ನನ್ನ ಕಣ್ಣಲ್ಲಿ ಹೊನ್ನಳ್ಳಿನ್ನ ಮರಿದಿರಂಗೆ ಕೊರ್ದು ಕೂರಿಸಿದೆ..

ಹೊನ್ನಳ್ಳಿ ಅಮ್ಮ

ಮೂವತ್ತು ವರ್ಶದ ಹಿಂದೆ ಒಂದಿಸ “ನಮ್ಮೂರು ಬಡ್ಡೇಲೆ ಬಂದು ವಾಟೆಹೊಳೆ ಡ್ಯಾಮ್ ಕಟ್ಟವ್ರಲ್ಲಾ… ಅಲ್ಲಿ, ಏನು ಸಮುದ್ರದಲ್ಲಿ ನೀರು ನಿಂತಂಗೆ ನೀರು ನಿಂತೀತಂತೆ. ಎಲ್ಲರೂ ನೋಡಕಬತ್ತಾವರೆ. ನಾವು ನೋಡಿ ಬರನ ನಡೀರ್ರೆ” ಅಂತ ಆಚೀಚೆ ಮನೆ ಅಕ್ಕದೀರು ಅತ್ಗೇರು ಸೇರಕಂಡು ಹೊರಟ್ರು. ನಾಕು ದಿಸ ರಜಕ್ಕೆ ಅಂತ ಬಂದಿದ್ದ ನಾನೂವೆ ಅವ್ರ ಕುಟೆ ಹೊರಟೆ. ಈ ವಾಟೆ ಹೊಳೆ ಡ್ಯಾಮ್ ಅನ್ನೋದೆ ನಮ್ಮ ಕಡಿಕೆ ಬ್ಯಾಡಾಗಿತ್ತು. ಸಣ್ಣ ಸಣ್ಣ ಕಟ್ಟೆ ಹಾಕಿ  ಮಳೆರಾಯ ನೆಲಕ್ಕೆ ಹುಯ್ಯೋ ನೀರ ನಿಲ್ಲಸಕಂದು ಬೆಳೆ ಬೆಳೆಯಾದು ಬೇರೆ ಮಾತು. ಬಾವಿ, ಕೆರೆ, ಕಟ್ಟೆ  ಮಾಡಕಂಡು ಬ್ಯಾಸಾಯ ಮಾಡದು ರೈತರಿಗೆ ಆತಾವಲಿಂದಲೂ ಗೊತ್ತಿರೋ ವಿದ್ಯೆ. “ಹರ್ಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆನಾ?” ಅನ್ನೋ ಮಾತಿಗೆ ತಕ್ಕಂಗೆ ಅಲ್ಲಲ್ಲೇ ಬದ ಹಾಕಂದು, ನೀರ ಹಾಯಸಕಂದು ಯಾತಾ ಮಾಡಕಂದು ತಮಗೆಟ್ಕೋ ಹಂಗೆ ವ್ಯವಸಾಯ ಮಾಡಕ್ಕೆ ರೈತರ ಬುಡೋದ ಬುಟ್ಟು ಇದ್ಯಾವ ಬದುಕು?

ಈ ಸರ್ಕಾರ ಅನ್ನದರ ಕಿವಿಗೆ ಯಾರ ಹೇಳುದ್ರೋ ಕಾಣಪ್ಪ…. ಮಳೆಗಾಲದಲ್ಲಿ ಜೋರಾಗಿ ಹರದು ಹೋಗೋಂತ, ಬ್ಯಾಸಗೇಲಿ ಸುಮಾರುಕ್ಕೆ ತಣ್ಣಗೆ ಸಣ್ಣಗೆ ಹರಿಯೋಂಥ ವಾಟೆಹೊಳೆ ಅನ್ನ ಸಣ್ಣ ಹಳ್ಳಕ್ಕೆ… ತಿಳುವಳಿಕಿಲ್ಲದೆ ತಂದು ಡ್ಯಾಮ್ ಕಟ್ಟಿದ್ದೆಯ…. ಬಂದು ಸುತ್ತುಮುತ್ತಿರೋ ಕುರುಚಲು ಕಾಡು, ದೊಡ್ಡ ಕಾಡು, ಗದ್ದೆ ಸೀಮೆಯ ಒಮ್ಮಕೆ ಮುಳುಗುಸುಬುಟ್ರು. ಇದ್ರಿಂದ ಮೂರುಕಾಸಿನ ಉಪಯೋಗ ಆಗ್ನಿಲ್ಲಾ ಅನ್ನಿ! ನಮ್ಮ ಸುತ್ತಿಗೆ. ಎಲ್ರೂ ಚೆಲ್ಲಾಪಿಲ್ಲಿ ಆಗೋಗಿದ್ದೇ ಬಂತು. ಅತ್ಲಾಗೆ ಊರೂರನ್ನೇ ವಕ್ಕಲೆಬ್ಬುಸಿ ದಿಕ್ಕಾಪಾಲ ಮಾಡಿದ್ದೂ ಅಲ್ಲದೇಯ… ಇನ್ಯಾವುದೋ ಕಾಡಲ್ಲಿ ತಗಹೋಗಿ ಮುಳುಗಡೆಯವರಿಗೆ ಜಾಗ ಕೊಟ್ರು. ಕಾಡೊಳಿಕೆ ಮುಳುಗಡೆ ಜನ ಬಂದ ಸೇರುದ್ದ ನೋಡಿದ್ದೆ ತಗ, ಒಳಗಿದ್ದ ಆನೆಗಳೆಲ್ಲಾ ಗಾಬರಾಗಿದ್ದೆ… ದಾರಿಗೆ ಬಂದು ನಿಂತಕಂಡು ಸಿಕ್ಕಸಿಕ್ಕದೋರನ್ನ ಸೊಂಡಲೆತ್ತಿ, ನಿಂತ ನಿಲುನಲ್ಲೇ ನೆಲಕ್ಕೆ ಬಡಿಯಕೆ ಸುರುವಾದು. ಆವತ್ತಿಂದ ಇವತ್ತವರ್ಗೂ ಅವು ರಸ್ತಿಗೆ ಬರೋದು ನಿಂತಿಲ್ಲ. ಇನ್ನ ಕಾಡು ಕಡದು ಹೊಲ ಮಾಡಕಂಡು ನಿಂತೋರ ಬೆನ್ನಿಗೇ ಬಂದು, ಚಿರತೆ ಕೀರ ಕಾಲಹಾಕಿ ನೆಲಕ್ಕೆ ಕೆಡುವಕಳ್ಳವು. ಮೈ ಕಯ್ಯ ಬಗದು ಹಾಕವು. ದೊಡ್ಡ ದೊಡ್ಡ ಹಾವು ದಿಕ್ಕುತಪ್ಪಿ ಬಂದಿದ್ದೆ ಮನೆ ಜಂತಿಗೆ ನುಲಕಂದು ಬುಸ್ ಅನ್ನಕಂದು ಬುಸ್ಗಟ್ಟವು. ಬೇಲಿ ಸಾಲಲ್ಲಿ ಮುಂಗುಸಿಕೀರ ಕುಂತು ಸಾಕಿದ ಕೋಳಿ ಒಂದನ್ನೂ ಬುಡದೇಯ ಹೊತಕಹೋಗವು. ರಾತ್ರೋರಾತ್ರಿ ಹಂದಿ ದಂಡು ಕಟ್ಟಕಂಡು ಬಂದಿದ್ದೆ ಮೂತಿಲಿ ಉತ್ತುಬಿತ್ತಿದ್ದ ಗೆಡ್ಡೆಗೆಣಸ ಬಗದು ಹಾಕವು. ಇತ್ತಲಾಗೆ ರೈತರೂ ದಿಕ್ಕಾಪಾಲು. ಕಾಡು ಮಿಕ ಅನ್ನವೂ ರಸ್ತೆಪಾಲು. ಅಂಥ ಭಂಗ!

ಹಿಂದೆ ಸುತ್ತಮುತ್ತ ಇದ್ದ ಕಾಡಿನ ತನುವಿಗೆ ಅಚ್ಚ್ಕಟ್ಟಾಗಿ ಮಳೆ ಹುಯ್ಯೋ ಜಾಗಾಗಿತ್ತು ಇದು. ಅಲ್ಲಲ್ಲೇ ಸಣ್ಣ ಏರು ದಿಬ್ಬಗಳು, ದಿಬ್ಬಗಳ ನಡುಮಧ್ಯಕ್ಕೆ ಒಳ್ಳೆ ತಂಬಟ್ಲಂಗೆ ನೀರು ಇಂಗೋ ಅಂಥ ಹುಲ್ಲುಗಾವಲು. ಕೆಳೂಗೆ ಹಳ್ಳ ಹರಿಯೊ ಅಕ್ಕ ಪಕ್ಕದಲ್ಲಿ ಗದ್ದೆ ಮಾಡಕಂದು, ದನಕರ ಸಾಕ್ಕಂದು, ಕೆರೆಲಿ ನೀರು ಅಳ್ಳಾಡದಂಗೆ ತುಂಬಸಕಂದು, ವರ್ಷೋಂಬತ್ತು ಕಾಲದಲ್ಲೂ ಮೀನು ಮಿಡಚಿ ಹಿಡಕಂದು ತಿನ್ನಕಂದು, ದಿವಿನಾಗಿ ಗದ್ದೆ ಬೇಸಾಯವ ಮಾಡರು. ಸಣ್ಣಕ್ಕಿ ಯಾಪಾರ ಅನ್ನದು ಅಲೂರಲ್ಲಿ ೫೦ ವರ್ಶದ ಹಿಂದೆ ದೊಡ್ಡದಾಗಿ ನಡೆಯದು. ಭತ್ತದ ವ್ಯಾಪಾರಕ್ಕೆ ಅಂತಲೇ ಸುತ್ತಮುತ್ಲ ಜನವೆಲ್ಲ ಸೇರರು. ದೂರದೋರಿಂದೆಲ್ಲ ಬಂದು ಕಾಸು ಮಾಡಕ ಹೋಗರು. ಸಣ್ಣಕ್ಕಿ ಆಲೂರು ಅಂತಲೇ ಅದು ಹೆಸರಾಗಿತ್ತು. ಅಂಥದ್ರಲ್ಲಿ ಊರ ಜನರ ಹೆಬ್ಬೆಟ್ಟು ವತ್ತಸಕಂದಿದ್ದೆ, ಊರ ಜಮೀನ ಅಳತೆ ಮಾಡಕಂದಿದ್ದೆ, ತಗ ಸಿಮೆಂಟು ಗಾರೆಯ ಲಾರೀಲಿ ತುಂಬಕಂದು ತಂದು ಕಲಸಿದ್ದೆಯ ಕಾಮಗಾರಿ ಅನ್ನಕಂದು ಮಾಡುದ್ರು. ಮಾಡುದ್ರು. ಯಾಕೇಳುತೀಯ? ವರುಷಾನಗಟ್ಟಲೆ ಮಾಡಿ ಅಂತೂ ಇಂತೂ ಗಾರೆ ಕಾವಲಿಲಿ ನೀರು ಕೊಟ್ರು. ಅದು ಹೆಂಗೇ? ಮಳೆಗಾಲದ ಬ್ಯಾಸಾಯಕ್ಕೆ ಅಂತವ. ಆರು ತಿಂಗಳು ಸುರಿಯೋ ಮಳೆ ನೀರಲ್ಲಿ ಮೊದ್ಲೂವೆ ಗದ್ದೆ ಬೆಳೆ ದಿವಿನಾಗೆ ಆಗದು. ಈಗ ನೋಡಪ್ಪಾ…. ಮಳೆಬೆಳೆ ಎರಡೂ ಇಲ್ಲದೆಯ ಬ್ಯಾಸಗೇಲಲ್ಲ. ಮಳೆಗಾಲ್ದಲ್ಲೂ ಪಾಳು ಬಿದ್ದವೆ ನೀರು ಕಾಲುವೆ ಅನ್ನವು. ವಾಟೆಹೊಳೇ ಅನ್ನದು ಒಂದು ದೊಡ್ದಕೆರೆ ಹಂಗೆ ನೀರ ಬೊಗಸೆಲಿ ಹಿಡಕಂದು ಪಾಳು ಹೊಡಿತಿತೆ. ಅಂತೂ ಇಂತೂ ಬಿಕ್ಕೋಡು ದಿಕ್ಕಲ್ಲಿ ಇದ್ದ ಕಾಡ ಮುಗುಸುದ್ರು.

ಈಗ ನೋಡುದ್ರೆ, ಇತ್ತಲಾ ದಿಕ್ಕಲ್ಲಿ ಎಲ್ಲೋ ವಸಿ ಉಳುದುಹೋಗಿರೋ ಅಂಥಾ! ಸಕಲೇಶಪುರದ ದೊಡ್ಡಕಾಡಲ್ಲೂ ತಕ… ಆನೆಗಾತ್ರದ ಕೊಳಪೆ ತಂದಿದ್ದೇಯ ಬೆಟ್ಟಗುಡ್ದದ ಒಡಲ ಬಗದು ಹಂಗೇ ಹರಿತಾವರೆ. ಕಾಡೊಳಗೆ ಪ್ರಾಣಾವ ಗಟ್ಯಾಗಿ ಕೈಲಿ ಹಿಡಕಂಡು ಹರುದಾಡುಕೊಂಡು, ಕಾಡು ಅನ್ನದ ಹೆಂಗೋ ಈ ಮನುಶ್ಯರ ಕಣ್ಣಿಂದ ಅಷ್ಟೋ, ಇಷ್ಟೋ, ಉಳುಸ್ಕಂಡು ಹೊಡದಾಡುತ್ತಿರೋ ಆ ಕೆಂಪು ಹೊಳೆ ಬಾಯಿಗೆ ತಕಹೋಗಿ ಮುಸುಕು ಹಾಕಿದ್ದೆಯ ಆ ಹೊಳೆನೆ ತಿರಿಕಹೊಯ್ತರಂತೆ. ಗುಡ್ಡ ಕಡದು ಬೆಟ್ಟ ಕಡುದು ಹಿಂಗೆ ಇಚಾರ ಮಾಡದೇಯ ” ತಲೆ ತೊಟ್ಟಿಗನ ಮನಿಗೆ ಕೊದ್ಲ ನೆಂಟ ಬಂದಂಗೆ” ಅಧಿಕಾರ ಹಿಡದರೆಲ್ಲ ಸಾಲುಕ್ಕೆ ನಂದೂ ವಸಿ ನಡೀಲಿ… ನಂದೂ ನಡೀಲಿ ಅಂತ ಬಂದು ಭೂಮ್ತಾಯಿಯ ಮಾನಭಂಗ ಮಾಡತಾ ಕುಂತರೆ ಅವಳ ಒಡ್ಲಿಗೆ ನೆಮ್ಮದಿ ಅನ್ನೋದು ಬ್ಯಾಡವಾ? ಮಳೆಬೀಳದು ಎಂಗೆ? ಬೆಳೆ ಬೆಳ್ಯೋದು ಎಂಗೆ? ಅದ್ನೇ ನಂಬ್ಕಂದಿರ ಪ್ರಾಣಿಪಕ್ಷಿ ಕಥೆ ಏನು? ಯಾರು ಯೋಚ್ನೆ ಮಾಡಬೇಕು ಇದ? ಬೇಲೆ ಎದ್ದು ಹೊಲ ಮೇದರೆ ಗತ್ಯೇನು? ಹಳೆಕಾಲದ ನಮ್ಮೂರು ಹಿಂಗೆ ಮಾತಾಡಕತೀತೆ. ಈಗನೂರು ಹಂಗಲ್ಲ! ಅಧಿಕಾರದ ಸುತ್ತಾಲೂ ಹಲ್ಲ ಗಿರಿಕಂದಿದ್ದೆಯ ಚರಂಡಿ ರಸ್ತೆ ಕಾಮಗಾರಿಯ ನಂಗೆ ಕೊಟ್ರು ಸಾಕು ಅಂತವ, ಊರನೇ ತಕ ಹೋಗಿ ತಲೆ ಹಿಡಕೊಡತೀತೆ. “ತಾಯ್ಗಂಡ್ರು ಬಾ” ಊರಲ್ಲಿ ಸಾಯದೇ ಉಳುದೋಗಿರ  ಹಿರಿತಲೆ ಅಜ್ಜಯ್ಯ ಒಂದು ಬಯ್ಕಂದು ನೋವ ನುಂಗತೀತೆ. ಈಸಕಂದು ಕೊನಿಗೆ ಬೋರ್ವೆಲ್ಲಿನ ನೀರು ಕುಡದು ಹೊಟ್ಟೆ ತಣ್ಣಗೆ ಮಾಡಕತೀತೆ.

ಅಯ್ಯೋ! ಆಗ… ಇದ್ರ ಅರಿವಿಲ್ಲದೆಯ ಏನು ಭಾರಿ ಡ್ಯಾಮು ಕಟ್ಟುಬುಟ್ಟವರೆ ಅಂತ ಆವತ್ತು ನೋಡಕ್ಕೆ ಹೊರಟ್ವಾ? ಹೊಸತರಲ್ಲಿ ಎಲ್ಲದೂ ಅಂಗೆ ತಾನೇ… ಒಳದಾರೀಲಿ ಹೋದ್ರೆ, ಡ್ಯಾಮ್ ವತ್ತಿಲ್ಲಿರೊ ಹೊನ್ನಳ್ಳಿ ಅನ್ನದು

ನಮಗೆ ಮೂರೇ ಮೈಲಿ. ಅಪ್ಪ ಇದ್ದಾಗ ಆ ಹೊನ್ನಳ್ಳಿ ಅಮ್ಮಂಗೆ ಯಾರನ್ನಾದರೂ ಕೋಳಿ ಒಪ್ಪುಸ್ಕಬರಕೆ ಅಂತವ ವರುಶಕ್ಕೊಂದಪ ಕಳುಸದು. ಯಾಕಂದ್ರೆ ಆ ದೇವರುಗೆ ನಮ್ಮನೇರು ನಡಕಳರು. ಇಂಗೆ ಮೂರು ಮೈಲಿ ದಾರಿಯ ಬುಟ್ಟು ಬಸ್ಸುಹತ್ತಿ ಆರು ಮೈಲಿ ಸುತ್ತಕಂದು ಬಂದು ಇಳುದ್ವಿ. ” ಒಳ್ಳೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂಗೆ”. ಆ ಕಾಲದಲ್ಲಿ ಮಳೆ ಜೋರಾಗೆ ಹುಯ್ಯದು. ಹೊಸದಾಗೆ ಕಟ್ಟಿರೋ ಡ್ಯಾಮು ಬೇರೆ . ನೀರು ಭರೂತಿ ಕಾಣತಿತ್ತು. ಅತ್ಲಾಗಿತ್ತಲಾಗಿನ ಬಯಲು ತುಂಬಾ ದನಗಳು ಮೇಯುತಿದ್ದು. ಆ ನೀರು, ಆ ಗಾಳಿ, ಯಾರ್ಯಾರಿಲ್ಲದಿರ ಹಕ್ಕಿ ಚಿಲಿಗುಡೋ ಜಾಗ ಅಂಥಾ ಚೆನ್ನಾಗಿತ್ತು. ಡ್ಯಾಮ್ ಏರಿ ಮೇಲೆ ಅಡ್ಡಾಡಿ ಸುತ್ತಾಡಿ ಸಾಕಾಗಿ ಕೊನಿಗೆ ಹೊನ್ನಳ್ಳಿ ಬಯಲಲ್ಲಿ ಬಂದು ಕೂತ್ವಿ. ಅಲ್ಲಿ ಉಳಿದಿರೊ ದೊಡ್ಡ ದೊಡ್ಡ ಮರಗಳು ಹಿಂದೆ ಅಲ್ಲಿದ್ದ ಕಾಡಿನ ಕಥೆಯ ಹೇಳತಿದ್ವು. ದೂರದಲ್ಲಿ ಕಾಣತಿದ್ದ ಒಂದಿಪ್ಪತ್ತು ಮನೆಗಳ ತೋರುಸಿ ಅದೆ ಹೊನ್ನಳ್ಳಿ ಅಂತ ದನ ಕಾಯೋ ಹುಡುಗರಂದ್ರು.

ಹೊನ್ನಳ್ಳಿ ಅಮ್ಮ ಎಲ್ಲೀತೋ? ಅಂದ್ವಿ. ತೋರುಸುದ. ಅದು ನಾಕು ಕಾಡುಕಲ್ಲಿನ ಪುಟ್ಟ ಚಪ್ಪರದಂಡಿಲ್ಲಿ ಕುಂತಿತ್ತು. ಅರಿಶಿನ ಕುಂಕುಮದ ಸಿಂಗಾರಿಲ್ಲ. ಹೂವು ಇಲ್ಲ. ಗಾಳಿ ಹೊಡತಕ್ಕೆ ಕಲ್ಲಾಗಿ ಅಳ್ಳಾಡದಂಗೆ ತೆಪ್ಪಗೆ ಕೂತಿತ್ತು.

ಏನು? ಕಾಡು ಬಿದ್ದ ದೇವರ… ದಿಸಾಲೂ ಸಿಂಗಾರ ಮಾಡಾರ? ಕಾಡ ಕಾಯಕಂದಿರ್ಲಿ ಅಂತವ ಒಂದು ಕಾಡಗಲ್ಲ ಪೂಜೆ ಮಾಡಿ ಅದುಕ್ಕೆ ಅವಿರೊ ಜಾಗದ ಹೆಸರುನೂ ಕೊಟ್ಟು ಕೂರ್ಸಿರ್ತಾರೆ ಊರೋರು. ವರ್ಷಕ್ಕೊಂದಪ ಬಂದು ಕಾಯಿ ಬಾಳೆಹಣ್ಣು ಒಪ್ಸಿ, ಅರಿಸಿನ ಕುಂಕುಮ ಹಚ್ಚಿ, ಕೋಳಿ ಕೂದು ಕಲ್ಲು ದೇವರ ತಲಿಗೆ ರಕ್ತ ಕೊಟ್ಟು, ಅಡಿಗೆ ಮಾಡಕಂದು ಉಂಡು, “ನಮ್ಮ ತಂಟಿಗೆ ಬಂದೋರ ಮಾತ್ರಾ ಬುಡಬ್ಯಾಡ ಕಣವ್ವಾ ನೀನು. ನಿನ್ನ ಮೊರೆ ಬಿದ್ದಿದಿವಿ. ನೀ ಕಾಯದೆ ನಮ್ಮ ಇನ್ನ್ಯಾರು ಕಾಯ್ತಾರೆ? ಹೇಳು.” ಅಂತ ಮೊರೆ ಬಿದ್ದ ದೇವ್ರಿಗೆ ಹಕ್ಕೊತ್ತಾಯವ ಭಯಭೀತಿಲೇ ಕೇಳಕಂದು, ಅತ್ಲಾಗಿ ತಿರುಗಿ ಹೋಯ್ತಾರೆ. ನಾನು ಅದರ ತಲೆ ಮೇಲಿದ್ದ ಭಾರಿ ಗೋಣಿ ಮರ ನೋಡತಲೇ ಕೇಳದೆ. “ನಮ್ಮೂರಲ್ಲೇ ಗೂಬೆಕಲ್ಲಮ್ಮ, ಉಡುಸ್ಲಮ್ಮ ಅಂತ ಇದಾವಲ್ಲ. ಅದ್ಯಾಕೆ ನಮ್ಮನೇರು ಇಲ್ಲಿಗೆ ಬತ್ತಾರೆ ಕೋಳಿಒಪ್ಸಕೆ” ಅಂತವ.

ಜತೇಲಿ ಬಂದಿದ್ದ ಚಿಗವ್ವ “ನಮ್ಮನೆ ಮಗಳ ಇಲ್ಲಿಗೆ ಕೊಟ್ಟಿದ್ರಲ್ಲವ್ವ, ಅವ್ರು ಸತ್ರೂವೆ ಅವರ ಮಕ್ಕಳು ನಮ್ಮೂರಲ್ಲಿ ಬಂದು ಉಳಕಬುಟ್ರಲ್ಲ. ಅದುಕ್ಕೆ ಇನ್ನೂ ನಮ್ಮನೇರೆಲ್ಲಾ ನಡಕತಿವಿ ಈ ಹೊನ್ನಳ್ಳಿ ಅಮ್ಮಂಗೆ” ಅಂತು.

“ಯಾರೇಳು?ಅವ್ರು ನಮ್ಮೂರಲ್ಲಿ ಇರೋರು?”

“ವೋ! ಇದ್ಯಾಕೆ ಮಗ?  ಹೊನ್ನಳ್ಳಿ ಸಣ್ಣಸಾಮಣ್ಣ  ಗೊತ್ತಿಲ್ವಾ? ನಿಂಗೆ. ಯಾವಾಗಲೂ ನಿಮ್ಮನೇಗೂ ಅವನ ಮನೆಗೂ ಅಡ್ಡಾಡಕಂದೆ ಇರತನಲ್ಲೇ ಸಂದೂಬೋಗೂವೆ?”

“ಓ ಅದಾ? ಅದು ಈ ಊರಿಂದಾ? ನಮ್ಮೂರಿಂದಲ್ವಾ? ನಂಗೊತ್ತೇ ಇರನಿಲ್ಲ”

“ಹೂಂ……” ಅಂತ ಉಸುರುಬುಟ್ಟಿದ್ದೇ ಕಥೆ ಶುರುವಾತು. ಅದೂ ಇದೂ ತಿನ್ಕಂಡು, ಅಲ್ಲೇ ಇದ್ದ ನೇರಳೆ ಮರದಲ್ಲಿ ದನಿನ ಹುಡುಗರು ಉದುರುಸುತಿದ್ದ ಜಮ್ನೇರಳೆ ಹಣ್ಣ, ಬಾಯಲ್ಲಿ… ಉರುಳಾಡುಸಕಂಡು ತಿನ್ನಕಂಡು ಎಲ್ಲರೂ ಕಿವಿ ಕೊಟ್ವಿ.

ನಿಮ್ಮ ಅಜ್ಜಾರ ತಂಗೇರು ಇಬ್ರಂತೆ. ಒಬ್ಬರ ಹರೆನಳ್ಳಿಗೆ, ಇನ್ನೊಬ್ಬರ ಇಲ್ಲಿ ಹೊನ್ನಳ್ಳಿಗೆ ಕೊಟ್ಟಿತ್ತು. ನಿಮ್ಮ ಹರೆನಳ್ಳಿ ಅಜ್ಜಮ್ಮ ಬಾಳಿ ಬದುಕತು. ಅವರ ಮಕ್ಕಳು ಮೊಮ್ಮಕ್ಕಳು ಇನ್ನೂವೆ ಹೊಸಳ್ಳಿಗೆ ಬರುದು ಹೋಗದು ಮಾಡತರಲ್ಲ ಮಗ. ಅದೆ ಹಬ್ಬಕ್ಕೆ ಬತ್ತರಲ್ಲ. ಅಪ್ಪಾಜಿ, ಚಂದ್ರ ಅವರು ಹರೆನಳ್ಳಿ ನೆಂಟರು. ಇಲ್ಲಿ ಹೊನ್ನಳ್ಳಿಗೆ ಕೊಟ್ಟುದ್ರಲ್ಲ. ಆ ವಮ್ಮ ಏನಾತು? ಅಂದ್ರೆ, ಇಲಿ ಬೀಳೋ ಕಾಯಿಲೆ ವಳಿಗೆ ಸತ್ತೋಗ್ಬುಡತು. ನಮಿಗೆ ಗೊತ್ತಿಲ್ಲಪ್ಪ! ನಮ್ಮ ಮದ್ವೆ ಹೊತ್ತಿಗೆ ಅವ್ರು ತೀರೋಗಿ ಬಾರಿ ವರ್ಷ ಆಗಿತ್ತು ಅನ್ನು. ಪಾಪ! ಎಳ್ಡು ಮಕ್ಕಳು ತಬ್ಬಲಿ ಆಗೋದ್ವು. ದೊಡ್ಡ  ಆಸ್ತಿ ಪಾಸ್ತಿ ಲೆಕ್ಕಾಚಾರ ಹಾಕ್ಕಂಡು ನಿಮ್ಮಜ್ಜಾರು ಏನು ಮಾಡುದ್ರು? ಅವ್ರೇ ಮಕ್ಕಳ ಸಾಕ್ಕಳ್ಳಲಿ ಅಂತವ ತಂಗೆ ಮಕ್ಕಳ ಹೊಸಳ್ಳಿಗೆ ಕರಕಬರಕೆ ಓಗನಿಲ್ಲ. ಹೊನ್ನಳ್ಳಿಲಿ ಮನೆ ತುಂಬ ಜನವ್ರಲ್ಲ, ಎಂಗೋ ಸಾಕ್ಕಂತರೆ. ಅವರ ಮಕ್ಕಳ ಅವ್ರು ಬುಟ್ಟುಬುಟ್ಟಾರಾ? ಅನ್ನಕಂದು ಅವರ ನಂಬಕಂದು ಸುಮ್ಮಗಾದ್ರು. ಮೂರು ತಿಂಗಳಿಗೆ, ಆರು ತಿಂಗಳಿಗೆ ಹೋಗಿ ಮಕ್ಕಳ ನೋಡಕ ಬರರು. ಅವ್ರ್ಗೂ ಬಿಡು ಇಲ್ಲದಿರ ಕೆಲ್ಸ, ಬ್ಯಾಸಾಯ, ಭತ್ತದ ಯಾಪಾರ. ತಂಗಿಲ್ಲದೀರ ಮನೆ ಸಂಕಟ ಬ್ಯಾರೆ ಏನ್ ನೋಡದು? ದಿಸಾ ಹೋಗಿ.

ಅದೇನಾತೋ? ಅಳಿಮಯ್ಯಾರು ಕಾಮಾಲೆ ಬಂದು ಮಲಿಕ್ಕಂಡರು ಮ್ಯಾಕೆ ಎದ್ದೇಳನೇ ಇಲ್ಲ. ಆ ವಮ್ಮನ ಸ್ವರ್ಗದ ದಾರಿನೆಯ ಹಿಡದು ಮಣ್ಣಾಗೋದ್ರು. ಆಗ, ಆ ಹುಡ್ಲು ಚಿಗಪ್ಪದೀರೇನು ಮಾಡುದ್ರು. ಹೊಸಳ್ಳಿಗೆ ಪತ್ತೆ ಕೊಡದಂಗೆ ಅತ್ಲಾಗೆ ಇವೆಲ್ದು ಹುಡ್ಲಿದ್ವಲ್ಲ ಅವ ತಗ ಹೋಗಿದ್ದೆ ಪತ್ತಿಲ್ದಿರ ಹಂಗೆ ಕಂಪಣಿ ತ್ವಾಟಕ್ಕೆ ಮಾರಿ ಬಂದುಬುಟ್ರು. ಆಡಕತಾ ಇದ್ದವು ದಾರಿ ಗೊತ್ತಾಗದೇಯ ಎಲ್ಲೋ ಹೋಗುಬುಟ್ಟವೆ ಎಲ್ಡೂವೆ ಅಂತ ಮಳ್ಳಗಣ್ಣೀರ ಹಾಕ್ಕಂದು

ಈ ಊರೋರ ನಂಬುಸುದ್ರು. ಆಸ್ತಿ ಹೊಡಕಳ್ಳಕೆ ಅವರ ಮಳ್ಳಾಟ ಅನ್ನದು ಇವ್ರಿಗೆ ಗೊತ್ತಾಗೋಯ್ತು. ಇಲ್ಲೇ ಒಂದತ್ತು ಮೈಲಿ ಆಗ್ಭೋದೇನಪ್ಪಾ? ಬಿಕ್ಕೋಡಲ್ಲೀತೆ ಆ ಕಂಪಣಿ ತ್ವಾಟ. ಕಾಪಿ ಎಶ್ಟೇಟು ಅಂತರಲ್ಲ ಅದು. ಅಲ್ಲಿ ಕೆಂಪು ಸಾಹೇಬ್ರಿದ್ರಂತೆ. ಅವರದ್ದು ಅದು. ಈ ಸುದ್ದಿ ಹೊಸಹಳ್ಳಿ ಊರಿಗೆ ತಿಳುದಾಗ ಹೊನ್ನಳ್ಳಿ ಸೂಳೆಮಕ್ಕಳ ಕೇಳಕೆ ಅಂತ ಇಲ್ಲಿಗೆ ಬಂದ್ರು. ಕೇಳದೋರಿಗೆ ಅಂಗೇ ಜಾಬ್ ಕಟ್ಟಿ ಬಾಯಲ್ಲೇ ಬೆಣ್ಣೆ ಸವರಿ “ಎರಡೂವೆ ಇಲ್ಲೇ ಆಡತಿದ್ದ ಮಕ್ಕಳು ಎತ್ಲಾಗೆ ಹೋದವೋ ಕಾಣೆ ಕಣಿ ನೆಂಟ್ರೇ ” ಅಂತ ಮತ್ತೆ ಸೋರುಗಣ್ಣೀರ ಹಾಕಿ ಅವರ ಕೊರಳಿಗೆ ಬಿದ್ದ ಕುಣಿಕೆಯಿಂದ ನುಗುಚ್ಗಂಡ್ರು.

ಆಗ ಏನಾಯ್ತು? ನಿಮ್ಮಜ್ಜಯ್ಯಾರು ಭೂಮಿಗೆ ಇಳ್ದು ಹೋದ್ರು. “ಮೂರಾಳು ಅಣ್ಣದೀರಿದ್ದು ನಾವು ಆಸ್ತಿಗೆ ಸಲುವಾಗಿ ತಂಗೆ ಮಕ್ಕಳ ಕಳಕಂಡ್ವಲ್ಲಾ? ಆವತ್ತೇ, ನಮ್ಮ ಮನಿಗೆ ಕರಕ ಹೋಗಿ ನಮ್ಮನ್ಯಾಗೆ ಇಟ್ಕಂದಿದ್ರೆ ನಾವು ಉಣ್ಣದ್ನೀಯ ಅವೂ ಒಂದಿಡಿ ಅನ್ನವ ಉಣ್ಕಂದಿರವು. ನಮ್ಮ ಯೋಗ್ತೇಗಿಟು ಬೆಂಕಿ ಹಾಕ ತಗ.” ಅನ್ನಕಂದು ಸಂದೂಬೋಗೂ ಹಂಗೆ ಕೋಳಿ ಹಂಗೆ ಮೂರು ಜನೂವೆ ಕೊರಗಾಡೋರಂತೆ. ನಮ್ಮ ಅತ್ತೆ ಪಾಪಾ ಹೊಟ್ಟುರಕಂಡು ಹೇಳದು. ನಮ್ಮ ಮದ್ವೆ ಆಗಿ ಬಂದಾಗ ಈ ಕಥೆಯ….. ಕಣ್ ಮಗ. ಹುಡುಕಾಟ ಶುರುವಾತು. ಜೀಮ ಅನ್ನದು ಸುಮ್ಮಗಿರ್ಬೇಕಲ್ಲಾ?

ಹಿಂಗಿರೋವಾಗ ಏನಾತು ಅಂತೀಯ! ನಿಮ್ಮಪ್ಪರೂ ಅಷ್ಟೊತ್ತಿಗೆ ಪಡ್ಡೆ ಆಗಿದ್ರಂತೆ. ಆಗ, ಪಟೇಲ ಭಾವಾರು ಅಪ್ಪದೀರ ಸಂಕಟ ಕಣ್ಣಿಂದ ನೋಡಲಾರದೆಯ ಹುಡಕಕ್ಕೆ ಹೊರಟರು. ಅಂಗೂ ಇಂಗೂ ಅವರಿವರ ಬಾಯಿ ಬುಡುಸಕಂತಾ ಹೋದ್ರು. ಊರೋರು ಯಾರೋ ಮೆತ್ತಗೆ ಸುಳುವು ಕೊಟ್ರು. ಹೊನ್ನಳ್ಳಿ ಗಾಡಿ ಅತ್ತಲಾಗೆ ಅಮ್ಮಾಸೆ ದಿಸದ ಕತ್ಲಲ್ಲಿ ಸದ್ದು ಮಾಡಕಂಡು ಬಿಕ್ಕೋಡು ರಸ್ತೆ ಕಡಿಕೆ ಹೋಯ್ತು ಅಂತವ. ಕತ್ಲಾತಿದ್ದಂಗೆ ಉಂಡು ದೀಪ ತುಂಬುಸಿ ಊರು ಹಂಗೆ ಮಲಗುದ್ರೆ, ಈ ಕಾಡುಗತ್ಲಲ್ಲಿ ಸೀಳುನಾಯಿ ಸಿಳ್ಳೆ, ನರಿ ಊಳು, ಊರುನಾಯಿ ಕಚ್ಚಾಟ ಇಷ್ಟೆ ಶಬ್ದ ಕೇಳದು ಕಿವಿಗೆ. ಅಂಗೊಂದಪ, ಇಂಗೊಂದಪ ಗೂಗೆ ಗೂಕ್ಕ ಹೆದ್ರುಸದು. ಅಂಥದ್ರಲ್ಲಿ ನಡುರಾತ್ರೀಲಿ ಗಾಡಿ ಹೂಡುದ್ರೆ  ಗಡಗಡ ಅನ್ನ ಸದ್ದು ಎಲ್ರಿಗೂ ಕೇಳಕುಲ್ವಾ? ಅದ್ರಲ್ಲಿ ಒಬ್ಬ ಮಾತ್ರ… ಅದೂವೆ ಅವರ ಮನೇಲಿ ನಿಯತ್ತಾಗಿ ಅನ್ನ ತಿಂದೋನು, ಜೀತದೋನು ನಿಧಾನಕ್ಕೆ ಬಾಯ್ ಬುಟ್ಟ. ಅವನು ಮಕ್ಕಳ ನೆನಕಂದು ಗಳಗಳನೆ ಅತ್ತುಬುಟ್ನಂತೆ ಕನವ್ವ. “ನಿಮ್ಮತ್ತೇರ ಕೈಲಿ ಹತ್ತು ವರ್ಶ ಅನ್ನ ಉಂಡೀನಿ. ಅನ್ಯಾಯ ಆಡಕುಲ್ಲಾ… ನಿದ್ದೆ ಮಾಡೋ ಮಕ್ಳ ಮದ್ದು ಕುಡುಸಿ ಹೊತ್ಕ ಹೋಗವ್ರೆ. ಮೊದ್ಲೇ ಏನಾರ… ಅಂಥ ಒಂದು ಸುಳುವು ಸಿಕ್ಕುದ್ರೂವೆ ನಂಗೆ, ಎಂಗಾರಾ ಸರಿ…. ಎಗ್ಗರುಸಕಂಡು ತಂದು ಹೊಸಳ್ಳಿಗೆ ಆ ಮಕ್ಕಳ ಬುಟ್ಟುಬುಟ್ಟು ಬಚಾವ್ ಮಾಡುಬುಡ್ತಿದ್ದೆ.” ಅಂದನಂತೆ.

ಹಿಂಗೆ ಕುರುಹ ತಿಳಕಂದ ನಿಮ್ಮಪ್ಪಾರು, ಬಿಕ್ಕೋಡಲ್ಲಿರೊ ಎಲ್ಲಾ ತ್ವಾಟಾನೂ ಹುಡುಕಿ ತಡಕಿ ಸುಸ್ತಾಗೋದ್ರು. ಮಕ್ಳು ಕಳದು ಹೋಗಿ ಆ ಹೊತ್ತಿಗೆ ಮೂರು ತಿಂಗಳಾಗಿತ್ತು. ನಿಮ್ಮಜ್ಜಾರೂ ಸೈತ ಈ ಹೊನ್ನಳ್ಳಿ ಅಮ್ಮಂಗೆ ಹರಕೆ ಮಾಡಕಂಡ್ರು. ಏನಂತ? “ಅವ್ವ ನಮ್ಮದು ತೆಪ್ಪಾತು. ನಿನ್ನ ಬುಡದ ಮಕ್ಕಳು ಅವು. ನೀನೆ ಪತ್ತೆ ಮಾಡುಕೊಟ್ರೆ…. ನಾವು ಆ ಮಕ್ಕಳ ಹೆಸರಲ್ಲಿ ವರ್ಶಕ್ಕೊಂದಪ ಬಂದು ದೀಪ ಬೆಳಗತೀವಿ. ನಿಂಗೆ ಅನ್ನ ಇಕ್ತೀವಿ. ಬಲಿ ಕೊಡುತೀವಿ” ಅಂತವ. ಅದೇನು? ಈ ತಾಯ ಲೀಲೇನೋ? ಆ ಮಕ್ಕಳ ಅದ್ರುಷ್ಟವೋ ? ಅಂತೂ… ಯಾರೋ ನಿಮ್ಮಾಪ್ಪಾರಿಗೆ ದಲ್ಲಾಳಿ ಒಬ್ಬನ್ನ ತೋರುಸವ್ರೆ. ಆ ಜಾಡ ಹಿಡದು ಅವನಿಗೆ ನಾಕೇಟು ಬಿಗದ ಮೇಲೆ… ತಗ, ಅವನು ಬಾಯ್ಬುಟ್ಟವನೆ.

“ಹಿಂಗಿಂಗೆ ಕುಡಮಲೆ ಕಂಪಣಿ ತ್ವಾಟದಾಗೆ ತಕಹೋಗಿ ಮಕ್ಕಳ ಬುಟ್ಟಿದೀನಿ. ದೂರದಿಂದ ದಾರೀಯ ತೋರೂ ಕೊಡತೀನಿ. ಕಾವಲು ಕಾಯೋನ ನೀವೆ ಕೇಳಕಬೇಕು. ನಂಗೆ ಹೆದ್ರುಕೆ. ತ್ವಾಟದ ವಳುಗೆ ಮಾತ್ರ ನಾ ಬರಕುಲ್ಲ. ಬಂದ್ರೆ ಆ ಬಿಳೇ ಸಾಹೇಬ್ರು ಕೋವಿ ತಗಂದು ಸುಟ್ಟಹಾಕಬುಡತಾರೆ ” ಅಂದ. ಅತ್ಲಾಗೆ ಅವನ ಜುಟ್ಟು ಹಿಡಕ ಹೋಗಿದ್ದೆ ಆ ತ್ವಾಟದ ದಾರಿ ನೋಡಕಂದಿದ್ದೆ ಅವನ ಬುಟ್ಟು ಕಳುಸುದ್ರು. ಎಂಗೋ…. ಕಾವ್ಲಗಾರಂಗೆ ಮನೆಲಿದ್ದ ಬೆಳ್ಳಿ ರೂಪಾಯ ಗಂಟ ತಕಹೋಗಿ ತೋರಸ್ಕಂದು, ಒಂದೊಂದೆ ಕೊಟ್ಕಂದು, ಪಂಚೇರು ಬೆಣ್ಣೆ ಒತ್ತಿ …ತ್ವಾಟ ನುಸುದು ಬಾವಾರು ವಳಗೋದ್ರಂತೆ. ಹೋಗಿ ನೋಡತಾರಂತೆ. ಎಲ್ಡೂವೆ ಮಕ್ಳು ಕುಲ ಆಗಿರ್ನಿಲ್ವಂತೆ. ಜಡ ಬಂದು ಕಂಬಳಿ ಸುತ್ಕಂಡು ಮಣ್ಣು ನೆಲದಲ್ಲಿ ಬಿದ್ದವಂತೆ. ಅದೂವೆ ಲೈನ್ ಮನೇಲಿ ಇಟ್ಟಕಂಡು ಎಲ್ಡೂನ್ನೂ ಕೂಲಿಗಾಕಂಡವ್ರೆ. ಸುಖವಾಗಿ ಬೆಳದ ಮಕ್ಕಳಲ್ವಾ? ಕಾಯಲೆ ಬಿದ್ದೋಗವೆ.

ಇನ್ನ ಆ ಗಂಜಿ ಬೇಸಿ ಹಾಕೋನಿಂದ ಹಿಡುದು  ಬೇಲಿ ದಾಟುಸನೋರಗೂವೆ ಬೆಳ್ಳಿ ರೂಪಾಯಿ ಗಂಟ ಕರುಗಿಸಿ, ನಿಮ್ಮಪ್ಪಾರು ಅಮಾಸೆ ಕರಗತ್ತಲು ಬರೊ ದಿನ ಕಾದು, ಮನೆಲಿದ್ದ ಕುದ್ರೆನೂವೆ ಎತ್ತಿನ ಗಾಡಿನೂವೆ ಕಟ್ಟಕಂದು, ಊರರ ನಾಕಾಳ ಜೊತಿಲಿ ಕರಕಂದು ಹೋದ್ರು. ಎಂಗೋ ಹೊನ್ನಳ್ಳಿ ಅಮ್ಮ ಆ ಮಕ್ಕಳ ಬೇಲಿ ಅಂಚಿಗೆ ದಾಟಸಿಕೊಟ್ಟಳು ಅನ್ನು. ಅಂಥ ಕಗ್ಗತ್ಲಲ್ಲಿ ಒಂದಲ್ಲಾ, ಎರಡು ಮಕ್ಳು ಪಾರು ಮಾಡಕಂಡು ಕರಕಬರಬೇಕು. ಯಾರ ಕಣ್ಣಿಗೂ ಬೀಳದಂಗೆ. ಬಿಟ್ರೆ ಕೋವಿ ಸಾವಾಸ ನಿಚ್ಚಯ. ಅವ್ರೇನು? ಕೆಂಪು ಮೂತ್ಯೋರು ಯಾತಕ್ಕೂ ಮರಗೋರಲ್ಲ. ಅಂಥದ್ರಲ್ಲಿ ಪುಣ್ಯ ಅನ್ನಕಾ… ನಮ್ಮ ಕಡೇರು ಒಬ್ರು ನಿಮ್ಮಜ್ಜಾರಿಗೆ ಗೊತ್ತಿರೋರು ಅಲ್ಲಿದ್ರಂತೆ. ಅವ್ರೂ ಕೈ ಕೊಟ್ಟು ಬೇಲಿ ದಾಟಿಸಿ ತಂದು ಕುದ್ರೆ ಮ್ಯಾಕೆ ಮಕ್ಕಳ ಹಾಕ್ಕೊಟ್ಟೇಟುಗೇ…. ನಿಮ್ಮಪ್ಪಾರು ತಕ್ಕಳ್ಲವ್ವಾ ಅಲ್ಲಿಂದ ಪರಾರಿ ಅಂತೆ. ಎಲ್ಲೋದ್ರು …ಕೈ ಕೂಡಸೋರು ಒಬ್ರು. ಕೈ ಕೊಟ್ಟು ಹಾಳು ಮಾಡೋರೊಬ್ರು ಇದ್ದೆ ಇರ್ತಾರೆ ಅನ್ನದು ನಿಜ ನೋಡು. ರಸ್ತೆ ಬಂದ ಮ್ಯಾಲೆ ಹಂಗೆ ಕುದುರೆ ಮೇಲಿಂದ ಇಳುಸಿ ಗಾಡಿಗೆ ಹಾಕ್ಕಂದು ಎಳದಾಡಕಂಡು ಹುಡ್ಲ ಹೊಸಳ್ಳಿಗೆ ಕರಕಬಂದ್ರು. ಬಂದಮೇಲೆ ಆವತ್ತಿಂದ ನಿಮ್ಮಜ್ಜಾರು ಮೂರು ಜನೂವೆ ಗೆಲುವಾದ್ರು.

ಅದ್ರೆ ಮಕ್ಕಳು ಆ ಹೊತ್ತಿಗೆ ಸೋತು ಹೋಗಿದ್ವಂತೆ. ಎರಡೂವೆ ಕಾಮಾಲೆ ಹೆಚ್ಚಾಗಿ ಗೆಂಡೆ ಹಾಕ್ಕಂಡಿದ್ದವಂತೆ. ಮಲೆಸೀಮೇಲಿ ಬಿಸ್ಲು ಬೀಳದೇಯ ಹೊಟ್ಟೆ ಗೆಂಡೆ ಹಾಕ್ಕಂದು ಕೆನ್ನೆ ಬುಕ್ಕಲು ಹಾಕ್ಕಳದೆ ಜಾಸ್ತಿ. ಕಾಮಾಲೆ.

ಒಂದು ಮಗ ಚಿಕ್ಕುದು ಏಳು ವರ್ಶದ್ದು ಏನ್ ಆರೈಕೆ ಮಾಡುದ್ರೂ ಉಳಿನಿಲ್ಲ. ಇನ್ನೊಂದು ಹತ್ತು ವರ್ಶದ್ದು ಎಂಗೋ ಉಳಕತು. ಅದರ ತಾಯ ಪುಣ್ಯ ಉಳಸ್ಕತು ಅನ್ನು. ಈಗ ಅದನ್ನೇಯ ಹೊನ್ನಳ್ಳಿ ಮಾವ ಅಂತ ನೀವು ಕೂಗದು. ಆವತ್ತಿಂದ ಈವತ್ತವರಗೂ, ಈ ಹೊನ್ನಳ್ಳಿ ದೇವುರುಗೆ ಕೋಳಿ ಹಸಕ್ಕಿ ಟಮಟ ಒಪ್ಪುಸದನ್ನ ನಮ್ಮನ್ಯೋರು ಮರೆತಿಲ್ಲ ಕಣೆ.

ಕಥೆ ಮುಗಿತು. ನಮ್ಮ ಹಿಡುದ ಉಸುರು ಆಚಿಗೆ ಹೋಗಿ ನಿಟ್ಟುಸುರಾಯ್ತು. ಹಕ್ಕಿ ರೆಕ್ಕೆಲಿ ಆ ಉಸುರು ತೂರಿ ಹಾರಕಂತಾ ಹೋಯ್ತು. ಹೊತ್ತು ನೀರಿಗೆ ಇಳಿತಾ ಕುಳುಕುಳನೆ ತಣ್ಣಗೆ ಈಜು ಬೀಳತಿತ್ತು. ದನಗಳು ಬಗ್ಗುಸುದ ಕತ್ತ ಮ್ಯಾಕೆ ಎತ್ಕಂದು ತಮ್ಮ ಜೊತೆ ದನಗಳು ಎಲ್ಲವೆ ಅಮ್ತ ಅವನ್ನ  ಹುಡುಕಾಡತಾ ಹೋಗಿ ಒಂದಕ್ಕೊಂದು ಕೂಡಕಳ್ಳಕೆ ಹೊರಡುತಿದ್ದೊ. ಆಗಾ….ಸೊಲ್ಪ ಎತ್ತರದಲ್ಲಿದ್ದ ಊರ ಏರು ದಿಕ್ಕಿಂದ… ಚಾರಕಾನಿ ಸೀರೆ ಉಟ್ಟಿದ್ದ, ತುಂಬುದೋಳಿನ ರವಿಕೆ ಹಾಕಿದ್ದ, ಗೊಬ್ಬೆ ಸೆರಗ ಕಟ್ಟಿದ್ದ, ಹಣೆಗೆ ಕಾಸಗಲ ಕುಂಕುಮ ಕೈ ತುಂಬ ಕೆಂಪುಸಾಣಿ ಬಳೆತೊಟ್ಟು ಮುಂಗೈಮುಂದಕ್ಕೆ ಬೆಳ್ಳಿ ಮುರಿಯ ಹಾಕಿದ್ದ, ಗಟ್ಟಿಮುಟ್ಟಿಯಾಗಿದ್ದ ಎತ್ತರಕ್ಕಿರೋ ಅಜ್ಜಮ್ಮರೊಬ್ರು ಇಳುದು ಬಂದ್ರು. ನಾನು “ಏ ಅಲ್ಲೋಡು ಹೊನ್ನಳ್ಳಿ ಅಮ್ಮ” ಅಂದೆ. ಕಲ್ಲೆದ್ದು ಅಜ್ಜಮ್ಮಾರ ರೂಪ ಪಡದು ಬಂದಂಗೆ ಆ ಬಯಲು, ಇಳಿಬಿಸ್ಲು ಬೆರಗು ತಂದುಕೊಟ್ಟಿತ್ತು. ಅದನ್ನ ಬಾಯಿ ಬುಟ್ಕಂಡೆ ಎಲ್ರೂ ನೋಡತಾ ಇದ್ವಿ. ಅದು ಹತ್ರಕ್ಕೆ ಬಂತು. ಬಂದಿದ್ದೆ ನೆಟ್ಟ ನೋಟದಲ್ಲಿ ನಮ್ಮನ್ನೆಲ್ಲಾ ನೋಡತಾ ಆಚೆ ಮನೆ ಅಕ್ಕಂಗೆ “ಯಾರವ್ವಾ? ಯಾವೂರು? ನೀವೆಲ್ಲ ಎಲ್ಲಿಂದ ಬಂದ್ರಿ?” ಅಂತು.

ನಾವು ಹಿಂಗಿಂಗೆ ಅಂದೇಟುಗೆ ಅದು ಊರಿನ ಗುರುತು, ಹಂಗೇ ಅಪ್ಪನ ಗುರುತನ್ನೂ ಹಿಡಿತು. ಮತ್ತೆ ಆ ಮನೆಯ ಅಕ್ಕನ್ನ ಕಣ್ಣ ತೆಗಿದೆ ನೋಡಿ ಇದ್ಯಾರು? ಅಂತ ಕೇಳಕಂತು. ಶಾಸ್ತ್ರ ಹೇಳೊ ಅಜ್ಜಮ್ಮ ಅಂಥ ಗೊತ್ತಾದುದ್ದೇ ತಡ ನಾವೆಲ್ಲರೂ ಕೈ ಬಿಡಿಸಿ ಅದರ ಕೈಲಿ ಕೊಟ್ಟು ಕುಂತಕಂದ್ವಿ. ನಾಕಾಣೆ ಇಡಿ, ಹಂಗೇ ಕೇಳಬಾರದು ಅಂತು. ಒಬ್ಬೊಬ್ಬರಿಗೆ ಒಂದೊಂದು ಹೇಳತು. ಆದರೆ ಅದು ಕಣ್ಣು ನೆಟ್ಟಿದ್ದ ಅಚೆ ಮನೆ ಅಕ್ಕನ ಮದ್ವೆ ಸುದ್ದಿನ ಕೇಳುದ್ವಿ. “ಹಾಸನದರು ಬಂದು ಹೆಣ್ಣ ಕೊಡಿ ಅಂತವ ಹಿಂದೆ ಬಿದ್ದುಬುಟ್ಟವರೆ. ಅಲ್ಲಿಗೇ ಆಯ್ತಿತಾ ನೋಡಿ ಹೇಳಮ್ಮ” ಅಂತ ಅತ್ತಿಗೆಮ್ಮ ಅಂದ್ರು. ತಲೆ ಅಳ್ಳಾಡಿಸಿದ್ದೆ, “ಊಂಹೂಂ….ಈ ವರ್ಸ ನೀವು ಏನು ತಿಪ್ಪರಲಾಗ ಹಾಕುದ್ರೂ ಮದ್ವೆ ಆಗದಿಲ್ಲ. ನಿಮ್ಮ ಕಾತರಿಕ ಅಷ್ಟೆ. ಮುಂದ್ಲ ವರುಷ ಮೈಸೂರ ದಿಕ್ಕಿಂದ ಹುಡುಗೊಬ್ಬ ಅವನಾಗೆ ಹುಡುಕ್ಕಂದು ಬಂದು ನಿಮ್ಮನೆ ಬಾಗಲು ತಟ್ಟದು ನಿಜ. ಬೇಕಾರೆ ಬರ್ದಿಟ್ಕಳಿ. ಅವನ್ಗೆ ಆಗದು.” ಅಂತು. ಅದರ ಮನೆಗೆ ಬುಡದೆಯ ಕರಕ ಹೋಗಿ ಕಾಪಿನೀರ ಕೊಟ್ಟು, ನಗತಾ ಕಳುಸಕೊಡತು.

ಹೊಸಳ್ಳಿ ನಂಟು ಮಾಡಿದ ಮನೆಯ ಅವರ ಮನೆ ತಾವಲಿಂದ್ಲೇ ದೂರದಿಂದ ತೋರುಸ್ತು. “ಅಲ್ಲಿ ನಮ್ಮೋರು ಯಾರು ಇದಾರೆ? ಹೋಗಾಕೆ ಬಾ” ಚಿಗವ್ವ ಅಂತು. ನಾವು ಬಸ್ಸಿಡಿದು ಕೊಂಕಣ ಸುತ್ತಿ ಮೈಲಾರುಕ್ಕೆ ಬಂದಂಗೆ ವಾಪಾಸ್ ಊರಿಗೆ ಬಂದ್ವಿ. ಮರು ವರುಷಲೇಯ ಹೊನ್ನಳ್ಳಿ ಅಮ್ಮ ಕಣಿ ಹೇಳದಂಗೆ ಆ ಅಕ್ಕನ ಮದುವೆ ಮೈಸೂರು ಹುಡಗನ ಜೊತೆಗೆ ಆಯ್ತು. ಅದೂ ಮೈಸೂರಲ್ಲೇಯ. ಹಿಂದೆ ಬಿದ್ದಿದ್ದ ಹಾಸನದ ಹುಡುಗನ ನಂಟು ತಪ್ಪೋಯ್ತು. ಮೈಸೂರು ಹುಡುಗ ಅಕ್ಕನ್ನ ಎಲ್ಲೋ ನೋಡಕಂದಿದ್ದೋನು ಮನೆ ಬಾಗಲಿಗೆ ಬಂದ. ಹೆಣ್ಣು ಕೇಳಕಂಡು ಬಂದುದ್ದೂ ಅಲ್ಲದೆಯ… ಅವರ ಮನೇರನ್ನೂ ಒಪ್ಪುಸಕಂಡು ಕರಕಂಡು ಬಂದಿದ್ದ. ಹೊನ್ನಳ್ಳಿ ಅಮ್ಮನ ಮಾತು ನಿಜ ಆಗಿತ್ತು.

ಮದ್ವೆ ಆದ ಸೊಲ್ಪ ದಿಸದ ಮೇಲೆ ಎಲ್ರೂ ಒಂದಿನ ಸೇರಕಂದಾಗ ಹೊನ್ನಳ್ಳಿ ಊರ ನೆನಕಂಡಿದ್ದೆ, ಹೊನ್ನಳ್ಳಿ ಅಮ್ಮ ಹೇಳಿದ ಕಥೆಯ ಅಲ್ಲಿ ಸೇರಕಂದಿದ್ದರೆಲ್ಲರಿಗೂ ಹೇಳಕಂಡು ಎಲ್ರೂ ನೆಗಾಡತಿದ್ರು. ಕುಂತಿದ್ದ ಅಳಿಮಯ್ಯಾರು ತೋರುಸ್ಕಳದಂಗೆ ಒಳಗೇ ನಕ್ಕರೂವೆ ಅವರ ಕೆನ್ನೇಲಿ ಸಣ್ಣಗೆ ಬಿದ್ದ ಗುಳಿ ಒಳಗೊಳಗೆ ನಗಾಡತಿತ್ತು. ಅವರಗಾದ ಖುಶಿಯ ಹೇಳುತಿತ್ತು.

ನನಗೆ ಮಾತ್ರ ಆವತ್ತು ವಾಟೆಹೊಳೆ ಡ್ಯಾಮಲ್ಲಿ ತುಂಬಿ ಅಲಿತ್ತಿದ್ದ ನೀರಲೆ, ಅದರ ಸೆರಗಲ್ಲಿದ್ದ ಆ ಭಾರೀ ಮರಗಳ ಬಯಲು, ಹಸುರು ಮೇಯ್ತಿದ್ದ ದನಗಳು, ತಂಗಾಳಿಲಿ ಮೈ ಮರೆತಿದ್ದ ಹೊನ್ನಳ್ಳಿ ಅಮ್ಮ, ಇಳೇ ಹೊತ್ನಲ್ಲಿ ಕಲ್ಲೊಳಗಿಂದ ಅರೆಮಂಪರು ನಿದ್ದೆ ಮಾಡಿ ಎದ್ದು ಬಂದಂಗೆ ಬಂದ ಆ ಅಜ್ಜಮ್ಮಾರ ರೂಪ, ಕಣಿ ಹೇಳೋವಾಗ ಅದರ ಎದ್ರುಗಡೆ ಕುಂತಿರರ ಕಣ್ಣ ವಳಿಕೆ ನೆಡತ್ತಿದ್ದ ಅದರ ದಿಟ್ಟಿ, ಮನೆಗೆ ಕರೆದು ಕಾಪಿ ನೀರು ಕೊಟ್ಟು ಕಳುಸುವಾಗ  ಹಿರಿಯಮ್ಮನ ಎಲಡಿಕೆ ಬಾಯ ತುಂಬಿ ಕೆಂಪಗೆ ಸೋರುತಿದ್ದ ನಗು, ಇವು ನನ್ನ ಕಣ್ಣಲ್ಲಿ ಹೊನ್ನಳ್ಳಿನ್ನ ಮರಿದಿರಂಗೆ ಕೊರ್ದು ಕೂರಿಸಿದೆ.

‍ಲೇಖಕರು admin

January 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. k puttaswamy

    ನಿಮ್ಮೂರ್ ಹತ್ರಾನೂ ಹೊನ್ನಳ್ಳಿ !ಅಭಿವೃದ್ಧಿ ಅಂದ್ರೆ ಹೊನ್ನಳ್ಳಿ ಹೊಡ್ತವೇ ಸರಿ. ಯಂಗೋ ಆ ಆಲ್ದೃ್ ಹೇಣ್ಮಗಳು ನಂ ಮೈಸೂರ್ಕಡೆ ಬಂತಲ್ಲ, ಅಷ್ಟ್ ಸಾಕ್ಬುಡಿ

    ಪ್ರತಿಕ್ರಿಯೆ
  2. saggere

    ಜಮ್ನೇರಳೆ ಹಣ್ಣ, ಬಾಯಲ್ಲಿ… ಉರುಳಾಡುಸಕಂಡು ತಿನ್ನಕಂಡು ಎಲ್ಲರೂ ಕಿವಿ ಕೊಟ್ವಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: