ನನ್ನ ಮನೆ, ನನ್ನ ಮನೆ..

ಕರೋನಾ ನನಗೆ ಮನನದ ಕಾಲ 

ಸತೀಶ ಕುಲಕರ್ಣಿ

ಮಾರ್ಚ ೧೪ ರಿಂದ ಶುರುವಾದ ಕೊರೋನಾ ಯಾನ ನನಗೆ ಬಹಳಷ್ಟು ಪಾಠಗಳನ್ನು ಕಲಿಸಿದೆ. ಸಭೆ ಸಮಾರಂಭ, ಬೀದಿ ನಾಟಕ, ವಿಚಾರ ಸಂಕಿರಣ ಹೀಗಂತ ಗಿಜಗುಡುತ್ತಿದ್ದ ನನ್ನ ನಿತ್ಯ ದಿನಚರಿಯಲ್ಲಿ ವಿರಾಮ ಎಂಬ ಪದವೇ ಇರಲಿಲ್ಲ. ಅದು ತಿಳಿದು ಬಂದದ್ದು ಈಗಲೇ.

ಹೆಚ್ಚು ಕಡಿಮೆ ಈ ಅವಧಿಯಲ್ಲಿ ಎರಡು ಸಂಗತಿಗಳು ನನಗೆ ಮನದಟ್ಟಾಗಿವೆ. ಒಂದು ಮನೆಯಲ್ಲಿಯೇ ಕುಳಿತು ಬಹಳಷ್ಟು ಕೆಲಸಗಳನ್ನು ಮಾಡಬಹುದು. ಎರಡು, ನಮ್ಮ ನಡೆದು ಬಂದ ದಾರಿಯನ್ನು ಒಮ್ಮೆಯಾದರೂ ಅವಲೋಕಿಸಿಕೊಳ್ಳುವ ವ್ಯವಧಾನ ಬೇಕೆಂಬುದು. ಇವು ನನಗೆ ಹೊಸ ದಾರಿಗಳನ್ನು ಹುಡುಕುವ ಮನನದ ಕಾಲ.

ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ – ಇದು ಬಂಡಾಯ ಸಾಹಿತ್ಯ ಸಂಘಟನೆಯ ಧ್ಯೇಯ ವಾಕ್ಯ. ಇದನ್ನು ಕಳೆದ ೪೦ ವರ್ಷಗಳಿಂದ ಅನುಚಾಚಿಸುತ್ತ ಬಂದವನು ನಾನು. ಕೊರೋನಾ ಕರ್ನಾಟಕದಲ್ಲಿ ಹುಟ್ಟಕೊಂಡಾಗಿಂದ ರಾಜ್ಯ ಸರಕಾರದ ಮತ್ತು ಜಿಲ್ಲಾ ಆಡಳಿತದ ಟಾಸ್ಕ್ ಸಮಿತಿಯಲ್ಲಿ ಸಲಹೆಗಾರನಾಗಿ ಕೆಲಸ ಮಾಡುತ್ತಿರುವೆ. ಇದು ನನ್ನ ಸಾಹಿತ್ಯಕ್ಕೂ ನಾಳೆ ದಿನ ಜೀವಜಲವಾಗಬಹುದು. ಕಳೆದ ೮-೧೦ ದಿನಗಳಿಂದ ಅನೇಕ ನಿರ್ಗತಿಕರು, ಅಸಹಾಯಕರಿಗೆ ಒಂದಿಷ್ಟು ಸರಕಾರದ ಮುಖೇನ ಸಹಾಯ ಮಾಡಿದ ಸಮಾಧಾನ ನನ್ನದು.

ಮುಖ್ಯವಾಗಿ ನಾನೊಬ್ಬ ಪ್ರಗತಿಪರ ವಿಚಾರಧಾರೆಯ ಲೇಖಕ. ನನ್ನ ಲೋಕದಲ್ಲಿಯೇ ಪುಸ್ತಕ ಮತ್ತು ಸಮಾಜ – ಸಂಸ್ಕೃತಿಯ ಚಿಂತನೆ ಮಾಡಿದವ. ಆದರೆ ಮನೆಗೆ ನಾಲ್ಕು ಗೋಡೆಗಳಿವೆ. ಈಗ ಮುಚ್ಚಿದ ಬಾಗಿಲು ಕಿಡಕಿಗಳು ಇವೆ ಎಂದು ಗೊತ್ತೇ ಇರಲಿಲ್ಲ. ಅವನ್ನೆಲ್ಲ ಪ್ರೀತಿಸುತ್ತಿರುವೆ. ಇದು ನನಗೆ ವರದಾನದ ಕಾಲ. ಕುವೆಂಪು ಅವರ ನನ್ನ ಮನೆ ನನ್ನ ಮನೆ ಪ್ರಸಿದ್ಧ ಕವಿತೆ ನೆನಪಾಯಿತು.

ನನ್ನ ಪ್ರೀತಿಯ ಲೇಖಕರಾದ ಪೂರ್ಣಚಂದ್ರ ತೇಜಸ್ವಿ ಅವರ ಮಾಯಾ ಲೋಕ, ಟ್ಯಾಗೂರರ ರವೀಂದ್ರ ಕಥಾಮಂಜರಿ, ಕಾರ್ನಾಡರ ನಾಟಕಗಳನ್ನು ಮತ್ತೊಮ್ಮೆ ಓದಿದೆ. ಸುಮಾರು ೬೦ ಕ್ಕೂ ಹೆಚ್ಚು ಹೊಸ ಪುಸ್ತಕಗಳನ್ನು ಓದಿರುವೆ. ಓದಿನ ರುಚಿ, ಅದರ ಖುಷಿ ಹಿತ ಸೊಬಗುಗಳನ್ನೆಲ್ಲ ಉಂಡಿರುವೆ. ಎಂಥ ಸುಖವನ್ನು ಕಳೆದುಕೊಂಡಿದ್ದೆ ಎಂಭ ಭಾವ ಉಕ್ಕಿ ಬಂತು.

ಅನೇಕ ಸಭೆ ಸಮಾರಂಭಗಳಿಗೆ ಹೋದಾಗ ಹೊಸ ಲೇಖಕರು ಕೊಟ್ಟ ಹತ್ತಾರು ಪುಸ್ತಕಗಳನ್ನು, ಕಳೆದು ತಿಂಗಳು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ. ಚಂದ್ರಶೇಖರ ಕಂಬಾರ ತಮ್ಮ ಹೊಸ ನಾಟಕವನ್ನು ಹಸ್ತಾಕ್ಷರ ಸಹಿತ ನೀಡಿದ್ದರು. ಅವನ್ನೆಲ್ಲ ಓದಿದೆ. ಬೇರೆ ಬೇರೆ ಕಡೆಗೆ ಹೋದಾಗ ಕೊಂಡುಕೊಂಡ ಅಮೂಲ್ಯವಾದ ಸಾವಿರಾರು ಪುಸ್ತಕಗಳನ್ನು ಈ ದಿನಗಳಲ್ಲಿ ನೀಟಾಗಿ ಹೊಂದಿಸಿಟ್ಟಿರುವೆ. ಸಾಹಿತ್ಯ ಸಂಗಾತಿ ಎಂಬ ಇಡೀ ಸಾಹಿತ್ಯ ಚರಿತ್ರೆಯನ್ನು ಪರಿಚಯಿಸುವ ಪುಸ್ತಕ ನನ್ನ ಸಂಗಾತಿಯಾಗಿದೆ.

ಸಾವಿರಾರು ಸಭೆ ಸಮಾರಂಭಗಳ ಕೌಟುಂಬಿಕ ಫೋಟೋಗಳು ಅನಾಥವಾಗಿ ಬಿದ್ದಿದ್ದವು. ನನ್ನ ಮಗ ಶಾಲೆಯಲ್ಲಿ ಪ್ರಶಸ್ತಿ ಪಡೆದ ಫೋಟೋ, ಮಗಳ ನೃತ್ಯ ಭಂಗಿ, ನನ್ನ ಹೆಂಡತಿ ಸಭೆಯೊಂದರಲ್ಲಿ ಹಾಕಿದ ಯಾಲಕ್ಕಿ ಹಾರದ ಫೋಟೋ ಎಲ್ಲವುಗಳನ್ನು ಅಚ್ಚುಕಟ್ಟಾಗಿ ಒಂದು ಕಡೆಗೆ ಹೊಂದಿಸಿಟ್ಟಿರುವೆ. ಕಂಬಾರ, ಕಾರ್ನಡ್, ಚಂಪಾ, ಕುವೆಂಪು, ವೈದೇಹಿ, ಗುರುಲಿಂಗ ಕಾಪಸೆ, ಸರ್ಜೂ ಕಾಟಕರ್, ಸಂಕಮ್ಮ ವಿಜಯಕಾಂತ ಪಾಟೀಲರ ಫೋಟೋಗಳು ಹಲವು ನೆನಪುಗಳಿಂದ ಘಮ ಘಮಿಸುತ್ತಿದ್ದವು.

ನನ್ನ ಮೊದಲ ಚಲನಚಿತ್ರ ಇಂಗಳ ಮಾರ್ಗ, ಆನಂತರದ ೨೨ ಜುಲೈ ೧೯೪೭, ಸಾವಿತ್ರಿ ಬಾಯಿ ಫುಲೆ, ಹಾಗೂ ಇತ್ತೀಚಿನ ದಂತ ಪುರಾಣದ ಮೂಹರ್ತ ಸಮಾರಂಭಗಳ ಫೋಟೋಗಳ ನೋಡಿ ಚಕಿತನಾದೆ. ವಿ ಮನೋಹರ, ಸುಚೇಂದ್ರ ಪ್ರಸಾದ, ತಾರಾ, ಸಂಗೀತಾ ಕಟ್ಟಿ, ವಿಶಾಲರಾಜ, ಸರ್ಜೂ ಕಾಟ್ಕರ ಹಾಗೂ ನಮ್ಮೂರಿನ ಹತ್ತಾರು ಕಲಾವಿದರು ಚಿತ್ರೀಕರಣದಲ್ಲಿದ್ದ ಫೋಟೋಗಳು ಕೂಡಾ ಈಗ ಸೂಕ್ತ ಸ್ಥಾನದಲ್ಲಿವೆ.

ನನ್ನ ಸಾಹಿತ್ಯದ ಯಾನ ೪೦ ವರ್ಷಗಳದ್ದು. ಅನೇಕರು ಪತ್ರ ಬರೆದಿದ್ದಾರೆ. ದು.ನಿಂ. ಬೆಳಗಲಿ, ಜಯಂತ ಕಾಯ್ಕಿಣಿ, ವೈದೇಹಿ, ಕಾರ್ನಾಡ, ಡಾ. ಪ್ರಭಾವತಿ, ವ್ಯಾಸರಾಯ ಬಲ್ಲಾಳ, ಡಾ. ಧರಣೇಂದ್ರ ಕುರಕುರಿ, ಆರ್.ಜಿ. ಹಳ್ಳಿ ನಾಗರಾಜ, ಎಚ್.ಎಲ್. ಪುಷ್ಪಾ ಅನೇಕರ ಪತ್ರಗಳು ಮತ್ತೊಮ್ಮೆ ಓದಲು ಸಿಕ್ಕವು.

ಇನ್ನೊಂದು ವಿಶೇಷವೆಂದರೆ ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದವನು. ಆದರೆ ಈ ದಿನಗಳಲ್ಲಿ ಕನ್ನಡ ಸಿನಿಮಾ ರಂಗವನ್ನು ಬದಲಾಯಿಸಿದ ಸಂಸ್ಕಾರ ಸಿನಿಮಾ ನೋಡಿದೆ. ಕಾರ್ನಡ್, ಪಟ್ಟಾಭಿರಾಮ ರೆಡ್ಡಿ, ಸ್ನೇಹಲತಾ ರೆಡ್ಡಿ, ಸಿ,ಆರ್ ಸಿಂಹ ಅವುರುಗಳ ಯವ್ವನದ ದಿನಗಳಲ್ಲಿ ತಯಾರಾದ ಸಂಸ್ಕಾರ ಮನಸ್ಸನ್ನು ಅರಳಿಸಿತು. ಸಿನೇಮಾ ಕೊನೆಯಲ್ಲಿ ಪ್ರಾಣೇಶಾಚಾರ್ಯ ಹೇಳುವ – ನಾರಾಯಣಪ್ಪ ( ಲಂಕೇಶ ) ಎಲ್ಲ ಬಿಚ್ಚಿ ಬದುಕಿದ, ನಾನು ( ಕಾರ್ನಾಡ ) ಪ್ರಾಣೇಶಾಚಾರ್ಯ ಮುಚ್ಚಿಟ್ಟು ಬದುಕಿದೆ ಎಂಬ ಮಾತಿ ಎದೆಯಲ್ಲಿ ನೆಟ್ಟಿತು. ಇದೇ ಸಂದರ್ಭದಲ್ಲಿ ಶಂಕರನಾಗರ ಮಾಲ್ಗುಡಿ ಡೇಸ್ ದಿನಕ್ಕೊಂದು ಕಂತಿನಂತೆ ನೋಡಿದೆ. ಶಂಕರನಾಗ ಈಗ ಇದ್ದಿದ್ದರೆ ? ಎಂಬ ಮಾತು ಕಾಡಿದೆ.

ನನ್ನ ಮಗ ನವೀನ ಒಬ್ಬ ಸಾಪ್ಟವೇರ ಉದ್ಯೋಗಿ. ಅವನು ಈಗ ಮನೆಯಲ್ಲಿಯೇ ವರ್ಕ ಪ್ರಾಮ್ ಹೋಮ್ ಮಾಡುತ್ತಿದ್ದಾನೆ. ಲ್ಯಾಪ್ ಟ್ಯಾಪೇ ಅವನ ಬ್ರಹ್ಮಾಂಡ. ಅವನು ಬೆಂಗಳೂರಿನಲ್ಲಿದ್ದಾಗ ಏನು ಮಾಡುತ್ತಿದ್ದ ಎಂಬುದ ಗೊತ್ತೇ ಇರಲಿಲ್ಲ. ದಿನಕ್ಕೊಂದು ಫೋನು ಮಾಡಿ ಊಟ ಆತಾ ?, ಆಫೀಸೋ ಮನೇನೋ ? ಅಂತ ಕೇಳಿದ್ದು ಬಿಟ್ಟರೆ ಅವನ ಶ್ರಮ ಜೀವನದ ಬಗ್ಗೆ ಗೊತ್ತೇ ಇರಲಿಲ್ಲ.

ಕೊರೋನ ಜಗತ್ತಿನಲ್ಲಿ ಆಗುವುದೆಲ್ಲದಕ್ಕೆ ನಮಗೂ ಸಂಬಂಧವಿದೆ ಎಂದು ಕಲಿಸಿದೆ. ಅಮೇರಿಕಾ, ಇಟಲಿ, ಚೀನಾ ಜರ್ಮನ್, ಸ್ಪೇನ್ ಎಲ್ಲ ದೇಶಗಳು ಸಾವಿನ ತಟ್ಟೆಯಲ್ಲಿವೆ ಎಂಬುದನ್ನು ತೋರಿಸಿಕೊಟ್ಟಿದೆ. ಜೀವನಕ್ಕೂ ಒಂದು ವೇಗವಿದೆ. ಅದನ್ನು ಆಗಾಗ ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ಕೊಟ್ಟಿದೆ.

‍ಲೇಖಕರು avadhi

April 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dhanyakumar Minajagi

    ” ನನ್ನ ಮನೆ ನನ್ನ ಮನೆ” ತಮಗೆ “ಮನೆ”ಏನು ಎಂಬುದನ್ನು ಅದರಲ್ಲಿ ಕಂಡುಂಡ ಸುಖದ ಅನುಭವವನ್ನು ಈಗ ಅವತರಿಸಿದ ಕರೋನಾ ತೋರಿಸಿಕೊಟ್ಟಿದೆ. ಈ ಅನುಭವ ಪ್ರಾಯಶಃ ಸಾಹಿತ್ಯಾಸಕ್ತ ಮತ್ತು ಕಲಾಸಕ್ತ ಮನಸುಗಳಿಗೆ ಸಾಧ್ಯ.
    ನಾನೂ ಕೂಡ ನಾನು ಕೊಂಡು ಕೊಂಡಿದ್ದ ಪುಸ್ತಕಗಳ ಧೂಳೊರಸಿ, ತಿರುವಿ ಹಾಕುತ್ತಿರುವಾಗ ಅನುಭವಿಸಿದ ಸಂತಸ ಹೇಳಲಸದಳ.‌ಹಲವು ನೆನಪುಗಳ ಸರಮಾಲೆಯನ್ನು ಮುಂದಿರಿಸಿತು.

    ತಮ್ಮ ಲೇಖನ ಮುದನೀಡಿತು. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: