಯಾಕಪ್‌ ಇರಬೇಕು. ಇದನ್ನು ಅವನಿಗೆ ವಿವರಿಸಲು ಯತ್ನಿಸಿದೆ. ಅವನು ನಿಮಗೆ ಈ ಲ್ಯಾಪ್‌ಟಾಪ್‌ ಸಾಕು ಎಂದು ಇಂಟೆಲ್‌ ಡುಯಲ್‌ ಕೋರ್‌, 320 ಜಿಬಿ ಹಾರ್ಡ್‌ ಡಿಸ್ಕ್, 2 ಜಿಬಿ RAM ಇರುವ ಲ್ಯಾಪ್‌ಟಾಪ್‌ ಒಂದನ್ನು ಕಟ್ಟಲು ನೋಡಿದ.

ಅದನ್ನು ನಾನು ಕೊಂಡುಕೊಂಡು ಬರಬೇಕಿತ್ತು. ಅಷ್ಟರಲ್ಲಿ ಅದರ ಆಪರೇಟಿಂಗ್‌ ಸಿಸ್ಟಮ್‌ ಯಾವುದು ಎಂದು ಗಮನಿಸಿದೆ. ವಿಂಡೋಸ್‌ ಸೆವೆನ್ ಹೋಮ್‌. ಅದರಲ್ಲಿ ನನ್ನ ಕನ್ನಡ ಸಾಫ್ಟ್‌ವೇರ್‌ ಕೆಲಸ ಮಾಡುವುದಿಲ್ಲ ಎಂದು ಅನುಮಾನವಾಯಿತು. ಸೂರಿ ಲ್ಯಾಪ್‌ಟಾಪ್‌ ಕೊಂಡುಕೊಂಡಾಗ ಅದೇ ಸಮಸ್ಯೆ ಎದುರಿಸಿದ್ದರು. ಅಂಗಡಿಯವನ ಬಳಿ ಕೇಳಿದರೆ ಅವನು ಅಂಥದ್ದೇನಿಲ್ಲ ಬಿಡಿ ಎಂದು ಕೊಂಚ ಅನುಮಾನದಿಂದಲೇ ಹೇಳಿದ. ಕಂಪ್ಯೂಟರ್‌ ಬಗ್ಗೆ ತುಂಬ ಚೆನ್ನಾಗಿ ಗೊತ್ತಿರುವ ಒಬ್ಬರಿಗೆ ಫೋನು ಮಾಡಿದೆ. ಅವರು ಹೇಳಿದ್ದು ಕೇಳಿ ಮತ್ತಷ್ಟು ಗಾಬರಿಯಾಯಿತು.  “ಬುದ್ಧಿ ಇದೆಯೇನ್ರಿ ನಿಮಗೆ. ವಿಂಡೋಸ್‌ ಸೆವೆನ್‌ 64 ಬಿಟ್‌. ನಿಮ್ಮ ಕನ್ನಡ ಸಾಫ್ಟ್‌ವೇರ್‌ಗಳು 32 ಬಿಟ್‌. ಅದರಲ್ಲಿ ಇದು ಕೆಲಸ ಮಾಡೋದಿಲ್ಲ. ಕೆಲಸ ಮಾಡಲೇಬೇಕು ಅಂತಾದರೆ ಒಂದು ದಾರಿ ಇದೆ. ವಿಂಡೋಸ್‌ ಪ್ರೊಫೆಷನಲ್‌ ಆಪರೇಟಿಂಗ್‌ ಸಿಸ್ಟಮ್‌ ಹಾಕಿಸಿಕೊಳ್ಳಿ.  ಮೂರು ಜಿಬಿ ಮೆಮರಿ ಅತ್ಯಗತ್ಯ. ಅದಿದ್ದರೆ ಎಕ್ಸ್‌ಪಿ ಮೋಡ್‌ ಲೋಡ್‌ ಮಾಡಿಕೊಂಡು ವರ್ಚುವಲ್‌ ಪಿಸಿಯಲ್ಲಿ ಅದನ್ನೆಲ್ಲ ಹಾಕಿಕೊಳ್ಳಬಹುದು. ಇಲ್ಲದೇ ಹೋದರೆ ಏನೂ ಮಾಡೋಕ್ಕಾಗಲ್ಲ. ನಿಮ್ಮ ಹಾಗೇ ಕವಿಯೊಬ್ಬರು ಕಂಪ್ಯೂಟರ್‌ ಹೊತ್ತುಕೊಂಡು ಮನೆಗೆ ಬಂದಿದ್ದರು. ಹೇಳದೇ ಕೇಳದೇ ಕೊಂಡುಕೊಂಡು ಎಡವಟ್ಟಾಗಿ ಹೋಗಿತ್ತು’ ಎಂದು ರೇಗಿದರು ಅವರು.

ನಿಜಕ್ಕೂ ಏನಾಗುತ್ತಿದೆ ಎಂದರೆ, ಯೂನಿಕೋಡ್‌ ತಂತ್ರಾಂಶದ ಅಭಿವೃದ್ಧಿಗೆ ಯಾರೂ ಪ್ರಯತ್ನಿಸುತ್ತಿಲ್ಲ. ಈ ನುಡಿ ಮತ್ತು ಬರಹವನ್ನು ನಂಬಿಕೊಂಡು ಕೂತಿದ್ದೇವೆ. ಲಕ್ಷಾಂತರ ರೂಪಾಯಿ ಕೊಟ್ಟು ಪೇಜ್‌ಮೇಕರ್‌ ಸಾಫ್ಟ್‌ವೇರ್‌ಗಳನ್ನು ಕೊಳ್ಳುವ  ಸಂಸ್ಥೆಗಳು ಅದಕ್ಕೆ ಒತ್ತಾಯಿಸಬೇಕು. ಯಾರೂ ಆ ಕೆಲಸ ಮಾಡ್ತಿಲ್ಲ  ಎಂಬುದು ಅನೇಕರ ಸಿಟ್ಟು. ಅಷ್ಟಕ್ಕೂ  ಪತ್ರಿಕೋದ್ಯಮದಲ್ಲಿ ಸರಿಯಾದ ಕಂಪ್ಯೂಟರ್‌ ಜ್ಞಾನ ಇರುವವರು ಮೂರೋ ನಾಲ್ಕೋ ಮಂದಿ. ಉಳಿದವರಿಗೆ ಅದೇನು ಅನ್ನುವುದೂ ಗೊತ್ತಿಲ್ಲ. ಇದೇ ಮಾತನ್ನು ತೇಜಸ್ವಿಯವರೂ ಹೇಳುತ್ತಿದ್ದರು. ಅವರೂ ಕೂಡ ಹಳೇ ತಂತ್ರಾಂಶವನ್ನಿಟ್ಟುಕೊಂಡು ಒದ್ದಾಡಿದವರೇ. ಕನ್ನಡಕ್ಕೆ ಹೊಸ ತಂತ್ರಾಂಶವೊಂದನ್ನು ಹುಟ್ಟುಹಾಕಬೇಕು ಎಂದು ಅವರೂ ಅವರ ಗೆಳೆಯರೂ ಸಾಕಷ್ಟು ಪರದಾಡಿದ್ದರು. ಗೆಳೆಯ ಹಾಗೆ ಹೇಳಿದ ಮೇಲೆ ನನ್ನ ಸಮಸ್ಯೆ ಮತ್ತಷ್ಟು ಜಟಿಲವಾಯಿತು. ಮನೆಗೆ ಬಂದವನೇ, ನಾನು ಬಳಸುವ ಸಾಫ್ಟ್‌ ವೇರ್‌ ಅಭಿವೃದ್ಧಿ ಪಡಿಸಿದ ಸಿಡಾಕ್‌ ಸಂಸ್ಥೆಯ ವೆಬ್‌ಸೈಟು ನೋಡಿದೆ. ಅಲ್ಲಿ ಆ ಸಾಫ್ಟ್‌ವೇರ್‌ ವಿಂಡೋಸ್‌ ವಿಸ್ತಾ ಮತ್ತು ವಿಂಡೋಸ್‌ ಸೆವೆನ್‌ಗೆ ಹೊಂದಿಕೆಯಾಗುವುದಿಲ್ಲ ಎಂದಿತ್ತು. ಅದಕ್ಕೇನು ಪರಿಹಾರ ಎನ್ನುವುದನ್ನು ಅವರು ಸೂಚಿಸಿರಲಿಲ್ಲ.

ವಿಂಡೋಸ್‌ 7 ಅಲ್ಟಿಮೇಟ್‌ನಲ್ಲಿ 32 ಬಿಟ್‌ ವರ್ಷನ್‌ ಲಭ್ಯವಿದೆ ಎಂದು ಗೆಳೆಯರೊಬ್ಬರು ಸಲಹೆ ಕೊಟ್ಟರು. 64 ಬಿಟ್‌ ಲ್ಯಾಪ್‌ಟಾಪ್‌ ತೆಗೆದುಕೊಂಡು 32 ಬಿಟ್‌ ಆಪರೇಟಿಂಗ್‌ ಸಿಸ್ಟಮ್‌ ಯಾಕೆ ಹಾಕ್ಕೋತೀರಿ. ಇದೊಂದು ಕನ್ನಡ ಸಾಫ್ಟ್‌ವೇರ್‌ಗೊಸ್ಕರ ಅದನ್ನೆಲ್ಲ ಯಾಕೆ ಮಾಡಬೇಕು ಎಂದು  ಮತ್ಯಾರೋ ನನ್ನ ಯೋಚನೆಯನ್ನು ತಳ್ಳಿ ಹಾಕಿದರು. ಕನ್ನಡದಲ್ಲಿ ಬರೆಯೋದಕ್ಕೆ ಹಳೇ ಮೆಷಿನ್‌ ಇಟ್ಟುಕೊಳ್ಳಿ. ಬೇರೆ ಕೆಲಸಕ್ಕೆ ಹೊಸ ಮೆಷಿನ್‌ ಬಳಸಿ. ಕನ್ನಡದಲ್ಲಿ ಅಷ್ಟೊಂದು ಬರೆಯೋದಕ್ಕೇನಿರುತ್ತೆ ಅಂತ ಒಂದು ಅಂಗಡಿಯಾತ ಸಲಹೆ ಕೊಟ್ಟ. ಮತ್ತೂಂದು ಅಂಗಡಿಗೆ ಹೋದರೆ ಅವನು ಗುಜರಿ ಸಾಮಾನುಗಳನ್ನು ಮಾರುವ ವ್ಯಾಪಾರಿಯ ಹಾಗೆ ವಿವಿಧ ಗಾತ್ರದ, ಮಾಸಿದ ಲ್ಯಾಪ್‌ಟಾಪುಗಳನ್ನಿಟ್ಟುಕೊಂಡು ಕೂತಿದ್ದ. ನನಗೆ ಬೇಕಾದ ಲ್ಯಾಪ್‌ಟಾಪ್‌ ಬಗ್ಗೆ ಕೇಳಿದಾಗ, ಯಾರಿಗೋ ಫೋನ್‌ ಮಾಡಿ ಮೈ ಅಬ್ಟಾಸ್‌… ಎಂದು ಶುರುಮಾಡಿ ಹಿಂದಿ ಮಿಶ್ರಿತ ಉರ್ದುವಿನಲ್ಲಿ ಏನೇನೋ ಕೇಳಿದ. ಅರ್ಧಗಂಟೇಲಿ ಲ್ಯಾಪ್‌ಟಾಪ್‌ ತರಿಸಿ ಕೊಡ್ತೀನಿ. ಅದೇನು ಬೇಕಿದ್ರೂ ಮಾಡೋಣ. ಸಾಫ್ಟ್‌ವೇರ್‌ ಎಲ್ಲಾ ಫ್ರೀ ಕೊಡ್ತೀನಿ ಅಂದ. ನಮಗೆ ಗಾಬರಿಯಾಗಿ ಅಲ್ಲಿಂದ ಕಾಲು ಕಿತ್ತೆವು.
ಸೋನಿ ಒಳ್ಳೇದೇ, ಆದರೆ ಅವರು ತಾವೇ ಮಹಾರಾಜರು, ತಮ್ಮದೇ ಸ್ಟಾಂಡರ್ಡ್‌ ಅಂದ್ಕೊಂಡಿರ್ತಾರೆ. ಡೆಲ್‌ ಅತ್ಯುತ್ತಮ, ಆದರೆ ಅವರ ಶೋರೂಮ್‌ ಇಲ್ಲ. ಎಚ್‌ಪಿ ಡಿವಿ ಸೀರೀಸ್‌ ಚೆನ್ನಾಗಿದೆ. ಆದರೆ ನಾವು ತಗೊಂಡಿರೋ ಲ್ಯಾಪ್‌ಟಾಪ್‌ ಪಕ್ಕ ಮೊಬೆ„ಲ್‌ ಇಟ್ಟರೆ ಸಿಸ್ಟಮ್‌ ಹ್ಯಾಂಗ್‌ ಆಗಿಹೋಗುತ್ತೆ. ಲೆನೋವಾ ಒಳ್ಳೆಯ ಸಿಸ್ಟಮ್ಮೇ, ಆದರೆ ದುಬಾರಿ. ಏಸರ್‌ ಸಾಮಾನ್ಯ ಅಷ್ಟೇ. ತೋಷಿಬಾ ಚೆನ್ನಾಗಿದೆ, ನಂಬಿಕಸ್ತ ಅಲ್ಲ… ಹೀಗೆ ನೂರೆಂಟು ಸಲಹೆಗಳೂ ಎಚ್ಚರಿಕೆಯ ಮಾತುಗಳೂ ಬಂದವು. ಈ ಮಧ್ಯೆ ಗೆಳೆಯರೊಬ್ಬರು ಫೋನ್‌ ಮಾಡಿ ಮ್ಯಾಕ್‌ ಸಿಸ್ಟಮ್‌ ತಗೊಳ್ಳಿ. ಅದರ ಮುಂದೆ ಬೇರೆ ಯಾವುದೂ ಇಲ್ಲ ಅಂದರು. ಅರವತ್ತು ಸಾವಿರಕ್ಕೆಲ್ಲ ಸಿಗುತ್ತೆ ಅಂತ ಸಲಹೆ ಕೊಟ್ಟರು. ಗೆಳೆಯ ಸೂರಿಯವರ ಕೈಯಲ್ಲಿ ಆ ಮೋಹಿನಿಯನ್ನು ನೋಡಿದ್ದ ನಾನು ಅದೇ ವಾಸಿ ಎಂದುಕೊಂಡು ವಿಚಾರಿಸಿದರೆ ಮತ್ತಷ್ಟು ಹೃದಯವಿದ್ರಾವಕ ಸಂಗತಿಗಳು ಹೊರಬಿದ್ದವು.
ಮ್ಯಾಕ್‌ನಲ್ಲಿ ಕನ್ನಡ ಕೆಲಸ ಮಾಡುವುದೇ ಇಲ್ಲ. ಅದಕ್ಕೆ ಮತ್ತೆ ವಿಂಡೋಸ್‌ ಹಾಕಿಕೊಳ್ಳಬೇಕು. ಮ್ಯಾಕ್‌ಗೆ ಹಾಕುವ ವಿಂಡೋಸ್‌ಗೆ ಹದಿನೆಂಟು ಸಾವಿರ ಕೊಡಬೇಕು. ಅದಾದ ಮೇಲೂ ಮ್ಯಾಕ್‌ ಕೇವಲ ಒರಿಜಿನಲ್‌ ಸಾಫ್ಟ್‌ವೇರ್‌ಗಳನ್ನು ಮಾತ್ರ ಸ್ವೀಕರಿಸುತ್ತದೆ. ಹೀಗಾಗಿ, ನಮ್ಮ ಅಗತ್ಯಕ್ಕೆ ಬೇಕಾದಂತೆ ಅದನ್ನು ಸಿದ್ದಪಡಿಸಲು ಒಂದೂವರೆ ಲಕ್ಷ ಖರ್ಚಾಗುತ್ತದೆ. ಮತ್ತೆ ಬಂದು ನನ್ನ ಹಳೆಯ ಲ್ಯಾಪುಟಾಪಿನ ಮುಂದೆ ಕೂತೆ. ಕೀಬೋರ್ಡ್‌ ಕಿತ್ತುಹೋದ, ಮೌಸ್‌ ಕೆಲಸ ಮಾಡದ ಅದೇ ತುಂಬ ವರ್ಷ ಜೊತೆಗೆ ಸಂಸಾರ ಮಾಡಿದ ಹೆಂಡತಿಯಂತೆ ಆಪ್ತ ಅನ್ನಿಸಿತು. ಮನೆಯ ಪಕ್ಕದಲ್ಲಿದ್ದ ಅಂಗಡಿಗೆ ಹೋದರೆ ಅವನು ಪುಟ್ಟದೊಂದು ಕೀ ಬೋರ್ಡ್‌ ಕೊಟ್ಟ, ವೈರ್‌ಲೆಸ್‌ ಮೌಸ್‌ ಕೊಟ್ಟ. ಅದನ್ನು ಜೋಡಿಸಿಕೊಂಡು ಹಳೇ ಲ್ಯಾಪ್‌ಟಾಪಿನ ಮೇಲೆ ಬೆರಳಾಡಿಸುತ್ತಿದ್ದರೆ ಸಪ್ತಸ್ವರಗಳು ಹೊಮ್ಮಿದವು. ಕನ್ನಡ ಬರೆಯುವುದನ್ನು ಬಿಡುವುದಾ, ಕನ್ನಡಕ್ಕೊಂದು ತಂತ್ರಾಂಶ ಬೇಕು ಎಂದು ಜಗಳ ಆಡುವುದಾ, ಮತ್ತೆ ಪೆನ್ನಿನಲ್ಲಿ ಬರೆಯಲು ಆರಂಭಿಸೋದಾ ಎಂದು ಯೋಚಿಸುತ್ತಾ ಕೂತಿದ್ದೇನೆ. ಕಣ್ಮುಂದೆ ಲ್ಯಾಪುಟಾಪುಗಳು ಮೆರವಣಿಗೆ ಹೊರಟಿವೆ.

‍ಲೇಖಕರು avadhi

January 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Harshakumar Kugwe

    :-):-) ಸರ್ ನೀವು ಸಿಕ್ಕಾ ಪಟ್ಟೆ ತಲೆ ಕೆಡಿಸಿಕೊಂಡ ಪರಿಣಾಮ ಇದು…. ನಾನಂತೂ ಸುಮ್ಮನೇ ಕೈಯಲ್ಲಿರೋ ಇಪ್ಪತ್ತು ಸಾವಿರಕ್ಕೆ ಯಾವ ಲ್ಯಾಪ್ ಟಾಪ್ ಬರುತ್ತೆ ಅಂತ ನೋಡಿ ಒಂದು ತೊಷಿಬಾ ಲ್ಯಾಪ್ ಟಾಪ್ ತೆಗೆದುಕೊಂಡು ಬಂದೆ… ತಲೆಬಿಸಿ ಇಲ್ಲ… ಬೇಕಾದ್ಬ ಮಾಡಿಕೊಂಡು ಇದ್ದೇನೆ….

    ಪ್ರತಿಕ್ರಿಯೆ
  2. h a patil

    – ಸರ್ ನಿಮ್ಮ ಲ್ಯಾಫ್ ಟಾಪ್ ಖರೀದಿ ಪ್ರಸಂಗ ನಿಮ್ಮ ಪಡಿಪಾಟಲಷ್ಟೆ ಅಲ್ಲ ಎಲ್ಲ ಕನ್ನಡಿಗ ಆಸಕ್ತರದೂ ಹೌದು, ಉತ್ತಮ ಲೇಖನ.

    ಪ್ರತಿಕ್ರಿಯೆ
  3. Anil Talikoti

    ‘ಕೀಬೋರ್ಡ್‌ ಕಿತ್ತುಹೋದ, ಮೌಸ್‌ ಕೆಲಸ ಮಾಡದ ಅದೇ ತುಂಬ ವರ್ಷ ಜೊತೆಗೆ ಸಂಸಾರ ಮಾಡಿದ ಹೆಂಡತಿಯಂತೆ ಆಪ್ತ ಅನ್ನಿಸಿತು.’ ಆಹಾ ಮಸ್ತ ಮಸ್ತ ಲೇಖನ. ಇಪ್ಪತ್ತು ವರ್ಷ ಈ ಸಾಫ್ಟ್‌ವೇರಲ್ಲಿ ಕೆಲಸ ಮಾಡಿದ್ರೂ ತಲೆಯಿಂದ ಅಕ್ಷರಕ್ಕೆ ಹೋಗಲು ಕೈಯಿಂದ ಹಾಳೆಗೆ ಹೋಗುವದೆ ಒಳ್ಳೆಯದೇನೋ ಎನಿಸಿದಿದ್ದೆ ಕೆಲವೊಮ್ಮೆ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: